• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿರಿ ಎಂಬ ಆರು ಬೆರಳಿನ ಪುಟ್ಟ ಏಳು ತಿಂಗಳ ದೇವತೆಯ ಬಗ್ಗೆ...

By Staff
|
Ravi Belagere on Thatskannada.com ರವಿ ಬೆಳಗೆರೆ
‘ಅದು ನಿಮ್ಮ ನೆರಿಗೆ ಲಂಗದ ಹುಡುಗಿಯ ಹೆಸರಾ’ ಅಂತ ಅನೇಕರು ಕೇಳಿದ್ದಾರೆ. ಅಥವಾ ನನ್ನ ತಾಯಿಯ ಹೆಸರಿರಬೇಕು ಅಂದುಕೊಂಡವರಿದ್ದಾರೆ. ‘ಪ್ರಾರ್ಥನಾ’ ಅನ್ನೋದು ನನ್ನ ಹಟ, ಛಲ, ಶ್ರದ್ಧೆ, ಪ್ರೀತಿ ಮತ್ತು ಕನಸುಗಳ ಒಟ್ಟು ಮೊತ್ತಕ್ಕೆ ನಾನಿಟ್ಟ ಹೆಸರು ಅಂತ ಬಹಳ ಕಡಿಮೆ ಜನಕ್ಕೆ ಗೊತ್ತಿದೆ.

ಎರಡು ವರ್ಷಗಳ ಹಿಂದೆ ನಾನು ಮತ್ತು ‘ವಿಜಯ ಕರ್ನಾಟಕ ’ದ ವರದಿಗಾರ ಮಿತ್ರ ಪ್ರಕಾಶ, ನಮ್ಮ ಆಫೀಸಿನ ಪಕ್ಕದ ಬಯಲಿನಲ್ಲಿ ಸುಮ್ಮನೆ ಕುರ್ಚಿ ಹಾಕಿಕೊಂಡು ಕುಳಿತು ಈ ಶಾಲೆ ಹೇಗೆಲ್ಲ ಬೆಳೆದು ನಿಲ್ಲಬಹುದಲ್ಲವಾ ಅಂತ ಮಾತನಾಡಿಕೊಳ್ಳುತಿದ್ತ್ದೆವು. ಆಗ ನಮ್ಮ ಕಣ್ಣೆದುರಿಗಿದ್ದದ್ದು ಕೇವಲ ಶಾಲೆಯ ಬಿಲ್ಡಿಂಗು. ಎಷ್ಟು ರೂಮು, ಎಷ್ಟು ಬೆಂಚು, ಎಷ್ಟು ಕ್ಲಾಸು, ಎಷ್ಟು ಮಕ್ಕಳು- ಬರೀ ಲೆಕ್ಕಾಚಾರ. ಇಲ್ಲಿ ಬಿಲ್ಡಿಂಗು, ಛೇರು, ಬೆಂಚು, ಕಂಪ್ಯೂಟರುಗಳ ಹೊರತಾಗಿ ಸಾವಿರ ಸಾವಿರ ಬದುಕುಗಳು ಅರಳಬಹುದು ಅಂತ ಖಂಡಿತ ಅಂದುಕೊಂಡಿರಲಿಲ್ಲ. ಈ ಪರಿಯ ವೇಗದಲ್ಲಿ ವಿದ್ಯಾರ್ಥಿಗಳ strength ತಂದು ಕೊಂಡ ಇನ್ನೊಂದು ಶಾಲೆ ಇದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ಪ್ರಾರ್ಥನಾ ತುಂಬಿದೆ, ತುಳುಕಿದೆ ಮತ್ತು ಅಕ್ಕಪಕ್ಕದನ್ನೆಲ್ಲ ಆಕ್ರಮಿಸಿಕೊಂಡು ಬೆಳೆಯುತ್ತಿದೆ.

ಮೊದಲು ಕಟ್ಟಿದ ಕಟ್ಟಡದಲ್ಲಿದ್ದ ಅಷ್ಟೂ ಕೋಣೆಗಳು ತುಂಬಿಹೋದವು. ಹಾಗಂತ, ಶಾಲೆಯ ಎದುರಿಗೇ ರಸ್ತೆಯಾಚೆಗಿದ್ದ ದೊಡ್ಡದೊಂದು ಕಟ್ಟಡವನ್ನು ಹೆಚ್ಚು ಕಡಿಮೆ ಒಂದು ಕೋಟಿ ರೂಪಾಯಿಯಷ್ಟು ಖರ್ಚು ಮಾಡಿ ಖರೀದಿಸಿದೆ. ಅದೂ ತುಂಬಿ ಹೋಯಿತು. ಕಡೆಗೆ ನನ್ನ ಆಫೀಸಿನ ಕೆಳಗೆರಡು ಗೋದಾಮುಗಳನ್ನು ಬಾಡಿಗೆಗೆ ಕೊಟ್ಟಿದ್ದೆನಲ್ಲ ? ಅಲ್ಲಿದ್ದ ಬಾಡಿಗೆದಾರರನ್ನೂ ಬಿಡಿಸಿ ಅಲ್ಲೂ ಒಂದಷ್ಟು ಕ್ಲಾಸ್‌ ರೂಮು, ಲೈಬ್ರೆರಿ, ಶಾಲೆಯ ಆಡಳಿತ ಕಛೇರಿ ಮುಂತಾದವುಗಳನ್ನು ಮಾಡಿಕೊಟ್ಟಿದ್ದೇನೆ. ಹೀಗೆ ಇನ್ನೆರಡು ವರ್ಷ ಕಳೆದರೆ, ಈ ಮಕ್ಕಳು ನನ್ನ ಆಫೀಸನ್ನೂ ಆಕ್ರಮಿಸಿಕೊಂಡು ನಮ್ಮನ್ನು ಬೇರೆ ಬಿಲ್ಡಿಂಗಿಗೆ ಕಳಿಸುತ್ತವೆ. ನನ್ನಂಥ, ಎರಡು ಸಲ ಎಸೆಸೆಲ್ಸಿ ಪಾಸಾದ ಮನುಷ್ಯ ಕಟ್ಟಿದ ಶಾಲೆಯಾಂದು ಇಷ್ಟು ವ್ಯಾಪಕವಾಗಿ ಬೆಳೆದೀತು ಅಂತ ಯಾರಂದುಕೊಂಡಿದ್ದರು.

ಇನ್ನೇನು ನಾಳೆ ಜೂನ್‌ ತಿಂಗಳ ಮೊದಲ ತಾರೀಕು ಬಂತು. ಒಟ್ಟಿಗೆ ಸಾವಿರದೈನೂರು ಮಕ್ಕಳ ಕಲರವ ಆರಂಭವಾಗುತ್ತದೆ. ಏನೇ ಕೆಲಸ, ಸುಸ್ತು, ಬೇಸರ, ಖಿನ್ನತೆ, ರಗಳೆಗಳಿದ್ದರೂ ಒಂದು ಸಲ ಆಫೀಸಿನ ಮೆಟ್ಟಿಲಿಳಿದು ಹೋಗಿ ಶಾಲೆಯ ಹಿತ್ತಿಲಲ್ಲಿ ಮೊಲದ ಮರಿಗಳೊಂದಿಗೆ ಆಡುತ್ತ ಕೂತಿರುವ ಮಕ್ಕಳ ಮಧ್ಯೆ ಸುಮ್ಮನೆ ಹತ್ತು ನಿಮಿಷ ಕುಳಿತು ಬಂದರೆ ಸಾಕು: ಮನಸ್ಸು ಹಗುರಾಗಿಬಿಡುತ್ತದೆ. ಅವರೊಂದಿಗೆ ಹಾಡುತ್ತ, ಆಡುತ್ತ, ಅವರ ಮಧ್ಯೆಯೇ ಓಡಾಡುತ್ತ ಇದ್ದಾಗ ಪುಟ್ಟ ಮಗುವೊಂದು ನನ್ನ ಜುಬ್ಬಾದ ಚುಂಗು ಹಿಡಿದೆಳೆದು,

‘ಏಯ್‌ ಲವಿ ಬೆಲಗೆಲೆ... ’ ಅನ್ನುತ್ತದೆ. ಅದಕ್ಕಿನ್ನೂ ಬಹುವಚನ ಬಳಸಿ ಅವಮಾನಿಸಬಹುದೆಂಬುದು ಗೊತ್ತಿಲ್ಲ.

‘ಏನು ? ’ ಅನ್ನುತ್ತೇನೆ.

‘ನೀನೂ.. ನೀನೂ.. ನಮ್ಮನೆ ಟೀವೀಲಿ ಬರ್ತೀಯಾ...’ ಅನ್ನುತ್ತದೆ ಮಗು. ನಾನು ಅದನ್ನೆತ್ತಿಕೊಂಡು ಆ ಭಾರಕ್ಕೆ ಹಗುರಾಗುತ್ತೇನೆ. ಶಿವರಾಮ ಕಾರಂತರು ಹೇಳಿದ ಅದೊಂದು ಮಾತು ಪದೇ ಪದೇ ನೆನಪಾಗುತ್ತದೆ: ‘ಮಕ್ಕಳು ತಾವು ಕೊಡಬಹುದಾದ ಅಷ್ಟೂ ಸಂತೋಷಗಳನ್ನು ಐದು ವರ್ಷ ತುಂಬುವುದರೊಳಗಾಗಿ ಕೊಟ್ಟುಬಿಡುತ್ತಾರೆ’. ನಾನು ನನ್ನ ಬದುಕಿನ ಇನ್ನೆಲ್ಲ ವರ್ಷಗಳನ್ನೂ ಅಂಥ ಸಾವಿರಾರು ಮಕ್ಕಳೊಂದಿಗೆ ಕಳೆಯುತ್ತೇನೆ. ಅದೃಷ್ಟವಂತನಲ್ಲವೇ?

