ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ವ್ಯಾಸೆಕ್ಟಮಿ ವಾರ್ಡಿನಲ್ಲಿ ಮಲಗಿದ ನಿವೃತ್ತ ಗಂಡಸರು

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

‘ಎಲ್ಲಾ ಧೂರ್ತರೂ ಹೆಚ್ಚು ಕಡಿಮೆ ಒಂದೇ ತಿಂಗಳಲ್ಲಿ ಹುಟ್ಟಿದ್ದೀವಿ ಕಣಯ್ಯಾ’ ಅಂತ ಶ್ರೀಧರನೊಂದಿಗೆ ತಮಾಷೆಯಾಗಿ ಮಾತನಾಡುತ್ತಿದ್ದ ಕಾಲವೊಂದಿತ್ತು. ಮಾರ್ಚ್‌ 8ರಂದು ಲಂಕೇಶ್‌, ಮಾರ್ಚ್‌ 15 ರಂದು ನಾನು, ಮಾರ್ಚ್‌ 20ರಂದು ಶ್ರೀಧರ -ಹೀಗೆ ಸಾಲು ಸಾಲು ಮಾರ್ಚ್‌ ಫಾರ್ವರ್ಡುಗಳೇ. ಇಂಗ್ಲಿಷ್‌ ಗಿಣಿಶಾಸ್ತ್ರದವರು (sun sign ಪಂಡಿತರು) ನಮ್ಮನ್ನು ಮೀನರಾಶಿಯವರೆನ್ನುತ್ತಾರೆ. ಲಿಂಡಾ ಗುಡ್‌ಮನ್‌ ಬರೆದ ಪುಸ್ತಕ ಓದಿಬಿಟ್ಟರೆ ಜಗತ್ತಿನ ಅಷ್ಟೂ ಮೀನ ರಾಶಿಯವರು ಅದರಲ್ಲಿ ತಮ್ಮ ಒಂದಲ್ಲ ಒಂದು ಗುಣ ಹುಡುಕಿಕೊಂಡು ಆನಂದಪಡುತ್ತಾರೆ. ತಮಾಷೆಯೆಂದರೆ, ನನಗೆ ಪರಿಚಯವಿರುವ ಅನೇಕ ಮೀನ ರಾಶಿಯ ಮಿತ್ರರಿಗೆ ಭವಿಷ್ಯ, ಗಿಣಿಶಾಸ್ತ್ರ , sun signಗಳಲ್ಲಿ ನಂಬಿಕೆಯಿಲ್ಲ.

P. Lankeshಲಂಕೇಶರಿಗೂ ಇರಲಿಲ್ಲ. ಕೊನೆಯ ದಿನಗಳಲ್ಲಿ ಅವರು ಸಾವಿನ ಬಗ್ಗೆ ತುಂಬ ಬರೆಯುತ್ತಿದ್ದರು ಎಂಬುದನ್ನು ಬಿಟ್ಟರೆ ಲಂಕೇಶ್‌ ನಿರಾಶಾವಾದಿಯಲ್ಲ . ಒಂದು ದೊಡ್ಡ ಗುಂಪು ಎತ್ತ ಹೋಗಬೇಕೆಂದು ದಾರಿಕಾಣದೆ ನಿಂತುಬಿಟ್ಟಿದಾಗ ಅದಕ್ಕೊಂದು ಸರಿ ದಿಕ್ಕು ತೋರಿಸಿದ ಚಿಂತಕರು ಲಂಕೇಶ್‌. ಅದೇ ಗುಂಪು ದಾರಿ ತಪ್ಪಿದಾಗ ಅದನ್ನು ಎದುರು ಹಾಕಿಕೊಂಡು ವಾಚಾಮಗೋಚರ ಬೈದವರು. ಎರಡೂ ಕೆಲಸ ಅವರಿಗೆ ಖುಷಿಕೊಟ್ಟಿದ್ದವು. ಎರಡನೆಯದನ್ನು ಆಮೇಲಾಮೇಲೆ ಲಂಕೇಶ್‌ ಇಷ್ಟಪಡತೊಡಗಿದರು. ಮೊದಲಿನ ಜವಾಬ್ದಾರಿ ಮರೆತು ಹೋಗಿತ್ತು.

