ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಖ ನಿಮ್ಮೊಂದಿಗೆ ಊಟಕ್ಕೆ ಕುಳಿತರೆ ದುಃಖ ನಿಮ್ಮ ಹಾಸಿಗೇಲಿ ಮಲಗಿರುತ್ತದೆ!

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ನಮ್ಮ ಖುಷಿಯ ದಿನಗಳಲ್ಲಿ ಅಂಥವರು ಅದೇಕೋ ಸಿಕ್ಕುವುದೇ ಇಲ್ಲ. ನಮಗೆ ದುಃಖ ಬರಲಿ, ಬೇಸರ ಬರಲಿ, ನಾವು ಒಬ್ಬಂಟಿಗರಾಗಿರಲಿ, ಕತ್ತಲಲ್ಲಿ ತಡವರಿಸುವಂಥವರಾಗಲಿ ಅಂತ ಎಲ್ಲೋ ಕಾಣದ ಮರೆಯಲ್ಲಿ ನಿಂತು ಕಾಯುತ್ತಿರುತ್ತಾರೋ ಏನೋ? ನಮಗೆ ಅದೆಲ್ಲ ದುಃಖ, ಬೇಸರ ಬಂದು ನಾವು ಇನ್ನೇನು ಕಂಗಾಲಾಗಿ ಮುರಿದು ಬಿದ್ದು ಬಿಡ್ತೇವೆ ಅನ್ನಿಸುವ ಹೊತ್ತಿಗೆ ಸರಿಯಾಗಿ ಅವರು ಸಿಕ್ಕು ಬಿಡುತ್ತಾರೆ; ಕಳೆದುಹೋದ ಮಗುವಿಗೆ ಅಮ್ಮ ಸಿಕ್ಕಂತೆ. ನನಗೆ ನನ್ನ ಜೀವನದ ಅಂಥ ಅತಿದೊಡ್ಡ ಗೊಂದಲದ, ನೋವಿನ, ನಿರುತ್ಸಾಹದ ದಿನಗಳಲ್ಲಿ ಸಿಕ್ಕವರೇ ಚಲಂ, ಖುಶ್ವಂತ್‌, ಸಾಹಿರ್‌, ರಜನೀಶ್‌, ಸತ್ಯಕಾಮ, ದೇವರ ಕೊಂಡ ಬಾಲಗಂಗಾಧರ ತಿಲಕ್‌ ಮುಂತಾದವರು.

ಈಗ ಇವನು ಸಿಕ್ಹಿದ್ದಾನೆ.

ಖಲೀಲ್‌ ಗಿಬ್ರಾನ್‌!

ಆಫ್‌ ಕೋರ್ಸ್‌, ನಾನು ಅಂಥ ಪರಿ ದುಃಖದಲ್ಲೇನಿಲ್ಲ. ದುಃಖ ಪಡುವಷ್ಟು ಟೈಮಿಲ್ಲ. ಆದರೆ ಬೇಸರಗೊಂಡಿದ್ದೇನೆ, ವ್ಯಾಕುಲಗೊಂಡಿದ್ದೇನೆ, ಒಳಗೇ ಒಬ್ಬಂಟಿಗನಾಗಿದ್ದೇನೇನೋ ಎಂಬಂತಿದ್ದೇನೆ. ಇದಕ್ಕೆಲ್ಲ ವಿಶೇಷ ಕಾರಣ ಅಂತೇನಿಲ್ಲ. ಬೇಸರ, ಡಿಪ್ರೆಷನ್ನು, ನಿರಾಸಕ್ತಿ ಮುಂತಾದವು ಕೂಡ ಆಗಾಗ ಸೀಝನಲ್‌ ಆಗಿ ಬರುವ್‌ ವಿನಾಕಾರಣದ ವೈರಲ್‌ ಜ್ವರಗಳಲ್ಲವು. ಅವುಗಳಿಂದ ಚೇತರಿಸಿಕೊಳ್ಳುವುದು ಹೇಗೆ ಅಂತ ನನಗೆ ಚೆನ್ನಾಗಿ ಗೊತ್ತು. ಈಬಾರಿಯೇ, ಅದೇಕೋ ಚೇತರಿಸಿಕೊಳ್ಳಲಿಕ್ಕೆ ತುಂಬ ಟೈಮು ತೆಗೆದುಕೊಳ್ಳುತ್ತಿದ್ದೇನೆ. ಬಹುಶಃ ವಿಪರೀತ ಕೆಲಸ ಮಾಡುತ್ತಿರುವುದು ಕೂಡ ನನ್ನ ಇವತ್ತಿನ ಸ್ಥಿತಿಗೆ ಕಾರಣವಾಗಿರಬಹುದು.

