• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮನ್ನೆಲ್ಲ ಸಾಕಿ ದೊಡ್ಡವರನ್ನ ಮಾಡೋಕೆ ಎಷ್ಟು ಕಷ್ಟ ಪಟ್ವಿ ಗೊತ್ತಾ -ಅನ್ನುವ ಮುನ್ನ !

By Staff
|
Ravi Belagere on Thatskannada.com ರವಿ ಬೆಳಗೆರೆ
ಇವರನ್ನೆಲ್ಲ ಸಾಕಿ ದೊಡ್ಡೋರನ್ನ ಮಾಡೋದಕ್ಕೆ ಎಷ್ಟು ಕಷ್ಟ ಪಟ್ಟೆ ಗೊತ್ತಾ ? ಅನ್ನುವ ತಾಯಂದಿರನ್ನು ನೋಡಿದಾಗ ನೀವೇ ಪುಣ್ಯವಂತರು ಬಿಡಿ ಅಂದು ಕೊಂಡು ಸುಮ್ಮನಾಗುತ್ತೇನೆ. ಏಕೆಂದರೆ, ಅವರು ಕಷ್ಟಪಟ್ಟದಕ್ಕೆ ಅದರ ಫಲ ಎದುರಿಗೇ ಇದೆ. ಅವರ ಮಕ್ಕಳು ದೊಡ್ಡವರಾಗಿದ್ದಾರೆ. ಆದರೆ ಯಾವತ್ತಿಗೂ ದೊಡ್ಡವರೇ ಆಗದ ಮಕ್ಕಳನ್ನು ಸಾಕುವ, ಅವರಿಗಾಗಿ ಕಷ್ಟಪಡುವ ತಾಯಂದಿರನ್ನು ನೀವು ನೋಡಿದ್ದೀರಾ?

ಆ ಮಗು ನಗುವುದಿಲ್ಲ. ದುಃಖದ ಸಂಗತಿಯೆಂದರೆ ಅಳುವುದೂ ಇಲ್ಲ. ಬೀಳಬೇಕಾದ ವಯಸ್ಸಿಗೆ ಬೋರಲು ಬೀಳುವುದಿಲ್ಲ. ಅಸಲು ಮಾತೇ ಬಾರವು. ಅಮ್ಮನನ್ನೂ ಅದು ಗುರುತಿಸುವುದಿಲ್ಲ. ಅದು ಮನೋವಿಕಲ ಕೂಸು. ಅಂಥ ಮಗುವನ್ನು ಯಾರೂ ಎತ್ತಿಕೊಳ್ಳಬಯಸುವುದಿಲ್ಲ. ಅದು ಯಾವ ಸ್ಪರ್ಧೆಯಲ್ಲೂ ಭಾಗವಹಿಸುವುದಿಲ್ಲ. ಅದಕ್ಕೆ ನೋವಾಯಿತಾ? ಸಂತೋಷವಾಯಿತಾ? ಹಸಿವಾಯಿತಾ? ಯಾವುದೂ ಗೊತ್ತಾಗುವುದಿಲ್ಲ. It is spastic

