ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋತು ಕುಂತವರ ಪ್ರತಿ ಮಾತಿನ ಹಿಂದೆಯೂ ಒಂದು ತಂತ್ರವಿದೆ

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ತಂಪುತಂಪನೆಯ ಮನಾಲಿಯಲ್ಲಿ ಕುಳಿತು ಮಾಜಿ ಪ್ರಧಾನಿ ವಾಜಪೇಯಿ ಆ ಗುಟುರು ಹಾಕುತ್ತಿದ್ದರೆ, ಬಿಜೆಪಿ ಹಾಗೂ ಸಂಘ ಪರಿವಾರದ ಪಡಸಾಲೆಯಲ್ಲಿ ಬಿಸಿಬಿಸಿ ವಾತಾವರಣ.

ಗುಜರಾತ್‌ನ ಗೋಧ್ರಾದಲ್ಲಿ ನಡೆದ ಹಿಂಸಾಚಾರ ಬಿಜೆಪಿಯ ಸೋಲಿಗೆ ಕಾರಣವಾದ ಮೂಲ ಅಂಶಗಳಲ್ಲೊಂದು. ಹೀಗಾಗಿ ಮೋದಿ ಎಂಬ ಮುಖ್ಯಮಂತ್ರಿ ಮುಂದುವರಿಯಬೇಕೆ? ಬೇಡವೇ? ಎಂಬುದು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಚರ್ಚೆ ಆಗಲೇಬೇಕು, ಆಗುತ್ತದೆ ಅಂದಿದ್ದರು ವಾಜಪೇಯಿ. ಗೋಧ್ರಾದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ, ಅದಕ್ಕೂ ಮುಂಚೆ ಅಮಾಯಕ ರಾಮಭಕ್ತರನ್ನು ಸುಟ್ಟ ಪಾಶವೀ ಕೃತ್ಯಗಳ ಕುರಿತಂತೆ ಸಮಗ್ರ ವಿಶ್ಲೇಷಣೆ ನಡೆಯಬೇಕು ಎಂಬುದು ಒಂದು ವಿಚಾರ.

ಅದು ಒತ್ತಟ್ಟಿಗಿರಲಿ. ಆದರೆ ಗೋಧ್ರಾ ವಿಷಯವನ್ನು ಏಕಾಏಕಿಯಾಗಿ ಪ್ರಸ್ತಾಪಿಸಿ, ಇದಕ್ಕಾಗಿ ಮೋದಿ ತಲೆದಂಡ ಅನಿವಾರ್ಯ ಎಂಬ ಧಾಟಿಯಲ್ಲಿ ವಾಜಪೇಯಿ ಯಾಕೆ ಮಾತನಾಡಿದರು? ಇದು ಈವತ್ತಿನ ಅತ್ಯಂತ ಮುಖ್ಯ ಪ್ರಶ್ನೆ. ವಾಜಪೇಯಿ ಇಂತಹ ಮಾತುಗಳನ್ನಾಡಿದ ಕೂಡಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಂದ ಹಿಡಿದು ಸಂಘ ಪರಿವಾರದ ಧುರೀಣರವರೆಗೆ ಪ್ರತಿಯಾಬ್ಬರೂ: ಮೋದಿ ತಲೆದಂಡ ಬೇಕಿಲ್ಲ ಅಂತ ವಿರೊಧಿಸತೊಡಗಿದ್ದು ಯಾಕೆ ಎಂಬುದು ಮತ್ತೊಂದು ಪ್ರಶ್ನೆ.

ಮೇಲ್ನೋಟಕ್ಕೇನೋ, ಸಂಘ ಪರಿವಾರದ ಪಡಸಾಲೆಯಲ್ಲಿ , ಅರ್ಥಾತ್‌ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳದ ತೆಕ್ಕೆಯಲ್ಲಿ ತಮ್ಮ ಬಗ್ಗೆ ಕೇಳಿಬರುತ್ತಿರುವ ಅಭಿಪ್ರಾಯಗಳಿಂದ ವಾಜಪೇಯಿ ರೋಸಿದ್ದರು. ಹೀಗಾಗಿ ಮೋದಿ ಪದಚ್ಯುತಿಯ ಮಾತನಾಡಿದರು ಎಂಬರ್ಥದ ಮಾತುಗಳು ಕೇಳುತ್ತಿವೆ.

