• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀವೇನೇ ಅನ್ನಿ ನಮಗೊಬ್ಬ ಹೀರೋ ಬೇಕು...

By Staff
|

Ravi Belagere on Thatskannada.comರವಿ ಬೆಳಗೆರೆ

ನಮ್ಮ ಆಫೀಸಿಗೊಬ್ಬ ಹುಡುಗ ಬರುತ್ತಾನೆ. ತುಂಬ ಸಲ ಬಂದಿದ್ದಾನೆ. ಮೊನ್ನೆ ಆಗಸ್ಟ್‌ ಹದಿನೈದರ ಮುಂಜಾನೆಯೂ ಬಂದಿದ್ದ. ಮೊದಲೆಲ್ಲ ಅವನನ್ನು ನೋಡಿದರೆ ಸಿಡಿಮಿಡಿಗೊಳ್ಳುತ್ತಿದ್ದೆ. ಎಂಥ ವಿಚಿತ್ರದ ಹುಡುಗ ಗೊತ್ತ ? ನಾವು ಯಾವ ಹುದ್ದೆಗೆ ಅರ್ಜಿ ಕರೆದರೂ ಅವನದೊಂದು ಅರ್ಜಿಯಿರುತ್ತಿತ್ತು. ನಂಗೆ D.T.P. Operator ಬೇಕು ಅಂತ ಜಾಹಿರಾತು ಕೊಟ್ಟರೆ ಅವನದೊಂದು ಅರ್ಜಿ. ನಿಂಗೆ ಆ ಕೆಲಸ ಬರುತ್ತೇನಯ್ಯ ಅಂದರೆ ‘ಕಲ್ತುಬಿಡ್ತಿನಣ್ಣಾ...’ ಅನ್ನುತ್ತಾನೆ. ವರದಿಗಾರರು ಬೇಕು, ಡ್ರೆೃವರ್‌ ಬೇಕು, ಟೀಚರುಗಳು ಬೇಕು, ಉಪಸಂಪಾದಕ ಬೇಕು, ಟೆಲಿಪೋನ್‌ ಆಪರೇಟರ್‌ ಬೇಕು-ಹೀಗೆ ನಾನು ಬೇಕು ಅಂದಾಗಲೆಲ್ಲ ಅವನು ಆಫೀಸಿನ ಬಾಗಿಲಿಗೆ ಬಂದು ನಿಲ್ಲುತ್ತಾನೆ. ಕಡೆಗೆ ಪತ್ರಿಕೆಯ ಮುಖಪುಟದಲ್ಲಿ ಕೈ ಬರಹದ ಹೆಡ್ಡಿಂಗ್‌ಗಳನ್ನು ಬರೆಯಲಿಕ್ಕೆ artist ಬೇಕು ಅಂದದ್ದಕ್ಕೆ, ತನ್ನ ನೀಲಿ ಇಂಕಿನ ಬಾಲ್‌ಪೆನ್‌ನಲ್ಲಿ ವಕ್ರವಕ್ರವಾಗಿ ನಾಲ್ಕು ಸಾಲು ಬರೆದುಕೊಂಡು ಬಂದು ‘ನನ್ನ ತಗೊಳಿ’ ಅಂತ ನಿಂತಿದ್ದ. ಅವತ್ತೆ ನನಗೆ ಅವನಿಗೇನು ಬೇಕು ಎಂಬುದು ಅರ್ಥವಾದದ್ದು. ಅವನಿಗೆ ನೌಕರಿ ಬೇಕಿಲ್ಲ ; ಅವನಿಗೊಬ್ಬ ಹೀರೋ ಬೇಕು!

