• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮಲ್ಲಿ ಪ್ರತಿ ನಿಮಿಷದ ರಾಕ್ಷಸ ಹಟ ಹುಟ್ಟೋದೇ ಹಾಗೇ!

By Staff
|
Ravi Belagere on Thatskannada.com ರವಿ ಬೆಳಗೆರೆ
ಒಂದು ಕೆಲಸ ಆರಂಭಿಸ್ತೀರಿ. ಅದನ್ನ ಅರ್ಧಕ್ಕೆ ಬಿಟ್ಟು ಇನ್ನೊಂದಕ್ಕೆ ಹೊರಡ್ತೀರಿ. ನಿನ್ನೆ ಸಂಜೆ ತನಕ ನಿಮಗೆ ಗಿಟಾರು ಅಂದ್ರೆ ಪಂಚಪ್ರಾಣ. ಇವತ್ತು ಮೊಬೈಲ್‌ ರಿಪೇರಿ ಮಾಡುವುದನ್ನು ಕಲಿಯೋದು ಬಿಟ್ರೆ ಬೇರೆ ಜೀವನವೇ ಇಲ್ಲವೇನೋ ಎಂಬಂತೆ ಕನ್ನಡಕ ಹಾಕ್ಕೊಂಡು ಕೂತಿದೀರಿ. ಅದನ್ನ ಕೊಳ್ಳದೇ ಇದ್ರೆ ನಿಮ್ಮ ‘ಜೀವನವೇ ವೇಷ್ಟು’ ಎಂಬಷ್ಟು ಅವಸರಕ್ಕೆ ಬಿದ್ದು ಒಂದು ಕಂಪ್ಯೂಟರ್‌ ಕೊಂಡುಕೊಂಡ್ರಿ. ಅದರ ಮೇಲಿನ ಧೂಳಲ್ಲಿ ಇವತ್ತು ಇಡೀ ಮನೆಗೆ ರಂಗೋಲಿ ಹಾಕಬಹುದು. ಹೋದ ಜನವರಿ ಫಸ್ಟಿಗೆ ‘ಐ.ಎ.ಎಸ್‌. ಆಫೀಸರಾಗ್ತೀನಿ’ ಅಂತ ಶಪಥ ಮಾಡಿ ಹತ್ತು ವರ್ಷದ ಕಾಂಪಿಟಿಷನ್‌ ಸಕ್ಸಸ್‌ ಮ್ಯಾಗರಿkುೕನ್‌ ಕಲೆಕ್ಟ್‌ ಮಾಡಿದ್ರಿ. ಈ ವರ್ಷ ನಿಮ್ಮ ಪ್ರಯಾರಿಟಿಗಳ ಪಟ್ಟಿಯಲ್ಲಿ ‘ಷೇರು ಮಾರ್ಕೆಟ್‌ನಲ್ಲಿ ಕೋಟಿಗಟ್ಲೆ ದುಡ್ಡು ಮಾಡೋದು ಹೇಗೆ’ ಅನ್ನೋದು ಮೊದಲ ಮೆಟ್ಟಿಲ ಮೇಲಿದೆ. ಮೊನ್ನೆ ಮೊನ್ನೆ ತನಕ ‘ನಂಗೆ ಹಿಂದಿನ ಬೀದಿ ಗೋವಿಂದು ಇಷ್ಟ ಕಣೇ...’ ಅಂತಿದ್ರಿ. ಇವತ್ತು ಆಚೆ ಬೀದಿಯ ಇರ್ಫಾನ್‌ ಇಷ್ಟ ಆಗ್ತಾನೆ. ರೂಂ ಕ್ಲೀನ್‌ ಮಾಡ್ಕೋತೀನಿ ಅಂತ ಹೊರಡ್ತೀರಿ; ಕಿಟಕಿ ಒರೆಸುವುದರೊಳಗಾಗಿ ಆಸಕ್ತಿ ಹೋಗಿಬಿಡುತ್ತದೆ. ಗಾಡಿ ತೊಳೆಯೋಕೆ ಅಂತ ಹೊರಟವರು ಡಿಕ್ಕಿಯಲ್ಲಿ ಎಂದೋ ಇಟ್ಟು ಮರೆತ ಮ್ಯಾಗರಿkುೕನು ಓದುತ್ತ ಕುಳಿತುಬಿಡುತ್ತೀರಿ. ಎಷ್ಟೋ ಸಲ ನಿಮ್ಮದು ಆರಂಭ ಶೂರತ್ವ ಅಂತ ನಿಮಗೇ ಅನಿಸಿಬಿಡುತ್ತದೆ. ಯಾಕೆ ಹೀಗೆ?

