• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುತ್ತಪ್ಪ ರೈ : ಬದಲಾದ ಜೀವನಕ್ಕೆ ಏನಿದೆ ಸೆಕ್ಯೂರಿಟಿ ?

By Staff
|
Ravi Belagere on Thatskannada.com ರವಿ ಬೆಳಗೆರೆ
ಮುತ್ತಪ್ಪ ರೈಗೆ ಎಂಥ ಸೆಕ್ಯೂರಿಟಿ ಇದೆ?

ಇವತ್ತು ಇದು ಸಣ್ಣ ದನಿಯಲ್ಲಿ ಚರ್ಚೆಯಾಗುತ್ತಿರುವ ಸಂಗತಿ. ‘ಸರ್ಕಾರ ಆತನಿಗೆ ರಕ್ಷಣೆ ಕೊಟ್ಟಿದೆಯಂತೆ. ಕೋರ್ಟಿನವರೇ ಹಾಗಂತ ಆಜ್ಞೆ ಮಾಡಿದ್ದಾರಂತೆ. ಇಲ್ಲ, ರಿಸರ್ಚ್‌ ಎಂಡ್‌ ಅನಾಲಿಸಿಸ್‌ ವಿಂಗ್‌ (RAW) ಅಧಿಕಾರಿಗಳು ಮುತ್ತಪ್ಪ ರೈಯನ್ನು ಬಂಧಿಸಿ ಭಾರತಕ್ಕೆ ತಂದಾಗಲೇ, ಕೇಸುಗಳೆಲ್ಲ ಖುಲಾಸೆಯಾಗಿ, ಜೈಲಿನಿಂದ ಬಿಡುಗಡೆಯಾದ ನಂತರ ಸಂಪೂರ್ಣವಾದ ಸೆಕ್ಯೂರಿಟಿ ಕೊಡುವುದಾಗಿ ಒಪ್ಪಿಕೊಂಡಿದ್ದರಂತೆ. ಕೇಂದ್ರ ಸರಕಾರವೆ ಈಗ ಅಂಥ ವ್ಯವಸ್ಥೆ ಮಾಡಿದೆಯಂತೆ. ಇಂಟೆಲಿಜೆನ್ಸ್‌ ಬ್ಯೂರೋದವರು ಇವತ್ತಿಗೂ ರೈಗೆ ಸೆಕ್ಯೂರಿಟಿ ಎರೇಂಜ್‌ ಮಾಡಿದ್ದಾರಂತೆ’- ಹೀಗೆ ಹತ್ತು ಹಲವು ಊಹಾಪೋಹಗಳು ಮುತ್ತಪ್ಪ ರೈ ಸೆಕ್ಯೂರಿಟಿಗೆ ಸಂಬಂಧಪಟ್ಟಂತೆ ಇವೆ.

‘ನನಗಿನ್ನು ಭೂಗತ ದೊರೆಯ ಪಟ್ಟ ಬೇಡ. ನನ್ನ ತಲೆಯ ಮೇಲಿದ್ದ ಆ ಕಿರೀಟವನ್ನು ಕಿತ್ತು ಬಿಸಾಡಿದ್ದೇನೆ. ಒಮ್ಮೆ ಉಗಿದು ಬಿಟ್ಟದನ್ನು ಮತ್ತೆ ಬಾಯಿಯಾಳಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಆದರೆ, ರವಿಯವರೇ ನಾನು ಹೇಗೆ ಬದಲಾದರೂ ನನ್ನ ರಕ್ಷಣೆಯ ವಿಷಯದಲ್ಲಿ ಎಚ್ಚರ ತಪ್ಪುವಂತಿಲ್ಲ. ಒಂದೆರಡು ದಿನದ ಮಾತಲ್ಲ : ಕಟ್ಟ ಕಡೆಯ ದಿನದ ತನಕ ನನ್ನ ರಕ್ಷಣೆ ನಾನು ಮಾಡಿಕೊಳ್ಳಲೇ ಬೇಕು. ನಮ್ಮ ಜೀವನದಲ್ಲಿ ನಾವು ಯಾವತ್ತು ನಮಗೇನು ಆಗಲ್ಲ ಅಂದುಕೊಳ್ಳುತ್ತೇವೋ, ಆವತ್ತೇ ತೊಂದರೆಯಾಗಿರುತ್ತದೆ. ಆದ್ದರಿಂದ ನಾವು ಮೈಮರೆಯೋ ಹಾಗಿಲ್ಲ ...’ ಅಂದಿದ್ದಾನೆ ರೈ.

