• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಳು ನಾಲ್ಕು ವರ್ಷದಿಂದ ಉಪವಾಸವಿದ್ದಾಳೆ: ಗಾಂಧಿಯ ದಾರಿಯಲ್ಲಿ !

By Staff
|
Ravi Belagere on Thatskannada.com ರವಿ ಬೆಳಗೆರೆ
ಅವಳ ಹೆಸರು, ಐರೋಮ್‌ ಶರ್ಮಿಳಾ. ಮಣಿಪುರದವಳು. ಇಪ್ಪತ್ತೊಂಬತ್ತು ವರ್ಷದ ಹುಡುಗಿ. ನೋಡಲಿಕ್ಕೆ, ಸಾಧಾರಣ ರೂಪಿನ ಸಾಧಾರಣ ಹುಡುಗಿಯೇ. ಅವಳು ರಾಜಕೀಯ ನಾಯಕಿಯಲ್ಲ , ಸಮಾಜಸೇವಾ ಧುರೀಣೆಯಲ್ಲ , ಮಹಿಳಾ ಹಕ್ಕುಗಳಿಗಾಗಿ ಹೋರಾಡುವ ಭಾಷಣವೀರೆ ಕಾರ್ಯಕರ್ತೆಯೂ ಅಲ್ಲ. ಆದರೂ, ಮಣಿಪುರದ ಸರ್ಕಾರ ಅವಳ ಆರೋಗ್ಯ ಸ್ವಲ್ಪ ಏರುಪೇರಾದರೂ ನಡುಗಿ ಹೋಗುತ್ತದೆ, ಅವಳು ಯಾರೊಂದಿಗಾದರೂ ಮಾತಾಡಬೇಕೆಂದರೆ ತಾನೇ ಖುದ್ದಾಗಿ ಭೇಟಿಯ ವ್ಯವಸ್ಥೆ ಮಾಡುತ್ತದೆ, ಮುಖ್ಯಮಂತ್ರಿಯವರು ತಾವೇ ಸ್ವತಃ ಅವಳ ಬಳಿಗೆ ಬಂದು ಮಾತಾಡಿಕೊಂಡು ಹೋಗುತ್ತಾರೆ. ಪೊಲೀಸರು ಅವಳ ಪ್ರತಿಯಾಂದು ಅಗತ್ಯವನ್ನೂ ಸ್ವಂತ ತಮ್ಮದೇ ಇಚ್ಛೆಯೇನೋ ಎಂಬಂತೆ ಪೂರೈಸುತ್ತಾರೆ.

ಅವಳು ಇಂಫಾಲದ ಖಾಸಗಿ ಆಸ್ಪತ್ರೆಯಾಂದರ ಹಾಸಿಗೆಯ ಮೇಲೆ ದಿನಪೂರ್ತಿ ಮಲಗಿಯೇ ಇರುತ್ತಾಳೆ. ಪೊಲೀಸರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಲೇ ಇದ್ದಾರೆ.

ಬರುವ ನವೆಂಬರ್‌ ಎರಡಕ್ಕೆ , ಅವಳು ಆಸ್ಥಿತಿಗೆ ಬಿದ್ದು ನಾಲ್ಕು ವರ್ಷಗಳಾಗುತ್ತವೆ. ಈ ನಾಲ್ಕು ವರ್ಷಗಳಿಂದಲೂ ಅವಳು ನಿರಂತರವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಳೆ !

