• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಕ್ಕಾಗಿ ಕೈ ಎತ್ತು ಕಂದಾ : ಹ್ಯಾಂಡ್ಸಪ್‌ ಅಂದಾಗಿದೆ!

By Staff
|
Ravi Belagere on Thatskannada.com ರವಿ ಬೆಳಗೆರೆ
ಬೇರೆ ದಾರಿಯಿಲ್ಲ . ಕನ್ನಡಿಗರು ಕೈ ಎತ್ತಲೇಬೇಕಾಗಿದೆ. ಏಕೆಂದರೆ, ಪರಭಾಷೆಯ ಮಂದಿ ಬೆನ್ನ ಹಿಂದೆ ಬಂದೂಕಿಟ್ಟು ಹ್ಯಾಂಡ್ಸಪ್‌ ಅಂದಾಗಿದೆ. ಕರ್ನಾಟಕಕ್ಕೆ ಹಿಂದಿ ಮತ್ತು ಇತರೆ ಭಾಷೆಯ ಸಿನಿಮಾಗಳು ಮೂರು ವಾರ ಬಿಟ್ಟು ಬಂದರೆ, ಆರು ಪ್ರಿಂಟು ಮಾತ್ರ ತಂದರೆ ಅಲ್ಲಿಗೆ ಚಿತ್ರೋದ್ಯಮದ ಮಂದಿ ‘ಕನ್ನಡ ನೆಲ ಜಲ ನಾಡು ನುಡಿಯ ರಕ್ಷಣೆಗಾಗಿ’ ಮಾಡಿದ ಹೋರಾಟ ಯಶಸ್ವಿಯಾಗುತ್ತದೆ.

ಆಮೇಲೆ ಕನ್ನಡದ ಗತಿ ಏನು?

ಸಿನೆಮಾದವರ ಹೋರಾಟವನ್ನು ‘ಕನ್ನಡ ಸಿನೆಮಾ ಹೋರಾಟ’ ಅಂತ ಕರೆಯುವುದು ಒಳ್ಳೆಯದು. ಅದನ್ನವರು ಫಿಲ್ಮ್‌ ಛೇಂಬರಿನಲ್ಲಿ ಕುಂತು ಮಾಡಿದರೂ, ವಿಧಾನಸೌಧದ ಅಂಗಳಕ್ಕೆ ಬಂದು ಮಾಡಿದರೂ- ಪರಿಣಾಮ ಒಂದೇ. ಕನ್ನಡ ಸಿನೆಮಾಗಳಿಗೆ ಒಳ್ಳೆಯದಾಗುತ್ತದೆ. ಅವರು ಅರ್ಧಗಂಟೆ ಗುಡುಗಿದರೂ ಸಾಕು. ಥಿಯೇಟರ್‌ ಮಾಲೀಕರ ಪುಂಗಿ ಬಂದಾಗುತ್ತದೆ. ಆದರೂ ಏನೋ ಉತ್ಸಾಹ. ಸಾವಿರಾರು ಮಂದಿಯನ್ನು ಕಟ್ಟಿಕೊಂಡು ಆಗಾಗ ಕನ್ನಡ ಸಿನೆಮಾ ಮಂದಿ ಬೀದಿಗೆ ಬರುತ್ತಿರುತ್ತಾರೆ. ಬರಲಿ. ಅವರನ್ನು ನೋಡಬೇಕು ಅಂದುಕೊಂಡವರು ಹೋಗಿ ನೋಡಲಿ.