ಥಾಮಸ್‌ ಆಲ್ವ ಎಡಿಸನ್‌ಗೆ ಬಲ್ಪಿನಲ್ಲಿ ಬೆಳಕು ಕಂಡು ಹಿಡಿಯೋದೇ ಜೀವನದ ಅತಿದೊಡ್ಡ ಗುರಿಯಾಗಿತ್ತು. ಗಾಂಧೀಜಿಗೆ ಸ್ವಾತಂತ್ರ, ನೆಹರೂಗೆ ಪ್ರಧಾನ ಮಂತ್ರಿ ಪದವಿ, ಉಮಾ ಭಾರತಿಗೆ ಬಾಬರಿ ಮಸೀದಿ, ದೇವೇಗೌಡರಿಗೆ ಅವರ ಮಗ ರೇವಣ್ಣ, ಅಬ್ದುಲ್‌ ಕಲಾಮ್‌ಗೆ ಅಣುಬಾಂಬ್‌, ಉಷಾಗೆ ಒಲಿಂಪಿಕ್ಸು-ಹೀಗೆ ಅವರಿಗೆಲ್ಲ ಜೀವನದಲ್ಲಿ ಒಂದು ಮಹತ್ತರವಾದ ಗುರಿ ಇತ್ತು. ಅದಕ್ಕೋಸ್ಕರ ಬದುಕಿದರು, ದುಡಿದರು, ಬಡಿದಾಡಿದರು, ಸಾಧಿಸಿದರು.

ನಮಗೇನಿದೆ? ‘ಜೀವನದಲ್ಲಿ ಒಂದು ಗುರಿ ಅಂತ ಇಟ್ಕೋಬೇಕು ಕಣಯ್ಯ’ ಅಂತ ವಯಸ್ಸಾದವರು ಕಿರಿಯರಿಗೆ ಆಡ್ವೈಸ್‌ ಮಾಡುತ್ತಿರುತ್ತಾರೆ.

‘ನಿಮ್ಮ ಗುರಿ ಏನಿತ್ತು ಮತ್ತು ಅದನ್ನ ತಲುಪಿದ್ದೀರಾ? ಅಂತ ಅವರನ್ನು ಕೇಳಿ ನೋಡಿ’

‘ಹೇಳಿದಷ್ಟು ಕೇಳು... ತಲಹರಟೇನ್ತಂದೂ...’ ಅಂತ ರೇಗುತ್ತಾರೆ.

Target achievements and battle for Battleಬದುಕೇ ಹಾಗೆ. ಇಲ್ಲಿ ಸಲಹೆಯಷ್ಟು ಸುಲಭವಾದ್ದು ಮತ್ತೊಂದಿಲ್ಲ. ಆದರೆ ಬದುಕಿನ ಶ್ರೇಷ್ಠ ಗುರಿಗಳನ್ನು ತಲುಪಿದವರನ್ನ ಕೇಳಿ ನೋಡಿ. ಅವರು ಅಡ್ವೆ ೖಸ್‌ ಮಾಡುವುದೂ ಇಲ್ಲ, ಇನ್ನೊಬ್ಬರಿಂದ ಹೆಚ್ಚಾಗಿ ಅಡ್ವೆ ೖಸ್‌ ಪಡೆದಿರುವುದೂ ಇಲ್ಲ. ಅವರ ಪಾಡಿಗವರು ಒಂದು ಗಮ್ಯವನ್ನಿಟ್ಟುಕೊಂಡು ದುಡಿದಿರುತ್ತಾರೆ, ಬೆಳೆದಿರುತ್ತಾರೆ, ಗುರಿತಲುಪುವ ಬದಲು ಒಂದು ಹೆಗ್ಗುರುತನ್ನು ಸೃಷ್ಟಿಸಿ ಈ ಜಗತ್ತಿಗೆ ಬಿಟ್ಟು ಹೋಗಿರುತ್ತಾರೆ.

