• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಿಕಾಗೋಷ್ಠಿಗಳೆಂಬ ಸಂತೆಗಳಲ್ಲಿ ಕೃಷ್ಣರೂ, ಅವರ ಕುನ್ನಿಯೂ!

By Staff
|
Ravi Belagere on Thatskannada.com ರವಿ ಬೆಳಗೆರೆ
ನಿನ್ನೆ ತೀರ ಭಾರತದ ತಂಡ ಗೆದ್ದೇಬಿಡುತ್ತದೆ ಅಂದುಕೊಂಡು ಕೈಲಿದ್ದ ಕೆಲಸವನ್ನೂ ಬಿಟ್ಟುಹೋಗಿ ಟೀವಿಯ ಮುಂದೆ ಕುಳಿತೆ. ಆಶೀಶ್‌ ನೆಹರಾ ಎಂಬ ನನ್ನ ಪ್ರೀತಿಯ ‘ ವಕ್ರ’ನ ವಿಕೆಟ್ಟು ಪಿಚ್ಚಲು ಪಿಚ್ಚಲಾಗಿ ಹೋದ ಮೇಲೆ ಅಷ್ಟೂ ಆಟಗಾರರನ್ನು ಬಾಯಿಗೆ ಸಿಕ್ಕಂತೆ ಬೈದುಕೊಳ್ಳುತ್ತಾ ವಾಪಸು ಬಂದು ಟೇಬಲ್ಲಿನ ಮುಂದೆ ಕುಳಿತೆ. ಯಾಕೋ ತುಂಬ ಹೊತ್ತು ಬರೆಯಲಾಗಲಿಲ್ಲ. ಎಷ್ಟೋ ಹೊತ್ತಿನ ನಂತರ ನೆಪೋಲಿಯನ್‌ ಬೊನಪಾರ್ಟಿ ಹೇಳಿದ್ದು ನೆನಪಾಯಿತು:

‘ಪ್ರತಿ ಕದನವನ್ನೂ ಗೆಲ್ಲಬೇಕೆಂದಿಲ್ಲ. ಒಟ್ಟಾರೆಯಾಗಿ ಯುದ್ಧವನ್ನು ಗೆದ್ದರಾಯಿತು!’ ಹಾಗಂತ ನಾನೂ ಸಮಾಧಾನ ಹೇಳಿಕೊಂಡು ಬರೆಯಲು ಕುಳಿತೆ.

ಇವತ್ತು ಕ್ರಿಕೆಟ್ಟು ಕೂಡ ಭಾರತದ ಚುನಾವಣೆಗಳ ಭವಿತವ್ಯವನ್ನು ನಿರ್ಧರಿಸುವ ಮಟ್ಟಕ್ಕೆ ರಾಜಕೀಯ ದಾಳವಾಗಿ ಬೆಳೆದಿದೆ. ಅಲ್ಲಿ ಪಾಕ್‌ ಅಧ್ಯಕ್ಷ ಖುದ್ದಾಗಿ ಬಂದು ಕುಳಿತು ತಮ್ಮ ಟೀಮಿನ ಗೆಲುವಿಗೆ ಚಪ್ಪಾಳೆ ತಟ್ಟುತ್ತಾನೆ ಇಲ್ಲಿ ರಾಮನಾಥ-ಸೋಮರಸ ಎರಡನ್ನೂ ಸವಾರಿ ಮಾಡುವ ನಮ್ಮ ರಾಜಕಾರಣಿಗಳು ಘಳಿಗೆಗೊಮ್ಮೆ ಸ್ಕೋರೆಷ್ಟಾಯಿತು ಅಂತ ಕೇಳಿ ಕೇಳಿ ಚಡಪಡಿಸುತ್ತಾನೆ. ಅವರಿಗೆ ಗೊತ್ತು: ಇನ್ನೂ ಮೂವತ್ತು ದಿನ ನೆಯಲಿರುವ ಭಾರತ-ಪಾಕ್‌ ಕ್ರಿಕೆಟ್‌, ಮುಂಬರುವ ಚುನಾವನೆಗಳಲ್ಲಿ ದೊಡ್ಡ issue ಆಗಲಿದೆ!

