ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಂಚಿ ಕ್ರೆೃಂ ಡೈರಿ’ : ಅಂಡರ್‌ವರ್ಲ್ಡ್‌ ಕೊಲೆ ಹೀಗಿರುವುದಿಲ್ಲವಲ್ಲ ?

By Super
|
Google Oneindia Kannada News

Kanchi Crime Diary
ಮೊದಲು ಅಪ್ಪಣೆಯಾಗಿದೆ.
ನಂತರ ಕೊಲೆಯಾಗಿದೆ. ಕೊಲೆಯಾದ ನಂತರ ಆ ಸಮಸ್ಯೆಯಿಂದ ಬಚಾವಾಗುವ ಪ್ಲಾನ್‌ ಹಾಕಲಾರಂಭಿಸಿದ್ದಾರೆ. ಹೀಗಾಗಿ ಪೊಲೀಸರ ಕೈಗಳು ದಕ್ಷಿಣ ಭಾರತದ ಅತ್ಯಂತ ಪ್ರಬಲ, ಶ್ರೀಮಂತರ ಶೈವ ಪೀಠವಾದ ಕಂಚಿಕಾಮ ಕೋಟಿ ಪೀಠದ ಅಧಿಪತಿಯ ತನಕ ಬಂದು ತಲುಪಿದೆ.

ಪದೇಪದೆ ಪತ್ರ ಬರೆದು ಹೆದರಿಸುತ್ತಿದ್ದ, ಕರಪತ್ರ ಹಂಚಿ ಅವಮಾನ ಮಾಡುತ್ತಿದ್ದ ಶಂಕರರಾಮನ್‌ ಬಗ್ಗೆ ಸಿಟ್ಟಿಗೆದ್ದ ಹಿರಿಯ ‘ಅವನಿಗೊಂದು ಬುದ್ಧಿ ಕಲಿಸಿ' ಅಂದದ್ದನ್ನೇ, ಬಾಡಿಗೆ ಹಂತಕರು ಕೊಲೆ ತನಕ ಒಯ್ದು ಬಿಟ್ಟರಾ ಎಂಬುದು ಕೂಡ ಒಂದು ಅನುಮಾನವೆ. ಇಲ್ಲದಿದ್ದರೆ, ಯಾವ ನುರಿತ ಭೂಗತ ತಂಡವೂ ತೀರ ಇಷ್ಟು ಅಡ್ನಾಡಿ ರೀತಿಯಲ್ಲಿ ಒಂದು ಕೊಲೆ ಮಾಡಿ, ತಾನೂ ಸಿಕ್ಕು ಬಿದ್ದು, ಕೊಲೆ ಮಾಡಿಸಿದವನನ್ನೂ ಜೈಲಿಗೆ ಕರೆದೊಯ್ಯುವ ರೀತಿಯಲ್ಲಿ ವರ್ತಿಸುವುದಿಲ್ಲ. ಕೊಲೆ ನಡೆದ ರೀತಿ ಮತ್ತು ನಂತರದ ಘಟನೆಗಳನ್ನು ಗಮನಿಸಿದವರಿಗೆ ಈ ಮಾತು ಸತ್ಯವೆನ್ನಿಸೀತು.

ಮೊದಲನೆಯದಾಗಿ, ಕಂಚಿಯ ಅತ್ಯಂತ ಜನನಿಬಿಡ ಹಾಗೂ ಸುಪ್ರಸಿದ್ಧ ದೇಗುಲವಾದ ವರದರಾಜ ಕೋಯಿಲ್‌ನ ಆಫೀಸಿನಲ್ಲಿ ಶಂಕರ ರಾಮನ್‌ನನ್ನು ಕೊಲ್ಲಲು ತೀರ್ಮಾನಿಸಿದ್ದಾರೆ. ಸೆಪ್ಟೆಂಬರ್‌ ಎರಡರಂದೇ ಒಮ್ಮೆ ಎರಡು ಬೈಕುಗಳಲ್ಲಿ ಹೋಗಿ ಅಲ್ಲಿ ಎಂಥದೋ ಉತ್ಸವ ನಡೆಯುತ್ತಿದ್ದು, ತುಂಬ ಜನ ಇದ್ದುದರಿಂದ ಅವತ್ತು ಕೊಲೆ ಮಾಡಲಾಗದೆ ಹಂತಕ ತಂಡ ವಾಪಸು ಹೋಗಿದೆ. ಅದರ ಮರುದಿನ, ಅಂದರೆ ಸೆಪ್ಟೆಂಬರ್‌3, 2004ರಂದು ಹಂತಕ ತಂಡ ದೇವಾಲಯದ ಆಫೀಸಿನೊಳಕ್ಕೆ ನುಗ್ಗಿ ಶಂಕರರಾಮನ್‌ನನ್ನು ಮಚ್ಚಿನಲ್ಲಿ ಕತ್ತರಿಸಿ ಕೊಲೆ ಮಾಡಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಶಂಕರ ರಾಮನ್‌ನ ಕೊನೆಯ ಪತ್ರ ತಲುಪಿದ ಮರುದಿನವೇ ಆತನ ಕೊಲೆಗೆ ಕೈ ಹಾಕಿದ್ದು. ಆಗಸ್ಟ್‌30, 2004ರಂದು ಆತ ಪತ್ರ ಬರೆಯುತ್ತಾನೆ. ಸೆಪ್ಟೆಂಬರ್‌ 3ರಂದು ಕೊಲೆ ನಡೆದು ಹೋಗುತ್ತದೆ.

