• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರಲಿ ನಿಮ್ಮ ಬದುಕಿಗೊಬ್ಬ ಸಭ್ಯ ಆಂಟಿ !

By Staff
|
Ravi Belagere on Thatskannada.com ರವಿ ಬೆಳಗೆರೆ
ಇನ್ನೇನು ನಾಳೆ ಮಾರ್ಚ್‌ ಬಂದರೆ ನನಗೆ ನಲವತ್ತೈದಾಗುತ್ತದೆ ವಯಸ್ಸು. ಇವತ್ತು ನಾನು ಜಗತ್ತಿನ ದೃಷ್ಟಿಯಲ್ಲಿ ತುಂಬ ತೃಪ್ತ, ಅದೃಷ್ಟವಂತ, Hard working - ಹಾಳುಮೂಳು. ಮೊನ್ನೆ ಬಂದಿದ್ದ ಹುಡುಗಿಯಾಬ್ಬಳು, ನಿಮಗೆ ಬೇಜಾರೇ ಆಗಲ್ವಾ? ಒಂಚೂರೂ ಬೋರಾಗಲ್ವಾ? ಕೆಲ್ಸ ಮಾಡ್ತಾನೇ ಇರ್ತೀರಲ್ಲಾ: ಇದೆಲ್ಲ ಸಾಕು ಅನ್ಸಲ್ವಾ? ಒಂದೇ ಒಂದು ದಿನ ರಜೆ ಬೇಕು ಅನ್ಸಲ್ವಾ? ಹೀಗೇ ಹತ್ತಾರು ಪ್ರಶ್ನೆ ಕೇಳಿ ಪ್ರಾಣ ತಿಂತಾ ಇದ್ದಳು. ‘ಇಲ್ಲ ಇಲ್ಲ ಇಲ್ಲ’ ಅಂತ ಎಲ್ಲದಕ್ಕೂ ಉತ್ತರಿಸುತ್ತಾ ಹೋದೆ.

ನಂಗೆ ಯಾವುದರ ಬಗ್ಗೆಯೂ ‘ತುಂಬ’ ಬೇಜಾರಾಗುವುದಿಲ್ಲ. ನಾನು ತೀರಾ sink ಆಗಿ ಕೂತು ಬಿಡುವಷ್ಟು ಯಾವತ್ತೂ ಖಿನ್ನನಾಗುವುದಿಲ್ಲ. ಅಂಥ ಸನ್ನಿವೇಶಗಳಲ್ಲಿ ಬೇಜಾರು ಯಾಕೆ ಆಗ್ತಿದೆ, ಅದರ ಮೂಲ ಕಾರಣ ಏನು, ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ ಅಂತ ತುಂಬ practical ಆಗಿ ಯೋಚಿಸಿ, ಆದ ಬೇಜಾರನ್ನ ಸ್ವಲ್ಪೇ ಹೊತ್ತಿನಲ್ಲಿ ಸರಿಪಡಿಸಿಕೊಂಡು ಬಿಡುತ್ತೇನೆ. ಕೆಲವರ ಸಾವು, ಕಳೆದು ಹೋಗುವಿಕೆ, ಗೆಳೆಯರ ಮುನಿಸು, ಯಾವುದೋ ಹಳೆಯ ಗಿಲ್ಟು- ಇಂಥವು ಕಾಡಿದಾಗ ಬೇಜಾರು ಮಾಡಿ ಕೊಳ್ಳಲಿಕ್ಕೇ ಅಂತ ಸ್ವಲ್ಪ time ಎತ್ತಿಟ್ಟು, ನಂತರ ಸರಿ ಹೋಗಿ ನನ್ನ ರೊಟೀನಿಗೆ ಬಂದು ಬಿಡುತ್ತೇನೆ. ನಿಮಗೆ ಆಶ್ಚರ್ಯವೆನಿಸಬಹುದು: ಚಿಂತೆ ಕೂಡ ಹಸಿವು-ನಿದ್ರೆ-ಕಾಮ-ವಿಸರ್ಜನೆಗಳಂತೆಯೇ ಕರಾರುವಕ್ಕಾಗಿ ಇಂತಿಷ್ಟು ಟೈಮಿಗೆ ಅಂತ ಸಂಭವಿಸಬಹುದಾದಂತಹ ಸಂಗತಿ!

