• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಳಿದ ಭ್ರಷ್ಟರಿಗಿಂತ ನೈತಿಕ ಭ್ರಷ್ಟರು ಅಪಾಯಕಾರಿ ಗೊತ್ತೇ?

By Staff
|
Ravi Belagere on Thatskannada.com ರವಿ ಬೆಳಗೆರೆ
ಕೆಲವೇ ದಿನಗಳ ಹಿಂದೆ ಸದಾಶಿವನಗರದ ಬಂಗಲೆಯಲ್ಲಿ ಕುಳಿತು: ‘ನಾನು ಪಿತೃ ವಾಕ್ಯ ಪರಿಪಾಲಕ. ಭಾರತೀಯ ಸಂಸ್ಕೃತಿಯ ಆರಾಧಕ. ಹೀಗಾಗಿ ಕಾಂಗ್ರೆಸ್‌ ತೊರೆಯುತ್ತಿದ್ದೇನೆ. ಅಪ್ಪನ ಹಿಂದೆ ಬಿಜೆಪಿಗೆ ಹೋಗುತ್ತಿದ್ದೇನೆ’ ಅಂತ ಕುಮಾರ್‌ ಬಂಗಾರಪ್ಪ ಹೇಳುತ್ತಿದ್ದರೆ ಇಡೀ ನಾಡು ವಾರೆವ್ಹಾ ಮಗನೇ ಅಂತ ಮೆಚ್ಚುಗೆ ಸೂಚಿಸಿತ್ತು.

ಆದರೆ ಅದೇ ಮಗ ಈವತ್ತು ತನ್ನ ತಂದೆ ಬಂಗಾರಪ್ಪ ಅವರ ವಿರುದ್ಧ ತಿರುಗಿ ಬಿದ್ದಿದ್ದಾನೆ. ಪಿತೃವಾಕ್ಯ ಪರಿಪಾಲನೆಯ ಮಾತು ಅದ್ಯಾವುದೋ ಡಸ್ಟ್‌ಬಿನ್‌ನಲ್ಲಿ ಮುಖ ಮರೆಸಿಕೊಂಡಿದೆ.

ಅಷ್ಟಕ್ಕೂ ಕುಮಾರ್‌ ಬಂಗಾರಪ್ಪ ತನ್ನ ತಂದೆಯ ಹೆಸರಿನಲ್ಲೇ ಸಿನೆಮಾದಲ್ಲಿ ನೆಲೆ ಕಂಡುಕೊಂಡ ಹುಡುಗ. ಹೀರೋ ಆಗಲು ಹೋದವನು ಕನಿಷ್ಠ ಪಕ್ಷ ವಿಲನ್‌ ಕೂಡ ಆಗಲಿಲ್ಲ.

ಅಂಥ ಮಗನನ್ನು ರಾಜಕೀಯಕ್ಕೆ ಎಳೆ ತಂದರು ಬಂಗಾರಪ್ಪ. ಸೊರಬ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ತಾವು ದೆಹಲಿಯ ದಾರಿ ಹಿಡಿದರು. ಸಂದರ್ಭ ಬಂದಾಗ ಕೃಷ್ಣರ ಮೇಲೆ ಒತ್ತಡ ಹೇರಿ ಮಂತ್ರಿಗಿರಿ ಕೊಡಿಸಿದರು. ಆರಿಸಿ ಆರಿಸಿ ನೀರಾವರಿ ಖಾತೆ ಕೊಡಿಸಿದರು.

