ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತನೆದುರು ಗಾಂಧಿ ಇಂದಿರಾ ಗಾಂಧಿ

By Super
|
Google Oneindia Kannada News

Kanchi Crime Diary
ಅದು 1927ರ ಮಾತು. ಮಹಾತ್ಮಾಗಾಂಧಿ ತಮ್ಮೊಂದಿಗೆ ರಾಜಾಜಿಯವರನ್ನು ಕರೆದುಕೊಂಡು ಕಂಚಿ ಕಾಮಕೋಟಿ ಪೀಠಾಧಿಪತಿಯ ಮುಂದೆ ನಿಂತಿದ್ದರು. ಮಠದ ಹಿರಿಯನನ್ನು ಕಂಡು ಗಾಂಧೀಜಿಯವರಲ್ಲಿ ಅದೆಂಥ ಸಂತೋಷ ಉಂಟಾಗಿತ್ತೆಂದರೆ, ‘ಇವತ್ತು ಧನ್ಯನೆನ್ನಿಸುತ್ತಿದೆ. ನನಗೆ ರಾತ್ರಿಯ ಊಟ ಬೇಡ. I had my fill' ಅಂದಿದ್ದರು.

ಅವತ್ತಿನ ಆ ಕಂಚಿ ಕಾಮಕೋಟಿ ಪೀಠಾಧಿಪತಿಯ ಹೆಸರು ‘ಶ್ರೀಮದ್‌ ಪರಮಹಂಸ ಪರಿವ್ರಾಜಕಾ ಚಾರ್ಯ ವಾರ್ಯ ಶ್ರೀಮದ್‌ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿ!' ಅವರು ಕಂಚಿ ಪೀಠಕ್ಕೆ 68ನೇ ಪೀಠಾಧಿಪತಿ. ಅವರನ್ನು ನಮ್ಮ ನೆಲದ ಶ್ರೇಷ್ಠ ವಿಜ್ಞಾನಿ ಡಾ. ರಾಜಾರಾಮಣ್ಣ ಸಾಕ್ಷಾತ್ತು ದೇವರೆಂದು ಭಾವಿಸಿದ್ದರು. ಪಾಲ್‌ ಬ್ರಂಟನ್‌ ಮತ್ತು ಇಂಗ್ಲಂಡಿನ ರಾಣಿ ವೈಯಕ್ತಿಕವಾಗಿ ಕಂಚಿ ಪೀಠಾಧಿಪತಿಯ ಆಧ್ಯಾತ್ಮಿಕ ತಾಕತ್ತನ್ನ, ಸಾತ್ವಿಕತೆಯನ್ನ ಗೌರವಿಸುತ್ತಿದ್ದರು. ಗ್ರೀಸ್‌ನ ದೊರೆ ಹುಡುಕಿಕೊಂಡು ಬರುತ್ತಿದ್ದ. 1947ರ ಆಗಸ್ಟ್‌15 ರಂದು ಭಾರತಕ್ಕೆ ಸ್ವಾತಂತ್ರ್ಯಬಂದಾಗ ಅಷ್ಟೂ ರಾಜಕಾರಣಿಗಳು ಕೊಟ್ಟ ಹೇಳಿಕೆಯದು ಒಂದು ತೂಕವಾಗಿದ್ದರೆ, ಕಂಚಿಕಾಮಕೋಟಿ ಪೀಠಾಧಿಪತಿ ಚಂದ್ರಶೇಖರ ಸರಸ್ವತಿಗಳ ಹೇಳಿಕೆಯೇ ಒಂದು ತೂಕದ್ದಾಯಿತು. ಇವೆಲ್ಲಕ್ಕಿಂತ , ಕಂಚಿ ಪೀಠಾಧಿಪತಿ ಜನಸಾಮಾನ್ಯರ ಕಣ್ಣಿಗೆ ಆಪ್ತ ಹಿರಿಯ ಅನ್ನಿಸಿದ್ದು 1962ರ ಯುದ್ಧದಲ್ಲಿ ಭಾರತೀಯ ಸೈನ್ಯ ಚೀನದವರ ಕೈಯಲ್ಲಿ ದಾರುಣ ಸೋಲು ಅನುಭವಿಸಿ ಹಿಂತಿರುಗಿದಾಗ, ಆತ ನಮ್ಮ ದೇಶವನ್ನು ಸಂತೈಸಿದ ರೀತಿ. ಮುಂದೆ1964 ರಲ್ಲಿ ಯುನೈಟೆಡ್‌ ನೇಷನ್ಸ್‌ ಸಭೆ ಸೇರಿದಾಗ ಭಾರತದ ಮಹಾನ್‌ ಗಾಯಕಿ ಎಂ.ಎಸ್‌. ಸುಬ್ಬುಲಕ್ಷ್ಮಿ ‘ಮೈತ್ರಿಂ ಭಜತ' ಎಂಬ ಶ್ಲೋಕ ಇದೇ ಕಂಚಿ ಕಾಮಕೋಟಿ ಪೀಠಾಧಿಪತಿ ರಚಿಸಿದುದಾಗಿತ್ತು. ಸೋತು ಬಸವಳಿದ ದೇಶಕ್ಕೆ hope ಮತ್ತು ತಿಳಿವಳಿಕೆ ನೀಡಿದ ಪರಮಾರ್ಥ ಜೀವಿ ಆತ, ಚಂದ್ರಶೇಖರೇಂದ್ರ ಸರಸ್ವತಿ !