‘Dear Aunty, I miss you so much’ಪ್ರತಿನಿತ್ಯ ನಿಮಗೆ ನಿದ್ದೆ ಬರೋಕೆ, ಹಸಿವಾಗೋಕೆ, ಟಾಯ್ಲೆಟ್ಟಿಗೆ ಹೋಗೋಕೆ ಅಂತ ಒಂದು time ಇದೆಯಲ್ಲ ? ಆ ಬಗ್ಗೆ ನೀವು ಯೋಚಿಸಲಿ ಬಿಡಲಿ, ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ ಹಸಿಯಾಗಿ ಹಸಿವಾಗುತ್ತದೆ. ರಾತ್ರಿ ಹನ್ನೊಂದಕ್ಕೆ ಸರಿಯಾಗಿ ನಿದ್ರೆ ಬರುತ್ತದೆ. ಅಲ್ವಾ? ಚಿಂತೆ ಕೂಡ ಅಷ್ಟೆ. ಅದಕ್ಕೇ ಅಂತ ಒಂದು ಟೈಮಿಟ್ಟುಕೊಳ್ಳಿ. ದಿನದ ಎಲ್ಲ ಕೆಲಸ ಮುಗಿದ ಮೇಲೆ, ಟೆರೇಸೋ, ಬಾಲ್ಕನಿಯೋ, ನಿಮ್ಮ ರೂಮಿನ ಒಂದು ಮೂಲೆಯೋ- ಒಟ್ಟಿನಲ್ಲಿ ಒಂದು ಜಾಗ ಮತ್ತು ಒಂದು ಛೇರು ಅಂತ ನಿಗದಿ ಮಾಡಿಕೊಂಡು ಅಲ್ಲಿಗೆ ಹೋಗಿ ಕುಳಿತುಕೊಳ್ಳಿ. ಸ್ವಿಚ್‌ ಆನ್‌ ಮಾಡಿದ ಹಾಗೆ, ಚಿಂತೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ನಿಮ್ಮ ದುಃಖ, ನಿಮ್ಮ ಗಿಲ್ಟು, ನಿಮ್ಮ ವೇದನೆ, ನಿಮ್ಮ ಸಮಸ್ಯೆ- ಎಲ್ಲದಕ್ಕೂ ಮುಕ್ತವಾಗಿ ಆಹ್ವಾನ ಕೊಟ್ಟುಬಿಡಿ. ಅವುಗಳಿಗೇ ಅಂತ ಒಂದಷ್ಟು ಹೊತ್ತು ಮೀಸಲಿಡಿ. ಅವು ನಿಮ್ಮನ್ನು ತಿನ್ನಲಿ, ದಹಿಸಲಿ, ಬೇಕಾದ್ದು ಮಾಡಿಕೊಳ್ಳಲಿ. ಆದರೆ ನೀವು ಕೊಟ್ಟ time ಮುಗಿದ ತಕ್ಷಣ ಅವೆಲ್ಲ ನಿಮ್ಮನ್ನು ಬಿಟ್ಟು ಹೊರಡಲಿ.

ಇಂಥದೊಂದು ಸಲಹೆ ನಿಮಗೆ funny ಅನ್ನಿಸಬಹುದು. ಆದರೆ ನಿಮ್ಮ ಮನಸ್ಸನ್ನು ಹೀಗೆ ಒಂದು ಶಿಸ್ತಿಗೆ ತಂದು ಕೊಂಡು ನೋಡಿ. ಖಂಡಿತವಾಗ್ಯೂ ಮನಸ್ಸು ನಿಮ್ಮ ಮಾತು ಕೇಳುತ್ತೆ. ಹಳೆಯ ನೋವು, ಪರಿಹಾರವಿಲ್ಲದ ಗಿಲ್ಟು, ಸರಿಪಡಿಸಲಾಗದ ನಷ್ಟ, ಎಂದಿನದೋ ದುಃಖ- ಇವೆಲ್ಲ ನಿಮ್ಮನ್ನು ಯಾವಾಗೆಂದರೆ ಆವಾಗ ಮುತ್ತಿಕೊಂಡು ಹರಿದು ತಿನ್ನುವ ಬದಲು, ಅದಕ್ಕೇ ಅಂತ ಒಂದು ಟೈಮು ಇಟ್ಟುಬಿಟ್ಟು ಅವುಗಳನ್ನು ಅದಿಷ್ಟು ಹೊತ್ತು ಭರಿಸಿಕೊಂಡು ಸುಮ್ಮನಾಗಿಬಿಡುವುದು ಎಷ್ಟೋ ಸಲ ಲಾಭದಾಯಕ.