A womens fast to protest abuses by the armyನಮ್ಮ-ನಿಮ್ಮ ಮನೆಯಲ್ಲಿ ರುವ ಹೆಣ್ಣು ಮಕ್ಕಳಂತೆಯೇ ಸಾಮಾನ್ಯವಾದ ಹುಡುಗಿ ಅವಳು. ಆಗೀಗ ಒಮ್ಮೊಮ್ಮೆ ಯಾವ್ಯಾವುದೋ ಪ್ರತಿಭಟನೆಗಳಲ್ಲಿ ಸರ್ಕಾರದ ನೀತಿಗಳ ವಿರುದ್ದ ಧಿಕ್ಕಾರ ಕೂಗಿದ್ದು ಬಿಟ್ಟರೆ, ಅಂಥಾ ನೋಟೆಡ್‌ ಆ್ಯಕ್ಟಿವಿಸ್ಟ್‌ ಏನಲ್ಲ. ಅಂಥವಳು, ಇದ್ದಕ್ಕಿದಂತೆ, ನವೆಂಬರ್‌ 2, 2000ದಂದು ಉಪವಾಸ ಸತ್ಯಾಗ್ರಹಕ್ಕಿಳಿದುಬಿಟ್ಟಳು. ಮಾಲೋಮ್‌ ಎಂಬ ಹಳ್ಳಿಯಲ್ಲಿ ಹತ್ತು ಜನ ಅಮಾಯಕರನ್ನು ಅಸ್ಸಾಂ ರೈಫಲ್ಸ್‌ನ ಯೋಧರು ವಿನಾಕಾರಣ ಕೊಂದು ಹಾಕಿದ್ದು ಆ ಸಾಮಾನ್ಯ ಹುಡುಗಿಯನ್ನು ಕೆರಳಿಸಿ ಬಿಟ್ಟಿತ್ತು. 1958ರಷ್ಟು ಹಿಂದೆ ಯಾವುದೋ ಉದ್ದೇಶವಿಟ್ಟುಕೊಂಡು ರೂಪಿಸಲಾದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯೇ ಇಂಥ ಅನಾಚಾರದ ಮೂಲ ಅನ್ನುವುದು ಅವಳಿಗೆ ಗೊತ್ತಿತ್ತು . ಅಷ್ಟು ಹೊತ್ತಿಗಾಗಲೇ ರಾಜ್ಯದ ಅನೇಕ ಸಂಘಟನೆಗಳು ಆ ಕಾಯ್ದೆಯ ವಿರುದ್ಧ ಸಮರಕ್ಕಿಳಿದುಬಿಟ್ಟಿದ್ದವಲ್ಲ ? ಇವಳೂ ಕೂಡ ಅಂಥದ್ದೊಂದು ಹೋರಾಟದ ಕಣಕ್ಕೆ ಧುಮುಕಿ, ಆ ಅಮಾನುಷ ಕಾಯ್ದೆಯನ್ನು ರದ್ದು ಪಡಿಸುವವರೆಗೂ ತಾನು ಉಪವಾಸ ಮಾಡುವುದಾಗಿ ಹೇಳಿ ಕೂತುಬಿಟ್ಟಳು. ಅವಳ ಆ ನಿರ್ಧಾರವನ್ನು ಸಡಿಲಗೊಳಿಸುವುದು ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ.

ಆತ್ಮಹತ್ಯೆ ಪ್ರಯತ್ನದ ಆರೋಪದ ಮೇಲೆ ಶರ್ಮಿಳಾನ್ನು ಬಂಧಿಸಿ ಜೈಲಿಗೆ ಒಯ್ದಿದ್ದು ಹೌದಾದರೂ, ಅಲ್ಲಿಯೂ ಅವಳ ಬಾಯಿಗೆ ಅನ್ನ ತುರುಕುವುದು ಪೊಲೀಸರಿಂದಾಗಲಿಲ್ಲ. ಅವರು ಮಾಡಿದ ಸಮಸ್ತ ಮನವಿಗಳೂ ಅವಳಿಂದ

