ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶಸ್ವಿ ಹವಾಲಾ ಏಜೆಂಟ್‌ ಎಸ್ಸೆಂ ಕೃಷ್ಣರಿಗೆ ವಂದನೆಗಳು...

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಪ್ರಿಯ ಎಸ್ಸೆಂ.ಕೃಷ್ಣ ,

ಮತ್ತೆ ವಾಪಸ್‌ ಬರ್ತೀವಿ ಎಂಬ ಅಪಶಕುನದ ಮಾತಿನೊಂದಿಗೆ ತಮ್ಮ ಅಸೆಂಬ್ಲಿಗೆ ತೆರೆ ಹಾಕಿದ್ದೀರಿ.

ಒಂದು ಸರಕಾರವನ್ನ, ಕಾಂಗ್ರೆಸ್‌ ಎಂಬ ಪಕ್ಷವನ್ನ, ವಿರೋಧ ಪಕ್ಷಗಳನ್ನ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪತ್ರಿಕೆಗಳನ್ನ, ನಿಮ್ಮ ಕುಟುಂಬವನ್ನ- ಹೀಗೆ ಸಮಸ್ತವನ್ನೂ ನಾಲ್ಕು ಮುಕ್ಕಾಲು ವರ್ಷಗಳ ತನಕ ಶುದ್ಧ ಮಲ್ಟಿ ನ್ಯಾಶನಲ್‌ ಕಂಪೆನಿಯ ಬೇರೆ ಬೇರೆ ಡಿಪಾರ್ಟುಮೆಂಟುಗಳೇನೋ ಎಂಬಂತೆ ಅತ್ಯಂತ ಯಶಸ್ವಿಯಾಗಿ ನಡೆಸಿದ ಏಕೈಕ ಮುಖ್ಯಮಂತ್ರಿ ಎಂದರೆ ನೀವು. ರಾಮಕೃಷ್ಣ ಹೆಗಡೆಯ ನಂತರ ಈ ನಾಡು ಕಂಡ ಅತ್ಯಂತ elite ಮುಖ್ಯಮಂತ್ರಿ ಅಂದರೂ ನೀವೇ. ಆದರೂ ನಿಮಗೆ ಯಾರೂ ಸಾಟಿಯಿಲ್ಲ ಬಿಡಿ! ರಾಮಕೃಷ್ಣ ಹೆಗಡೆ ಕೇವಲ ಚಳುವಳಿಗಳನ್ನು ಮುರಿದರು. ನೀವು ಹಾಗಲ್ಲ : ಪಕ್ಷಗಳಿಗೆ ಪಕ್ಷಗಳನ್ನೇ ಮುರಿದು ಕರಗಿಸಿ ಭಸ್ಮ ಮಾಡಿ ಹಾಕಿದ ಮೋಹಿನೀ ಭಸ್ಮಾ ಸುರ!

ಅದೆಲ್ಲಿದ್ದಿರಿ ಕೃಷ್ಣ ? ಎಲ್ಲಿಂದ ಬಂದಿರಿ? ನೀವು ಬರುವುದಕ್ಕೆ ಮುನ್ನ ಈ ರಾಜ್ಯ ಐವರು ಮುಖ್ಯಮಂತ್ರಿಗಳನ್ನು ಇತ್ತೀಚಿನ ದಿನಗಳಲ್ಲಿ ಕಂಡಿತ್ತು. ಐವರೂ ಐದು ರೀತಿ. ವೀರೇಂದ್ರ ಪಾಟೀಲರು ಭ್ರಷ್ಟರಾಗಲಿಲ್ಲ. ರಾಜ್ಯದ ಬೊಕ್ಕಸಕ್ಕೆ ಹೇರಳ ದುಡ್ಡು ತಂದು ಹಾಕಿ, ಅದನ್ನು ಖರ್ಚೇ ಮಾಡದೆ ವೃದ್ಧ ಸರ್ಪದಂತೆ ತಿಜೋರಿಯ ಕಾವಲಿಗೆ ಕುಂತು ಅಧಿಕಾರದಿಂದ ಇಳಿದು ಹೋದರು. ವೀರಪ್ಪ ಮೊಯಿಲಿ ಕೂಡಾ ಭ್ರಷ್ಟರಾಗಲಿಲ್ಲ. ಒಂದಷ್ಟು ಮೌಲ್ಯಗಳನ್ನಿರಿಸಿಕೊಂಡಿದ್ದರು. ಆದರೆ ಒಳ್ಳೆಯ ಟೀಮ್‌ ಲೀಡರ್‌ ಆಗಲಿಲ್ಲ. ಬಂಗಾರಪ್ಪನವರ ಕೈಗೆ ಅಧಿಕಾರವೆಂಬುದು ಮಾಣಿಕ್ಯದಂತೆ ಸಿಕ್ಕಿತ್ತು. ಅವರು ಸ್ವೇಚ್ಛಾಚಾರದ ಪರಮಾವಧಿ ತಲುಪಿ ಮಂಗ ಆದರು. ಅನಂತರ ಬಂದ ದೇವೇಗೌಡರು ಯಾರೊಂದಿಗೂ ಅಧಿಕಾರ ಆಡಳಿತ ಹಂಚಿಕೊಳ್ಳದ, ಯಾರನ್ನೂ ನಂಬದ ಬ್ರಹ್ಮರಾಕ್ಷಸ. ಅವರ ಆಡಳಿತದ್ದೂ ಅಲ್ಪಾಯುಷ್ಯ. ಮುಂದೆ ಬಂದ ಪಟೇಲರು ಶುದ್ಧ ಲೋಲುಪ. ಯಾರು ಏನಾದರೂ ಮಾಡಿಕೊಂಡು ಹೋಗಬಹುದು ಅಂತ ಘೋಷಿಸಿ ನಿದ್ರೆ ಹೋದ ನಿರುಪದ್ರವಿ ಸೈತಾನ. ಈ ಐವರನ್ನೂ ನೋಡಿದ ರಾಜ್ಯ ಮತ್ತು ರಾಷ್ಟ್ರ ಜನಕ್ಕೆ, ಆರನೆಯವರಾಗಿ ಬಂದ ನೀವು ಅದೆಷ್ಟು ದೊಡ್ಡ ಆಸೆಯಾಗಿ ಕಾಣಿಸಿದ್ದಿರಿ ಗೊತ್ತೇ ಕೃಷ್ಣ?

