• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕ್ಸಲೀಯರೇನು ನರಹಂತಕರಾ ಧರಂ?

By Staff
|
Ravi Belagere on Thatskannada.com ರವಿ ಬೆಳಗೆರೆ
ಅಧಿಕಾರಕ್ಕೆ ಬಂದು ಇಷ್ಟು ದಿನಗಳ ಪೈಕಿ, ಈ ಮಟ್ಟದ ತಪ್ಪು ನಿರ್ಧಾರವೊಂದನ್ನು ಧರ್ಮಸಿಂಗ್‌ ಕೈಗೊಂಡದ್ದು ಇದೇ ಮೊದಲು. ಧರಂರಂತಹ ಮುತ್ಸದ್ಧಿಯಿಂದ ರಾಜ್ಯದ ಜನತೆ ಇಂಥದ್ದನ್ನು ಖಂಡಿತ ನಿರೀಕ್ಷಿಸಿರಲಿಲ್ಲ.

ಅವರು ಮಲೆನಾಡಿನ ಕಾಡುಗಳೊಳಕ್ಕೆ ನಕ್ಸಲೀಯರನ್ನು ಕೊಂದುಹಾಕಲು ಎಸ್ಟಿಎಫ್‌ ಪಡೆಗಳನ್ನು ಕಳುಹಿಸಿದ್ದಾರೆ. ದಶಕಗಳ ಕಾಲ ಎರಡು ರಾಜ್ಯಗಳನ್ನು ಕಾಡಿ ಕಂಗೆಡಿಸಿದ ನರಹಂತಕ ವೀರಪ್ಪನ್‌ ಎಲ್ಲಿ ? ಕಾಡ ನಡುವಿನ ಜನರ ಪರವಾಗಿ ಕ್ರಾಂತಿಗೀತೆ ಹಾಡುತ್ತ ಅಲ್ಲೇ ಒಂದು ಆರೋಗ್ಯವಂತ ಚಳವಳಿ ರೂಪಿಸುತ್ತಿರುವ ನಕ್ಸಲ್ಲರ ಸಿದ್ಧಾಂತದ ಮಾವೊಯಿಸ್ಟ್‌ ಹುಡುಗ-ಹುಡುಗಿಯರೆಲ್ಲಿ ? ಬೇರೇನಕ್ಕೂ ಅಲ್ಲ , ಆಸ್ತಿಕರಾದ ಧರ್ಮಸಿಂಗ್‌ ತಮ್ಮನ್ನು ಸುತ್ತಿಕೊಳ್ಳಲಿರುವ ಕೊಲೆಪಾತಕತನದ ಪಾಪಕ್ಕಾದರೂ ಹೆದರಿ, ಸಂಕೋಚಪಟ್ಟು STF ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಿ.