ಅವನಿಗಷ್ಟೇ ಅಲ್ಲ ; ನಮಗೆಲ್ಲರಿಗೂ ಬೇಕು! ಯಾವುದು ನಾವಲ್ಲವೋ, ಅದಾಗಿರುವವನೊಬ್ಬ ನಮಗೆ ಬೇಕು. ಹುಡುಗಿಯರನ್ನು ಅಷ್ಟು ಚೆಂದಗೆ ಆಕರ್ಷಿಸುತ್ತಾನಾದ್ದರಿಂದ ದೇವಾನಂದ್‌ ಬೇಕು, ಷಾರುಕ್‌ ಬೇಕು. ದೇಶವಿಡೀ ಇಷ್ಟಪಡುತ್ತದಾದ್ದರಿಂದ ವಿವೇಕಾನಂದರು ಬೇಕು. ನಮಗೆ ಬಂಗಾರದ ಮನುಷ್ಯನಲ್ಲಿರೋ ರಾಜಕುಮಾರ್‌ ಬೇಕು. ರಾಮಾಚಾರಿಯಲ್ಲಿರೋ ವಿಷ್ಣುವರ್ಧನ್‌ ಬೇಕು. ಇಂಥವೇ ಕಾರಣಗಳಿಗಾಗಿ ಮಟ್ಟೆಣ್ಣವರ್‌, ಅಶೋಕ್‌ಕುಮಾರ್‌, ಬಿ.ಕೆ. ಶಿವರಾಂ ಬೇಕು ಅನ್ನಿಸುತ್ತಾರೆ. ಎಲ್ಲೋ ಒಂದು ಕಡೆ ಶ್ರೀಲಂಕಾದ ಪ್ರಭಾಕರ್‌ ಕೂಡ ಇಷ್ಟವಾಗಿಬಿಡುತ್ತಾನೆ. ಇದೆಲ್ಲ hero worship ಅಂತ ಪಕ್ಕನೆ ಸರಿಸಿಬಿಡಬೇಡಿ. ಇದು ಮನುಷ್ಯ ಸಹಜ ವರ್ತನೆ.

ತುಂಬ ವರ್ಷಗಳ ಹಿಂದೆ ನಾನು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ವಿಪರೀತ ಕುಡಿಯುತ್ತಿದ್ದಾಗ, ನನ್ನ ಪೋಟೋಗ್ರಾಫರ್‌ ಮಿತ್ರನೊಬ್ಬ ಬೈದು ಹೇಳಿದ್ದ ; ‘ಅದ್ಯಾವನೋ ಕವಿ ಸಾಹಿರ್‌ಲುಧಿಯಾನ್ವಿ ಹೀಗೆ ಇಡೀ ದಿನ ಕುಡಿತಾನೆ ಅಂತ ನೀನು ಯಾಕೆ ಕುಡಿದು ಹಾಳಾಗ್ತಿಯ?’ ಅಂತ. ಅವತ್ತಿಗೆ ನನಗೆ ಲುಧಿಯಾನ್ವಿಯೇ ಹೀರೋ. ಅವನಂತೆಯೇ ಬರೆಯಬೇಕು, ಯೋಚಿಸಬೇಕು, ಅವನಂತೆಯೇ ಬದುಕಬೇಕು, ಅವನಂತೆಯೇ ಅಮೃತಾ ಪ್ರೀತಮ್‌ಳಂಥ ಕವಯಿತ್ರಿಯಾಬ್ಬಳ ಸಾಂಗತ್ಯವಿರಬೇಕು, ಕಡೆಗೆ ಅವನಂತೆಯೇ ಹೇರ್‌ಕಟ್‌ ಮಾಡಿಸಿಕೊಳ್ಳ ಬೇಕು ಎಂಬಷ್ಟರಮಟ್ಟಿಗೆ ಸಾಹಿರ್‌ ನನ್ನ ಹೀರೋ. ನಿಮಗೆ ಆಶ್ಚರ್ಯವಾಗಬಹುದು; ನಾನು ಗಡ್ಡ ಬಿಡಲು ನಿರ್ಧರಿಸಿದ್ದು ಕಾರ್ಲ್‌ಮಾಕ್ಸ್‌ನ ಪೋಟೋ ನೋಡಿ! ಹಾಗೆ ನನ್ನ ಹೀರೋಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದ್ದಾರೆ. ಅವರಲ್ಲಿ ಮಹಾನ್‌ ಕಮ್ಯುನಿಸ್ಟ್‌ ನಾಯಕ ಕೊಂಡಪಲ್ಲಿ ಸೀತಾರಾಮಯ್ಯನವರಿಂದ ಹಿಡಿದು, ಭೂಗತ ದೊರೆಗಳ ತನಕ ಎಲ್ಲ ತರಹದವರೂ ಆಗಿ ಹೋಗಿದ್ದಾರೆ. ಕೆಲ ಕಾಲ ನಾನು ಥೇಟು ಶತ್ರುಘ್ನ ಸಿನ್ಹಾನ ಹಾಗೆ, ಮಾತನಾಡುವ ಪ್ರಯತ್ನ ಕೂಡ ಮಾಡಿ ಬಿಟ್ಟಿದ್ದೆ. ಹಾಗೇನೇ ರಜನೀಶ್‌, ಖುಷ್ವಂತ್‌, ಚಲಂ, ದಳವಿ, ಮಾರಿಯೋ ಪ್ಯೂಜೋ, ಹಮಿಂಗ್ವೆ-ಒಬ್ಬರಾ ಇಬ್ಬರಾ ನನ್ನ ಹೀರೋಗಳು? ನಾನು ಬೆಳೆದಂತೆ ನನ್ನ ಹೀರೋಗಳೂ ಬದಲಾದರು. ಹಳಬರು stupid ಅನ್ನಿಸತೊಡಗಿದರು. ಮಹಾ ಬಲಿಷ್ಠರೆಂದು ಕೊಂಡವರು ತೀರ ಪುಕ್ಕಲರೆನ್ನಿಸಿದರು. ಕೆಲವರ ಭಾವುಕತೆ ಮೊದಲು ಇಷ್ಟವಾಯಿತು. ಕ್ರಮೇಣ ಹುಚ್ಚಾಟವೆನಿಸತೊಡಗಿತು. ಮತ್ತೆ ಕೆಲವು ಹೀರೋಗಳಿಗೆ ತೀರ ವಯಸ್ಸಾಗಿ ಹೋಯಿತು.

