• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೀಗೇ ಬರೆಯುತ್ತಿರಿ, ನಿಮಗೆ ನೂರ ಅರವತ್ತಾಗುವ ತನಕ!

By Staff
|
Ravi Belagere on Thatskannada.com ರವಿ ಬೆಳಗೆರೆ
ನನ್ನ ಅತ್ಯಂತ ಪ್ರೀತಿಯ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರಿಗೆ, ನಿಮ್ಮ ‘ತೂಗು ಮಂಚ’ದೆದುರು ನಿಂತು ನನ್ನದೊಂದು ನಮಸ್ಕಾರ. ಮೊನ್ನೆ ಯಾರೋ ನಿಮಗೆ ಅರವತ್ತಾಯಿತು ಅಂದರು. ಇತ್ತೀಚೆಗೆ ನಿಮ್ಮ ಮೊಮ್ಮಗಳಿಗಾಗಿ ನೀವು ಬರೆದ ಪದ್ಯಗಳನ್ನು ಓದಿದ್ದೆ . ‘ಅರವತ್ತಾಯಿತು, ನಿಜ : ಎಚ್ಚೆಸ್ವಿಗೆ ವಯಸ್ಸಾಯಿತು ಬಿಡು’ ಅಂದುಕೊಂಡಿದ್ದೆ. ಆದರೆ ‘ತೂಗುಮಂಚ’ದ ಹಾಡುಗಳನ್ನು ಕೇಳಿಸಿಕೊಂಡೆ ನೋಡಿ? ನನ್ನದೇ ನಲವತ್ತೆೈದರ ವಯಸ್ಸು ಇಪ್ಪತ್ನಾಲ್ಕಾದಂತೆನಿಸಿತು. ನಿಮಗೆ ಇನ್ನೂ ನೂರರವತ್ತಾಗಲಿ. ನಿಮ್ಮ ಕವಿತೆಗೆ ಮುಪ್ಪು , ಉಹುಂ.

ಇಷ್ಟಕ್ಕೂ ಆಗಿದ್ದೇನು ಅಂದರೆ, ನನ್ನ ಹೊಸ ಧಾರಾವಾಹಿ ‘ಹೇಳಿ ಹೋಗು ಕಾರಣ’ಕ್ಕಾಗಿ ಮನವೊಲಿಸೋಕೆ ಅಂತ ಏಕಾಂತ ಜೀವಿ, ಬ್ರಹ್ಮಚಾರಿ ದತ್ತಣ್ಣನ ಮನೆಗೆ ಹೋಗಿದ್ದೆ . ತಿನ್ನಲು ಹುರಿಗಾಳು ಕೊಟ್ಟು ‘ವಿಸ್ಕೀ ಕುಡೀತೀಯೇನಯ್ಯಾ’ ಅಂದರು ದತ್ತಣ್ಣ : ಇನ್ನೂ ಸಾಯಂಕಾಲವಾಗಿರಲಿಲ್ಲ . ದತ್ತಣ್ಣನ ದಿವ್ಯ ಏಕಾಂತ, ಆ ಇನ್‌ಡಿಸಿಪ್ಲೀನ್ಡ್‌ ಸ್ವರ್ಗದಂಥ ಕೋಣೆ, ಅದೇ ಅಬೋಧ ನಗೆ- ಎಲ್ಲ ನೋಡಿ All are not idiots: some are unmarried ಎಂಬ ಅದ್ಭುತ ನಾಣ್ಣುಡಿ ನೆನಪಾಗಿತ್ತು . ದತ್ತಣ್ಣ ನನ್ನ ಸೀರಿಯಲ್ಲಿನಲ್ಲಿ ಒಬ್ಬ ಅನುಭಾವಿ ಅಜ್ಜನ ಪಾತ್ರ ಮಾಡಲು ಒಪ್ಪಿಕೊಂಡ ಮೇಲೆಯೇ ನಾನು ಆ ಕೋಣೆಯಿಂದ ಹೊರಬಿದ್ದು , ತ್ಯಾಗರಾಜನಗರದ ಸಿ.ಅಶ್ವಥ್‌ರ ಮನೆಗೆ ಬಂದದ್ದು .