ಗೇಲಿ, ದ್ವೇಷ , ತಿರಸ್ಕಾರ, ಪ್ರೀತಿ, ಕಳಕಳಿ, ಪ್ರಮಾಣಿಕತೆ , ತಿಕ್ಕಲು, ಗಾಂಭೀರ್ಯ, ಕ್ರಿಯಾಶೀಲತೆ, ಭಾವುಕತನ ಮತ್ತು ನಿರ್ದಯತೆ -ಹೀಗೆ ತದ್ವಿರುದ್ಧದ ಸ್ವಭಾವಗಳಿದ್ದ ಮನುಷ್ಯ. ಕತೆ, ಕವಿತೆ, ನಾಟಕ, ಕಾದಂಬರಿ, ಪತ್ರಿಕೆ, ಜೂಜು, ರಾಜ್ಯವಾಳುವ ಆಸೆ, ಆಸ್ತಿ ಪ್ರೀತಿ-ಎಲ್ಲವೂ ಒಬ್ಬೇ ಮನುಷ್ಯನಲ್ಲಿ ಕಾಣಬಹುದಿತ್ತು ಅಂದರೆ, ಅದು ಲಂಕೇಶರಲ್ಲಿ. ರಾಮಕೃಷ್ಣ ಹೆಗಡೆಯಂಥ ನಯದ ರಾಜಕಾರಣಿಯ ಸಾರ್ವಜನಿಕ ವಂಚನೆಯನ್ನು ತಕ್ಷಣ ಗುರುತಿಸಲು ಲಂಕೇಶರಿಗೆ ಸಾಧ್ಯವಾಗಿತ್ತು . ಆದರೆ ಬಳ್ಳಾರಿಯ ಪಿಂಜಾರ ಓಣಿಯ ಇಬ್ಬರು ಚೀಟಿ ವ್ಯವಹಾರದ ಠಕ್ಕ ಹುಡುಗರು, ಅವರನ್ನು ವರ್ಷಗಟ್ಟಲೆ hoodwink ಮಾಡುತ್ತ ಬಂದರು. ಎಷ್ಟು ಅಮಾಯಕತೆ ಮತ್ತು gullibility ಲಂಕೇಶರಿಗಿತ್ತೆಂದರೆ, ಮುಂಬರುವ ಚುನಾವಣೆಗಳಲ್ಲಿ ‘ಪ್ರಗತಿ ರಂಗ’ ವೆಂಬ ತಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಅಂತ ಅವರು ನಂಬಿದ್ದರು. ತುಂಬ ಗಂಭೀರವಾಗಿ ತಮ್ಮ ಮಂತ್ರಿ ಮಂಡಲ ಹೇಗಿರಬೇಕು, ಅದರಲ್ಲಿ ಯಾರ್ಯಾರಿರಬೇಕು ಅಂತೆಲ್ಲ ಯೋಚಿಸಿಟ್ಟಿದ್ದರು. ಅವರಿಗೆ ಅನಂತಮೂರ್ತಿ, ಕಾರ್ನಾಡ್‌ ಮುಂತಾದವರೆಲ್ಲ ತಮಗೆ ‘ಮ್ಯಾಚ್‌’ ಅಲ್ಲವೇ ಅಲ್ಲ ಎಂಬ ಭಾವನೆಯಿತ್ತು. ಆದರೆ ಶೂದ್ರ ಶ್ರೀನಿವಾಸ್‌ನಂತಹ ಮೀಡಿಯೋಕರ್‌ನನ್ನು ಸಹಿಸಿಕೊಳ್ಳುತ್ತಿದ್ದರು. ಅವರಲ್ಲಿ ಡಿ. ಆರ್‌. ನಾಗರಾಜ್‌ ಒಂದು ತೆರನಾದ ಆತಂಕ ಉಂಟುಮಾಡುತ್ತಿದ್ದ. ನಿಜವಾದ ಅಸ್ತಿತ್ವವಾದಿ ಕತೆಗಾರರಾದ ರಾಘವೇಂದ್ರ ಖಾಸನೀಸರನ್ನು ಅವರು ತಮಗಿಂತ ಚೆನ್ನಾಗಿ ಬರೆಯುತ್ತಾರೆ ಅಂತ ಒಪ್ಪಿಕೊಳ್ಳುತ್ತಿರಲಿಲ್ಲ. ಲಂಕೇಶರ ಪ್ರೀತಿ ಮತ್ತು ದ್ವೇಷ -ಎರಡೂ ತೀವ್ರ ತೀವ್ರ. ಆಶ್ಚರ್ಯ ಮತ್ತು ಅಸಹ್ಯ ಹುಟ್ಟಿಸುವಂಥ ಸಣ್ಣ ತನಗಳಿದ್ದವು. ಹಾಗೇನೇ ಅಚ್ಚರಿ ಹುಟ್ಟಿಸುವಂಥ ಶಿಸ್ತು , ಅನಲಿಟಿ ಕಲ್‌ಮೈಂಡ್‌ ಹಾಗೂ ನಿಷ್ಠುರ ಪ್ರಾಮಾಣಿಕತೆಗಳಿದ್ದವು.