ಸಾಮಾನ್ಯವಾಗಿ ಅಂಡರ್‌ವರ್ಲ್ಡ್‌ ಭಾಗವಹಿಸುವ ಇಂಥ ಕೊಲೆಗಳು ನಡೆದ ಕೂಡಲೆ, ಕೊಲೆ ಮಾಡಿದವರೋ-ಮತ್ತೊಬ್ಬರೋ -ಪೊಲೀಸರಿಗೆ ಶರಣಾಗಿ ‘ನಾವೇ ಮಾಡಿದೆವು' ಅಂತ ಒಪ್ಪಿಕೊಂಡು ಬಿಡುತ್ತಾರೆ. ಈ ‘ಸರಂಡರ್‌'ತಂತ್ರವನ್ನು ಎಷ್ಟು ಬೇಗ ಮಾಡಿಬಿಡುತ್ತಾರೆಂದರೆ, ನಿಜವಾಗ್ಯೂ ಕೊಲೆ ಮಾಡಿದವರ ಅಥವಾ ಮಾಡಿಸಿದವರ ಮೇಲೆ ಪೊಲೀಸರ ಪ್ರೆಷರ್‌ ತಂತಾನೆ ಕಡಿಮೆಯಾಗಿಬಿಡುತ್ತದೆ. ಹೊರ ಪ್ರಪಂಚಕ್ಕೆ ‘ಹಂತಕರೇ ಸರಂಡರ್‌ ಆದರಂತಲ್ಲ ?' ಎಂಬ ಸಮಾಧಾನ ಸಿಕ್ಕು ಹೋಗುತ್ತದೆ. ಅಸಲಿ ಹಂತಕರು ಮತ್ತು ಹಣಕೊಟ್ಟು ಕೊಲ್ಲಿಸಿದವರು- ನಿಧಾನವಾಗಿ ಬಚಾವಾಗಿ, ನೇಪಥ್ಯಕ್ಕೆ ಸರಿದುಹೋಗುತ್ತಾರೆ. ಇದು ಶುದ್ಧ ಅಂಡರ್‌ವರ್ಲ್ಡ್‌ ಹತ್ಯೆಗಳ ವಿಧಾನ.

ಆದರೆ ಸೆಪ್ಟೆಂಬರ್‌ 3ರಂದು ಕೊಲೆ ನಡೆದಿದ್ದು, 27ರ ತನಕ ಏನೂ ಸಂಭವಿಸುವುದಿಲ್ಲ. ಅಕ್ಟೋಬರ್‌27 ರಂದು ತೀನ್‌ ಪಾಂಡ್ಯನ್‌, ಸತೀಶ್‌ಆರ್ಮುಗಂ, ಅರುಣ್‌ ಮತ್ತು ದೇವರಾಜ್‌ ಎಂಬ ಐದು ಜನ ‘ಶಂಕರ ರಾಮನ್‌ರನ್ನು ಕೊಂದದ್ದು ನಾವೇ' ಅಂತ ಹೇಳಿಕೆ ನೀಡಿ ನ್ಯಾಯಾಲಯದ ಮುಂದೆ ಸರಂಡರ್‌ ಆಗುತ್ತಾರೆ. ಕೊಲೆ ನಡೆದದ್ದಕ್ಕೂ -ಸರಂಡರ್‌ ಆದದ್ದಕ್ಕೂ ನಡುವಿನ ಈ ಅವಧಿಯೇ ಅನೇಕ ಅನುಮಾನ ಮತ್ತು ಪ್ರಶ್ನೆಗಳನ್ನು ಉಂಟು ಮಾಡುತ್ತದೆ.