ಬೆಳ್ಳಿ ಕೂದಲು, ಕಂಚು ಕಂಠ, ಬಂಗಾರದಂಥ ಕಾಫಿ, ಚುಂಬಕ ಸಂಗೀತ : ಅಶ್ವಥ್‌ ಪ್ರಪಂಚದಲ್ಲಿ ಎಲ್ಲವೂ heavy ಮೆಟಲ್ಲೇ. ಒಳ್ಳೇ ಮೂಡ್‌ನಲ್ಲಿದ್ದರು. ಚೆಂದಗೆ ಮಾತಾಡಿದರು. ಸೀರಿಯಲ್ಲಿಗೆ ಬೇಕಾದ ಹಾಡುಗಳಿಗೆ ಸಂಗೀತ ಮಾಡಿಕೊಡುತ್ತೇನೆ ಅಂದರು. ತೀರಎದ್ದು ಹೊರಡುವ ಮುಂಚೆ ‘ತೂಗುಮಂಚ ಕೇಳಿದೆಯಾ ರವೀ’ ಅಂದರು. ಇಲ್ಲ ಅಂದೆ. ಅಯ್ಯೋ ಪಾಪಿ ಜನ್ಮವೇ, ಕೊಡ್ತೀನಿರು ಕೇಳು- ಎಂಬಂತೆ ಹಣೆ ಚಚ್ಚಿಕೊಂಡು, ದಾಪುಗಾಲಿಡುತ್ತ ಎದ್ದು ಹೋಗಿ ನಿಮ್ಮ ಅರವತ್ತನೇ ಹುಟ್ಟುಹಬ್ಬದ ಸಡಗರದ ಮಧ್ಯೆ ಸೃಷ್ಟಿಯಾದ ಭಾವಗೀತೆಗಳ ಸಿ.ಡಿ.ತಂದುಕೊಟ್ಟರು ಅಶ್ವಥ್‌. ಆಗ ಸಿಲುಕಿದ ಮೋಡಿಯಿಂದ ಈ ಕ್ಷಣಕ್ಕೂ ಈಚೆಗೆ ಬರಲಾಗಿಲ್ಲ ಕವಿಗಳೇ ! ಅದಕ್ಕೇ ಹೇಳಿದ್ದು : ನಿಮಗೆ ಅರವತ್ತಲ್ಲ , ಇವತ್ತಿನಿಂದ ನೂರರವತ್ತಾಗಲಿ. ನನ್ನ ಆಯುಷ್ಯ, ನನ್ನ ನಿದ್ದೆ, ನನ್ನ ಬಿಡುವು- ಎಲ್ಲ ನಿಮ್ಮದಾಗಲಿ. ನನಗೆ ಇನ್ನೊಂದಿಷ್ಟು ಇಂಥ ಭಾವಗೀತೆಗಳನ್ನು ಬರೆದುಕೊಡಿ.

