• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಪೊಲೀಸರ ಬ್ರಿಟಿಷ್‌ ಧೋರಣೆ ಹೀಗೆ ಮಾಡಿಸಿಬಿಡುತ್ತದೆ!

By Staff
|
Ravi Belagere on Thatskannada.com ರವಿ ಬೆಳಗೆರೆ
ಪೊಲೀಸರು ಎಷ್ಟು ನಿರ್ದಯಿಗಳಾಗಬಲ್ಲರು ಅನ್ನುವುದಕ್ಕೆ ಬೇರೆ ಸಾಕ್ಷಿಯೇ ಬೇಕಿಲ್ಲ.

ಹರಿಯಾಣಾದ ಗುಡಗಾಂವ್‌ನಲ್ಲಿ ಮೊನ್ನೆ ನಡೆದ ಅನಾಹುತವನ್ನು ಬಿಜೆಪಿಗಳು ತೀರಾ ಜಲಿಯಾನಾವಾಲಾಬಾಗ್‌ ಹತ್ಯಾಕಾಂಡಕ್ಕೆ ಹೋಲಿಸಿರುವುದು ಉತ್ಪ್ರೇಕ್ಷೆ ಹೌದಾದರೂ, ಅವತ್ತು ರಾತ್ರಿ ಟೀವಿ ನ್ಯೂಸ್‌ ನೋಡಿದರವರ ರಕ್ತ ಒಂದು ಕ್ಷಣದ ಮಟ್ಟಿಗಾದರೂ ಖಂಡಿತ ಹೆಪ್ಪುಗಟ್ಟದೆ ಇದ್ದಿರಲಾರದು. ಯಾಕೆಂದರೆ, ಅಷ್ಟೊಂದು ಭಯಾನಕವಾದ ಬಹಿರಂಗವಾದ ಪೊಲೀಸ್‌ ದೌರ್ಜನ್ಯ- ಕ್ರೌರ್ಯ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ದಾಖಲಾಗಿರಲಿಲ್ಲ.

ಇಲ್ಲಿ ತಪ್ಪು ಯಾರದು, ಮೊದಲು ಕಿಚ್ಚು ಹಚ್ಚಿದವರು ಯಾರು, ಅನ್ನುವುದೆಲ್ಲಾ ಅಷ್ಟು ಪ್ರಸ್ತುತವಲ್ಲ. ಹೊಂಡಾ ಕಂಪನಿಯ ನೌಕರರು ತಮ್ಮ ಪ್ರತಿಭಟನೆ ವೇಳೆಯಲ್ಲಿ ನಿಜಕ್ಕೂ ಹದ್ದು ಮೀರಿಯೇ ವರ್ತಿಸಿರಬಹುದು; ಆದರೆ ಅದಕ್ಕಾಗಿ ಕಾನೂನು ಮತ್ತು ಶಾಂತಿ ಪಾಲನೆಯ ಹೊಣೆ ಹೊತ್ತಿರುವ ಪೊಲೀಸರೂ ರೌಡಿಗಳ ಥರ ಆಡಬೇಕಿತ್ತೇ? ಪೊಲೀಸರೇ ಕಾನೂನು ಭಂಗಕ್ಕೆ ಕುಮ್ಮಕ್ಕು ಕೊಟ್ಟರೆ ಏನು ಸಂಭವಿಸಿದೆ. ಇನ್ನು ಅವರು ತಾವೇ ಸ್ವತಃ ಶಾಂತಿ ಮತ್ತು ಶಿಸ್ತಿನ ಚೌಕಟ್ಟು ಒಡೆಯಲು ಹೊರಟು ಬಿಟ್ಟರೇನು ಗತಿ? ಗುಡಗಾಂವ್‌ ಜನ-ಮತ್ತು ಇಡೀ ರಾಷ್ಟ್ರದ ಜನಾ ಆ ಅನಾಹುತವನ್ನೂ ಈಗ ಕಂಡಿದ್ದಾರೆ.