ಕಂಚಿ ಪೊಲೀಸರ ಪ್ರಕಾರ ಸರಂಡರ್‌ ಆದ ಐವರನ್ನು ‘ವಿಚಾರಣೆ'ಗೆ ಒಳಪಡಿಸಿದಾಗ ಅವರು ನಿಜವಾದ ಹಂತಕರಲ್ಲ ಎಂಬುದು ಗೊತ್ತಾಯಿತು.‘ಕೊಲೆ ಕೇಸು ಒಪ್ಪಿಕೊಂಡು ಸರಂಡರ್‌ ಆದರೆ ತಲಾ ಇಪ್ಪತ್ತೆೈದು ಸಾವಿರ ರುಪಾಯಿ ಕೊಡುತ್ತೇವೆ ಹಾಗೂ ಎರಡು ತಿಂಗಳಲ್ಲಿ ಜಾಮೀನು ಮಾಡಿಸುತ್ತೇವೆ. ಕೇಸು ಮುಗಿಯುವ ತನಕ ನಿಮ್ಮ ಕುಟುಂಬ ನಿರ್ವಹಣೆ ನೋಡಿಕೊಳ್ಳುತ್ತೇವೆ ಎಂದು ಮಠದವರು ನಮಗೆ ಭರವಸೆ ನೀಡಿದ್ದರು. ಅದನ್ನು ಒಪ್ಪಿಕೊಂಡು ನಾವು ಐದೂ ಜನ ನ್ಯಾಯಾಲಯದ ಬಳಿಗೆ ಬಂದೆವು. ಆದರೆ ಯಾರೂ ಹಣಕೊಡಲಿಲ್ಲ. ಆದ್ದರಿಂದ ನಾವು ನ್ಯಾಯಾಲಯಕ್ಕೆ ಶರಣಾಗುವುದಿಲ್ಲವೆಂದು phone ಮಾಡಿ ತಿಳಿಸಿದೆವು. ಆಗ ಒಬ್ಬರು ನಮಗೆ ಸವೇರಾ ಹೊಟೇಲಿನ ಕಾರ್‌ಪಾರ್ಕಿಂಗ್‌ ಬಳಿಗೆ ಬರಲು ತಿಳಿಸಿದರು. ಅಲ್ಲಿಗೆ ನಮ್ಮಲ್ಲೊಬ್ಬರು ಹೋದಾಗ ರವಿ ಸುಬ್ರಹ್ಮಣ್ಯಂ ಎಂಬುವವರು ಕಾರಿನಲ್ಲಿ ಬಂದು ಐದುನೂರು ರುಪಾಯಿಗಳ ಕಂತೆಗಳನ್ನು ನಮ್ಮ ಕೈಗೆ ಕೊಟ್ಟು ಹೊರಟು ಹೋದರು. ಅನಂತರ ನಾವು ಸರಂಡರ್‌ ಆದೆವು' ಎಂಬುದಾಗಿ ನಕಲಿ ಹಂತಕರು ಪೊಲೀಸರ ಮುಂದೆ ಒಪ್ಪಿಕೊಂಡರು.