Is your Baby growing well?ಆದರೂ ಅಂಥ ಮಗು ಮನೆಗೊಂದು ಸಂತೋಷ ತಂದಿರುತ್ತದೆ. ಬೇರೆಯವರು ಅದನ್ನು ಗುರುತಿಸಲಿಕ್ಕಿಲ್ಲ. ಅದರ ತಾಯಿಗದು ತನ್ನದೇ ಆದ ರೀತಿಯಲ್ಲಿ ಯಾವಾಗಲೋ ತನಗೆ ಬೇಕಾದಾಗ-ತನಗೆ ಸಾಧ್ಯವಾದಾಗ ಅಂಥದೊಂದು ಸಂತೋಷವನ್ನು ಕೊಡಮಾಡಿರುತ್ತದೆ. ‘ನೋಡ ಬರ್ರೀ ಇಲ್ಲೀ ಕೂಸು ಬಾರಲು ಬಿದ್ದದಾ... ’ ಅಂತ ಗಂಡನನ್ನು ಕರೆದು ತೋರಿಸಿ ದಿವ್ಯ ಸಂಭ್ರಮ ಅನುಭವಿಸುವ ಆ ಮಗುವಿನ ತಾಯಿಗೆ, ತನ್ನ ಮಗು ತೀರ ತಡವಾಗಿ, ಎದ್ದು ಓಡಾಡ ಬೇಕಾದ ವಯಸ್ಸಿನಲ್ಲಿ ಈಗಿನ್ನೂ ಬಾರಲು ಬಿದ್ದಿದೆಯಲ್ಲಾ ಅನ್ನಿಸುವುದಿಲ್ಲ. ಆಕೆಯ ಪಾಲಿಗೆ ಅವತ್ತೇ ಏಳನೆಯ ತಿಂಗಳು. ಅವತ್ತೇ ಮನೆಯಲ್ಲಿ ಉಗಾದಿ. ಅದಕ್ಕಿಂತ ಇನ್ನೊಂದು ಸಂಭ್ರಮ ಬೇಡ.

ನನ್ನ ಜೊತೆಗೆ ಹುಡುಗನೊಬ್ಬ ಒಂದಿಷ್ಟು ದಿನ ಕೆಲಸ ಮಾಡುತ್ತಿದ್ದ. ಮಧ್ಯೆ ಬಿಟ್ಟು ಹೋದ. ಮತ್ತೆ ಬಂದ. ಏನೋ ನಿಂದು ಕಷ್ಟಾ ? ಅಂದೆ. ‘ಏನಿಲ್ರೀ ಸರ್‌, ಊರಲ್ಲೇ ಹೇಗೋ ಜೀವನ ಮಾಡಬಹುದು. ಆದರೆ ನಮಗೊಂದು ಮಗು ಹುಟ್ಟಿದೆ. ಬೆಂಗಳೂರಿನಲ್ಲಿದ್ರೆ ಅದಕ್ಕೆ ಟ್ರೀಟ್‌ಮೆಂಟ್‌ ಕೊಡಿಸಬಹುದು. ನಿಧಾನವಾಗಿ ಬೆಳೆದು ನಾರ್ಮಲ್‌ ಆಗುತ್ತೆ ಅಂದಿದ್ದಾರೆ ಡಾಕ್ಟ್ರು. ನೀವೊಂದು ನೌಕರಿ ಕೊಟ್ರೇ...’ ಅಂದ. ತಕ್ಷಣ ನೌಕರಿ ಕೊಟ್ಟೆ. ಆದರೆ ಕೆಲವೇ ದಿನಗಳಲ್ಲಿ ಹೊಸ ಬೇಡಿಕೆಯಿಟ್ಟ. ನಾನು ಮನೇಲೇ ಕೂತು ಕೆಲಸ ಮಾಡ್ತೀನಿ. ವಾರಕ್ಕೊಂದು ಸಲ ಬರೆದದ್ದನ್ನೆಲ್ಲ ತಂದು ಕೊಡ್ತೀನಿ ಅಂದ. ಕೆಲಸ ಬಿಟ್ಟು ಹೋಗು ಅನ್ನ ಬೇಕೆನ್ನಿಸಿತು. ಆದರೆ ಹುಡುಗ ಕಾರಣ ಹೇಳಿದ.

‘ಪಾಪು ಜೊತೇಲಿ ತುಂಬ time spend ಮಾಡಿ ಅಂತಾರೆ ಡಾಕ್ಟ್ರು. ಹಾಗೆ ಜೊತೇಲಿ ನಾನು-ನನ್ನ ಹೆಂಡ್ತಿ ಜಾಸ್ತಿ ಹೊತ್ತು ಇದ್ದದ್ದೇ ಆದರೆ ಮಗು ಬೇಗ ಮಾನಸಿಕವಾಗಿ ಬೆಳೆಯುತ್ತಂತೆ. ಈಗಾಗಲೇ ಅದು ಅವರಮ್ಮನನ್ನು ಗುರ್ತ ಹಿಡಿತಾಳೆ. ನೀವು ಇದೊಂದು ಫೆಸಿಲಿಟಿ ಮಾಡಿಕೊಟ್ಟರೆ, ನಾನು ಇಡೀ ದಿನ ಕೂಸಿನ ಜೊತೇಗಿರ್ತೀನಿ. ಪಾಪು ಬೇಗ ಬೆಳಿತದೆ...’ ಅಂದ.