ಈ ಮಾತನ್ನು ನಾನು ಧಾವಂತಗಳ ಬಗ್ಗೆ ಹೇಳುವುದಿಲ್ಲ. ದುಃಖ ಬೇರೆ, ಧಾವಂತ ಬೇರೆ. ಅವಳು ಶಾಶ್ವತವಾಗಿ ದೂರಾಗಿಬಿಟ್ಟಳು ಅನ್ನೋದು ದುಃಖ. ಅವಳಿಗೆ ನನ್ನ ಮನಸ್ಸಿನ ಅನಿಸಿಕೆಗಳನ್ನು ಹೇಳದೇ ಹೋದರೆ ಮನಸ್ಸಿಗೆ ಸಮಾಧಾನವೇ ಇಲ್ಲ ಅಂತ ಅನ್ನಿಸೋದು ಧಾವಂತ. ದುಃಖ ನಿಮ್ಮನ್ನು ಇಂತಿಷ್ಟು ಹೊತ್ತಿಗೆ ಕಾಡಲಿ ಅಂತ ಅದಕ್ಕೊಂದು ಟೈಂ ಟೇಬಲ್‌ ಹಾಕಿಕೊಟ್ಟುಬಿಡಬಹುದು. ಆದರೆ ಧಾವಂತ, ಅದು ಕೆಲಸ ಮುಗಿಯುವ ತನಕ ಬಿಡದೆ ಕಾಡುವ ಪಿಶಾಚಿ. ಅದರ ಬಗ್ಗೆ ಮತ್ಯಾವಾಗಲಾದರೂ ಬರೆದೇನು.

‘ನಿಮಗೆ ಬೋರಾಗೋದಿಲ್ವಾ?’ ಅಂತ ಕೂಡ ಆ ಹುಡುಗಿ ಕೇಳಿದಳು. ಯಾವ ಕೆಲಸ ಮಾಡಿದರೂ ಅದರೆಡೆಗೆ ಕಾಮಕ್ಕೆ ಸರಿಸಮನಾದ ಉತ್ಕಟತೆ ಮತ್ತು ಪ್ಯಾಷನ್‌ ಇಟ್ಟುಕೊಂಡು ಕೆಲಸ ಮಾಡುತ್ತೇನಾದ್ದರಿಂದ ನನಗೆ ಬೋರಾಗುವುದಿಲ್ಲ ಅಂದೆ. ‘ನಿಮಗೆ ರಜಾ ಬೇಕು ಅನ್ಸೋದಿಲ್ವಾ? ’ ಅಂದಳು. ಹದಿನೈದು ನಿಮಿಷ ರಜೆ ಸಿಕ್ಕರೆ ಹಾಡು ಕೇಳುತ್ತೇನೆ. ಒಂದು ತಾಸು ರಜ ಸಿಕ್ಕರೆ ನಿದ್ದೆ ಮಾಡಿ ಏಳುತ್ತೇನೆ. ಅರ್ಧ ದಿನ ರಜ ಸಿಕ್ಕರೆ ಡ್ರೆೃವ್‌ ಮಾಡುತ್ತೇನೆ. ಅನೇಕ ಸಲ, ಇವೆಲ್ಲವೂ ನನ್ನ ವರ್ಕ್‌ ಶೆಡ್ಯೂಲ್‌ ನ ಭಾಗಗಳೇ ಆಗಿರುತ್ತವೆ ಅಂದೆ. ಹುಡುಗಿ ಅಲ್ಲಿಗೆ ಸುಮ್ಮನಾಗಬಹುದು ಅಂದುಕೊಂಡೆ. ಆದರೆ ಅವಳು ಥಟ್ಟನೆ ಉತ್ತರಿಸಲಾಗದ ಒಂದು ಪ್ರಶ್ನೆ ಕೇಳಿಬಿಟ್ಟಳು.

‘ನೀವು ಯಾರನ್ನೂ ಮಿಸ್‌ ಮಾಡಿಕೊಳ್ಳೋದಿಲ್ವಾ?’ ಅಂದಳು.