ಕೆಲವೊಮ್ಮೆ ಮಧ್ಯಾಹ್ನಗಳಲ್ಲಿ ಆಫೀಸಿನಿಂದ ಹೊರ ಬಿದ್ದು ಶಾಲೆಯ ಕಡೆಗೆ ಹೋಗುವಾಗ, ಮಕ್ಕಳನ್ನು ಮನೆಗೆ ಕರೆದೊಯ್ಯಲು ಬಂದಿರುವ ಅನೇಕ ಗೃಹಿಣಿಯರು ಅಲ್ಲಿ ಇದಿರಾಗುತ್ತಾರೆ. ಅವರಲ್ಲಿ ಹೆಚ್ಚಿನವರು ನನ್ನ ಓದುಗರು. ‘ ಈ ಸಲದ ಖಾಸ್‌ಬಾತ್‌ನಲ್ಲೀ... ’ ಅಂತಲೇ ಮಾತು ಆರಂಭಿಸುತ್ತಾರೆ. ಅವರ ಹೆಸರುಗಳಲ್ಲದಿದ್ದರೂ, ನನಗೆ ಅವರೆಲ್ಲರ ಮುಖಗಳೂ ಪರಿಚಿತ. ಕೆಲವರು ಕನ್ಸೆಷನ್‌ ಕೇಳಿಕೊಂಡು ಬಂದಿರುತ್ತಾರೆ. ಕೆಲವರು ಸಲಹೆ ಕೊಡಲಿಕ್ಕೆ , ಮತ್ತೆ ಕೆಲವರು ಜಗಳಕ್ಕೆ, ಇನ್ನು ಕೆಲವರು ಉಭಯ ಕುಶಲೋಪರಿಗೆ. ನನಗೆ ಅವರಿಗಿಂತ ಹೆಚ್ಚಾಗಿ, ಅವರ ಮಕ್ಕಳು ಪರಿಚಯ. ಒಮ್ಮೆ ನೋಡಿದ ಮುಖವನ್ನು ಬೇಗ ಮರೆಯುವವನಲ್ಲ ನಾನು.

ಮೊನ್ನೆ ನಮ್ಮ ಕ್ರೈಂ ಡೈರಿಯ ಹುಡುಗರು, ಇಲ್ಲೇ ಬನಶಂಕರಿಯಲ್ಲಿ ನಡೆದ ಗೃಹಿಣಿಯಾಬ್ಬಳ ಕೊಲೆಯ ಕೇಸಿನ ವಿವರಗಳನ್ನು shoot ಮಾಡಿಕೊಂಡು ಬಂದಿದ್ದರು. ಅದರ tapeಗಳನ್ನು ಮಷೀನಿಗೆ ಹಾಕಿ visualsನೋಡುತ್ತ ಕುಳಿತಿದ್ದವನಿಗೆ ಇದ್ದಕ್ಕಿದ್ದಂತೆ ಒಂದು ಪರಿಚಿತ ಮುಖ ಕಾಣಿಸಿದಂತಾಯಿತು. ‘ಈ ಮಗು ನಮ್ಮ ಶಾಲೆಗೆ ಬರುತ್ತಲ್ವೆ? ಇದರ ಹೆಸರು ರೇಶು! ’ ಅಂತ ಉದ್ಗರಿಸಿದ್ದೆ.

‘ಕೊಲೆಯಾಗಿರುವುದು ಆ ಮಗುವಿನ ತಾಯಿ... ’ ಅಂತ ಹುಡುಗರು ವಿವರಿಸಿದರು. ಮುಂದೆ ಸ್ವಲ್ಪೇ ಹೊತ್ತಿಗೆ, ಕೊಲೆಯಾದ ಹೆಣ್ಣು ಮಗಳ ಶವ ತೋರಿಸಿದರು. ಮುಖ ಗುರುತು ಸಿಗದಷ್ಟು ಭಯಾನಕವಾಗಿ ಜಜ್ಜಿ ಹೋಗಿತ್ತು. ಆಮೇಲೆ ಆಕೆಯ ಫೋಟೊ ತೋರಿಸಿದರು. ಯಾರೋ ಕರುಳು ಕಲೆಸಿಟ್ಟಂತಾಗಿ ಹೋಯಿತು. ಆಕೆ ಪ್ರತೀ ಮಧ್ಯಾಹ್ನ ಶಾಲೆಗೆ ಬಂದು ಗೇಟಿನಲ್ಲಿ ಕಾದಿದ್ದು ರೇಶುವನ್ನು ಕೈ ಹಿಡಿದು ಕರೆದೊಯ್ಯುತ್ತಿದ್ದ ಚಿತ್ರ ಕಣ್ಣಿಗೆ ಬಂತು. ಮಧ್ಯಮ ವರ್ಗದ ಹೆಣ್ಣುಮಗಳು. ‘ ಏನು ಮಾಡೋದು ಸಾರ್‌? ಗಂಡ ಸ್ವಲ್ಪ ಕುಡೀತಾರೆ. ಮಾನಸಿಕವಾಗಿಯೂ ಅಷ್ಟು ಸ್ವಸ್ಥರಲ್ಲ ’ ಅಂದಿದ್ದಳು. ತಂದೆ ತಾಯಿ ಇಬ್ಬರೂ ಬಂದು ಸೀಟು ಕೇಳದಿದ್ದರೆ ನಾನು ಅವರ ಮಕ್ಕಳಿಗೆ admission ಕೊಡುವುದಿಲ್ಲ. ‘ ನಮ್ಮ ಮನೇವ್ರು ತುಂಬ busy ಸಾರ್‌’ ಅನ್ನುತ್ತಾರೆ. ‘ ಹೌದಾ? ನಿಮ್ಮ ಮದುವೆಗಾದರೂ ಬಂದಿದ್ದರೋ, ಅವತ್ತೂ busy ಇದ್ದರೋ? ಒಬ್ಬರೂ ಸೇರಿ ಮಗೂನ ಪ್ರಪಂಚಕ್ಕೆ ಕರ್ಕೊಂಡು ಬಂದಿದೀರಿ. ಒಟ್ಟಾಗಿ ಬಂದು ಅದರ admission ಮಾಡಿಸೋಕೆ ಮಾತ್ರ ಆಗಲ್ವಾ? ಹೋಗಮ್ಮಾ... ಮನೇವ್ರ ಕರ್ಕೊಂಡು ಬಾ’ ಅಂತ ಬಯ್ಯುತ್ತೇನೆ.