ಬದುಕಿದ್ದಿದ್ದರೆ ಲಂಕೇಶ್‌ಗೆ ಎಪ್ಪತ್ತಾಗುತ್ತಿತ್ತು ವಯಸ್ಸು. ಕನ್ನಡದ ಯಾವ ದಿನಪತ್ರಿಕೆಯೂ ಅವರ ಕುರಿತು ಒಂದು ಸಾಲು ಸಹಾ ಬರೆಯಲಿಲ್ಲ . ನೆನಪು ಮಾಡಿಕೊಳ್ಳಲಿಲ್ಲ . ಸಮಾಜದ ಜ್ಞಾಪಕ ಶಕ್ತಿ ಚಿಕ್ಕದು ನಿಜ. ಆದರೆ ಮರೆವು ಉದ್ದೇಶ ಪೂರ್ವಕವಾಗಬಾರದಲ್ಲ? ಮೊನ್ನೆ ಲಂಕೇಶ್‌ ಮಕ್ಕಳು ಜಗಳ ಮಾಡಿಕೊಂಡಾಗ ವಿಜಯಕರ್ನಾಟಕದ ಮುಖಪುಟದಲ್ಲಿ ಅತ್ಯಂತ bright ಎನ್ನಿಸುವಂಥ ಒಂದು ಹೆಡ್ಡಿಂಗ್‌ ಕೊಡಲಾಗಿತ್ತು : ‘ಜಾಣ ಜಾಣೆಯರು ಮಾಡಿದ ಟೀಕೆ ಟಿಪ್ಪಣಿಗಳು’ ಅಂತ . ಅದೇ ಚುರುಕುತನವಿಟ್ಟು ಕೊಂಡು ಲಂಕೇಶರಿಗೆ ಅವರ ಗೈರು ಹಾಜರಿಯಲ್ಲೊಂದು ಹ್ಯಾಪಿ ಬರ್ತ್‌ಡೇ ಹೇಳಿ ‘ಚಿಯರ್ಸ್‌’ ಅನ್ನಬಹುದಿತ್ತು . ಲಕ್ಷಾಂತರ ಕನ್ನಡಿಗರನ್ನು ಓದಲಿಕ್ಕೆ, ಸರಿಯಾದುದನ್ನು ಓದಲಿಕ್ಕೆ ಹಚ್ಚಿದವರು ಆತ.

Vijay Sankeshwarಉಳಿದಂತೆ, ವಿಜಯ ಸಂಕೇಶ್ವರರ ಎರಡನೆಯ ಹತ್ಯಾರ ‘ಉಷಾಕಿರಣ’ ಪ್ರಕಟಗೊಂಡಿದೆ. ಸಂಯುಕ್ತ ಕರ್ನಾಟಕ ದಂತಹ ಋತುಚಕ್ರ ನಿಂತ ಅವಿಧಾವನವಮಿ ಬ್ರ್ಯಾಂಡಿನ ಪತ್ರಿಕೆಗಳಿಗೆ ಇನ್ನು ಜಾಗವಿರದು. ಹೊಸತನಕ್ಕೆ ಹೊಂದಿ ಕೊಳ್ಳದ, ಬದಲಾಗದ, ಜಡ್ಡುಗಟ್ಟಿದ ಪತ್ರಿಕೋದ್ಯಮ ಹೇಗೆ ಕಣ್ಣು ಮುಚ್ಚುತ್ತದೋ, ನೋಡುತ್ತಿರಿ. ಮೊನ್ನೆ ಯಾರೋ ಸಿಕ್ಕವರು ‘ಉಷಾ ಕಿರಣ’ ಪತ್ರಿಕೆಗೆ ‘ಈ ನಾಡು’ ಮತ್ತು ‘ಈ ಟೀವಿ’ ಗಳ ಒಡೆಯ ರಾಮೋಜಿರಾಯರ ಪಾಲುದಾರಿಕೆ ಇದೆಯಂತೆ, ಹೌದೆ ಅಂತ ಕೇಳಿದ್ದರು. ಸಂಕೇಶ್ವರರ ಬಗ್ಗೆ ಈ ತೆರನಾದ ರೂಮರುಗಳು ಸಾವಿರ ಇವೆ : ಅವರೊಂದು ಟೀವಿ ಛಾನಲ್‌ ಮಾಡುತ್ತಾರೆ ಎಂಬುದೂ ಸೇರಿದಂತೆ! ಆದರೆ ಮೂಲತಃ ಪಾಲುದಾರಿಕೆಯ ವ್ಯವಹಾರದ ಬಗ್ಗೆ ಯೋಚನೆ ಕೂಡ ಮಾಡದ ಪಕ್ಕಾ ವ್ಯಾಪಾರಿ, ವಿಜಯ ಸಂಕೇಶ್ವರ್‌. ಸಣ್ಣ ಪುಟ್ಟ ಕೊಡುಕೊಳ್ಳುವಿಕೆಗಳೂ, tie up ಗಳೂ ಇವೆಯೇ ಹೊರತು, ಪಾರ್ಟ್‌ನರ್‌ ಷಿಪ್ಪು ಅವರ ಜಾಯಮಾನಕ್ಕಂಟಿದ್ದಲ್ಲ. ಈಗಾಗಲೇ ಪ್ರಸಾರ ಸಂಖ್ಯೆ ಮತ್ತು ಜಾಹಿರಾತು -ಎರಡರದೂ ಕೆನೆ ತಿಂದಿರುವ ‘ವಿಜಯ ಕರ್ನಾಟಕ’ ಸಂಸ್ಥೆ , ಈಗ ಎರಡನೆ ಸ್ತರದ ಮೊಸರಿಗೆ ಕೈ ಹಾಕಿದೆ. ಮಾರುಕಟ್ಟೆಯಲ್ಲಿ ತನ್ನದೇ ಪತ್ರಿಕೆ ‘ಉಷಾಕಿರಣ’ ನಂಬರ್‌ 2 ಸ್ಥಾನದಲ್ಲಿದ್ದರೆ, ಸಣ್ಣ ಬಜೆಟ್ಟಿನ ಜಾಹೀರಾತುಗಳೂ ತಮಗೇ ಬರುತ್ತವೆಂಬುದು ಸರಳ ಲೆಕ್ಕಾಚಾರ. ಏಳೆಂಟು ನೂರು ರೂಪಾಯಿ ಪಡೆದು ಜಾಹಿರಾತು ಹಾಕುವ ‘ಸಂ.ಕ’ ದಂಥ ಪತ್ರಿಕೆಗಳು ನೇರವಾಗಿ ಹೊಡೆತ ತಿನ್ನುತ್ತವೆ. ಸಂಕೇಶ್ವರರ ಲೆಕ್ಕಾಚಾರ ಸ್ಪಷ್ಟವಿದೆ. ಒಂದು ಕಡೆ ಇಂಥ ವ್ಯವಸ್ಥೆ ಮಾಡುತ್ತಿರುವ ವಿಜಯ ಸಂಕೇಶ್ವರರು, ಇನ್ನೊಂದು ಕಡೆ ತಮ್ಮ VRL ಸಾರಿಗೆ ಸಂಸ್ಥೆಯದೂ ಒಂದು ಹೊಸ ಬ್ರ್ಯಾಂಚು ತೆಗೆಯುತ್ತಿರುವಂತಿದೆ. ನಾನು ಕೇಳಿದ ಸುದ್ದಿ ಖಚಿತವೇ ಆಗಿದ್ದರೆ ಇಷ್ಟರಲ್ಲೇ ‘ವಿಜಯಾನಂದ್‌ ರೋಡ್‌ ಲೈನ್ಸ್‌’ ಜೊತೆಗೆ ವಿಜಯಾನಂದ್‌ ಏರ್‌ಲೈನ್ಸ್‌ ಎದ್ದು ನಿಲ್ಲಲಿದೆ. ಅದರ ಪ್ರಾಜೆಕ್ಟು ಒಂಬೈನೂರು ಕೋಟಿ ರೂಪಾಯಿಗಳದಂತೆ! ನೆನಪಿರಲಿ, ಕೆಲವೇ ವರ್ಷಗಳಿಗೆ ಮುಂಚೆ ಗದುಗಿನಲ್ಲಿ ಡಿಕ್ಷನರಿ ಪ್ರಿಂಟು ಮಾಡುತ್ತಿದ್ದವರು ಸಂಕೇಶ್ವರ್‌. ಈಗ World Bookನಲ್ಲಿ ಕಾಣಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ. ಅವರಿಗೆ ಗೆಲುವಾಗಲಿ.

