ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆರೆಗಳ ಸರದಾರ ಮತ್ತು ಸಾಹಿತ್ಯದ ಸೇಲ್ಸ್‌ಮ್ಯಾನ್‌!

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಲಕ್ಷ್ಮಣ್‌ ತಮಿಳಿನವರು ಅಂತ ಅನ್ನಿಸುವುದಿಲ್ಲ. ಜಯಕಾಂತನ್‌ ತಮಿಳಿನವರು ಅನ್ನಿಸುತ್ತಾರೆ. ಯಾಕೆಂದರೆ, ಲಕ್ಷ್ಮಣ್‌ರ ಕ್ರಿಯೇಟಿವಿಟಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವೇದಿಕೆ ದೊರೆಯಿತು. ತಾವೊಬ್ಬ ತಮಿಳಿನವರು ಅನ್ನುವ ಪರಿಧಿಯನ್ನು ದಾಟಿ ಅವರು ಬೆಳೆದುಬಿಟ್ಟರು. ಇದು ಸಾಧ್ಯವಾಗಿದ್ದು, ತಮ್ಮ ಎಕ್ಸ್‌ಪ್ರೆಷನ್ನಿಗೆ ಅವರು ಮಾತಿಗಿಂತ ಮೊನಚಾದ ಗೆರೆಗಳನ್ನು ಆರಿಸಿಕೊಂಡಿದ್ದರಿಂದ.

ಜಯಕಾಂತನ್‌ ಎಂಬ ಹೆಸರು ಮೊನ್ನೆ ಮೊನ್ನೆಯವರೆಗೂ ತಮಿಳುನಾಡಿನ ಗಡಿಯಾಳಗಷ್ಟೇ ಸುತ್ತುತ್ತಿತ್ತು. ಯಾಕೆಂದರೆ, ಅವರಾರಿಸಿಕೊಂಡ ವೇದಿಕೆಯೇ ಅಂಥದ್ದು. ಪ್ರಾದೇಶಿಕ ಭಾಷೆಯಾಂದರ ಸಾಹಿತಿ ಎಂದೂ ರಾಷ್ಟ್ರಮಟ್ಟದ ಸ್ಟಾರ್‌ ಆಗಲಾರ.

ಅಲ್ಲದೆ, ಲಕ್ಷ್ಮಣ್‌ ಹಾಗೂ ಜಯಕಾಂತನ್‌ ಇಬ್ಬರ ವ್ಯಕ್ತಿತ್ವಕ್ಕೂ ವಿಪರೀತ ವ್ಯತ್ಯಾಸಗಳಿವೆ. ಜಯಕಾಂತನ್‌ ಗಂಭೀರ ವದನ. ಅವರ ಚಿಂತನೆಗಳೆಲ್ಲವೂ ಸುಬ್ರಹ್ಮಣ್ಯಭಾರತೀಯವರ ನೆಲೆಯಲ್ಲೇ ರೂಪುಗೊಂಡಂಥವು.

D.Jayakanthanತಮ್ಮ ಬಗ್ಗೆ ತಾವೇ ತಮಾಷೆ ಮಾಡಿಕೊಂಡು ನಗುವ ಟಿಪಿಕಲ್‌ ತಮಿಳು sense of humour ಜಯಕಾಂತನ್‌ ಅವರಲ್ಲೂ ಇದೆಯಾದರೂ, ಅದು ಅವರ ಬುದ್ಧಿಜೀವಿ ಸಾಹಿತಿಯೆಂಬ ಮುಖದಡಿಯಲ್ಲಿ ಅಡಗಿ ಹೋಗಿದೆ.