ಬಹುಶಃ ಬೇಂದ್ರೆ ಸಂಖ್ಯಾಶಾಸ್ತ್ರದ ಚಪಲಕ್ಕೆ ಬಿದ್ದ ಮೇಲೆ, ಲಕ್ಷ್ಮೀನಾರಾಯಣ ಭಟ್ಟರು ಷೇಕ್ಸ್‌ಪಿಯರನಿಗೆ ಗಂಟುಬಿದ್ದ ಮೇಲೆ, ಕೆ.ಎಸ್‌.ನರಸಿಂಹಸ್ವಾಮಿಗಳು ತೀರಿಕೊಂಡ ಮೇಲೆ ಕನ್ನಡದ ಕವಿತೆಗಳ ಬಾಯಿ ಕೆಟ್ಟಂತಾಗಿತ್ತು . ಈಗ ಇದ್ದಕ್ಕಿದ್ದಂತೆ ನಿಮ್ಮ ‘ತೂಗು ಮಂಚ’ ತೂಗಿದೆ ನೋಡಿ? ಇನ್ನು ನಮ್ಮ ರಾತ್ರಿಗಳಿಗೆ ದುಷ್ಟ ಮೌನದ ಭಯವಿಲ್ಲ . ನನ್ನಂಥ ಕರಡಿ ಭಾವುಕತೆಯ ಮಂದಿ ಎಷ್ಟಿದ್ದಾರೋ ಗೊತ್ತಿಲ್ಲ . ನಾನು ಪ್ರತಿಯಾಂದು ರಾಗದಲ್ಲಿ , ರಾಗದೊಂದಿಗೆ ಅನುಭವಿಸುವ ಮನುಷ್ಯ : ದ್ವೇಷವನ್ನು ಕೂಡ! ಆ ಕಾರಣಕ್ಕೇ ಬಹುಶಃ ಪದೇ ಪದೇ ಹಾಡು ಹುಡುಕಿಕೊಂಡು ಉರ್ದುವಿಗೆ ಹೋಗುತ್ತೇನೆ. ಪ್ರೀತಿ, ಶೃಂಗಾರ, ಚೂರೇ ಚೂರು ವ್ಯಥೆ- ನನ್ನನ್ನು ತಕ್ಷಣಕ್ಕೆ ಹಿಡಿದು ನಿಲ್ಲಿಸುವಂಥವು. ನಿಮ್ಮ ‘ತೂಗು ಮಂಚ’ದಲ್ಲಿ ಇವಷ್ಟೇ ಅಲ್ಲದೆಯೂ ಎಷ್ಟೆಲ್ಲ ಇವೆ. ತೂಗುಮಂಚದ ಮೇಲೆ ಕುಳಿತ ರಾಧೆ ಮತ್ತು ಮೇಘಶ್ಯಾಮರ ಚಿತ್ರ ಅದೆಷ್ಟು ಅದ್ಭುತವಾಗಿ ಕಣ್ಣಿಗೆ ಕಟ್ಟಿಕೊಡುತ್ತೀರಿ!

ತೂಗುಮಂಚದಲ್ಲಿ ಕೂತು

ಮೇಘಶ್ಯಾಮ ರಾಧೆಗಾತು

ಆಡುತಿಹನು ಏನೋ ಮಾತು

ರಾಧೆ ನಾಚುತಿದ್ದಳು....

ಕೂತಲ್ಲೇ ಹತ್ತು ಸಲ ಕೇಳಿಬಿಟ್ಟೆ. ನನ್ನ ರಾಧೆಗೆ ಫೋನಿನಲ್ಲೂ ಕೇಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇಂಥದ್ದೊಂದು ಶೃಂಗಾರ ಗೀತೆ ಕೇಳಿರಲಿಲ್ಲ ಕವಿಗಳೇ.

ಸೆರಗು ಜಾರುತಿರಲು ಕೆಳಗೆ

ಬಾನು ಭೂಮಿ ಮೇಲು ಕೆಳಗೆ

ಅದುರುತಿರುವ ಅಧರಗಳಿಗೆ

ಬೆಳ್ಳಿ ಹಾಲ ಬಟ್ಟಲು....