ಆದರೆ ಅಂಥವರು ಎಷ್ಟು ಜನ ಇದ್ದಾರೆ ಹೇಳಿ ಈ ಜಗತ್ತಿನಲ್ಲಿ ?ನಾವು ಯೋಚನೆ ಮಾಡಬೇಕಾದದ್ದು ಅವರ ಬಗ್ಗೆ ಅಲ್ಲ. ನಾವು ಯೋಚಿಸಬೇಕಾದದ್ದು ನನ್ನಂಥ, ನಿಮ್ಮಂಥ, ನಮ್ಮ ತಂಗಿಯಂಥ, ನಮ್ಮ ಮಕ್ಕಳಂಥ ಸಾಮಾನ್ಯರ ಬಗ್ಗೆ. ನನ್ನ ಜರ್ನಲಿಸ್ಟ್‌ ಮಗಳಿಗೆ‘ನೀನು ಬರಖಾ ದತ್‌ ಥರ ದೊಡ್ಡ ಪತ್ರಕರ್ತೆಯಾಗಬೇಕಮ್ಮಾ’ ಅಂತ ಸಲಹೆ ಕೊಡುವುದು ಸುಲಭ. ಅಂಥದ್ದೊಂದು ಗುರಿ ಅಥವಾ ಗಮ್ಯ set ಮಾಡಿಕೊಟ್ಟುಬಿಡುವುದೂ ಸುಲಭ. ಆದರೆ ಅವಳಿಗದು ಇಷ್ಟವಾ? ಇಷ್ಟವಿದ್ದರೂ, ಅವಳಿಂದ ಅದು ಸಾಧ್ಯವಾ? ಅದನ್ನು ಅವಳೇ ಯೋಚಿಸಿ ತೀರ್ಮಾನಿಸಬೇಕು.

ಸಾಮಾನ್ಯವಾಗಿ ನಾವೆಲ್ಲ ಮಾಡುವ ಅತಿದೊಡ್ಡ ಪೊರಪಾಟೆಂದರೆ, ನಮ್ಮ ಯೋಗ್ಯತೆ, ತಾಕತ್ತು, ಶ್ರದ್ಧೆ-ಎಲ್ಲವನ್ನೂ over estimate ಮಾಡಿ ಒಂದು ಗುರಿ ಆಯ್ದುಕೊಂಡುಬಿಡುತ್ತೇವೆ. ಸರಿಯಾಗಿ ದಿನಕ್ಕೆರಡು ನ್ಯೂಸ್‌ ಪೇಪರ್‌ ಓದುವ ಸಹನೆ ಇರುವುದಿಲ್ಲ, ಐಎಎಸ್‌ ಬರೆಯಲು ತಯಾರಾಗಿಬಿಡುತ್ತೇವೆ. ನಮ್ಮ ನಿಲುಕಿಗಿಲ್ಲದ ಅಂಥ ಗುರಿಗಳನ್ನು ಇಟ್ಟುಕೊಂಡಾಗ ಸಹಜವಾಗಿಯೇ ನಮಗೆ ಆರಂಭದಲ್ಲಿಯೇ ಇದು ನಂಗೆ ಹೇಳಿ ಮಾಡಿಸಿದ್ದಲ್ಲ ಎಂಬುದು ಗೊತ್ತಾಗಿ ಬಿಡುತ್ತದೆ. ನಮ್ಮ ನಿರ್ಧಾರಕ್ಕೆ ಸಂಬಂಧವೇ ಇಲ್ಲದಂತೆ ನಾವು ಅದರಲ್ಲಿ ಆಸಕ್ತಿ ಕಳೆದುಕೊಂಡುಬಿಡುತ್ತೇವೆ. ಕಂಪ್ಯೂಟರ್‌ ನಮ್ಮದಲ್ಲ, ಗಿಟಾರು ನಮಗೆ ಹೇಳಿಮಾಡಿಸಿದ್ದಲ್ಲ, ಹಿಂದಿನ ಬೀದಿ ಗೋವಿಂದು not worth, ರೂಮು ಕ್ಲೀನ್‌ ಮಾಡೋದಕ್ಕೆ ಕೆಲಸದವಳೇ ಸರಿ, ನಮಗೆ ಮೊಬೈಲ್‌ ರಿಪೇರಿ ಕಲಿತು ಏನಾಗಬೇಕಿದೆ- ಹೀಗೆ ನಮಗೇನೇ ನಮ್ಮ ಆಯ್ಕೆಗಳ ಬಗ್ಗೆ ಆಸ್ಥೆ ಹೊರಟುಹೋಗಿ ನಮ್ಮದು ಆರಂಭ ಶೂರತ್ವವಾಗಿ ಬಿಡುತ್ತದೆ.