‘ಅದ್ಯಾಕ್ರೀ ಬಂಗಾರಪ್ಪ ? ನಿಮ್ಮ ಮಗನಿಗೆ exise ಖಾತೆಯನ್ನೇ ಕೊಡಿಸಬಹುದಿತ್ತಲ್ಲ ?’ ಅಂತ ಇದೇ ಕೃಷ್ಣ ಕೇಳಿದರೆ: ‘ಅಬಕಾರಿ ಖಾತೆ ಕೊಟ್ಟರೆ ಅವನು ಪ್ರಭಾವಿ ಆಗಬಹುದು. ಖೋಡೆ, ಆದಿಕೇಶವುಲು, ತಿಮ್ಮೇಗೌಡ, ದಾಸಪ್ಪನಂಥವರು ಸ್ನೇಹಿತರೂ ಆಗಬಹುದು. ಆದರೆ ಆತ ಸಣ್ಣ ನೀರಾವರಿ ಮಂತ್ರಿಯಾದರೆ ಕೆರೆಕಟ್ಟೆ ಕಟ್ಟಿಸಬಹುದು. ಅದರಿಂದ ಬಡಬಗ್ಗರು ಅವನನ್ನ ನೆನೆಯುತ್ತಾರೆ ಅಂದಿದ್ದರು’ ಬಂಗಾರಪ್ಪ.

ಆದರೆ ತಂದೆಯ ಕನಸನ್ನು ಅಕ್ಷರಶಃ ಬೀದಿಗೆ ಬಿಸಾಡಿದ ಕುಮಾರ್‌ ಬಂಗಾರಿ, ಕಾಗೆ ಬಂಗಾರವಾಗಿ ಹೋದ. ಅಪ್ಪನನ್ನೇ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟೋಡಿಸಿದ. ಸಾಲದು ಎಂಬಂತೆ ಕೃಷ್ಣರ ಪಕ್ಕವೇ ಕುಂತು ಕಡುಬು ಜಗಿದ. ಬೀದಿಯಲ್ಲಿ ನಿಂತ ಅಪ್ಪನನ್ನೇ ಅಪಹಾಸ್ಯ ಮಾಡಿದ.

ಅಂಥವನೀಗ ಬಿಜೆಪಿ ಎಂದರೆ ಕೋಮುವಾದಿ ಪಕ್ಷ ಅಂತ ಸಿನಿಮಾ ಡೈಲಾಗು ಉದುರಿಸುತ್ತಿದ್ದಾನೆ. ತನಗೆ ಟಿಕೆಟ್‌ ಕೊಡಿಸಲಿಲ್ಲ ಅಂತ ವ್ಯಕ್ತಿತ್ವವನ್ನೇ ಅಂಗಿ ಕಳಚಿ ಎಸೆದಂತೆ ಎಸೆದಿದ್ದಾನೆ.

ಯೋಚಿಸಿದರೆ ಮನುಷ್ಯ ಅದೆಷ್ಟು ಬೇಗ ನೈತಿಕ ಭ್ರಷ್ಟನಾಗುತ್ತಾನೆ ಅಂತ ಅಚ್ಚರಿಯಾಗುತ್ತದೆ. ಹುಟ್ಟಿಸಿ, ಬೆಳೆಸಿ ಕ್ರಾಪು ಬಾಚಿ, ನೆರಳು ಕೊಟ್ಟು, ವ್ಯಕ್ತಿತ್ವ ರೂಪಿಸಿದ ತಂದೆಗೇ ಪ್ರತಿ ಸವಾಲು ಹಾಕುವ ಮಟ್ಟಕ್ಕೆ ಹೋಗಿರುವ ಕುಮಾರ್‌ ಬಂಗಾರಪ್ಪನಿಗೆ ಅದೇನು ಕಮ್ಮಿಯಾಗಿತ್ತು?

ಯಕಶ್ಚಿತ್‌ ಅಧಿಕಾರಕ್ಕಾಗಿ ಆತ ಹೆತ್ತವರನ್ನೇ ದೂಷಿಸಬೇಕಿತ್ತೇ? ಹೋಗಲಿ, ವಾರಗಳ ಹಿಂದೆ ತಾನೇ ಆಡಿದ ಪಿತೃವಾಕ್ಯ ಪರಿಪಾಲನೆಯ ಮಾತೂ ಆತನಿಗೆ ಮರೆತುಹೋಯಿತೇ?

ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ, ಚುನಾವಣೆಗೆ ಹೋಗಬೇಕು ಎಂಬ ತೀರ್ಮಾನವಾದ ನಂತರದ ದಿನಗಳಲ್ಲಿ ಕರ್ನಾಟಕದ ರಾಜಕೀಯ ಪಡಸಾಲೆಯ ಮೇಲೆ ಕಣ್ಣಿಟ್ಟರೆ ಎಲ್ಲವೂ ಇಂತಹ ಚಿತ್ರಗಳೇ. ಪಕ್ಕಾ ನೈತಿಕ ಭ್ರಷ್ಟತನದ ಚಿತ್ರಗಳು.

ಉದಾಹರಣೆಗೆ ಪ್ರಗತಿಪರ ಜನತಾ ದಳದಿಂದ ಕಾಂಗ್ರೆಸ್‌ ಪಡಸಾಲೆಗೆ ಓಡಿ ಹೋದವರನ್ನೇ ನೋಡಿ. ಇದೇ ಉಮೇಶ್‌ ಕತ್ತಿ, ಎ.ಬಿ. ಪಾಟೀಲ್‌, ಎಸ್‌.ಎಸ್‌. ಪಾಟೀಲರಂತಹ ಜನ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಅಟ್ಟಾಡಿಸಿ ಬಡಿದಿದ್ದರು.

ಅಷ್ಟೇ ಏಕೆ? ಕಳೆದ ಚುನಾವಣೆಯಲ್ಲಿ ಪಟೇಲರ ಜತೆ ನಿಂತು ಭ್ರಷ್ಟ ಕಾಂಗ್ರೆಸ್‌ ವಿರುದ್ಧ ಹೋರಾಡುವುದೇ ನಮ್ಮ ಗುರಿ ಅಂದಿದ್ದರು. ಸಾಲದ್ದಕ್ಕೆ ಬಿಜೆಪಿಯ ಕೈ ಬೇರೆ ಹಿಡಿದುಕೊಂಡಿದ್ದರು.

ಈವತ್ತು ಅದೇ ಜನ: ಕೋಮುವಾದಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ ಮಾತ್ರ ಸಮರ್ಥ. ಹೀಗಾಗಿ ನಾವು ಅಲ್ಲಿಗೆ ಹೋಗಿದ್ದೇವೆ ಎನ್ನುತ್ತಾರೆ. ಕಳೆದ ಸಲ ಆ ಪಕ್ಷದ ಜತೆಗೇ ಇದ್ದಿರಲ್ರೀ ಅಂತ ಕೇಳಿನೋಡಿ, ಬಾಯಿಗೆ ಕಡುಬು ತುರುಕಿಕೊಂಡವರಂತೆ ಕಳ್ಳ ನಗೆ ನಗುತ್ತಾರೆ.

ವಸ್ತುಸ್ಥಿತಿ ಏನೆಂಬುದು ಅವರಿಗೂ ಗೊತ್ತು. ಬೆಳಗಾಂ ಜಿಲ್ಲೆಯ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯನ್ನು ಉಮೇಶ್‌ ಕತ್ತಿ ಅದ್ಯಾವ ಪರಿಯಲ್ಲಿ ಹುರಿದು ಮುಕ್ಕಿದ್ದಾನೆಂದರೆ ಅದೀಗ ಬರೋಬ್ಬರಿ ನೂರು ಕೋಟಿ ರುಪಾಯಿಗಳಿಗೆ ಸುಸ್ತಿಯಾಗಿ ಕುಂತಿದೆ.

‘ನಿನ್ನ ಫ್ಯಾಕ್ಟರಿಯಲ್ಲಿ ಹಿಂಗಾಗಿದೆ. ಬಂದು ಎನ್‌ಕ್ವಯರಿ ಮಾಡಲೇನು?’ ಅಂತ ಕೃಷ್ಣ ಕೇಳಿದ್ದಾರೆ. ಹಾಗೆ ಹೇಳಿದ ಕೂಡಲೇ ತಬರನ ಸ್ಟೈಲ್‌ನಲ್ಲಿ ಓಡಿ ಬಂದು ಕಾಂಗ್ರೆಸ್‌ ಹಡಗು ಹತ್ತಿಕೊಂಡಿದ್ದಾನೆ ಕತ್ತಿ. ಕೇಳಿದರೆ ಕೋಮುವಾದದ ವಿರುದ್ಧ ಹೋರಾಟ ಅನ್ನುತ್ತಾನೆ.