ಮೊನ್ನೆ ನನ್ನ ಮಿತ್ರರಾದ ಪೊಲೀಸ್‌ ಅಧಿಕಾರಿಯಾಬ್ಬರು ಹೇಳುತ್ತಿದ್ದರು: ‘ಎರಡು ಟೀಮು ಮಾಡಿ ಆಡಲು ಬಿಟ್ಟಿದ್ದೇ ತಪ್ಪು. ಅದರ ಬದಲಿಗೆ ನಮ್ಮವರು ಆರು ಜನ ಪಾಕಿಸ್ತಾನದ ಟೀಮಿನಲ್ಲೂ, ಅವರ ಟೀಮಿನ ಆರು ಜನ ಭಾರತದ ಟೀಮಿನಲ್ಲೂ ಸೇರಿಕೊಂಡು ಎರಡು dream team ಗಳನ್ನು ರಚಿಸಿ Friendlyಯಾಗಿ ಆಡಲು ಬಿಟ್ಟಿದ್ದಿದ್ದರೆ ನಿಜಕ್ಕೂ ಎರಡು ದೇಶಗಳ ಜನ ಆನಂದಪಡುತ್ತಿದ್ದರೇನೋ?’ಹೀಗಂತ ಯೋಚಿಸುವುದು ಒಳ್ಳೆಯವರ ಲಕ್ಷಣ. ಇದನ್ನು wishful thinking ಅನ್ನುತ್ತಾರೆ. ಇದಕ್ಕಿಂತ ಎರಡು ಹೆಜ್ಜೆ ಮುಂದಕ್ಕೆ ಹೋಗಿ ನಮ್ಮ ಥರ್ಡ್‌ ಅಂಪೈರ್‌ ಅನಂತ್‌, ಇನ್ನೊಂದು ಮಾತು ಹೇಳುತ್ತಿದ್ದ. ಬ್ರಿಟಿಷರ ಕಾಲದಲ್ಲಿ ಮುಸ್ಲಿಂ ಲೀಗ್‌ ರಚನೆಯಾಗಿ, ಇತ್ತ ಹಿಂದೂ ಮಹಾಸಭಾ ಉದ್ಭವಗೊಂಡು ಹಿಂದೂ-ಮುಸ್ಲಿಂ ಮನಸ್ಸುಗಳು ಮಲಿನಗೊಳ್ಲುವುದಕ್ಕೆ ಮುಂಚೆ, 1947ರಲ್ಲಿ ದೇಶ ವಿಭಜನೆಯಾಗುವುದಕ್ಕಿಂತ ಮುಂಚೆ ಭಾರತ ಅಖಂಡವಾಗಿ ಹೇಗಿತ್ತೋ ಹಾಗೆ ಇದ್ದಿದ್ದರೆ... ರವೀ, ನಮ್ಮ ಟೀಮು ಅದೆಷ್ಟು powerful ಆಗಿರುತ್ತಿತ್ತಲ್ಲವೇ? ಆಗ ಸಮಿ, ರಜಾಕ್‌, ಇಂಜಮಾಂ, ಶೋಯೆಬ್‌- ಎಲ್ರೂ ನಮ್ಮ ಟೀಮಿನಲ್ಲೇ ಇರುತ್ತಿದ್ದರು. ಭಾರತದ ಟೀಮನ್ನು ಜಗತ್ತಿನ ಯಾವ ಟೀಮೂ ಸೋಲಿಸಲಾಗುತ್ತಿರಲಿಲ್ಲ, ಅಲ್ವಾ?

