ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿವಿಎನ್‌ ಎಂಬ ಮುತ್ಸದ್ದಿ , ಮೇಧಾವಿ , ಮತ್ತು ಕುತಂತ್ರಿ !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಒಂದು ಘಟನೆ ಉರುಳಿದೆ.

ಇದು ಅಂತಿಂಥ ಘಟವಲ್ಲ. ಭಾರತ ಕಂಡ ಅತ್ಯಂತ ಮೇಧಾವೀ ರಾಜಕಾರಣಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲವಂಥ ಘಟ. ಭಾರತವೆಂಬ ಬಡ ದೇಶಕ್ಕೆ ಒಂದು ಐಶಾರಾಮೀ ಕನಸು ಕೊಟ್ಟ ಘಟ. ದಿವಾಳಿಯಂಚಿನಿಂದ ದೇಶವನ್ನು ರಕ್ಷಿಸಿದ ಘಟ.ಪಕ್ಷಗಳನ್ನು ಕಡ್ಡಿ ಮುರಿದಂತೆ ಲಟಲಟ ಮುರಿದು ಹಾಕಿದ ಘಟ. ಪ್ರಧಾನಿ ಹುದ್ದೆಗೇರಿದ ಅತ್ಯಂತ ಚಾಣಾಕ್ಷ,ಕುತಂತ್ರಿ, ಮತ್ತು ಭ್ರಷ್ಟಘಟ !

ಪಾಮುಲಪರ್ತಿ ವೆಂಕಟ ನರಸಿಂಹರಾವ್‌ ಎಂಬ ವೃದ್ಧ ಮುತ್ಸದ್ದಿಯನ್ನ ನಾವು ಹೀಗಲ್ಲದೆ ಮತ್ತಿನ್ನು ಹ್ಯಾಗೂ ನೆನಪಿಸಿಕೊಳ್ಳುವುದು ಸಾಧ್ಯವೇ ಇಲ್ಲವೇನೋ. ಈ ವ್ಯಕ್ತಿ ಇಂಥವನೇ ಅಂತ ಚೌಕಟ್ಟು ಹಾಕಿಕೂರಿಸುವ ಜನರಿಗೊಂದು ಸವಾಲಿನಂತಿದ್ದರು ಪಿವಿಎನ್‌. ಅವರು ಬಹುಭಾಷಾ ಪ್ರವೀಣರೂ,ಪ್ರಚಂಡ ಬರವಣಿಗೆಯಿದ್ದ ಬರಹಗಾರರೂ, ಅಪಾರವಾಗಿ ಓದಿಕೊಂಡಿದ್ದ ಜ್ಞಾನಿಯೂ, ಜಗತ್ತಿನ ಸಮಸ್ತ ಆಗುಹೋಗು ಬಗ್ಗೆಯೂ ಇದ ಮಿತ್ಥಂ ಅಂತ ಹೇಳಬಲ್ಲಷ್ಟು ಪ್ರಜ್ಞಾವಂತರೂ, ಬೆಣ್ಣೆಯಿಂದ ಕೂದಲು ತೆಗೆದ ಹಾಗೆ ನಯವಾಗಿ ಮಾತಾಡುತ್ತಲೇ ತಮಗೆ ಅನ್ನಿಸಿದ್ದನ್ನು ಎದುರಿನವರು ಒಪ್ಪುವಂತೆ ತಿಳಿಸಬಲ್ಲ ಮಾತುಗಾರರೂ, ಮುಂದಿನ ದಿನಗಳಿಗಾಗಿ ಇಂದೇ ತಯಾರಿ ಮಾಡಿಕೊಳ್ಳುವ ದೂರದೃಷ್ಟಿಯವರೂ, ಸದಾ ಏನನ್ನಾದರೂ ಕಲಿಯುತ್ತಲೇ ಇರಬೇಕು ಅಂತ ತಹತಹಿಸುತ್ತಿದ್ದ ನಿರಂತರ ವಿದ್ಯಾರ್ಥಿಯೂ, ಇವೆಲ್ಲವೂ ಆಗಿದ್ದುದರ ಜೊತೆಗೇ ಅವರು, ಅತ್ಯಂತ ಭ್ರಷ್ಟರೂ, ಕುತಂತ್ರಿಯೂ,ನಂಬಿಕೆದ್ರೋಹಿಯೂ ಆಗಿದ್ದರು. ಬಿಲ್‌ಕ್ಲಿಂಟನ್‌ನಂಥವನ ಜೊತೆಗೆ ಕೂತು, ಯಾಕಯ್ಯಾ ಭಾರತಕ್ಕೆ ಅನ್ಯಾಯ ಮಾಡ್ತಿದ್ದೀಯ ಅಂತ ಕೇಳಿ ಅವನನ್ನು ಮೆತ್ತಗೆ ಮಾಡುತ್ತಿದ್ದ, ಆ ಮೂಲಕ ಇಂಡಿಯಾ-ಅಮೆರಿಕಾ ಸಂಬಂಧವನ್ನು ಹೊಸ ದಿಕ್ಕಿಗೆ ಎಳೆಯುತ್ತಿದ್ದ ಈ ಮನುಷ್ಯ, ಅದೇ ಸಮಯದಲ್ಲಿ ಚಂದ್ರಾಸ್ವಾಮಿಯಂಥ ಕ್ರಿಮಿನಲ್‌ ಗಾಡ್‌ಮನ್‌ಗಳ ಜೊತೆ ಸೇರಿ ತಮ್ಮ ಜನರ ಕಣ್ಣಿಗೇ ಮಣ್ಣೆ ರಚಬಲ್ಲವರೂ ಆಗಿದ್ದರು. ಮನಮೋಹನ್‌ಸಿಂಗ್‌ ಎಂಬ ಪ್ರಚಂಡ ಆರ್ಥಿಕ ತಜ್ಞನ ಜೊತೆ ಕೂತು ದೇಶದ ಆರ್ಥಿಕ ಸಮಸ್ಯೆಗಳ ಬಗ್ಗೆ, ದಿವಾಳಿತನದಿಂದ ದೇಶವನ್ನು ಉಳಿಸಬಲ್ಲ ದಾರಿಗಳ ಬಗ್ಗೆ, ಮುಂಬರುವ ದಿನಗಳ ‘ಗ್ಲೋಬಲ್‌ ವಿಲೇಜ್‌’ಸ್ಥಿತಿಗೆ ದೇಶವನ್ನು ಸಜ್ಜುಗೊಳಿಸುವ ರೀತಿಯ ಬಗ್ಗೆಯೆಲ್ಲಾ ಅತ್ಯಂತ ಗಹನವಾಗಿ- ಪ್ರೌಢವಾಗಿ ಚಿಂತಿಸಬಲ್ಲವರಾಗಿದ್ದ ಅವರು, ಅವರ ಬೆನ್ನಲ್ಲೇ, ಎದುರಾಳಿ ಪಕ್ಷದ ಸಂಸದರನ್ನು ರಹಸ್ಯವಾಗಿ ಭೇಟಿ ಮಾಡಿ, ತಮ್ಮ ಎದುರಾಳಿ ಪಕ್ಷದ ಸಂಸದರನ್ನು ರಹಸ್ಯವಾಗಿ ಭೇಟಿ ಮಾಡಿ,ಅವರೊಂದಿಗೆ ವ್ಯವಹಾರ ಕುದುರಿಸಿ, ತಮ್ಮ ಎದುರಾಳಿಗಳನ್ನು ಮಟ್ಟ ಹಾಕಬಲ್ಲರೂ ಆಗಿದ್ದರು.