ನೀವೂ, ನಿಮ್ಮ ದಿರಿಸು, ಆ ಭಾಷೆ, ಇಳಿವಯಸ್ಸಿನಲ್ಲೂ ಇರುವ ಆರೋಗ್ಯ, ಹಲ್ಲು-ಕೂದಲೂ ಎರಡೂ ಇಲ್ಲದಿದ್ದರೂ ಕಾಣಿಸಿಕೊಳ್ಳುತಿದ್ದ ರೀತಿ- ಎಲ್ಲ ನೋಡಿದ ಇಡೀ ಭಾರತದ ಮೀಡಿಯಾ ನಿಮ್ಮನ್ನು ತೀರ ಹತ್ತಿರಕ್ಕೆ ತಂದುಕೊಂಡು, ನಿಮ್ಮ ಬಗ್ಗೆ ಚಪ್ಪರಿಸಿಕೊಂಡು ಬರೆಯಿತು. ಇಡೀ ರಾಜ್ಯದ ಸ್ವರೂಪವನ್ನೇ ಬದಲಿಸಿ‘ಎಲ್ಲರಿಗೂ ಎಲ್ಲದನ್ನೂ ಯಾವಾಗಲೂ ಕೊಡುತ್ತೇನೆ’ ಎಂಬ ಧಾಟಿಯಲ್ಲಿ ಮಾತನಾಡಿದ ನೀವು ಅಮೇರಿಕನ್‌ ಶೈಲಿಯ ಉತ್ಸಾಹಿ ರಾಜಕಾರಣಿಯಂತೆ ಪತ್ರಕರ್ತರ ಕಣ್ಣಿಗೆ ಕಂಡಿರಿ. ರಾಷ್ಟ್ರ ಮಟ್ಟದಲ್ಲಿ ಜಾರ್ಜ್‌, ಅಟಲ್‌ ಬಿಹಾರಿ, ಅದ್ವಾನಿ, ಸುಷ್ಮಾ ಮುಂತಾದವರು ಘಳಘಳಿಸುತಿದ್ದರೆ ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಪೈಕಿ ಎಲ್ಲರಿಗೂ ಸ್ಟಾರ್‌ ತರ ಕಾಣಿಸಿದ್ದು ನೀವೇ ಕೃಷ್ಣಾ. Of course ನಿಮಗಿಂತ software ಶೈಲಿಯ ಜಾಣತನ ಚಂದ್ರಬಾಬು ನಾಯುಡು ಅವರಿಗಿತ್ತಾದರೂ, ನಿಮ್ಮ ಇಂಗ್ಲೀಷ್‌ ಪ್ರಸೆಂಟೇಷನ್ನು ಇತ್ಯಾದಿಗಳ ಮುಂದೆ ನಾಯುಡು ಡಲ್ಲು ಹೊಡೆದು ಬಿಟ್ಟರು: ಅನಂತಮೂರ್ತಿಯ charmನ ಮುಂದೆ ಚಂಪಾ-ಗಿಂಪಾ ಡಲ್ಲು ಹೊಡೆಯುತ್ತಾರಲ್ಲ ? ಹಾಗೆ. ನೀವು ಆರಂಭದಲ್ಲಿ ಒಬ್ಬ ಮಾನವಂತ ರಾಜಕಾರಣಿಯ ಹಾಗೆ ಅಧಿಕಾರಿಗಳನ್ನೂ, ಮಧ್ಯಮ ವರ್ಗದವರನ್ನೂ, ಟೈಮ್ಸ್‌ ಆಫಿಂಡಿಯಾ ಓದುವವರನ್ನು ಸಾರಾಸಗಟಾಗಿ ಗೆದ್ದು ಬಿಟ್ಟಿರಿ. ನಿಮ್ಮ ಆಡಳಿತದ ಆರಂಭಿಕ ದಿನಗಳಲ್ಲೇ ಆ ಚಾಣಾಕ್ಷತನ ಎಂಥದೆಂಬುದು ನಮಗೆ ಗೊತ್ತಾಗಿ ಹೋಯಿತು ಬಿಡಿ. ನಿಮ್ಮ ಬೆನ್ನ ಹಿಂದೆ ಫೋಟೋಗಳಲ್ಲಿ ಕಾಣಿಸಿಕೊಂಡ ಪ್ರಸಾದಿ ಎಂಬ ಕುಂಟಲಗಿತ್ತಿ ಕಸುಬುದಾರನೊಬ್ಬನ ಬಗ್ಗೆ ಸಣ್ಣದೊಂದು ವರದಿ ಮಾಡಿದರೆ ಸಾಕು, ಅವನನ್ನು ಗದರಿಸಿ ಮೂಲೆಗೆ ಕೂರಿಸಿ ಬಿಟ್ಟಿರಿ. ಬೇರೆ ಮುಖ್ಯಮಂತ್ರಿಗಳಾದರೆ ಅದನ್ನೇ ಒಂದು ego ಪ್ರಾಬ್ಲೆಮ್‌ ಮಾಡುತಿದ್ದರೇನೋ? ಆದರೆ ಮೊದಲ ಸೆಷನ್ನಿನಲ್ಲೇ ಜಗದೀಶ್‌ ಶೆಟ್ಟರ್‌ ಒಂದು ಪ್ರೊಟೋಕಾಲ್‌ ವಿಷಯಕ್ಕೆ ಆಕ್ಷೇಪ ತೆಗದಾಗ ಆತ್ಯಂತ ಸಭ್ಯ ಹಿರಿಯನಂತೆ I am sorry shetre... ಅಂದು ಇಡೀ ಪ್ರಕರಣಕ್ಕೆ ತೆರೆ ಎಳೆದುಬಿಟ್ಟಿರಿ. ಈ ಕೃಷ್ಣ ರಥ ಬೇಗ ಮುಗ್ಗರಿಸುವಂತಹುದಲ್ಲ ಅಂತ ಅವತ್ತೇ ಅನ್ನಿಸಿತು.