Mutthappa Rai nowಇವತ್ತಿನ ತನಕ ಭೂಗತದ ಹಾದಿಯಲ್ಲಿ ರೈ ನಡೆದು ಬಂದ ರೀತಿ ನೋಡಿದರೆ, ಆತ ಯಾವತ್ತಿಗೂ ಮೈಮರೆತವನಲ್ಲ . ಮೈ ಮರೆತು ಎಚ್ಚರ ತಪ್ಪುವುದು ಹಾಗಿರಲಿ: ಕೊಂಚ ಟೈಟು ಆಗುವಷ್ಟು ವಿಸ್ಕಿ ಕುಡಿದಿದ್ದನ್ನು ನಾನು ನೋಡಿದ್ದಿಲ್ಲ. ಇಂಡಿಯಾದಲ್ಲಿ ದುಬಾಯಿಯಲ್ಲಿ, ದರ್‌-ಎ-ಸಲಾಮ್‌ ಏರ್‌ಪೋರ್ಟ್‌ನಲ್ಲಿ - ಹೀಗೆ ರೈಯನ್ನು ನಾನು ಹಲವಾರು ಕಡೆ ನೋಡಿದ್ದೇನೆ. ಆತ ಎಂದಿಗೂ ಮೈಮರೆತವನಲ್ಲ. ಹಾಗಂತ ಹೇಳಿ ತೀರ ಕಬ್ಬಿಣದ ಮನೆಯಲ್ಲಿ ಕದವಿಕ್ಕಿಕೊಂಡು ಅಡಗಿಕೊಂಡು ಬದುಕುವ ಸ್ವಭಾವವೂ ಆತನದಲ್ಲ. ದುಬೈನಲ್ಲಿದ್ದಾಗ ತೀರ ಏಕಾಂಗಿಯಾಗಿ ನಟ್ಟನಡುರಾತ್ರಿಯಲ್ಲಿ ತನ್ನ ಮನಗೆ ನಡೆದು ಹೋಗುತ್ತಿದ್ದುದನ್ನು ನಾನು ನೋಡಿದ್ದೇನೆ. ಇಲ್ಲಿ ಬೆಂಗಳೂರಿನ ಬಂಗಲೆಯಲ್ಲೂ ರೈ ನಿರಮ್ಮಳವಾಗಿ ಓಡಾಡಿಕೊಂಡಿದ್ದಾನೆ. ಆತನ ಬಗ್ಗೆ ಆತ ವಹಿಸುವ ಅತ್ಯಂತ ದೊಡ್ಡ ಸೆಕ್ಯೂರಿಟಿ measure ಎಂದರೆ ಆತನ ಆನ್‌ಪ್ರೆಡಿಕ್ಟೆಬಿಲಿಟಿ. ಬಹುತೇಕ ಭೂಗತ ಜೀವಿಗಳಿಗೆ ಗೊತ್ತಿಲ್ಲದ ವಿದ್ಯೆಯದು. ಮರು ಕ್ಷಣ ತಾನು ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ ಎಂಬುದರ ಸುಳಿವನ್ನೇ ಕೊಡದೆ ಕಟ್ಟಕಡೆಯ ನಿಮಿಷದಲ್ಲಿ ನಿರ್ಣಯ ಕೈಗೊಂಡವನಂತೆ ಹೊರಟು ಬಿಡುವುದಿದೆಯಲ್ಲ: that saves the life. ಮುತ್ತಪ್ಪ ರೈ ಸ್ವಭಾವದಲ್ಲೇ ಅಂತದೊಂದು ಅನ್‌ಪ್ರೆಡಿಕ್ಟೆಬಿಲಿಟಿ ಇದೆ.