Khaleel Gibranಉಳಿದಂತೆ ಎಲ್ಲವೂ ಎಂದಿನಂತೆಯೇ ನಡೆಯುತ್ತಿದೆ. ಎದ್ದವನೇ ಪೇಪರ್‌ ಓದುತ್ತೇನೆ. ಹುಡುಗರನ್ನು ವರದಿಗೆ ಕಳಿಸುತ್ತೇನೆ. ಇತ್ತೀಚೆಗೆ ಗೆದ್ದ ಶಾಸಕರು ಆಫೀಸಿಗೆ ಬಂದು ಹೋಗುತ್ತಿರುತ್ತಾರೆ. ಆಫೀಸು ಎಂದಿನಂತೆ ಮೂರು ಪಾಳಿಗಳಲ್ಲಿ ನಡೆಯುತ್ತಲೇ ಇದೆ. ಪತ್ರಿಕೆ ಕೆಲಸ, ಟೀವಿಯ ಕೆಲಸ, ಶಾಲೆಯ ಕೆಲಸ, ಪುಸ್ತಕಗಳ ಕೆಲಸ ಅಂತ ನಾನು ಕೂಡ ನನ್ನ ಕ್ಯುಬಿಕಲ್‌ನಲ್ಲಿ ಸವೆಯುತ್ತ ಕುಳಿತಿರುತ್ತೇನೆ. ಈ ಮಧ್ಯೆ ಒಂದು ಜ್ವರ ಬಂದು, ಎರಡು ದಿನ ದೇಹ ರಜೆಯಲ್ಲಿತ್ತು. ಜ್ವರ ಬಂದೇ ಅನೇಕ ವರ್ಷಗಳಾಗಿದ್ದವು. ಬಂದು ಹೋಗಲಿ ಬಿಡು ಅಂತ ಅದರ ಕೈಗೆ ದೇಹ ಒಪ್ಪಿಸಿ ಇಡೀ ನಲವತ್ತೆಂಟು ಗಂಟೆ ಈಯ್ದ ನಾಯಿಯಂತೆ ನರಳುತ್ತ ಮಲಗಿದ್ದೆ. ಮೂರನೇದಿನ ಬೆಳಗ್ಗೆ ಹೊತ್ತಿಗೆ ಜ್ವರ-ಜಾಡ್ಯ ಬಿಟ್ಟ ದೇಹ ಹಗುರಾಗಿತ್ತು. ಆದರೆ ಮನಸ್ಸಿಗೇಕೋ ಇನ್ನೂ ಮೋಡ ಮೋಡ. ಮದುವೆಯ ಇಪ್ಪತ್ತೈದನೆಯ ಆ್ಯನಿವರ್ಸರಿಯ ರಾತ್ರಿ ಇಡೀ ಕುಟುಂಬ ಒತ್ತಟ್ಟಿಗೆ ಕೂತು ಊಟ ಮಾಡಿದ್ದೊಂದೇ ಸಂಭ್ರಮ. ಮಾತು ಕೊಟ್ಟಂತೆ ಲಲಿತೆಯನ್ನೂ ಮಕ್ಕಳನ್ನೂ ಎಲ್ಲಿಗೂ ಕರೆದು ಕೊಂಡು ಹೋಗದಂತೆ ತಡೆದದ್ದು ಜ್ವರ.