ಇಷ್ಟೆಲ್ಲ ಆದರೂ ನಾವು ಮನಸ್ಸಿನಾಳದಲ್ಲೆಲ್ಲೋ ಹೀರೋಗಳನ್ನು ಹುಡುಕುತ್ತಿರುತ್ತೇವೆ. ತಪ್ಪಿದರೆ, ಹೀರೋಗಳಾಗಬಯಸುತ್ತಿರುತ್ತೇವೆ. ಮೊದಲನೆಯದು ಸುಲಭ, ಎರಡನೆಯದು ಭಯಾನಕ. ನನಗೆ ಮೊನ್ನೆ ಯಾರೋ ಹೇಳುತ್ತಿದ್ದರು; ‘ಗರತಿಯಾಗುವುದು ಎಷ್ಟು ಸುಲಭ ರವೀ. ಆದರೆ ಸೂಳೆಯಾಗುವುದು ಎಷ್ಟು ಕಷ್ಟ ಅಲ್ವಾ?’

ಹೀರೋ ಆಗುವುದು ಅಷ್ಟೇ ಕಷ್ಟ. ಅದರಷ್ಟು ಸುಸ್ತು ಹುಟ್ಟಿಸುವ ದರಿದ್ರ ಕೆಲಸ ಇನ್ನೊಂದಿಲ್ಲ. ಮೊದಲನೆಯದು ನಿಜಕ್ಕೂ ಸುಲಭ. ಒಬ್ಬನ್ಯಾವನನ್ನೋ ಹುಡುಕಿಕೊಂಡು, ಅವನಲ್ಲಿ ಇದ್ದ-ಇಲ್ಲದ ಎರಡೂ ಗುಣಗಳನ್ನು ನಾವೇ ಅವನಿಗೆ ಆರೋಪಿಸಿ ಅವನನ್ನು ಹೀರೋ ಅಂತ ಒಪ್ಪಿಕೊಂಡು ಅವನದೊಂದು ಪೋಟೋ ಹಾಕಿ ಬಿಟ್ಟರೆ ಸಾಕೇ ಸಾಕು. ಅವನನ್ನು ಮೀಟ್‌ ಮಾಡಲಿಕ್ಕೆ ಕೊಂಚ ಕಷ್ಟ ಪಡಬಹುದೇನೋ ಹೊರತು, ಬೇರೆ ಥರದ ಕಷ್ಟಗಳಿರುವುದಿಲ್ಲ. ಆದರೆ ಒಂದೇ ಒಂದು ಸಲ ಹೀರೋ ಆಗುವ ಪ್ರಯತ್ನ ಮಾಡಿನೋಡಿ? ಬೇರೆ ಯಾರಿಗೋ ಅಲ್ಲ; ನಿಮ್ಮ ಹೆಂಡತಿಗೆ, ಕಡೆಗೆ ನಿಮ್ಮ ಆರು ವರ್ಷದ ಮಗನಿಗೆ ಹೀರೋ ಆಗಲು ಯತ್ನಿಸಿಬಿಡಿ? ಅದರ ಸುಸ್ತು ನಿಮಗೆ ಅರ್ಥವಾಗುತ್ತದೆ.