ನಿಜ ಹೇಳಲಾ? ನಮಗೆ ಯಾವತ್ತಿಗೂ ಮುಗಿಯದ ಬದುಕಿನ ಜಂಜಡಗಳಿವೆ. ಊಟ, ನಿದ್ದೆ, ದುಡಿಮೆ, ಟಾರ್ಗೆಟ್ಟು , ಕಾಂಪಿಟಿಷನ್ನು, ಅವುಗಳ ಮಧ್ಯೆಯೇ ಇಷ್ಟು ಕಾಮ, ಇಷ್ಟು ವ್ಯಾಯಾಮ! ಎಲ್ಲದಕ್ಕೂ ಸ್ವಲ್ಪ ಸ್ವಲ್ಪ ಟೈಮು, ಸ್ವಲ್ಪ ಸ್ವಲ್ಪ ಬಿಡುವು ಮಾಡಿಕೊಂಡಿದ್ದೇವೆ. ಆದರೆ ಮನಸ್ಸಿನ ಸಂತೋಷಕ್ಕೇ ಅಂತ ಏನೂ ವ್ಯವಸ್ಥೆ ಮಾಡಿಕೊಂಡಿಲ್ಲ . ಪುಸ್ತಕದಲ್ಲಿರುವ ಮಹಾಕಾವ್ಯಗಳ ಮಧ್ಯೆ ಮನಸ್ಸಿಗೆ ಮುದವಾಗಬಹುದಾದ್ದನ್ನು ಹುಡುಕಿ ಓದಿಕೊಂಡು ಸಂತೋಷಪಡುವಷ್ಟು ಸಮಯವಿಲ್ಲ. ಸಹನೆಯೂ ಇಲ್ಲ . ಇಡೀ ದಿವಸದ ಗೆಯ್ಮೆ ಮುಗಿಸಿ ಕತ್ತಲ ಮಂಚಕ್ಕೆ ಬಿದ್ದರೆ, ಅವಚಿಕೊಳ್ಳುವ ಮೌನಕ್ಕೆ-ಬೇಸರಕ್ಕೆ-ಸಾಂಗತ್ಯ ರಹಿತ ರಸಹೀನತೆಗೆ-ಅದಕ್ಕೆಲ್ಲ ನಾವು ಯಾವ ಮದ್ದೂ ಕಂಡುಕೊಂಡಿಲ್ಲ . ಇಂಥದೊಂದು ಕತ್ತಲಿನಿಂದ ನಮ್ಮನ್ನು ತಿಳಿ ಬೆಳಕಿನೆಡೆಗೆ ಕರೆದೊಯ್ಯಬಲ್ಲ , ಇವತ್ತಿನ ಮಟ್ಟಿಗಿನ ಒಂದೇ ನೆರವೆಂದರೆ- ನಿಮ್ಮ ‘ತೂಗುಮಂಚ’ದಂಥ ಭಾವಗೀತೆಗಳ ಅನುರಣನ.

ಬೇಸರದ ದಾರಿಯಲಿ

ಹೂತಳೆದ ಮರ ನೀನು

ಗಾಳಿಯಲಿ ಹಾಯಿಗೈ

ನಿನ್ನ ರೆಂಬೆ !

ಈ ಮಾತು ನಿಮಗೆ ಹೇಳಬೇಕಾದವರು ನಾವು. ಎಷ್ಟು ಒಳ್ಳೆ ಹಾಡು ಬರೆದುಕೊಟ್ಟಿದ್ದೀರಿ. ಕೃಷ್ಣ ದೇವರು ನಿಮ್ಮ ಮೊಮ್ಮಗನಾಗಿ ಹುಟ್ಟಿಬಿಟ್ಟಿದ್ದಾನೆ ಅಲ್ಲಲ್ಲಿ . ಅವನಿಗೂ ರಾಧೆಯ ಹುಚ್ಚು ನಿರಂತರ. ‘ಬೃಂದಾವನದಲಿ ಬಂದಿರುಳೂ...’ ಕೇಳಿದ ಯಾರಿಗಾದರೂ ಥಟ್ಟನೆ ನೆನಪಾಗುವುದು ಬಾಲ್ಯದಲಿ ದೀಪವಾರಿದ ರಾತ್ರಿ, ದೇವರ ಮುಂದಿನ ದೀಪ ತರುತ್ತೇನೆಂದ ಅಮ್ಮ ಮತ್ತು ಅನಾಯಾಸ ಕತ್ತಲಲ್ಲಿ ತಬ್ಬಿಕೊಳ್ಳಲು ಸಿಕ್ಕ ಮುದ್ದು ರಾಧೆ.

ಯಾರೋ ಸಿಕ್ಕರು ಯಾರೋ ನಕ್ಕರು

ಕುರುಡುಗತ್ತಲಲಿ ಅಮೃತ ಕ್ಷಣ

ಬಿಡು ಬಿಡು ಎನ್ನುತ ಸವಿನುಡಿಯಾಂದು

ತೇಲಿತು ಮುಳುಗಿತು ಒಂದು ಕ್ಷಣ...