ಅದೆಲ್ಲ ಬೇಸರ ಕಾಡಿದಾಗ ಎಂದಿನಂತೆ ನಾನು ನನ್ನ ಪುಸ್ತಕಗಳ ಷೆಲ್ಫಿನೆಡೆಗೆ ನನ್ನ ನಡುರಾತ್ರಿಗಳಲ್ಲಿ ನಡೆದು ಹೋಗುತ್ತೇನೆ. ಪುಸ್ತಕದ ಗೂಡಿನಿಂದ ನಾನು ಯಾವತ್ತಿಗೂ ಬೇಸತ್ತು ಹಿಂತಿರುಗಿದವನೇ ಅಲ್ಲ. ಅಲ್ಲಿ , ಇಡೀ ಜನ್ಮ ಕೂತು ಓದಿದರೂ ಮುಗಿಯದಂಥಹ ಮಹಾನ್‌ ಗ್ರಂಥಗಳಿವೆ. ಚಲಂನಂತೆ, ರಜನೀಶ್‌ನಂತೆ ನನ್ನನ್ನು ಈ ಬೇಸರದಲ್ಲಿ , ದುಗುಡದಲ್ಲಿ ಸಂತೈಸಿ ಪೊರೆಯಲು ಇನ್ನೂ ಎಷ್ಟೆಷ್ಟು ಜನ ಅಲ್ಲಲ್ಲಿ ಅಡಗಿ ನಿಂತಿದ್ದಾರೋ?

ಈ ಸಲ ಅಂಥ ಪುಸ್ತಕದ ಗೂಡಿಗೆ ಕೈಯಿರಿಸಿದಾಗ ಅಕಸ್ಮಾತ್ತಾಗಿ ಕೈಗೆ ಸಿಕ್ಕಿದ್ದು ಖಲೀಲ್‌ ಗಿಬ್ರಾನ್‌. ಕನ್ನಡದಲ್ಲಿ ಅದನ್ನ ಬರೆದಿರುವವರು ಮೈಸೂರಿನ ಹಿರಿಯ ಮಿತ್ರರಾದ ಪ್ರಭುಶಂಕರ. ಅವರು, ನನ್ನ ಗೌರವ ಮತ್ತು ಪ್ರೀತಿಗೆ ಎಷ್ಟೋ ವರ್ಷಗಳಿಂದಲೂ ಈಡಾದವರು. ಅವರು ಎಷ್ಟು ಚೆನ್ನಾಗಿ ಬರೆಯಬಲ್ಲರು ಅಂತ ನನಗೆ ಗೊತ್ತು. ಆದರೆ ಗಿಬ್ರಾನ್‌ ಅಷ್ಟು ಚೆನ್ನಾಗಿ ಬದುಕಿದ್ದ ಅನ್ನೋದು ನನಗೆ ಗೊತ್ತಿರಲಿಲ್ಲ. ಸುಮಾರು ಒಂದು ನೂರು ಪುಟದ ಕನ್ನಡ ಪುಸ್ತಕ ಅದು. ಮುಖಪುಟ ಚೆನ್ನಾಗಿದೆಯಲ್ಲ ಅಂದುಕೊಂಡು, ಅದರ ಬೆನ್ನಿಗೆ ಕೈಯಿಟ್ಟೆ : ಅಷ್ಟೆ.

ಸುಖ
ದುಃಖ
ಬಂದು ನಿಮ್ಮೊಡನೆ
ಊಟಕ್ಕೆ ಕುಳಿತರೆ
ಮತ್ತೊಂದು ನಿಮ್ಮ
ಹಾಸಿಗೆಯ ಮೇಲೆ
ನಿದ್ರಿಸಿರುತ್ತದೆ