ಇಲ್ಲವೆನ್ನಲಾಗಲಿಲ್ಲ. ವಾರಕ್ಕೊಮ್ಮೆ ಬಂದು ಬರೆದದ್ದನ್ನು ಕೊಟ್ಟು ಹೋಗುತ್ತಿದ್ದ. ಹಾಗೆ ಬಂದಾಗಲೆಲ್ಲ ಪಾಪೂ ಬಗ್ಗೆ ಹೇಳುತ್ತಿದ್ದ. ಆಮೇಲೆ ಒಂದು ದಿನ, ‘ನಂಗೆ ಬೇರೆ ನೌಕರಿ ಸಿಕ್ಕಿದೆ. ಹೋಗ್ತಿದೀನಿ. ಸ್ವಲ್ಪ ಸಂಬಳ ಜಾಸ್ತಿ ಸಿಗುತ್ತೆ. ಪಾಪು ಟ್ರೀಟ್‌ಮೆಂಟಿಗೆ ಸಹಾಯ ಆಗುತ್ತೆ ಬೇಜಾರು ಮಾಡ್ಕೋಬೇಡಿ’ ಅಂದ. ಸಂತೋಷದಿಂದ ಕಳಿಸಿಕೊಟ್ಟೆ. ಅನಂತರ ಅವನನ್ನು ಮರೆತು ಬಿಟ್ಟೆ. ನನ್ನ ದಿಗದಿಗ ಓಡುವ ರೈಲಿನಂಥ ಬದುಕಿಗೆ, ಮಧ್ಯೆ ಇಳಿದು ಹೋದವರನ್ನು ತುಂಬ ನೆನಪು ಮಾಡಿಕೊಳ್ಳುವಷ್ಟೂ ಪುರುಸೊತ್ತಾಗುವುದಿಲ್ಲ. ಆದರೆ ಅದೇ ಹುಡುಗ ಇತ್ತೀಚೆಗೊಂದು ದಿನ ಹೆಂಡತಿಯನ್ನೂ, ಮಗುವನ್ನೂ ಕರೆದುಕೊಂಡು ಬಂದಿದ್ದನಲ್ಲ ? I got emotional. ಅವನ ಕೈಲಿ ಆಲ್ಬಮ್‌ಯಿತ್ತು.

‘ಈ photo ನೋಡ್ರಿ ಸಾರ್‌. ಪಾಪೂಗೆ ನಿಲ್ಲಾಕ ಬರತಿರಲಿಲ್ಲ. ಬೆನ್ನಿಗೆ ಕುರ್ಚಿ ಕೊಟ್ಟು ನಿಲ್ಲಿಸಿ ತೆಗೆಸಿದ photo ಇದು. ಮುಂದೆ ತಾನೇ ಗೋಡೆಗೆ ನಿಂತಾಗ ತೆಗಿಸಿದ್ದು ಈ ಪೋಟೋರೀ. ಏನೇನೂ ಸಪೋರ್ಟಿಲ್ಲದಂಗೆ ತಾನೇ ಎದ್ದು ನಿಂತ ಪೋಟೋ ಇದು ನೋಡ್ರೀ. ಇವಾಗ ಈಕಿ ಮಾತಾಡಿದ್ರೆ ತಿರುಗಿ ನೋಡ್ತಾಳ್ರೀ ಪಾಪೂ. ನನ್ನೂ ಗುರ್ತ ಹಿಡೀತಾಳ್ರೀ. ಎಲ್ಲ ನಿಮ್ಮ ಆಶೀರ್ವಾದ ಸರ್‌. ನೀವು ಅನುಕೂಲ ಮಾಡಿಕೊಟ್ರಿ...’ ಅಂತೆಲ್ಲ ಅವನು ಅನ್ನುತ್ತಿದ್ದಂತೆಯೇ ನನ್ನ ಕಣ್ಣು ತೇವವಾಗತೊಡಗಿದ್ದವು.