ನೀವು ಮುಖ್ಯಮಂತ್ರಿಯಾಗಿದ್ದಿನ ಪೊಲಿಟಿಕಲ್‌ ಸಿಚುವೇಶನ್‌ ಕೂಡಾ ವಿಭಿನ್ನವಾಗಿತ್ತು . ಅವತ್ತಿಗಾಗಲೇ ದಳದವರು ಕಚ್ಚಾಡಿ, ಚಪ್ಲಿಯಲ್ಲಿ ಬಡಿದಾಡಿ ಒಂದರ್ಥದಲ್ಲಿ ತೀರಿಕೊಂಡಿದ್ದರು. ಸುರೇಶ್‌ ಕುಮಾರ್‌ರಂತಹ ವಾಗ್ಮಿಯನ್ನು ಬಿಟ್ಟು ಜಗದೀಶ್‌ ಶೆಟ್ಟರನ್ನು ವಿರೋಧಿ ನಾಯಕನ್ನಾಗಿ ಮಾಡಿದ ಬಿಜೆಪಿ ನಿಮಗೆ ಮಹಾದುಪಕಾರವನ್ನು ಮಾಡಿತು. ತೊಡೆ ಮುರಿದ ಶಿವಪ್ಪನವರನ್ನು ತಂದು ನೀವು Dog house ನಲ್ಲಿ ಮಲಗಿಸಿದಿರಿ. ಸುರೇಶ್‌ ಕುಮಾರ್‌ ಒದ್ದುಕೊಂಡ ಹಸುವಿನಂತೆ ಸುಮ್ಮನಾಗಿ ಹೋದರು. ಉಳಿದಂತೆ, ಹೊಸದಾಗಿ ಆಯ್ಕೆಯಾಗಿ ಬಂದ ಶಾಸಕರನ್ನು ಬಿಜೆಪಿಯ ನಾಯಕರೇ ದ್ವಿತೀಯ ದರ್ಜೆಯ ನಾಗರೀಕರಂತೆ ನೋಡಿಬಿಟ್ಟರು. ಅಸಲು ಅಫೋಸಿಷನ್ನು ಎಂಬುದು ಎಲ್ಲಿತ್ತು ಕೃಷ್ಣ ?

