ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಾಂತವೆಂಬ ಮೋಹಕ ಸೆಳೆತದ ಕುರಿತು....

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಹುಡುಗ ಆಗಲೀ, ಹುಡುಗಿ ಆಗಲಿ-ಅವರು ಕೆಟ್ಟ ಸಹವಾಸಕ್ಕೆ ಬಿದ್ದೇ ಹಾಳಾಗಿ ಹೋಗೋದು ಅಂತ ಒಂದು ನಂಬಿಕೆ ಇದೆ. ನೀವು ಯಾವುದೇ ಪೋಲಿ ಬಿದ್ದು ಹೋದ ಹುಡುಗನ ಮನೆಗೆ ಹೋಗಿ ಕೇಳಿ ನೋಡಿ : ನಮ್ಮ ಹುಡುಗ ತುಂಬ ಒಳ್ಳೆಯವನಿದ್ದ. ಅವನ ಫ್ರೆಂಡ್ಸ್‌ ಸರ್ಕಲ್‌ ಸರಿ ಇರಲಿಲ್ಲ. ಅವರ ಜೊತೆ ಸೇರಿ ಹಾಳಾಗಿ ಹೋದ ಅಂತಾನೇ ತಂದೆ ತಾಯಂದಿರು ಹೇಳುವುದು.

Ofcourse, ಗೆಳೆತನ ತುಂಬ ಪ್ರಭಾವ ಬೀರಬಲ್ಲಂಥವಾಗಿರುತ್ತವೆ. ಒಬ್ಬ ಮಾಡಿದಂತೆ ಇನ್ನೊಬ್ಬ ಮಾಡುತ್ತಾನೆ. ಸಿಗರೇಟು, ಗುಟ್ಕ, ಮುಷ್ಠಿ ಮೈಥುನ, ಕುಡಿತ, ವಿಡಿಯೋ ಗೇಮು ಮುಂತಾವುಗಳನ್ನು ಹುಡುಗರು ಕಲಿಯೋದೇ ಕಂಪನಿಗಳಲ್ಲಿ. ಆದರೆ ಅಂಥದೊಂದು ಕೆಟ್ಟ ಕಂಪನಿಗೆ ಸೇರಿಕೊಳ್ಳಬೇಕು ಎಂಬ ನಿರ್ಧಾರವನ್ನು ಮಾತ್ರ ಅವರು ಒಬ್ಬಂಟಿಯಾಗಿದ್ದಾಗಲೇ ಕೈಗೊಳ್ಳುತ್ತಾರೆ ! ನಿಮಗೆ ಆಶ್ಟರ್ಯವಾಗಬಹುದು : ಪರಿಚಯವಾದ ಅಥವಾ ಜೊತೆಗೆ ಓದುವ ಹುಡುಗನೊಬ್ಬನನ್ನು ಕಂಡು ಅವನೆಡೆಗೆ ಆಕರ್ಷಿತಳಾಗಿ, ಅವನನ್ನು ಮೆಚ್ಚಿ ಪ್ರೀತಿಸಿರುತ್ತಾಳಲ್ಲ ಹುಡುಗಿ? ಅವಳು ಹಾಗೊಬ್ಬ ಹುಡುಗನನ್ನು ಪ್ರೀತಿಸಬೇಕು ಅಂತ, ಅವನನ್ನು ಭೇಟಿಯಾಗುವುದಕ್ಕೂ ಮುಂಚೆಯೇ ನಿರ್ಧರಿಸಿರುತ್ತಾಳೆ! ಯಾಕೆಂದರೆ, ಅವಳ ಗೆಳತಿ ಇನ್ಯಾರನ್ನೋ ಪ್ರೀತಿಸಿರುತ್ತಾಳೆ. ತನ್ನ ಓರಗೆಯವರೆಲ್ಲ ಆಗಲೇ ಪ್ರೀತಿ-ಪ್ರೇಮಗಳಲ್ಲಿ ತೊಡಗಿ adulthood ಘೋಷಿಸಿರುವಾಗ ತಾನಿನ್ನೂ ಇದೇನಿದು, ಒಳ್ಳೆಚಿಕ್ಕಹುಡುಗಿ, ಯಾರನ್ನೂ ಪ್ರೀತ್ಸೇ ಇಲ್ಲ ಇನ್ನೂ. ಹಾಗಂತ ಅವಳಿಗೆ ಅನ್ನಿಸುವುದು ಗೆಳತಿಯರ ಮಧ್ಯೆ ಇರುವಾಗ ಅಲ್ಲ .