ಆದರೆ ಲಕ್ಷ್ಮಣ್‌, ಎಲ್ಲರೂ ಕೂಡ ‘ಇವ ನಮ್ಮವ’ ಅಂತಂದುಕೊಂಡು ಬಿಡಬಹುದಾದಂಥ ಪಕ್ಕದ ಮನೆ ಮನುಷ್ಯನ ಥರ. ತಮ್ಮ ಇಡೀ ಬದುಕನ್ನೇ ಅತ್ಯಂತ ಸಹಜವಾಗಿ, ಯಾವುದೇ ತೋರಿಕೆಗಳಿಲ್ಲದೆ, ಸರಳವಾಗಿ, ನೇರವಾಗಿ ಕಳೆದಿರುವವರು ಅವರು. ಯಾಕೋ ಏನೋ; ಅವರ ಕಾರ್ಟೂನುಗಳ ಹಾಗೆ, ಅವರನ್ನೂ ಕೂಡ ಕಂಡ ತಕ್ಷಣ ಮುಖದಲ್ಲೊಂದು ನಗು ಅಯಾಚಿತವಾಗಿ ಅರಳುತ್ತದೆ! ಹಾಗಂತ ಅವರೆಂದೂ ಜೋಕರ್‌ ಆಗಲಿಲ್ಲ ; ಕಾರ್ಟೂನಿನ ವ್ಯಂಗ್ಯ ಮತ್ತು ತಮಾಷೆಯ ನಡುವೆಯೇ ತಮ್ಮ ಘನತೆಯನ್ನೂ ಸರಾಗವಾಗಿ ಕಾಪಾಡಿಕೊಂಡು ಬಂದ ಅಪರೂಪದ ವ್ಯಂಗ್ಯಚಿತ್ರಕಾರ, ಲಕ್ಷ್ಮಣ್‌.

ಈಗ ಇಬ್ಬರೂ ತಮಿಳರೂ ರಾಷ್ಟ್ರದ ಎರಡು ಅತ್ಯುನ್ನತ ಪ್ರಶಸ್ತಿಗಳನ್ನ ಪಡೆದಿದ್ದಾರೆ. ಒಬ್ಬರು ಜ್ಞಾನಪೀಠಿಯಾಗಿದ್ದಾರೆ. ಇನ್ನೊಬ್ಬರು, ಪದ್ಮ ವಿಭೂಷಣ.

ಲಕ್ಷ್ಮಣ್‌ರಿಗೆ ಈಗಾಗಲೇ ಎರಡು ಪದ್ಮಪ್ರಶಸ್ತಿ ಗಳು ಬಂದಿವೆ; ಪದ್ಮಶ್ರೀ ಮತ್ತು ಪದ್ಮಭೂಷಣ. ಈ ಪದ್ಮಭೂಷಣವನ್ನ ಅವರಿಗೆ ಕೊಟ್ಟಿದ್ದು ಇಂದಿರಾಗಾಂಧಿಯವರ ಸರ್ಕಾರ. ಅದರ ಬಗ್ಗೆ ಒಂದು ಇಂಟರೆಸ್ಟಿಂಗ್‌ ಕಥೆಯಿದೆ. ಪದ್ಮಭೂಷಣವನ್ನ ಪ್ರಶಸ್ತಿಗೆ ಅವರು ಆಯ್ಕೆಯಾದಾಗ, ಇಂದಿರಾ ಸರ್ಕಾರದಿಂದ ಅವರಿಗೊಂದು ಪತ್ರ ಬಂತಂತೆ. ‘..ದಯವಿಟ್ಟು (ಪ್ರಶಸ್ತಿ ಸಮಾರಂಭದ) ರಿಹರ್ಸಲ್‌ಗಾಗಿ ದೆಹಲಿಗೆ ಬನ್ನಿ. ನಿಮ್ಮ ಶ್ರೀಮತಿಯರನ್ನೂ ನೀವು ಕರೆತರುವುದಾದರೆ, ಅವರ ಪ್ರಯಾಣ ಮತ್ತಿತರ ವೆಚ್ಚಗಳನ್ನೆಲ್ಲಾ ನೀವೇ ಭರಿಸಬೇಕು. ಮತ್ತು , ಕಾರ್ಯಕ್ರಮದಲ್ಲಿ ಅವರು ಸೌಮ್ಯವಾದ ಡ್ರೆಸ್‌ ಧರಿಸಿರಬೇಕು, ಸೀರೆಯ ಬಾರ್ಡರ್‌ ಎರಡು ಇಂಚಿಗಿಂತ ಹೆಚ್ಚು ಅಗಲವಿರಬಾರದು!’ ಅಂತ ಬರೆದಿತ್ತು ಅದರಲ್ಲಿ . ಲಕ್ಷ್ಮಣ್‌ ಆ ಕಾರ್ಯಕ್ರಮಕ್ಕೆ ಹೋಗಲೇ ಇಲ್ಲ. ಅದಾದ ಹತ್ತು ತಿಂಗಳ ನಂತರಆ ಪ್ರಶಸ್ತಿಯನ್ನವರಿಗೆ ಅಂಚೆಯಲ್ಲಿ ಕಳಿಸಿಕೊಡಲಾಯಿತು. ಅದರಲ್ಲಿ ಒಂದು ಪ್ರಶಸ್ತಿ ಪತ್ರ ಮತ್ತು ಒಂದು ದೊಡ್ಡ ಹಾಗೂ ಒಂದು ಸಣ್ಣ ಮೆಡಲುಗಳಿದ್ದವು. ಜೊತೆಗೊಂದು ಪತ್ರ : ‘ ಔಪಚಾರಿಕ ಸಭೆ- ಸಮಾರಂಭಗಳಿಗೆ ಹೋಗುವಾಗ ದೊಡ್ಡ ಪದಕವನ್ನು ಧರಿಸಬಹುದು; informal ಫಂಕ್ಷನ್ನುಗಳಿಗೆ ಸಣ್ಣ ಪದಕವನ್ನು ಮಾತ್ರ ಧರಿಸಬೇಕು. ಆದರೆ ಎಲ್ಲೂ ಯಾವಾಗಲೂ ಈ ಪದಕಗಳನ್ನು ಢಾಳಾಗಿ ಕಾಣುವಂತೆ ಪ್ರದರ್ಶಿಸಬಾರದು..!’