ಇದೆಲ್ಲದರ ನಡುವೆ ಬಿಜೆಪಿಯ ನಾಯಕರ ಕಿತ್ತಾಟದ ವಿರುದ್ಧ ಆರೆಸ್ಸೆಸ್ಸಿನ ಹಿರಿಯರು ದೊಣ್ಣೆ ಕೈಗೆತ್ತಿಕೊಂಡ ಸುದ್ದಿ ಬಂದಿದೆ. ಅನಂತ್‌ಕುಮಾರ್‌ ಮತ್ತು ಯಡಿಯೂರಪ್ಪನವರ ಜಗಳ ಅಸಹ್ಯಕರ. ಒಂದು ಪ್ರಬಲ ವಿರೋಧಪಕ್ಷವನ್ನಾಗಿ ಬಿಜೆಪಿಯನ್ನು ಬೆಳೆಸುವುದು ಬಿಟ್ಟು ಪತ್ರಿಕೆಗಳಲ್ಲಿ gang war ಆರಂಭಿಸಿರುವ ನಾಯಕರಿಗೆ ತಮ್ಮ ಜವಾಬ್ದಾರಿಗಳೇ ಮರೆತು ಹೋದಂತಿವೆ. ಬೆನ್ನಿಹಿನ್‌ವಿರುದ್ಧ ಮಾಡಿದ ಪ್ರತಿಭಟನೆ ಕಂಡೇ ರಾಜ್ಯದಲ್ಲಿ ಬಿಜೆಪಿ ಎಷ್ಟು ಬಲಹೀನ ಗೊಂಡಿದೆ ಎಂಬುದು ಬಟಾಬಯಲಾಗಿ ಹೋಯಿತು. ಪಂಚಾಯ್ತಿ ಚುನಾವಣೆಗಳಲ್ಲಂತೂ ಕಮಲವನ್ನು ಉಳಿದ ಪಕ್ಷಗಳು ಬಿಸಾಡಿದವು. ಎಂಬತ್ತೊಂಬತ್ತು ಜನ ಶಾಸಕರಿರುವ ಪಕ್ಷದ ಪರ್‌ಫಾರ್ಮೆನ್ಸು ನೋಡಿದರೆ, ವಿಧಾನಸಭೆಯಲ್ಲಿ ಯಡಿಯೂರಪ್ಪನವರ ಹಿಂಡು ವ್ಯಾಸೆಕ್ಟಮಿ ಆಪರೇಷನ್ನಿಗೊಳಗಾದವರ ವಾರ್ಡಿನಲ್ಲಿ ಮಲಗಿರುವ ನಿವೃತ್ತ ಗಂಡಸರ ಸಾಲಿನಂತೆ ಕಾಣಿಸುತ್ತದೆ.

ಸ್ವತಃ ಯಡಿಯೂರಪ್ಪ ಸಿಡುಕ, ಜಗಳ ಗಂಟ : ಆದರೆ ನಿಜವಾದ ಸಂಘಟಕ, ಕೆಲಸಗಾರ. ವಿರೋಧ ಪಕ್ಷದಲ್ಲಿರುವುದನ್ನು ಮರೆಯದೆ ನಾಡಿನುದ್ದಗಲಕ್ಕೂ ಭೂಚಕ್ರತಿರುಗಿದಂತೆ ತಿರುಗುತ್ತಾರೆ. ಆದರೆ ಇಡೀ ರಾಜ್ಯದ ಜನತೆ, ಈ ನಾಯಕ ಒಂದು issueತಗೊಂಡು ಹೋರಾಟಲಿ, ಮಾತಾಡಲಿ ಅಂತ ನಿರೀಕ್ಷಿಸುತ್ತಿರುವಾಗ ಐನ್‌ ಟೈ ಮಿನಲ್ಲಿ ಬಾಯಿ ಕಳೆದುಕೊಂಡು ಸುಮ್ಮನೆ ಕೂತುಬಿಡುತ್ತಾರೆ. ಅವರ ಶತ್ರುಗಳಿಗೆ ಇದೇ ಅವಕಾಶವಾಗುತ್ತದೆ. ಶೋಭಾ ಕರಂದ್ಲಾಜೆಗೆ ಬಿಡಿಎ ಸೈಟು ಕೊಡಿಸಿದರು ಎಂಬಂಥ ಚಿಕ್ಕ, ವ್ಯಕ್ತಿಗತ ಬಲಹೀನತೆಯ ಕಾರಣವೊಡ್ಡಿ ತೇಜೋಭಂಗ ಮಾಡಿ ಯಡಿಯೂರಪ್ಪನವರನ್ನು ನೆಲಕ್ಕೆ ಜಗ್ಗಿ ಬಿಡುತ್ತಾರೆ.