Naxal Killer Dharam!!ನನ್ನ ಈ ಬರಹ ಕೇವಲ ನಕ್ಸಲೀಯ ಯುವಕರ ಪ್ರಾಣದ ಮೇಲಿನ ಕಳಕಳಿಯಿಂದ ಹುಟ್ಟಿದ್ದಲ್ಲ. ಎಸ್ಟಿ ಎಫ್‌ ಪಡೆ ಹೊಕ್ಕ ಮಲೆನಾಡಿನ ಕಾಡುಗಳು , ಕಾಡಂಚಿನ ಗ್ರಾಮಗಳು, ಅಲ್ಲಿನ ಜನಸಾಮಾನ್ಯರ ಬದುಕುಗಳೂ ಏನಾಗಿಹೋದಾವೆಂಬ ಕಲ್ಪನೆಯೇ ಮುಖ್ಯಮಂತ್ರಿ ಧರಂಸಿಂಗ್‌ಗೆ ಇದ್ದಂತಿಲ್ಲ. ಎಸ್ಟಿಎಫ್‌ ಪಡೆಗಳನ್ನು ಮುನ್ನಡೆಸುವ ಅಧಿಕಾರಿ ಯಾರೇ ಇರಲಿ, ಆ ಪಡೆಗಳವರು ಕಾಡ ಮಧ್ಯದ ಮತ್ತು ಕಾಡಂಚಿನ ಅಮಾಯಕ ಹಳ್ಳಿಗರನ್ನ, ಆದಿವಾಸಿಗಳನ್ನ ಹುರಿದು ತಿಂದು ಬಿಡುತ್ತಾರೆ. ಅಲ್ಲದೆ ನಕ್ಸಲಿಜಂ ಎಂಬ ಚಳವಳಿಗೆ, ಕುದುರೆಮುಖ ಕಾಡಿನ ಆರ್ಥಿಕ- ಸಾಮಾಜಿಕ ಸಮಸ್ಯೆಗಳಿಗೆ ಸರ್ಕಾರವೊಂದು ಸ್ಪಂದಿಸಬೇಕಾದ ರೀತಿ ಇದಲ್ಲ. ಧರಂಸಿಂಗ್‌ ಅವರ ಸರ್ಕಾರದ ಈವರೆಗಿನ ಭ್ರಷ್ಟಾಚಾರ, ಕಾಂಗ್ರೆಸ್‌ ಸಹಜ ಐಲು ವರ್ತನೆಗಳು, ಇವರ ಒಳ ಜಗಳಗಳು- ಎಲ್ಲವನ್ನೂ ‘ಪಾಪ ಬಿಡಿ, ಧರಂ ಸಿಂಗು’ ಎಂಬಂತೆ ಸಹಿಸಿಕೊಂಡಿರುವ ಜನ, ಈ ಸರ್ಕಾರದ ಅತಂತ್ರ ಸ್ಥಿತಿಯಿಂದಾಗಿಯೇ ಇದರ ಮೇಲೆ ಮರುಕ- ಮಮತೆಯಿಟ್ಟುಕೊಂಡಿದ್ದಾರೆ. ಆದರೆ, ಮಲೆನಾಡಿನ ಕಾಡಿನಲ್ಲಿ STFಯೋಧರು ಮೊದಲ ಗುಂಡು ಹಾರಿಸಿದ ಕ್ಷಣದಿಂದಲೇ ಧರಂಸಿಂಗ್‌ ವಿರುದ್ಧ ದ್ವೇಷ ಜನಮನದಲ್ಲಿ ಹುಟ್ಟಿಕೊಳ್ಳುತ್ತದೆ. ನಕ್ಸಲೀಯ ಹುಡುಗರ ಎದೆಗೆ ಬಿದ್ದ ಗುಂಡು, ಈ ಸರ್ಕಾರದ ಸರ್ವನಾಶಕ್ಕೆ ಮುನ್ನುಡಿ ಬರೆಯುತ್ತದೆ.

‘ಕುದುರೆ ಮುಖದ ಕಾಡಿನೊಳಕ್ಕೆ STFಪಡೆಗಳನ್ನು ಕಳಿಸಲಿಕ್ಕೆ ಸರ್ಕಾರ ನೀಡುವ ಕಾರಣ ಮತ್ತು ಅದರ ಸಮರ್ಥನೆಗಳೇ ಅಸಹ್ಯಕರ, ಬಾಲಿಶ ಹಾಗೂ ಅಸಮರ್ಥನೀಯ. ಮಲೆನಾಡಿನ ಕಾಡಲ್ಲಿ ನಕ್ಸಲೀಯರಿದ್ದಾರೆ. ಅವರ ಕೈಲಿ ಬಂದೂಕಿದೆ. ನಾಗರಿಕ ಸರ್ಕಾರ ಇದನ್ನು ಸಹಿಸುವುದಿಲ್ಲ. ನಕ್ಸಲರನ್ನು ಮಾತುಕತೆಗೆ ಕರೆಯುವುದು. ವ್ಯರ್ಥ. ಪಕ್ಕದ ಆಂಧ್ರದ ಪರಿಸ್ಥಿತಿ ಮೋಡಿದರೆ ಗೊತ್ತಾಗಲ್ವ? ನಾವು ನಕ್ಸಲೀಯರನ್ನ ಸದೆಬಡಿದೇ ತೀರುತ್ತೇವೆ’ ಎಂಬ ನಿಲುವು ಸರ್ಕಾರದ್ದು.