The power of being alone!!ಹಾಗನ್ನಿಸುವುದು ಏಕಾಂತದಲ್ಲಿ ! ಮನುಷ್ಯನ ನಿಜವಾದ ಸಮಸ್ಯೆಯೇ ಅದು. ಯಾವನು ತನ್ನ ಏಕಾಂತವನ್ನು ಸರಿಯಾಗಿ ಇಟ್ಟುಕೊಳ್ಳುತ್ತಾನೋ, ಅವನು ಎಂಥ ಬಹುಕಾಂತೆ (!)ಯರೊಂದಿಗಿದ್ದರೂ ಕೆಡಲಾರ. ಅದು ನನ್ನ ಭದ್ರವಾದ ಬಿಲೀಫು. ನಾನು ಮುಂಬಯಿಯ ಕಾಮಾಟಿಪುರದ ವೇಶ್ಯಾಗೃಹಗಳಿಂದ ಹಿಡಿದು ಬಳ್ಳಾರಿಯ ಗ್ಲಾಸ್‌ ಬಜಾರ್‌ ಪಕ್ಕದ ವಾಣಿ ಬುಕ್‌ ಸ್ಟಾಲ್‌ ಬಳಿಯ ಪಾತರದವರ ಮನೆಗಳ ತನಕ ಅನೇಕ ಕಡೆಗಳಿಗೆ ನನ್ನ ಗೆಳೆಯರೊಂದಿಗೆ ಹೋಗಿ ಬಂದಿದ್ದೇನೆ. ಪುಣೆಯ ಕುಖ್ಯಾತ ಬ್ರಾತಲ್‌ ‘ಪ್ಯಾಸಾ’ ದಲ್ಲಿ ನಾಲ್ಕು ಹಗಲು, ನಾಲ್ಕು ರಾತ್ರಿ ಕಳೆದಿದ್ದೇನೆ. ಆದರೆ, ಪ್ರೀತಿಸದ ಹೊರತು ಯಾವ ಹೆಂಗಸಿನೊಂದಿಗೂ ದೇಹ ಹಂಚಿಕೊಳ್ಳಕೂಡದು ಎಂದು ನಂಬಿಬಿಟ್ಟಿರುವುದರಿಂದ, ಉಹುಂ! ಅಲ್ಲಿ ಮನಸ್ಸು ಚಪಲಕ್ಕೆ ಬೀಳುವುದಿಲ್ಲ. ಯಾವ ಮನುಷ್ಯ ಏಕಾಂತದಲ್ಲಿ ಅಂಥವುಗಳನ್ನೆಲ್ಲ ಮಾಡಲು ಅಥವಾ ‘ಅವಕಾಶ ಸಿಕ್ಕರೆ ಮಾಡಬಹುದಲ್ವಾ’ ಎಂಬಂಥ ನಿರ್ಧಾರ ತೆಗೆದುಕೊಳ್ಳುತ್ತಾನೋ, ಅವನ ನಿರ್ಧಾರವನ್ನು ನೀವು ಬದಲಿಸಲಾರಿರಿ.

ಏಕಾಂತದ ತಾಕತ್ತೇ ಅಂತಹುದು.

