ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದೆಯಿಂದ ಎದೆಗೆ ಹರಿದ ಅಮೃತವಾಹಿನಿಯಲ್ಲಿ ಕನ್ನಡವೇ ಸತ್ಯ!

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಕನ್ನಡ ಉಳಿಯುವುದು ಮತ್ತು ಬೆಳೆಯುವುದು ಇಂಥ ಕೆಲಸಗಳಿಂದಲೇ ಹೊರತು, ವಾಟಾಳ್‌ರ ಚಳವಳಿಗಳಿಂದಲ್ಲ!

ಅಶ್ವಥ್‌ರಿಗೊಂದು ಭರ್ಜರಿ ಥ್ಯಾಂಕ್ಸ್‌ ಹೇಳಲೇಬೇಕು. ಹಾಗೇ, ಗ್ಲೋಬಲ್‌ ಕನ್ಸಲ್ಟೆಂಟ್ಸ್‌ ಎಂಬ ಕಂಪನಿಯವರಿಗೆ ಮತ್ತು ಈ ಟೀವಿಯವರಿಗೂ ಕೂಡ.

ಮೊನ್ನೆ ಅಶ್ವಥ್‌ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಿಕೊಟ್ಟರಲ್ಲ ‘ಕನ್ನಡವೇ ಸತ್ಯ’ ಅನ್ನುವ ಭಾವಗೀತೆ ಔತಣಕೂಟ, ಅದು ಒಂದೇ ಬೀಸಿನಲ್ಲಿ ಅತಿದೊಡ್ಡ mythಗಳನ್ನು ಬಡಿದುಹಾಕಿತು. ಅರಮನೆ ಮೈದಾನ ತುಂಬಬೇಕಿದ್ದರೆ, ಹಾಕಿದ ದುಡ್ಡು ಗಿಟ್ಟಬೇಕಿದ್ದರೆ, ಬ್ರಿಯಾನ್‌ ಆ್ಯಡಮ್ಸ್‌-ಅಪಾಚೆ ಇಂಡಿಯನ್‌ ಅಥವಾ ಅಮಿತಾಭ್‌-ಶಾರುಖ್‌ರಂಥವರ ಕಾರ್ಯಕ್ರಮವನ್ನೇ ನಡೆಸಬೇಕು ಅನ್ನುವ ಒಂದು ಭ್ರಮೆ ನಮ್ಮಲ್ಲಿತ್ತು. ಕನ್ನಡದ ಸಂಗೀತಕ್ಕೆ ಯಾರು ತಾನೇ ಬಂದಾರು? ಇನ್ನೂ ಅಷ್ಟೊಂದು ವಾನಪ್ರಸ್ಥದ ಸ್ಥಿತಿಯನ್ನು ಬೆಂಗಳೂರು ತಲುಪಿಲ್ಲ ಅನ್ನುವ ಲೇವಡಿಯಿತ್ತು. ಜೊತೆಗೆ, ಕನ್ನಡದ ಕಾರ್ಯಕ್ರಮಕ್ಕೆ ಜನ ಸೇರಬೇಕೆಂದರೆ ರಾಜ್‌ಕುಮಾರ್‌ ಬರಲೇಬೇಕು ಅನ್ನುವ ನಂಬಿಕೆಯೂ ಇತ್ತು.