ಆತ ಜೈಲಿನಿಂದ ಖುಲಾಸೆಯಾಗಿ ಹೊರ ಬರುತ್ತಾನೆ ಎಂಬುದು ಆತನ ಮೇಲಿದ್ದ ಒಂಬತ್ತು ಕೇಸುಗಳ ಹಣೆಬರಹ ಬಲ್ಲವರಿಗೆ ಚೆನ್ನಾಗಿ ಗೊತ್ತಿತ್ತು. ಬಿಡುಗಡೆಯಾದ ಮೇಲೆ ರೈ ಮತ್ತೆ ವಿದೇಶಕ್ಕೆ ಹೋಗುತ್ತಾನೆ ಅಂದುಕೊಂಡವರಿದ್ದರು. ಆದರೆ ‘ಯಾವ ಕಾರಣಕ್ಕೂ ನಾನು ದೇಶ ಬಿಡುವುದಿಲ್ಲ ’ಎಂದು ರೈ ಕ್ಲಾರಿಫೈ ಮಾಡಿಬಿಟ್ಟ. ಮುತ್ತಪ್ಪ ರೈ ಬಿಡಗಡೆಯಾಗುತ್ತಿದ್ದಂತೆಯೇ ಮತ್ತೆ ತನ್ನ ಹಳೆಯ ಪಂಟರುಗಳ ಗ್ಯಾಂಗು ತಂದಿಟ್ಟುಕೊಳ್ಳುತ್ತಾನೆ ಅಂದುಕೊಂಡವರಿದ್ದರು. ಬಿಡುಗಡೆಯಾಗುವ ದಿನ, ಅದರ ಮುನ್ನಾ ದಿನ ಕೂಡಾ ಜೈಲಿನ ಬಲಿ ಹೋದವರಿಗೆ ನಿರಾಸೆ ಕಾದಿತ್ತು. ಪಂಟರುಗಳ ಮಾತು ಹಾಗಿರಲಿ: ಮತ್ತಪ್ಪ ರೈನ ಅಸಲಿ ಶಿಷ್ಯ ಮತ್ತು ಸಾಕಷ್ಟು ಮಸಲ್‌ ಪವರ್‌ ಉಳ್ಳ ಬೆಂಬಲಿಗ ರಾಕೇಶ್‌ ಮಲ್ಲಿಯೇ ಜೈಲಿನ ಬಳಿ ಬಂದಿರಲಿಲ್ಲ. ಆವತ್ತು ಜೈಲಿನ ಬಳಿಗೆ ಬಂದಿದ್ದವರಲ್ಲಿ ಹೆಚ್ಚಿನವರು ಬೆಂಗಳೂರು-ಮಂಗಳೂರುಗಳ ವ್ಯಾಪಾರಸ್ಥರು. ನಂದ ಕುಮಾರ್‌ ಆಲಿಯಾಸ್‌, ನಂದನಂತಹ ಹಳೇ ಮುಖಗಳನ್ನು ಬಿಟ್ಟರೆ, ದೊಡ್ಡ ಸಂಖ್ಯೆಯ ಅಂಡರ್‌ವರ್ಲ್ಡ್‌ ಅಲ್ಲಿಗೆ ಬಂದೇ ಇರಲಿಲ್ಲ. ಬೆಂಗಳೂರಿನ ಭೂಗತದ ನೂರಾರು ಮುಖಗಳ ಪೈಕಿ ಕಾಣಿಸಿದ ಒಂದೇ ಒಂದು ಮುಖ ಗನ್‌ ಮುನೀರ್‌ನದ್ದು. ಉಳಿದಂತೆ ಮುತ್ತಪ್ಪ ರೈ ಪರವಾಗಿ ವಾದಿಸಿದ ವಕೀಲರು, ವ್ಯಾಪಾರಿಗಳು, ಪತ್ರಕರ್ತರು ಮತ್ತು ಪತ್ರಿಕೆಗಳಲ್ಲಿ ರೈ ಬಗ್ಗೆ ಓದಿ ಕುತೂಹಲವಿಟ್ಟುಕೊಂಡು ನೋಡಲು ಬಂದಿದ್ದವರಷ್ಟೇ ಇದ್ದರು. ಇದೊಂದು ಸೂಚನೆಯೇ ಸಾಕು: ಮುತ್ತಪ್ಪ ರೈಗೆ ಅಂಡರ್‌ ವರ್ಲ್ಡ್‌ ಸಾಕಾಗಿದೆ ಅಂತ ಹೇಳಲಿಕ್ಕೆ.