ಆದರೆ ಆಕೆಯನ್ನು ಬೈದಿರಲಿಲ್ಲ. ‘ಗೊಂದಲದ ಮನಸ್ಸಿನ, ಕುಡಿತಕ್ಕೆ ಬಿದ್ದ ಗಂಡನಿಗೆ ಚಿಕಿತ್ಸೆ ಕೊಡಿಸು, ಚೆನ್ನಾಗಿ ನೋಡಿಕೊ, ಮಗೂನ ಚೆನ್ನಾಗಿ ಓದಿಸು’ ಅಂತೆಲ್ಲ ಹೇಳಿ ರೇಶುಗೊಂದು ಸೀಟು ಕೊಟ್ಟು ಕಳಿಸಿದ್ದೆ. ಈಗ ನೋಡಿದರೆ ಆಕೆ ಕೊಲೆಯಾಗಿಬಿಟ್ಟಿದ್ದಾಳೆ. ಅಸಲು ಕೊಲೆಯಾಗುವಂಥ ಕಾರಣವೇ ಇರಲಿಲ್ಲ. ಮನೆಯಲ್ಲಿದ್ದವಳನ್ನು ಕನಕಪುರ ರಸ್ತೆಯ ಕಡೆಗೆ, ಒಂದು ನಿರ್ಜನ ಜಾಗಕ್ಕೆ ಕರೆದೊಯ್ದು ಅವಳ ಗಂಡ ಚಿಕ್ಕದೊಂದು hint ಕೂಡ ಕೊಡದೆ ಆಕೆಯ ಕತ್ತು ಕುಯ್ದು, ಕಲ್ಲಿನಲ್ಲಿ ಮುಖವನ್ನೆಲ್ಲ ಬರ್ಬರವಾಗಿ ಚಚ್ಚಿ ಹಾಕಿ ಕೊಂದು ಬಿಟ್ಟಿದ್ದ: ವಿನಾ ಕಾರಣ! ಅಂಥ ಮತಿಭ್ರಮಿತನ ಮಗಳು ರೇಶು, ಅಮ್ಮನನ್ನು ಕಳೆದುಕೊಂಡಿದ್ದಾಳೆ. ಅಪ್ಪ ಜೈಲಿನಲ್ಲಿ. ಈ ಬಾರಿ ಶಾಲೆಗೆ ಬರುತ್ತಾಳಾ? ಗೊತ್ತಿಲ್ಲ. ಬಂದರೆ, ಅವಳ ಮನೆಯವರು ಫೀಜು ಕಟ್ಟುವುದೂ ಬೇಡ ಅಂದುಕೊಳ್ಳುತ್ತೇನೆ.

ಅಷ್ಟರಲ್ಲಿ ಕೊಂಚ ಬಸವಳಿದಂತೆ ಕಾಣುವ ದಂಪತಿಗಳು ಆಫೀಸಿನೊಳಕ್ಕೆ ಬರುತ್ತಾರೆ. ಅವರು ಬಳ್ಳಾರಿ ಸಮೀಪದ ಹಡಗಲಿಯವರು. ‘ನಿಮ್ಮ ಶಾಲೆ ಅನ್ನೋ ಕಾರಣಕ್ಕೆ ಸೇರಿಸಿದೀವಿ ಸಾರ್‌’ ಅನ್ನುತ್ತಿದ್ದುದು ನೆನಪಿದೆ. ಆದರೆ ಅವರೊಂದಿಗೆ ಮಗು ಬಂದಿಲ್ಲ. ‘ಅವಳಿಗೆ ಕ್ಯಾನ್ಸರು! ತುಂಬ ಆಸೆಯಿಂದ ಶಾಲೆಗೆ ಸೇರಿಸಿದ್ವಿ. ಪೂರ್ತಿ ಫೀಜೂ ಕಟ್ಟಿದ್ವಿ. ಅವಳು ಶಾಲೆಗೆ ಬಂದಿದ್ದು ಮೂರೇ ತಿಂಗಳು. ನಾವು ಇಡೀ ವರ್ಷ ಫೀ ಕಟ್ಟಿದೀವಿ. ಉಳಿದ ತಿಂಗಳುಗಳ ಫೀ ಹಣ ವಾಪಸು ಕೊಡೋಕಾಗುತ್ತಾ? ಮನೇಲಿ ತುಂಬ ಕಷ್ಟ ಇದೆ. ಆಸ್ಪತ್ರೆ ಖರ್ಚು ವಿಪರೀತ. ಮಗು ಉಳ್ಕೊಂಡ್ರೆ ಅಷ್ಟೇ ಪುಣ್ಯ. ಯಾವತ್ತು ಹುಶಾರಾಗ್ತಾಳೋ, ಅವತ್ತೇ ಮತ್ತೆ ಶಾಲೆಗೆ ಸೇರಿಸ್ತೀವಿ, ಪೂರ್ತಿ ಫೀ ಕಟ್ತೀವಿ... ’ ಮಗುವಿನ ತಂದೆ ಮಾತನಾಡುತ್ತ ಹೋಗುತ್ತಾನೆ. ನಾನು ಸುಮ್ಮನೆ ಕಣ್ಣೀರಾಗುತ್ತೇನೆ. ಮೂರು ತಿಂಗಳ ಫೀ ಮುರಕೊಂಡು ಉಳಿದದ್ದು ವಾಪಸು ಕೊಡಿ ಅಂತ ಆದೇಶಿಸಲಾ? ಅವರು ಕಟ್ಟಿದ ಅಷ್ಟೂ ಫೀ, ಮೇಲೆ ನನಗೆ ತೋಚಿದ್ದೊಂದಿಷ್ಟು ಹಣ ಸೇರಿಸಿ ಆತನ ಕೈಗೆ ಚೆಕ್‌ ಕೊಡುತ್ತೇನೆ. ಆ ವರ್ಷ ನನಗಿರುವುದು ಅದೇ ನಿರೀಕ್ಷೆ; ಆ ಮಗು ಈ ಬಾರಿ ಆರೋಗ್ಯವಾಗಿ ಕುಣಿಯುತ್ತ ಕೆಲೆಯುತ್ತ ಶಾಲೆಗೆ ಬರುತ್ತಾ? ಬರುತ್ತೆ ಅಲ್ವಾ?