ಧಿಕ್ಕರಿಸಲ್ಪಟ್ಟವು. ಕೊನೆಗೆ,ನಿರ್ವಾಹವಿಲ್ಲದೆ, ಅವರು ಬಲವಂತವಾಗಿ, ಮೂಗಿನೊಳಗಿಂದ ಟ್ಯೂಬುಗಳನ್ನು ತೂರಿಸಿ ಹೊಟ್ಟೆಗೊಂದಿಷ್ಟು ಆಹಾರ ಸೇರಿಸಿದರು. ಅವತ್ತು ಶುರು ಮಾಡಿದ ಅಭ್ಯಾಸ ಇವತ್ತಿನವರೆಗೂ ನಡೆದುಕೊಂಡೇ ಬಂದಿದೆ! ಶರ್ಮಿಳಾ, ನೀರಿನ ಹೊರತು ಮತ್ತೇನನ್ನೂ ಬಾಯಿಗಿಟ್ಟುಕೊಳ್ಳದೆಯೇ ನಾಲ್ಕು ದೀರ್ಘ ವರ್ಷಗಳನ್ನು ಪೂರೈಸಿದ್ದಾಳೆ. ಟ್ಯೂಬಿನ ಮೂಲಕ ಒಳಸೇರಿದ ಆಹಾರ ಮೈಗೆ ಹತ್ತದೆ ಸೊರಗಿ ಹಂಚಿಕಡ್ಡಿಯಾಗಿದ್ದಾಳೆ. ಜೈಲಿನಲ್ಲಿಟ್ಟು ಅವಳನ್ನು ನೋಡಿಕೊಳ್ಳಲು ಸೋತ ಪೊಲೀಸರು ಈಗವಳನ್ನು ಖಾಸಗಿ ಆಸ್ಪತ್ರೆಗೆ ಸಾಗಹಾಕಿದ್ದಾರೆ. ಅಲ್ಲಿಯೂ ಕಾವಲಿಟ್ಟಿದ್ದಾರೆ. ದಿನ ದಿನವೂ ತನ್ನ ಉಪವಾಸವನ್ನು ಅಂತ್ಯಗೊಳಿಸುವಂತೆ ಅವಳ ಮೇಲೆ ಒತ್ತಡಗಳು ಬರುತ್ತಲೇ ಇವೆ. ಆದರೆ, ಶರ್ಮಿಳಾಳ ಧ್ವನಿಯಲ್ಲಿನ ದೃಢತೆ ಸಡಿಲವಾಗಿಲ್ಲ. ಅವಳ ಸೈದ್ಧಾಂತಿಕ ನಿಲುವು ಒಂದಿಷ್ಟೂ ಅಲ್ಲಾಡಿಲ್ಲ. ಜೀವಭಯ, ಅವಳ ನಿರ್ಧಾರವನ್ನು ಬದಲಿಸಿಲ್ಲ. ಈಗಾಗಲೇ ಎರಡು ಸಲ ಮುಖ್ಯಮಂತ್ರಿಯವರು ಅವಳ ಬಳಿಗೆ ಹೋಗಿ, ಉಪವಾಸ ನಿಲ್ಲಿಸುವಂತೆ ಕೇಳಿಕೊಂಡಿದ್ದಾಗಿದೆ ; ಆದರೆ ಅವಳು ಮನವಿಗೆ ಮರುಳಾಗಿಲ್ಲ. ಉದ್ದೇಶ ಈಡೇರುವವರೆಗೂ ತಾನು ತನ್ನ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ ಅಂತ ಹೇಳಿ ಕಡ್ಡಿ ತುಂಡು ಮಾಡಿದ್ದಾಳೆ. ಸರ್ಕಾರ ಚಡಪಡಿಸುತ್ತಲೇ ಇದೆ. ಅವಳನ್ನು ಉಳಿಸುವುದಕ್ಕಾಗಿ ಈಗಾಗಲೇ ಹತ್ತಿರ ಹತ್ತಿರ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದೆ. ಇನ್ನೂ ಖರ್ಚು ಮಾಡುತ್ತಲೇ ಇದೆ.

ಇಷ್ಟೆಲ್ಲಾ ಯಾಕೆ ಹೇಳಬೇಕಾಗಿ ಬಂತೆಂದರೆ, ಮುಷ್ಕರದ ಚಿತ್ರ-ವಿಚಿತ್ರ ನವ-ನವೀನ ಚಂಡಾಲಾತಿ ಚಂಡಾಲ ವಿಧಾನಗಳೆಲ್ಲಾ ಹುಟ್ಟಿಕೊಂಡಿರುವ ಈ ದಿನಗಳಲ್ಲೂ, ಗಾಂಧೀಜಿ ಹಾಕಿಕೊಟ್ಟ ಸತ್ಯಾಗ್ರಹ ಮಾರ್ಗಕ್ಕೆ ಬೇರಾವುದೂ ಸಮವಲ್ಲ ಅನ್ನುವುದನ್ನು ತಿಳಿಸುವುದಕ್ಕಾಗಿ. ಮತ್ತು ಅದನ್ನು ನನಗೆ ನಾನೇ ಮನನ ಮಾಡಿಕೊಳ್ಳುವುದಕ್ಕಾಗಿ !