ಇವತ್ತಿನ ದಿನಗಳಲ್ಲಿ ಚಳವಳಿಗಳು ಅರ್ಥ ಕಳೆದುಕೊಳ್ಳುತ್ತಿವೆಯೇನೋ ಅನ್ನುವ ಅನುಮಾನಕ್ಕೆ ಹೊಂಡಾ ಕಾರ್ಮಿಕರ ಹೋರಾಟ ಹೊಸ ಸಾಕ್ಷಿ. ಜಗತ್ತು ಈಗ ಬದಲಾಗಿದೆ. ಅದಕ್ಕೆ ತಕ್ಕಂತೆ ಕಾರ್ಮಿಕರು ಒಂದು ಕರೆ ಕೊಟ್ಟರೆ ಸಾಕು, ಇಡೀ ಮುಂಬೈ ದುಸರಾ ಮಾತಾಡದೆ ಸ್ತಬ್ಧಗೊಂಡುಬಿಡುವ ಕಾಲವೊಂದಿತ್ತು. ಸುಂದರೇಶ್‌ ಹಾಗೂ ನಂಜುಂಡಸ್ವಾಮಿಯವರ ಒಂದು ಮಾತು, ಇಡೀ ರಾಜ್ಯದ ಸಮಸ್ತ ರೈತರನ್ನೂ ಒಂದೆಡೆಗೆ ಸೇರಿಸಿಬಿಡುತ್ತಿದ್ದಂಥ ದಿನಗಳಿದ್ದವು. ರಾಜಕುಮಾರ್‌ ಬೀದಿಗಿಳಿದರೆ ಇಡೀ ಕರ್ನಾಟಕವೇ ಅವರ ಬೆನ್ನ ಹಿಂದೆ ನಿಲ್ಲುವಂಥ ಸಂದರ್ಭಗಳೂ ಇದ್ದವು.

ಇವತ್ತು ಯಾವ ಚಳವಳಿಗೂ ಆ ಮೊನಚು ಉಳಿದಿಲ್ಲ. ಯಾಕೆಂದರೆ, ಜಾಗತೀಕರಣದ ಝಗಮಗದಡಿಯಲ್ಲಿ ನಾವೆಲ್ಲರೂ ಕ್ರಮೇಣ ಸ್ವಕೇಂದ್ರಿತ ವ್ಯಕ್ತಿಗಳಾಗುತ್ತಿದ್ದೇವೆ. ಸಮಾಜಕ್ಕಿಂತ-ಒಂದು ಸಮುದಾಯಕ್ಕಿಂತ ನಾನು ಮುಖ್ಯ ಅನ್ನುವ ಭಾವನೆ ಬೆಳೆಯುತ್ತಿದೆ. ನಾನು ಸರಿ ಹೋದರೆ ಸಮಾಜವೂ ಸರಿ ಹೋಗುತ್ತದೆ ಅನ್ನುವ ಹೊಸ ಚಿಂತನೆಯ ನೆಪ ಶುರುವಾಗಿದೆ. ಇದರ ಜೊತೆ ಜೊತೆಯಲ್ಲೇ, ಚಳವಳಿ ಸಂಘಟಿಸುವ ನಾಯಕರುಗಳ ವಿಶ್ವಾಸಾರ್ಹತೆಯೂ ಕುಸಿಯುತ್ತಾ ಬಂದಿದೆ. ನಾಯಕತ್ವದ ಆದ್ಯತೆಗಳು ಬದಲಾಗುತ್ತಿವೆ. ಸ್ವಾರ್ಥ ಸಾಧನೆಯ ವಾಸನೆ ಪ್ರತಿ ಚಳವಳಿಗೂ ಅಂಟಿಕೊಳ್ಳತೊಡಗಿದೆ. ಸ್ವ ಇಚ್ಛೆಯಿಂದ ಜನರು ಚಳವಳಿಗೆ-ಮುಷ್ಕರಗಳಿಗೆ-ರ್ಯಾಲಿಗಳಿಗೆ ಧುಮುಕುತ್ತಿದ್ದ ದಿನಗಳು ಮುಗಿದು, ಜನರನ್ನು ಲಾರಿಗಳಲ್ಲಿ-ಬಸ್ಸುಗಳಲ್ಲಿ ‘ಹೊಡೆದು’ಕೊಂಡು ಬರುವ ಚಾಳಿ ಶುರುವಾಗಿದೆ. ಮೊನ್ನೆ ಹುಬ್ಬಳ್ಳಿಯಲ್ಲಿ ಸಿದ್ರಾಮಯ್ಯನವರು ನಡೆಸಿದ್ದು ಇಂಥದ್ದೇ ಒಂದು ರ್ಯಾಲಿ.