P.V. Narasimha Raoಉಹುಂ, ಒಂದು ಚೌಕಟ್ಟಿಗೆ ಸಿಗುವ ಘಟವಲ್ಲ, ಪಿವಿ ನರಸಿಂಹರಾಯರು. ಹಾಗೆ ನೋಡಿದರೆ,ಪಿವಿಎನ್‌ ‘ ಇದೇ ನನ್ನ ಗಮ್ಯ’ ಅಂತಂದುಕೊಂಡು ಒಂದೇ ದಾರಿಯಲ್ಲಿ ನಡೆದುಬಂದವರೂ ಅಲ್ಲ. ರಾಜಕೀಯದಲ್ಲಿ ಅವರು ಓನಾಮ ಹಾಡಿದ್ದೇ,1938 ರಲ್ಲಿ ‘ವಂದೇ ಮಾತರಂ’ ಹಾಡಕೂಡದು ಅಂತ ಕಾಲೇಜು ವಿದ್ಯಾರ್ಥಿಗಳ ಮೇಲೆ ಹೈದರಾಬಾದಿನ ನಿಜಾಮ ಹೇರಿದ್ದ ನಿರ್ಬಂಧವನ್ನು ಪ್ರತಿಭಟಿಸುವುದರ ಮೂಲಕ! ಮುಂದೆ ಅವರೇ, ಈ ‘ವಂದೇ ಮಾತರಂ’ ಗಾಯನವನ್ನ ಶಾಲೆಗಳಲ್ಲಿ ಕಡ್ಡಾಯ ಮಾಡಬೇಕು ಅಂತ ಬಿಜೆಪಿಯವರು ಮಾಡಿದ ಹಟವನ್ನ ವಿರೋಧಿಸಬೇಕಾಗಿ ಬಂದಿದ್ದು, ಅವರ ಬದುಕಿನ ಅನೇಕ ರಾಜಕೀಯ ವಿಪರ್ಯಾಸಗಳಲ್ಲೊಂದು.ಕಾಂಗ್ರೆಸ್‌ ಎಂಬ ಬಾಯಿಮಾತಿನ ‘ಸೆಕ್ಯುಲರ್‌’ಪಕ್ಷದ ಅಧಿಪತಿಯಾಗಿ , ಭಾರತವೆಂಬ ನಿಜಕ್ಕೂ ಸೆಕ್ಯುಲರ್‌ ಆದ ದೇಶದ ಪ್ರಧಾನಿಯಾಗಿ ಇದ್ದುಕೊಂಡೂ ಅವರು 1992 ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸಕ್ಕೆ ಕುರುಡು ಧೃತರಾಷ್ಟ್ರನ ಹಾಗೆ ಪರೋಕ್ಷ ಅವಕಾಶ ಮಾಡಿಕೊಟ್ಟಿದ್ದು, ಅದಕ್ಕಿಂತಲೂ ದೊಡ್ಡ ವಿಪರ್ಯಾಸ !

1921ರ ಜೂನ್‌ 28ರ ಪುಣ್ಯ ದಿನದಂದು ಆಂಧ್ರಪ್ರದೇಶದಲ್ಲಿರುವ ಕರೀಮ್‌ನಗರದ ವಂಗಾರ ಅನ್ನುವ ಹಳ್ಳಿಯಲ್ಲಿ ಹುಟ್ಟಿ, ಬಲುಬೇಗನೆ ಸ್ವಾತಂತ್ರ್ಯ ಸಂಗ್ರಾಮಕ್ಕೂ ಧುಮುಕಿ,1940ರ ದಶಕ ಅಡಿಯಿಡುವುದಕ್ಕೂ ಮುಂಚೆಯೇ ಕಾಂಗ್ರೆಸ್ಸಿನ ಟೋಪಿಯನ್ನು ತಲೆಗೆ ಧರಿಸಿಬಿಟ್ಟಿದ್ದರೂ, ಪಿವಿಎನ್‌ ಅವರು ಎಂದೂ ಕಾಂಗ್ರೆಸ್‌ ಪಕ್ಷದ ಅತ್ಯುನ್ನತ ಮತ್ತು