ಇಲ್ಲಿಂದ ಮುಂದೆ ಪೊಲೀಸ್‌ ತರದೂದು ಆರಂಭವಾಗುತ್ತದೆ. ಹಣ ಕೊಟ್ಟು ಹೋದ ರವಿ ಸುಬ್ರಹ್ಮಣ್ಯಂ ಮದರಾಸಿನ ಟಿ.ನಗರ್‌ನಲ್ಲಿರುವ ಬಿಲ್ಡರ್‌-ಪ್ರಮೋಟರ್‌ ಎಂಬುದು ಗೊತ್ತಾಗುತ್ತದೆ. ಆತ ಟಿ. ನಗರದ ಬ್ರಾಹ್ಮಣ ಹೆಣ್ಣು ಮಗಳೊಬ್ಬಾಕೆಯ ಸೈಟಿನಲ್ಲಿ ಅಪಾರ್ಟ್‌ಮೆಂಟು ಕಟ್ಟಿಕೊಂಡು ‘ಜಾಯಿಂಟ್‌ ವೆಂಚರ್‌' ಮಾಡುತ್ತಿದ್ದ ಸಂದರ್ಭದಲ್ಲೇ ಆಕೆಯ ಮನೆಗೆ ಕಂಚಿ ಪೀಠಾಧಿಪತಿ ಜಯೇಂದ್ರ ಸರಸ್ವತಿಗಳು ಬಂದಿರುತ್ತಾರೆ. ಆಗ ಆಕೆಯ ಮೂಲಕ ಸ್ವಾಮೀಜಿಗೆ ಪರಿಚಯವಾಗುವ ರವಿ ಸುಬ್ರಹ್ಮಣ್ಯಂ, ಮುಂದೆ ಸ್ವಾಮಿಗೆ ತುಂಬ ಆತ್ಮೀಯನಾಗುತ್ತಾನೆ. ಸದರಿ ರವಿ ಸುಬ್ರಹ್ಮಣ್ಯಂನ ಮೂಲಕ ಮಠಕ್ಕೆ ಪರಿಚಯವಾಗುವವನೇ ಶಂಕರ ರಾಮನ್‌ನ ಹತ್ಯೆಗೆ ಸುಪಾರಿ ಪಡೆದ ಹಂತಕ ‘ಅಪ್ಪು!' ಇದು ಪೊಲೀಸರ ವಿವರಣೆ.

ಅವರ ಪ್ರಕಾರ ನಕಲಿ ಹಂತಕರೇ ಅಪ್ಪುವಿನ ಹೆಸರನ್ನೂ, ಅದರ ಜೊತೆಗೆ ಅಪ್ಪುವಿನ ಶಿಷ್ಯ ಕದಿವರನ್‌ ಎಂಬುವವನ ಹೆಸರನ್ನು ಬಾಯಿ ಬಿಡುತ್ತಾರೆ. ಅಪ್ಪುವನ್ನು ಹುಡುಕಿಕೊಂಡು ಹೋದ ಪೊಲೀಸರ ಕೈಗೆ ಕದಿವರನ್‌ ಮತ್ತು ಚಿನ್ನನ್‌ ಎಂಬಿಬ್ಬರು ಬಾಡಿಗೆ ಹಂತಕರು ಸಿಕ್ಕು ಬಿಳುತ್ತಾರೆ. ಅವರ ಬಳಿ ಪತ್ತೆಯಾಗುವ ಕಟ್ಟುಕಟ್ಟು ಹಣ, ಕಂಚಿ ಮಠದ ಅಕೌಂಟಿರುವ ಐಸಿಐಸಿಐ ಬ್ಯಾಂಕಿನಿಂದ ಮಠದವರು draw ಮಾಡಿದ ನೋಟುಗಳೊಂದಿಗೆ ಹೊಂದಾಣಿಕೆಯಾಗುತ್ತದೆ. ಇಲ್ಲಿರುವ ಮತ್ತೊಂದು ಇಂಟರೆಸ್ಟಿಂಗ್‌ ಸಂಗತಿಯೆಂದರೆ, ಶಂಕರ ರಾಮನ್‌ ಹತ್ಯೆಗೆ ಸುಪಾರಿ ಪಡೆದ ಕದಿವರನ್‌, ಒಂದು ಕಾಲಕ್ಕೆ ಎಂ.ಜಿ.ಆರ್‌. ಅವರ ಕಾರಿನ ಡ್ರೆೃವರನಾಗಿದ್ದ ಮಾಣಿಕ್ಯಂ ಎಂಬಾತನ ಮಗ. ‘ನಾನು ಮತ್ತು ಚಿನ್ನನ್‌ ಎರಡು ಸಲ ಜಯೇಂದ್ರರನ್ನು ಈ ಹತ್ಯೆಯ ಸಂಬಂಧದಲ್ಲಿ ಭೇಟಿಯಾದದ್ದು ಹೌದು!' ಎಂದು ಕದಿವರನ್‌ ಒಪ್ಪಿಕೊಳ್ಳುತ್ತಾರೆ. ಈ ಮುಂಚೆಯೂ ನಾವು ರಾಧಾಕೃಷ್ಣನ್‌ ಮತ್ತು ಐಯ್ಯಂಗಾರ್‌ ಎಂಬಿಬ್ಬರ ಮೇಲೆ ಮಠದ ಆದೇಶದ ಪ್ರಕಾರ ಹಲ್ಲೆ ಮಾಡಿದ್ದೆವು ಅಂತಲೂ ಒಪ್ಪಿಕೊಳ್ಳುತ್ತಾನೆ. ಕದಿವರನ್‌ ಮತ್ತು ಚಿನ್ನನ್‌ ಜೊತೆಯಲ್ಲೇ ಅಸಲಿ ಹಂತಕರಾದ ಆನಂದ್‌, ಮುತ್ತುಶೇಖರ್‌, ಸುಂದರ್‌, ಪಳನಿ, ಕೊರಿಯರ್‌ ರವಿ, ಸಿಲ್ವೆಸ್ಟರ್‌, ಭಾಸ್ಕರನ್‌ ಮತ್ತು ಅಂಬಿಕಾಪತಿ ಎಂಬುವವರು ಬಂಧಿತರಾಗುತ್ತಾರೆ. ಈ ಪೈಕಿ ಚಿನ್ನನ್‌ ಮತ್ತು ಅಂಬಿಕಾಪತಿ ಕೊರಳು ಸಿಗಿದು ಕೊಲ್ಲುವುದರಲ್ಲಿ ನಿಸ್ಸೀಮರಾಗಿದ್ದು, 2002ರಲ್ಲಿ ಮಾಂದೋಪು ಜಯರಾಮನ್‌ ಹತ್ಯೆಯಲ್ಲಿ ಪಾಲ್ಗೊಂಡ ಕುಖ್ಯಾತಿ ಇವರಿಗಿದೆ. ಶಂಕರ ರಾಮನ್‌ ಹತ್ಯೆಗೆ ಮುನ್ನ ಇವರು ಕಂಚಿಯ ‘ರಾಜ್‌ ಬೈಕ್‌' ಸಂಸ್ಥೆಯಿಂದ ಒಂದು ಸೆಕೆಂಡ್‌ ಹ್ಯಾಂಡ್‌ ಯಮಹ ಬೈಕು ಖರೀದಿಸಿದ್ದು, ಅದರ ಮೇಲೆ ಬಂದೇ ಆತನ ಹತ್ಯೆ ಮಾಡಿ ಪರಾರಿಯಾಗುತ್ತಾರೆ. ಕಂಚೀಮಠದ ವಿಡಿಯೋಗ್ರಾಫರನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರಿಗೆ, ಕಂಚಿ ಪೀಠಾಧಿಪತಿಯಾಂದಿಗೆ ಸುಪಾರಿ ಆರ್ಗನೈಸರ್‌ ‘ಅಪ್ಪು'ವಿನ ಫೋಟೋ ಸಿಕ್ಕಿದೆ. ಆತ ಮಾತ್ರ ಇನ್ನೂ ಸಿಕ್ಕಿಲ್ಲ. ಇದು ಪೊಲೀಸರ ಪೂರ್ತಿ ವಿವರಣೆ.

