ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಟ ಮಾಡಿದ ವೃದ್ಧ ನೆಲದ ಮೇಲೆ ನಿದ್ದೆ ಹೋದ !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

Shankaracharya Jayendra Saraswati Swamiji escorted by police ಕಾಂಚಿಪುರಂನ ಮಹಿಳಾ ಪೊಲೀಸ್‌ ಠಾಣೆಗೆ ಜಯೇಂದ್ರ ಸ್ವಾಮಿಯನ್ನು ಮೆಹಬೂಬ್‌ ನಗರದಿಂದ ಕರೆತರಲಾಗಿತ್ತಲ್ಲ ? ಸ್ವಾಮೀಜಿ, ‘ನಂಗೆ ಅಲ್ಲಿಂದ ಹೊರಡುವಾಗ ನೀವು ಮಠಕ್ಕೆ ಹೋಗೋಣ ಅಂತ ಹೇಳಿದ್ದಲ್ವಾ? ಈ ಸ್ಟೇಷನ್‌ಗೆ ಯಾಕೆ ಕರೆತಂದಿದ್ದೀರಿ?’ ಅಂತ ಕೇಳಿದ್ದರು.‘ನಿಮ್ಮ ಮ್ಯಾನೇಜರ್‌ರನ್ನು ಈ ಕೇಸಿನಲ್ಲಿ ವಿಚಾರಣೆಗೆ ಕರೆದೊಯ್ಯಲಾಗಿದೆ. ಹೀಗಾಗಿ ಮಠದ ಕೀಲಿಕೈ ಯಾರೋ ಒಯ್ದು ಬಿಟ್ಟಿದ್ದಾರೆ. ಆದ್ದರಿಂದ ಇಲ್ಲಿಟ್ಟಿದ್ದೇವೆ’ ಅಂದರು ಪೊಲೀಸರು.

‘ಇದು ನನ್ನ ಬೆಳಗಿನ ಜಾವದ ಪೂಜಾ ಸಮಯ. ನಂಗೆ ಹಾಲು ಬೇಕು. ಮಠದಿಂದ ತರಿಸಿದ ಹಾಲೇ ಬೇಕು’ ಅಂತ ಹಟಕ್ಕಿಟ್ಟುಕೊಂಡಿತು ವೃದ್ಧ ಜೀವ.

ಇಗೋ, ಕೀಲಿಕೈ ಸಿಕ್ಕಿತಂತೆ. ಅಲ್ಲಿಂದಲೇ ಹಾಲು ತರಿಸಿದ್ದೇವೆ. ಬೇಗ ಪೂಜೆ ಮುಗಿಸಿ ಹಾಲು ಕುಡಿದು ಹೊರಟುಬಿಡಿ. ನಿಮ್ಮನ್ನು ಅರೆಸ್ಟು ಮಾಡಿದ್ದೀವಲ್ಲಾ ? ನಿಮಗೆ ಜಾಮೀನು ಕೊಡೋಕೆ ಅಂತ ಮ್ಯಾಜಿಸ್ಟ್ರೇಟರು ನ್ಯಾಯಾಲಯದಲ್ಲಿ ಕಾಯ್ತಾ ಇದ್ದಾರೆ. ಬನ್ನಿ ಬನ್ನಿ’ ಅಂದಕೂಡಲೆ ಅದನ್ನು ನಂಬಿದ ಅಮಾಯಕ ಸ್ವಾಮಿ ಅವಸರಿಸಿ, ಪೊಲೀಸರು ತಂದು ನಿಲ್ಲಿಸಿದ ಟಾಟಾ ಸುಮೋದೊಳಕ್ಕೆ ಹತ್ತಿ ಕೂತಿದ್ದಾರೆ. ಅಲ್ಲಿ ಮ್ಯಾಜಿಸ್ಟ್ರೇಟರಾದ ಉತ್ತಮರಾಜನ್‌ ಇವರಿಗಾಗಿ ಬೆಳಗಿನ ಜಾವ 5.10ಕ್ಕೆ ಕಾಯುತ್ತ ಕೂತಿದ್ದುದು ಹೌದು. ಸ್ವಾಮೀಜಿಗೆ ಜಾಮೀನು ಕೊಡಿಸಲು ಮಠದ ವಕೀಲರಾದ ತ್ಯಾಗ ರಾಜನ್‌, ಷಣ್ಮುಗಂ, ಸೆಲ್ವಕುಮಾರನ್‌ ಅಲ್ಲಿದ್ದುದೂ ಹೌದು. ಬೆಳಗಿನ 6.12ಕ್ಕೆ ಸ್ವಾಮೀಜಿಯಿದ್ದ ವಾಹನ ಕೋರ್ಟು ತಲುಪಿದೆ. ಸ್ವಾಮೀಜಿ ಬಂದು ಎದುರಿಗೆ ನಿಂತ ಕೂಡಲೆ ‘ಹದಿನೈದು ದಿನಗಳ ಅವಧಿಗಾಗಿ ಇವರನ್ನು ನ್ಯಾಯಾಂಗ ಬಂಧನಕ್ಕೆ, ಅಂದರೆ ಜೈಲಿಗೆ ಕಳಿಸುತ್ತಿದ್ದೇನೆ!’ ಎಂದು ಇಂಗ್ಲಿಷಿನಲ್ಲಿ ಹೇಳಿದ್ದಾರೆ ನ್ಯಾಯಾಧೀಶರು. ‘ಅಪ್ಪಡಿ ಅನ್ನ ಎನ್ನ?’ (ಹಂಗಂದ್ರೆ ಏನು?) ಅಂದರಂತೆ ಸ್ವಾಮೀಜಿ.