ಚುನಾವಣೆಗಳಲ್ಲಿ ಸೋತು, ವಿರೋಧಿಗಳ ಕೈಗೆ ಸಿಲುಕಿ ಕಂಗಾಲಾಗಿದ್ದ ಕಾಲದಲ್ಲಿ ಇಂದಿರಾಗಾಂಧಿ ಓಡಿಬಂದದ್ದು ಅದೇ ಕಂಚಿ ಕಾಮಕೋಟಿ ಪೀಠದ ಬಳಿಗೆ. ಆಕೆಯನ್ನು ಮೊದಲು ಮಾತನಾಡಿಸಲಿಕ್ಕೆ ಒಪ್ಪಿರಲಿಲ್ಲ ಚಂದ್ರಶೇಖರ ಸರಸ್ವತಿ. ಕಡೆಗೆ ಕರೆದು ಸಂತೈಸಿದರು. ಅನೇಕರಿಗೆ ಗೊತ್ತಿರಲಿಕ್ಕಿಲ್ಲ : ಇಂದಿರಾ ಗಾಂಧಿಗೆ ಮತ್ತೆ ಗೆಲುವು ತಂದುಕೊಟ್ಟ ‘ಹಸ್ತ'ದ ಗುರುತನ್ನು ಕಾಂಗ್ರೆಸ್ಸಿಗೆ ಕೊಟ್ಟದ್ದೇ ಚಂದ್ರಶೇಖರ ಸರಸ್ವತಿ ಸ್ವಾಮಿ.

ಆ ಹಿರಿಯ ವಿವಾದಗಳಿಂದ ದೂರವಿದ್ದ. ರಾಜಕಾರಣಿಗಳನ್ನು ದೂರವಿರಿಸಿದ್ದ. ನಿಜವಾದ ಸಂತನಂತೆ ಬದುಕಿದ. ಇಳಿವಯಸ್ಸಿನಲ್ಲಿ ಉತ್ತರ ಭಾರತದ ಹೃಷೀಕೇಶದಿಂದ ಕನ್ಯಾಕುಮಾರಿಗೆ ಬರಿಗಾಲಲ್ಲಿ ನಡೆದುಬಂದ. ಆತನೊಂದಿಗೆ ನಡೆದ ನಾಲ್ವರು ಮಠದ ಶಿಷ್ಯರ ಪೈಕಿ ಒಬ್ಬಾತನ ಹೆಸರು ಅನಂತಕೃಷ್ಣ ಶರ್ಮ.

ಈಗ ಕೊಲೆಯಾಗಿರುವ ಶಂಕರ ರಾಮನ್‌, ಅದೇ ಅನಂತಕೃಷ್ಣ ಶರ್ಮರ ಮಗ.