ಚಳವಳಿ-ಮುಷ್ಕರಗಳ ಮುಖ ಹೀಗೆ ಕಳಂಕ ಬಳಿದುಕೊಂಡಿರುವುದರಿಂದಲೇ, ಅವು ಜನಸಾಮಾನ್ಯರ ಮುಖ್ಯವಾಹಿನಿಯಿಂದ ದೂರವಾಗುತ್ತಿವೆ. ಯಾರು ಸ್ಟ್ರೈಕ್‌ ಮಾಡಿದರೆ ನಮಗೇನು ಅನ್ನುವ ಧೋರಣೆ ಬೆಳೆಯುತ್ತಿದೆ. ಸಾಲದೆಂಬಂತೆ, ಬಂಡವಾಳ ಹೂಡಿಕೆ-ಫಾರಿನ್‌ ಇನ್‌ವೆಸ್ಟ್‌ಮೆಂಟು ಇತ್ಯಾದಿಗಳ ಹೆಸರಿನಲ್ಲಿ ನಮ್ಮ ಸರ್ಕಾರಗಳೂ ಕಂಪನಿಗಳ ರಕ್ಷಣೆಗೆ ನಿಂತುಬಿಟ್ಟಿರುವುದರಿಂದ, ಮತ್ತು ತಪ್ಪಿತಸ್ಥ ಕಂಪನಿಗಳು ನಮ್ಮ ನೆಲದ ಕಾನೂನಿನ ದೋಷಗಳಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವಿದ್ಯೆ ಕರಗತ ಮಾಡಿಕೊಂಡಿರುವುದರಿಂದ, ಕಾರ್ಮಿಕರ ಹೋರಾಟಗಳು ಅನಾಥವಾಗುತ್ತಿವೆ. ಇತ್ತ ಜನರ ಸಿಂಪತಿಯೂ ಇಲ್ಲ, ಆ ಕಡೆ ಸರ್ಕಾರದ ಗಮನವೂ ಇಲ್ಲ ಅಂತಾದ ಮೇಲೆ ಕಾರ್ಮಿಕ ಚಳವಳಿಗಳು ಗೆಲ್ಲುವುದಾದರೂ ಹೇಗೆ?

ಹೊಂಡಾ ಕಂಪನಿಯ ಮಾತು ಬಿಡಿ; ನಮ್ಮ ರಾಜ್ಯದಲ್ಲೇ ಸುಮಾರು ಎರಡು ತಿಂಗಳುಗಳಿಂದ ಒಂದು ಕಂಪನಿಯ ನೌಕರರು ಆಮರಣ ಉಪವಾಸ ಕುಂತಿದ್ದಾರೆ, ಆ ಪೈಕಿ ಮೂವರು ಹಸಿವಿನಿಂದ ಈಗಾಗಲೇ ಸತ್ತಿದ್ದಾರೆ ಅನ್ನುವುದಾದರೂ ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು? ಯಾಕೆ ಗೊತ್ತಿಲ್ಲವೆಂದರೆ, ನಮ್ಮಲ್ಲಿ ಮುಷ್ಕರಗಳೆಡೆಗಿನ ಕಳಕಳಿ ಸತ್ತು ಹೋಗಿದೆ. ಹಾಗಾಗೇ, ಮಂಗಳೂರು ಕೆಮಿಕಲ್ಸ್‌ ಮತ್ತು ಫರ್ಟಿಲೈಜರ್ಸ್‌ ಎಂಬ ವಿಜಯ್‌ ಮಲ್ಯನ ಕಂಪನಿಯಿಂದ ವಜಾಗೊಂಡ ನೂರೈವತ್ತು ನೌಕರರು ಉಪವಾಸ ಕೂತರೆ, ಉಪವಾಸದಿಂದಲೇ ಸತ್ತರೆ, ಇಲ್ಲಿ ಅವರ ಬಗ್ಗೆ ಒಂದು ಕನಿಷ್ಠ ಮಾನವೀಯ ಪ್ರತಿಕ್ರಿಯೆಯೂ ವ್ಯಕ್ತವಾಗುವುದಿಲ್ಲ. ಸ್ಟ್ರೈಕ್‌ ಮಾಡುತ್ತಿರುವವರ ಡಿಮ್ಯಾಂಡುಗಳು ಆದೆಷ್ಟೇ ಅಸಿಂಧುವಾಗಿದ್ದರೂ, at least ಅವರ ಜೊತೆ ಮ್ಯಾನೇಜ್‌ಮೆಂಟಿನವರು ಮಾತಾಡಿ ಇತ್ಯರ್ಥ ಮಾಡಿಸುವ ಪ್ರಯತ್ನವನ್ನೂ ನಮ್ಮ ಇಂಡಸ್ಟ್ರಿ ಮಿನಿಸ್ಟ್ರುಗಳು ಮಾಡುವುದಿಲ್ಲ.