ಸಣ್ಣ ಸಂತೋಷಗಳನ್ನು ನಾವು ಇಷ್ಟೆಲ್ಲ enjoy ಮಾಡಿದೆವಾ, ನಮ್ಮ ಮಕ್ಕಳು ಚಿಕ್ಕವರಿದ್ದಾಗ ಎಷ್ಟು ಗೊಣಗಿದೆವು. ಅವರು ಫೇಲಾದಾಗ? ಅವರು ಖಾಯಿಲೆ ಬಿದ್ದಾಗ? ಅವರು ಕಡಿಮೆ ಮಾರ್ಕು ತಂದಾಗ ನೋಡೋ ಹಾಗಿದ್ದವಾ ನಮ್ಮ ಮುಖಗಳು? ಮಗಳು ಯಾರನ್ನೋ ಪ್ರೀತಿಸಿದಳು ಅಂತ ಗೊತ್ತಾದ ಕೂಡಲೇ ವಂಶಗೌರವವೇ ಹೋಯಿತೇನೋ ಎಂಬಂತೆ ಅಪ್ಪ ಕಿಡಿಕಿಡಿ. ಮಗ ಇಂಜಿನೀಯರಿಂಗ್‌ಗೆ ಅರ್ಹನಾಗಲಿಲ್ಲ ಅಂದ ದಿನ ತಾಯಿ ಶೋಕಮಾತೆ. ನಾವೇಕೆ ಆ ದಂಪತಿಗಳ ಹಾಗೆ ಸಣ್ಣದಕ್ಕೂ ಸಂತೋಷಪಡುವುದನ್ನು ಮುಂದುವರೆಸಲಿಲ್ಲ ? ನೀವು ಚಿಕ್ಕವರಿದ್ದಾಗ ನಾವು ‘ಪಟ್ಟ ಕಷ್ಟ ನಿಮಗೇನ್ರೋ ಗೊತ್ತೂ...’ ಅಂತ ಯಾಕೆ ಕಡೆತನಕ ಊಳಿಡುತ್ತೇವೆ?

ಯಾಕೆ ಅಂದರೆ, ನಮ್ಮ ಪಾಪು ಬೋರಲಾಗಿದ್ದು, ಎದ್ದು ನಿಂತದ್ದು, ಓಡಾಡಿದ್ದು-ಎಲ್ಲವನ್ನು ತಂತಾನೆ ಮಾಡಿಕೊಂಡಿತು. ತನ್ನ ಪಾಡಿಗೆ ಓದಿಕೊಂಡಿತು. ತಾನೇ ಶಾಲೆಯಲ್ಲಿ ಡಾನ್ಸ್‌ ಮಾಡಿತು. ತಾನೇ ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಯಿತು. ಈಗ ಇಂಜಿನಿಯರಿಂಗ್‌ಗೆ ಅರ್ಹಳಾಗಲಿಲ್ಲ. ಈಗ ನಮ್ಮ ಮಾತು ಕೇಳುವುದಿಲ್ಲ, ಈಗ ಎದುರು ಮಾತಾಡುತ್ತದೆ. ‘ನಿಮಗೋಸ್ಕರ ನಾವು ಪಟ್ಟ ಕಷ್ಟಾ...’ ಅಂತ ಆದೇ ರಾಗ ಪ್ರತಿನಿತ್ಯ ಹಾಡುತ್ತೇವೆ.