ಅಂದಹಾಗೆ ಈ ಅಭಿಪ್ರಾಯಗಳ ಅರ್ಥವೇನು? ವಾಜಪೇಯಿ ಅವರಿಗೆ ವಯಸ್ಸಾಯಿತು. ಇನ್ನು ಬಿಜೆಪಿಯ ನೇತೃತ್ವ ವಹಿಸುವ ಶಕ್ತಿ ಅವರಿಗಿಲ್ಲ. ಹೀಗಾಗಿ ಅವರು ರಾಜಕೀಯ ಸನ್ಯಾಸ ತೆಗೆದುಕೊಳ್ಳಲಿ ಎಂಬುದು. ಆಳವಾಗಿ ನೋಡಿದರೆ ಈ ಅಭಿಪ್ರಾಯದಲ್ಲಿ ಹುರುಳಿದೆ ಅನ್ನಿಸುವುದಿಲ್ಲ.

ಯಾಕೆಂದರೆ, ರಾಜಕೀಯ ನಿವೃತ್ತಿಯ ಮಾತನ್ನು ವಾಜಪೇಯಿ ವರ್ಷಗಳ ಹಿಂದೆಯೇ ಆಡಿದ್ದರು. ಮುಂಬರುವ ಲೋಕಸಭಾ ಚುನಾವಣೆಯನ್ನು ಪಕ್ಷ ಅಡ್ವಾಣಿಯವರ ನೇತೃತ್ವದಲ್ಲಿ ಎದುರಿಸಲಿದೆ ಎಂಬ ಮಾತನ್ನು ಅವರು ಆಡಿದಾಗ, ನೂರು ಕೋಟಿ ಜನರ ನಾಯಕನಾಗಿ ನಿಂತಿದ್ದರು.

ಆಗೆಲ್ಲ ಓಡಿಹೋಗಿ, ವಾಜಪೇಯಿಯ ಕೈಕಾಲು ಹಿಡಿದು: ನೀವು ನಿವೃತ್ತಿಯ ಮಾತಾಡುವುದು ಸರಿಅಲ್ಲ. ನೀವಿಲ್ಲದೆ ನಾವಿಲ್ಲ ಎಂಬ ಅರ್ಥದಲ್ಲಿ ಮಾತಾಡಿದವರೂ ಇದೇ ವೆಂಕಯ್ಯ ನಾಯ್ಡು ತರಹದ ಜನ. ಹೀಗಿರುವಾಗ ವಿಎಚ್‌ಪಿ ಅಥವಾ ಭಜರಂಗ ದಳದ ತೆಕ್ಕೆಯಿಂದ ಕೇಳಿಬಂದ ಮಾತನ್ನು ವಾಜಪೇಯಿ ತುಂಬ ಗಂಭೀರವಾಗಿ ಸ್ವೀಕರಿಸಿ, ಮೋದಿ ವಿರುದ್ಧ ತಿರುಗಿಬಿದ್ದರು ಎಂದರೆ ನಂಬುವುದು ಕಷ್ಟ.

ಆದರೆ ಆಳವಾಗಿ ಗಮನಿಸಿ ನೋಡಿ. ಮೋದಿ ವಿರುದ್ಧ ವಾಜಪೇಯಿ ಅಬ್ಬರಿಸಿದ ರೀತಿ, ಮೋದಿಯ ರಕ್ಷಣೆಗೆ ಸಂಘ ಪರಿವಾರದ ನಾಯಕರು ಧಾವಿಸಿದ ಪರಿ, ಅಡ್ವಾಣಿಯ ಜಾಣಮೌನಗಳೆಲ್ಲ ಬೇರೆ ಬೇರೆ ಅರ್ಥಗಳನ್ನೇ ಧ್ವನಿಸುತ್ತವೆ. ಹಾಗೆ ನೋಡಿದರೆ ಅಡ್ವಾಣಿ ಸಂಘಪರಿವಾರದ ನಿಜವಾದ ಡಾರ್ಲಿಂಗ್‌, ಕಟ್ಟಾ ಹಿಂದೂವಾದಿ. ಆದರೆ ವಾಜಪೇಯಿ ಹಾಗಲ್ಲ. ಆತ ಕಾಲಾನು ಕಾಲಕ್ಕೆ ಸಂಘ ಪರಿವಾರದ ವಿರುದ್ಧ ಗುಟುರು ಹಾಕಿದ್ದಾರೆ. ತಾವು ಸಾಫ್ಟ್‌ ಹಿಂದೂವಾದಿ ಎಂಬುದನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ.