ಆದರೆ ನಿಜವಾದ ಕನ್ನಡದ ಸಂಕಟ ಈ ಸಿನೆಮಾ ಮಂದಿಯಾಚೆಗೆ, ಅವರ ನಿಲುಕಿನಿಂದ ತುಂಬ ದೂರದಲ್ಲಿದೆ. ತುಂಬ ಗಂಭೀರವಾಗಿದೆ. ತೆಲುಗು ನಿರ್ದೇಶಕರು, ತಮಿಳು ನಟಿಯರು, ಹಿಂದಿ ಕಥೆ, ಮಲಯಾಳೀ ಕೆಮರಾಮನ್‌, ತೆಲುಗು ಗಾಯಕಿಯರು, ವಿದೇಶದಲ್ಲಿ ಷೂಟಿಂಗು-ಏನ್ಸಾರ್‌ ಇದೂ? ಅಂತ ಕೇಳಿ ನೋಡಿ. ನಮ್ಮ ನಟ ನಟಿಯರ ಮನೆಗಳಲ್ಲಿ, ಅವರ ಸ್ವಂತದ ಷೂಟಿಂಗ್‌ ಯೂನಿಟ್ಟುಗಳಲ್ಲಿ ಎಷ್ಟು ಜನ ಕನ್ನಡದ ಹುಡುಗರು ಕೆಲಸ ಮಾಡುತ್ತಾರೆ ಅಂತ ಲೆಕ್ಕ ಹಾಕಿನೋಡಿ. ಕನ್ನಡ ನೆಲ-ಜಲಕ್ಕಾಗಿ ಅವರು ಕೊಡುವ ಹೇಳಿಕೆಗಳಿಗೂ, ಅವರ ದೈನಂದಿನ ಬದುಕಿಗೂ ಸಂಬಂಧವೇ ಇರುವುದಿಲ್ಲ . ಅವರ ‘ಸಿನೆಮಾ ಮೇಕಿಂಗು’ ಅದು ಅಪ್ಪಟ ವ್ಯವಹಾರ. ಅವರ ವ್ಯಾಪಾರಕ್ಕೆ ತೊಂದರೆಯಾದಾಗ, ಸ್ಪರ್ಧೆ ಸಹಿಸದಾದಾಗ, ಸಿನೆಮಾಗಳು ಸೋತು ಡಬ್ಬಾ ಸೇರಿದಾಗ ಅವರ ಬಾಯಲ್ಲಿ ‘ಹಚ್ಚೇವು ಕನ್ನಡದ ದೀಪ!’

ಹಚ್ಚಿಕೊಳ್ಳಲಿ. ಅವರ ಪಾಡಿಗವರನ್ನು ಬಿಟ್ಟುಬಿಡೋಣ.

The real challenges of Kannada and Cinema movementನಿಮಗೆ ಆಶ್ಚರ್ಯವಾಗಬಹುದು. ಬೆಂಗಳೂರಿನಲ್ಲಿ ಶಿವಾಜಿನಗರ ದಾಟಿ ಆಚೆಗೆ ಹೋದರೆ ಅಲ್ಲಿರುವ ಸುಮಾರು ಒಂದು ನೂರು ಅಂಗಡಿಗಳ ಪೈಕಿ ಯಾವ ಅಂಗಡಿಯಲ್ಲೂ ಕನ್ನಡ ಪತ್ರಿಕೆಗಳು ಮಾರಾಟವಾಗುವುದಿಲ್ಲ . ಕೂಕ್‌ಟೌನ್‌, ಕಾಕ್ಸ್‌ಟೌನ್‌, ಬೆನ್ಸನ್‌ ಟೌನ್‌, ಮಾರುತಿ ಸೇವಾನಗರ- ಇತ್ಯಾದಿಗಳೆಲ್ಲ ಬೆಂಗಳೂರಿನಲ್ಲಿವೆ ಮತ್ತು ಕನ್ನಡದ ವಾತಾವರಣದಲ್ಲಿವೆ ಅಂತ ಹೇಳಲು ಯಾರಿಂದ ಸಾಧ್ಯ? ಯಾವತ್ತಾದರೂ ಒಬ್ಬ ಕನ್ನಡ ಪತ್ರಕರ್ತ, ಒಂದು ಪತ್ರಿಕಾ ಸಂಸ್ಥೆ ಇದರ ಬಗ್ಗೆ ತಕರಾರು ತೆಗೆದು, ‘ಅಲ್ಲಿ ಕನ್ನಡ ಪತ್ರಿಕೆಗಳನ್ನು ಮಾರುವ ವ್ಯವಸ್ಥೆ ಮಾಡಿಕೊಡಿ’ ಅಂತ ಕೇಳಿದ್ದುಂಟಾ?