C.Aswathಇವೆಲ್ಲವನ್ನೂ ‘ಕನ್ನಡವೇ ಸತ್ಯ’ ಒಂದೇ ರಾತ್ರಿಯಲ್ಲಿ ಸುಳ್ಳು ಮಾಡಿ ಹಾಕಿದೆ. ಅವತ್ತು ಸಂಜೆ ಅಲ್ಲಿ ಸೇರಿದ್ದು ಹತ್ತಿರ ಹತ್ತಿರ ಒಂದು ಲಕ್ಷ ಜನ! ಅದೂ ಯಾವುದೇ ಸಿನಿಮಾ ಸ್ಟಾರುಗಳಿಲ್ಲದ ಒಂದು ಭಾವಗೀತೆಯ ಆರ್ಕೆಸ್ಟ್ರಾಕ್ಕೆ! ಮಾರನೆಯ ದಿನವೇ ಚಿನ್ನಸ್ವಾಮಿ ಸ್ಟೇಡಿಯಮ್ಮಿನಲ್ಲಿ ನಡೆದ ಶಾರುಖ್‌-ರಾಣಿ ಮುಖರ್ಜಿ ಮುಂತಾದವರ ಟೆಂಪ್ಟೇಷನ್‌ ಸಂಗೀತ ಸಂಜೆಗೆ ಸೇರಿದ್ದು ಬರೀ ನಲವತ್ತು ಸಾವಿರ ಜನ. ಬ್ರಿಯಾನ್‌ ಆ್ಯಡಮ್ಸ್‌ ಬಂದಾಗ ಇದ್ದಿದ್ದು ಇಪ್ಪತ್ತೂ ಚಿಲ್ಲರೆ ಸಾವಿರ ಜನ.ಕನ್ನಡ ಗೆದ್ದಿದೆ. ಅದಕ್ಕಾಗಿ ನಾವು ಅಶ್ವಥ್‌ರಿಗೆ ಋಣಿಯಾಗಿರಬೇಕು. ಸ್ಟಾರ್‌ ಎನ್ನುವ ಪದಕ್ಕೆ ಜಗತ್ತು ಕೊಟ್ಟಿರುವ ಡೆಫನಿಷನ್‌ ಪ್ರಕಾರ ಅಶ್ವಥ್‌ ಒಬ್ಬ ಸ್ಟಾರಲ್ಲ. ಅವರು ಯಾರಿಗೂ ಸುಲಭವಾಗಿ ಸಿಗದಂತೆ ಯಾವುದೋ ದಂತಗೋಪುರದಲ್ಲಿ ಬದುಕುತ್ತಿಲ್ಲ. ಗಿಜಿಗಿಜಿಗುಡುವ ತ್ಯಾಗರಾಜನಗರ ಮುಖ್ಯರಸ್ತೆಯಲ್ಲಿ ಅವರದ್ದೊಂದು ಮನೆಯಿದೆ. ಸಾಧಾರಣದಲ್ಲಿ ಸಾಧಾರಣವೆನ್ನಿಸುವ ಮಿಡ್ಲ್‌ಕ್ಲಾಸ್‌ ಮನೆ ಅದು. ಮನೆಗೊಂದು ಗೇಟು ಇದೆ ಅನ್ನುವುದನ್ನು ಬಿಟ್ಟರೆ, ಒಬ್ಬ ಸ್ಟಾರ್‌ಗಿರಬಹುದಾದಂಥ-ಇರಲೇಬೇಕಾದಂಥ ಯಾವುದೇ ಸೆಕ್ಯುರಿಟಿ ಇಲ್ಲ. ಮನೆಯ ಬೆಲ್‌ ಮಾಡಬೇಕೆಂದರೆ ತಡೆಯುವವರಿಲ್ಲ. ಬದಲಿಗೆ, ತುಂಬು ನಗುಮುಖ ಹೊತ್ತ ಅವರ ಪತ್ನಿ ಬನ್ನಿ ಬನ್ನಿ ಅಂತ ಆದರದಿಂದ ಒಳಕ್ಕೆ ಕರೆಯುತ್ತಾರೆ. ಕಾಫಿಕೊಟ್ಟು ಉಪಚರಿಸುತ್ತಾರೆ. ಬಿಳಿಪಂಚೆ ಉಟ್ಟುಕೊಂಡು, ಯಾವುದೋ ಅಡ್ಡಾದಿಡ್ಡಿ ಬಣ್ಣದ ಜುಬ್ಬಾ ತೊಟ್ಟ ಅಶ್ವಥ್‌ ನಮ್ಮ-ನಿಮ್ಮ ಮನೆಯ ಹಿರಿಯಣ್ಣನಂತೆಯೇ ಪಕ್ಕದಲ್ಲಿ ಬಂದು ಕೂತು ಆತ್ಮೀಯವಾಗಿ ಹರಟೆಗಿಳಿಯುತ್ತಾರೆ. ಇಂಥ ಒಬ್ಬ ಸರ್ವೇಸಾಧಾರಣ ಅನ್ನಿಸುವಂಥ ಒಬ್ಬ ಮನುಷ್ಯನನ್ನು ನೋಡುವುದಕ್ಕೆ, ಆತನ ಮಾತು-ಹಾಡು ಕೇಳುವುದಕ್ಕೆ, ಆತನ ಸಂಗೀತವನ್ನು ಸವಿಯುವುದಕ್ಕೆ ಅವತ್ತು ತೀರಾ ಒಂದು ಲಕ್ಷ ಜನ ಬಂದಿದ್ದಿದೆಯಲ್ಲಾ ಅದು ನಮ್ಮ ಎದೆಯುಬ್ಬಿಸುವ ಸಂಗತಿ. ಯಾಕಂದರೆ ಅಶ್ವಥ್‌ ಬರೀ ಅಶ್ವಥ್‌ ಅಲ್ಲ ; ಕನ್ನಡ ಕಲೆಯ, ಕನ್ನಡ ಸಂಸ್ಕೃತಿಯ, ಒಬ್ಬ ಬಹುಮುಖ್ಯ ಪ್ರತಿನಿಧಿ. ಅವರಿಗೆ ಸಿಕ್ಕ ಗೌರವ-ಪ್ರೀತಿ, ಕನ್ನಡಕ್ಕೇ ಸಿಕ್ಕಿದ್ದು. ಅಥವಾ ಹಾಗನ್ನಿಸುವ ಮಟ್ಟಕ್ಕೆ ಅಶ್ವಥ್‌ ನಮ್ಮೊಳಗೊಬ್ಬರಾಗಿಬಿಟ್ಟಿದ್ದಾರೆ, ನಮ್ಮ ಬದುಕಿನ ಭಾಗವಾಗಿಬಿಟ್ಟಿದ್ದಾರೆ.ನೀವು ಈ ದೇಶದ ಬೇರಾವುದೇ ರಾಜ್ಯಕ್ಕೆ ಬೇಕಿದ್ದರೂ ಹೋಗಿ ನೋಡಿ ; ಅಲ್ಲೆಲ್ಲೂ ನಿಮಗೆ ಭಾವಗೀತೆ ಅನ್ನುವಂಥ ಒಂದು ಪ್ರಕಾರ ಸಿಕ್ಕುವುದೇ ಇಲ್ಲ. ಎಲ್ಲ ಕಡೆಯೂ ವಿಶಿಷ್ಟವಾದ ಜನಪದ ಸಂಗೀತವಿದೆ, ಗಝಲ್‌ಗಳಿವೆ, ಠುಮ್ರಿಗಳಿವೆ, ಭಜನ್‌ಗಳಿವೆ ; ಆದರೆ ಕವಿಗಳ ಎದೆಯಾಳದಿಂದ ಬಂದ ಹಾಡಾದ ಭಾವಗೀತೆಗಳಿಲ್ಲ.

ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಈ ಟೀವಿಯಲ್ಲೀನ ತಮ್ಮ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಈ ಅಂಶವನ್ನು ಪ್ರಸ್ತಾಪಿಸುತ್ತಾರೆ, ಕನ್ನಡದ ಈ ವಿಶಿಷ್ಟ ಸಂಗೀತದ ಬಗ್ಗೆ ಹೆಮ್ಮೆ ಸೂಚಿಸುತ್ತಾರೆ. ಯಾಕೆಂದರೆ, ಭಾವಗೀತೆ- ಅಥವಾ ಇನ್ನೂ ವಿಶಾಲ ಅರ್ಥದಲ್ಲಿ ಹೇಳುವುದಾದರೆ ಸುಗಮ ಸಂಗೀತ-ನಮ್ಮ ರಾಜ್ಯದಲ್ಲಿ ಸಿನೆಮಾ ಸಂಗೀತದಷ್ಟೇ ಜನಪ್ರಿಯ. ಅಥವಾ ಹೊಸ ಸಿನೆಮಾ ಸಂಗೀತದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡಾಗ ಸಿನೆಮಾ ಗೀತೆಗಳಿಗಿಂತಲೂ ಜನಪ್ರಿಯ ಅಂತ ಧಾರಾಳವಾಗಿ ಹೇಳಬಹುದು!