ಅನ್ನೋ ಸಾಲುಗಳು ಕಾಣಿಸಿದವು ನೋಡಿ. ನಾನು ಪುಸ್ತಕವನ್ನು ಒಂದೇ ಸಮನೆ ಓದತೊಡಗಿದೆ. ಗಿಬ್ರಾನ್‌ ನನ್ನನ್ನು ಹಾಡಿನಂತೆ ಆಕ್ರಮಿಸಿಕೊಳ್ಳತೊಡಗಿದ. ಆತನ ಬಗ್ಗೆ ನನಗೆ ಸ್ವಲ್ಪ ಬೆವರು ಬೆವರಾಗಿ ಗೊತ್ತಿತ್ತು. ಆತ ಮೂಲತಃ ಲೆಬನಾನಿ. ಅಮೆರಿಕದಲ್ಲೇ ಅಲೆದು ಬೆಳೆದರೂ, ಅವನ ಮನಸು ತಹತಹಿಸುತ್ತಿದ್ದುದು ಲೆಬನಾನ್‌ಗಾಗಿ. ಅವನ ಆಸಕ್ತಿಯ ಹೆಸರು ಪ್ರವಾದಿ ಏಸು. ಆದರೆ ಅವನು ಕ್ರಿಶ್ಚಿಯಾನಿಟಿಯಿಂದ ಆಚೆಗೆ ನಿಂತೇ ಕ್ರೈಸ್ಟ್‌ ನನ್ನು ಅರ್ಥ ಮಾಡಿಕೊಳ್ಳಬಲ್ಲವನಾಗಿದ್ದ. ಖಲೀಲ್‌ ಗಿಬ್ರಾನ್‌, ಏಸುವಿಗಿಂತ ಹೆಚ್ಚಾಗಿ ಮಹಮ್ಮದನನ್ನು ಅರ್ಥ ಮಾಡಿಕೊಂಡಿದ್ದ. ಹೀಗಾಗಿ ಅವನ ಕಲ್ಪನೆಯ ಪ್ರವಾದಿ ಮುಸ್ಲಿಮನಷ್ಟೆ ಆಗಿರಲಿಲ್ಲ, ಕೇವಲ ಕ್ರಿಸ್ತುವೂ ಆಗಿರಲಿಲ್ಲ.

ಖಲೀಲ್‌ ಗಿಬ್ರಾನ್‌ ಕವಿಯಾಗಿದ್ದ, ಚಿತ್ರ ಬರೆಯುವವನೂ ಆಗಿದ್ದ. ಕವಿತೆ ಮತ್ತು ಚಿತ್ರಗಳೆರಡೂ ನನ್ನ ಅವಳಿ ಮಕ್ಕಳು. ಯಾರನ್ನು ಹೆಚ್ಚು ಪ್ರೀತಿಸಲಿ ಹೇಳಿ ಅಂತ ನಮ್ಮನ್ನೇ ಕೇಳುತ್ತಿದ್ದ. ಮುಖ್ಯವಾಗಿ ಅವನ ಬಾಲ್ಯ ಚೆನ್ನಾಗಿತ್ತು. ಚೆನ್ನಾಗಿರುವಂತೆ ಅವನ ತಾಯಿ ಅದನ್ನು ನೋಡಿಕೊಂಡಿದ್ದಳು. ಆಕೆ ಇಬ್ಬರನ್ನು ಮದುವೆಯಾಗಿದ್ದವಳು. ಇವನು ಎರಡನೆಯಾತನ ಮಗ. ತಂದೆ ಮತ್ತು ಮಗ- ಇಬ್ಬರಿಗೂ ಒಂದೇ ಹೆಸರಿತ್ತು : ಖಲೀಲ್‌ ಗಿಬ್ರಾನ್‌. ಮಗನ ಬದುಕಿನ ಮೇಲೆ ಬಲು ದೊಡ್ಡ ಪ್ರಭಾವ ಬೀರಿದ್ದವಳು ಗಿಬ್ರಾನ್‌ನ ತಾಯಿ ಕಮಿಲಾ. ಆಕೆಯ ಬಗ್ಗೆ ಎಷ್ಟು ಚೆನ್ನಾಗಿ ಬರೆಯುತ್ತಾನೆ ಗೊತ್ತಾ ಗಿಬ್ರಾನ್‌? ನನ್ನ ತಾಯಿ ಅಸಂಖ್ಯಾತ ಕವನಗಳನ್ನು ಬಾಳಿದಳು. ಆದರೆ ಆಕೆ ಒಂದನ್ನೂ ಬರೆಯಲಿಲ್ಲ !