ಈವತ್ತೂ ಅಷ್ಟೇ. ಮೋದಿ ಬದಲಾವಣೆ ಕುರಿತು ಅಬ್ಬರಿಸಿದ ವಾಜಪೇಯಿಯೇ, ನಾನು ಆ ಥರ ಹೇಳಿರಲಿಲ್ಲ ಎನ್ನುತ್ತಿದ್ದಾರೆ. ಅಡ್ವಾಣಿಯವರು ಯಥಾಪ್ರಕಾರದ ಮೌನಿ. ಅದರರ್ಥ ? ವಾಜಪೇಯಿ-ಅಡ್ವಾಣಿ ಸೇರಿಯೇ ಬಿಜೆಪಿಯ ರಥವನ್ನು ಹೊಸ ಮಾರ್ಗದಲ್ಲಿ ಎಳೆಯಲು ಯತ್ನಿಸುತ್ತಿದ್ದಾರೆ. ಯಾವುದು ಈ ದಾರಿ ? ವಾಜಪೇಯಿ ಅವರನ್ನು ಮುಂದಿಟ್ಟುಕೊಂಡು ಚುನಾವಣಾ ಕಣಕ್ಕಿಳಿದಾಗ ಬಿಜೆಪಿಯ ಘೋಷವಾಕ್ಯ ಅದ್ಭುತವಾಗಿತ್ತು. ಭಾರತ ಪ್ರಕಾಶಿಸುತ್ತಿದೆ ಎಂಬ ನುಡಿ ದೇಶದೆಲ್ಲೆಡೆ ಮಿಂಚಿದಾಗ ಸ್ವತಃ ಕಾಂಗ್ರೆಸ್ಸಿಗರೇ ದಂಗು ಬಡಿದುಹೋಗಿದ್ದರು.

ಈ ಘೋಷವಾಕ್ಯಕ್ಕೆ ವಿರುದ್ಧವಾಗಿ ಆಡಲು ನೂರು ಮಾತುಗಳು ವಿರೋಧ ಪಕ್ಷಗಳಿಗೆ ಸಿಕ್ಕಿರಬಹುದು. ಆದರೂ ವಾಜಪೇಯಿ ಸರ್ಕಾರ ಹತ್ತಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿತ್ತು ಎಂಬುದು ಸ್ಪಷ್ಟ . ಆದರೂ, ಹಿಂದೂವಾದ, ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷವಾಕ್ಯ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲಿಲ್ಲ. ಯಾಕೆ? ಈ ಪ್ರಶ್ನೆಯ ಬಗ್ಗೆ ಉಳಿದೆಲ್ಲರಿಗಿಂತ ಗಾಢವಾಗಿ ಚಿಂತಿಸಿರುವವರು ವಾಜಪೇಯಿ ಹಾಗೂ ಅಡ್ವಾಣಿ.