R.K.Lakshmanಈ ಒಕ್ಕಣೆಯ ಅರ್ಥ ಏನು ಎಂಬುದು ತಮಗೆ ಕೊನೆಗೂ ಗೊತ್ತಾಗಲಿಲ್ಲ ಎಂದು ಅವರು ತಮ್ಮ ಆತ್ಮಚರಿತ್ರೆ,‘ ದಿ ಟನಲ್‌ ಆಫ್‌ ಟೈಮ್‌’ನಲ್ಲಿ ಬರೆದಿದ್ದಾರೆ. ಅದರ ಅರ್ಥ ಅವರಿಗಾಗದಿದ್ದರೂ, ಅವರ ಕ್ರಿಯೇಟಿವಿಟಿಗೆ ಹೊಳಪು ಕೊಟ್ಟಿದ್ದೇ ಸರ್ಕಾರಿ ಅಧಿಕಾರಿಗಳ ಇಂಥ ಅವಿವೇಕಿತನಗಳು.

ಲಕ್ಷ್ಮಣ್‌, ಪೂರ್ತಿ ಐವತ್ತೇಳು ವರ್ಷ, ಟೈಮ್ಸ್‌ ಆಫ್‌ ಇಂಡಿಯಾ ಎಂಬ ಒಂದೇ ಸಂಸ್ಥೆಯಲ್ಲಿ ದುಡಿದಿದ್ದಾರೆ. 2003ರ ಸೆಪ್ಟೆಂಬರ್‌ನಲ್ಲೊಮ್ಮೆ ಅವರಿಗೆ ಲಕ್ವ ಹೊಡೆದು ಆಸ್ಪತ್ರೆಯಲ್ಲಿದ್ದಾಗಿನ ಅವಧಿಯನ್ನು ಬಿಟ್ಟರೆ, ಈ ಐವತ್ತೇಳು ವರ್ಷಗಳಲ್ಲವರು ಒಂದೇ ಒಂದು ದಿನವೂ ಪತ್ರಿಕೆಗೆ ಕಾರ್ಟೂನ್‌ ಬರೆಯುವುದನ್ನು ಬಿಟ್ಟಿಲ್ಲ. ಟೈಮ್ಸ್‌ ಆಫ್‌ ಇಂಡಿಯಾದಂಥ ಒಂದು outright upmarket ಪತ್ರಿಕೆಗೊಂದು ಜನಪರ ಕಾಳಜಿಯ ಐಡೆಂಟಿಟಿ ತಂದು ಕೊಟ್ಟಿರುವುದೇ ಅವರ ಸೃಷ್ಟಿಯಾದ ‘ಶ್ರೀಸಾಮಾನ’್ಯ -ಅಂದರೆ, ಕಾಮನ್‌ ಮ್ಯಾನ್‌, ಒಬ್ಬ ಮೂಕ ಪ್ರೇಕ್ಷಕ. ಬರದ ಬಯಲಿನ ಮಧ್ಯೆ ನಿಂತು ರಾಜಕಾರಣಿಗಳು ಆಡುವ ನಾಟಕವನ್ನೂ, ಪ್ರಧಾನಿಯವರ ಕ್ಯಾಬಿನೆಟ್‌ಮೀಟಿಂಗನ್ನೂ, ರಸ್ತೆಗಳ ಕರುಣಾಜನಕ ಸ್ಥಿತಿಯನ್ನೂ, ಯೂಸ್‌ಲೆಸ್‌ ಅನ್ನಿಸುವಂಥ ವೈಜ್ಞಾನಿಕ ಆವಿಷ್ಕಾರಗಳನ್ನೂ ಅವನು ಸುಮ್ಮನೆ ಒಂದು ಮೂಲೆಯಲ್ಲಿ ನಿಂತು ನೋಡುತ್ತಾನೆ. ಎಲ್ಲಿಂದೆಲ್ಲಿಗೆ ಬೇಕಿದ್ದರೂ ಸರಾಗವಾಗಿ ಹೋಗಿ ನಮ್ಮ ಕಣ್ಣಾಗುತ್ತಾನೆ. ಅವನ ಕಣ್ಣಿನಿಂದ ನಾವು ನಮ್ಮ ಸುತ್ತಮುತ್ತಲಿನ ಆಗುಹೋಗುಗಳ ವ್ಯಂಗ್ಯವನ್ನು ಕಾಣುತ್ತೇವೆ.

ಲಕ್ಷ್ಮಣ್‌ರ ಶಕ್ತಿಯಿರುವುದು ಅವರ ಚಿತ್ರಗಳಲ್ಲಿನ ಪ್ರಚಂಡ ಡೀಟೇಲುಗಳಲ್ಲಿ, ಅಲ್ಲಿನ ಕ್ಯಾರೆಕ್ಟರುಗಳ ಮುಖಭಾವದಲ್ಲಿ ಮತ್ತು unparallelled ತಮಾಷೆಯಲ್ಲಿ. ಅವರ ಕಾರ್ಟೂನುಗಳಲ್ಲಿ ರಾಜಕಾರಣಿಗಳು ಗೇಲಿಯ ವಸ್ತುಗಳಾಗುತ್ತಾರೆಯೇ ಹೊರತು, ಅವರ ಚಾರಿತ್ರ್ಯವಧೆ ಅಲ್ಲಿ ನಡೆಯುವುದಿಲ್ಲ.

ರಾಜೀವ್‌ಗಾಂಧಿಯಂಥ ಸುರಸುಂದರಾಂಗನನ್ನೂ ವಕ್ರಗೊಳಿಸಿ ನಮ್ಮನ್ನೊಪ್ಪಿಸಿ ಬಿಡುವ ತಾಕತ್ತು ಅವರ ಗೆರೆಗಳಿಗಿತ್ತು. ಈಗಲೂ ಇದೆ. ರಾಜೀವ್‌ ಮುಖಕ್ಕೆ ಸ್ವಲ್ಪ ಬೊಜ್ಜು ತುಂಬಿ, ಮೂಗನ್ನು ಮೊಟಕು ಮಾಡಿ ಮೇಲಕ್ಕೆತ್ತಿ, ಹುಬ್ಬುಗಳನ್ನು ದಟ್ಟಗೊಳಿಸಿ, ತಲೆಯನ್ನು ನಿಜವಾಗಿಯೂ ಇರುವುದಕ್ಕಿಂತ ಹೆಚ್ಚು ಬಾಲ್ಡಿ ಮಾಡಿ ಅವರು ಸೃಷ್ಟಿಸಿದ ಚಿತ್ರ ಅದೆಷ್ಟು ಪಾಪ್ಯುಲರ್‌ ಆಗಿಹೋಗಿತ್ತೆಂದರೆ, ಬರುಬರುತ್ತಾ ಅನೇಕರು ಅವರಿಗೆ,‘ರಾಜೀವ್‌ ಈಚೆಗೆ ನಿಮ್ಮ ಚಿತ್ರದ ಥರವೇ ಆಗಿದ್ದಾರೆ ಕಣ್ರೀ’ ಅನ್ನುತ್ತಿದ್ದರಂತೆ!