ಇದರಿಂದ ತಪ್ಪಿಸಿಕೊಳ್ಳಲಿಕ್ಕೆ ಎರಡು ದಾರಿಗಳಿವೆ. ಮೊದಲನೆಯದು, ಗುರಿ ಅಂತ ಆರಿಸಿಕೊಳ್ಳುವಾಗ ಅದನ್ನು ತಲುಪುವ ಯೋಗ್ಯತೆ, ಅದಕ್ಕಾಗಿ ಶ್ರಮಿಸುವ ಸಹನೆ, ತಾಕತ್ತು ನಮಗೆ ಇದೆಯಾ ಅಂತ ಚೆಕ್‌ ಮಾಡಿಕೊಳ್ಳಬೇಕು. ಅದರ ಬಗ್ಗೆ ಕೊಂಚ ಅನುಮಾನ ಬಂದರೂ, ಆ ಗುರಿ ಎಷ್ಟೇ attractive ಆಗಿರಲಿ, ಅದನ್ನು ಬಿಟ್ಟುಬಿಡಬೇಕು. ಎರಡನೆಯದು, ಹಾಗೆ ನಮ್ಮ ಗುರಿಗಳನ್ನು(ಗುರುಗಳನ್ನೂ!)ನಮಗೆ ಬೇಕಾದಾಗ ಬಿಟ್ಟಾಕಿ ಬೇರೆ ಆಯ್ಕೆ ಮಾಡಿ ಕೊಳ್ಳಲು ಹಿಂಜರಿಯಬಾರದು! ‘ಇದು ಇವತ್ತಲ್ಲ ನಾಳೆ ಬಿಟ್ಟಾಕೋ ಗುರಿಯೇ’ ಅಂತ ತೀರ್ಮಾನಿಸಿಕೊಂಡು, ನಮ್ಮ ಎದುರಿನಲ್ಲಿ ನಮಗೇ ಆಗುವ ಮುಖಭಂಗವನ್ನು ಒಪ್ಪಿಕೊಂಡು ‘ನಾನು ಸ್ವಲ್ಪ ಹಾಗೇ ಕಣ್ರೀ...’ ಅಂತ ನಾವೇ accept ಮಾಡಿಕೊಂಡು ಹೊಸದೇನನ್ನಾದರೂ ಮಾಡಲು ಹೊರಡಬೇಕು. ನಿಮಗೆ ಗೊತ್ತಿರಲಿ; ಪದೇಪದೇ ಆಸಕ್ತಿ, ಗುರುವು, ಗುರಿ, ಅಭಿರುಚಿ ಬದಲಿಸುವುದು ಕೂಡ ಕ್ರಿಯಾಶೀಲತೆಯ ಲಕ್ಷಣವೇ! ನಾನದನ್ನು ಮೂವತ್ತಾರು ವರ್ಷ ಮಾಡಿದ್ದೇನೆ. ಈಗಲೂ ತಲೆಯ ಮೇಲಿನ ಬುತ್ತಿಯನ್ನು ನನ್ನೊಳಗಿನ ಚಾಂಚಲ್ಯವೆಂಬ bull dog ಕೊಡವುತ್ತಲೇ ಇರುತ್ತದೆ. ಒಂದಲ್ಲ ಹತ್ತು ಪ್ರಯತ್ನಗಳನ್ನು ಮಾಡಿ ಕಡೆಗೊಂದು ವೃತ್ತಿಗೆ, ಗಮ್ಯಕ್ಕೆ, ಗುರಿಗೆ ಗಂಟು ಬೀಳುವುದು ಸಹಜ ಮತ್ತು ಸರಿ ಕೂಡ.