ಮುಸ್ಲಿಮರು ದೊಡ್ಡ ಮಟ್ಟದಲ್ಲಿ ತಿರುಗಿ ಬಿದ್ದಿದ್ದೇ ಇಂತಹ ಬೆಳವಣಿಗೆಗೆ ಕಾರಣ ಎಂಬುದೂ ಸ್ಪಷ್ಟವೇ. ಇಲ್ಲದಿದ್ದರೆ ಉತ್ತರ ಪ್ರದೇಶದ ಮುಲಾಯಂ ಸಿಂಗ್‌, ಮಾಯಾವತಿ. ತಮಿಳುನಾಡಿನ ಕರುಣಾನಿಧಿ ಅವರಂತಹ ನಾಯಕರು ಈ ಮಟ್ಟದಲ್ಲಿ ಹೇಗೆ ಚಿಗಿತು ನಿಲ್ಲುತ್ತಿದ್ದರು? ಯಾವಾಗ ಬಿಜೆಪಿ ಸರ್ಕಾರದ ಬಗ್ಗೆ ಮುಸ್ಲಿಮರು ಹೆದರಿಕೊಂಡರೋ? ಅದರ ಬೆನ್ನಿಗೇ ದಲಿತರು, ಹಿಂದುಳಿದವರೂ ದೊಡ್ಡ ಮಟ್ಟದ ಅನುಮಾನದಿಂದ ಹಿಂದೆ ಸರಿದರು.

ಈವತ್ತು ಅಂತಹ ಪರಿಸ್ಥಿತಿಯನ್ನು ಒಪ್ಪಿಕೊಂಡು ಸುಮ್ಮನಾದರೆ ಏನಾಗುತ್ತದೆ? ಎನ್‌ಡಿಎ ಮಿತ್ರಪಕ್ಷಗಳು ಮೆಲ್ಲಗೆ ಬಿಜೆಪಿಯ ತೆಕ್ಕೆಯಿಂದ ದೂರ ಉಳಿದುಬಿಡಬಹುದು. ಕೆಲವೇ ದಿನಗಳ ಹಿಂದೆ ಸಂಘ ಪರಿವಾರದ ಮನ ಸೆಳೆಯುವ ಸಲುವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದ ತಮಿಳ್ನಾಡಿನ ಜಯಲಲಿತಾ, ಈವತ್ತು ಆ ಕಾಯ್ದೆಯನ್ನೇ ಹಿಂತೆಗೆದುಕೊಂಡಿದ್ದಾರೆ. ಗುಜರಾತ್‌ ಹಿಂಸಾಚಾರದ ಸಂದರ್ಭದಲ್ಲಿ ತಾವು ನೆಪಕ್ಕೊಂದು ಪ್ರತಿಭಟನೆ ಮಾಡಿದ್ದೇ ಆಂಧ್ರದಲ್ಲಿ ತಾನು ಮುಳುಗಲು ಕಾರಣವಾಯಿತು ಅಂತ ಟಿಡಿಪಿಯ ಚಂದ್ರ ಬಾಬು ನಾಯ್ಡು ಬಾಯಿಬಡಿದುಕೊಳ್ಳುತ್ತಿದ್ದಾರೆ.

ಇಂಥವರೆಲ್ಲ ಸೇರಿ ನಾಳೆ ಸಮಾಜವಾದಿ ನಾಯಕ ಮುಲಾಯಂಸಿಂಗ್‌ ಯಾದವ್‌ ಜತೆ ಸೇರಿ ತೃತೀಯ ರಂಗ ಕಟ್ಟುವುದಿಲ್ಲ ಅಂತ ನಂಬುವುದಕ್ಕೆ ಏನಿದೆ ಆಧಾರ?

ಹೀಗಾಗಿ ಈ ಕ್ಷಣದಲ್ಲಾದರೂ ಆತ್ಮ ವಿಮರ್ಶೆಯ ಮಾತಾಡಬೇಕು. ಬಿಜೆಪಿಯ ನೆಲೆಯಲ್ಲಿ ಸರಿಯಾದ ಚಿಂತನೆ ನಡೆಯುತ್ತಿದೆ ಎಂಬ ಭಾವನೆ ಬರಬೇಕು. ಆ ಮೂಲಕ ಅಸಂತೃಪ್ತರಾಗಿರುವ ಎನ್‌ಡಿಎ ಸಂಗಾತಿಗಳು ಸಮಾಧಾನ ಪಟ್ಟುಕೊಳ್ಳಬೇಕು. ಹಾಗಾದಾಗ ಏನಾಗುತ್ತದೆ? ಮರಳಿ ಮುಸ್ಲಿಮರನ್ನು ಓಲೈಸುವ, ದಲಿತರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನಕ್ಕೆ ಚಾಲನೆ ದೊರೆಯುತ್ತದೆ. ಒಂದು ಸಲ ಅದಕ್ಕೆ ಚಾಲನೆ ದೊರೆತರೆ ಸುದೀರ್ಘ ಪ್ರಯಾಣಕ್ಕೆ ಹಾದಿ ತೆರೆದುಕೊಂಡೀತೆಂದೇ ಅರ್ಥ.