ಅತ್ಯುಗ್ರ ನಾಯಕರಾಗಿ ಬೆಳೆದೇ ಇರಲಿಲ್ಲ. ತುರ್ತು ಪರಿಸ್ಥಿತಿಯ ನಂತರದ ಚುನಾವಣಾ ಬಿರುಗಾಳಿಯಲ್ಲಿ ತಮ್ಮ ಎಂಪಿ ಸ್ಥಾನವನ್ನು ಉಳಿಸಿಕೊಂಡ ಅಪರೂಪದ ಕಾಂಗ್ರೆಸ್ಸಿಗರೂ, ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ವಿದೇಶಾಂಗ, ರಕ್ಷಣಾ ಮತ್ತು ಗೃಹಮಂತ್ರಿಯಂತಹ ಅತ್ಯಂತ ಪ್ರತಿಷ್ಠಿತ ಸ್ಥಾನಗಳಲ್ಲಿ ಕೆಲಸ ಮಾಡಿದ್ದರೂ ಕೂಡ, ಅವರು ಎಂದೂ ಕಾಂಗ್ರೆಸ್ಸಿನ ಗುತ್ತಿಗೆ ಹಿಡಿದಿರುವ ನೆಹರೂ-ಗಾಂಧಿಕುಟುಂಬಕ್ಕಿಂತ ಎತ್ತರಕ್ಕೆ ಬೆಳೆಯುವುದಕ್ಕೆ-ಚಠಿ ್ಝಛಿಚಠಠಿ, ಪಕ್ಷದ ಸೆಕೆಂಡ್‌ ಇನ್‌ ಕಮಾಂಡ್‌ ಆಗುವುದಕ್ಕೂ- ಅವರಿಂದ ಸಾಧ್ಯವಾಗಲೇ ಇಲ್ಲ. ವಯಸ್ಸು ಹಾಗೂ ಪಕ್ಷದಲ್ಲಿನ ಅವರ ನಗಣ್ಯಸ್ಥಾನ ಅವರನ್ನು ಅದೆಷ್ಟರ ಮಟ್ಟಿಗೆ ಮೆತ್ತಗಾಗಿ ಸಿಬಿಟ್ಟಿತ್ತೆಂದರೆ, ಪ್ರಧಾನಿ ಪಟ್ಟ ಅವರನ್ನು ಹುಡುಕಿಕೊಂಡು ಬರುವ ಹೊತ್ತಿಗಾಗಲೇ ಅವರು ದೆಹಲಿಯಿಂದ ಗಂಟುಮೂಟೆ ಕಟ್ಟಿಕೊಂಡು, ತಮ್ಮ ಊರಿಗೆ ಹೋಗಿ ನೆಮ್ಮದಿಯ ರಿಟೈರ್‌ಮೆಂಟ್‌ ಅನುಭವಿಸುವುದಕ್ಕೆ ಸಿದ್ಧವಾಗಿ ಬಿಟ್ಟರು !

1991ರಲ್ಲಿ ಅಚಾನಕ್ಕಾಗಿ ರಾಜೀವ್‌ ಗಾಂಧಿಯವರು ಎಲ್‌ಟಿಟಿಇ ಬಾಂಬಿಗೆ ಬಲಿಯಾದರಲ್ಲಾ, ಆಗ ಕಾಂಗ್ರೆಸ್ಸೆಂಬ ಅನಾದಿಕಾಲದ ಪಕ್ಷದಲ್ಲಿ ನಿಜಕ್ಕೂ ಕೋಲಾಹಲವಾಗಿ ಹೋಗಿತ್ತು. ನೆಹರೂ - ಗಾಂಧಿ ಕುಟುಂಬದ ಕುಡಿಗಳ ಹೊರತಾಗಿ ಯಾರೊಬ್ಬರನ್ನೂ ಪಕ್ಷದ ಸರ್ವಾನುಮತದ ನಾಯಕರನನ್ನಾಗಿ ಅದು ಬೆಳೆಸೇ ಇರಲಿಲ್ಲ. ಇಂದಿರಾ ಹತ್ಯೆಯಾದಾಗಲಾದರೆ, ಅವರ ಸ್ಥಾನಕ್ಕೆ ಆಟೋ ಮ್ಯಾಟಿಕ್‌ ಆಗಿ ಬರಲು ರಾಜೀವ್‌ ರೆಡಿಯಾಗಿದ್ದರು. ಆದರೆ, ರಾಜೀವ್‌ ನಂತರ ಯಾರು ಎಂದೂ ಕಾಂಗ್ರೆಸ್‌ ಯೋಚಿಸಿರಲೇ ಇಲ್ಲ. ಸಡನ್ನಾಗಿ ಒಂದು ವ್ಯಾಕ್ಯೂಮ್‌ ಕ್ರಿಯೇಟ್‌ ಆಗಿಬಿಟ್ಟಿತ್ತು. ಆಗ, ಕಾಂಗ್ರೆಸ್ಸಿನ ತೋಳಗಳಿಗೆಲ್ಲಾ ಪಾಪದ ಬಲಿಪಶುವಿನಂತೆ ಕಂಡಿದ್ದು, ಪಿವಿಎನ್‌ ! ಹೇಗೂ ರಿಟೈರ್‌ ಮೆಂಟಿಗೆ ಸಿದ್ಧವಾಗಿರುವ ಮನುಷ್ಯ; ಆತನಿಂದ ತಮ್ಮ ಪ್ರಾಮುಖ್ಯತೆಗೇನೂ ಧಕ್ಕೆಯಾಗುವುದಿಲ್ಲ ಅಂತ ನೆಹರೂ ಫ್ಯಾಮಿಲಿಯ ಭಟ್ಟಂಗಿಗಳು ಭಾವಿಸಿದ್ದರು. ಹಾಗಾಗಿ , ಪಿವಿಎನ್‌ ತಾವೂ ನಿರೀಕ್ಷಿಸಿರದ ರೀತಿಯಲ್ಲಿ, ‘ ಸರ್ವಾನು ಮತ’ದಿಂದ ,ಕಾಂಗ್ರೆಸ್ಸಿನ ಅಧ್ಯಕ್ಷರೂ, ಆಮೇಲೆ ದೇಶದ ಪ್ರಧಾನಿಯೂ ಆಗೇ ಬಿಟ್ಟರು. ತಾವು ಬಯಸೀ ಬಯಸೀ ತಮ್ಮ ಹೆಗಲ ಮೇಲೆ ಕೂರಿಸಿಕೊಂಡಿದ್ದು, ಸಾಧು ವೇಷದ ತಾಂತ್ರಿಕ ನನ್ನ ಅನ್ನುವುದು ಕಾಂಗ್ರೆಸ್ಸಿನ ತೋಳಗಳಿಗೆ ಅರ್ಥವಾಗುವ ಹೊತ್ತಿಗೆ ತಡವಾಗಿ ಹೋಗಿತ್ತು !

ಕ್ಖಘ ಜಚಛ ಚ್ಟ್ಟಜಿಡಛಿಛ !ಅವರು, ತಮ್ಮ ರಿಟೈರ್‌ಮೆಂಟ್‌ ದಿರಿಸನ್ನೆಲ್ಲಾ ಬೀರುವಿನಲ್ಲಿ ತುಂಬಿ, ಬೀಗ ಹಾಕಿ, ಕೀಯನ್ನು ಕತ್ತಲಲ್ಲೆಲ್ಲೋ ಎಸೆದು, ಹೊಸದೊಂದು ಅವತಾರದಲ್ಲಿ ದರ್ಬಾರಿಗೆ ಬಂದೇ ಬಿಟ್ಟರು ! ನೋಡ ನೋಡುತ್ತಲೇ, ಸೋನಿಯಾ ಎಂಬ ಕಾಂಗ್ರೆಸ್‌ ರಾಜಮಾತೆಯ ಅಳವಿಗೂ ಸಿಗದಷ್ಟು ಆಗಾಧವಾಗಿ ಬೆಳೆದುಬಿಟ್ಟರು. ರಾತ್ರಿ ಬೆಳಗಾಗುವುದರೊಳಗಾಗಿ ಅವರ ಅಲ್ಪ ಸಂಖ್ಯಾತ ಸರ್ಕಾರ, ಪೂರ್ತಿ ಮೆಜಾರಿಟಿಯನ್ನು ದಕ್ಕಿಸಿಕೊಂಡೇ ಬಿಟ್ಟಿತು. ತೆಲುಗುದೇಶಂ, ಶಿವಸೇನಾ,ಜನತಾ ದಳಗಳೆಲ್ಲಾ ಆದ್ಯಂತವಾಗಿ ಒಡೆದು ಹೋಳುಗಳಾಗಿ ಹೋದವು.