ಶರ್ಮಿಳಾ ಇಷ್ಟೆಲ್ಲಾ ದಿನದಿಂದ ಉಪವಾಸ ಬಿದ್ದಿದ್ದಾಳೆ, ಆದರೆ ಅದರಿಂದ ಏನಾದರೂ ಪ್ರಯೋಜನವಾಗಿದೆಯಾ ಅನ್ನುವ ಪ್ರಶ್ನೆಯೇಳುವುದು ಸಹಜ. ನಿಜ, ನಾಲ್ಕು ವರ್ಷಗಳ ನಂತರವೂ, ಇವತ್ತಿಗೂ, ಈ ಕ್ಷಣದವರೆಗೂ, ಸಶಸ್ತ್ರ ಪಡೆಗಳಿಗೆ ಕೊಡಲಾಗಿರುವ ವಿಶೇಷ ಅಧಿಕಾರವನ್ನು ಹಿಂತೆಗೆದುಕೊಳ್ಳಲಾಗಿಲ್ಲ. ಆ ಅಮಾನುಷ ಕಾಯ್ದೆ ಈಗಲೂ ಜಾರಿಯಲ್ಲಿದ್ದೇ ಇದೆ. ಮೊನ್ನೆ ಮೊನ್ನೆಯಿನ್ನೂ ಅಮಾಯಕ ಹೆಣ್ಣು ಮಕ್ಕಳ ಮೇಲೆ ಸೇನೆಯವರು ಅತ್ಯಾಚಾರ ಮಾಡಿದ್ದಕ್ಕಾಗಿ ಮಣಿಪುರ ಹೊತ್ತಿ ಉರಿದಿತ್ತು . ಕಾಯ್ದೆಯ ನಾಶಕ್ಕೆ ಹೋರಾಟ ಭುಗಿಲೆದ್ದಿತ್ತು . ಮಹಿಳಾ ಪ್ರತಿಭಟನಾಕಾರರು ಸೇನೆಯ ಕಚೇರಿಯೆದುರು ಬೆತ್ತಲೆ ಪ್ರದರ್ಶನ ನಡೆಸಿ, ಕಮ್‌, ರೇಪ್‌ ಅಸ್‌ ಅಂತ ಯೋಧರನ್ನು ಛೇಡಿಸಿದ್ದರು. ಎಲ್ಲವೂ ನಿಜ, ಇದೆಲ್ಲವನ್ನೂ ಕಂಡ ಮೇಲೆ, ಶರ್ಮಿಳಾ ಉಪವಾಸ ಬಿದ್ದಿದ್ದರಿಂದ ಏನು ಸಾಧಿಸಿದ ಹಾಗಾಯಿತು ಅಂತನ್ನಿಸುವುದೂ ಸಹಜ. ಆದರೆ, ನಿಮಗೆ ಗ್ತೊತಿರಲಿ, ಅವಳ ಹೋರಾಟ ವ್ಯರ್ಥವೇನಾಗಿಲ್ಲ !