ಸುಗಮ ಸಂಗೀತದ ಈ ರೆವಲ್ಯೂಷನ್ನನ್ನ ಮೊದಲು ಶುರುಮಾಡಿದ್ದು, ಬಹುಶಃ ಪಿ.ಕಾಳಿಂಗರಾಯರೇ. ಮೈ ಝುಮ್ಮೆನ್ನಿಸುವ ಕಂಠ ಅವರದ್ದು. ರೇಡಿಯೋ ಅನ್ನುವುದೂ ಲಕ್ಷುರಿಯಾಗಿದ್ದ ದಿನಗಳಲ್ಲಿ ಅವರು ತಾವೇ ಊರಿಂದೂರಿಗೆ ಹೋಗಿ, ಮನೆಯ ಅಂಗಳಗಳಲ್ಲೇ ಕಛೇರಿ ನಡೆಸಿ, ನೆರೆದ ನಲವತ್ತೆೈವತ್ತು ಜನರಿಗೇ ಮನಃಪೂರ್ತಿಯಾಗಿ ಸಂಗೀತದ ಸವಿ ಉಣಿಸುತ್ತಿದ್ದರು. ಮನೆಮನೆಗೆ ಹೋಗಿ ಕನ್ನಡದ ಸತ್ಯವನ್ನು ಬಿತ್ತುತ್ತಿದ್ದರು.

ಕಾಳಿಂಗರಾಯರ ಕೆಲಸವನ್ನು ಒಂದು ಹೆಜ್ಜೆ ಮುಂದಕ್ಕೊಯ್ದವರು, ಮೈಸೂರು ಅನಂತಸ್ವಾಮಿ. ಕೆಸೆಟ್‌ಗಳ ಯುಗ ಶುರುವಾಗಿದ್ದೇ ಅನಂತಸ್ವಾಮಿಯವರಿಂದ. ಕನ್ನಡದ ಕವಿಗೀತೆಗಳಿಗೆ ಒಂದು ದೊಡ್ಡ ಮಾರುಕಟ್ಟೆಯಿದೆ ಅನ್ನುವುದನ್ನು ತೋರಿಸಿಕೊಟ್ಟವರೇ ಅವರು. ಬರಬರುತ್ತಾ ಕೆಸೆಟ್‌ಗಾಗಿಯೇಹಾಡು ಬರೆಯುವ ಮತ್ತು ಸಂತೆಗೆ ಮೂರು ಮೊಳ ನೇಯುವಂತೆ ಅದಕ್ಕೊಂದಷ್ಟು ಸಂಗೀತದ ಜುಟ್ಟುಕಟ್ಟುವ, ಆ ಮೂಲಕ ಭಾವಗೀತೆ ಮತ್ತು ಸುಗಮ ಸಂಗೀತಕ್ಕಿದ್ದ ಗಾಂಭೀರ್ಯವನ್ನೇ ಹಾಳುಮಾಡುವ ಚಾಳಿಗಳು ಶುರುವಾದವಾದರೂ, ಅಂಥ ಹಾಡುಗಳು-ಅಂಥ ಕೆಸೆಟ್ಟುಗಳು ಬಹುಕಾಲ ನಿಲ್ಲಲಿಲ್ಲ ಅನ್ನುವುದು ಕಾಳಿಂಗರಾವ್‌-ಅನಂತಸ್ವಾಮಿ ಅವರುಗಳು ನಮ್ಮಲ್ಲಿ ಬೆಳೆಸಿದ ಪ್ರಬುದ್ಧ ಟೇಸ್ಟ್‌ಗೆ ಸಾಕ್ಷಿ.