ಇಂಥ ಸಾಮಾಜಿಕ ಮತ್ತು ರಾಜಕೀಯ ನಿರ್ಲಕ್ಷ್ಯದಿಂದಲೇ ಗುಡಗಾಂವ್‌ನಲ್ಲಿ ಸಂಭವಿಸಿದಂಥ ಘಟನೆಗಳು ಹುಟ್ಟುವುದು. ಜಪಾನ್‌ ಮೂಲದ ಹೊಂಡಾ ಕಂಪನಿ ಕೆಲದಿನಗಳ ಹಿಂದೆ ತನ್ನ ಐವತ್ನಾಲ್ಕು ನೌಕರರನ್ನು ಕೆಲಸದಿಂದ ತೆಗೆದುಹಾಕಿತ್ತು. ನಾಲ್ಕು ಜನರನ್ನು ಪೂರ್ತಿಯಾಗಿ ಡಿಸ್‌ಮಿಸ್‌ ಮಾಡಿ, ಉಳಿದ ಐವತ್ತು ಜನರನ್ನು ಅಮಾನತಿನಲ್ಲಿಟ್ಟಿತ್ತು. ಇದಕ್ಕೆ ಕಾರಣ, ಅವರ ಅಶಿಸ್ತು ಹಾಗೂ ಅವ್ಯವಹಾರ. ಬಹುಶಃ ಆ ಕಂಪನಿಯ ದೃಷ್ಟಿಯಿಂದ ಈ ಕ್ರಮ ಸಮಂಜಸವಾದದ್ದೇ. ನಮ್ಮ ಟ್ರೇಡ್‌ ಯೂನಿಯನ್‌ ಲೀಡರುಗಳು ಸ್ವಲ್ಪ ಮೆಚ್ಯೂರಿಟಿ ಹಾಗೂ ಡಿಪ್ಲೊಮಸಿ ತೋರಿಸಿದ್ದರೆ, ಬಹುಶಃ ಈ ಸಮಸ್ಯೆಯನ್ನು ಅವತ್ತೇ ಬಗೆಹರಿಸಿಬಿಡಬಹುದಿತ್ತೇನೋ. ಆದರೆ ಅವರು ಏಕಾಏಕಿ ನೌಕರರನ್ನು ಮುಷ್ಕರಕ್ಕೆ ದೂಡಿಬಿಟ್ಟರು. ಹೇಳಿಕೇಳಿ ಅದು ಜಪಾನಿನ ಕಂಪನಿ; ಮುಷ್ಕರಕ್ಕೆಲ್ಲಿ ಬಗ್ಗೀತು? ಬದಲಿಗೆ, ಹಟಕ್ಕೆ ಬಿದ್ದ ಹಾಗೆ ಆ ಕಂಪನಿಯ ಪ್ರಭುಗಳು ಬೇರೆ ನೌಕರರನ್ನು ಗುತ್ತಿಗೆಗೆ ತೆಗೆದುಕೊಂಡರು.