ಮಗನೆದುರು ಸಿಗರೇಟು ಸೇದುವುದನ್ನು ಬಿಡುತ್ತೇವೆ. ನಾವು ಬಲಿಷ್ಠರೆಂದು ತೋರಿಸಿಕೊಳ್ಳುತ್ತೇವೆ. ಅನುಭವಿಗಳಂತಾಡುತ್ತೇವೆ. ಮನೆಗೆ ನಾನು ನಿಜವಾದ ಯಜಮಾನ ಅಂತ ತೋರಿಸಲು ಹೊರಡುತ್ತೇವೆ. ಹೊರಗೆ ನಯಾಪೈಸೆಯ ಕಿಮ್ಮತ್ತಿಲ್ಲದಿದ್ದರೂ ಸರಿಯೇ, ಮಗನ ಮುಂದೆ ನಾವು ಸರ್ವಶಕ್ತರು! ಹಾಗಂತ ಅವನು ನಂಬಿ ಕೊಂಡುಬಿಟ್ಟಿದ್ದಾನೆ. ಅದನ್ನು ಶತಾಯಗತಾಯ ಉಳಿಸಲು ಯತ್ನಿಸುತ್ತೇವೆ. ಅವನೆದರಿಗೆ ಹೆಂಡತಿಯಾಂದಿಗೆ ಜಗಳವಾಡುವುದಿಲ್ಲ. ಇನ್ನು ಸೆಕ್ಸೆಲ್ಲಿಂದ ಬಂತು, ರಾಮ ರಾಮ. ಸಾಲಗಾರರು ಮನೆಹತ್ತಿರಕ್ಕೆ ಬಂದು ಗಲಾಟೆ ಮಾಡಿದರೆ, ಮೊದಲು ಮಗುವನ್ನು ಕರೆದುಕೊಂಡು ಒಳಕ್ಕೆ ಹೋಗು ಅಂತ ಹೆಂಡತಿಯನ್ನು ಗದರುತ್ತೇವೆ. ಆ ಮಗು ಎದೆಯೆತ್ತರ ಬೆಳೆದು ನಿಂತು, ನಮ್ಮಪ್ಪ ಕೂಡ ‘ಒಬ್ಬ ಮೋಸ್ಟ್‌ ಆರ್ಡಿನರಿ ಮನುಷ್ಯ’ ಅಂತ ಅರ್ಥ ಮಾಡಿಕೊಳ್ಳುವ ತನಕ ನಾವು ಹೀರೋ ಆಗುವ ಪ್ರಯತ್ನವನ್ನು ಜಾರಿಯಲ್ಲಿಟ್ಟೇ ಇರುತ್ತೇವೆ.

ನನಗೆ ನೆನಪಿದೆ. ಪತ್ರಿಕೆಯ ಮೊಟ್ಟ ಮೊದಲ ವಾರ್ಷಿಕೋತ್ಸವದ ಸಭೆಯಲ್ಲಿ ನಾನು ತುಂಬ ಭಾವುಕನಾಗಿದ್ದೆ. ಮಾತಾಡುತ್ತ ಆಡುತ್ತ ದನಿ ಗದ್ಗದವಾಯಿತು. ಕಣ್ಣಲ್ಲಿ ನೀರ ಟಿಸಿಲು. ಅಷ್ಟರಲ್ಲಿ ಯಾರೋ ಕೂಗಿದರು, ‘ಏ...ನೀನು ಅಳಬಾರದು!’