ಅನಂತಸ್ವಾಮಿಯವರ ನಂತರ ಗರಿ ಬಿಚ್ಚಿದ್ದು ಅಶ್ವಥ್‌. ಒಂದು ರೀತಿಯಲ್ಲವರು ಇಂಡಿಯಾ ಟೀಮಿಗೆ ಗಂಗೂಲಿ ಸಿಕ್ಕ ಹಾಗೆ!

ಅಶ್ವಥ್‌ರ ವೈವಿಧ್ಯತೆ ನಿಜಧಿಕ್ಕೂ ನಂಬಲಸಾಧ್ಯವೆನ್ನಿಸುವಂಥದ್ದು. ಅರಮನೆ ಮೈದಾನದಲ್ಲಿದ್ದಾಗ ಕನ್ನಡವೇ ಸತ್ಯ ಕಾರ್ಯಕ್ರಮಕ್ಕಾಗಿ ಚಾಮರಾಜಪೇಟೆಯ ರೋಟರಿ ಕ್ಲಬ್ಬಿನಲ್ಲಿನ ರಿಹರ್ಸಲ್‌ ಮಾಡುತ್ತಿದ್ದಾಗ, ಮೈಮೇಲೆ ದೇವರು ಬಂದವರ ಹಾಗೆ ಅಶ್ವಥ್‌ ಹಾಡುತ್ತಿದ್ದುದನ್ನು ಕೇಳಿ ಚೆನ್ನೈನಿಂದ ಬಂದಿದ್ದ ವಯಲಿನಿಸ್ಟುಗಳು ದಂಗಾಗಿಬಿಟ್ಟಿದ್ದರು! ಅವರ ಕಣ್ಣಿಗೆ ಅಶ್ವಥ್‌ ಎಂಬ ನಾನ್‌-ವಯಲಿನಿಸ್ಟು ನಾದದ ನದಿಯಂತೆಯೂ, ಮೈಕೆಲ್‌ ಜಾಕ್ಸನ್ನನ ರಣೋತ್ಸಾಹದ ಅನುರಣನದಂತೆಯೂ, ಸಿಟ್ಟಿನ ಪ್ರತಿರೂಪದಂತೆಯೂ, ಆ ಕ್ಷಣಕ್ಕೆ ಸತ್ಯವಾಗುತ್ತಿರುವ ಕನ್ನಡದಂತೆಯೂ ಕಂಡಿದ್ದರೆ ಆಶ್ಚರ್ಯವಿಲ್ಲ! ಅಂಥ ತುಮಬು ಇನ್‌ವಾಲ್ವ್‌ಮೆಂಟಿನ ಹಾಡುಗಾರಿಕೆ ಅಶ್ವಥ್‌ರದ್ದು. ಅದನ್ನೂ ಮೀರಿದ ಭಾವಮಿಡಿತ, ಅವರ ಸಂಗೀತ ಸಂಯೋಜನೆಯದ್ದು.

ತಮ್ಮ versatilityಯಿಂದ ಅಶ್ವಥ್‌ ಅವರು ಸುಗಮ ಸಂಗೀತಕ್ಕೆ ಹೊಸ ಹುರುಪುಕೊಟ್ಟರು. ಇದು ಸಾಧ್ಯವಿಲ್ಲ ಅಂತ ಯಾರಾದರೂ ಯಾವುದರ ಬಗ್ಗೆಯಾದರೂ ಹೇಳಿದರೆ ಅದನ್ನು ಪಟ್ಟು ಬಿಡದೆ ಸಾಧ್ಯವಾಗಿಸಿ ತೋರಿಸಿದರು. ವಚನಗಳಿಗೆ-ನವ್ಯಕಾವ್ಯಕ್ಕೆ ರಾಗ ಮತ್ತು ಲಯ ತುಂಬುವುದು ಅಸಾಧ್ಯವಲ್ಲ ಅನ್ನುವುದನ್ನು ಸಾಧಿಸಿದರು. ಷರೀಪರ ಗೀತೆಗಳಿಗೆ ಹೊಸ ಹೊಸ ಆಯಾಮಗಳನ್ನೇ ಒದಗಿಸಿಕೊಟ್ಟರು.