ಮುಷ್ಕರ ವಿಪರೀತಕ್ಕೆ ಹೋದಾಗ, ಎಲ್ಲಾ ಮೂರುವರೆ ಸಾವಿರ ಕೆಲಸಗಾರರನ್ನೂ ಒಂದೇ ಏಟಿಗೆ ತನ್ನ ರಿಜಿಸ್ಟರುಗಳಿಂದ ಕಿತ್ತು ಹಾಕಿತು. ಫಾರಿನ್‌ ಕಂಪನಿಯ ಜೊತೆ ಮಾತಾಡಿ ಮನವೊಲಿಸುವ ಧೈರ್ಯ ಮತ್ತು ನೈತಿಕ ತಾಕತ್ತು ಹರಿಯಾಣಾದ ಅಥವಾ ಕೇಂದ್ರದ ಮಿನಿಸ್ಟರುಗಳಿಗಿರಲಿಲ್ಲ. ನೌಕರರು ತಮ್ಮ ಹತಾಶೆಯನ್ನು ಸಾರ್ವಜನಿಕರ ಮೇಲೆ ತೋರಿಸಿದರು. ಭಯಂಕರ ಬ್ಯುಸಿಯಾಗಿರುವ ದೆಹಲಿ-ಜೈಪುರ ರಸ್ತೆಯನ್ನು ಗಂಟೆಗಟ್ಟಲೆ ಬಂದ್‌ ಮಾಡಿದರು. ಅಷ್ಟಾದ ಮೇಲೆ ಅವರಾದರೂ ಯಾಕೆ ಕಾರ್ಮಿಕರನ್ನು ಮರುಕದಿಂದ ನೋಡಿಯಾರು? ಇಂಥದ್ದೊಂದು non-win ವಿಷವರ್ತುಲದೊಳಗೆ ಸಿಕ್ಕಿಕೊಂಡ ಕಾರ್ಮಿಕರು ಒಂದಲ್ಲ ಒಂದು ಕ್ಷಣದಲ್ಲಿ ಸಿಡಿಯಲೇಬೇಕಿತ್ತು. ಅದು ಮೊನ್ನೆ ಫಲಿಸಿತು.

ತಮ್ಮ ಮತ್ತು ತಮ್ಮ ಕಂಪನಿಯ ಮಧ್ಯದ ಕಲಹಕ್ಕೆ ನೌಕರರು ಪೊಲೀಸರನ್ನು ಬಲಿಯಾಗಿಸಬಾರದಿತ್ತು; ಅವರ ಕೋಪಕ್ಕೆ ಪೊಲೀಸರು ಗುರಿಯಾದ ಮೇಲಷ್ಟೇ ಲಾಠಿ ಚಾರ್ಜ್‌ನ ನಿರ್ಣಯ ತೆಗೆದುಕೊಳ್ಳಲಾಯಿತು. ಅಂತ ಗುಡಗಾಂವ್‌ನ ಜಿಲ್ಲಾಧಿಕಾರಿ ಸುಧೀರ್‌ ರಾಜ್‌ಪಾಲ್‌ ತಮ್ಮ ಕಾನೂನು ರಕ್ಷಣಾ ಪಡೆಯ ಅತಿರೇಕವನ್ನೂ ಸಮರ್ಥಿಸಿಕೊಂಡಿದ್ದಾರೆ. ಆದರೆ, ಪೊಲೀಸರ ವಿರುದ್ಧ ಹೀಗೆ ನೌಕರರು ರೊಚ್ಚಿಗೇಳುವುದಕ್ಕೆ ಕಾರಣವಿಲ್ಲದೇ ಇರಲಿಲ್ಲ. ಈಗ್ಗೆ ಕೆಲವು ತಿಂಗಳುಗಳ ಹಿಂದೆ, ಇದೇ ಗುಡಗಾಂವ್‌ನ ಸ್ಪಿನ್ನಿಂಗ್‌ ಮಿಲ್ಲೊಂದರ ನೌಕರರು ರಾಸ್ತಾ ರೋಖೋ ಮಾಡಿದ್ದಾಗ ಪೊಲೀಸರು ಕ್ಷುಲ್ಲಕ ನೆಪವೊಡ್ಡಿ ಗೋಲೀಬಾರ್‌ ಮಾಡಿದ್ದಾಗಲೀ, ಮೂವರನ್ನು ಬಲಿ ಹಾಕಿದ್ದನ್ನಾಗಲೀ ಅವರು ಮರೆತಿರಲಿಲ್ಲ.