ಏಕಾಂತ ನಿಮ್ಮನ್ನು ಪಕ್ಕಾ ಫಿಲಾಸಫರ್‌ನನ್ನಾಗಿ ಮಾಡಬಹುದು. ಅದ್ಭುತ ಓದುಗನನ್ನಾಗಿ ಮಾಡಬಹುದು. ಚಿಂತಕ, ಬರಹಗಾರ, ಕವಿ, ಕಲಾವಿದ, ಭಾಷಣಕಾರ, ಒಳ್ಳೆಯ ಮನುಷ್ಯ -ಏನು ಬೇಕಾದರೂ ಆಗಬಹುದು. ಕೆಲವರು ತುಂಬ ಬುದ್ಧಿ ವಂತರಾಗಿರುವುದಿಲ್ಲ. ಆದರೆ ನಾಲ್ಕು ಮಾತಾಡಿದ ತಕ್ಷಣ ‘ಈ ಮನುಷ್ಯ ತುಂಬ ಓದಿಕೊಂಡಿದ್ದಾನೆ’ ಎಂಬ ಭಾವನೆ ಮೂಡಿಸುತ್ತಾರೆ. ಅವರನ್ನು ಕೇಳಿ ನೋಡಿ: ಆಕಸ್ಮಾತ್‌ ಸಿಗದಿದ್ದರೆ ತಾವಾಗಿಯೇ ಒಂದು ಏಕಾಂತವನ್ನು ಸೃಷ್ಟಿಸಿಕೊಂಡು ಓದಲು ಕೂಡುವುದನ್ನು ಅವರು ರೂಢಿ ಮಾಡಿಕೊಂಡಿರುತ್ತಾರೆ.

ಕುಡುಕರು ಕೂಡ ಅಷ್ಟೆ . ಅವರು ವಿಪರೀತವಾಗಿ ಕುಡಿಯುವುದನ್ನು ಕಂಪನಿಗಳಲ್ಲಿ ರೂಢಿ ಮಾಡಿಕೊಂಡಿರುವುದಿಲ್ಲ. ಅದನ್ನವರು ಏಕಾಂತದಲ್ಲಿ ‘ಪ್ರಾಕ್ಟೀಸ್‌’ ಮಾಡುತ್ತಾರೆ. ನಿಮ್ಮ ಕೈಯಲ್ಲಿ ಸಾವಿರಗಟ್ಟಲೆ ಹಣವಿರಬಹುದು: ಉಪಯೋಗವಿಲ್ಲ. ನಿಮ್ಮ ಕೈಗೆ ಕೆಲವೇ ಕೆಲವು ಗಂಟೆಗಳ ಏಕಾಂತ ಸಿಕ್ಕುಬಿಟ್ಟರೆ ಮುಗಿಯಿತು. ನೀವು ಓದಲಿಕ್ಕೆ ಪುಸ್ತಕವನ್ನಾದರೂ ತಂದುಕೊಳ್ಳುತ್ತೀರಿ. ಕುಡಿಯಲು ಮದ್ಯವನ್ನಾದರೂ ತಂದುಕೊಳ್ಳುತ್ತೀರಿ. ಅಭಾದಿತವಾದ ಏಕಾಂತ ಮಾತ್ರ ನಮ್ಮನ್ನು ವಿಲಾಸದೆಡೆಗೆ ಅಥವಾ ಬೆಳವಣಿಗೆಯೆಡೆಗೆ ಎಳೆಯಬಲ್ಲದು. ನಾನು ವಿಲಾಸ ಮತ್ತು ಕೆಲಸ ಎರಡನ್ನೂ ತೀರ ಹತ್ತಿರದಿಂದ ನೋಡಿ, ಅನುಭವಿಸಿ ಗೊತ್ತಿರುವವನು. ಇವತ್ತಿಗೂ ನನ್ನನ್ನು ನನ್ನ ಏಕಾಂತ ಹೆದರಿಸುತ್ತದೆ : ಒಬ್ಬಂಟಿತನವಲ್ಲ! ಒಬ್ಬಂಟಿತನ ನಮ್ಮನ್ನು ಕೇವಲ ದುಃಖಿಗಳನ್ನಾಗಿ, ಅಸಹನೆಯಿಂದ ಚಡಪಡಿಸುವವರನ್ನಾಗಿ ಮಾಡುತ್ತದೆ. ಆದರೆ ಏಕಾಂತ ಹಾಗಲ್ಲ. ಅದನ್ನು ಅಂಕೆಯಲ್ಲಿಟ್ಟುಕೊಳ್ಳದೆ ಹೋದರೆ ಹಿಂತಿರುಗಿ ನೋಡಲಿಕ್ಕೂ ಆಗದಂತೆ ಒಯ್ಯಬಾರದ ದಾರಿಗೆ ಒಯ್ದುಬಿಡುತ್ತದೆ.