ಅದು ಬಿಡಿ, ಕನ್ನಡ ನೆಲ-ಜಲಕ್ಕೆ ಸಂಬಂಧಿಸಿದ ಅತ್ಯಂತ ಗಂಭೀರವಾದ ಸುದ್ದಿ-ಸಂಗತಿ-ಚರ್ಚೆಗಳಿದ್ದಾಗ ಅವುಗಳನ್ನು ಕನ್ನಡ ಪತ್ರಿಕೆಗಳು ಪ್ರಕಟಿಸುವುದಕ್ಕೂ, ‘ಟೈಮ್ಸ್‌ ಆಫ್‌ ಇಂಡಿಯಾ’ದಂಥ ಇಂಗ್ಲಿಷು ಪತ್ರಿಕೆ ಪ್ರಕಟಿಸುವುದಕ್ಕೂ ಇರುವ ವ್ಯತ್ಯಾಸವನ್ನು ಯಾರಾದರೂ ಗುರುತಿಸಿದ್ದಾರಾ? ಬೆಂಗಳೂರಿನ ಶ್ರೀಮಂತ ಹೊಟೇಲೊಂದರಲ್ಲಿ ನಡೆಯುವ, ಒಳ ಉಡುಪು ತಯಾರಿಕಾ ಸಂಸ್ಥೆಯಾಂದು ಸಂಘಟಿಸಿದ ಫ್ಯಾಷನ್‌ ಶೋ ಇದ್ದರೆ ಅದರ ಅರೆಬೆತ್ತಲೆ ಫೋಟೊಗಳನ್ನು ಟೈಂಸ್‌ ಮುಖಪುಟದಲ್ಲಿ ಪ್ರಕಟಿಸುತ್ತದೆ. ಕುವೆಂಪು ಜನ್ಮಶತಮಾನೋತ್ಸವಕ್ಕೆ ಸಂಬಂಧಿಸಿದ ಎಷ್ಟು ಸುದ್ದಿ-ಲೇಖನಗಳನ್ನು ಆ ಪತ್ರಿಕೆ ಪ್ರಕಟಿಸಿದೆ ಕೇಳಿ?

ಕೇಳುವುದಿಲ್ಲ ? ಯಾಕೆ ಅಂದರೆ, ಅದು ವ್ಯಾಪಾರ ಸಂಬಂಧಿಸಂಗತಿ. ಅವರಿಗೆ ತಮ್ಮ ಪತ್ರಿಕೆ ಮಾರಾಟವಾಗಬೇಕು. ಅದರ ಟಾರ್ಗೆಟ್‌ ರೀಡರ್ಸ್‌ ಬೇರೆಯೇ ಇದ್ದಾರೆ. ಇಡೀ ದಿನ ಸಾಫ್ಟ್‌ವೇರ್‌ ಕಂಪನಿಯಲ್ಲಿ ದುಡಿದು ಸಂಜೆ ಹೊರಬೀಳುವವನಿಗೆ ಪಬ್‌ ಬೇಕು. ಡ್ರಿಂಕ್‌ ಬೇಕು. ಮನೆಯಲ್ಲಿ ಪೇಪರ್‌ ತಿರುವಿದರೆ ಅಂದಚೆಂದದ ಹುಡುಗಿಯರ ಫೋಟೊಗಳಿರಬೇಕು. ಯಾವ ಜಾಯಿಂಟ್‌ನಲ್ಲಿ ಯಾವ ಬೆತ್ತಲೆ ಶೋ ನಡೆಯುತ್ತವೆಂಬ ವಿವರಗಳಿರಬೇಕು. ಅವರ ಅವಶ್ಯಕತೆಗಳಿಗೆ, ಅಭಿರುಚಿಗೆ ಸರಕು ಒದಗಿಸುವವನು ಟೈಮ್ಸ್‌ನ ವ್ಯಾಪಾರಿ. ರಾಮಮಂದಿರದಲ್ಲಿ ಭಕ್ತಿಗೀತೆ, ‘ಸುಚಿತ್ರಾ’ದಲ್ಲಿ ಸುಗಮ ಸಂಗೀತ, ‘ನಯನ’ದಲ್ಲಿ ದಲಿತ ಸಾಹಿತ್ಯದ ಒಳ ಹೊಳಪುಗಳ ಚರ್ಚೆ- ಛೀಛಿ, ಅದನ್ನೆಲ್ಲ ಕಟ್ಟಿಕೊಂಡು ಅವನಿಗೇನಾಗಬೇಕು?