ರಾಜೀವ್‌ಗೊಂದು ಅಭ್ಯಾಸವಿತ್ತಲ್ಲ, ಯಾರು ಏನೇ ಹೇಳಿದರೂ‘ಹಮ್‌ ದೇಖೇಂಗೇ’ ಅನ್ನುವುದು? ಅದನ್ನು ಲಕ್ಷ್ಮಣ್‌ ಲೇವಡಿ ಮಾಡಿದಷ್ಟು ಬೇರೆ ಯಾರೂ ಮಾಡಿರಲಿಕ್ಕಿಲ್ಲ. ಅದೊಂದು ಸಲ,‘ ದಿ ಎಲೋಕ್ವೆಂಟ್‌ ಬ್ರಷ್‌’ ಅನ್ನುವ ಅವರ ಪುಸ್ತಕವನ್ನ ರಾಜೀವ್‌ ಅವರೇ ಬಿಡುಗಡೆ ಮಾಡಿದ್ದರು. ಪುಸ್ತಕ ಬಿಡುಗಡೆಯ ನಂತರ ಟೀ ಪಾರ್ಟಿಯಲ್ಲಿ ಮಾತಾಡುತ್ತಿದ್ದಾಗ ಅವರು ಲಕ್ಷ್ಮಣ್‌ರಿಗೆ, ‘ ನಿಮ್‌ ಚಿತ್ರದಲ್ಲಿ ನೀವು ನನ್ನನ್ನ ತುಂಬಾ ದಪ್ಪ ಮಾಡಿ ಬಿಟ್ಟಿದ್ದೀರಿ’ ಅಂತ ದೂರಿದರಂತೆ. ಅದಕ್ಕೆ ಲಕ್ಷ್ಮಣ್‌ ಅತ್ಯಂತ ಗಂಭೀರವಾಗಿ,‘ಹಮ್‌ ದೇಖೇಂಗೇ’ ಅಂದಿದ್ದರು!

ಗೆರೆಗಳಷ್ಟೇ ಅವರ ಮಾತೂ ವಿಪರೀತ ಮೊನಚು. ಮೊನ್ನೆ ಅವರಿಗೆ ಪದ್ಮವಿಭೂಷಣ ಸಿಕ್ಕಾಗ ಯಾರೋ ಒಬ್ಬ ಜರ್ನಲಿಸ್ಟ್‌ ಅವರನ್ನ How do you feel about this? ಅಂತ ಕೇಳಿದ್ದ. ಅದಕ್ಕೆ ಲಕ್ಷ್ಮಣ್‌,

‘ಅಲ್ಲಯ್ಯಾ, ಇದೆಂಥಾ ಪ್ರಶ್ನೆ ? ಪ್ರಶಸ್ತಿ ಬಂದಾಗ ಯಾರಾದ್ರೂ unhappyಯಾಗಿ ಇರೋಕಾಗತ್ತಾ?’ ಅಂದಿದ್ದರು. ಲಕ್ಷ್ಮಣ್‌ ಇರುವುದೇ ಹಾಗೆ. ಎಲ್ಲವೂ ನೇರಾನೇರ. ಮುಚ್ಚು ಮರೆಯಿಲ್ಲ. ಅವರ ಚಿತ್ರಗಳ ಥರ. ಅವರು ಹಾಗೂ ಅವರ ಕಾಮನ್‌ ಮ್ಯಾನ್‌ ಹೀಗೇ ನೂರ್ಕಾಲ ಬದುಕಿರಲಿ. ಅವರಿಲ್ಲದೆ ನಮ್ಮ ಮುಂಜಾನೆಗಳು ಸಪ್ಪೆಯಾಗಿ ಬಿಡುತ್ತದೆ. They have become an addiction!