Baby Siri‘ಬದುಕಿ ಬಂದೇ ಬರುತ್ತೆ ’ ಅಂತ ನಂಬಿಕೆಯಿಟ್ಟುಕೊಂಡು ಸರಿಸುಮಾರು ಎರಡು ತಿಂಗಳಿಂದ ನಾನು ಕಾಯುತ್ತಿದ್ದ ಇನ್ನೊಂದು ಕೂಸು ಕಡೆಗೂ ಬರಲಿಲ್ಲ. ನನ್ನ, ಲಲಿತೆಯ, ನಮ್ಮ ಮಕ್ಕಳ ಅಕ್ಕರೆಯ ಕೂಸು ‘ಸಿರಿ’ ಮೊನ್ನೆ ಭಾನುವಾರ ಮಧ್ಯಾಹ್ನ ತೀರಿಕೊಂಡಿತು. ಅವಳನ್ನು ಶೃಂಗೇರಿಯ ದೀಪಾ ಮತ್ತು ಸತೀಶ್‌ ಕೆಟ್ಟ ಮಳೆಗಾಲದಲ್ಲಿ ಟ್ಯಾಕ್ಸಿ ಮಾಡಿಕೊಂಡು ಕುದುರೆಮುಖದಿಂದ ಬೆಂಗಳೂರಿಗೆ ಕರೆತಂದಿದ್ದ ರಾತ್ರಿ, ಲಲಿತೆ ಮಗುವಿಗೆ ಆರತಿ ಮಾಡಿ, ಅದರ ತಾಯಿ ದೀಪಂಗೆ ಬಾಣಂತಿ ಉಪಚಾರ ಮಾಡಿದ್ದಳು. ಎರಡೂ ಕೈಗಳಲ್ಲಿ ಆರಾರು ಬೆರಳುಗಳಿದ್ದ ಸಿರಿ ತುಂಬ ಮುದ್ದಾಗಿದ್ದಳು. ಅದೊಂದು ಸಂಜೆ ಅವಳ ಮನೆಗೆ ಹೋಗಿ ಆ ಪುಟ್ಟ ಲೋಲಕ್ಕು, ಕತ್ತಿಗೆ ಸರ- ಹೀಗೆ ಏನೇನೋ ತೊಡಿಸಿ ತೊಡೆಯ ಮೇಲೆ ಮಲಗಿಸಿಕೊಂಡು ಮುದ್ದಾಡಿ ಬಂದಿದ್ದೆ. ಸಿರಿಯ ಒಂದು ಪಾದ ಕೊಂಚ ಒಳಕ್ಕೆ ತಿರುಗಿಕೊಂಡಿತ್ತು. ನನ್ನ ಪರಿಚಯದ ಅಷ್ಟೂ ಡಾಕ್ಟರುಗಳ ರೆಫರೆನ್ಸು ಕೊಟ್ಟು ಅದರ ಎಳೆಯ ಪಾದಕ್ಕೊಂದು ಬ್ಯಾಂಡೇಜು ಹಾಕಿಸಿದ್ದಾಗಿತ್ತು. ನನ್ನ ಪರಿಚಯದ ಹೆಣ್ಣು ಮಗಳೊಬ್ಬಳು ದೀಪನಿಗೆ ಬಾಣಂತಿತನ ಮಾಡಲು ನಿಂತಳು. ಎಲ್ಲವೂ ಚೆನ್ನಾಗಿಯೇ ಇತ್ತು.

ಸಿರಿಗೆ ಕೆಮ್ಮು ಬರುವ ತನಕ!

ಅವಳ ಕೆಮ್ಮು, ಕೆಟ್ಟ ಜ್ವರ, ಉಸಿರಾಟದ ತೊಂದರೆ ಎಲ್ಲ ನೋಡಿ ಗಾಬರಿಯಾಗಿ ಡಾಕ್ಟರ ಬಳಿ ಕರೆದೊಯ್ದರೆ, ಮಗುವಿಗೆ ಹೃದಯದ ತೊಂದರೆ ಇದೆ. ಮಣಿಪಾಲ್‌ ಆಸ್ಪತ್ರೆಗೆ ಒಯ್ಯಿರಿ ಅಂದುಬಿಟ್ಟರು. ಅಲ್ಲಿಂದ ಸಿರಿ ನಾರಾಯಣ ಹೃದಯಾಲಯಕ್ಕೆ ಹೋಯಿತು. ಮತ್ತೆ ಅಗ್ರಸೇನ್‌ ಆಸ್ಪತ್ರೆಗೆ ಬಂದು ಮಲಗಿತು. ಹೃದಯದ ತೊಂದರೆಯಾಂದೇ ಅಲ್ಲ : ಇನ್ನೂ ಸಮಸ್ಯೆಗಳಿವೆ ಅಂದರು. ಅದೆಲ್ಲಕ್ಕಿಂತ ಹೆಚ್ಚಿನ ಆಘಾತವಾದದ್ದೆಂದರೆ, ನಾರಾಯಣ ಹೃದಯಾಲಯದ ಡಾ. ದೇವಿ ಶೆಟ್ಟಿ ಹೇಳಿದ ಮಾತು.