ಈ ಪ್ರಶ್ನೆಗೆ ಹೇಗೆ ಉತ್ತರಿಸಲಿ? ನಲವತ್ತೈದು ವರ್ಷದ ಒಬ್ಬ ಮನುಷ್ಯ ಯಾರನ್ನು ಮಿಸ್‌ ಮಾಡಿಕೊಳ್ಳುತ್ತಾನೆ? ಒಂದೇ ಊರಿನಲ್ಲಿದ್ದೂ ಪ್ರತಿನಿತ್ಯ ಭೇಟಿಯಾಗಲು ಸಾಧ್ಯವಾಗದ ಹೆಂಡತಿ, ಮಕ್ಕಳು, ಗೆಳತಿ-ಗೆಳೆಯರು ಯಾವುದೋ ಕಾಲದ ಸಮೃದ್ಧ ಕುಡಿತದ ಸಾಯಂಕಾಲಗಳು, ಅವತ್ತು ರಾತ್ರಿಯಿಡೀ ಡ್ರೈವ್‌ ಮಾಡುತ್ತ ಅವಳೊಂದಿಗೆ ಮಾತಾಡುತ್ತ ಕಳೆದ ಕಾಲ, ರಸ್ತೆ ಬದಿಯಲ್ಲಿ ಬೈಕು ನಿಲ್ಲಿಸಿ ತಿಂದ ಪಾನಿಪುರಿ-ಪಾವ್‌ ಭಾಜಿ, ಬೆಟ್ಟದ ತಪ್ಪಲಲ್ಲಿ ಅಲೆದ ಏಕಾಂಗಿ ಸಂಜೆಗಳು, ಗಝಲು ಮೊರೆಯುತ್ತಿದ್ದ ಮಧ್ಯರಾತ್ರಿಗಳು- ಯೆಸ್‌, ನನ್ನ ವಯಸ್ಸಿನ ಮನುಷ್ಯ ಮಿಸ್‌ ಮಾಡಿಕೊಂಡು ಹಲುಬುವುದಕ್ಕೆ ಅಂಥ ಅನೇಕ ಸಂಗತಿಗಳಿವೆ. ಆದರೆ ಆ ಹುಡುಗಿಗೆ ನಾನು ಸತ್ಯ ಹೇಳಲೇಬೇಕು ಅನ್ನಿಸಿತ್ತು ; ಹೇಳಿದೆ.

‘ನಾನು ಆಂಟೀನ ತುಂಬ ಮಿಸ್‌ ಮಾಡಿಕೊಳ್ತೇನೆ!’

ಬಹುಶಃ ನನ್ನ ವಯಸ್ಸಿನ ಪ್ರತಿಯಾಬ್ಬರೂ ತಮಗೇ ಗೊತ್ತಿಲ್ಲದೆ ಒಬ್ಬ ಆಂಟೀನ ಮಿಸ್‌ ಮಾಡಿಕೊಳ್ಳುತ್ತಿರುತ್ತಾರೆ. ಆ ತರಹದ ಆಂಟಿ, ಅವಳು ಬಂಧುವಾಗಿರಬೇಕು ಅಂತಿಲ್ಲ. ಆದರೆ ಅಮ್ಮನಿಗಿಂತ ಚಿಕ್ಕವಳು. ನಮಗಿಂತ ದೊಡ್ಡವಳು. ಅವಳೊಂದಿಗೆ ನಮ್ಮ ಅನಿಸಿಕೆ, ಆತಂಕ, ಭಯ, ಆಸೆ, ಕನಸು, ಕಸಿವಿಸಿ, ನಮ್ಮ ಅಫೈರ್ಸ್‌, ನಮ್ಮ ಬಲಹೀನತೆಗಳು- ಹೀಗೆ ಎಲ್ಲವನ್ನೂ ಹೇಳಿಕೊಳ್ಳಬಹುದಿತ್ತು. ಆಂಟಿ, ಅಮ್ಮನ ಹಾಗೆ ಬಯ್ಯುತ್ತಿರಲಿಲ್ಲ. ಗುಟ್ಟು ಬಹಿರಂಗ ಪಡಿಸುತ್ತಿರಲಿಲ್ಲ. ನಾವು ಮಾಡಿದ್ದು ತಪ್ಪು ಅಂತ ಗೊತ್ತಿದ್ದರೂ ನಮ್ಮನ್ನು ಪೇರೆಂಟ್ಸ್‌ ದಂಡಿಸಿದ ಹಾಗೆ ದಂಡಿಸುತ್ತಿರಲಿಲ್ಲ. ನಿರ್ಬಂಧಿಸುತ್ತಿರಲಿಲ್ಲ. ಆಂಟಿಗೊಂದಿಷ್ಟು ಜೋಕು, ಹುಳ್ಳ ಹುಳ್ಳನೆಯವು- ಹೇಳಬಹುದಿತ್ತು. ಆಂಟಿ ಜೊತೆಗೆ ಅದೆಷ್ಟು ಕಂಫರ್ಟಬಲ್‌ ಆಗಿರುತ್ತಿದ್ದೆವು ಗೊತ್ತಾ ? ಆಂಟಿಯಾಂದಿಗಿನ ಆ ಸಂಬಂಧಕ್ಕೆ ಒಂದು ವಿನಾ ಕಾರಣದ ಸಡಗರವಿತ್ತು. ಆಂಟಿಗೆ ನಾವು ಇನೆ ್ಹೕಗೂ ರಿಲೇಟ್‌ ಆಗಿರುತ್ತಿರಲಿಲ್ಲ. ಆದರೂ ಅವಳು ಸಿಕ್ಕರೆ ಏನೋ ಸಂಭ್ರಮ.

