• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮನ್ನು ಶ್ರೀಮಂತರನ್ನಾಗಿಸದವರೆದುರು ನಾವೇಕೆ ಬಡವರಾಗಬೇಕು ಅಂತ?

By Staff
|
Ravi Belagere on Thatskannada.com ರವಿ ಬೆಳಗೆರೆ
ನನ್ನನ್ನು ಟೀಕಿಸಲಿಕ್ಕೆ ನೂರು ಶಬ್ದ ಸಿಕ್ಕಾವು. ಒರಟ, ಸೋಮಾರಿ, ಚಂಚಲ, ಉಲಕೋಚಿ- ಹೀಗೆ. ಆದರೆ ನೀವು ಯಾವ ಕಾರಣಕ್ಕೂ ನನ್ನನ್ನು ಅಹಂಕಾರಿ ಅನ್ನಲಾರಿರಿ. ಅಹಂಕಾರದ ವರ್ತನೆ ಇದೆಯಲ್ಲ ? ಅದನ್ನು ಒಬ್ಬ ಮನುಷ್ಯ ತನಗೆ ತಾನೇ ಮಾಡಿಕೊಳ್ಳುವ insult ಅಂತ ಅಂದುಕೊಂಡಿರುವವನು ನಾನು. ಸಿಟ್ಟು ಮಾಡಿಕೊಳ್ಳುತ್ತೇನೆ. ಬೇಸರ ಮಾಡಿಕೊಳ್ಳುತ್ತೇನೆ. ಮಾತು ಬಿಡುತ್ತೇನೆ. ಆದರೆ ಅಹಂಕಾರಕ್ಕೆ ಯಾವತ್ತೂ ಬೀಳಲಾರೆ.

ನನ್ನ ಅಹಂಕಾರ ನನ್ನ ಬರವಣಿಗೆಗೆ ಸಂಬಂಧಿಸಿದ್ದು. ಒಬ್ಬ ಕ್ರಿಯಾಶೀಲ ಮನುಷ್ಯ ತನ್ನ ಅಹಂಕಾರ, ತನ್ನ ego ತಣಿಯಲೆಂದೇ ಬರೆಯುತ್ತಾನೆ ಅಂತ ನಂಬಿದವನು ನಾನು. ಲೋಕೋದ್ಧಾರಕ್ಕೆ ಬರೀತೇನೆ ಅಂತ ಯಾರಾದರೂ ಹೇಳಿದರೆ, ಸುಳ್ಳು ಅದು. ನಂಬ ಬೇಡಿ. ಪ್ರತಿ ಸೃಷ್ಟಿಯಲ್ಲೂ, ಪ್ರತಿ ಸಾಲಿನಲ್ಲೂ, ಪ್ರತಿ ಚಿತ್ರದಲ್ಲೂ -ಅದನ್ನು ಮೂಡಿಸಿದವನಿರುತ್ತಾನೆ. ಅವನ ಕ್ರಿಯಾಶೀಲ, ಸಜ್ಜನ, ಸಾತ್ವಿಕ ಅಹಂಕಾರವಿರುತ್ತದೆ. ಅಷ್ಟು ಸಾಕು. ನಾನು ಚೆಂದಗಿದ್ದೇನೆ. ನಾನು ಭಯಂಕರ ಬಲಶಾಲಿಯಾಗಿದ್ದೇನೆ. ನಾನು ವಿಪರೀತ ಶ್ರೀಮಂತ. ನಂಗೆ ರ್ಯಾಂಕು ಬಂತು ಇವೆಲ್ಲ ಕೆಲಸಕ್ಕೆ ಬಾರದ ಅಹಂಕಾರಗಳು.