ಸರಕಾರದ ಆಮಿಷಗಳ ಹಾಗೂ ಒತ್ತಡಗಳ ಎದುರು, ಕಾಯ್ದೆ ವಿರುದ್ಧದ ಹೋರಾಟ ಎಂದೋ ಸತ್ತುಹೋಗಬಹುದಿತ್ತು . ಹೋರಾಟದ ಮುಂಚೂಣಿಯಲ್ಲಿದ್ದ ನಾಗಾ ವಿಮೆನ್ಸ್‌ ಯೂನಿಯನ್‌ ಎಂಬ ಸಂಘಟನೆಯು ಮೂರಾಬಟ್ಟೆಯಾಗಿ ಹೋಗಬಹುದಿತ್ತು. ಅದನ್ನು ಹಾಗೆ ಅತಂತ್ರಗೊಳಿಸುವ ಅಸಂಖ್ಯ ಪ್ರಯತ್ನಗಳೂ ನಡೆದುಹೋದವು. ಆದರೆ, ಹೋರಾಟ ಸಾಯಲಿಲ್ಲ ಏಕೆಂದರೆ, ಶರ್ಮಿಳಾಳನ್ನು ಮಣಿಪುರದ ಹೆಣ್ಣು ಮಕ್ಕಳು ಮರೆಯುವ ಹಾಗೇ ಇರಲಿಲ್ಲ. ಅವಳು ಉಪವಾಸವಿದ್ದ ಒಂದೊಂದು ದಿನವೂ ಹೋರಾಟಕ್ಕೆ ಹೊಸ ಹುರುಪು, ಹೊಸ ವ್ಯವಸ್ಥೆ ಬರುತ್ತಿತ್ತು. ಮಾನವ ಹಕ್ಕುಗಳ ಜಾಗೃತಿ ಎಂಬ ಸಂಸ್ಥೆ ನೇರವಾಗಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಿಗೇ ಪತ್ರ ಬರೆದು, ಕಾಯ್ದೆ ರದ್ದುಗೊಳಿಸುವಂತೆ ಆಗ್ರಹ ಮಾಡಿತು. ಹಾಂಗ್‌ಕಾಂಗ್‌ನ ಏಷ್ಯನ್‌ ಹ್ಯೂಮನ್‌ ರೈಟ್ಸ್‌ಕಮಿಷನ್‌, ಬ್ಯಾಂಕಾಕಿನ ಏಷ್ಯನ್‌ ಫೋರಂ ಫಾರ್‌ ಹ್ಯೂಮನ್‌ ರೈಟ್ಸ್‌, ಲಂಡನ್ನಿನ ಜನಾಂಗೀಯ ಸಂಬಂಧಗಳ ಸಂಸ್ಥೆ, ಮತ್ತು ನೆದರ್ಲೆಂಡ್ಸಿನ ಟ್ರಾನ್ಸ್‌ ನ್ಯಾಷನಲ್‌ ಸಂಸ್ಥೆ, ಎಲ್ಲವೂ ಮಣಿಪುರದ ಹೆಣ್ಣು ಮಕ್ಕಳ ಹೋರಾಟಕ್ಕೆ ಕೈ ಜೋಡಿಸಿದವು. ಶರ್ಮಿಳಾಳ ಸತ್ಯಾಗ್ರಹ ಅವರನ್ನು ಎಳೆದು ತಂದಿತ್ತು . ಶರ್ಮಿಳಾ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಸರ್ಕಾರದ ಮೇಲೆ ಅದಿನ್ನೆಂಥ ಒತ್ತಡ ಬಂದುಬಿಟ್ಟಿತೆನ್ನುವುದು ಊಹೆಗೂ ಸಿಕ್ಕದ ವಿಷಯ. ಬೇರೆ ಯಾವುದೇ ರೀತಿಯ ಹೋರಾಟವನ್ನಾದರೂ ಸರ್ಕಾರ ತನ್ನ ರಾಜಕೀಯ ತಂತ್ರಗಳಿಂದ ಸದೆಬಡಿದು, ಇಡೀ ಹೋರಾಟದ ಉದ್ದೇಶವನ್ನೇ ಹಾದಿ ತಪ್ಪಿಸಿ ಬಿಡುತ್ತಿತ್ತೇನೋ. ಆದರೆ ಉಪವಾಸ ಬಿದ್ದು ಸಾಯಲು ಸಿದ್ಧಳಾಗಿರುವವಳನ್ನ ಯಾರಾದರೂ ಹೇಗಾದರೂ ಮಣಿಸಲು ಸಾಧ್ಯ? ಇಡೀ ರಾಜ್ಯದ, ದೇಶದ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಗಮನವೇ ಅವಳ ಮೇಲಿರುವಾಗ , ಅವಳ ಮೇಲೆ ಇಲ್ಲ-ಸಲ್ಲದ ಒತ್ತಡಗಳನ್ನು ತರುವುದಾದರೂ ಹೇಗೆ ಸಾಧ್ಯ?