ಸರ್ಕಾರವನ್ನು ನಾವೆಲ್ಲರೂ ನೇರವಾಗಿ ಕೇಳಬೇಕಾದ ಪ್ರಶ್ನೆಯೆಂದರೆ, ಯಾವ ಬರ್ಬರ ಹಿಂಸಾಚಾರ ನಡೆಸಿದ್ದಾರೆ ಎಂಬ ಕಾರಣಕ್ಕೆ ನಕ್ಸಲರ ಮೇಲೆ ಫೌಜು ಕಳಿಸುತ್ತಿದ್ದೀರಿ ? ತೀರ ಫೌಜು ಕಳಿಸುವಷ್ಟು ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆಯೆ? ಅಲ್ಲಿ ನಡೆದಿರುವ ನಕ್ಸಲೀಯ ಚಳವಳಿಗೆ ಅತ್ಯಂತ ಸಮರ್ಥನೀಯವಾದ ಒಂದು ಸಾಮಾಜಿಕ, ರಾಜಕೀಯ ಆಯಾಮವಿದೆ. ಅದನ್ನು ಬದಿಗಿಟ್ಟು ಕೇವಲ ಕಾನೂನಿನ -ಸುವ್ಯವಸ್ಥೆಯ ನೆಪ ಹೇಳಿ ಫೌಜು ನುಗ್ಗಿಸಿದರೆ ಅದು ಸಮರ್ಥನೀಯವೇ? ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಆದಿವಾಸಿಗಳ ಎತ್ತಂಗಡಿಯ ವಿರುದ್ಧ ಚಳವಳಿ ಮಾಡಿಯೇ, ಆ ಮೂಲಕ ಕಾಡಿನ ನಿವಾಸಿಗಳ ಮನ ಗೆದ್ದಿರುವವರು ನಕ್ಸಲೀಯರು. ಈ ತನಕ ಅವರು ಯಾವ ಉಗ್ರವಾದಿ ಚಟುವಟಿಕೆ ನಡೆಸಿದ್ದಾರೆ? ಎಷ್ಟು ಜನರನ್ನು ಕೊಂದಿದ್ದಾರೆ? ಎಷ್ಟು ಬಾಂಬಿಕ್ಕಿದ್ದಾರೆ? ಯಾವ ಠಾಣೆ ದೋಚಿದ್ದಾರೆ? ಎಲ್ಲಿ ದರೋಡೆ ಮಾಡಿದ್ದಾರೆ?

ಇದೆಲ್ಲವನ್ನೂ ಮಾಡಿ ನೂರಾರು ಜನರ ಪ್ರಾಣ ತೆಗೆದ ವೀರಪ್ಪನ್‌, ಕೇವಲ ಒಬ್ಬ ನಟನನ್ನು ಹೊತ್ತೊಯ್ದರೆ ಅವನ ಪಾದಕ್ಕೆ ಬಿದ್ದು ಊಳಿಟ್ಟ ನೀವು, ಈಗ ಬಡವರಿಗಾಗಿ ಚಳವಳಿ ಹೂಡಿರುವ ಹುಡುಗ ಹುಡುಗಿಯರ ಮೇಲೆ ಫೌಜು ನುಗ್ಗಿಸುತ್ತೀರಾ ?