ಹೀಗೆ ಸಿಕ್ಕ ಮೆಜಾರಿಟಿಯ ಬೆನ್ನಲೇ, ಪಿವಿಎನ್‌,ಭಾರತಕ್ಕೆ ಒಂದು ಅತ್ಯಂತ ಅಮೂಲ್ಯ ಕೊಡುಗೆಯನ್ನು ಕೊಟ್ಟರು. ಆ ಕೊಡುಗೆಯ ಹೆಸರು, ಇವತ್ತಿನ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ! ಈ ಸಿಂಗ್‌ರ ಜೊತೆ ಸೇರಿ ಅವರು ಶುರುಮಾಡಿದ ಆರ್ಥಿಕ ಸುಧಾರಣೆಯಿದೆಯಲ್ಲಾ,ಅದರಿಂದಲೇ ಇವತ್ತು ಭಾರತ ಒಂದು ಬಲಿಷ್ಠ ಜಾಗತಿಕ ಎಕಾನಮಿಯಾಗಿ ಬೆಳೆದು ನಿಂತಿರುವುದು, ಅದರಿಂದಲೇ ಇವತ್ತು ಈ ದೇಶದಲ್ಲಿ ಹಿಂದೆಂದೂ ಕಂಡು ಕೇಳದಂಥ ಮಾಧ್ಯಮ ಕ್ರಾಂತಿ ನಡೆದು ಹೋಗಿರುವುದು, ಅದರಿಂದಲೇ ಇಲ್ಲಿನ ಮಧ್ಯಮ ವರ್ಗಗಳು ಕಾರು-ಮನೆ-ಮತ್ತು ಒಂದು ಲಕ್ಷುರಿಯಸ್‌ ಬದುಕಿನ ಕನಸನ್ನು ಕೈಗೆಟುಕಿಸಿಕೊಳ್ಳಲು ಸಾಧ್ಯವಾಗಿರುವುದು,ಆದರಿಂದಲೇ ಅಮೆರಿಕವೆಂಬ ದೊಡ್ಡಣ್ಣನೂ - ಯುರೋಪಿಯನ್‌ ಯೂನಿಯನ್‌ ಎಂಬ ಮರಿಯಣ್ಣನೂ ಭಾರತದ ಬಗ್ಗೆ ಇಲ್ಲಿನ ಮಾರುಕಟ್ಟೆಗೆ ಬಗ್ಗೆ ಇನ್ನಿಲ್ಲದ ಕಾಳಜಿಯಿಟ್ಟು ಕೊಂಡಿರುವುದು. ಅವತ್ತು ಪಿವಿಎನ್‌ -ಸಿಂಗ್‌ ಜೋಡಿ ಹೀಗೊಂದು ಆರ್ಥಿಕ ಉದಾರೀಕರಣ ಜಾರಿಗೊಳಿಸದೆ ಹೋಗಿದ್ದಿದ್ದರೆ, ಅವತ್ತಿನ ಸ್ಥಿತಿಯಲ್ಲಿ ದೇಶ ದೀವಾಳಿಯೆದ್ದು ಹೋಗುತ್ತಿತ್ತು; ಹಾಗಾಗಿ,ಅವರು ಅಂಥದ್ದೊಂದು ದಾರಿಯನ್ನು ತುಳಿಯುವುದು ಅನಿವಾರ್ಯವಾಗಿತ್ತು ಅನ್ನುವುದೆಲ್ಲಾ ನಿಜವೇ ಆದರೂ, ಅಂಥದ್ದೊಂದು ನಿರ್ಣಯ ತೆಗೆದುಕೊಳ್ಳುವುದಕ್ಕೆ ಅಪಾರ ರಾಜಕೀಯ ಇಚ್ಛಾಶಕ್ತಿ ಮತ್ತು ಅದ್ವೀತಿಯ ದೂರದೃಷ್ಟಿ ಬೇಕು ಅನ್ನುವುದನ್ನ ಯಾರೂ ತಳ್ಳಿ ಹಾಕಲಾಗುವುದಿಲ್ಲ.