ಇಂಥ ಅಶ್ವಥ್‌ರು ವೇದಿಕೆಯ ಮೇಲೆ ನಿಂತು ಹಾಡುತ್ತಾರೆ ; ಕಿರಿಯ ಪ್ರತಿಭೆಗಳಿಂದ ಹಾಡಿಸುತ್ತಾರೆ ಅಂದರೆ ಜನ ಬಾರದಿರಲು ಹೇಗೇ ಸಾಧ್ಯ? ಅಕ್ಷರಶಃ ತ್ಸುನಾಮಿಯ ಥರ ಅರಮನೆ ಮೈದಾನಕ್ಕೆ ದಾಳಿಯಿಟ್ಟರು. ಕನ್ನಡದ ಬಗ್ಗೆ ಮೂಗು ಮುರಿಯುತ್ತಿದ್ದ ಎಂ.ಜಿ.ರೋಡಿನ ಕ್ರೌಡೂ-ಇಂಗ್ಲಿಷ್‌ ಪತ್ರಿಕೆಗಳೂ ನಿಜಕ್ಕೂ ಬೆಚ್ಚಿಬಿದ್ದವು ; Its the revival of Kannada culture!

ನಾವು ಕನ್ನಡಿಗರು ಒಳ್ಳೆಯದೇನನ್ನು ಕೊಟ್ಟರೂ ಖಂಡಿತ ಅದನ್ನು ಒಪ್ಪಿಸಿಕೊಳ್ಳುತ್ತೇವೆ. ದರಿದ್ರ ಸಿನೆಮಾಗಳನ್ನೂ ಅಸಹ್ಯ ಹಾಡುಗಳನ್ನೂ ಪದೇಪದೆ ಚರಂಡಿಗೆಸೆಯುತ್ತಾ, ಅಶ್ವಥ್‌ರನ್ನೂ-ಸುಬ್ಬಣ್ಣನವರನ್ನೂ-ಬಿ.ಜಯಶ್ರೀ ಅವರನ್ನೂ- ಬಾಳಪ್ಪ ಹುಕ್ಕೇರಿಯವರನ್ನೂ ಒಪ್ಪಿಕೊಳ್ಳುತ್ತಾ ಇದನ್ನು ಸಾಬೀತು ಮಾಡಿದ್ದೇವೆ. ಇವತ್ತಿನ ದಿನಗಳಲ್ಲಂತೂ ನಮಗೆ ಟೀವಿ ಪರಮ ಬೋರಾಗಿದೆ. ಸಿನಿಮಾ ಅಲರ್ಜಿಯಾಗಿದೆ. ರೇಡಿಯೋ ಹಿಂದಿ-ಇಂಗ್ಲಿಷ್‌ಮಯವಾಗಿದೆ. ಮನಸ್ಸಿಗೊಂದಿಷ್ಟು ಆಹ್ಲಾದ ಬೇಕೆಂದರೆ ಎಲ್ಲಿ ಹೋಗಬೇಕೆಂಬುದು ತಿಳಿದಂತಾಗಿದೆ.