ಆದರೆ ನಾನು ವಿಪರೀತ humble ಕೂಡ ಅಲ್ಲ. ‘ನಿಮ್ಮ ಪರಿಚಯವಾಗಿದ್ದು ನನ್ನ ಪುಣ್ಯ’ ಎಂಬಂತಹ ದೀನ ಭಾವ ವ್ಯಕ್ತಪಡಿಸಿ, ಈ ತನಕ ನಾನು ನಿಂತಿರುವುದು ಹೆಚ್ಚೆಂದರೆ ಇಬ್ಬರು ಮೂರು ಜನರ ಸನ್ನಿಧಿಯಲ್ಲಿ. ಅಲ್ಲಿ ನಿಜಕ್ಕೂ humble ಆಗಿದ್ದೆ. ಎದುರಿನ ವ್ಯಕ್ತಿ ಯಾರೇ ಇರಲಿ, ಎಷ್ಟೇ ದೊಡ್ಡವನಿರಲಿ; ನಿಮಗೆ ನಿಮ್ಮದೇ ಆದ ಎತ್ತ ರವಿದೆಯೆಂಬ ಸಂಗತಿ ನೆನಪಿಟ್ಟುಕೊಳ್ಳಿ. ಎಷ್ಟೋ ಸಲ ಆತನ ಎತ್ತರಕ್ಕೆ ನೀವೂ ಕಾರಣರಾಗಿರುತ್ತೀರಿ. ತೆಂಡೂಲ್ಕರ್‌ ನಿಜಕ್ಕೂ ಮಹಾನ್‌ ಕ್ರಿಕೆಟಿಗರನಿರಬಹುದು. ಆದರೆ ಅವನ ಆಟದ ಬಿರುಸಿಗೆ ನಾವು ತಟ್ಟಿದ ಚಪ್ಪಾಳೆಗಳೂ ಕಾರಣವಾಗಿರುತ್ತವೆ. ಪ್ರೀತಿಯಿಂದ, ಗೌರವದಿಂದ, ಅಭಿಮಾನದಿಂದ ನೋಡುವುದು ಬೇರೆ, ಅವನೆದುರು ನಿಂತಾಗ ತೀರ ನಮ್ಮನ್ನು ನಾವು ನಿಕೃಷ್ಟರೆಂದುಕೊಂಡು ಅದಕ್ಕೆ ತಕ್ಕಂತೆ ವರ್ತಿಸಿಬಿಡುವುದು ಬೇರೆ. ಮಗಳ ಮದುವೆಯಲ್ಲಿ ಬೀಗರೆದುರು ತಂದೆ ಹಾಗಾಗಿರುತ್ತಾನೆ. ಅಧಿಕಾರಿಯೆದುರು ಗುಮಾಸ್ತೆ ಹಾಗಾಗಿರುತ್ತಾನೆ. ಬಲಿಷ್ಠನೆದುರು ಬಲಹೀನ ಹಾಗಾಗಿರುತ್ತಾನೆ. ಶ್ರೀಮಂತನೆದುರು ಬಡವ ಹಾಗಾಗಿರುತ್ತಾನೆ. ನಟನೆದುರು ಅಭಿಮಾನಿ. ಕೆಲವೊಮ್ಮೆ ಪ್ರೀತಿಸಿದವಳೆದುರು ಹುಡುಗ!

ಖಂಡಿತ ಹಾಗಾಗಬೇಕಿಲ್ಲ ಎಂಬುದು ನನ್ನ ವಾದ. ನನಗಿಂತ ಅರ್ಧ ಪ್ಯಾರಾಗ್ರಾಪು ಹೆಚ್ಚು ಓದಿಕೊಂಡವನನ್ನು ನಾನು ಗೌರವಿಸುತ್ತೇನೆ. ನನಗಿಂತ ತುಂಬ ಚೆಂದಗೆ ಇಂಗ್ಲಿಷು ಮಾತಾಡುವವನೆದುರು, ನನ್ನ ಕನ್ನಡವನ್ನು ನಾನು ಅವಮಾನ ಮಾಡಿಕೊಳ್ಳುವುದಿಲ್ಲ. ಶ್ರೀಮಂತನೆದುರು, ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವವನೆದುರು -ಸುಮ್ಮನೆ ನಿಲ್ಲುವುದಕ್ಕೂ ಅಸಹ್ಯ ಪಡುತ್ತೇನೆ. ನನ್ನನ್ನು ನಿಜವಾಗ್ಯೂ ಶ್ರೀಮಂತನನ್ನಾಗಿ ಮಾಡಬಲ್ಲ ಮಹಾಜ್ಞಾನಿ ಇದ್ದಾನಾ? ಅವನಲ್ಲಿ ಒಳ್ಳೆಯತನವೂ ಇದೆಯಾ? ಅವನೆದುರು ಮಾತ್ರ ನಾನು ಬಡವ, ನಾನು humble.