ಈವತ್ತು ವಾಜಪೇಯಿ ಹಾಕಿರುವ ಗುಟುರಿನ ಹಿನ್ನೆಲೆಯಲ್ಲಿ ಕೆಲಸ ಮಾಡಿರುವ ಅಂಶಗಳೇ ಇವು. ಆದರೆ ಹೀಗೆ ಗುಟುರು ಹಾಕಿದ ನಂತರ ವಾಜಪೇಯಿಯೇ ಯಾಕೆ ಗಪ್‌ಚುಪ್‌ ಕುಂತುಬಿಟ್ಟರು? ಆ ಪ್ರಶ್ನೆ ಬಂದಾಗ ಕಾಣುವವರು ಅಡ್ವಾಣಿ. ಅವರು ಕಾಲಾನುಕಾಲಕ್ಕೆ ಕಟ್ಟಾ ಹಿಂದುತ್ವವಾದಿ, ಆರ್‌ಎಸ್‌ಎಸ್‌ ಹಾಗೂ ಸಾಫ್ಟ್‌ ಹಿಂದೂವಾದಿ. ವಾಜಪೇಯಿ ನಡುವೆ ಸೇತುವೆಯಾಗಿ ಕೆಲಸ ಮಾಡಿರುವವರು.

ಹಿಂದೆ ಇಂದಿರಾ ತಂತ್ರದಿಂದಾಗಿ ಕೇಂದ್ರದಲ್ಲಿ ಜನತಾ ಪಕ್ಷದ ಸರ್ಕಾರ ಮುರಿದು ಬಿತ್ತಲ ್ಲ; ಆಗ ಇದೇ ವಾಜಪೇಯಿ: ರಾಜಕೀಯ ಪಕ್ಷಗಳ ದೈನಂದಿನ ವ್ಯವಹಾರದಲ್ಲಿ ತನಗೆ ಆಸಕ್ತಿಯಿಲ್ಲ ಎಂಬ ಮಾತನ್ನು ಸಂಘ ಪರಿವಾರ ಇನ್ನಷ್ಟು ಪರಿಣಾಮಕಾರಿಯಾಗಿ ಸಾಬೀತುಪಡಿಸಬೇಕು ಎಂದು ಗುಡುಗಿದ್ದರು.

ವಿರೋಧ ಪಕ್ಷಗಳು ಇದನ್ನೇ ಎತ್ತಾಡತೊಡಗಿದ್ದಾಗ ವಾಜಪೇಯಿಯ ನಿಲುವನ್ನು ಸಂಘ ಪರಿವಾರ ಹಾಗೂ ಸಾರ್ವಜನಿಕರೆದುರು ಸಮರ್ಥಿಸಿಕೊಂಡವರು ಅಡ್ವಾಣಿ. ಮುಂದೆ 1989ರಲ್ಲಿ ವಿ.ಪಿ. ಸಿಂಗ್‌ ಸರ್ಕಾರಕ್ಕೆ ಬೆಂಬಲ ನೀಡಿದ ಬಿಜೆಪಿಯ ಬಗ್ಗೆ, ಅಳುವವರು ಸದರವಾಗಿ ನಡೆದುಕೊಳ್ಳಬಾರದು ಎಂದು ವಾಜಪೇಯಿ ಗುಡುಗಿದಾಗ ಮಂಡಲ್‌ ವರದಿಯ ಬೆಂಕಿ ಆಕಾಶದೆತ್ತರಕ್ಕೇರಿತ್ತು.