ತಮಿಳು ಸಾಹಿತ್ಯದ ಓದುಗರ ಪಾಲಿಗೆ ಜಯಕಾಂತನ್‌ ಕೂಡ ಒಂದು ಅಡಿಕ್ಷನ್ನೇ. ಈ ಮನುಷ್ಯ ತಮಿಳಿನ ಬೇರೆ ಸಾಹಿತಿಗಳ ಹಾಗಲ್ಲ. ಭಾರತಿಯಾರ್‌ರ ಚಿಂತನೆಗಳನ್ನಿಟ್ಟುಕೊಂಡೂ ಆಧುನಿಕವಾಗಿ ಯೋಚನೆ ಮಾಡಬಲ್ಲವರವರು. ಸಾಹಿತ್ಯ, ಅಥವಾ ಯಾವುದೇ ಸೃಜನಾತ್ಮಕ ಕಲೆ, ಕಮರ್ಷಿಯಲೈಸ್‌ ಆಗುವುದರಲ್ಲಿ ಏನೇನೂ ತಪ್ಪಿಲ್ಲ ಅಂತ ವಾದಿಸಿ, ಟಿಪಿಕಲ್‌ಬುದ್ಧಿಜೀವಿಗಳಿಂದ ಹೊರತಾಗಿ ನಿಲ್ಲುವವರು. ‘ ಸಾಹಿತಿ ಕಮರ್ಷಿಯಲೈಸ್‌ ಆಗಬೇಕಿಲ್ಲ, ಅವನ ಸಾಹಿತ್ಯ ಆಗಬೇಕು. ಅದು ಬಿಕರಿಯಾಗಬೇಕು, ಜನರನ್ನು ತಲುಪಬೇಕು. ಸಾಹಿತಿ ಬರೀ ಸಾಹಿತ್ಯ ಕೃಷಿಯಿಂದಲೇ ಬದುಕುವಂತಾಗಬೇಕು’ ಅಂತ ಪ್ರತಿಪಾದಿಸುತ್ತಲೇ ಬಂದಿರುವ ಅವರು, ಅದನ್ನು ಸಾಧ್ಯವಾಗಿಸಿಯೂ ತೋರಿಸಿದ್ದಾರೆ. ಪ್ರಾದೇಶಿಕ ಭಾಷೆಯ ಸಾಹಿತಿಗಳೂ ಕೇವಲ ತಮ್ಮ ಕೃತಿಗಳ ಮಾರಾಟದ ದುಡ್ಡಿನಿಂದಲೇ ಬದುಕಬಹುದು ಅನ್ನುವುದನ್ನ ಸಾಧಿಸಿದ್ದಾರೆ. ಆ ಮಟ್ಟಿಗವರು ಅಪರೂಪದ ಜ್ಞಾನ ಪೀಠಿ; ಯಾಕೆಂದರೆ, ಜ್ಞಾನಪೀಠ ಪಡೆದವರ ಕೃತಿಗಳು ಕಮರ್ಷಿಯಲ್‌ ಯಶಸ್ಸು ಕಾಣುವುದು ಅಪರೂಪ; ಅವರೊಂದು ಥರ ಆರ್ಟ್‌ಫಿಲಮ್ಮುಗಳಿದ್ದ ಹಾಗೆ!

ಅವರ ಮಾನಸಿಕ ಗುರು ಸುಬ್ರಹ್ಮಣ್ಯಭಾರತಿಯವರು, ಇಡೀ ತಮಿಳು ಸಾಹಿತ್ಯವನ್ನೇ ತಮ್ಮ ಪ್ರಭಾವದಲ್ಲಿ ಕೆಡವಿಬಿಡುವಂಥ ಮಟ್ಟಕ್ಕೆ ಬೆಳೆದರೂ ಕೂಡ, ಬದುಕಿನದ್ದಕ್ಕೂ ದಾರುಣ ಬಡತನ ಅನುಭವಿಸಿದ್ದರು. ಇದು ಜಯಕಾಂತನ್‌ಗೆ ಗೊತ್ತು. ಹಾಗಾಗೇ ಅವರು ಸಾಹಿತ್ಯವನ್ನು ಕಮರ್ಷಿಯಲೈಸ್‌ ಮಾಡುವ, ಅದಕ್ಕೊಂದು ಮಾರ್ಕೆಟಿಂಗ್‌ ಸ್ಕಿಲ್‌ ಕಲಿಸಿಕೊಡುವ ಕೆಲಸಕ್ಕಿಳಿದಿದ್ದು. ಅದಕ್ಕವರು ಕಂಡುಕೊಂಡ ಒಂದು ಮಾರ್ಗ, ಸಿನಿಮಾ.