ಈಗ ಆಗಿರುವುದು ಅದೇ. ಬೆಂಗಳೂರಿನ ಐವತ್ತು ಲಕ್ಷ ಕನ್ನಡಿಗರು ಸೇರಿಕೊಂಡು, ಬೆಂಗಳೂರಿನಲ್ಲೇ ಇರುವ ಕಾಕ್ಸ್‌ಟೌನ್‌, ಕೂಕ್‌ಟೌನ್‌, ಕೋರಮಂಗಲ, ಇಂದಿರಾನಗರದ ಇಪ್ಪತ್ತೆೈದು ಲಕ್ಷ ಅನ್ಯಭಾಷಿಕರಿಗೆ ಕನ್ನಡ ಕಲಿಸಲಾಗಲಿಲ್ಲ . ಕೇವಲ ಆ ಮಂದಿಯ ಸಂತೋಷಕ್ಕೆ ಅಂತ ಶುರುವಾದ ಲೈವ್‌ಬ್ಯಾಂಡುಗಳು, ಡಿಸ್ಕ್‌ಗಳು, ಕ್ಲಬ್ಬುಗಳು- ನಿಧಾನವಾಗಿ ರಾಜಾಜಿನಗರ, ಬಸವೇಶ್ವರನಗರ, ಹನುಮಂತನಗರಕ್ಕೆ ಬಂದವು. ಯಾವ ವೀರ ಕನ್ನಡಿಗ ಪೋತಪ್ಪ ನಾಯಕನೂ ಅವುಗಳ ವಿರುದ್ಧ ದನಿಯೆತ್ತಲಿಲ್ಲ . ಅವುಗಳನ್ನು ಪ್ರೊಮೋಟ್‌ ಮಾಡಿದ ಇಂಗ್ಲಿಷ್‌ ಪತ್ರಿಕೆಗಳ ಕಚೇರಿಗೆ ಹೋಗಿ ಕ್ಯಾಕರಿಸಿ ಉಗಿಯಲಿಲ್ಲ . ಅವೆಲ್ಲ ಸೇರಿಕೊಂಡು ನಮ್ಮ ಭಾಷೆ, ಸಂಸ್ಕೃತಿ, ಬದುಕುಗಳ ಮೇಲೆ ಹಲ್ಲೆ ನಡೆಸುತ್ತಿವೆ ಎಂಬುದು ಯಾವ ಕನ್ನಡದ ಕಂದಮ್ಮನಿಗೂ ಅರ್ಥವಾಗಲಿಲ್ಲ . ಪೂರ್ತಿಯಾಗಿ ಕಾಕ್ಸ್‌ಟೌನ್‌ನ ಆ ‘ಡಿಂಗೋ’ ಸಂಸ್ಕೃತಿಯನ್ನು ನಾವು ಮನೆಯಂಗಳಕ್ಕೇ ಬಿಟ್ಟುಕೊಂಡೆವು. ಇಷ್ಟೆಲ್ಲ ಆದಮೇಲೆ ನೀವು ‘ಕಾಂಚನಗಂಗಾ’ ಸಿನೆಮಾ ನೋಡ್ತಿಲ್ಲ ? ಯಾಕೆ ನೀವು ‘ಸಾಹುಕಾರ’ ನೋಡ್ತಿಲ್ಲ ? ‘ಅಭಿ’, ‘ಮೌರ್ಯ’ ಎರಡೂ ಯಾಕೆ ಜಯಭೇರಿ ಬಾರಿಸ್ತಾ ಇಲ್ಲ ? ‘ಹೊಡೀರಿ, ಧರಂಸಿಂಗನನ್ನ ಚಪ್ಲಿ ತಗಂಡೂ...’ ಅತ ಅಬ್ಬರಿಸಿ ವಿಧಾನಸೌಧಕ್ಕೆ ಬಂದರೆ-

ಸ್ವಾಮೀ, ಇದರಲ್ಲಿ ತಪ್ಪು ಯಾರದಿದೆ ಹೇಳಿ?