Mutthappa Rai thenಆತ ತನ್ನ ಮೊಟ್ಟ ಮೊದಲ ಸಂದರ್ಶನವನ್ನು ನನ್ನ ಕೆಮರಾಕ್ಕೆ ಕೊಟ್ಟಿದ್ದ. ಬಿಡುಗಡೆಯಾದ ನಂತರ ಆತನ ಬಂಗಲೆಯಾಳಕ್ಕೆ ಮೊದಲು ಕಾಲಿಟ್ಟ ಪತ್ರಕರ್ತ ನಾನೇ. ಬಂಗಲೆಯ ಬಾಗಿಲಲ್ಲಿ ಭಯಂಕರ ಟೈಟ್‌ ಸೆಕ್ಯೂರಿಟಿ ಇದೆಯಾದರೂ, ಅಲ್ಲಿ ನಿಂತಿರುವವರು ಯಾರೂ ರೌಡಿಗಳಲ್ಲ. ಅವರು ಬೆಂಗೆಳೂರಿನವರೂ ಅಲ್ಲ ಮಂಗಳೂರಿನವರೂ ಅಲ್ಲ . ಅಸಲು ಕನ್ನಡದವರೇ ಅಲ್ಲ. ಅವರು ಕೇಂದ್ರ ಸರಕಾರದ ರಹಸ್ಯ ಏಜನ್ಸಿಯವರಾ? ಅಸಲು ಗೊತ್ತಾಗಲಿಲ್ಲ. ಮುತ್ತಪ್ಪ ರೈ ಏನೆಲ್ಲಾ ಮಾತನಾಡಿದರೂ ತನ್ನ ವೈಯುಕ್ತಿಕ ವಿಷಯಗಳಿಗೆ ಬಂದಾಗ ಏಕ್‌ ದಮ್‌ ಮುಗುಮ್ಮಾಗಿ ಬಿಡುತ್ತಾನೆ. ಮೊದಲು ನಾನು ದುಬೈನಲ್ಲಿ ಭೇಟಿಯಾದಾಗ ‘ರವಿಯವರೇ ನಾನು underworldನಿಂದ ರಿಟೈರಾಗೋದಿಲ್ಲ’ ಅಂತಲೇ ಮಾತು ಪ್ರಾರಂಭಿಸಿದ್ದ. ಈ ಐವತ್ತರ ಅಂಚಿನ ಮನುಷ್ಯನಿಗೆ ಯಾಕಿಷ್ಟು ಹಟ, ಹಂಬಲ ಅಂದುಕೊಳ್ಳುತ್ತಿದೆ. ಕೆಲವೊಮ್ಮೆ ಮಾತಾಡುತ್ತಾ ಆಡುತ್ತಾ wild ಆಗುತ್ತಿದ್ದ. ತನ್ನ hit listನೆ ನೆದುಕೊಂಡು ವ್ಯಗ್ರನಾಗುತ್ತಿದ್ದ. ಈಗ ಇಪ್ಪತ್ಮೂರು ತಿಂಗಳ ಜೈಲು ಜೀವನ ಆತನನ್ನು ಅದ್ಹೇಗೆ ಬದಲಿಸಿ ಹಾಕಿದೆಯೋ ನೋಡಿ?

‘ರವಿಯವರೇ, ನನಗೆ ಮದರ್‌ ತೆರೆಸಾ ಇಷ್ಟ ಆಗ್ತಾರೆ. ಸುಮ್ನೆ ಜನಕ್ಕೆ ಸುಳ್ಳು ಹೇಳೋ ಈ ದರಿದ್ರ ಪೊಲಿಟಿಕ್ಸಿಗಿಂತ ತನ್ನ ಕೈಲಾದ ರೀತಿಯಲ್ಲಿ ಜನಕ್ಕೆ ಒಳ್ಳೆದು ಮಾಡಿಕೊಂಡಿದ್ದು ಬಿಡ್ತೀನಿ. ನಿಮ್ಮ ಪತ್ರಿಕೆಯಲ್ಲಿ ಬಂದದ್ದು, ಟೀವೀಲಿ ನೀವು ತೋರಿಸಿದ್ದು ನೋಡಿದ ಮೇಲೆ acid victims ಗೆ ಏನಾದರೂ ಶಾಶ್ವತ ಪರಿಹಾರದಂತಹುದನ್ನ ಮಾಡಬೇಕು ಅಂತ ತೀರ್ಮಾನಿಸಿದೀನಿ. ನಮ್ಮನ್ನು ಕಡೇತನಕ ಕಾಪಾಡೋದೇ ಇಂತಹ ಕೆಲಸಗಳು ... ’ ಅಂದಿದ್ದ ರೈ.