‘ಒರು ನಡಿಗೈ ನಾಡಗಂ ಪಾಕ್ಕಿರಾಳ್‌’(ಒಬ್ಬ ನಟಿ ನಾಟಕ ನೋಡುತ್ತಿದ್ದಾಳೆ) ಮತ್ತು ‘ ಉನೈಪೋಲ್‌ ಒರುವನ್‌’(ನಿನ್ನ ಥರದವನೇ ಒಬ್ಬ) ಎಂಬ ತಮ್ಮದೇ ಕೃತಿಗಳನ್ನಾ ಧರಿಸಿ ಅವರು ಸಿನೆಮಾ ಮಾಡಿದರು. ಎರಡೂ ಕೂಡ ದುಡ್ಡು ಮತ್ತು ಖ್ಯಾತಿ ತಂದುಕೊಟ್ಟವು. ಆದರೆ ಅದರಿಂದ ಅವರು ಮೈಮರೆಯಲಿಲ್ಲ. ಆ ಯಶಸ್ಸನ್ನೇ ಬೆನ್ನಿಗಿಟ್ಟುಕೊಂಡು, ತಮ್ಮ ಕೃತಿಗಳಿಗೊಂದು ಮಾರುಕಟ್ಟೆ ಮೌಲ್ಯ ಪಡೆದುಕೊಂಡರು. ಸಿನೆಮಾದ ಯಶಸ್ಸಿನ ನಂತರವೂ ಬರೆಯುತ್ತಲೇ ಹೋದರು. ನಮ್ಮಲ್ಲಿನ ಅನೇಕ ಜ್ಞಾನಪೀಠಿಗಳ ಹಾಗೆ ಆರಾಮ ಕುರ್ಚಿಯ ಚಿಂತಕನಾಗದೆ, ತಾವು ಕಂಡ ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ಕೃತಿಗಳಲ್ಲಿ ಮತ್ತು ತಾವು ನಡೆಸಿದ ಆಂದೋಲನಗಳಲ್ಲಿ ತಮ್ಮದೇ ರೀತಿಯ ಪರಿಹಾರಗಳನ್ನು ಹುಡುಕಿದರು. ದ್ರವಿಡಿಯನ್‌ ಮೂವ್‌ಮೆಂಟ್‌ ತನ್ನ ಪ್ರಸ್ತುತತೆ ಕಳೆದುಕೊಂಡಿರುವುದನ್ನು ಬಹುಬೇಗ ಗುರುತಿಸಿದರು. ದ್ರಾವಿಡ ಸಿದ್ಧಾಂತಗಳಿಗೆ ಜೋತು ಬಿದ್ದ ದ್ರವಿಡಿಯನ್‌ ಪಾರ್ಟಿಯ ರಾಜಕಾರಣಿಗಳಿಂದ ತಮಿಳುನಾಡಿನ ಉದ್ಧಾರ ಸಾಧ್ಯವಲ್ಲ ಎಂದು ಧೈರ್ಯವಾಗೇ ಹೇಳಿದರು.‘ನಮಗೆ ಬೇಕಿರುವುದು ಇಂಡಿಯನ್‌ ಪೊಲಿಟಿಕ್ಸ್‌ ; ದ್ರವಿಡಿಯನ್‌ ಪೊಲಿಟಿಕ್ಸ್‌ ಅಲ್ಲ’ ಅಂದರು. ತಮ್ಮನ್ನು ತಾವು ಕಾಂಗ್ರೆಸ್ಸಿನ ಜೊತೆ ಗುರುತಿಸಿಕೊಂಡರು. ಸಾಹಿತಿಯಾಬ್ಬ ಹೀಗೆ ಪಾರ್ಟಿಯಾಂದರ ಜೊತೆ ತಳಕು ಹಾಕಿಕೊಳ್ಳುವುದರಿಂದ ಅವನ ಕ್ರಿಯೇಟಿವಿಟಿ ಸಾಯುತ್ತದೆ ಅನ್ನುವ ನಂಬಿಕೆಯನ್ನು ಛಾಲೆಂಜ್‌ ಮಾಡಿದರು. ಈಗವರಿಗೆ ಜ್ಞಾನಪೀಠ ಸಿಕ್ಕಿರುವುದೂ ಅವರ ಕಾಂಗ್ರೆಸ್‌ ನಂಟಿನಿಂದಲೇ ಅಂತ ತಮಿಳುನಾಡಿನಲ್ಲಿ ಗುಲ್ಲೆದ್ದಿದೆಯಾದರೂ, ಅವರು ಜ್ಞಾನಪೀಠಕ್ಕೆ ಅರ್ಹರಲ್ಲ ಅಂತ ಯಾರೂ ಆಕ್ಷೇಪವೆತ್ತಿಲ್ಲ.