ಸರ್ಕಾರ ಮಣಿಯಲೇಬೇಕಿತ್ತು. ಮಣಿಯಿತು. ಹೋದ ತಿಂಗಳ ಹನ್ನೆರಡರಂದು ನಡೆದ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ, ಇಂಫಾಲದ ಕೆಲವು ಕಡೆಗಳಲ್ಲಾದರೂ ಈ ಕಾಯ್ದೆಯನ್ನು ಪ್ರಾಯೋಗಿಕವಾಗಿ ಹಿಂತೆಗೆದುಕೊಳ್ಳುವ ತೀರ್ಮಾನ ಮಾಡಲಾಯ್ತು. ಇದು, ಕಾಯ್ದೆಯನ್ನು ಪೂರ್ತಿಯಾಗಿ ರದ್ದುಗೊಳಿಸುವ ದಿಕ್ಕಿನಲ್ಲಿ ಸರ್ಕಾರದ ಮೊದಲ ಹೆಜ್ಜೆ. ಆದರೆ ರಾಜಕಾರಣಿಗಳನ್ನು ನಂಬುವುದಾದರೂ ಹೇಗೆ? ಇಷ್ಟಕ್ಕೇ ತೃಪ್ತಳಾಗಿ ಶರ್ಮಿಳಾ ತನ್ನ ಸತ್ಯಾಗ್ರಹ ಕೊನೆಗೊಳಿಸಿಬಿಟ್ಟರೆ, ಲಾ ಆಂಡ್‌ ಆರ್ಡರಿನದೋ ಏನೋ ನೆಪವೊಡ್ಡಿ, ಸರ್ಕಾರ ಮತ್ತೆ ಕಾಯ್ದೆಯನ್ನು ಜೀವಂತವಾಗಿಟ್ಟು ಬಿಡಬಹುದಲ್ಲ ! ಇದು ಗೊತ್ತಿದ್ದರಿಂದಲೇ, ಶರ್ಮಿಳಾ, ಮುಖ್ಯಮಂತ್ರಿಯ ಮನವಿಯನ್ನು ತಳ್ಳಿಹಾಕಿದ್ದು. ತನ್ನ ಉದ್ದೇಶ ‘ಪೂರ್ತಿಯಾಗಿ’ ಈಡೇರುವವರೆಗೂ ತಾನು ಮೇಲೇಳುವುದಿಲ್ಲವೆಂದು ಹಟ ಹಿಡಿದಿದ್ದು.

ಈಗ ಹೇಳಿ, ಶರ್ಮಿಳಾಳ ಪ್ರಯತ್ನ ವ್ಯರ್ಥವಾಗಿದೆಯಾ? Certainly not.

ಯಾವೊಂದು ಸಭ್ಯ ಸಮಾಜವೂ ತನ್ನ ಒಳಿತಿಗಾಗಿ ಉಪವಾಸ ಸಾಯುವುದನ್ನು ಸಹಿಸಿಕೊಳ್ಳಲಾರದು. ಉಪವಾಸ ಸತ್ಯಾಗ್ರಹವೊಂದು- ಅದು ನಿಜಕ್ಕೂ ಕಾಳಜಿಪೂರ್ಣವೂ ಸಾತ್ವಿಕವೂ ಆಗಿದ್ದರೆ ಜನರನ್ನು ಯಾವ ಪರಿ ಬಡಿದೆಬ್ಬಿಸುತ್ತದೆಂಬುದು ಈಗಿನ ಜನರೇಷನ್ನಿನವರಿಗೆ ಗೊತ್ತಿಲ್ಲ. ಯಾಕೆಂದರೆ, ಹಾಗೆ ಎಮೋಷನ್‌ಗಳನ್ನು ಬಡಿದೆಬ್ಬಿಸುವಂಥ ಪ್ರಾಮಾಣಿಕ ನಾಯಕರನ್ನೇ ಅವರು ಕಂಡಿಲ್ಲ . ಆದರೆ, ಬ್ರಿಟಿಷರಿಗೆ ಇದು ಗೊತ್ತಿತ್ತು. ಒಬ್ಬ ಗಾಂಧೀಜಿ ಬಯಸಿದ್ದು ನಡೆಯುತ್ತಿತ್ತು.