‘ಮಗೂಗೆ ಆರು ಬೆರಳಿವೆ ಅಂತ ಗೊತ್ತಾದ ತಕ್ಷಣ ನೀವು heart specialist ಹತ್ರ ಕರ್ಕೊಂಡು ಬರಬೇಕಾಗಿತ್ತು. ಆರು ಬೆರಳಿನಂಥ extra growth ಇದ್ದರೆ, ಅದನ್ನ ನೀವು ಅದೃಷ್ಟ ಅಂದ್ಕೊತೀರಿ. Stupid! ಯಾವುದೇ extra growth ಇದ್ದರೆ ಅಂಥ ಮಗೂಗೆ ಒಳಗೆಲ್ಲೋ ಅಪಾಯವಾಗಿದೆ ಅಂತಲೇ ಅರ್ಥ. ತಕ್ಷಣ ಚಛಞಜಿಠಿ ಮಾಡಿ. ಜೀವಕ್ಕೆ ಅಪಾಯವಿದೆ’ ಅಂದಿದ್ದರು.

ನನ್ನ ಜನ್ಮದಲ್ಲೇ ಮೊದಲಬಾರಿಗೆ ಈ ವಿಷಯ ಕೇಳಿದ್ದು. ಆರು ಬೆರಳಿರುವ ಮಗುವಿಗೆ ಜೀವಕ್ಕೆ ತೊಂದರೆಯಾಗುವಂತಹ ಯಾವುದೋ ಊನವಿರುತ್ತದೆ ಅನ್ನೋದು ನಿಜವಾ? ಈ ವಿಷಯ ಬೇರೆ child specialist ಗಳಿಗೆ ಗೊತ್ತಿಲ್ಲವಾ? ಕಾಲಿನ ಊನದ ಸಮಸ್ಯೆ ಇದ್ದ ಸಿರಿಯನ್ನು ಕನಿಷ್ಠ ಪಕ್ಷ ಹತ್ತು ಜನ ಡಾಕ್ಟರುಗಳು ನೋಡಿದ್ದರು. ಅವರಿಗ್ಯಾರಿಗೂ ಈ ವಿಷಯ ಗೊತ್ತೇ ಇರಲಿಲ್ಲವಾ?

ದೀಪ ಮತ್ತು ಸತೀಶ್‌ ಮಂಕಾಗಿ ಕೂತುಬಿಟ್ಟಿದ್ದರು. ‘ಏಳು ತಿಂಗಳ ಕೂಸು ಸಿರಿಗೆ ತೆರೆದ ಹೃದಯದ ಆಪರೇಷನ್‌ ಮಾಡಿಸಬೇಕು. ಕನಿಷ್ಠ ಮೂರು ಲಕ್ಷ ರೂಪಾಯಿಯ ಖರ್ಚು. ಅಷ್ಟು ಮಾಡಿಸಿದರೂ ಮಗು ಬದುಕೀತೆಂಬ ಗ್ಯಾರಂಟಿ ಇಲ್ಲ. ಅಕಸ್ಮಾತ್‌ ಬದುಕಿದರೂ, ಸಕ್ಸಸ್‌ ಫುಲ್‌ ಆಗಿ ಆದ ಆಪರೇಷನ್‌ ಹಿಂದೆಯೇ ಇನ್ನೊಂದು ಸಮಸ್ಯೆ ಉದ್ಭವವಾಗುತ್ತದೆ. ಆಗ ಇನ್ನೊಂದು ಆಪರೇಷನ್‌ ಮಾಡಿಸಲೇಬೇಕಾಗುತ್ತದೆ. ಅದಕ್ಕೂ ಇಷ್ಟೇ ಖರ್ಚಾಗುತ್ತದೆ. ಆ ಹಣ ಕೈಲಿಟ್ಟುಕೊಂಡೇ ಮೊದಲನೇ ಆಪರೇಷನ್‌ ಮಾಡಿಸಲೇ ಬೇಕು. ಅದಕ್ಕೂ ಇಷ್ಟೇ ಖರ್ಚಾಗುತ್ತದೆ. ಎರಡನೆಯ ಆಪರೇಷನ್‌ ಎಂಟು ವರ್ಷದ ನಂತರವೂ ಆಗಬಹುದು, ಇನ್ನೊಂದು ತಿಂಗಳಿಗೇ ಅದರ ನೆಸಸಿಟಿ ಬರಬಹುದು. ನೋಡಿ, ಏನು ಮಾಡ್ತೀರೋ? ಅಷ್ಟೆಲ್ಲ ಖರ್ಚು ಮಾಡಿದ ನಂತರವೂ ಮಗು ಉಳಿಯುತ್ತೆ ಅಂತ ಖಾತರಿಯಿಲ್ಲ. ನಿಮ್ಮ ನಿರ್ಧಾರ ನಿಮ್ಮದು’ ಅಂದಿದ್ದರು ಡಾಕ್ಟರುಗಳು.