ನಿಮ್ಮ ಕವಿತೆಯಾಳಗಿನ ಶೃಂಗಾರಕ್ಕೆ ತೀರ air tight ಪ್ರೆೃವೆಸಿ ಬೇಕಾಗಿಲ್ಲ . ಮನೆಯಲ್ಲಿ ದಂಪತಿಗಳು ಕೂತು ಊಟ ಮಾಡುತ್ತ , ತಾಂಬೂಲ ಹಾಕಿಕೊಳ್ಳುತ್ತ , ಮಾತು ಬಿಟ್ಟಾಗ ಹಳೆಯ ಸರಸ ನೆನಪಿಸಿಕೊಳ್ಳುತ್ತ ಕೇಳಿಸಿಕೊಳ್ಳಬಹುದಾದ ಚೆಂದದ ಹಾಡುಗಳವು. ಒಯ್ದು ಗೆಳತಿಯ ಕೈಗಿಟ್ಟು ‘ಹಾಡು ಕೇಳು’ ಅಂತ ಹುಡುಗನೊಬ್ಬ ಹೇಳಬಂದರೆ ಸಾಕು : ಅವನ ಅಭಿರುಚಿ ಮತ್ತು ಪ್ರೀತಿಯಲ್ಲಿ ಅವನು ಕಾಣುವ ಧನ್ಯತೆ- ಎರಡನ್ನೂ ಹುಡುಗಿ ಅರ್ಥ ಮಾಡಿಕೊಳ್ಳುತ್ತಾಳೆ. ಹಾಡು ಕೇಳುತ್ತ ಕೇಳುತ್ತ ಆಕೆ ರಾಧೆಯಾಗುತ್ತಾಳೆ. ಕತ್ತಲಲ್ಲಿ ಪುಟ್ಟ ಕೃಷ್ಣ ಅಂಜಿ ತಬ್ಬಿದ ಕಂಬವಾಗುತ್ತಾಳೆ.

ಕಳೆದ ಹನ್ನೆರಡು ದಿನಗಳಲ್ಲಿ ‘ತೂಗುಮಂಚ’ದ ಗೀತೆಗಳನ್ನು ಅದೆಷ್ಟು ಸಲ ಕೇಳಿದ್ದೀನೋ? ಮೊನ್ನೆ ಭಾನುವಾರ ಮಾಗಡಿ ರಸ್ತೆಯಲ್ಲಿ ಗೆಳೆಯ ಎಂ.ಡಿ.ಕೌಶಿಕ್‌ ರೂಪಿಸಿರುವ ಪುಟ್ಟಣ್ಣ ಕಣಗಾಲ್‌ ಹೆಸರಿನ ಸ್ಟುಡಿಯೋದಂಥ ಮನೆಗೆ ಹೋಗಿದ್ದೆ. ‘ಹೇಳಿ ಹೋಗು ಕಾರಣ’ದಲ್ಲಿನ ಪ್ರಾರ್ಥನಾ ತನ್ನ ಮನೆಬಿಟ್ಟು ಗೆಳೆಯ ಹಿಮವಂತನೊಂದಿಗೆ ಹೊರಟು ಹೋಗುವ ಘಳಿಗೆಯ ಚಿತ್ರೀಕರಣ ನಡೆಯುತ್ತಿತ್ತು . ಕೌಶಿಕ್‌ ಮನೆಯ ಅಂಗಳದಲ್ಲಿ ಜಿಟಿಜಿಟಿ ಮಳೆ. ಅಲ್ಲೆ ತನ್ಮಯತೆಯಿಂದ ಕೆಲಸ ಮಾಡುತ್ತಿದ್ದ ನಿರ್ದೇಶಕ ಮಿತ್ರ ರಮೇಶ್‌ ಕೃಷ್ಣರನ್ನು ಕರೆದು ಕಾರಿನಲ್ಲಿ ಕೂಡಿಸಿಕೊಂಡು ‘ಈ ದೃಶ್ಯಕ್ಕೆ ತುಂಬ ಹೊಂದುವ ಭಾವಗೀತೆಯಾಂದಿದೆ ಕೇಳಿ’ ಅಂತ ಸ್ಟೀರಿಯೋಗೆ ನಿಮ್ಮ ‘ತೂಗುಮಂಚ’ದ ಸಿ.ಡಿ. ಹಾಕಿ ಕೇಳಿಸಿದೆ.