ಯಾಕೆಂದರೆ, ಗಾಂಧೀಜಿ ತಮಗಾಗಿ ಏನನ್ನೂ ಬಯಸುತ್ತಿರಲಿಲ್ಲ. ಅವರ ಉದ್ದೇಶ ಸಾತ್ವಿಕವೂ ಸಮಾಜಮುಖಿಯೂ ಆಗಿರುತ್ತಿತ್ತು.

ಇವತ್ತು ಅಂಥ ನಾಯಕರಿಲ್ಲ ನಿಜ. ಆದರೆ, ಯಾವುದಾದರೊಂದು ಒಳ್ಳೆಯ ಉದ್ದೇಶಕ್ಕೆ ಪ್ರಾಮಾಣಿಕರೆನಿಸಿಕೊಂಡವರು ಉಪವಾಸ ಕೂತು ನೋಡಲಿ ; ಅದನ್ನು ಜನ ತಕ್ಷಣಕ್ಕೆ ತಳ್ಳಿಹಾಕಲಾರರು. ಮೊನ್ನೆ ಮೊನ್ನೆಯಿನ್ನೂ ಸಿಇಟಿಯ ಗೊಂದಲ ನಮ್ಮ ರಾಜ್ಯದ ಮಕ್ಕಳನ್ನೂ ಅವರ ಅಪ್ಪ-ಅಮ್ಮಂದಿರನ್ನೂ ಹರಿದು ತಿಂದುಹಾಕಿತಲ್ಲ ? ಆವಾಗ, ಯಾವುದಾದರೊಂದು ವಿದ್ಯಾರ್ಥಿಸಂಘಟನೆಯವರು ಮುಂದೆ ಬಂದು, ಸಿಇಟಿ ವಿಷಯವನ್ನು ಮಕ್ಕಳ ಪರವಾಗಿ ನಿರ್ಧಾರ ಮಾಡದಿದ್ದರೆ, ಸಿಇಟಿ ಬರೆದ ಮಕ್ಕಳೆಲ್ಲಾ ಉಪವಾಸ ಕೂರುತ್ತಾರೆ ಅಂತೊಂದು ಘೋಷ ಹಾಕಿ, ಅಂಥದ್ದೊಂದು ಪ್ರಯತ್ನವೂ ನಡೆದು ಬಿಟ್ಟಿದ್ದರೆ ಎಂಥ ಆಂದೋಲನವಾಗಿ ಹೋಗುತ್ತಿತ್ತೋ ಊಹಿಸಿಕೊಳ್ಳಿ. ಮಕ್ಕಳು ಉಪವಾಸ ಇರುವುದನ್ನ ಯಾವ ಅಪ್ಪ-ಅಮ್ಮನೂ, ನ್ಯಾಯಧೀಶರೂ, ಸರ್ಕಾರವೂ ತಡೆದುಕೊಳ್ಳಲಾರದು. ದೇಶವಿದೇಶಗಳಿಂದೆಲ್ಲಾ ಬೆಂಬಲ ಹರಿದುಬರುತ್ತಿತ್ತು. ಜಾಲಪ್ಪ ಆಂಡ್‌ ಕೋ ಚೆಲ್ಲಾ ಪಿಲ್ಲಿ ಯಾಗಿ ಹೋಗುತ್ತಿದ್ದರು.

ಆದರೆ, ಅಂಥದ್ದೊಂದು ಪ್ರಯತ್ನಕ್ಕಿಳಿಯುವುದಕ್ಕೆ- ಧೀಶಕ್ತಿಯೂ ಪ್ರಾಮಾಣಿಕ ಕಾಳಜಿಯೂ ಬೇಕು ಅಷ್ಟೆ . ಅದೆಲ್ಲಾ ಇದ್ದವರು ಸಿಗಲಾರರಾ ?

(ಸ್ನೇಹಸೇತು: ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more