ಇದನ್ನೆಲ್ಲ ಗಮನಿಸಿದ ನೀವು ಮೊದಲ ಬಜೆಟ್‌ ಹಿಡಿದುಕೊಂಡು ಬಂದಾಗ ಎಂಥ ಅದ್ಭುತವಾದ home work ಮಾಡಿಕೊಂಡು ಕ್ಲಾಸಿಗೆ ಬಂದ ವಿದ್ಯಾರ್ಥಿಯಂತೆ ಕಾಣುತ್ತಿದ್ದಿರಿ ಗೊತ್ತಾ ? ನಿಮಗಿನ್ನೂ ಆಗ ರಾಜ್ಯ ರಾಜ್ಯಕಾರಣದ ಮೇಲೆ ಹಿಡಿತ ಸಿಕ್ಕಿರಲಿಲ್ಲ. ಪರ್ತಕರ್ತರನ್ನು ಆಕಳಿಸಿ ಬಾಯಿಗಿಟ್ಟುಕೊಂಡುಬಿಟ್ಟರೆ ಉಳಿದದ್ದನ್ನು ಸಂಭಾಳಿಸುವುದು ಸುಲಭ ಅಂತ ನಿಮಗೆ ಗೊತ್ತಿತ್ತು. ಆ ತನಕ ಪರ್ತಕರ್ತರೆಂಬ ಬೃಹಸ್ಪತಿಗಳಿಗೂ ಸರಿಯಾಗಿ ಅರ್ಥವಾಗದಿದ್ದಂತಹ ಐ.ಟಿ. ಮತ್ತು ಬಿ.ಟಿ. ಎಂಬ ಎರಡು ಅಮೇರಿಕನ್‌ ಹಾವುಗಳನ್ನು ಆಡಲು ಬಿಟ್ಟಿರಿ. ಯಾವುದೇ ಶಾಸಕನಿಗೆ ಐ.ಟಿ. ಆಥವಾ ಬಿ.ಟಿ. ಎಂದರೇನೆಂಬುದು ಗೊತ್ತಿರಲಿಲ್ಲ. ರಾಜ್ಯದ ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ದಿ, ಮಹಿಳಾ ಕಲ್ಯಾಣ- ಹೀಗೇ ಎಲ್ಲವನ್ನೂ ಕಸವೆಂಬಂತೆ ಬದಿಗೆ ಸರಿಸಿ ಐಟಿ-ಬಿಟಿ ಮತ್ತು ಬೆಂಗಳೂರು ಸುಂದರೀಕರಣದ ಮಂತ್ರವನ್ನು ಜಪಿಸಿ ಬಿಟ್ಟಿರಿ. ನಿಮ್ಮ ಉಪಾಯ ಯಶಸ್ವಿಯೂ ಅಯಿತು. ನಿಮ್ಮ ಮುಖದಲ್ಲಿ ನಗೆ ಕಂಡದ್ದೇ ಆಗ. ಇನ್ನು ಐದು ವರುಷ ರಾಜ್ಯ ಸಂಭಾಳಿಸಬೇಕು ಎಂಬುದು ನಿಮಗೆ ಗೊತ್ತಿತ್ತು. ಅದಕ್ಕೆ ಬೃಹತ್‌ ಮೊತ್ತದ ದುಡ್ಡು ಬೇಕು ಎಂಬುದೂ ನಿಮಗೆ ಗೊತ್ತಿತ್ತು. ಅವತ್ತಿನ ತನಕ ಆಳಿದ ಮುಖ್ಯಮಂತ್ರಿಗಳಿಗೆ ಗುಂಜಲು ಗೊತ್ತಿದ್ದುದೇ ಎಕ್ಸೈಜು ಮತ್ತು ಗ್ರಾನೈಟು! ಅಲ್ಲಾಗಲೇ ಹೆಂಡ ಮತ್ತು ಬಂಡೆ( ಗ್ರಾನೈಟು) ಎರಡೂ ದಿವಾಳಿ ಎದ್ದು ಹೋಗಿದ್ದವು. ಅಷ್ಟಾಗಿಯೂ ನೀವು ಅವರನ್ನು ಐವತ್ತು ಕೋಟಿ ಕೇಳಿದರೆ ಅಲ್ಲಿ ಐದು ಹತ್ತು ಕೋಟಿ ಕೊಡಬಹುದಿತ್ತೇನೋ. ಆದರೆ ನಿಮಗೆ ನೂರು ಕೋಟಿ ಕೇಳಿದರೆ ಇನ್ನೂರು ಕೋಟಿ ಕೊಡುವವರು ಬೇಕಾಗಿತ್ತು. ಆಗ ನೀವು ಕೈ ಇರಿಸಿದ್ದೇ ಪ್ರೇಮ್‌ಜೀ, ನಾರಾಯಣ ಮೂರ್ತಿ ಮುಂತಾದ ಐಟಿ ಕುಳಗಳ ಹೆಗಲ ಮೇಲೆ. ಬೆಂಗಳೂರಿನ ಒಂದು ಚಿಲ್ರೆ ಕಂಪೆನಿ ಕೂಡಾ ಕೋಟಿಗಟ್ಟಲೆ ತಂದು ನಿಮ್ಮ ಕಾಲ ಅಡಿಯಲ್ಲಿ ಇಡಲು ತಯಾರಾಗಿತ್ತು. ಅದಕ್ಕೆ ಬೇಕಾಗಿದ್ದ ಬೆಂಗಳೂರು ಸುತ್ತಲಿನ ಸಾವಿರಾರು ಎಕ್ಕರೆ ಜಮೀನನ್ನು ಸದ್ದಿಲ್ಲದೆ ಪರಭಾರೆ ಮಾಡಲು ಅನುಕೂಲವಾಗುವಂತಹ ಕಾನೂನುಗಳು ನಿಮ್ಮ ಬೆಂಬಲಕ್ಕಿದ್ದವು. ಕೊಟ್ರೀ ಕೊಟ್ರೀ ಕೊಟ್ರೀ - ಅದೆಷ್ಟು ನೂರು ಎಕರೆ ಬಂಗಾರದಂತ ನೆಲವನ್ನು ಈ ಕಂಪೆನಿಗಳಿಗೆ ಕೊಟ್ಟು ಬಿಟ್ರಿ ಕೃಷ್ಣಾ! ನಿಮಗಿಂತ ದರೋಡೆಕೋರರುಂಟೇ? ಒಂಥರಾ ಕ್ಯಾಬರೇ ನೃತ್ಯಗಳ ಮಧ್ಯೆ ಮಧ್ಯೆ ಕಾಣಿಸಿಕೊಂಡು ಒಂದಾದ ಮೇಲೊಂದು ಐಟಮ್ಮುಗಳನ್ನು ಸಾದರಪಡಿಸುತ್ತಾ , ವಿಟರನ್ನು ಸಮಧಾನ ಪಡಿಸುವ ಈವೆಂಟ್‌ ಮ್ಯಾನೇಜರ್‌ರಂತೆ ಕಾರ್ಯನಿರ್ವಹಿಸಿಬಿಟ್ಟಿರಿ. ಇವತ್ತು ರಾಜಧಾನಿಯ ಸುತ್ತಾ ನಿಮ್ಮಂಥವರು ಸತ್ತರೆ ಹೂಳಲಿಕ್ಕೂ ಜಾಗವಿಲ್ಲದಂತೆ, ಅಷ್ಟೂ ನೆಲವನ್ನೂ IT ಇಂಡಸ್ಟ್ರಿಯ ಹೆಸರಿನಲ್ಲಿ ಅಯೋಗ್ಯರು ಆಕ್ರಮಿಸಿಕೊಂಡಿದ್ದರೆ, ಅದರ ಪುಣ್ಯ ನಿಮ್ಮದೇ ಕೃಷ್ಣಾ... ಕೃಷ್ಣಾರ್ಪಣ!