ಅದು ಹೀರೋ ಆದದ್ದಕ್ಕೆ ನಾವು ಕಟ್ಟುವ ಕಂದಾಯ; ಅಳಲೂ ಕೂಡದು. ಅಷ್ಟೆಲ್ಲಾ ಯಾಕೆ; ಇತ್ತೀಚೆಗೆ ನನ್ನ ಪರಿಚಿತ ನಟಿಯಾಬ್ಬಳು ಸಿಕ್ಕಾಗ, ಏನೇ ಮಾರಾಯ್ತೀ ಇಷ್ಟು ದಪ್ಪ ಆಗಿದೀಯಾ? ಅಂದೆ. ಅದಕ್ಕವಳು, ‘ಇದೇನಿದು ಹೀಗಂತೀಯ? ನನ್ನ ಗಂಡಾನೆ ಯಾವತ್ತೂ ನನ್ನನ್ನು ಹೀಗಂದಿಲ್ಲ’ ಅಂದಳು. ತಕ್ಷಣ ಹೇಳಿದೆ; ‘ನೋಡು ನಿನ್ನ ಗಂಡ ನಿನ್ನನ್ನು ನೋಡೋಕೆ ಮೂವತ್ತೆೈದು ರುಪಾಯಿ ಖರ್ಚುಮಾಡಿ, ಕ್ಯೂನಲ್ಲಿ ನಿಂತು, ಥಿಯೇಟರ್‌ ತನಕ ಬಂದು ಅರ್ಧದಿನ ಕಳೀಬೇಕಿಲ್ಲ. ಆದರೆ ಒಬ್ಬ ಪ್ರೇಕ್ಷಕ ಅವನ್ನೆಲ್ಲ ಮಾಡ್ತಾನೆ. ಅವನಿಗೋಸ್ಕರ ನೀನು ತೆಳ್ಳಗಿರಲೇಬೇಕು!’

ಆ ನಟಿಯಂಥ ಒಬ್ಬ ಮಾಮೂಲು ನಟಿ, ಒಬ್ಬ ಸಾಮಾನ್ಯ ಪತ್ರಕರ್ತ, ಒಬ್ಬ ಯಕಶ್ಚಿತ್‌ ಶಾಸಕ-ನಮಗೆ ಇಷ್ಟೆಲ್ಲ ರಗಳೆಗಳಿರುತ್ತವೆ ಅನ್ನುವುದಾದರೆ, ಒಬ್ಬ ಅಮಿತಾಬ್‌, ಒಬ್ಬ ಸೋನಿಯಾರಂಥವರಿಗೆಲ್ಲ ‘ಹೀರೋ’ ಆಗಿ ನಿಲ್ಲಲು ತೆರಬೇಕಾದ ಕಂದಾಯದ ಮೊತ್ತ ಎಷ್ಟೊಂದು ದೊಡ್ಡದಿರುತ್ತದೆ ಅಲ್ಲವೆ?

ಅದ್ಸರಿ, ಜಗತ್ತಿನ ಹೀರೋ ಮಹಾತ್ಮ ಗಾಂಧಿ ಮಾತ್ರ ಅದೇಕೆ ಯಾವತ್ತೂ ಇಂಥ ಕಂದಾಯ ಕಟ್ಟಿ ಸುಸ್ತಾದವರಂತೆ ಕಾಣುತ್ತಿರಲಿಲ್ಲ ? ಆತ ಎಲ್ಲೂ ನನ್ನ ಪರ್ಸನಲ್‌ ಲೈಫ್‌ ಹಾಳಾಯಿತು ಎಂದು ಗೊಣಗಲಿಲ್ಲ. ಅಷ್ಟು ದೊಡ್ಡ ಹೀರೋ ಆದವನು, ಯಾಕೆ ಒಂದು ಅಂಗಿ ಕೂಡ ಹಾಕಿಕೊಳ್ಳದೇ ಸುತ್ತಾಡುತ್ತಿದ್ದ ? ಪಕ್ಕದಲ್ಲಿದ್ದ ನೆಹರೂ ತನ್ನ ಇಸ್ತ್ರಿ ಬಟ್ಟೆಗಳನ್ನು ವಿದೇಶದಿಂದ ತರಿಸಿಕೊಳ್ಳುತ್ತಿದ್ದರೆ, ಈ ಗಾಂಧಿ ಯಾಕೆ ತನ್ನ ಪಂಚೆ ತಾನೇ ಒಗೆದುಕೊಳ್ಳುತ್ತಿದ್ದ? ಆತನನ್ನೇಕೆ ಈ ಇಮೇಜುಗಳ ರಗಳೆ ಕಾಡಲಿಲ್ಲ ?