ಒಂದೆರಡು ಕಡೆ ವಿಚಾರಿಸಿ ನೋಡಿ. ಒಳ್ಳೆಯ ಗಂಡ, ಚೆಂದದ ಮಕ್ಕಳು, ನೆಮ್ಮದಿಯ ಮನೆ, ಸಾಮಾಜಿಕ ಸ್ಥಾನ ಮಾನ, ವಿದ್ಯೆ, ರೂಪು, ಅರ್ಹತೆ-ಎಲ್ಲ ಇರುವ ಕೆಲವು ಗೃಹಿಣಿಯರು ವಿನಾಕಾರಣ ದಾರಿತಪ್ಪಿಬಿಟ್ಟಿರುತ್ತಾರೆ. ತೀರ ಕೆಲಸಕ್ಕೆ ಬಾರದವನೊಬ್ಬನೊಂದಿಗೆ ಅನೈತಿಕ ಸಂಬಂಧವಿಟ್ಟು ಕೊಂಡುಬಿಟ್ಟಿರುತ್ತಾರೆ. ಮೇಲು ನೋಟಕ್ಕದು ವಿನಾಕಾರಣ ಮಾಡಿಕೊಂಡ ರಗಳೆ ಅನ್ನಿಸಬಹುದು. ಆದರೆ ಆ ರಗಳೆಯ ಮೂಲವಿರುವುದೇ ಅವರು ಸರಿಯಾಗಿ handle ಮಾಡಿರದ ಏಕಾಂತದಲ್ಲಿ. ಮಧ್ಯಾಹ್ನಗಳಲ್ಲಿ ಮನೆಯಲ್ಲಿ ಯಾರೂ ಇರದಿದ್ದಾಗ ಜಾಗೃತವಾಗಿ ಬಿಡುವ negative thinking, ಸ್ವೇಚ್ಛೆಯ ಆಸೆ, ಕಪೋಲಕಲ್ಪಿತ ಕಾಮನೆಗಳು, ನಾನು ತುಂಬ ಒಬ್ಬಂಟಿ ಎಂಬ false feeling, ಗಂಡನಲ್ಲೇನೋ ಕೊರತೆಯಿದೆ ಎಂಬಂಥ ಸುಳ್ಳು ದೂರುಗಳು, ನಾನು ಈ ಬದುಕನ್ನು ಹೀಗೇ ಕಳೆದುಬಿಡಬೇಕಾ ಎಂಬಂಥ self pity, ಇನ್ನೂ ಹುಡುಗನೊಬ್ಬನ ಕಣ್ಣಿಗೆ ಆಕರ್ಷಣೀಯವಾಗಿ ಕಾಣುತ್ತೇನಾ ಎಂಬುದನ್ನು ಪರೀಕ್ಷಿಸಿ ನೋಡುವ ಚಪಲ-ಇವೆಲ್ಲವೂ ಮಧ್ಯಾಹ್ನದ ಆ ಏಕಾಂತದಲ್ಲಿ ತಲೆಯೆತ್ತುತ್ತವೆ. ಸಭ್ಯ ಗೃಹಿಣಿ ದಾರಿ ತಪ್ಪುವುದೇ ಆವಾಗ. ಇದೇ ಕೆಲಸವನ್ನು ಒಬ್ಬ ಸಭ್ಯ ಗಂಡಸು, ಹೆಂಡತಿ ತವರು ಮನೆಗೆ ಹೋದಾಗ ದೊರಕುವ ಏಕಾಂತದಲ್ಲಿ ಮಾಡಿಬಿಡುತ್ತಾನೆ. ಮನೆಯಿಂದ ಹೊರಕ್ಕೆ ಹೋದಾಗಿನ ಲೀಷರ್‌ನಲ್ಲಿ ಮಾಡಿಬಿಡುತ್ತಾನೆ. ಹುಡುಗಿಯಾಬ್ಬಳು ಏಕಾಂತದಲ್ಲಿದ್ದಾಗ ಏನೇನೂ ಉದ್ದೇಶವಿಲ್ಲದೆ ಪಕ್ಕದ ಮನೆಯ ಹುಡುಗನನ್ನು ದಿಟ್ಟಿಸಿ ನೋಡಿ ಅವನಲ್ಲೊಂದು ಆಸೆ ಮೂಡಿಸಿಬಿಡಬಹುದು. ಹಾಗೇನೇ ಹುಡುಗನೊಬ್ಬ ತನ್ನ ಏಕಾಂತದಲ್ಲಿ ಅನಾಯಾಸವಾಗಿ, ಅವಶ್ಯಕತೆ ಇಲ್ಲದಿದ್ದಾಗಲೂ ಮುಷ್ಠಿ ಮೈಥುನದಂತಹ ಕಸುಬಿಗೆ ತೊಡಗಿಬಿಡಬಹುದು.