ಇದು ಕೂಡ ಒಳ್ಳೆಯ ಮನಸ್ಸಿನ ಆಸೆಬುರುಕ ಚಿಂತನೆಯೇ. ಅವತ್ತು 1947ರಲ್ಲಿ ಭಾರತ devide ಆಗದೆ ಹೋಗಿದ್ದಿದ್ದರೆ, ನಾವು ಕೇವಲ ಸಮಿ, ಶೋಯೆಬ್‌, ಹಕ್‌ರನ್ನಷ್ಟೇ ನಮ್ಮೊಂದಿಗೆ ಇಟ್ಟುಕೊಂಡಿರುತ್ತಿರಲಿಲ್ಲ. ಸಿಂಧೂ ತೀರದಾಚೆಗಿನ ಬಡತನ, ಮೌಢ್ಯ, ಜಾತಿ ಅತಿರೇಕ, ಆ ನೆತ್ತರದಾಹಿ ಉಗ್ರವಾದಿಗಳು, ಶಿಸ್ತುಗೆಟ್ಟ ಸೈನ್ಯ, ಅಫಘಾನದಂತಹ ನೆರೆ, ಚೀಣದಂತಹ ಹೊರೆ-ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತಿತ್ತು. ಒಂದು ಕ್ರಿಕೆಟ್‌ ಗೆಲ್ಲುವ ಸಲುವಾಗಿ ಅಷ್ಟೆಲ್ಲ ಯಾತನೆಗಳನ್ನು ಭರಿಸುವವರು ಯಾರು? ಇದೊಂದು ವಿಷಯದಲ್ಲಿ ಇತಿಹಾಸ ಮರುಕಳಿಸದಿದ್ದರೇನೇ ಸಂತೋಷ. 1947ರಲ್ಲಿ ದೇಶ ಇಬ್ಭಾಗ ಮಾಡಿ ಗೆರೆ ಗೀಚಿಯಾಗಿದೆ. ಅವರು ಅಲ್ಲೇ ತಣ್ಣಗಿರಲಿ. ನಾವು ಇಲ್ಲೇ ಬೆಚ್ಚಗಿರೋಣ. ಗೆದ್ದರೆ ಸಂತೋಷ ಪಡೋಣ. ಸೋತರೆ ಹಾಳು ಬಿದ್ದೋಗಲಿ ಕ್ರಿಕೆಟ್ಟು! ಸದ್ಯಕ್ಕೆ ಇಷ್ಟಂದುಕೊಂಡು ಸುಮ್ಮನಾಗುತ್ತೇನೆ. ನನ್ನ ಮನಸ್ಸೆಲ್ಲ ಈವತ್ತಿನ ರಾಜಕಾರಣದ ಕ್ಷಣ ಕ್ಷಣದ ಬದಲಾವಣೆಗಳೇ ಆಕ್ರಮಿಸಿಕೊಂಡಿದೆ. ಬಂಗಾರಪ್ಪ ಬಿಜೆಪಿ ಸೇರಿದ್ದು, ಆಯ್ನೂರು ಮಂಜುನಾಥ ಕಾಂಗ್ರೆಸ್ಸಿಗೆ ಬಂದದ್ದು, ಬಳ್ಳಾರಿ ಲೋಕಸಭಾ ಕ್ಷೇತ್ರವೆಂಬುದು ಇವರು ಇಟ್ಟುಕೊಂಡ ಹೆಂಗಸಿನ ಸ್ತನವೇನೋ ಎಂಬಂತೆ ಕೊಂಡಯ್ಯ ಕೋಳೂರು ಬಸವನಗೌಡ ಮುಂತಾದವರೆಲ್ಲ ಸೋನಿಯಾ ಗಾಂಧಿಯ ವಿವೇಚನೆಗೆ ಬಿಡುತ್ತೇವೆ ಅಂದದ್ದು, ಉದಯ ಟೀವಿಯ ತೇಜಸ್ವಿನಿಗೆ ಎಂ.ಪಿ. ಟಿಕೆಟ್ಟು ಕೊಡ್ತಾರಂತೆ ಅಂತ ಕೇಳಿಬಂದದ್ದು, ನಾಮಕರಣಕ್ಕೆ ಮೊದಲೇ ನಾಗಮಂಗಲದಲ್ಲಿ ನಿರ್ಲಜ್ಜ ಶಿವರಾಮೇ ಗೌಡ ಪ್ರಚಾರ ಕಾರ್ಯ ಆರಂಭಿಸಿದ್ದು- ಇವೆಲ್ಲ ನೋಡತ್ತಿದ್ದರೆ ದೇಶ ಸೇವೆಗಾಗಿ(!) ಈ ರಾಜಕಾರಣಿಗಳೆಲ್ಲ ಎಷ್ಟೊಂದು ಚಡಪಡಿಸುತ್ತಿದ್ದಾರಲ್ಲ ಅನ್ನಿಸುತ್ತದೆ.