ಈಗ ಕೊಲೆ ಮಾಡಿಸಿರುವ ಆಪಾದನೆಯ ಮೇಲೆ ಜೈಲು ಸೇರಿರುವಾತ ಅದೇ ಚಂದ್ರಶೇಖರ ಸರಸ್ವತಿ ಸ್ವಾಮಿಯ ಉತ್ತರಾಧಿಕಾರಿ. ಹೆಸರು ಜಯೇಂದ್ರ ಸರಸ್ವತಿ. ಮೊದಲಿದ್ದ ಹಿರಿಯ ತೀರಿಕೊಂಡು ಕೇವಲ ಹತ್ತು ವರ್ಷಗಳಾಗಿವೆ!

ನಿಮಗೆ ಬ್ರಾಹ್ಮಣ ಮಠಗಳ ಆಂತರ್ಯ, ಅಲ್ಲಿನ ಆಚಾರ-ವಿಚಾರ, ಒಳ ಜಗಳಗಳು, ಸಣ್ಣತನ, ಸಾತ್ವಿಕತೆಯ ಜಾಗದಲ್ಲಿ ಉದ್ಭವವಾಗುವ ಕ್ರೌರ್ಯ, ಬ್ಲ್ಯಾಕ್‌ಮೇಲ್‌ ಮತ್ತು ಅಲ್ಲಿರುವ ಅಪಾರ ಸಂಪತ್ತು -ಇವೆಲ್ಲ ಎಂಥವು ಎಂಬುದು ಗೊತ್ತಾಗದಿದ್ದರೆ, ಕಂಚಿ ಮಠವನ್ನು ಕಂಠಮಟ್ಟ ಮುಳುಗಿಸಿರುವ ಈ ಹತ್ಯಾ ವಿವಾದ ಏನೆಂಬುದು ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ರಾಜ ಸೇನ ಎಂಬ ಕಂಚಿಯ ಅರಸೊಬ್ಬನ ನೆರವಿನಿಂದ ಕಂಚಿಯಲ್ಲಿ ಏಕಾಂಬರನಾಥ ದೇವಾಲಯ, ಕಾಮಾಕ್ಷಿ ದೇವಾಲಯ ಮತ್ತು ವರದದೇವಾಲಯಗಳನ್ನು ಶಂಕರಾಚಾರ್ಯರು ಪುನರ್‌ ನಿರ್ಮಿಸಿದ್ದು ಅನ್ನುತ್ತದೆ ಇತಿಹಾಸ. ಅದೇ ಶಂಕರಾಚಾರ್ಯ ಸ್ಥಾಪಿಸಿದ ಎರಡೂವರೆ ಸಾವಿರ ವರ್ಷಗಳ ಹಿಂದಿನ ಮಠಕ್ಕೆ ಇವತ್ತು ಇರುವುದು ಐದು ಸಾವಿರ ಕೋಟಿ ರುಪಾಯಿಗಳ ಪ್ರಾಪರ್ಟಿ. ಭಾರತದ ನಾಲ್ಕೂ ದಿಕ್ಕುಗಳಿಗೆ ನಾಲ್ಕು ಶೈವ ಮಠಗಳನ್ನು ಸ್ಠಾಪಿಸಿದ ಶಂಕರಾಚಾರ್ಯ ಕಂಚಿಗೆ ಬಂದು ಕ್ರಿಸ್ತಪೂರ್ವ 476 ರಲ್ಲಿ ಪ್ರಾಣ ಬಿಟ್ಟಿದ್ದರಿಂದ ಕಂಚೀಮಠಕ್ಕೆ ಇಂಪಾರ್ಟೆನ್ಸು , ಪ್ರಾಮಿನೆನ್ಸು ಸಿಕ್ಕಿವೆ.

ಆದರೆ ಕಂಚಿ ಪೀಠಕ್ಕೆ ಇವತ್ತಿನ ಯುಗದಲ್ಲಿ ಪ್ರಾಮುಖ್ಯತೆ ಮತ್ತು ಅರ್ಥ ತಂದುಕೊಟ್ಟದ್ದು 68ನೇ ಪೀಠಾಧಿಪತಿ ಚಂದ್ರಶೇಖರ ಸರಸ್ವತಿ ಎಂಬ ವೃದ್ಧ ಸನ್ಯಾಸಿ. ಅದೆಲ್ಲವೂ ಈಗ ವೆಲ್ಲೂರು ಜೈಲು ಸೇರಿವೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

English summary
Kanchi Sankararaman Murder, How it all happened? : Kanchi ‘Crime Diary’ at ThasKannada.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X