ಪಿವಿಎನ್‌ಗೆ ಅವೆರಡೂ ಇತ್ತು. ಹಾಗಾಗೇ , ನೆಹರೂ- ಗಾಂಧಿ ಕುಟುಂಬದವರಲ್ಲದಿದ್ದರೂ ಕೂಡ, ಪ್ರಧಾನಿ ಹುದ್ದೆಯಲ್ಲಿ ಐದು ವರ್ಷಗಳ ಪೂರ್ಣಾವಧಿ ಅಧಿಕಾರ ನಡೆಸಿದರು. ಹಾಗೆ ಮಾಡಿದ ಮೊದಲಿಗರು ಅನ್ನುವ ಹಿರಿಮೆಯೂ ಅವರಿಗೆ ದಕ್ಕಿತು. ಪ್ರಧಾನಿ ಪೀಠದಲ್ಲಿ ಕೂತ ಮೊದಲ ದಕ್ಷಿಣ ಭಾರತೀಯರಾಗಿ ಅವರು ಉತ್ತರಭಾರತದವರಿಗೆ ದಕ್ಷಿಣದವರ ಬಗ್ಗೆಯಿದ್ದ ಅನೇಕ ಪೂರ್ವಗ್ರಹಗಳನ್ನು ತೊಡೆದು ಹಾಕಿದರೆಂಬ ಶ್ರೇಯಸ್ಸೂ ಸಿಕ್ಕಿತು.

ಎಲ್ಲಾ ಸರಿ, ಸ್ವಲ್ಪ ತಮ್ಮ ಹಾಗೂ ತಮ್ಮ ಸುತ್ತ ಮುತ್ತಲಿನವರ ಕೈ ಗಳನ್ನು ಶುದ್ಧ ವಾಗಿಟ್ಟುಕೊಂಡುಬಿಟ್ಟಿದ್ದಿದ್ದರೆ, ಬಿಜೆಪಿಯೆಂಬ ಪಕ್ಷ ಅಧಿಕಾರದ ಕನಸು ಕಾಣುವುದು ಈ ದೇಶದಲ್ಲಿ ಸಾಧ್ಯವಾಗುತ್ತಲೇ ಇರಲಿಲ್ಲವೇನೋ ಆದರೆ, ಹರ್ಷದ್‌ ಮೆಹ್ತಾನ ಸ್ಟಾಕ್‌ ಹಗರಣ, ಆನಂತರ ಅವನು ತಾನು ಪ್ರಧಾನಿಗೆ ಒಂದು ಕೋಟಿ ಕೊಟ್ಟಿದ್ದಾಗಿ ಹೇಳಿ ಮಾಡಿದ ರಾದ್ದಾಂತ, ಚಂದ್ರಸ್ವಾಮಿ ಜೊತೆಗಿನ ಅವರ ವ್ಯವಹಾರಗಳು,ಸೇಂಟ್‌ ಕಿಟ್ಸ್‌ ಕೇಸು, ಜೆಎಂಎಂ ಲಂಚದ ಪ್ರಕರಣ,ಜೈನ್‌ ಹವಾಲಾ ಗಲಾಟೆ, ಮಸೀದಿಯ ವಿಧ್ವಂಸ, ಎಲ್ಲವೂ ಒಂದೊಂದಾಗಿ ಪಿವಿಎನ್‌ ಮಾಡಿದ ಒಳ್ಳೆಯ ಕೆಲಸಗಳ ಶ್ರೇಯಸ್ಸನ್ನೆಲ್ಲಾ ತಿಂದು ಹಾಕಿಬಿಟ್ಟವು. ಪಕ್ಷದೊಳಗೇ ಬಂಡಾಯಗಳು ಶುರುವಾದವು. ಸೋನಿಯಾ ಚಿಗಿತುಬಿಟ್ಟರು.