ನಿಮಗೆ ಕೊಂಚ odd ಅನ್ನಿಸಿದರೂ ಸರಿಯೇ, ಒಂದು ಮಾತು ಹೇಳ್ತೀನಿ ಕೇಳಿ. ಇವತ್ತಿನ ಗುರಿಗಳನ್ನ ಇವತ್ತೇ ಬೆಳಗ್ಗೆ ಎದ್ದು set ಮಾಡಿಕೊಳ್ಳಿ. ಇವತ್ತು ಏನೇನು ಕೆಲಸ ಮಾಡಬೇಕು ಅಂತ ಒಂದು ಪಟ್ಟಿ ಮಾಡಿಕೊಂಡು ತುಂಬ ಅಗ್ರೆಸಿವ್‌ ಆಗಿ, ಶುದ್ಧ killer instinct ಇಟ್ಟುಕೊಂಡು, ಈ ಪುಟ್ಟ battle ಗೆದ್ದೇ ಗೆಲ್ತೀನಿ ಅಂತ ರಾಕ್ಷಸನ ಹಾಗೆ ಹೊರಡಿ. ಇವತ್ತಿನ ಯುದ್ಧಕ್ಕೆ, ದುಡಿತಕ್ಕೆ, ಶ್ರಮಕ್ಕೆ ಇವತ್ತು ಬೆಳಗ್ಗೆ ನೀವು ಕೈಗೊಂಡ ನಿರ್ಧಾರ, set ಮಾಡಿಕೊಂಡ ಗುರಿ ಸಾಕು. ನಾಳೆ ಏನು ಮಾಡಬೇಕು, ಹತ್ತು ವರ್ಷದ ನಂತರ ನೀವು ಏನಾಗಿರಬೇಕು ಅನ್ನೋದಿದೆಯಲ್ಲ ? ಅದು ನಿಮ್ಮ ಇವತ್ತಿನ ಅಷ್ಟೂ ಕೆಲಸಗಳ ಮಧ್ಯೆ ಕೇವಲ 15 ನಿಮಿಷ spare ಮಾಡಿ ಯೋಚಿಸಬೇಕಾದ ವಿಷಯವೇ ಹೊರತು, ಅದೇ ನಿಮ್ಮ ಇಡೀ ದಿನದ ಚಟುವಟಿಕೆಯಾಗಿಬಿಡಬಾರದು. ಎಷ್ಟೋ ಸಲ ಬೃಹತ್ತಾದ ಗುರಿಗಳ ನೆಪದಲ್ಲಿ ನಾನು ಇವತ್ತಿನ ಕೈಂಕರ್ಯಗಳನ್ನು ಮರೆಯುತ್ತಿರುತ್ತೇವೆ. ನಮ್ಮ ಕಳ್ಳಬೀಳುವ ಮನಸು ಇವತ್ತಿನ ಸವಾಲುಗಳಿಂದ ತಪ್ಪಿಸಿಕೊಳ್ಳಲು ಐ.ಎ.ಎಸ್‌ನ ನೆಪ ಹುಡುಕುತ್ತಿರುತ್ತದೆ. ನಿಮ್ಮನ್ನು ನಾನು ವಿಮುಖರನ್ನಾಗಿ ಮಾಡುತ್ತಿದ್ದೇನೆ, ಉನ್ನತ ಗುರಿಗಳಿಂದ ದಿಕ್ಕು ತಪ್ಪಿಸುತ್ತಿದ್ದೇನೆ ಅಂತ ದಯವಿಟ್ಟು ಅಂದುಕೊಳ್ಳಬೇಡಿ. ನಮ್ಮ ಬದುಕಿನ ಸಾವಿರಾರು, ಲಕ್ಷಾಂತರ ಚಿಕ್ಕಚಿಕ್ಕ ಗೆಲುವುಗಳು, ವಿಜಯಗಳು, ಸಾಧನೆಗಳು ಸೇರಿಕೊಂಡೇ ಒಂದು ultimate ಗಮ್ಯವನ್ನು ತಲುಪುವುದಕ್ಕೆ ನಮಗೆ ಸಹಾಯ ಮಾಡಿರುತ್ತವೆ. ಇವತ್ತು ಮನೆಮಂದಿಗೆಲ್ಲ ಅದ್ಭುತವಾದ ಹೋಳಿಗೆ ಮಾಡಿ ಬಡಿಸುತ್ತೇನೆ ಅಂತ ಹೊರಡುವ ತಾಯಿ ಎಲೆಯಂಚಿಗೆ ಕೋಸಂಬರಿ ಮಾಡಿ ಬಡಿಸುವುದನ್ನ ಮರೆತಿರುವುದಿಲ್ಲ. ಬೃಹತ್ತಾದ ಡ್ಯಾಮು ಕಟ್ಟಿದ ಕಂಟ್ರ್ಯಾಕ್ಟರ್‌ ಒಬ್ಬ ಎಷ್ಟೋ ವರ್ಷಗಳ ಹಿಂದೆ ಸೀಮೆಂಟು ಕಲೆಸಿದ ಗಂಡಾಳಾಗಿರುತ್ತಾನೆ. ಹತ್ತು ವಿಲಕ್ಷಣ ಪ್ರೊಫೆಷನ್ನುಗಳ ಅಂತ್ಯದಲ್ಲಿ ನನ್ನ ಕೈಗೆ ಸಿಕ್ಕದ್ದು ಪತ್ರಿಕೋದ್ಯಮ. ನಾನು ಟೀವಿ ಅಂದ್ರೇನು ಅಂತ ಅರ್ಥಮಾಡಿಕೊಳ್ಳಲು ಆರಂಭಿಸಿದ್ದು ಈಗೊಂದು ವರ್ಷದ ಕೆಳಗೆ!