ಸಾರ್ವಜನಿಕ ಸ್ಥಳಗಳಲ್ಲಿ , ಬಸ್ಸುಗಳಲ್ಲಿ ಹಿಂದಿ-ಇಂಗ್ಲಿಷ್‌ ವಟಗುಡುವಿಕೆಯ ರೇಡಿಯೋ ಸಿಟಿ ಹಾಕಿದ್ದಕ್ಕೆ ಯಾವ ಕನ್ನಡಿಗನೇನಾದರೂ ಪ್ರತಿಭಟನೆ ಮಾಡಿದ್ದಾನಾ? ಶಂಕರ್‌ನಾಗ್‌ ಹೆಸರಿನಲ್ಲಿ ಸರ್ಕಾರಿ ಸಹಾಯ ತೆಗೆದುಕೊಂಡು ಕಟ್ಟಿದ ‘ರಂಗ ಶಂಕರ’ವನ್ನ ಪಕ್ಕಾ ಇಂಗ್ಲಿಷು ಸಂಸ್ಥೆಯನ್ನಾಗಿ ಮಾಡಿದ್ದಕ್ಕೆ ಯಾರಾದರೂ ರೇಗಿದರಾ? ಕನ್ನಡ ಮಾತನಾಡಿದರೆ, ಕನ್ನಡ ಶಬ್ದ ಬಳಸಿದರೆ ಫೈನು ಹಾಕುತ್ತೇವೆ ಅಂತ ಘಂಟಾಘೋಷವಾಗಿ ಹೇಳಿಕೊಳ್ಳುವ ಇಂಗ್ಲಿಷ್‌ ಶಾಲೆಗಳ ಮುಂದೆ ನಿಂತು ಯಾವತ್ತಾದರೂ ಘೋಷಣೆ ಕೂಗಿದ್ದಾರಾ? ಇಲ್ಲ .

ಏಕೆಂದರೆ, ಅದರಲ್ಲಿ ಯಾರಿಗೂ ವ್ಯಾಪಾರಿ ಆಸಕ್ತಿಗಳಿಲ್ಲ . ಅಲ್ಲಿ ಯಾರೂ ದುಡ್ಡು ತೊಡಗಿಸಿಲ್ಲ . ನಮ್ಮ ಭಾಷೆ, ಸಂಸ್ಕೃತಿ ಹಾಳಾಗುತ್ತದೆ ಅಂದಾಗ ಯಾರಿಗೂ ಭಯವಾಗುವುದಿಲ್ಲ . ನಮ್ಮ ಸಿನೆಮಾ ಸೋಲಬಹುದು ಅನ್ನಿಸಿದಾಗ ಮಾತ್ರ ‘ಹುಟ್ಟಿದರೇ.... ಕನ್ನಡನಾಡಲ್ಹುಟ್ಟಬೇಕು....!’

ನಮ್ಮ ಮೇಲೆ ಸಾಂಸ್ಕೃತಿಕ ಹಲ್ಲೆ ಎಲ್ಲೆಲ್ಲಿ ನಡೆಯಿತು ಎಂಬುದರ ಪರಿಶೀಲನೆ ಮುಖ್ಯವಾಗಿ ಆಗಬೇಕಿದೆ. ಕನ್ನಡದ್ದಲ್ಲದ್ದು , ಈ ನೆಲಕ್ಕೆ ಅಪರಿಚಿತವೆನ್ನಿಸುವಂಥದ್ದು ನಮ್ಮ ರಾಜ್ಯಕ್ಕೆ ಬಂದಾಗ ಅದನ್ನು ಗುರುತಿಸಿ ತಕ್ಷಣ ವಿರೋಧಿಸಬೇಕಾದ ತುರ್ತು ಈಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರಂಥವರು ರೋಷಕ್ಕೆ ಬಿದ್ದು ಗಲಾಟೆ ಮಾಡಿದಾಗ, ಚಿತ್ರಮಂದಿರಗಳೊಳಕ್ಕೇ ನುಗ್ಗಿ ಪರದೆ ಕತ್ತರಿಸಿ ಬೆಂಕಿಯಿಟ್ಟಾಗ ಅದನ್ನು ಗೂಂಡಾಗಿರಿ ಎಂಬಂತೆ ನೋಡಬೇಕಿಲ್ಲ . ಅನಿವಾರ್ಯವಾದಾಗ ಅಂಥದೊಂದು ಹಿಂಸಾತ್ಮಕ ಪ್ರತಿಭಟನೆ ಮಾಡಲೇಬೇಕಾಗುತ್ತದೆ. ಆದರೆ ಅದನ್ನು ಕೇವಲ ಸಿನೆಮಾ ಮಂದಿರಗಳಲ್ಲಿ ಮಾಡಿ, ಪಕ್ಕದ ಪಬ್‌ಗಳ ಕಡೆಗೆ ತಿರುಗಿ ನೋಡದೇ ಹೋದರೆ, ಅಂಥ ಚಳವಳಿಯನ್ನು ಉದಾಸೀನ ಮತ್ತು ತಿರಸ್ಕಾರಗಳಿಂದ ನೋಡಬೇಕಾಗುತ್ತದೆ.