ಎಂಥ ಕಾಕತಾಳೀಯವೋ ನೋಡಿ: ರೈ ಹಾಗೆ acid victims ಬಗ್ಗೆ ಮಾತಾಡುತ್ತಿದ್ದ ದಿನವೇ ಸೋದರಿ ಹಸೀನಾಗೆ ಪಾತಕಿ ರಾಡ್ರಿಗ್ಸ್‌ ಆ್ಯಸಿಡ್‌ ಎರಚಿ ಐದು ವರ್ಷ ತುಂಬಿತ್ತು. ‘ರವಿ ಅಂಕ್ಲ್‌ , ಮುತ್ತಪ್ಪ ರೈ ಗೆ ನನ್ನ advance thanx ಹೇಳಿ’ ಅಂತ ಫೋನು ಮಾಡಿದ್ದಳು. ಮುತ್ತಪ್ಪ ರೈ ಈ ಹಿಂದೆ ಇಪ್ಪತ್ತು ವರ್ಷ ಕಾಲ ಅನುಭವಿಸಿದ್ದ Don ಎಂಬ ಅಪಕೀರ್ತಿ ಬೆರೆತ ಕೀರ್ತಿಗಿಂತ , ಈಗ ಅನುಭವಿಸಲಾರಂಭಿಸಿರುವ ಪರಿವರ್ತಿತ ಮನುಷ್ಯನ ಕೀರ್ತಿ ಆತನಿಗೆ ಹೆಚ್ಚು ಇಷ್ಟವಾಗುತ್ತಿರುವಂತಿದೆ. ಅಂಡರ್‌ ವರ್ಲ್ಡ್‌ ಬಗ್ಗೆ ಮಾತೇ ಬೇಡವೆನ್ನುತ್ತಾನೆ. ಹಳೆಯ ಶತ್ರುಗಳ ಹೆಸರನ್ನು ಅಪ್ಪಿ ತಪ್ಪಿ ಯೂ ನೆನಪಿಸಿಕೊಳ್ಳುವುದಿಲ್ಲ. ಆತನ ತೀರಾ ಖಾಸಗಿ ರೂಮಿನಲ್ಲೇ ಕುಳಿತಿದ್ದನಲ್ಲ? ನನಗಲ್ಲಿ ಒಂದೇ ಒಂದು ವೆಪನ್‌ ಕಾಣಿಸಲಿಲ್ಲ. ಮುತ್ತಪ್ಪ ರೈಗಿದ್ದ ವೆಪನ್‌ಗಳ ಶೋಕಿ ಎಂಥದೆಂದು ಚೆನ್ನಾಗಿ ಬಲ್ಲ ನನಗೆ, ಅಪ್ಪಿ ತಪ್ಪಿಯೂ ಬಂದೂಕುಗಳ ಬಗ್ಗೆ ಮಾತಾಡದ ಆತನನ್ನು ನೋಡಿ ಖುಷಿಯಾಯಿತು.

ಇವತ್ತಿಗೆ ಮುತ್ತಪ್ಪ ರೈಗೆ ಐವತ್ತೆರಡು ವರ್ಷದಷ್ಟು ವಯಸ್ಸಾಯಿತು. ದೇಶ ಬಿಟ್ಟು ಹೋದವನಿಗೆ ‘ಇನ್ನು ನಸೀಬೇ ಇಷ್ಟು’ ಎಂಬ ಭಾವನೆಯಿತ್ತಲ್ಲ ? ಆಗೆಲ್ಲ ಆತ ರೊಚ್ಚಿಗೆಬಿದ್ದ ಮಗುವಿನಂತೆ ಮಾತನಾಡುತ್ತಿದ್ದ. ಈಗ ಕೊಲ್ಲುವ ಮಾತು ಅಪ್ಪಿತಪ್ಪಿ ಕೂಡಾ ಆಡುವುದಿಲ್ಲ. ರೈ ತುಂಬಾ ಬದಲಾಗಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಅತ್ಯಂತ ಹತ್ತ್ರಿದಿಂದ ಭೂಗತ ಲೋಕವನ್ನು ನೋಡಿ ಬಲ್ಲವನು ನಾನು. ಭೂಗತರು ‘ಬದಲಾಗ್ತೀನಿ’ ಅಂದಾಗಲೆಲ್ಲ ಅವರನ್ನು ಅನುಮಾನಿಸಿದವನು. ನನ್ನ ಅನುಮಾನಗಳು ಸುಳ್ಳಾಗಿಯೂ ಇಲ್ಲ. ಆದರೆ ಬದಲಾವಣೆ ಎಂಬುದು ರೈ ಮುಖದಲ್ಲಿ , ಮಾತಿನಲ್ಲಿ , ವರ್ತನೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದೆ.

ಒಳ್ಳೆಯದೇ ಅಲ್ಲವೇ?

(ಸ್ನೇಹಸ್ಫೂರ್ತಿ : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more