ಇಂಥವರ ದೇಶಸೇವೆಗೆ ನೆರವಾಗಲೆಂದೇ ಕರ್ನಾಟಕದ ಪತ್ರಿಕೋದ್ಯಮವೂ ತನ್ನ ಲೇಖನಿಯನ್ನು ಮುಡಿಪಾಗಿರಿಸಿದೆ. ನಿಮಗೆ ನೆನಪಿರಬೇಕು: ಇತ್ತೀಚೆಗೆ ಕನ್ನಡ ಪ್ರಭ ಡೀಕೇಶಿಯ ಮನೆಯ ಮೇಲೆ ಟ್ಯಾಕ್ಸ್‌ ದಾಳಿ ನಡೆದ ಸುದ್ದಿಯನ್ನು ಪ್ರಕಏಸಿತು. ನಿರೀಕ್ಷಿಸಿದಂತೆಯೇ ಅದರ ಮಾರನೆಯ ದಿನವೇ ಡಿ.ಕೆ.ಶಿವಕುಮಾರ ಒಂದು ಪ್ರೆಸ್‌ ಕಾನ್ಫರೆನ್ಸ್‌ ಕರೆದ. ನಾನು ಸತ್ಯ ಹರಿಶ್ಚಂದ್ರನಿಗಲ್ಲದೆ ಮತ್ಯಾರಿಗೂ ಹುಟ್ಟಿದವನಲ್ಲ ಎಂಬರ್ಥದಲ್ಲಿ ಮಾತನಾಡಿದ. ತಮಾಷೆಯೆಂದರೆ, ಡಿ.ಕೆ. ಶಿವಕುಮಾರ್‌ ಈ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ಇಂಗ್ಲೀಷಿನಲ್ಲಿ ಮಾತನಾಡಿದ. ‘ಇದ್ಯಾಕ್ರೀ ಇಂಗ್ಲೀಷೂ’ ಅಂತ ಕೇಳಿದುದಕ್ಕೆ,

‘ನ್ಯಾಷನಲ್‌ ಲೆವಲ್‌ನಲ್ಲಿ ಸುದ್ದಿಯಾಗಬೇಕಲ್ಲ? ಇಂಗ್ಲೀಷಿನಲ್ಲಿ ಮಾತಾಡದಿದ್ರೆ ನ್ಯಾಷನಲ್‌ ಟೀವಿಗಳಲ್ಲಿ ಅವರು ಅದನ್ನ ಹಾಕೋದು ಹೆಂಗೆ? ’ ಅಂತ ಉತ್ತರಿಸಿದೆ.

ಇದರರ್ಥವೇನು ಹೇಳಿ? ತನ್ನ ಮೇಲೆ tax ದಾಳಿ ನಡೆದಿಲ್ಲ ಎಂಬುದನ್ನು ತಾನು ನ್ಯಾಷನಲ್‌ ಛಾನಲ್‌ಗಳ ಮೂಲಕ ಸೋನಿಯಾ ಗಾಂಧಿಗೆ ಗೊತ್ತಾಗುವಂತೆ ಮಾಡಿದರೆ ಸಾಕು. ಇದು ತನ್ನ ವಿರೋಧಿಗಳ ಪಿತೂರಿ ಎಂಬುದನ್ನು ಆಕೆ ಅರ್ಥ ಮಾಡಿಕೊಂಡರೆ ಸಾಕು. ತನ್ನ ಮತದಾರ? ಅವನ್ಯಾವ ಗಿಡದ ತೊಪ್ಪಲು? ಅವನಿಗೆಂಥ ಸಮಝಾಯಿಷಿ ನಾನು ಕೊಡಬೇಕಿದೆ? ‘ಮುಚ್ಕಂಡು ಓಟಾಕ್ರೀ’ಎಂಬ ಧಾಟಿ ಶಿವಕುಮಾರನದು.