ಹಾಗೆ ನಾನು ಹದಿನಾರರಲ್ಲಿ , ಹದಿನೆಂಟರಲ್ಲಿ ಇದ್ದಾಗ ಸಿಕ್ಕುತ್ತಿದ್ದ ಅಕ್ಕರೆಯ, ಆತ್ಮೀಯ ಆಂಟಿ ಏನಾದಳು? ಎಲ್ಲಿ ಕಳೆದು ಹೋದಳು? ಗೊತ್ತಿಲ್ಲ. ಆಮೇಲೆ ಹೆಂಡತಿ ಸಿಕ್ಕಳು. ಮಕ್ಕಳು ಸಿಕ್ಕರು. ಗೆಳೆಯರು, ನೌಕರಿ, ಸುಖ, ದುಃಖ, ಗೆಳತಿಯರು- ಎಲ್ಲ ಸಿಕ್ಕರು. ಆಂಟಿ ಮಾತ್ರ ಸಿಗಲೇ ಇಲ್ಲ. ಮೊನ್ನೆ ಕುಳಿತು ಅದನೆಲ್ಲ ಆ ಹುಡುಗಿಯಾಂದಿಗೆ ಹೇಳಿಕೊಂಡೆ.

ಹೌ ಸ್ವೀಟ್‌! ಅಂದಳು. ನಂಗೊತ್ತು, ಅವಳಿಗೆ ನನ್ನಲ್ಲೊಬ್ಬ ಅಂಕಲ್‌ ಸಿಕ್ಕಿದ್ದ. ಅಪ್ಪನಿಗಿಂತ ಚಿಕ್ಕವನು. ಏನನ್ನು ಬೇಕಾದರೂ ನಿರ್ಭಯವಾಗಿ ಹೇಳಿಕೊಳ್ಳಬಲ್ಲಂಥವನು. ತುಂಬ ದಂಡಿಸದವನು. ಕೂಡಿಸಿ ತಿಳಿಹೇಳುವವನು. ಅವನು ಮತ್ಹೇಗೂ ರಿಲೇಟ್‌ ಆಗ ಬಯಸುವುದಿಲ್ಲ. ಯಾವ ಗುಟ್ಟನ್ನೂ ಬಿಟ್ಟುಕೊಡುವುದಿಲ್ಲ. ಹುಳ್ಳ ಹುಳ್ಳಗಿನ ಜೋಕ್ಸ್‌ ಹೇಳಿದರೂ ಕತ್ತೆ ಅಂತ ಹುಸಿ ಮುನಿಸು ತೋರಿಸಿ ನಗುತ್ತಾನೆ. ನಾಳೆ ಮದುವೆಯಾದ ಮೇಲೆ, ಮಕ್ಕಳಾದ ಮೇಲೆ, ಬದುಕು ವಿಸ್ತಾರವಾಗಿ ಹೋದ ಮೇಲೆ ಈ ಅಂಕಲ್‌ ಕೂಡ ಅದ್ಹೇಗೋ ಕಳೆದು ಹೋಗುತ್ತಾನೆ.

‘ಅವತ್ತು ನೀನೂ ಮಿಸ್‌ ಮಾಡಿಕೊಳ್ತೀಯೋ ಏನೋ? ಅಲ್ವಾ..’ ಅಂದೆ. ಹುಡುಗಿಯಲ್ಲಿ ಇನ್ನು ಪ್ರಶ್ನೆಗಳು ಉಳಿದಿರಲಿಲ್ಲ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more