ಈ ಮಧ್ಯೆ ವಿಶ್ವ ಬಂಡವಾಳದಾರರ ಹೂಡಿಕೆ ಸಮಾವೇಶ ಅಂತ ಮಾಡಿದಿರಿ. ಶುದ್ಧ ನಾಟಕ ಅದು. ನಯಾಪೈಸೆ ಬಂಡವಾಳ ಹರಿದು ಬರಲಿಲ್ಲ. ಮತ್ತೆ ಜಮೀನು ಮಾರಿದಿರಿ. ನಿಮ್ಮ ಈ ಗ್ಲೋಬಲ್‌ ಸಡಗರಗಳು ಎಷ್ಟು ರಭಸವಾಗಿದ್ದವೆಂದರೆ, ಕಂಬಾಲಪಲ್ಲಿ ನರಮೇಧದಂಥವು ನಡೆದು ಹೋದರೂ ಅವು ನಿಮಗೆ ತಲೆ ನೋವಾಗುವಷ್ಟು ದೊಡ್ಡ ಹಗರಣಗಳಾಗಲಿಲ್ಲ.

ಆಗಲೇ ಎರಡು ಮತ್ತು ಮೂರು ಬಜೆಟ್‌ನ ಹೊತ್ತಿಗೆ ನಿಮ್ಮ ನೆಚ್ಚಿನ ಐಟಿ ಇಂಡಸ್ಟ್ರಿ ಲಾಭಕಾಣದೆ ಏದುಸಿರು ಬಿಡುತಿತ್ತು. ಅಮೇರಿಕದಿಂದ ನಮ್ಮ ಹುಡುಗರು ನೌಕರಿ ಕಳೆದುಕೊಂಡು ವಾಪಾಸು ಬರುತ್ತಿದ್ದರು. ಇಲ್ಲೂ ನಿಮ್ಮ ಆಡಳಿತದ ಬಗ್ಗೆ ಭ್ರಮ ನಿರಸನ ಆರಂಭವಾಗಿತ್ತು. ಉತ್ತರ ಕರ್ನಾಟಕದವರು ಹಲ್ಲಲ್ಲು ಕಡಿಯುತಿದ್ದರು. ಆಗ ಅದೆಂಥಾ ಶಾಣ್ಯ ಆಟ ಆಡಿದಿರಿ ಕೃಷ್ಣಾ !