ಯಾಕೆ ಅಂದರೆ, ಗಾಂಧಿಗೆ ಉಳಿದೆಲ್ಲ ಹೀರೋಗಳಿಗಿದ್ದ ಹಾಗೆ ಒಳಗೊಂದು ಹೊರಗೊಂದು ಅಂತ ತನ್ನ ಕುರಿತ ಹಾಗೆ ತನ್ನಲ್ಲೇ ಎರಡು ಇಮೇಜುಗಳಿರಲಿಲ್ಲ . ಆತನಿಗೆ ಏನನ್ನೂ ಮುಚ್ಚಿಡುವ ಮನಸ್ಸಿರಲಿಲ್ಲ. ಬೆತ್ತಲೆ ಬೆನ್ನು ಕೂಡ. ಆತ ವಿಗ್ಗು ಹಾಕಿಕೊಳ್ಳಲಿಲ್ಲ. ಹಲ್ಲು ಕಟ್ಟಿಸಿಕೊಳ್ಳಲಿಲ್ಲ. ಕನ್ನಡಕಕ್ಕೆ ಚಿನ್ನದ ಫ್ರೇಮು ಹಾಕಿಸಿಕೊಳ್ಳಲಿಲ್ಲ. ಗಾಂಧಿ ತನ್ನ ಇಮೇಜಿಗೆ-ಹೀರೋ ಪಾತ್ರಕ್ಕೆ ಅವ್ಯಾವ ಸಲಕರಣೆಗಳನ್ನು ಬಳಸಲಿಲ್ಲ. ಆದ್ದರಿಂದಲೇ ಆತ ಹೀರೋ ಇಮೇಜನ್ನು ನರಳುತ್ತ ಭರಿಸಲಿಲ್ಲ. ‘ನಾನಿರೋದೆ ಹೀಗೆ. ಹೀಗಿದ್ದರೂ ನಿಮಗೆ ನಾನು ಇಷ್ಟವಾಗುವುದಾದರೆ, ನನ್ನನ್ನು ಹೀರೋ ಅಂದುಕೊಳ್ಳುತ್ತೀರಾದರೆ-ಅದು ನಿಮ್ಮ ಕರ್ಮ’ ಎಂಬಂತೆ ಬದುಕಿದ. ಆತನಿಗೆ ಯಾವತ್ತೂ ಸುಸ್ತಾಗಲಿಲ್ಲ.

ಆದರೆ, ಕಟ್ಟಿಕೊಂಡ ಹೆಂಡತಿಯ ಮುಂದೆ, ನಮ್ಮದೇ ಆದ ಮಕ್ಕಳ ಮುಂದೆ, ಕಲೀಗ್ಸ್‌ ಮುಂದೆ, ನಮಗಿಂತ ಚಿಕ್ಕವರ ಮುಂದೆ-ನಾವು ಇಮೇಜು ಹೆಚ್ಚಿಸಿಕೊಳ್ಳಲು ಅಣಿಯಾಗಿಬಿಡುತ್ತೇವೆ. ಆದರ್ಶ ಪುರುಷರಾಗಿ ಕಾಣಿಸಲು ಹಾತೊರೆಯುತ್ತೇವೆ.

ಹೀಗಾಗಿ ದಿನವಿಡೀ ನಾಟಕವಾಡುತ್ತೇವೆ. ಸಹಜವಾಗಿಯೇ, ನಾಟಕ ಸುಸ್ತು ಹುಟ್ಟಿಸುತ್ತದೆ.

ಈ ಸುಸ್ತು-ಆ ಇಮೇಜು ಎರಡೂ ಬೇಕಿಲ್ಲ , ಅಲ್ಲವೇ?

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more