ನಮ್ಮ ಏಕಾಂತವನ್ನು ನಾವು ಸಂಭಾಳಿಸಿಕೊಳ್ಳಲಾಗದಿದ್ದರೆ ಕೆಲವು ಮುಂಜಾಗರೂಕತೆಗಳನ್ನು ವಹಿಸಬೇಕು. ಅಂಥ ಅಡ್ಡ ಘಳಿಗೆಗೆ ಅಂತಲೇ ಒಂದಷ್ಟು ಭಯಂಕರ ಇಂಟರೆಸ್ಟಿಂಗ್‌ ಆದ ಪುಸ್ತಕಗಳನ್ನು ತಂದಿಟ್ಟುಕೊಳ್ಳಬೇಕು. ಇಂಟರ್‌ನೆಟ್‌ಗೆ ಗಂಟುಬೀಳಬೇಕು. ಮನೆಬಿಟ್ಟು ಸುಮ್ಮನೆ ಹೊರಕ್ಕೆ ಹೊರಟುಬಿಡಬೇಕು. ಸಿನೆಮಾಗಳಿಗೆ ಹೋಗಿ ಕೂಡಬೇಕು. ಹತ್ತಿರದವರರ್ಯಾರೊಂದಿಗಾದರೂ phoneನಲ್ಲಿ ಧಾರಾಕಾರವಾಗಿ ಹರಟಬೇಕು. Social workಗೆ ತೊಡಗಿಸಿಕೊಳ್ಳಬೇಕು. ಸುಮ್ಮನೆ ಹೋಗಿ ಬಸ್‌ಸ್ಟಾಂಡ್‌ನಲ್ಲಿ ಕೂತಾದರೂ ಸರಿಯೇ, ಏಕಾಂತದ ಅಪಾಯದಿಂದ ಪಾರಾಗಬೇಕು. ಕೆಲವೊಮ್ಮೆ ನಾಯಿಮರಿ, ಅಕ್ವೇರಿಯಂನಲ್ಲಿನ ಮೀನು, ಬೆಕ್ಕು ಮುಂತಾದ pets ಕೂಡ ನಮ್ಮನ್ನು ಏಕಾಂತದ ಸಮಸ್ಯೆಯಿಂದ ಪಾರು ಮಾಡಬಲ್ಲವು.

ಆದರೆ ನಿಜ ಹೇಳಲಾ? ಕೆಲವು ಸಲ ಸಮಸ್ಯೆಗಳನ್ನು ಉಂಟುಮಾಡುವ ಆ ಏಕಾಂತವೇ ಎಷ್ಟು ಮೋಹಕವಾಗಿ ಸೆಳೆಯತೊಡಗುತ್ತದೆಂದರೆ- ಅಂಥದೊಂದು ಏಕಾಂತವನ್ನು ನಾವೇ create ಮಾಡಿಕೊಂಡು ಬಿಡುತ್ತೇವೆ.

ನಮ್ಮನ್ನು ಯಾರೂ ರಕ್ಷಿಸಲಾರರು!

(ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X