ಪ್ರಾದೇಶಿಕ ಅಸಮತೋಲನ ಕಡಿಮೆ ಮಾಡ್ತೀವಿ ಅಂದಿರಿ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಭರ್ಜರಿ ಕಿವಿಗೊಟ್ಟಿರಿ. ಆದರೆ ಬಜೆಟ್‌ನಲ್ಲಿ ರೊಕ್ಕವಿಡಲಿಲ್ಲ. ಹೈಕೋರ್ಟ್‌ ಪೀಠ ಸ್ಥಾಪನೆಗೆ ಹತ್ತು ಕೋಟಿ ತೆಗೊಳ್ಳಿ ಅಂದಿರಿ. ಕೋರ್ಟ್‌ ಎಲ್ಲಿ ಕಟ್ಟಬೇಕು ಎಂದು ಬಾಯಿಬಿಟ್ಟು ಹೇಳಲೇ ಇಲ್ಲ. ನಿಮ್ಮಿಂದ ಉದುರಿದ್ದು ಕೇವಲ ರಂಗು ರಂಗಿನ ಮಾತು, ಘೋಷಣೆ, ರೊಕ್ಕವಿಲ್ಲದ ಖಾಲಿ ಥೈಲಿ, ವಾರೆವ್ವಾ ಕೃಷ್ಣ!

ನಿಮ್ಮ ಚಾತುರ್ಯ ಅಲ್ಲಿಗೆ ಮುಗಿಯಲಿಲ್ಲ . ಪ್ರತೀ ಸಮಸ್ಯೆಗೂ ನಾನು ಇಮ್ಮೀಡಿಯೆಟ್ಟಾಗಿ ಸ್ಪಂದಿಸುತ್ತೇನೆ ಎಂಬುದನ್ನು ಜನತೆಗೆ ತೋರ್ಪಡಿಸುವುದಕ್ಕೊಸ್ಕರ, ಮಾತೆತ್ತಿದರೆ ಒಂದು ಟಾಸ್ಕ್‌ ಫೋರ್ಸ್‌, ಒಂದು ಆಯೋಗ ರಚಿಸಿ ‘ನಡಿ’ ಅಂದಿರಿ. ಬೆಂಗಳೂರು ಅಜೆಂಡಾ ಟಾಸ್ಕ್‌ ಫೋರ್ಸ್‌, ಮೈಸೂರು ಅಜೆಂಡಾ ಟಾಸ್ಕ್‌ ಫೋರ್ಸ್‌, ಮಂಗಳೂರು ಅಜೆಂಡಾ ಟಾಸ್ಕ್‌ ಫೋರ್ಸ್‌, ಹೀಗೇ ಸಾಫ್ಟ್‌ವೇರ್‌, ಎಜುಕೇಶನ್‌, ಆರೋಗ್ಯ, ಪ್ರಾದೇಶಿಕ ಟಾಸ್ಕ್‌ ಫೋರ್ಸ್‌ಗಳು, ನಂಜುಂಡಪ್ಪನವರ ಸಮಿತಿ, ಮೊಯಿಲಿ ಆಯೋಗ, ಹಾರ್ನ ಹಳ್ಳಿ ಆಡಳಿತ ಸುಧಾರಣಾ ಆಯೋಗ- ಹೀಗೇ ಹಿಂಡು ಹಿಂಡು ಆಯೋಗಗಳನ್ನು ಟಾಸ್ಕ್‌ಫೋರ್ಸ್‌ಗಳನ್ನು ರಚಿಸಿದ್ದೀರೆ ಹೊರತು ಅವುಗಳಿಂದ ಆದದ್ದು ಏನೂ ಇಲ್ಲ. ಕಾಂಗ್ರೆಸಿನಲ್ಲಿದ್ದ ಪುರಾತನ, ಮುಟ್ಟು ನಿಂತ ಮುತ್ತೆೈದೆಯರಿಗೆ ನೀವೊಂದು ಆಶ್ರಯ ಕಲ್ಪಿಸುತ್ತಾ ಹೋದಿರಷ್ಟೇ.