ಬಹುಶಃ ತಾಯಿಯ ಬಗ್ಗೆ ಇದಕ್ಕಿಂತ ರಿಚ್‌ ಆದ ಇಮ್ಯಾಜಿನೇಷನ್‌ ಇನ್ನೊಂದಿರಲಾರದು. ಬಹುಶಃ ಅವನ ತಾಯಿ ಕಮಿಲಾ ನಿಜಕ್ಕೂ ಹಾಗೆ ಬದುಕಿದ್ದಿರಬೇಕು. ಮಗ ಕೇವಲ ಥ್ಯಾಂಕ್ಸ್‌ ಹೇಳುತ್ತಾ ಹೋಗಿದ್ದಾನೆ. ನನ್ನ ಮಗ ಉಳಿದ

ಮಕ್ಕಳಂತಲ್ಲ. ಇವನು ಸೈಕಾಲಜಿಗೆ, ಸೈಕಿಯಾಟ್ರಿಗೆ, ಅವುಗಳ ವಿಶ್ಲೇಷಣೆಗೆ ಅರ್ಥವಾಗುವ, ನಿಲುಕುವ ಕೂಸಲ್ಲ. ಹಾಗಂತ ಗಿಬ್ರಾನ್‌ನ ತಾಯಿ ಅರ್ಥ ಮಾಡಿಕೊಂಡಿದ್ದಳು. ಸುರಿಯುವ ಭೋರು ಮಳೆಯಲ್ಲಿ ಬಟ್ಟೆ ಬಿಚ್ಚಿ ಬೀದಿ ಬೀದಿ, ಬಯಲು ಬಯಲು ಓಡುತ್ತಿದ್ದ ಮಗನನ್ನು ಮನೆಯವರ್ಯಾರೋ ಹಿಡಿದು ತಂದು ಮೈಯಾರೆಸುತ್ತಿದ್ದರೆ, ಆತುಂಟ ಮಗನ ಕೈಗೆ ಲಿಯನಾರ್ದೊ ದ ವಿಂಚಿಯ ಮಹಾನ್‌ ಚಿತ್ರಗಳಿದ್ದ ಪುಸ್ತಕ ಕೊಟ್ಟು, ಬಾಲ್ಯಕ್ಕೊಂದು ಕನಸನ್ನು ಕಟ್ಟಿಕೊಟ್ಟವಳು ಗಿಬ್ರಾನ್‌ನ ತಾಯಿ ಕಮಿಲಾ.

ಅಂಥ ತಾಯಿಯಾಬ್ಬಳು ಸಿಕ್ಕದೆ ಹೋಗಿದ್ದಿದ್ದರೆ ಖಲೀಲ್‌ ಗಿಬ್ರಾನ್‌ಗೆ ಪರ್ಫೆಕ್ಷನ್‌ನ ಕಡೆಗ ಕಣ್ಣು ತೆರೆದು ಕೊಳ್ಳುತ್ತಿರಲಿಲ್ಲ. ಮಗ ದಿನಗಟ್ಟಲೆ ಕೂತು ಬರೆದದ್ದನ್ನು ತಂದು, ಇನ್ನೇನು ಸಾವಿಗೆ ಹತ್ತಿರವಾಗಿ ನೆಲ ಹಿಡಿದು ಮಲಗಿರುತ್ತಿದ್ದ ತಾಯಿಯೆದುರು ಕೂತು ಓದಿ ಹೇಳುತ್ತಿದ್ದನಂತೆ. ಒಂದಕ್ಷರ ಬಿಡದೆ ಕಮಿಲಾ ಅದನ್ನೆಲ್ಲಾ ಕೇಳಿಸಿಕೊಂಡು, ತುಂಬಾ ಒಳ್ಳೇ ಪುಸ್ತಕ ಬರೆದಿದ್ದೀ ಗಿಬ್ರಾನ್‌, ಒಳ್ಳೆಯ ಕೃತಿ. ಆದರೆ ಅದಕ್ಕಿನ್ನೂ ಕಾಲ ಬಂದಿಲ್ಲ. ಸ್ವಲ್ಪ ಕಾದು ನೋಡಬೇಕು ಅಂದಿದ್ದಳಂತೆ. ಆಕೆಗಿಂತ ವಿಮರ್ಶಕ ಬೇಕೆ? ಕೃತಿ ಪಕ್ವವಾಗಿಲ್ಲ ಅನ್ನೋದು ಗಿಬ್ರಾನ್‌ಗೆ ತಕ್ಷಣ ಗೊತ್ತಾಯಿತು. ಆತ ಆ ಪುಸ್ತಕವನ್ನು ಅಂತಿಮವಾಗಿ ಮುಗಿಸುವ ಹೊತ್ತಿಗೆ, ಐದು ಸಲ ಬರೆದಿದ್ದನಂತೆ! ಪ್ರತೀ ಸಲ ನೂರಾರು ಪುಟ ಬರೆದ ಮೇಲೆ ಉಹುಂ, ಇದಲ್ಲ ನಾನು ಹೇಳಬೇಕು ಅಂದುಕೊಂಡದ್ದು ಅನ್ನಿಸುತ್ತಿತ್ತಂತೆ. ಬರೆದದ್ದನೆಲ್ಲ ಚೂರು ಚೂರು ಮಾಡಿ ಹರಿದೆಸೆಯುತ್ತಿದ್ದನಂತೆ. ಅವನು ಬರೆದ ಚಿತ್ರಗಳದೂ ಇದೇ ಸಿತಿ. ಪ್ರತಿ ಗೆರೆ ಎಳೆದಾಗಲೂ ಅದು ಫರ್ಫೆಕ್ಷನ್‌ನೆಡೆಗೆ ಮಿಡಿದ ಹಂಬಲದಂತಿರುತ್ತಿತ್ತು. ಹಾಗೆ ಪದೇ ಪದೇ ಬರೆದು ಪರ್ಫೆಕ್ಟಾದ ಕೆಲವು ಚಿತ್ರಗಳನ್ನೆಲ್ಲ ಒಂದು ಕಡೆ ಪ್ರದರ್ಶನಕ್ಹಿಟ್ಟರೆ, ಆ ಕಟ್ಟಡಕ್ಕೇ ಬೆಂಕಿ ಬಿದ್ದು ಅವೆಲ್ಲ ಸುಟ್ಟುಹೋದವು. ಗಿಬ್ರಾನ್‌ ಪೇಚಾಡಲಿಲ್ಲ. ಸುಮ್ಮನೆ ತನಗೆ ತಾನು ಹೇಳಿಕೊಂಡ: ನನ್ನ ಕಲೆ ಇನ್ನೂ ಪಕ್ವವಾಗಿಲ್ಲ.