ಹಾಗಂತ ದೊಡ್ಡವರೆದುರು ನಾವು ಅಹಂಕಾರಿಗಳಾಗಬೇಕಿಲ್ಲ. ಸಭ್ಯತೆಗೂ-ಚಮಚಾಗಿರಿಗೂ, ಆತ್ಮವಿಶ್ವಾಸಕ್ಕೂ-ಆತ್ಮರತಿಗೂ, ನಿರ್ಲಕ್ಷ್ಯಕ್ಕೂ-ಮೌನಕ್ಕೂ ನಡುವಿನ ಅಂತರ ನಮಗೆ ಗೊತ್ತಿರಬೇಕು. ವಿನಾಕಾರಣ ಹೇಗೆ stiff ಆಗಿರಬಾರದೋ, ವಿನಾಕಾರಣ ಕೈ ಹೊಸೆಯಲೂ ಬಾರದು. ‘ನೋಡಿದೆಯಾ, ನಾನೆಷ್ಟು ಪವರ್‌ಫುಲ್‌, ನಾನೆಷ್ಟು ಜನಪ್ರಿಯ’ ಎಂಬ added ಅಹಂಕಾರವನ್ನು ಅವನಿಗೆ ನೀವು ಕಟ್ಟಿಕೊಡುತ್ತೀರೇ ಹೊರತು, ಅವನಿಂದ ನಿಮ್ಮ ಬದುಕು ಶ್ರೀಮಂತ ಗೊಳ್ಳುವುದಿಲ್ಲ. ನಮ್ಮನ್ನು ಶ್ರೀಮಂತಗೊಳಿಸಲಾರದವರೆದುರು ನಾವ್ಯಾಕೆ ಸುಳ್ಳೇ ಬಡುವರಾಗಬೇಕು?

ಒಂದು ಮುಗುಳ್ನಗೆ, ಒಂದು ನಮಸ್ಕಾರ,ಒಂದು ಕೈ ಕುಲುಕು, ಹೆಚ್ಚೆಂದರೆ ಎರಡು ಒಳ್ಳೆಯ ಮಾತು; ಅಷ್ಟರಲ್ಲಿ ನಮ್ಮ ಅಭಿಮಾನ, ಮೆಚ್ಚುಗೆ ಮುಗಿದುಹೋಗಬೇಕು. ನಿಮ್ಮನ್ನು ನೋಡಿದ್ದೇ ಭಾಗ್ಯ, ತಾಕಿದ್ದೇ ಭಾಗ್ಯ, ನಿಮ್ಮ ಜೊತೆಗೆ ಫೋಟೋ ತೆಗೆಸಿಕೊಂಡದ್ದೇ ಸೌಭಾಗ್ಯ ಎಂಬಂತೆ ಆಡಬಾರದು. ಹುಡುಗಿಯ ಎದುರಿಗೂ ಅಷ್ಟೇ. ನೀನು ಒಪ್ಪಿಕೊಂಡದ್ದು ನನ್ನ ಪುಣ್ಯ ಕಣೇ. ಹಾಗೇನೇ ನಿನ್ನ ಪುಣ್ಯವೂ ದೊಡ್ಡದಿದೆ. ನನ್ನಂಥವನು ಪ್ರಿತಿಸುವುದೆಂದರೆ ಸುಮ್ಮನೆ ಮಾತಾ-ಎಂಬಂತೆ ಇದ್ದು ನೋಡಿ. ಆ ಬಾಂಧವ್ಯ ಬಹುಕಾಲ ಬದುಕುಳಿಯುತ್ತದೆ.

ಶ್ರೀಮಂತರು ಸಾವಿರ ಸಾವಿರವಿದ್ದಾರೆ. ಇರುತ್ತಾರೆ. ನಮ್ಮನ್ನು ಶ್ರೀಮಂತಗೊಳಿಸುವವರು ಇದಿರಾಗುವ ತನಕ ನಾವು ಬಡವರಾಗುವುದು ಬೇಡ. ಏನಂತೀರಿ?

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more