ಇದೇ ರೀತಿ ವಿಜಯ ಮಲ್ಯನ ಹತ್ತಿರ ಕಾಸು ಕಿತಗೊಂಡು ಅನ್ನವಿಕ್ಕಿದ ಬಿಜೆಪಿಗೇ ಕೈಯೆತ್ತಿದವರ ಗುಂಪೊಂದಿದೆ. ಆ ಗುಂಪಿನ ಬಹುತೇಕರಿಗೆ ದಿಲ್ಲಿಯ ಅಧಿನಾಯಕಿ ‘ಟಿಕೆಟ್‌ ಕೊಡುವುದಿಲ್ಲ ಹಚ್ಯಾ’ ಅಂತ ಓಡಿಸಿದ್ದಾಳೆ. ಈಗವರು ಓಡಿ ಬಂದು: ಕಾಂಗ್ರೆಸ್‌ನಂತಹ ಭ್ರಷ್ಟ , ದುಷ್ಟ ಪಕ್ಷ ಬೇರೊಂದಿಲ್ಲ. ಅದರ ವಿರುದ್ಧ ಹೋರಾಡುವುದೇ ನಮ್ಮ ಪರಮಗುರಿ ಅನ್ನುತ್ತಾರೆ.

‘ಅಲ್ರೀ, ನೀವು ಮಲ್ಯನ ಹತ್ತಿರ ದುಡ್ಡು ತಗಂಡು ಸ್ವಂತ ಪಕ್ಷಕ್ಕೇ ದ್ರೋಹ ಎಸಗಿದಿರಲ್ಲ ? ಅವತ್ತು ನಿಮಗೆ ಆ ದುಡ್ಡು ಕೊಡಿಸಿದವರೇ ಎಸ್ಸೆಂ ಕೃಷ್ಣ. ಈವತ್ತು ಕಂಡೂ ಕಂಡೂ ನಿಮ್ಮಂತಹ ನೈತಿಕ ಭ್ರಷ್ಟರನ್ನು ಅವರೇಕೆ ತಲೆಯ ಮೇಲೆ ಕೂರಿಸಿಕೊಳ್ಳುತ್ತಾರೆ?’ ಅಂತ ಕೇಳಿದರೆ ತತ್ತರ ಬಿತ್ತರ ಅನ್ನುತ್ತಾರೆ. ಅಂದಹಾಗೆ ಎಸ್ಸೆಂ ಕೃಷ್ಣ ಅವರೇನೂ ನೈತಿಕ ಭ್ರಷ್ಟರಲ್ಲ ಅಂತಲ್ಲ. ಇಡೀ ವಿರೋಧ ಪಕ್ಷಗಳನ್ನು, ಪತ್ರಿಕೆಗಳವರನ್ನು ನೈತಿಕವಾಗಿ ಭ್ರಷ್ಟಗೊಳಿಸಿದ ಧೀಮಂತನೇ ಕೃಷ್ಣ. ಆದರೆ ಅವರೂ ನೈತಿಕ ಭ್ರಷ್ಟರನ್ನು ನಂಬುವುದಿಲ್ಲ.

ಕಾರಣ ಇಷ್ಟು ದುಡ್ಡಿಗಾಗಿ ತನ್ನನ್ನು ಮಾರಿಕೊಂಡ ಮನುಷ್ಯ, ನಾಳೆ ತಮ್ಮ ಪಕ್ಷದಲ್ಲಿರುವಾಗಲೂ ಇದನ್ನೇ ಮಾಡುವುದಿಲ್ಲ ಅಂತೇನು ಖಾತ್ರಿ ಅಂತ ಅವರೂ ಯೋಚಿಸುತ್ತಾರೆ. ಅಂದ ಮೇಲೆ ಅವರೇಕೆ ನಿಮ್ಮನ್ನು ತೊಡೆಯ ಮೇಲೆ ಕೂಡಿಸಿಕೊಂಡು ಹಾಲೂಡಿಸುತ್ತಾರೆ?