ಇರುಳ ಸಮಯ ಸುರಿ ಮಳೆಯಾಳಗೆ

ದೋಣಿಗಳಿಳಿದಿವೆ ಹೊಳೆಯಾಳಗೆ...

ಹಾಡು ಕೇಳುತ್ತ ಕೇಳುತ್ತ ಇಬ್ಬರೂ ಭಾವುಕರಾಗಿದ್ದೆವು. ಅದರಲ್ಲೂ ‘ತೇಲಿಸೋ ಅಥವಾ ಮುಳುಗಿಸು ರಥವ, ಧೃತಿಯಾಂದೇ ಗತಿ ಹಾಡುತಿದೇ.... ಮುಳುಗದ ಹೊರತು ತೇಲದು ದೋಣಿ, ಹಾಯಿ ವಿರಾಮವ ಹೇಳುತಿವೆ’ ಎಂಬ ಸಾಲುಗಳಿವೆಯಲ್ಲ ? ಮುಳುಗಿದ ನಂತರವೂ ತೇಲದಂತಾದ ನಮ್ಮಂಥ ಬಡಕು ದೋಣಿಗಳಿಗೆ ಎಂಥ ಸಾಂತ್ವನದ ಸಾಲುಗಳು ಗೊತ್ತಾ ? ‘ಸೆರಗೇ ಹಾಯಿ ಹೃದಯವೆ ಹುಟ್ಟು’ ಎಂಬ images ತುಂಬ ಸಂತೋಷ ಕೊಡುತ್ತವೆ.

ಪ್ರಿಯ ಎಚ್‌.ಎಸ್‌.ವಿ,

ನಾನು ವೈಯಕ್ತಿಕವಾಗಿ ನಿಮ್ಮನ್ನು ತುಂಬ ಬಲ್ಲವನಲ್ಲ . ಚಿಂತಾಮಣಿಯ ಅಣ್ಣ ಬಿ.ಆರ್‌.ಲಕ್ಷ್ಮಣರಾವ್‌ ಸೇರಿಸುವ ಆತ್ಮೀಯ ಗೋಷ್ಠಿಗಳಲ್ಲಿ ಕೊಂಚ ಸಂಕೋಚದಿಂದ ದೂರ ಕುಳಿತೇ ನಿಮ್ಮನ್ನು ದೊಡ್ಡ ಮೆಚ್ಚುಗೆಯಿಂದ ನೋಡಿದವನು. ವಿಮರ್ಶೆಗೂ ನನಗೂ ಸಂಬಂಧವಿರದು. ಕವಿತೆ ನನ್ನ ಹೃದಯವನ್ನು ಬೆರಳ ತುದಿಯಲ್ಲಿ ತಾಕುತ್ತಿದ್ದರೆ, ನಾನು ತೊಯ್ದ ಕಣ್ಣುಗಳಲ್ಲಿ ಓದಿಕೊಳ್ಳುತ್ತ ಕೂಡುವ ಜಾಯಮಾನದ ಮನುಷ್ಯ. ‘ತೂಗುಮಂಚ’ದ ಅಷ್ಟೂ ಗೀತೆಗಳನ್ನು ನಾನು ಕೇಳಿಸಿಕೊಂಡಿದ್ದೇ ಹಾಗೆ.

ಒಂದು ಮಣ್ಣಿನ ಜೀವ ಎಂದೂ

ಮಣ್ಣಿನಲ್ಲೇ ಉಳಿಯದೂ

ಸಣ್ಣ ಸಸಿಯೇ ಬೆಳೆದು

ಬೇರಿಗೆ ಪಾರಿಜಾತವ ಸುರಿವುದು....