ದೀಪ ಮತ್ತು ಸತೀಶ್‌ ಬಗ್ಗೆ ನನಗೆ ಗೌರವ ಅಂತ ಮೂಡಿದ್ದೇ ಅವತ್ತು. ಅವರಿಬ್ಬರೂ ನನಗಿಂತ ಚಿಕ್ಕವರು. ಸಾಕಷ್ಟು ಆತ್ಮೀಯರು. ದೀಪ software ಕಂಪೆನಿಯಾಂದರಲ್ಲಿ ಉದ್ಯೋಗಿ. ಸತೀಶ್‌ ಕೊಂಚ ವ್ಯಾಪಾರಿ, ಕೊಂಚ ರೈತ. ಎಲ್ಲಿಂದ ತಂದಾರು ಲಕ್ಷ ಲಕ್ಷ ಹಣ? ಹಾಗಂತ ಏಳು ತಿಂಗಳು ಎದೆಗೆ ಅವಚಿಕೊಂಡು ಬೆಳೆಸಿದ ಸಿರಿಯನ್ನು ಸಾಯಲಿ ಅಂತ ಬಿಟ್ಟುಬಿಡೋದು ಹೇಗೆ? ಯಾವತ್ತಾದರೂ ಅವರನ್ನು ಸಿರಿ ಕ್ಷಮಿಸುತ್ತಾಳೇನೋ? ಆದರೆ ಅವರನ್ನವರು ಕ್ಷಮಿಸಿಕೊಳ್ಳಲು ಸಾಧ್ಯವೇ?

‘ಆಪರೇಷನ್‌ ಮಾಡಿಸ್ತೀವಿ... ’ ಅಂದುಬಿಟ್ಟರು ಇಬ್ಬರೂ. ಅವರೆದುರಿಗೆ ಕಣ್ಣು ತೋಯಿಸಿಕೊಳ್ಳಬಾರದೆಂದು ಸುಮ್ಮನಿದ್ದೆ. ಅಗ್ರಸೇನ ಆಸ್ಪತ್ರೆಯಲ್ಲಿ ಮಲಗಿದ್ದ ಸಿರಿಯನ್ನು ಅದೊಂದು ರಾತ್ರಿ ಹೋಗಿ ನೋಡಿ ಬಂದೆ. ಚಾಚಿದರೆ ನನ್ನ ಕೈಯಷ್ಟು ಉದ್ದದ ಮಗು. ಅವಳನ್ನು ಗೋಡೆಯ ಕಡೆಗೆ ಮುಖ ಮಾಡಿ, ಮೈಯೆಲ್ಲ ಸೂಜಿ ಚುಚ್ಚಿ ಮಲಗಿಸಿದ್ದರು. ಅವಳಿಗಿಂತ ಐದು ಪಟ್ಟು ಗಾತ್ರದ ಆಕ್ಸಿಜನ್‌ ಸಿಲಿಂಡರಿನ ಮೂಲಕ ಅವಳಿಗೆ ಜೀವ ಹಾಯಿಸಲಾಗುತ್ತಿತ್ತು. ದೀಪನನ್ನು ಯಾವಾಗಾದರೊಮ್ಮೆ ನೋಡಿ, ಗುರುತಿಸಿದಂತೆ ಮಾಡಿ ಕ್ಷೀಣ ದನಿಯಲ್ಲಿ ಅಳುತ್ತಿತ್ತು. ಎರಡು ತಿಂಗಳ ನಿರಂತರ ಹೋರಾಟದಲ್ಲಿ ಸಿರಿ ಅದೆಷ್ಟು ನೊಂದಳೋ? ಅದೆಷ್ಟು ಹೆದರಿದಳೋ? ಎಷ್ಟೊಂದು ಅತ್ತಳೋ? ಇಂಟೆನ್ಸಿವ್‌ ಕೇರ್‌ ಯೂನಿಟ್‌ಗಳಲ್ಲಿ ಅದೆಷ್ಟು ಒಬ್ಬಂಟಿಯೆನ್ನಿಸಿ ಗಾಬರಿಗೊಂಡಿದ್ದಳೋ?

ಕಡೆಗೂ ಅವಳ ಆಪರೇಷನ್‌ ಆಯಿತು. ಆ ಏಳು ತಿಂಗಳ ಕಂದನ ಎದೆ ಸೀಳಿ, ಹೃದಯ ಚಿಕಿತ್ಸೆ ಮಾಡಿ, ಎರಡು ದಿನದ ಮಟ್ಟಿಗೆ ಹೊಲಿಗೆ ಕೂಡ ಹಾಕದೆ ಅದನ್ನು ಐ.ಸಿ.ಯುನಲ್ಲೇ ಮಲಗಿಸಿದ್ದರು. ಸಿರಿಯ ಆರೋಗ್ಯದ ಬಗ್ಗೆ ಮೇಲಿಂದ ಮೇಲೆ ದೀಪಾ ನನಗೆ SMS ಕಳಿಸುತ್ತಲೇ ಇದ್ದಳು. ಭಾನುವಾರ ಬೆಳಗ್ಗೆ ಹೊತ್ತಿಗೆ She is critical ಅನ್ನೋ ಮೆಸೇಜು ಬರತೊಡಗಿತು. ನಾನು ವಿಪರೀತ ಕಸಿವಿಸಿಗೆ ಈಡಾಗುತ್ತಿದ್ದೆ. ಅವತ್ತು ಮಧ್ಯಾಹ್ನ ಇನ್ನೇನು ತಟ್ಟೆಯಲ್ಲಿದ್ದ ತುತ್ತು ಬಾಯಿಗಿಟ್ಟುಕೊಳ್ಳಬೇಕು: ಫೋನು ಬಂದಿತ್ತು. ಸಿರಿ ಎಂಬ ಆರು ಬೆರಳಿನ ಪುಟ್ಟ ಏಳು ತಿಂಗಳ ದೇವತೆ ಸತ್ತು ಹೋಗಿತ್ತು.