‘ನಿಮ್ಮನ್ನು ಹದಿನೈದು ದಿನ ವೆಲ್ಲೂರು ಜೈಲಿನಲ್ಲಿಡಲಾಗುವುದು’ ಅಂದಕೂಡಲೆ, ತಮ್ಮನ್ನು ಬಂಧಿಸಿ, ಜಾಮೀನಾಗುತ್ತದೆಂದು ನಂಬಿಸಿ ಕರೆತಂದ ಪೊಲೀಸರನ್ನ ನೋಡಿ, ‘ಏನು ಹೀಗೆ ಮಾಡಿಬಿಟ್ರಿ’ ಅಂತ ಎದೆ ಹಿಡಿದು ಕೊಂಡನಂತೆ ವೃದ್ಧ. ‘ನೀವು ನನಗೆ ದ್ರೋಹ ಮಾಡಿದಿರಿ’ ಅಂದನಂತೆ.

ವೃದ್ಧನ ಮೆಡಿಕಲ್‌ರಿಪೋರ್ಟ್‌ ತೋರಿಸಿ, ಅವರಿಗೆ ಆರೋಗ್ಯ ಸರಿಯಿಲ್ಲ, ಜಾಮೀನು ಕೊಡಿ ಅಂತ ಕೇಳಿದುದಕ್ಕೆ, ‘ಇವೆಲ್ಲ ಹೋದ ವರ್ಷದ ರಿಫೋರ್ಟುಗಳಲ್ವಾ? ಈಗ ಆರೋಗ್ಯವಾಗಿದ್ದಾರೆ ಬಿಡಿ’ ಅಂದಿದ್ದಾರೆ ನ್ಯಾಯಾಧೀಶರು.

‘ನಂಗೆ ಫಸ್ಟ್‌ಕ್ಲಾಸ್‌ ಕೈದಿಯ ಸ್ಥಾನವನ್ನಾದರೂ ಕೊಡಿ’ ಅಂತ ಸ್ವಾಮೀಜಿಯೇ ಕೇಳಿದುದಕ್ಕೆ,‘ಅದಕ್ಕೆ ಜೈಲ್‌ ಸೂಪರಿಂಡೆಂಟರನ್ನೇ ಕೇಳಿಕೊಳ್ಳಿ’ಎಂಬ ಉತ್ತರ ಸಿಕ್ಕಿದೆ.

ಬೆಳಗ್ಗೆ ಒಂಬತ್ತು ಗಂಟೆ ಹೊತ್ತಿಗೆಲ್ಲ ಅವರನ್ನು ವೆಲ್ಲೂರು ಜೈಲಿನೂಳಕ್ಕೆ ದಾಖಲು ಮಾಡಲಾಗಿದೆ. ಅಲ್ಲಿ ಮತ್ತೆ ‘ಫಸ್ಟ್‌ಕ್ಲಾಸ್‌ ಕೈದಿಯ ಸ್ಥಾನಮಾನ ಕೊಡಿ’ ಅಂತ ವೃದ್ಧ ಜೀವ ಕೇಳಿಕೊಂಡಿದೆ.

‘ಅದೇನಿದ್ದರೂ ವಾರಕ್ಕೆರಡು ಸಲ ಮಟನ್‌ ತಿನ್ನೋರಿಗೆ, ಮಂಚದ ಮೇಲೆ ಮಲಗೋರಿಗೆ ಉಪಯೋಗವಾಗೋ ವ್ಯವಸ್ಥೆ. ನಿಮಗೆ ಎರಡೂ ಬೇಕಿಲ್ಲ. ಮೊದಲ ದರ್ಜೆ ಕೈದಿಯ ಸ್ಥಾನಮಾನ ತಗೊಂಡೇನು ಮಾಡ್ತೀರಿ?’ ಅಂದರಂತೆ ಜೈಲಿನವರು.

ಅವರು ಕೊಡಮಾಡಿದ ಹಿಡಿಕೆ ಇಲ್ಲದ ಮೂರು ಬಕೀಟು ನೀರಿನಲ್ಲಿ ಸ್ನಾನ ಮಾಡಿ, ಜೈಲಿನ ಸೆಲ್‌ನಲ್ಲೇ ಮಠದಿಂದ ಸಾಮಗ್ರಿ ತರಿಸಿಕೊಂಡು ಪೂಜೆ ಮಾಡಿ, ಬರೀನೆಲದ ಮೇಲೆ ಮಲಗಿಕೊಂಡು ನಿದ್ದೆ ಹೋಗಿದ್ದಾನೆ ವೃದ್ಧ.

ಸೆಲ್‌ನ ಕಾಲುಗಾರ ಹೇಳಿದ ಪ್ರಕಾರ, ‘ನಾನು ನಿರಪರಾಧಿ. ನಾನು ಏನೂ ಮಾಡಿಲ್ಲ. ಸುಮ್ಮನೆ ನನ್ನನ್ನ ಸಿಕ್ಕು ಹಾಕಿಸಿದ್ದಾರೆ’ ಅಂತ ಇಡೀ ದಿನ ತಮಗೆ ತಾವೇ ಮಾತನಾಡಿಕೊಳ್ಳುತ್ತಿದ್ದರಂತೆ ಕಂಚಿ ಕಾಮಕೋಟೆ ಪೀಠಾಧಿಪತಿ ಜಯೇಂದ್ರ ಸರಸ್ವತಿ !

(ಸ್ನೇಹ ಸೇತು : ಹಾಯ್‌ ಬೆಂಗಳೂರು )

ಕಂಚಿ ಕ್ರೆೃಂ ಡೈರಿ ಕಂಚಿ ಕ್ರೆೃಂ ಡೈರಿ-2

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X