ಹಾಗೆ ನೋಡಿದರೆ, ಜ್ಞಾನಪೀಠವೂ ಸೇರಿದಂತೆ ನಮ್ಮ ನೆಲದ ಅನೇಕ ಪ್ರಶಸ್ತಿಗಳೆಲ್ಲಾ ರಾಜಕೀಯದ ದಾಳಗಳಾಗಿ ಯಾವುದೋ ಕಾಲವಾಗಿ ಹೋಗಿದೆ. ಪಕ್ಷ-ಸಿದ್ಧಾಂತಗಳ ಮತ್ತು ಓಲೈಸುವಿಕೆಗಳ ಆಧಾರದ ಅನೇಕ ಪ್ರಶಸ್ತಿಗಳು ಹಂಚಿಕೆಯಾಗಿಬಿಟ್ಟಿವೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ.

ಆದರೆ, ಆ ಹಿನ್ನೆಲೆಯಲ್ಲಿ ಜಯಕಾಂತನ್‌ರ ಜ್ಞಾನ ಪೀಠವನ್ನೂ ಸಂಶಯದಿಂದ ನೋಡುವ ಅಗತ್ಯವಿಲ್ಲ. ಎಲ್ಲಕ್ಕೂ ರಾಜಕೀಯದ ಬಣ್ಣ ಲೇಪ ಮಾಡುತ್ತಾ ಹೋದರೆ, ಪ್ರಶಸ್ತಿಗಳ ಮತ್ತು ಅವುಗಳನ್ನು ಪಡೆದವರ ಕ್ರೆಡಿಬಿಲಿಟಿ ಉಳಿಯುವುದಾದರೂ ಹೇಗೆ?

ಲಕ್ಷ್ಮಣ್‌ರಿಗೆ ಪದ್ಮವಿಭೂಷಣ ಬಂದಿದ್ದು ಎಷ್ಟು ಅರ್ಹ ಮತ್ತು ಸಂತೋಷದ ವಿಷಯವೋ, ಜಯಕಾಂತ್‌ಗೆ ಜ್ಞಾನಪೀಠ ಬಂದಿದ್ದೂ ಅಷ್ಟೇ ಯೋಗ್ಯ ಮತ್ತು ಖುಷಿಯ ಸಂಗತಿ. ತಮಿಳಿನವರಿಗೆ ಅಥವಾ ಕಾಂಗ್ರೆಸ್ಸಿನವರಿಗೆ ಬಂತು ಅಂತ ನಾವು ಕೊರಗುವ ಅಗತ್ಯವಿಲ್ಲ. ನಾವೀಗಾಗಲೇ ಏಳು ಜ್ಞಾನಪೀಠಗಳನ್ನು ಪಡೆದುಬಿಟ್ಟಿದ್ದೇವೆ. ಇನ್ನೊಂದಿಷ್ಟು due ಇದೆ. ಇವತ್ತಲ್ಲ ನಾಳೆ ನಾವು ತೇಜಸ್ವಿಯವರನ್ನೂ ಲಂಕೇಶರನ್ನೂ ಆ ಸಾಲಿನಲ್ಲಿ ನೋಡಬಹುದು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X