ಅವರಿವರೇಕೆ? ನಮ್ಮ ರಾಜಶೇಖರ ಮೂರ್ತಿ ಅವರನ್ನೇ ತೆಗೆದುಕೊಳ್ಳಿ. ನಿನ್ನೆ ಮೊನ್ನೆಯವರೆಗೂ ಭ್ರಷ್ಟ ಕೃಷ್ಣನನ್ನು ಒದ್ದೋಡಿಸುವುದೇ ನನ್ನ ಗುರಿ ಅನ್ನುತ್ತಿದ್ದರು. ಹಾಗೆ ಹೇಳುವಾಗ ಥೇಟು ಒನಕೆ ಓಬವ್ವನ ಥರ ಕಾಣುತ್ತಿದ್ದರು.

ಅವರ ಕೂಗಿನ ಹೊಡೆತ ಹೇಗಿತ್ತೆಂದರೆ ದೇವೇಗೌಡರಂತಹ ದೇವೇಗೌಡರೇ ಅವರ ಮನೆಗೆ ಕಾಲ್ನಡಿಗೆಯಲ್ಲಿ ಹೋಗಿ: ನಿಮ್ಮ ಬೆಂಬಲ ಬೇಕು ಗುರುಗಳೇ ಅಂದರು. ಸಿಲ್ಲಿ-ಲಲ್ಲಿ ಧಾರಾವಾಹಿಗೆ ಸ್ಯೂಟ್‌ ಆಗುವಂತಿದ್ದ ಅವರಳಿಯ ಚಿದಾನಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವಂತೆ ನೋಡಿಕೊಂಡರು.

ಈವತ್ತು ನೋಡಿ, ರಾಜಶೇಖರ ಮೂರ್ತಿ ಕಮಕ್‌ ಕಿಮಕ್‌ ಅನ್ನುತ್ತಿಲ್ಲ. ಹಳೇ ಮೈಸೂರಿನಲ್ಲಿ ಕೃಷ್ಣರ ವಿರುದ್ಧ ಹೋರಾಡಲು ದೇವೇಗೌಡರ ಜತೆಯೇ ಸರಿ ಎಂಬುದು ಗೊತ್ತಿದ್ದರೂ ಆ ಕಡೆ ನೋಡುತ್ತಲೂ ಇಲ್ಲ.

ಕಾರಣ ಜಾತ್ಯತೀತ ದಳ ಅಧಿಕಾರಕ್ಕೆ ಬರುತ್ತದೆ ಎಂದು ನಂಬುವುದು ಹೇಗೆ? ಬಹಿರಂಗವಾಗಿ: ನೀವೇ ಮುಂದಿನ ಮುಖ್ಯಮಂತ್ರಿ ಎಂದು ದೇವೇಗೌಡರು ಘೋಷಿಸಿದ್ದರೆ ಹೋಗಬಹುದಿತ್ತು. ಹಾಗೆ ಹೇಳಿಲ್ಲವಲ್ಲ ಅಂದ ಮೇಲೆ ಹೋಗಿ ಏನು ಪ್ರಯೋಜನ? ಅದರ ಬದಲು ಈಗಿರುವ ಜಾಗದಲ್ಲೇ ಇದ್ದರೆ ನಾಳೆ ಯಡವಟ್ಟಾಗಿ: ಬನ್ನಿ ಸಾರ್‌, ಮುಖ್ಯಮಂತ್ರಿ ಆಗಿ ಅಂತ ಬಿಜೆಪಿಯವರು ಸಫಾರಿ ಸೂಟು ಕೊಟ್ಟು ಆಹ್ವಾನ ನೀಡಬಹುದು. ಬ್ಯಾಡ, ರಾಜ್ಯಪಾಲರ ಹುದ್ದೆ ಆದರೂ ದೊರೆಯಬಹುದು. ಇದು ರಾಜಶೇಖರ ಮೂರ್ತಿ ಲೆಕ್ಕಾಚಾರ.