ಮೇಲಾಗಿ ಯಡಿಯೂರಪ್ಪನವರಿಗೆ ಭಾಷೆಯ ಸಮಸ್ಯೆಯಿದೆ. ಕರ್ನಾಟಕ ಬಿಟ್ಟು ಒಂದು ಹೆಜ್ಜೆ ಹೊರಗಿಟ್ಟರೆಂದರೆ, ಅವರ ಪರಿಸ್ಥಿತಿ ‘ನಾನು ಅಂಧನಾದೇ....’! ದಿಲ್ಲಿಯ ಬಿಜೆಪಿ ದೊರೆಗಳೊಂದಿಗೆ ಎದುರಿನಲ್ಲಿ ಮಾತನಾಡಲಾರರು : ಫೋನಿನಲ್ಲಂತೂ ಶಿವಾಯನಮಃ! ಈಗಾಗಲೇ ದಿಲ್ಲಿಯಲ್ಲಿ ಪಳಗಿದ ಅನಂತ್‌ಕುಮಾರ್‌ ಮಟ್ಟದವರ ಮಾತು ಬಿಡಿ : ಅವರ ಬಂಗಲೆಗೆ ಹಣ್ಣುಕಾಯಿ ಒಯ್ಯುತ್ತಿದ್ದ ಅರವಿಂದ ಲಿಂಬಾವಳಿಯಂಥವರಿಗೇ ದಿಲ್ಲಿಯಲ್ಲಿ ಪ್ರಭಾವಳಿ ಬೆಳೆದುಬಿಟ್ಟಿದೆ.

Of course, ಇದು ದೊಡ್ಡ ನ್ಯೂನತೆಯಲ್ಲ. ತಮಿಳುನಾಡಿನ ಒಬ್ಬೇ ಒಬ್ಬ ರಾಜಕಾರಣಿಯೂ ಹಿಂದಿ ಮಾತನಾಡದೆ ದಿಲ್ಲಿ ದೊರೆಗಳನ್ನು ತಮ್ಮ ಕಾಲಿಗೆ ಕೆಡವಿಕೊಂಡದ್ದನ್ನು ಇತಿಹಾಸ ನೋಡಿದೆ. ಅದಕ್ಕೆ ಕಾರಣ, ಅವರು ಸ್ಥಳೀಯವಾಗಿ ಬೇರೂರಿ ಬೆಳೆಯುವ ಪರಿ. ಯಡಿಯೂರಪ್ಪನಂಥವರು ಆ ಮಟ್ಟದ ಛರಿಷ್ಮಾ ಕರ್ನಾಟಕದಲ್ಲಿ ಬೆಳೆಸಿಕೊಳ್ಳಬೇಕು. ಅದಕ್ಕೆ ಅವರಿಗಿರುವ ಒಂದೇ ದಾರಿಯೆಂದರೆ, ಈ ನೆಲದಲ್ಲಿ ತುಂಬ ಭದ್ರವಾದುದೊಂದು ಹೋರಾಟ ಕಟ್ಟುವುದು. ಶಾಸಕರನ್ನು ಕಾನ್ಫಿಡೆನ್ಸಿಗೆ ತೆಗೆದುಕೊಳ್ಳುವುದು. ವೃದ್ಧ ಹಂಬಲಗಳಿಂದ ಮುಕ್ತ ರಾಗುವುದು. ಬುಡನ್‌ಗಿರಿಯಂತಹ ಭಾವುಕ issueಗಳ ಜೊತೆಯಲ್ಲೇ ಅಪ್ಪಟ ಜನಪರ ಸಮಸ್ಯೆಗಳನ್ನೆತ್ತಿಕೊಂಡು ಹೋರಾಡುವುದು.

ಇವು ಮಾತ್ರ ಯಡಿಯೂರಪ್ಪನವರನ್ನು ಬೆಳೆಸಬಲ್ಲವು. ಹಾಗೆ ಬೆಳೆದರೆ ಮಾತ್ರ ಅವರು ದಿಲ್ಲಿ ದೊರೆಗಳನ್ನು ಮಣಿಸಬಲ್ಲರು. ಇಲ್ಲಿ ಪಕ್ಷ ಉಳಿಯಬಲ್ಲದು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ

ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X