ಇಲ್ಲೇ ನನ್ನ ಆಪೀಸಿನ ಹಿಂದಿನ ಯಾರಬ್‌ನಗರದ ಸ್ಮಶಾನದಲ್ಲಿ ನಮ್ಮ ಸೀನ ಹೋಗಿ ಪುಟ್ಟದೊಂದು ಗುಂಡಿ ತೆಗೆಸಿದ್ದ. ದೀಪ-ಸತೀಶ್‌ ಸಿರಿಯನ್ನು ಕರೆತಂದಾಗ ಸಂಜೆ ಏಳರ ಸಣ್ಣಮಳೆ. ಆ ತನಕ ಅಳುವನ್ನು ಅದುಮಿಟ್ಟುಕೊಂಡಿದ್ದರೇನೋ? ನನ್ನ ನೋಡಿದ ಕೂಡಲೇ ಸತೀಶ್‌ ಬಿಕ್ಕತೊಡಗಿದರು. ದೀಪಾ ಅಂತೂ ಈ ಎರಡು ತಿಂಗಳಲ್ಲಿ ಅರ್ಧವಾಗಿ ಹೋಗಿದ್ದಾಳೆ. ಅವರಿಗೆ ಏನಂತ ಸಮಾಧಾನ ಹೇಳಲಿ? ಸಿರಿಯನ್ನು ಬ್ಯಾಂಡೇಜು ಬಟ್ಟೆಯಾಂದರಲ್ಲಿ ಮುಖವೂ ಕಾಣದಂತೆ ಪೂರ್ತಿಯಾಗಿ ಸುತ್ತಲಾಗಿತ್ತು. ‘ಹೊಟ್ಟೆಯ ಉದ್ದಗಲಕ್ಕೂ ಸೂಜಿಯಿಂದ ಚುಚ್ಚಿ ಚುಚ್ಚಿ, ಹೊಟ್ಟೆ ಹಲಸಿನ ಹಣ್ಣಿನಂತಾಗಿಬಿಟ್ಟಿದೆ’ ಅಂದರು ಸತೀಶ್‌. ಆ್ಯಂಬುಲೆನ್ಸ್‌ನಲ್ಲಿ ಮಲಗಿದ್ದ ಕಂದನನ್ನು ಎತ್ತಿಕೊಂಡೆ. ಆರು ಬೆರಳಿನ ದೇವತೆ ಏಳು ಮಲ್ಲಿಗೆಯ ತೂಕವಿದ್ದಳು. ಸತೀಶ್‌ ಗುಂಡಿಯಾಳಕ್ಕಿಳಿದಿದ್ದರು. ನಾನು ನಿಧಾನವಾಗಿ ಅವರ ಕೈಗೆ ಮಗುವನ್ನು ಕೊಟ್ಟೆ.

ಆಮೇಲೆ ಮಣ್ಣೆಳೆದುಬಿಟ್ಟರು.

ದಂಪತಿಗಳಿಬ್ಬರನ್ನೂ ಪಕ್ಕದಲ್ಲಿ ಕೂಡಿಸಿಕೊಂಡು ಸ್ಮಶಾನದಲ್ಲಿ ಸುಮ್ಮನೆ ಕುಳಿತೆ. ಸಂಜೆ ಏಳರ ನಸುಕು ಬೆಳಕಿನಲ್ಲಿ ಅಲ್ಲಿರುವ ದೊಡ್ಡ ದೊಡ್ಡ ಸಮಾಧಿಗಳ ಮೇಲೆ ಸತ್ತವರ ಹೆಸರುಗಳು ಬರೆದಿರುವುದು ಕಾಣುತ್ತಿತ್ತು. ಅಷ್ಟು ದೊಡ್ಡವರ ಮಧ್ಯೆ ನಮ್ಮ ಪುಟ್ಟ ಗೆಳತಿ ಸಿರಿ ಮಲಗಿದ್ದಾಳೆ: ಯಾರ ಜೋಪಾನದಲ್ಲಿ ?

‘ದೀಪಾ, ಸತ್ತ ಮಗು ಮತ್ತೆ ಹೊಟ್ಟೇಲಿ ಅಂತಾರೆ.. ಸಿರಿ ಬರ್ತಾಳೆ ಮತ್ತೆ ’ ಅನ್ನುವ ಹೊತ್ತಿಗೆ ಕೊರಳ ಸೆರೆ ಉಬ್ಬಿ ಬಂದಿದ್ದವು.

ಆ ನಿರ್ಜನ ಸ್ಮಶಾನದಲ್ಲಿ ಅವಳೊಬ್ಬಳನ್ನೇ ಬಿಟ್ಟು ಬಂದದ್ದಾಯಿತು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more