ಹಾಗೆ ಹೋಪ್‌ಫುಲ್‌ ಆಗಿ ಯೋಚಿಸುವುದಕ್ಕೆ ಬಹುಶಃ ಕೆಲವೇ ಕೆಲವು ಜನಕ್ಕೆ ಮಾತ್ರ ಬರುತ್ತದೆ. ಅಂಥವರು ಲೇಖಕರಾದಾಗ, ನನ್ನಂಥ ಬಲಹೀನರನ್ನ, ನಿಶ್ಯಕ್ತರನ್ನ, ಅರಿವುಗೇಡಿಗಳನ್ನ ಪೊರೆಯಬಲ್ಲ ಚಲಂಗಳೂ, ಓಶೋಗಳೂ, ಖುಶ್ವಂತರೂ ಆಗುತ್ತಾರೆ. ಒಂದು ಕಡೆ ಖಲೀಲ್‌ ಗಿಬ್ರಾನ್‌ ಅದೆಂಥ ಹೋಪ್‌ ಮೂಡುವಂತೆ ಬರೆಯುತ್ತಾನೋ ನೋಡಿ:

ಮೃತ್ಯು ಕೈ ಚಾಚುತ್ತದೆ. ನಿನ್ನನ್ನು ಅಪ್ಪಳಿಸುತ್ತದೆ. ಅದರ ರಭಸಕ್ಕೆ ನಿನಗೆ ನೋವಾಗುತ್ತದೆ. ಆದರೆ ಒಂದು ಹಗಲು ಒಂದು ರಾತ್ರಿ ಕಳೆದ ಮೇಲೆ ಬದುಕಿನ ಬೆರಳುಗಳು ನಿನ್ನನ್ನು ನೇವರಿಸುತ್ತವೆ. ನೀನು ಮತ್ತೆ ನಗಬಹುದು, ಸಂತೋಷಪಡಬಹುದು. ವಿಧಿ ಇದ್ದಕ್ಕಿದ್ದಂತೆ ನಿನ್ನ ಮೇಲೆ ಎರಗುತ್ತದೆ. ಕಣ್ಣನ್ನು ಅರಳಿಸಿ ನಿನ್ನನ್ನು ನೋಡುತ್ತದೆ. ನಿನ್ನ ಕೊರಳನ್ನು ಮುಷ್ಠಿಯಲ್ಲಿ ಕಿವುಚುತ್ತದೆ. ನೆಲಕ್ಕೆ ಬೀಳಿಸುತ್ತದೆ. ತನ್ನ ಕಬ್ಬಿಣದ ಪಾದಗಳಿಂದ ನಿನ್ನನ್ನು ತುಳಿಯುತ್ತದೆ, ನಗುತ್ತ ಹೊರಟು ಹೋಗುತ್ತದೆ. ಆದರೆ ಮತ್ತೆ ವಿಧಿ ಹಿಂತಿರುಗುತ್ತದೆ. ನಿನ್ನ ಕ್ಷಮೆ ಬೇಡುತ್ತದೆ. ತನ್ನ ಬೆರಳಿನ ರೇಷ್ಮೆಯ ಸ್ಪರ್ಷದಿಂದ ನಿನ್ನನ್ನು ಮೇಲೆತ್ತುತ್ತದೆ, ಆಸೆಯ ಹಾಡನ್ನು ಹಾಡುತ್ತದೆ.

ನಿಜವಾದ ಜ್ಞಾನಿ ಮಾತ್ರ ಹೀಗೆ ಬರೆಯಬಲ್ಲ. ಹೋಪ್‌ ಹುಟ್ಟಿಸಬಲ್ಲ. ಇವತ್ತು ನನ್ನನ್ನು ಕವಿದಿರುವ ಈ ಉದಾಸೀನ, ವಿನಾಕಾರಣದ ಬೇಸರ ಮತ್ತು ಖಿನ್ನತೆಗಳಿಂದ ನನ್ನನ್ನು ಖಲೀಲ್‌ ಗಿಬ್ರಾನ್‌ ಮಾತ್ರ ಹೊರತರಬಲ್ಲ ಅನ್ನಿಸಿದ್ದರಿಂದ ನೂರು ಪುಟಗಳ ಆ ಪುಸ್ತಕವನ್ನು ಪದೇ ಪದೇ ಓದಲು ಇಟ್ಟುಕೊಂಡಿದ್ದೇನೆ. ಇದನ್ನೆಲ್ಲ ಪುಸ್ತಕದ ಲೇಖಕರಾದ ಪ್ರಭುಶಂಕರರಿಗೆ ಪತ್ರ ಬರೆದು ತಿಳಿಸೋಣ ಎಂದುಕೊಂಡಿದ್ದೆ. ನಮ್ಮೊಂದಿಗೆ ಶೇರ್‌ಮಾಡಿಕೊಂಡರೆ ಹೆಚ್ಚು ಉಪಯುಕ್ತ ಅನ್ನಿಸಿ ಇದನ್ನೆಲ್ಲ ಬರೆದೆ. ಸಾಧ್ಯವಾದರೆ ಪುಸ್ತಕವನ್ನು ನೀವೂ ತಂದುಕೊಡು ಓದಿ. ನ. ರವಿಕುಮಾರ್‌, ಅಭಿನವ, 17/18-2, ಮೊದಲನೆ ಮುುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40 ಈ ವಿಳಾಸಕ್ಕೆ ಬರೆದರೆ ಪುಸ್ತಕ ಕಳಿಸುತ್ತಾರೆ. ಬೆಲೆ ಕೂಡ ಹೆಚ್ಚಿನದಲ್ಲ ; ಅರವತ್ತು ರೂಪಾಯಿ.