ಆದರೆ ಆ ಸಂದರ್ಭದಲ್ಲಿ ವಾಜಪೇಯಿ ಹೇಳಿಕೆಯನ್ನು ಸಮರ್ಥಿಸಿಕೊಂಡು: ಯಾವ ಚಿಂತನೆಗಳ ಆಧಾರದ ಮೇಲೆ ನಾವು ವಿ.ಪಿ.ಸಿಂಗ್‌ಗೆ ಬೆಂಬಲ ಕೊಟ್ಟಿದ್ದೇವೋ? ಆ ಚಿಂತನೆಗಳ ಮೇಲೆ ಪ್ರಹಾರವಾಗದಿರಲಿ ಅಂದಿದ್ದರು.

ಹಾಗೇನಾದರೂ ಮಂಡಲ್‌ ವಿರುದ್ಧ ವಾಜಪೇಯಿ ಧ್ವನಿ ಎತ್ತಿದರು ಎಂಬರ್ಥ ಬಂದಿದ್ದರೆ ಬಿಜೆಪಿಯ ಶಕ್ತಿಯೇ ಕುಸಿದುಹೋಗುತ್ತಿತ್ತು. ಆದರೆ ಅಡ್ವಾಣಿ ರಥಯಾತ್ರೆಯ ಅನುಕೂಲ ಸಿಗುವವರೆಗೆ ಬೆಂಬಲ ಮುಂದುವರಿಸಿಕೊಂಡೇ ಹೋದರು.

ಇವತ್ತೂ ಅಷ್ಟೆ . ಮೋದಿಯನ್ನು ಬಲಿಪಶು ಮಾಡದೆ ಹೊದರೆ ಬಿಜೆಪಿಯ ದೇಹಕ್ಕೆ ಹೊಸ ಕಸುವು ತರಲು ಸಾಧ್ಯವಿಲ್ಲ. ಹಾಗಂತ ಗೋಧ್ರಾ ಪ್ರಕರಣವನ್ನೇ ಮುಂದಿಟ್ಟುಕೊಂಡು ಕೆಳಗಿಳಿಸಿದರೆ ಹಿಂದೂಗಳು ಕೆರಳುತ್ತಾರೆ. ಅಂದ ಮೇಲೆ ಏನು ಮಾಡಬೇಕು? ಬಿಜೆಪಿ ನೆಲೆಯಲ್ಲಿ ಆತ್ಮವಿಮರ್ಶೆ ನಡೆಯತೊಡಗಿದೆ ಎಂಬ ಭಾವನೆಯೂ ಬರಬೇಕು. ಹಿಂದೂವಾದಿಗಳ ಆಕ್ರೋಶಕ್ಕೆ ಗುರಿಯಾಗಲೂಬಾರದು.

ಆದರೆ ನಾಳೆ? ಮೋದಿ ಅಧಿಕಾರದಿಂದ ಕೆಳಗಿಳಿಯುವುದು ನಿಶ್ಚಿತ. ಹಾಗಂತ ಗೋಧ್ರಾ ಪ್ರಕರಣ ಈ ಬೆಳವಣಿಗೆಗೆ ನೆಪವಾಗಬಾರದು. ಬದಲಿಗೆ ಇನ್ನೇನೋ ನೆಪವೆತ್ತಿ ಮೋದಿಯನ್ನು ಕೆಳಗಿಳಿಸಬೇಕು. ಇದು ಸದ್ಯದ ಲೆಕ್ಕಾಚಾರ. ವಾಜಪೇಯಿ ಆ ಲೆಕ್ಕಾಚಾರಕ್ಕೆ ಚಾಲನೆ ನೀಡಿದ್ದಾರೆ. ಅಡ್ವಾಣಿ ಅದನ್ನು ಅನುಷ್ಠಾನಗೊಳಿಸುತ್ತಾರೆ. ಅಷ್ಟಾದರೆ ಸಾಕು, ಬಿಜೆಪಿ ಹೊಸ ಪ್ರಯಾಣಕ್ಕೆ ಅಣಿಯಾಗುತ್ತದೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X