ಹತ್ತು ವರ್ಷದ ಹಿಂದೆ ಎರಡು ಅಂಗೈಯಗಲದಷ್ಟು ಒಂದು ತಗಡಿನ ಮೇಲೆ ‘ಹಾಯ್‌ಬೆಂಗಳೂರು ಓದಿರಿ!’ ಅಂತ ಬರೆಸಿ ಬನಶಂಕರಿಯ ಮರಗಳ ಮುಂದೆ ಬೈಕು ನಿಲ್ಲಿಸಿ, ಅದರ ಮೇಲೆ ಹತ್ತಿ ನಾನೇ ಮರಕ್ಕೆ ತಗಡನ್ನು ಮೊಳೆಯಿಟ್ಟು ಹೊಡೆದದ್ದು ನೆನಪಿದೆ. ಹತ್ತು ವರ್ಷದ ನಂತರ, ಇವತ್ತು ಒಂದು ಫೋನು ಮಾಡಿದರೆ ಕುಳಿತಲ್ಲೇ ಕೆಲಸ ಆಗಿಬಿಡುತ್ತದೆ. ಆದರೆ ನಿನ್ನೆ ಸರಹೊತ್ತಿನಲ್ಲಿ ಎದ್ದು ಹೋಗಿ ನಮ್ಮ ಹೊಸ ಕಚೇರಿಯ ಮೇಲೆ ‘ಓ ಮನಸೇ’ ಬೋರ್ಡ್‌ ಸರಿಯಾಗಿ ಕಟ್ಟಿದ್ದಾರೋ ಇಲ್ಲವೋ ಅಂತ ಖುದ್ದಾಗಿ ನೋಡಿ ಬಂದೆ. ದಾರಿಯಲ್ಲಿ ಯಾರಾದರೂ ನಿಲ್ಲಿಸಿ‘ನಿನ್ನ ಜೀವನದ ಅತಿ ದೊಡ್ಡ ಗುರಿಯೇನು?’ ಅಂತ ಕೇಳಿದ್ದಿದ್ದರೆ, ‘ಈಗ ಹೋಗಿ ಕುಳಿತು ಬಾಕಿಯಿರುವುದಷ್ಟನ್ನೂ ಬರೆದು ಮುಗಿಸಿ ಕಣ್ತುಂಬ ನಿದ್ದೆ ಮಾಡಬೇಕು’ ಅಂತ ಉತ್ತರಿಸುತ್ತಿದ್ದೆ. ನನ್ನಲ್ಲಿ ಪ್ರತಿ ನಿಮಿಷದ ರಾಕ್ಷಸ ಹಟ ಹುಟ್ಟೋದೇ ಹಾಗೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more