ಕದಿವರನ್‌ ಮತ್ತು ಚಿನ್ನನ್‌ ಗ್ಯಾಂಗು ಯಾವತ್ತು ಅರೆಸ್ಟಾಯಿತು ಎಂಬುದನ್ನು ಇವರು ನಿಖರವಾಗಿ ತಿಳಿಸುವುದಿಲ್ಲ. ಆದರೆ ‘ಈ ಒಂಬತ್ತು ಜನರನ್ನು ಬಂಧಿಸಿ ತಂದಂತೆಯೇ ಕಂಚಿ ಪೀಠಾಧಿಪತಿಯನ್ನು ಬಂಧಿಸಿ ತನ್ನಿ. ಅದಕ್ಕೆ ವಾರಂಟ್‌ ಯಾಕೆ?' ಅನ್ನುತ್ತಾರೆ. ಹಾಗೆ ಅವರು ನವೆಂಬರ್‌ 9ರಂದು ಹೇಳಿದ್ದು, ಅದಾದ ಎರಡನೇ ದಿನಕ್ಕೆ ನವೆಂಬರ್‌ 11ರಂದು ಸ್ವಾಮೀಜಿಯನ್ನು ಮೆಹಬೂಬ್‌ ನಗರದಲ್ಲಿ ಬಂಧಿಸಲಾಯಿತು.

ಇದು ಇನ್ವೆಸ್ಟಿಗೇಷನ್‌ ವಿವರ.

(ಸ್ನೇಹಸೇತು : ಹಾಯ್‌ ಬೆಂಗಳೂರು)

English summary
Kanchi Sankararaman Murder, How it all happened? : Kanchi ‘Crime Diary’ at ThasKannada.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X