ಮೊನ್ನೆ ತಮ್ಮ ಮೆರವಣಿಗೆಗೂ ಪೊಲೀಸರು ಅಡ್ಡಬಂದಾಗ, ಅವರು ಅಕ್ಷರಶಃ ಕಿಡಿಗೇಡಿಗಳಾಗಿಬಿಟ್ಟರು. ಮೆರವಣಿಗೆ ಬಿಟ್ಟು ಶಾಂತವಾಗಿ ಮನೆಗೆಹೋಗಿ ಅಂತ ಹೇಳಲು ಬಂದ ಡಿ.ಎಸ್‌.ಪಿ. ಜಗ್‌ಪ್ರವೇಶ್‌ ದಹಿಯಾರನ್ನ, ಸಬ್‌ ಡಿವಿಜನಲ್‌ ಮ್ಯಾಜಿಸ್ಟ್ರೇಟ್‌ ಜೆ.ಎಸ್‌.ಸಂಗ್ಯಾನ್‌ ಅವರನ್ನ ಅಟ್ಟಾಡಿಸಿಕೊಂಡು ಬಡಿದರು. ಮ್ಯಾಜಿಸ್ಟ್ರೇಟರ ಜೀಪು ಹಾಗೂ ಪೊಲೀಸರ ಬೈಕುಗಳು ಬೆಂಕಿಯಲ್ಲಿ ಉರಿದುಹೋದವು. ಆ ಕ್ಷಣ ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಪೊಲೀಸರು, ಆಮೇಲೆ ತಮ್ಮ ಸೇನೆಯನ್ನು ಹಿಗ್ಗಿಸಿಕೊಂಡು ವೈರಿ ಪಡೆಗಳ ಮೇಲೆ ಮುಗಿಬೀಳುವ ರಣವೀರರ ಹಾಗೆ ಹಾರಿ ಬಿದ್ದರು. ಲಾಠಿಗಳು ಕುಣಿದವು. ರಕ್ತ ಚಿಮ್ಮಿತು. ಪೂರ್ತಿ ಮುಕ್ಕಾಲು ಗಂಟೆ ಅವ್ಯಾಹತವಾಗಿ ಅಲ್ಲಿ ನಡೆದದ್ದು ರುದ್ರನೃತ್ಯ. ಮುಷ್ಕರದಲ್ಲಿದ್ದ ಏಳು ನೂರು ಚಿಲ್ಲರೆ ನೌಕರರ ಪೈಕಿ ಪ್ರತಿಯಾಬ್ಬರ ಮೈಯೂ ರಕ್ತಸಿಕ್ತವಾಯಿತು. ನೂರಾರು ಜನ ಆಸ್ಪತ್ರೆ ಸೇರಿದರು. ಕೆಲವರು ರಾತ್ರೋರಾತ್ರಿ ಅಲ್ಲಿಂದ ಕಣ್ಮರೆಯೂ ಆಗಿಬಿಟ್ಟರು!

ಪೊಲೀಸರು ತೀರಾ ತಮ್ಮ ಜನರನ್ನೇ, ತಮ್ಮ ದೇಶದ ಪ್ರಜೆಗಳನ್ನೇ, ಹೀಗೆ ಶತ್ರುಗಳ ಥರ ಬಡಿಯುವುದಕ್ಕೆ ಕಾರಣ, ಅವರ ಕ್ರೌರ್ಯ ಮತ್ತು mobಗಳನ್ನು ಹೇಗೆ ಹ್ಯಾಂಡಲ್‌ ಮಾಡಬೇಕೆಂಬ ತರಬೇತಿಯ ಅಭಾವ. ಪಂಜಾಬ್‌ ಪೊಲೀಸ್‌ ರೂಲ್ಸ್‌ನಲ್ಲೇ ಹೇಳಿರುವ ಹಾಗೆ, ಒಂದು ಮುಷ್ಕರ ನಿರತ ಗುಂಪನ್ನು ಚದುರಿಸುವುದಕ್ಕೆ ಪೊಲೀಸರು ಮೊತ್ತಮೊದಲು ಬಳಸಬೇಕಾದ್ದು, ಅಶ್ರುವಾಯು ಹಾಗೂ ಜಲತೋಪಿನ ಅಸ್ತ್ರಗಳನ್ನ. ಅವೂ ಕೆಲಸ ಮಾಡದಿದ್ದಾಗ ಮತ್ತು ಪರಿಸ್ಥಿತಿ ತೀರಾ ಹತೋಟಿ ತಪ್ಪುತ್ತಿದೆ ಅಂತ ಅನ್ನಿಸಿದಾಗ ಮಾತ್ರವೇ ಲಾಠೀಚಾರ್ಜ್‌ನಂಥ ದಮನ ಕಾರ್ಯಕ್ಕಿಳಿಯಬೇಕು. ಅದನ್ನು ಮಾಡುವಾಗ ಕೂಡ, ತಮ್ಮದೇ ಜನರನ್ನು ತಾವು ನಿಯಂತ್ರಿಸ ಹೊರಟಿದ್ದೇವೆಯೇ ಹೊರತು ಶತ್ರುಗಳನ್ನು ಸದೆಬಡಿಯುವುದಕ್ಕಲ್ಲ ಅನ್ನುವ ಅರಿವು ಅವರಿಗಿರಬೇಕು. ಅಂದರೆ, ಲಾಠಿಯನ್ನು ಮೇಲೆತ್ತಿದಾಗಲೂ ಕೂಡ ಅವರು ರಾಕ್ಷಸರಂತಾಡಬಾರದು.