ಹಾಗಂತ ಅಶ್ವಥ್‌ ಹಾಡಿದ ಗೀತೆ ಕೇಳುತ್ತ ಕುಳಿತಾಗಲೇ ಕೋಣೆಯಾಳಕ್ಕೆ ಮಗಳು ಬಂದು. ಅವಳಿಗೆ ಮತ್ತೆ ಮತ್ತೆ ಕೇಳಿಸಿದೆ. ಹುಡುಗಿಯ ಕಣ್ಣಲ್ಲಿ ಬೊಗಸೆ ಪಾರಿಜಾತ. ಅದನ್ನೆಲ್ಲ ಕೇಳಿದ ಮೇಲೆ ಅಶ್ವಥ್‌ರ ಕ್ರಿಯಾಶೀಲತೆ, ಅವರ ಸ್ವರ ಸಂಯೋಜನೆಯ ಜಾದೂ, ಸುಗಮ ಸಂಗೀತದ ಮೇಲೆ ಅವರಿಗಿರುವ ಹಿಡಿತ- ಎಲ್ಲವೂ ಅಮೇಜಿಂಗ್‌ ಅನ್ನಿಸದೆ ಇರಲಿಲ್ಲ . ಅಂದ್ಹಾಗೆ, ಕನ್ನಡ ನೆಲದ ಅಮರ ಮಧುರ ಗಾಯಕಿ ರತ್ನಮಾಲಾ ಪ್ರಕಾಶ್‌ ಅವರ ದನಿಗೆ ವಯಸ್ಸೇ ಆಗುವುದಿಲ್ಲವಾ ?

ತುಂಬ ಬರೆದುಬಿಟ್ಟೆ ಕವಿಗಳೇ : ಮುಜುಗರವಾಯಿತೇನೋ? ನಾನು ಕೇಳಿದ, ನೋಡಿದ, ಓದಿದ ಎಲ್ಲ ಒಳ್ಳೆಯದನ್ನೂ ನನ್ನ ಓದುಗರೊಂದಿಗೆ ಹಂಚಿಕೊಳ್ಳುವ ಹಂಬಲದ ಮನುಷ್ಯ ನಾನು. ಈ ಸಲ ಮತ್ತೆ ನಾವೆಲ್ಲ ಸಿಕ್ಕಾಗ ‘ತೂಗುಮಂಚ’ದ ಬಗ್ಗೆ ಮಾತನಾಡಿಕೊಳ್ಳುತ್ತೇವೆ. ರಾಧೆಯ ರೆಫರೆನ್ಸು ಬಂದಾಗ ಕಣ್ಣ ತುದಿಯಲ್ಲೇ ನಗುತ್ತೇವೆ. ಬರೆಯುವವರೆಗಿನ ಸಂತೋಷವಷ್ಟೇ ನಿಮ್ಮದು : ಆಮೇಲೆ ಅದರ ಫಾಯಿದೆಯಲ್ಲ ನಮ್ಮದೇ.

ಪ್ರಿಯ ಎಚ್ಚೆಸ್ವಿ, ಹೀಗೇ ಬರೆಯುತ್ತಿರಿ : ಇವತ್ತಿನಿಂದ ನಿಮಗೆ ನೂರ ಅರವತ್ತಾಗುವ ತನಕ. ಇನ್ನೊಮ್ಮೆ ಹೇಳುತ್ತೇನೆ : ನನ್ನ ಆಯಷ್ಯ, ನನ್ನ ಬಿಡುವು, ನನ್ನ ಆರೋಗ್ಯ- ಎಲ್ಲವೂ ನಿಮ್ಮದಾಗಲಿ. ನಿಮ್ಮ ಕವಿತೆಗಳಲ್ಲಿನ ಸಂತೋಷವಷ್ಟೇ ಸಾಕು : ಅದು ನನ್ನದಾಗಿರಲಿ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಪೂರಕ ಲೇಖನ

‘ಅರವತ್ತು ಮಳೆಗಾಲ’ ಕಂಡ ಕವಿ ಎಚ್ಚೆಸ್ವಿಗೊಂದು ಒಲವಿನ ಓಲೆ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more