ಸ್ವಲ್ಪ ಅದರ ಬಗ್ಗೆ ಯೋಚಿಸಿ? ಅವರ ಮಗುವಿಗೆ ಸ್ವತಂತ್ರವಾಗಿ toilet ಹೋಗಿಬರುವುದನ್ನು ಕಲಿಸುವುದಕ್ಕೆ ಅವರೆಷ್ಟು ಕಷ್ಟ ಪಟ್ಟರು? ಅವರ ಮಗಳು ದೈಹಿಕ ದೊಡ್ಡವಳಾಗಿ ಮಾನಸಿಕವಾಗಿ ಇನ್ನು ಮಗುವಾಗಿಯೇ ಉಳಿದಾಗ-ಆವಳಿಗೆ ಪ್ರತೀ ತಿಂಗಳು ಸ್ಯಾನಿಟರಿ ಪ್ಯಾಡ್‌ ಧರಿಸುವುದನ್ನು ಹೇಳಿಕೊಡುವುದು ಎಷ್ಟು ಕಷ್ಟ? ನೀವು imagine ಮಾಡಿದ್ದೀರಾ-ಒಬ್ಬ ಮನೋವಿಕಲ ಮಗನನ್ನು ಬೀದಿಯ ಜನ ಅಟ್ಟಿಸಿಕೊಂಡು ಬಂದು, ಕಲ್ಲು ತೂರಿ, ಗೇಲಿ ಮಾಡಿದಾಗ ಅವನ ತಾಯಿಗಾಗುವ ಕಷ್ಟ ಎಂಥದ್ದು ಅಂತ?

ಅಂಥ ಕಷ್ಟದ ನಡುವೆಯೂ ಆ ತಾಯಂದಿರು ಮಾತಾಡಿಕೊಳ್ಳುತ್ತಿರುತ್ತಾರೆ; ‘ನೋಡ್ಲಿಕ್ಕೆ ಹೀಗಿದ್ರೂ ಎಷ್ಟು ವಿಷ್ಯ ಗೊತ್ತಾಗುತ್ತೆ ಗೊತ್ತಾ ನಮ್ಮ ಶಾಮಣ್ಣಂಗೆ? ಒಂದು ಸಲ ಕೇಳಿದರೆ ಸಾಕು, ದನಿ ಗುರ್ತು ಇಟ್ಕೊಂಡು ಬಿಡ್ತಾನೆ. ಕ್ರಿಕೆಟ್‌ ಕೂಡ ಅರ್ಥವಾಗುತ್ತೆ. ಮನೇಗ ಯಾರು ಬಂದ್ರು, ಯಾರು ಹೋದ್ರು ಎಲ್ಲಾ ತಿಳೀತದೆ ಇದಕ್ಕೆ. ಏನೋ ದುರದೃಷ್ಟ. ಎಲ್ಲಾರ ಹಂಗೆ ಹುಟ್ಟಿದ್ದಿದ್ರೆ ಇಷ್ಟೊತ್ತಿಗೆ ಎದೆ ಎತ್ರ ಬೆಳೆದ ಮಗ!’

ಹಾಗನ್ನುವಾಗಲೂ ಅವರ ಕಣ್ಣಲ್ಲಿ ನೀರೂರುವುದಿಲ್ಲ. ಏಕೆಂದರೆ, ಅವರು ಪಟ್ಟ ಸಣ್ಣ ಪುಟ್ಟ ಸಂತಸಗಳು ಆವರಿಗೆ ಜೀವನಪೂರ್ತಿ ನೆನಪಿರುತ್ತವೆ. ನಾವೇ, ಮಾನಸಿಕವಾಗಿ ಬೆಳೆಯದವರು: ನಮ್ಮ ಮಕ್ಕಳು ಕೊಟ್ಟ ದೊಡ್ಡ ದೊಡ್ಡ ಸಂತೋಷಗಳನ್ನು ಮರೆತು, ‘ನಿಮಗೋಸ್ಕರ ಎಷ್ಟು ಕಷ್ಟ ಪಟ್ಟಿದೀವಿ ಗೊತ್ತಾ...’ ಅಂತ ಹಲುಬುತ್ತಿರುತ್ತೇವೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more