ಈ ಸರ್ಕಾರ ಕೆಲವು ದಿನಗಳಿಂದಲೂ ಮಸಲತ್ತು ಮಾಡಿದೆ. ನಕ್ಸಲೀಯರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಮದ್ದು ಗುಂಡು ಇದೆ. ಹೊರರಾಜ್ಯದ ನಕ್ಸಲರ ಸಂಪರ್ಕವಿದೆ. ಅವರು ಭಾರೀ ಪ್ರಮಾಣದ ಹಿಂಸಾತ್ಮಕ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ ಅಂತೆಲ್ಲ ಕೆಲವು ಮಾಧ್ಯಮಗಳಲ್ಲಿ ಬರೆಸಿ, ಪ್ರಚಾರ ಮಾಡಿದವರು ಗುಪ್ತಚರ ಇಲಾಖೆಯವರು. ಅದರ ಆಧಾರದ ಮೇಲೆಯೇ ಧರಂ ಸರ್ಕಾರ ನಕ್ಸಲರ ಮೇಲೆ ಬಂದೂಕೆತ್ತಿಕೊಂಡು ಹೊರಟಿದೆ. ಆದರೆ ಆ ಹುಡುಗರ ಬಳಿ ಯಾವ ಆಧುನಿಕ ಶಸ್ತ್ರಾಸ್ತ್ರವೂ ಇಲ್ಲ. ಅಂಥ ಮದ್ದು ಗುಂಡೂ ಇಲ್ಲ. ಅವರದು ಕೇವಲ ಜನರನ್ನು ಆಶ್ರಯಿಸಿ ಬೆಳೆಯುವ ಸಂಘಟನೆ. ಹುಡುಗರು ಕೂಡ ಪ್ರಮಾಣಿಕರು. ವಸೂಲಿ, ಬೆದರಿಕೆ, ದರೋಡೆ, ಹಣ-ಸಂಗ್ರಹ ಇದ್ಯಾವುದನ್ನೂ ಮಾಡಿದವರಲ್ಲ. ಅವರೆಂಥವರು ಮತ್ತು ಅವರ ಗಮ್ಯ ಎಂಥದ್ದು ಎಂಬುದು, ನಕ್ಸಲೀಯರನ್ನು ಅವರಿರುವಲ್ಲಿಗೇ ಹೋಗಿ ಸಂದರ್ಶಿಸಿ ಬಂದ ಪತ್ರಕರ್ತರನೇಕರಿಗೆ ಗೊತ್ತಿದೆ.

ಅವರು ಸಂವಿಧಾನ ಧಿಕ್ಕರಿಸುವ ಹಿಂಸಾವಾದಿಗಳು. ಅವರ ಹೋರಾಟ ಸಂವಿಧಾನದ ಚೌಕಟ್ಟಿನಲ್ಲಿಲ್ಲ. ಅವರು ಸರ್ಕಾರದ ಅಸ್ತಿತ್ವವನ್ನೇ ಧಿಕ್ಕರಿಸುತ್ತಾರಾದ್ದರಿಂದ ನಕ್ಸಲೀಯರನ್ನು ಸದೆಬಡಿಯುತ್ತೇವೆ ಅನ್ನುತ್ತದೆ ಸರ್ಕಾರ. ಆದರೆ ಸದೆಬಡಿಯಲು ಹೊರಟ ಸರ್ಕಾರ ಸಂವಿಧಾನದ ಆಶಯಗಳನ್ನು ಗೌರವಿಸುವ ಕೆಲಸ ಮಾಡುತ್ತಿದೆಯಾ? ಬಂದೂಕು ಹಿಡಿಯುವುದು ಕಾನೂನುಬಾಹಿರ ಅಂದ ಮಾತ್ರಕ್ಕೆ, ಬಂದೂಕು ಹಿಡಿದವರ ಆಶಯ ಅರ್ಥ ಮಾಡಿಕೊಳ್ಳದೆ ಅವರನ್ನು ಕೊಲ್ಲಿಸುತ್ತೇವೆಂಬುದು ಸಂವಿಧಾನಬದ್ಧವಾ? ಹಿಂದೆ ಪೊಲೀಸ್‌ ಗುಂಡುಗಳಿಗೆ ಬಲಿಯಾದ ಹಾಜೀಮಾ ಮತ್ತು ಪಾರ್ವತಿಯರ ಸಾವುಗಳನ್ನೇ ರಾಜ್ಯದ ಜನತೆಗೆ ಜೀರ್ಣಿಸಿಕೊಳ್ಳಲಾಗಿಲ್ಲ. ಇನ್ನಷ್ಟು ಸರ್ಕಾರಿ ಹತ್ಯೆಗಳನ್ನು ಯಾರು ಸಹಿಸಿಯಾರು? please stop this.