ನಿಜ, ಈವತ್ತು ಅನಂತಕುಮಾರ್‌, ಯಡಿಯೂರಪ್ಪ, ಅಷ್ಟೇ ಏಕೆ, ಕೇಂದ್ರದ ಕಾನೂನು ಸಚಿವ ಅರುಣ್‌ ಜೇಟ್ಲಿ ಕೂಡಾ ಅವರ ಮನೆ ಬಾಗಿಲಿಗೆ ಹೋಗಿ: ನೀವು ನಮ್ಮ ಜತೆಗಿರಬೇಕು ಅಂತ ಕಣ್ಣು ಮಿಟುಕಿಸುತ್ತಿದ್ದಾರೆ.

ಆದರೆ ನಾಳೆ ಚುನಾವಣೆ ಮುಗಿಯಲಿ, ಒಬ್ಬರೂ ತಿರುಗಿ ನೋಡುವುದಿಲ್ಲ. ನೋಡಲೇ ಬೇಕೆಂಬುದು ನೈತಿಕ ನಿಯಮಾವಳಿಯೂ ಅಲ್ಲ. ಯಾಕೆಂದರೆ ಇದೇ ಮನುಷ್ಯ ಸುತ್ತೂರು ಸ್ವಾಮಿಯ ಸಮ್ಮುಖದಲ್ಲಿ ಕುಂತು: ‘ಉಭಯ ದಳಗಳು ಒಂದಾಗಬೇಕು. ಕಾಂಗ್ರೆಸ್‌ನ ಕೃಷ್ಣ, ಬಿಜೆಪಿಯ ಅನಂತಕುಮಾರ್‌ ನಂಬಿಕೆಗೆ ಅರ್ಹರಲ್ಲ ’ ಅಂತ ಅರಚಿದ್ದರು.

ಇಂತಹ ಮನುಷ್ಯನನ್ನು ನಂಬುವುದು ಹೇಗೆ? ಹಾಗಂತ ಬಿಜೆಪಿ ನಾಯಕರೂ ಲೆಕ್ಕ ಹಾಕುತ್ತಾರೆ. ಕಾರಣ ರಾಜಶೇಖರ ಮೂರ್ತಿಯದೂ ನೈತಿಕ ಭ್ರಷ್ಟತೆ.

ಉಭಯ ದಳಗಳು ಒಂದಾದರೆ ತಾವು ಮುಖ್ಯಮಂತ್ರಿಯಾಗಬಹುದು ಎಂಬ ಆಕಾಂಕ್ಷೆ ಇದ್ದುದರಿಂದ ತಾನೇ ಅವರು, ಕೃಷ್ಣರ ಭ್ರಷ್ಟತೆಯ ಬಗ್ಗೆ, ಅನಂತ್‌ರ ಕುತಂತ್ರದ ಬಗ್ಗೆ ಚೀರಾಡಿದ್ದು?

ಅವರಿಗೆ ನಿಜಕ್ಕೂ ಸ್ವಾರ್ಥವೇ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗಾಗಲೇ ಬೀದಿಯಲ್ಲಿ ನಿಂತಿರುತ್ತಿದ್ದರು. ಆದರೆ ಅವರಿಗೆ ಹಾಗೆಲ್ಲ ಆಗಬಾರದು, ಹಾಕಿಕೊಂಡ ಸಫಾರಿ ಸೂಟಿಗೆ ಒಂದು ಕಲೆಯೂ ತಾಗಬಾರದು. ಒಟ್ಟಿನಲ್ಲಿ ಮುಖ್ಯಮಂತ್ರಿಯಾಗಬೇಕು. ಹೀಗಾಗಿ ಉದ್ದಕ್ಕೂ ನಾಟಕ ಆಡಿಕೊಂಡು ಬಂದರು. ನೋಡುತ್ತಾ ಹೋದರೆ ಕಾಂಗ್ರೆಸ್‌, ಬಿಜೆಪಿ, ದಳ, ಬೊಮ್ಮಾಯಿಯ ಪಾಪದ ಫಲದಂತಿರುವ ಸಂಯುಕ್ತ ಜನತಾದಳ ಹೀಗೆ ಎಲ್ಲ ಕಡೆಯೂ ನೈತಿಕ ಭ್ರಷ್ಟತನದ್ದೇ ಹಾವಳಿ.