ನಿಮ್ಮ ನಸೀಬು ದೊಡ್ಡದು ಕೃಷ್ಣ. ಬಹಳ ಅದೃಷ್ಟವಂತರು ನೀವು. ಕಾವೇರಿ ವಿವಾದ, ರಾಜ್‌ ಅಪಹರಣ, ನಾಗಪ್ಪನವರ ಹತ್ಯೆ, ನ್ಯಾಯಾಲಯಗಳ ಪ್ರಹಾರ ಇವೆಲ್ಲ ಒಂದಾದ ಮೇಲೊಂದರಂತೆ overlap ಆಗಿಕೊಂಡು ಬಂದವು. ಎಲ್ಲದಕ್ಕೂ ಕಾಲವೇ ಪರಿಹಾರಗಳನ್ನು ನೀಡುತ್ತಾ ಹೋಯಿತು. ಕೃಷ್ಣ ನೀವು ಸುಮ್ಮನೆ ಕ್ಯಾಲೆಂಡರ್‌ ತಿರುವುಹಾಕಿದಿರಿ. ಇವತ್ತಿಗೆ ಅವ್ಯಾವು issueಗಳಾಗಿ ಉಳಿದೇ ಇಲ್ಲ ನೋಡಿ. ರಾಜಕೀಯವಾಗಿಯಾದರೂ ಅಷ್ಟೇ : ಕನಕಪುರ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರರನ್ನ ಹರಕೆಯ ಕುರಿಯಂತೆ ಮುಂದೆ ತಳ್ಳಿದಿರಿ. ಗೆದ್ದದ್ದು ದೇವೇಗೌಡರಾದರೂ, ದಳದವರು ಒಗ್ಗಟ್ಟಾಗಿ ಬಿಟ್ಟರೆ ಏನು ಗತಿಯಾದೀತು ಎಂಬ ಬಗ್ಗೆ ಅತ್ಯಂತ clever hint ಗಳಿಸಿಕೊಂಡವರೂ ನೀವೇ. ನಿಮಗೂ ಡಿಕೇಶಿಯ ಬುಲ್ಲ ಕಾಯಿ ಕುಯ್ಯುವುದು ಬೇಕಾಗಿತ್ತು. ಅದನ್ನು ಸಾಧಿಸಿಬಿಟ್ಟಿರಿ. ನಂಜೇಗೌಡ, ನಾಗೇಗೌಡರಂಥವರನ್ನು ಬಳಸಿ ವಿರೋಧಿ ಒಗ್ಗಟ್ಟನ್ನು ನಿಷ್ಫಲ ಮಾಡಿ ಹಾಕಿದಿರಿ. ಹೆಗಡೆಯನ್ನು ಸಾಯುವ ತನಕ ಸಾಕಿ ನಿರುಪಯೋಗಿಯನ್ನಾಗಿ ಮಾಡಿಬಿಟ್ಟಿರಿ. ಒಂದು ಪಕ್ಷವನ್ನೇ ಕೊಂದುಹಾಕಿಬಿಟ್ಟಿರಿ ನೋಡಿ ಕೃಷ್ಣ ! ಕಡೆಗೆ ಪುಟ್ಟಣ್ಣಯ್ಯ, ಮಾದೇಗೌಡಂಥವರನ್ನೂ ಉಸಿರೆತ್ತದಂತೆ ಮಾಡಿಬಿಟ್ಟಿರಿ.