ಹಾಗಾಗೇ ಕನ್ನಡವೇ ಸತ್ಯದಂತಹ ಕಾರ್ಯಕ್ರಮಗಳು ಪದೇಪದೆ ನಡೆಯಬೇಕು. ಹೊಸದರಲ್ಲಿರುವ ಉತ್ಸಾಹ ಪದೇಪದೆ ನಡೆದಾಗ ಎಲ್ಲಿರುತ್ತದೆ ಎನ್ನುವ ಅನುಮಾನ ಬರುವುದೇನೋ ಸಹಜವೇ; ಆದರೆ ಪದೇಪದೆ ಒಂದೇ ಥರದ ಪ್ರೋಗ್ರಾಮುಗಳನ್ನೇಕೆ ಮಾಡಬೇಕು! ಸದಾ ಅಶ್ವಥ್‌ರವರೇ ಹಾಡಬೇಕೆಂದೇನಿಲ್ಲ. ಅವರಷ್ಟೇ ಪ್ರತಿಭೆಯಿರುವ ಬೇರೆ ಗಾಯಕರನ್ನೂ-ಸಂಗೀತ ಸಂಯೋಜಕರನ್ನೂ ಅವರದೇ ಮಟ್ಟಕ್ಕೆ ಏರಿಸುವ ಶಕ್ತಿ ಕನ್ನಡಿಗರಿಗಿದೆ. ಅಂಥವರನ್ನು ಗುರುತಿಸಿ, ಸರಿಯಾಗಿ ಪ್ರೊಜೆಕ್ಟ್‌ ಮಾಡುವ ಮಾರ್ಕೆಟಿಂಗ್‌ ಕೆಲಸ ನಡೆಯಬೇಕು. ಪ್ರತಿ ಕಾರ್ಯಕ್ರಮದಲ್ಲೂ ಹೊಸತನ್ನು ಕೊಟ್ಟರೆ ಪ್ರತಿ ಸಲವೂ ಲಕ್ಷ ಲಕ್ಷ ಜನ ಬರದೇ ಇರುವುದಿಲ್ಲ.

ಇಂಥ ಕಾರ್ಯಕ್ರಮಗಳಿಗೆ ಹಣಕಾಸಿನ ಬೆಂಬಲವೂ ದೊರೆಯದೆ ಇರುವುದಿಲ್ಲ. ಬೇಕಿದ್ದರೆ ಗಮನಿಸಿ ನೋಡಿ ; ಸಾಫ್ಟ್‌ವೇರ್‌ ಜಗತ್ತಿನಲ್ಲಿರುವ ಕನ್ನಡಿಗರೆಲ್ಲರೂ ಇವತ್ತು ತಮ್ಮ ತಮ್ಮೊಳಗೇ ಒಂದು ಅದ್ಭುತ ಕನ್ನಡ ಕ್ರಾಂತಿ ಮಾಡುತ್ತಿದ್ದಾರೆ. ಅದೊಂದು ಸದ್ದಿಲ್ಲದೇ ನಡೆಯುತ್ತಿರುವ ಕ್ರಾಂತಿ. ಅವರು ಅಪ್ಪಟ ಭಾಷಾಭಿಮಾನಿಗಳಾಗಿದ್ದಾರೆ. ಈ ಭಾಷೆ ಈ ಸಂಸ್ಕೃತಿಯ ಉಳಿವಿಗಾಗಿ ಏನಾದರೂ ಮಾಡಬೇಕೆಂಬ ಹಪಹಪಿಯಲ್ಲಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಕನ್ನಡಪರ ಕೆಲಸಗಳನ್ನು ಮಾಡುವ ಹುಕಿ ತೋರುತ್ತಿದ್ದಾರೆ. ತಮ್ಮದೆನ್ನುವ ಒಂದು ಬ್ರಾಂಡನ್ನು ಕಟ್ಟಿ ಪ್ರದರ್ಶಿಸುವ ಹುಮ್ಮಸ್ಸು ಅವರದು. ಇಂಟರ್ನೆಟ್ಟನ್ನು ಬಳಸಿ ಕನ್ನಡವನ್ನೂ ಕನ್ನಡಪರ ಸಂಗತಿಗಳನ್ನೂ ಪ್ರಚಾರಮಾಡುವ ವಿದ್ಯೆ ಮತ್ತು ಗುಟ್ಟು ಅವರಿಗೆ ಗೊತ್ತಿದೆ. ಮೊನ್ನೆಯ ಅಶ್ವಥ್‌ ಪ್ರೋಗ್ರಾಂ ಬಗ್ಗೆಯೇ ನೆಟ್‌ನಲ್ಲಿ ಸಾವಿರಾರು ಸಂದೇಶಗಳು ಹರಿದುಹೋಗಿವೆ. ಎಲ್ಲರೂ ಒಬ್ಬರಿಗೊಬ್ಬರು ದಯವಿಟ್ಟು ಕನ್ನಡಕ್ಕಾಗಿ ಈ ಕಾರ್ಯಕ್ರಮವನ್ನು ನೋಡಿ... ಅರಮನೆ ಮೈದಾನ ಬರೀ ಪಾಪ್‌ ಗಾಯನಕ್ಕೆ ಅನ್ನುವ ಭ್ರಮೆ ದೂರಮಾಡಿ ಎಂಬಂಥ ಮನವಿಗಳನ್ನು ಕಳಿಸಿಕೊಂಡಿದ್ದಾರೆ! ಇದರ ಫಲವಾಗಿಯೇ ಅವತ್ತು ಅರಮನೆ ಮೈದಾನದಲ್ಲಿ ಬಹುದೊಡ್ಡ ದಂಡೇ ಬಂದು ನೆರೆದಿತ್ತು. ತಮ್ಮ ಜೊತೆ ಅವರು ತಮ್ಮ ತಮಿಳು-ತೆಲುಗು ಸಹೋದ್ಯೋಗಿಗಳನ್ನೂ ಕರೆದುಕೊಂಡು ಬಂದಿದ್ದರು!