ಇಂಥದ್ದೊಂದು ಪುಸ್ತಕ ಪ್ರಕಟಿಸಿದವರು ರವಿಕುಮಾರ್‌ ಮತ್ತು ಚಂದ್ರಿಕಾ. ನನಗಿಂತ ಚಿಕ್ಕವರು. ನನಗೆ ಆತ್ಮೀಯರು. ಚಂದ್ರಿಕಾ ನನ್ನ ಬಂಧುಗಳ ಪೈಕಿ ಹುಡುಗಿ. ನಾನು ಕನ್ನಡಪ್ರಭದಲ್ಲಿ ನೌಕರಿ ಮಾಡಿಕೊಂಡು ವಿಲ್ಸನ್‌ ಗಾರ್ಡನ್‌ನ ರೂಮಿನಲ್ಲಿ ಒಂದು ಬಾವಲಿಯಂತೆ ಬದುಕುತ್ತಿದ್ದ ದಿನಗಳಲ್ಲಿ ರವಿಕುಮಾರ್‌, ಅವಳ ಪ್ರೇಮದಲಿ ತೇಲಿ ಮುಳುಗಿ ಗುರುಗಳೇ, ನನ್ನ ಮದುವೆ ಆಗದಿದ್ರೆ ಗತಿಯೇನೂ! ಅಂತ ಹಲುಬುತ್ತಾ ನನ್ನ ರೂಮಿಗೆ ಬರುತ್ತಿದ್ದ.

ಚಂದ್ರಿಕಾಳ ಅಪ್ಪ ಮೊದಲ ಸುತ್ತಿನ ಮಾತುಕತೆಯಲ್ಲಿ ಮಗಳನ್ನು ಕೊಡಲ್ಲ ಅಂದಿದ್ದಾಗ, ಇದೇ ರವಿಕುಮಾರ್‌ ಕತೆ ಬರೀತೀನಿ ಗುರುಗಳೇ.. ದುಃಖದ ಕತೆಗಳನ್ನ! ಅಂತ ಹೆದರಿಸುತ್ತಿದ್ದ. ಕಡೆಗೆ ನನ್ನ ಮಾವ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು,, ಇತರೆ ನೆಂಟರಿಷ್ಟರು, ಪರೋಕ್ಷವಾಗಿ ನಾನು- ಎಲ್ಲ ಸೇರಿ ಚಂದ್ರಿಕಾಳ ತಂದೆಯನ್ನು ಒಪ್ಪಿಸಿದೆವು. ಈಗ ಇಬ್ಬರೂ ಆಭಿನವ ಅಂತ ಒಂದು ಪ್ರಕಾಶನ ಸಂಸ್ಥೆ ಮಾಡಿಕೊಂಡು ಒಂದಾದ ಮೇಲೊಂದರಂತೆ ಪುಸ್ತಕಗಳನ್ನು ಪ್ರಕಟಿಸುತ್ತಾ, ಮಕ್ಕಳನ್ನು ಹೆರುತ್ತಾ ನೆಮ್ಮದಿಯಾಗಿದ್ದಾರೆ. ಸದ್ಯ, ರವಿಕುಮಾರ್‌ ಕತೆ ಬರೀತೀನಿ ಗುರುಗಳೇ ಅಂತ ಹೆದರಿಸ್ತಾ ಇಲ್ಲ. ಆದರೆ ಎದುರಿಗೆ ಸಿಕ್ಕಾಗೊಮ್ಮೆ ನಮ್ಮ ಸಂಸ್ಥೆಗೆ ಏನಾದರೂ ಬರ್ಕೊಡಿ ಗುರುಗಳೇ.. ಅನ್ನುತ್ತಲೇ ಇರುತ್ತಾನೆ. ಅವನ ಮತ್ತು ಚಂದ್ರಿಕಾಳ ಪ್ರೀತಿ ದೊಡ್ಡದು.

ಈ ಮಧ್ಯೆ ಲಲಿತೆ ತನ್ನ ಪುಸ್ತಕ ಬರೆಯಿಸಿಕೊಟ್ಟಿದ್ದಾಳೆ. ಇವನೊಂದಿಗೆ ಇಪ್ಪತ್ತೈದು ವರ್ಷ ಅಂತ. ಮೊದಲೇ ಓದಿದರೆ ಅಲ್ಲಲ್ಲಿ ಎಡಿಟ್‌ ಮಾಡುವ ದುರ್ಬುದ್ಧಿ ಬಂದೀತು ಅನ್ನಿಸಿ ಹಾಗೆ ಪ್ರಿಂಟಿಗೆ ಕಳಿಸಿದ್ದೇನೆ. ಜೂನ್‌ 20ರ ಸಂಜೆ ಆ ಪುಸ್ತಕವೂ ಪ್ರಕಟವಾಗುತ್ತದೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X