ಇಷ್ಟಾಗಿ, ನಕ್ಸಲೀಯರು ಕೇಳಿದ ಸಾಮಾಜಿಕ ನ್ಯಾಯದ ಪ್ರಶ್ನೆಗಳಿಗೆ ಸರ್ಕಾರ ಪ್ರತಿಕ್ರಿಯಿಸಿಯೇ ಇಲ್ಲ. ನಕ್ಸಲರು ಹಿಂಸಾ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆಯೇ ಹೊರತು ಈ ತನಕ ಹಿಂಸೆಗಿಳಿದಿಲ್ಲ. ಪೊಲೀಸ್‌ ಇನ್ಫಾರ್ಮರುಗಳನ್ನು ಶಿಕ್ಷಿಸಿದ್ದಾರೆ. ಮೈಮೇಲೇರಿ ಬಂದ ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ತಾನಾಗಿಯೇ ಎಲ್ಲೂ ಹಿಂಸೆಗಿಳಿದಿಲ್ಲ. ವೀರಪ್ಪನ್‌ ವಿರುದ್ಧ STF ಕಟ್ಟಿ ಕಳಿಸಿದ ಸಂದರ್ಭಕ್ಕೂ ,ಈಗ ನಕ್ಸಲರ ವಿರುದ್ಧ ಪೌಜು ಕಳಿಸುತ್ತಿರುವ ಸಂದರ್ಭಕ್ಕೂ ಖಂಡಿತ ಹೋಲಿಕೆಯಲ್ಲ. ಇವರ್ಯಾರೂ ಜನರನ್ನು ಹಿಂಸಿಸಿಲ್ಲ. ಪೋಲಿಸರನ್ನು ಟಾರ್ಗೆಟ್‌ ಮಾಡಿಲ್ಲ. ಒಂದೇ ಒಂದು ಅನ್ಯಾಯದ ಕೆಲಸ ಮಾಡಿಲ್ಲ. ಅಂದಮೇಲೆ STF ಕಳಿಸುವ ಅವಶ್ಯಕತೆ ಏನಿದೆ?

ಪಕ್ಕದ ಆಂಧ್ರಪ್ರದೇಶ, ಜಾರ್ಖಂಡ್‌, ಬಿಹಾರ್‌, ಮಧ್ಯಪ್ರದೇಶ್‌ಗಳಲ್ಲಿ ಚಳವಳಿ ಸರ್ಕಾರಕ್ಕೆ ಸವಾಲಾಗುವಷ್ಟೂ ಬೆಳೆದಿದೆ. ಅಲ್ಲಿ ಹಿಂಸೆ-ಪ್ರತಿಹಿಂಸೆಗಳಿವೆ. ಅಂಥದವರಲ್ಲೇ ಸರ್ಕಾರಗಳು ಮಾನವೀಯತೆ, ಪ್ರಜ್ಞೆ ಇಟ್ಟುಕೊಂಡು ನಕ್ಸಲೈಟರನ್ನು ಮಾತುಕತೆಗೆ ಕರೆಯುತ್ತಿವೆ. ಅಂಥದರಲ್ಲಿ ಏನಿಲ್ಲ ಎಂತಿಲ್ಲ : ಕಾಡಿಗೆ ಪೊಲೀಸರನ್ನು ನುಗ್ಗಿಸಿ ಕೊಂದು ಹಾಕುತ್ತೇವೆ ಅಂದರೆ ಹೇಗೆ ? ಇದರ ಪರಿಣಾಮಗಳು ಕೆಟ್ಟವೂ ಆಗಲಿದೆ. ಕಾಡಿನಲ್ಲಿ ಹೋಗಿ ನಕ್ಸಲೀಯರು ಜನಾನುರಾಗಿಗಳಾಗಿದ್ದಾರೆ. ಜನ ಮನ ಗೆದ್ದಿದ್ದಾರೆ. ಅವರ ಬಗ್ಗೆ ಮಾಹಿತಿ ಬೇಕು ಅಂತ ಕಾಡಿನಲ್ಲಿರುವ ಜನರನ್ನು STFನವರು ಯಥಾಪ್ರಕಾರ ಹಿಂಸಿಸತೊಡಗುತ್ತಾರೆ. STFನವರು ಹಿಂದೆ ವೀರಪ್ಪನ್‌ ಬೇಟೆಯ ಕಾಲದಲ್ಲೂ ಅಮಾನುಷವಾಗಿ ವರ್ತಿಸಿದ ನಿದರ್ಶನಗಳಿವೆ. ಅದೇ ಕೆಲಸ ಇಲ್ಲೂ ನಡೆದರೆ, ಜನರಿಗೆ ನಕ್ಸಲರ ಮೇಲಿನ ವಿಶ್ವಾಸ, ಪ್ರೀತಿ ಮತ್ತು ಹೆಚ್ಚೀತು. ಮಲೆ ಸೀಮೆಯ ಜನ ಸೂಕ್ಷ್ಮ ಮನಸ್ಸಿನವರು. ಅವರ ಮೇಲಾಗುವ ದೌರ್ಜನ್ಯ ಎಂಥ ಪರಿಣಾಮ ಬೀರಲಿದೆಯೆಂಬುದರ ಅರಿವು ಧರಂ ಸರ್ಕಾರಕ್ಕಿಲ್ಲ.