ಕನ್ನಡ ನಟರು ರೈತರ ಆತ್ಮಹತ್ಯೆ ಆದಾಗ ಉಸಿರೆತ್ತಿದರಾ ಅಂತ ಕೇಳುವುದರಲ್ಲಿ ಅರ್ಥವಿಲ್ಲ . ಅವರ ಪ್ರೊಡ್ಯೂಸರುಗಳೇ ಆತ್ಮಹತ್ಯೆ ಮಾಡಿಕೊಂಡಾಗಲೂ ಅವರು ಉಸಿರೆತ್ತಲಿಲ್ಲ . ಅವರ ಜಾಯಮಾನ ಅದು. ಅವರ ಪ್ರಪಂಚವೇ ಬೇರೆ. ಸಿನೆಮಾದವರಿಂದ ಒಳ್ಳೆಯ ಸಿನೆಮಾ ಹೊರತು ಬೇರೇನನ್ನೂ ನಿರೀಕ್ಷಿಸಬೇಡಿ. ಪಕ್ಕಕ್ಕಿಡಿ ಅವರನ್ನ .

ಆದರೆ ಪಬ್‌ ಸಂಸ್ಕೃತಿ, ಪುಸ್ತಕದ ಅಂಗಡಿಗಳಲ್ಲಿ ಕನ್ನಡದ ಪುಸ್ತಕಗಳನ್ನೇ ಇಡುವುದಿಲ್ಲ ಎಂಬ ಅಹಂಕಾರ, ಶಾಲೆಗಳಲ್ಲಿ ಕನ್ನಡದ ಹತ್ಯೆ, ಸಾರ್ವಜನಿಕ ಸ್ಥಳಗಳಲ್ಲಿ ರೇಡಿಯೋ ಸಿಟಿಗಳ ಬಡಬಡಿಕೆ, ನಮ್ಮ ನೆಲಕ್ಕೆ ಹೊರಗಿನಿಂದ ಬಂದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ನೌಕರಿ ಸಿಗದಿರುವಿಕೆ, ಸಂಸ್ಥೆಗಳ ಮಲಯಾಳೀಕರಣ, ತಮಿಳುಡಾಮಿನೇಷನ್‌, ಉತ್ತರ ಭಾರತದವರ ಹೆಚ್ಚುಗಾರಿಕೆ, ಪುಸ್ತಕ ಮೇಳಗಳಲ್ಲಿ ಕನ್ನಡ ಪುಸ್ತಕಗಳಿಗೆ ಸ್ಥಾನ ದೊರಕದಿರುವುದು, ಚಿತ್ರರಂಗದಲ್ಲಿ ತಂತ್ರಜ್ಞರು-ಯೂನಿಟ್‌ಗಳಲ್ಲಿ ಕೆಲಸ ಮಾಡುವವರು ಮುಂತಾದವರು ಪರಭಾಷಿಕರಾಗಿರುವುದು- ಇವುಗಳ ವಿರುದ್ಧ ಒಂದು ವ್ಯವಸ್ಥಿತ ಚಳವಳಿ ಆರಂಭವಾಗಬೇಕಿದೆ.

ಇಂಥ ಚಳವಳಿ ಸಿನೆಮಾದವರಿಂದ ಆಗುವುದಿಲ್ಲ . ಅದಕ್ಕವರು ಬರುವುದೂ ಇಲ್ಲ . ಉಳಿದಿರುವವರು ನಾವೇ : ಐದು ಕೋಟಿ ಕನ್ನಡಿಗರು.

ಕೈ ಎತ್ತದಿದ್ದರೆ ನಾಶ ಕಾದಿದೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X