ಕನ್ನಡ ಉಳಿಯುವುದೇ ಹೀಗೆ. ಇಂಥ ಪ್ರಯತ್ನಗಳು ಹೆಚ್ಚಲಿ. ಇನ್ನಷ್ಟು ಅಶ್ವಥ್‌ಗಳು ಮೇಲೇರಿ ಬರಲಿ. ಎಂ.ಜಿ.ರೋಡಿನ ಜನಕ್ಕೆ ಶಾಕ್‌ ಹೊಡೆಯಲಿ. ನಮ್ಮ ಕವಿಗಳು ಮತ್ತು ಅವರ ಕವನಗಳು ಎಲ್ಲ ಕನ್ನಡಿಗರ ಮನೆ-ಮನ ತಲುಪಲಿ.

ಅಂದಹಾಗೆ, ಭಾವಗೀತೆಗಳ ಕ್ರಾಂತಿ ಮಾಡಿರುವ ಅತಿ ದೊಡ್ಡ ಸಾಧನೆಯೆ ಇದು ; ಕವಿಗಳನ್ನು ಮನೆಮನೆಗೆ ತಲುಪಿಸಿದ್ದು. ಯೋಚಿಸಿ ನೋಡಿ ; ಅನಂತಸ್ವಾಮಿಯವರ ಧ್ವನಿಗೆ ಸಿಗದಿದ್ದರೆ, ಇವತ್ತು ಕುವೆಂಪು ಅವರ ಓ ನನ್ನ ಚೇತನಾ ಎಂಬ ವಿಶ್ವಮಾನವ ಸಂದೇಶ ಎಷ್ಟು ಮಾತ್ರದ ಜನಕ್ಕೆ ಗೊತ್ತಿರುತ್ತಿತ್ತು?

ಸುಗಮ ಸಂಗೀತದ್ದೂ, ಅದನ್ನು ಬೆಳೆಸಿದವರದೂ, ನಮ್ಮ ಮೇಲೆ ಋಣವಿದೆ. ಅದನ್ನು ಪ್ರೀತಿಯಿಂದಲೇ ಹೊತ್ತುಕೊಳ್ಳೋಣ!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X