ಇಂಥದೊಂದು ಕೆಟ್ಟ ನಿರ್ಣಯವನ್ನು ಕೈಗೊಂಡ ಧರಂಸಿಂಗ್‌ಗೆ ನಾಡಿನ ಗಣ್ಯರು ತಿಳಿಹೇಳಬೇಕು. ಹಿರಿಯ ರಾಜಕಾರಣಿಗಳು ಮಾತನಾಡಬೇಕು. ಕವಿ ಕಲಾವಿದರು ಸಭೆ ಸೇರಬೇಕು. ಪಡೆದ ಅವಾರ್ಡುಗಳನ್ನು ಹಿಂತಿರುಗಿಸುತ್ತೇವೆನ್ನಬೇಕು. ವಿದ್ಯಾರ್ಥಿಗಳು ಸರ್ಕಾರದ ಈ ನಿರ್ಧಾರದ ವಿರುದ್ಧ ಸಹಿ ಸಂಗ್ರಹ ಚಳವಳಿ ಮಾಡಬೇಕು. ಪಕ್ಷಭೇದ ಮರೆತು ಎಲ್ಲರೂ ದನಿಯೆತ್ತಬೇಕು. ಮುಖ್ಯವಾಗಿ ಅವರದೇ ಸಂಪುಟ ಸಹೋದ್ಯೊಗಿಗಳು ಧರಂಗೆ ಸರಿಯಾದ ಮಾರ್ಗದರ್ಶನ ನೀಡಬೇಕು.

ರಾಜ್ಯಸರ್ಕಾರಗಳು ಸೃಷ್ಟಿಸಿದ STFಗಳು ಹೋಗಿ ವೀರಪ್ಪನ್‌ನ್ನು ಕೊಂದು ಹೆಣ ಹೊರಕ್ಕೆಳೆದು ತಂದಾಗ ಆಗುವ ಖುಷಿ ಬೇರೆ. ಕಾಡ ನಡುವಿನಿಂದ ಸುಸಂಸ್ಕೃತ, ಪ್ರಾಮಾಣಿಕ, ವಿದ್ಯಾವಂತ, ಮೇಧಾವಿ ಹುಡುಗ ಹುಡುಗಿಯರ ಬೇಟೆಯಾಡಿ ಬಂದರೆ ಆಗುವ ಸಂಕಟವೇ ಬೇರೆ. ಮುಂದೆಂದೋ ಇಂಥದ್ದೊಂದು ನಿರ್ಣಯದ ಬಗ್ಗೆ ಪಶ್ಚಾತ್ತಾಪ ಪಡುವುದರ ಬದಲು, ಕೂಡಲೆ ಧರ್ಮಸಿಂಗ್‌ ಅವರು ತಮ್ಮ ಫೌಜು ವಾಪಸು ಕರೆಸಿಕೊಳ್ಳಲಿ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more