ಈ ಗೈಡ್‌ಲೈನ್‌ಗಳನ್ನು ಪಾಲಿಸುವುದಕ್ಕೆ ಅಪಾರ ಸಂಯಮ ಮತ್ತು ತರಬೇತಿಬೇಕು. ಒಂದು ವಯಲೆಂಟ್‌ ಗುಂಪಿಗೆ ಎದುರಾಗಿ ನಿಂತಿದ್ದಾಗ ಇಂಥ ಸಂಯಮ ತೋರುವುದಕ್ಕೆ ಧೈರ್ಯ, ಸಮಯಪ್ರಜ್ಞೆ ಹಾಗೂ ಅನುಭವವೂ ಬೇಕು. ಪೊಲೀಸರ ಕೆಲಸ ಸುಲಭವಲ್ಲ. ಆದರೆ, ಅವರ ರಕ್ಷಣೆಗಾಗಿ ಸಾಕಷ್ಟು ಸವಲತ್ತುಗಳಿವೆ, ನಿಶ್ಶಸ್ತ್ರರಾದ ಕಾರ್ಮಿಕರಿಗೇನಿದೆ?

ಹಿಂದೊಂದು ಸಲ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಕೋಮುಗಲಭೆಯಾಗಿದ್ದಾಗ, ಪೊಲೀಸರು ಟಿಯರ್‌ ಗ್ಯಾಸ್‌ ಹಾಗೂ ಲಾಠೀಚಾರ್ಜ್‌ಬಳಸಿ ಗುಂಪನ್ನು ತಕ್ಕಮಟ್ಟಿಗೆ ಚದುರಿಸುತ್ತಿದ್ದರು. ನಿಯಂತ್ರಿಸುತ್ತಿದ್ದರು. ಆದರೆ ಆಗ ಥೇಟ್‌ ಸಿನಿಮಾ ಹೀರೋ ಥರ ನಮ್ಮ ಸಾಂಗ್ಲಿಯಾನಾ ಅವರು ಎಲ್ಲರದ ಡ್ರಮ್ಮೊಂದರ ಮೇಲೆ ಹತ್ತಿ, ಹಲೋ ನಾನು ಸಾಂಗ್ಲಿಯಾನಾ ಅಂತ ಭಾಷಣ ಬಿಗಿಯಲಿಕ್ಕೆ ಹೋದರು ; ಅವರ ಮಾತು ಮುಗಿಯುವ ಮುನ್ನವೇ ಎಲ್ಲಿಂದಲೋ ಒಂದು ಕಲ್ಲು ಬಂದು ಅವರ ಹಣೆಗೆ ಅಪ್ಪಳಿಸಿತು; ಪುಣ್ಯಾತ್ಮ ತಕ್ಷಣವೇ ಫೈರಿಂಗಿಗೆ ಆರ್ಡರ್‌ ಕೊಟ್ಟುಬಿಟ್ಟರು! ಉಗುರಿನಲ್ಲಿ ಹೋಗಬಹುದಾಗಿದ್ದಕ್ಕೆ ಕೊಡಲಿಯ ಪ್ರಯೋಗವಾಗಿ ಅನಾಹುತಗಳೇ ನಡೆದುಹೋದವು.