ನಿಜ ಹೇಳಬೇಕೆಂದರೆ ಜಾತಿ ಸಮಸ್ಯೆಗಿಂತ ಹೆಚ್ಚು ಅಪಾಯಕಾರಿಯಾದದ್ದು ನೈತಿಕ ಭ್ರಷ್ಟತನ. ಕನಿಷ್ಠ ಪಕ್ಷ ಜಾತಿ, ತನ್ನ ವರ್ತುಲದಲ್ಲಿರುವವರನ್ನು ಪೋಷಿಸುತ್ತಾ ಇತರರನ್ನು ಹಾಳುಗೆಡವಲು ಸಿದ್ಧವಾಗುತ್ತದೆ. ಆದರೆ ನೈತಿಕ ಭ್ರಷ್ಟತನ ಹಾಗಲ್ಲ , ಅದು ಎಲ್ಲರನ್ನೂ, ಎಲ್ಲ ಕಾಲಕ್ಕೂ ಸುಡುತ್ತಲೇ ಬರುತ್ತಿದೆ. ಇಡೀ ವ್ಯವಸ್ಥೆಗೇ ಭವಿಷ್ಯವಿಲ್ಲದಂತೆ ಮಾಡಿಬಿಡುತ್ತದೆ. ಈವತ್ತು ಕುಮಾರ್‌ಬಂಗಾರಪ್ಪನಂತಹ ಚಿಲ್ಟು ಬುದ್ಧಿಯ ಮನುಷ್ಯನಲ್ಲಿ, ರಾಜಶೇಖರ ಮೂರ್ತಿಯಂತಹ ಹಿರಿಯ ಮನುಷ್ಯನ ತಲೆಯಲ್ಲಿ ಅಂತಹ ನೈತಿಕ ಭ್ರಷ್ಟತೆ ವಿಜೃಂಭಿಸುತ್ತಿರುವುದು ಸಾಂಕೇತಿಕವಷ್ಟೇ.

ಯಾವ ಕಡೆ ತಿರುಗಿ ನೋಡಿದರೂ ಅಂಥವರೇ ಇದ್ದಾರೆ. ಅಂಥವರ ಅಧಿನಾಯಕನ ಜಾಗದಲ್ಲಿ ಖುದ್ದು ಈ ನಾಡಿನ ಮುಖ್ಯಮಂತ್ರಿಯೇ ಕುಳಿತಿದ್ದಾರೆ.

ಇಂತಹದೊಂದು ಪರ್ವಕಾಲದಲ್ಲಿ ಹೊಸತೊಂದು ಆದರ್ಶಕ್ಕೆ ತಲಬಾಗಿಲಾಗಿ ನಿಲ್ಲಬೇಕಾದವನು ಸಾಮಾನ್ಯ ಮನುಷ್ಯ. ಭವಿಷ್ಯಕ್ಕಾಗಿ ಚಡಪಡಿಸುತ್ತಿರುವ ಮತದಾರ. ಆತ ಏನಾದರೂ ಎಡವಿಬಿಟ್ಟರೆ, ನೈತಿಕ ಭ್ರಷ್ಟರ ಹಾವಳಿಯಿಂದ ಬಚಾವಾಗಲು ಈ ನೆಲಕ್ಕೆ ಸಾಧ್ಯವಿಲ್ಲ.

ಹಾಗಾಗದಿರಲಿ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more