ನೀವು ಕೇವಲ ಚಳುವಳಿಗಳನ್ನೂ, ಪಕ್ಷಗಳನ್ನೂ ಮಾತ್ರ ಮುರಿಯಲಿಲ್ಲ. ಜನತೆಯ ಪಾಲಿನ ಪರಮಮಿತ್ರರಾಗಿದ್ದ ಪತ್ರಿಕೆಗಳನ್ನೂ , ಪರ್ತಕರ್ತರನ್ನೂ ಎಂಜಲು ಸವರಿಸಿ ಕೂಡಿಸಿ ಬಿಟ್ಟಿರಿ. ನಿಮ್ಮ I.T., B.T. ಸಂಬಂಧಿ ತಳ್ಳಿಬಿಳಿ ್ಳ ಮಾತುಗಳಿಗೆ ಮೊದಲ ರೌಂಡಿನಲ್ಲಿ ಇಂಗ್ಲೀಷ್‌ ಪರ್ತಕರ್ತರು ಹುಡಿಯಾಗಿ ಬಿಟ್ಟರು. ಅವರಿಗೆ ನೀವು ನೀಡಿದ ಬ್ರೇಕು ಫಾಸ್ಟುಗಳು, ಗಿಫ್ಟುಗಳು, ಡಾಕ್ಯುಮೆಂಟರಿ ಅಸೈನ್‌ಮೆಂಟ್‌ಗಳು ಸೈಟುಗಳು ಒಂದೇ ಎರಡೇ ಕೃಷ್ಣ ? ರಾಜ್‌ ಚೆಂಗಪ್ಪನಂಥಾ ಭ್ರಷ್ಟನಿಗೆ ದಿಲ್ಲಿಯ ಇತರೆ ಪರ್ತಕರ್ತರಿಗೆ ಬೆಂಗಳೂರಿನಲ್ಲಿ ಸೈಟು ಕೊಟ್ಟಿರಿ. ಅವಾರ್ಡು ಕೊಟ್ಟಿರಿ. ಅವರ ಹೆಂಡಿರಿಗೆ ಪಟಾಕಿ, ಸೀರೆ, ಸ್ವೀಟು ಕಳಿಸಿದಿರಿ. ಒಂದು ಬೃಹತ್‌ ಪತ್ರಕರ್ತ ಸಮೂಹವನ್ನೆ ಭ್ರಷ್ಟರನ್ನಾಗಿ ಮಾಡಿಬಿಟ್ಟಿರಿ. ನಿಮ್ಮ ಅಕ್ಷರ ದಾಸೋಹವೆಂಬ ಕಾರ್ಯಕ್ರಮಕ್ಕೆ B.B.C. ಯಲ್ಲಿ ಅರ್ಧ ಗಂಟೆ ಪ್ರಚಾರ ಸಿಕ್ಕಿತೆಂದರೆ, ನೀವು ಅದಿನ್ನೆಂಥ ಚತುರ ಮ್ಯಾನಿಫ್ಯುಲೇಟರ್‌ ಅನ್ನೋದು ಗೊತ್ತಾಗೋದಿಲ್ಲವೇ? ‘ಬಿಸಿಯೂಟ’ವೆಂಬುದು ನಿಮ್ಮದೇ ಬ್ರೆೃನ್‌ ಚೈಲ್ಡ್‌ ಅಂತ ಪತ್ರಿಕೆಗಳಿಗೂ, ಪ್ರಪಂಚಕ್ಕೂ ಹೇಳಿಕೊಂಡಿರಿ. ಅದು ಸುಪ್ರೀಮ್‌ಕೋರ್ಟ್‌ನ ಆದೇಶ ಅನ್ವಯ, ಅನಿವಾರ್ಯವಾಗಿ ನೀವು ಜಾರಿಗೆ ತಂದ ಒಂದು ಕಾರ್ಯಕ್ರಮ ಎಂಬುದನ್ನು ಮುಚ್ಚಿಟ್ಟಿರಿ. ನಿಮಗಿಂತ ಚಾಣಾಕ್ಷರುಂಟೇ ಹಿರಿಯರೆ?

ರಾಜಕೀಯವಾಗಿ ನಿಮ್ಮ ಪಕ್ಷದಲ್ಲಿ ನಿಮಗೆ ತೊಡೆತಟ್ಟಿದವರೇ ಇರಲಿಲ್ಲ. ಖರ್ಗೆ ಬಾಯಿ ಸತ್ತಾದಂತಾದರು. ಧರ್ಮಸಿಂಗ್‌ರನ್ನು ಮೇಯಲು ಬಿಟ್ಟಿರಿ. ಎಚ್ಕೆ ಪಾಟೀಲರು ತಿರುಗಿಬಿದ್ದೂ ಉಪಯೋಗವಿಲ್ಲದಂತಾಯಿತು. ನಿಮ್ಮ ಸಮವಯಸ್ಕರಾದ ಶ್ರಿಕಂಠಯ್ಯ, ಘೋರ್ಪಡೆ, ರಂಗನಾಥ್‌ ಮುಂತಾದವರಿಗೆಲ್ಲ ಆಗಲೇ ವೃದ್ಧಾಪ್ಯ ವೇತನಕ್ಕಾಗಿ ಕೈಯಾಡ್ಡುವ ಕಾಲ.

ನೀವು ಯಾವ ಹಣ ಎಲ್ಲಿಂದ ತಂದು ಯಾರಿಗೆ ಕೊಟ್ಟಿರೋ? ಯಾರಿಗೆ ಆದರಿಂದ ಫಾಯ್ದೆಯಾಯಿತೋ? ಯಾವ ಲಾಟರಿ ಸಂಸ್ಥೆ ಉದ್ಧಾರವಾಯಿತೋ? ಎಲ್ಲವೂ ಗಪ್‌ ಚುಪ್‌. ಯಾವುದೂ ದೊಡ್ಡ ಸ್ಕ್ಯಾಂಡಲ್‌ ಆಗಲೇ ಇಲ್ಲ. ನೀವೊಬ್ಬ ಚಾಣಾಕ್ಷ, ನುರಿತ ಹವಾಲಾ ಏಜಂಟರಂತೆ ಕೆಲಸ ಮಾಡಿಬಿಟ್ಟಿರಿ. ನಿಮಗೆ ಜಯವಾಗಲಿ ಕೃಷ್ಣ.

ಹೋಗಿ ಇನ್ನು.

ಮತ್ತೆ ಬರುತ್ತೇವೆಂಬ ಮಾತು ಆಡಬೇಡಿ.

ನಮ್ಮ ಸಹನೆಗೂ ಮಿತಿಯಿದೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X