ಮೊನ್ನೆ ಗುಡಗಾಂವ್‌ನಲ್ಲಾಗಿದ್ದೂ ಹೆಚ್ಚುಕಡಿಮೆ ಇದೇ ಥರದ ಘಟನೆ. ಮೆರವಣಿಗೆಯ ಮಧ್ಯದಲ್ಲಿ ಪೊಲೀಸರು ಅಡ್ಡಗಾಲು ಹಾಕದೇ ಇದ್ದಿದ್ದರೆ, ಬಹುಶಃ ಇದೆಲ್ಲಾ ನಡೆಯುತ್ತಿರಲಿಲ್ಲವೇನೋ? ಆದರೆ, ನಮ್ಮ ಪೊಲೀಸರಲ್ಲಿ ಇನ್ನೂ ವಸಾಹತುಶಾಹಿ ದಿನಗಳ ಗಂಧ ಉಳಿದುಕೊಂಡಿದೆ. ಅಮೆರಿಕಾ-ಯೂರೋಪ್‌ಗಳಲ್ಲಿನ ಪೊಲೀಸರು ಮುಖ್ಯ ಜನವಾಹಿನಿಯಲ್ಲಿ ಬೆರೆತು, ಅವರು ಕಾನೂನು ಪಾಲನೆ ಮಾಡುವುದಕ್ಕೆ ಸಹಾಯಮಾಡುವ ಗೆಳೆಯರ ಥರ ಕೆಲಸ ಮಾಡುತ್ತಿದ್ದರೆ, ನಮ್ಮವರು ಮಾತ್ರ ತಾವಿನ್ನೂ ಕಾನೂನಿನ ರಕ್ಷಕರು ಅಂತಲೇ ಅಂದುಕೊಂಡು, ಜನಸಾಮಾನ್ಯರ ಸಮಾಜಕ್ಕಿಂತ ತಾವೇ ಪ್ರತ್ಯೇಕ ಅಂತನ್ನುವಂಥದ್ದೊಂದು ಐಡೆಂಟಿಟಿ ಸೃಷ್ಟಿಸಿಕೊಂಡಿದ್ದಾರೆ. ಇದು ಬ್ರಿಟಿಷರು ಮಾಡುತ್ತಿದ್ದ ಕೆಲಸ. ಅವರ ಕಣ್ಣಿಗೆ ಈ ನಲದ ಜನರೆಲ್ಲರೂ ಕ್ರಿಮಿನಲ್‌ಗಳೋ ಟೆರರಿಸ್ಟ್‌ಗಳೋ ಆಗಿದ್ದಿದ್ದರಿಂದ, ಅವರನ್ನು ಮಟ್ಟ ಹಾಕುವುದಕ್ಕಾಗಿ ಅವರಿಂದ ಪ್ರತ್ಯೇಕವಾದ ಒಂದು ಪೊಲೀಸ್‌ ಫೋರ್ಸ್‌ ಕಟ್ಟಿದ್ದರು. ಜನರು ನಮ್ಮವರಲ್ಲ ಅನ್ನುವ ಭಾವನೆಯನ್ನು ಪೊಲೀಸರ ರಕ್ತದಲ್ಲಿ ಬೆರೆಸಿಬಿಟ್ಟಿದ್ದರು. ಅದೇ ಈಗಲೂ ಮುಂದುವರಿದುಕೊಂಡು ಬಂದಿದೆ. ಈ ಕಾರಣಕ್ಕಾಗೇ ಪೊಲೀಸರು ಇವತ್ತು ಸಮಾಜದಿಂದ ಹೊರಗುಳಿದಿದ್ದಾರೆ, ಜನಸಾಮಾನ್ಯರ ಪಾಲಿಗೆ ಭಯ ಹುಟ್ಟಿಸುವ ಆಕೃತಿಗಳಾಗಿದ್ದಾರೆ.

ಇದು ಬದಲಾಗುವುದಕ್ಕೆ, ನಮ್ಮ ಪೊಲೀಸರೂ ಅಮೆರಿಕನ್‌ ಪೊಲೀಸರ ಥರ ಜನಸ್ನೇಹಿಗಳಾಗುವುದಕ್ಕೆ ಒಂದು ಮಾನಸಿಕ ಕ್ರಾಂತಿಯೇ ಆಗಬೇಕು. ಬಹುಶಃ ಮುಂದೊಂದು ದಿನ ಅದು ಆಗುತ್ತದೆ. ಯಾಕೆಂದರೆ, ವಸಾಹತುಶಾಹಿ ಮನೋಭಾವದ ಹೊರೆಹೊತ್ತುಕೊಳ್ಳದ ಹೊಸತಲೆಮಾರುಗಳು ಬಂದಂತೆಲ್ಲಾ ಧೋರಣೆಯೂ ಬದಲಾಗಬೇಕಲ್ಲ?

Lets wait!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more