ಪಿವಿಎನ್‌ ದಢಾರನೆ ಬಿದ್ದೇ ಬಿಟ್ಟರು.ಅವರ ಈ ಕುಸಿತದೊಂದಿಗೇ, ಕಾಂಗ್ರೆಸ್ಸೆಂಬ ಪುರಾತನ ಪಕ್ಷ ಕೂಡ, ಶಯನೋತ್ಸವ ನಡೆಸಿ ಸುಸ್ತಾದ ಗಂಡಿನ ಥರ ಮಲಗೇ ಬಿಟ್ಟಿತು ; ಪೂರ್ತಿ ಎಂಟು ವರ್ಷಗಳ ಕಾಲ ಅದು ಮತ್ತೆ ಮೇಲೇಳಲೇ ಇಲ್ಲ !

ತಮ್ಮ ಸಾಧನೆ ಹಾಗೂ ಎಡವಟ್ಟುಗಳ ಮೂಲಕ ಪಿವಿಎನ್‌ ಒಂದು ಅತಿದೊಡ್ಡ ಪಾಠವನ್ನೇ ಹೇಳಿಕೊಟ್ಟರು. ಆದರೆ, ಕಮ್ಯುನಿಷ್ಟರ ಮರ್ಜಿಗೆ ಬಿದ್ದಿರುವ ಸೋನಿಯಮ್ಮನ ಕಾಂಗ್ರೆಸ್‌ ಪಕ್ಷ ಆ ಪಾಠವನ್ನು ಕಲಿತಿದೆಯೇ ಎಂಬುದು ಅನುಮಾನದ ವಿಷಯ !

ಅದೇನೇ ಇರಲಿ ಬಿಡಿ ; ಸತ್ತವರ ಬಗ್ಗೆ ಕೆಟ್ಟದ್ದನ್ನು ನೆನೆಸಿಕೊಳ್ಳಬಾರದಂತೆ. ಹಾಗಾಗಿ, ಪಿವಿಎನ್‌ಗೆ ಹಿಂದಿ, ಇಂಗ್ಲಿಷ್‌,ತೆಲುಗು ಸೇರಿದಂತೆ ದೇಶ-ವಿದೇಶ ಭಾಷೆಗಳ ಆಗಾಧವಾದ ಪಾಂಡಿತ್ಯವಿತ್ತು, ಅವರು ತೆಲುಗಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ವಿಶ್ವನಾಥ್‌ ಸತ್ಯನಾರಾಯಣ ಅವರ ‘ಮೇಯಿ ಪಡಗಲು’ಕೃತಿಯನ್ನು ಅದೆಷ್ಟು ಅದ್ಭುತವಾಗಿ ಹಿಂದಿಗೆ ಭಾಷಾಂತರಿಸಿದ್ದರು,ನೆಹರೂ ಕುಟುಂಬದ ಗುಲಾಮಗಿರಿಯನ್ನು ಕಾಂಗ್ರೆಸ್ಸಿನಲ್ಲಿ ಹ್ಯಾಗೆ ಮುರಿದು ಹಾಕಿಬಿಟ್ಟರು ಅನ್ನುವ ನೆನಪುಗಳೊಂದಿಗೆ , ಶ್ರದ್ಧಾಂಜಲಿ ಸಲ್ಲಿಸಿಬಿಡೋಣ.

(ಸ್ನೇಹ ಸೇತು ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X