ನಾನಿದನ್ನು ಕೇವಲ ಡೀಕೇಶಿಯ ಕುರಿತಾಗಿ ಬರೆಯುತ್ತಿಲ್ಲ. ಡೀಕೀಶಿ ಎಂಬಾತ ಈ ಕೃಷ್ಣ ಸರ್ಕಾರದ, ಇದರ culture ನ ಒಬ್ಬ ಕುನ್ನಿ ಮಾತ್ರ. ಈತ ಇಂಗ್ಲೀಷಿನಲ್ಲಿ ಯಾಕೆ ಮಾತಾಡಿದ ಅಂದರೆ, ಈತನ ದೊರೆ ಎಸ್ಸೆಂ ಕೃಷ್ಣ ಕಳೆದ ನಾಲ್ಕೂವರೆ ವರ್ಷ ಅದನ್ನೇ ಮಾಡಿದ! ಪತ್ರಿಕೆಗಳನ್ನ ಒಲಿಸಿಕೊಂಡರೆ ಸಾಕು, ಟೀವಿ ಛಾನೆಲ್‌ಗಳನ್ನು ಓಲೈಸಿದರೆ ಸಾಕು, ಜನದ್ಯಾವ ಲೆಕ್ಕ? ಅವರಿಗ್ಯಾಕೆ ಉತ್ತರ ಕೊಡಬೇಕು ಅನ್ನುವ ಧಾಟಿಯಲ್ಲೇ ಕೃಷ್ಣ ರಾಜ್ಯವಾಳಿದರು. ಅದೇ ಸಂಸ್ಕೃತಿ ಡೀಕೇಶಿಯೆಂಬ ಈ ಕಾಂಗ್ರೆಸ್‌ ಕುನ್ನಿಗೂ ಬಂದಿದೆ. ಒಂದು ಚೂರು ಪಕ್ಕಕ್ಕೆ ಹೊಗಿ ವಿಜಯ ಮಲ್ಯನನ್ನೇ ಗಮನಿಸಿ. ಆತನ ಜಾಹೀರಾತಿನಲ್ಲಿ ಆತ ಬಳಸುವ ಕನ್ನಡ, ಅದರೆಡೆಗಿನ ನಿರ್ಲಕ್ಷ್ಯ ಹೇಗಿದೆಯೋ ಗಮನಿಸಿ. ಅವರಿಗೆಲ್ಲ ಮನಸ್ಸಿನಲ್ಲಿ ಇರುವುದು ಒಂದೇ. ಟೀವಿಯವರಿಗೆ, ಪತ್ರಿಕೆಗಳವರಿಗೆ ಕಾಸು ಬಿಸಾಕಿದರೆ, ಅವರು ತಮ್ಮನ್ನು ನಿಜ ನಾಯಕರೆಂದು project ಮಾಡುತ್ತಾರೆ. ಅವರು ಬರೆದದ್ದನ್ನೆಲ್ಲ, ತೋರಿಸಿದ್ದನ್ನೆಲ್ಲ ಜನ ನಂಬುತ್ತಾರೆ. ನಂಬಿದವರಿಗೆಲ್ಲ ತಮಗೆ ಓಟು ಹಾಕುತ್ತಾರೆ. ಇಷ್ಟೇ ತಾನೆ?

ಅವರ ಈ ಅನಿಸಿಕೆಯನ್ನು ನಮ್ಮ ಮಾಧ್ಯಮಗಳೂ ಖಚಿತಪಡಿಸಿಬಿಟ್ಟಿವೆ. ತೆರಿಗೆ ದಾಳಿಗೆ ಸಂಬಂಧಿಸಿದಂತೆ ಡೀಕೇಶಿ ಮಾಡಿದ ದರಿದ್ರಗೇಡಿ ಇಂಗ್ಲೀಷಿನ ಪ್ರೆಸ್‌ ಕಾನ್ಫರೆನ್ಸನ್ನೇ ನಾಡಿನ ಅಷ್ಟೂ ಪತ್ರಿಕೆಗಳು ಪ್ರಸಾದವೇನೋ ಎಂಬಂತೆ ಸ್ವೀಕರಿಸಿ ಮರುದಿನ ಪ್ರಕಟಿಸಿದವು. ಉದಯ ಟೀವಿಯ ನಿರ್ಲಜ್ಜತನವಂತೂ ಪರಮಾವಧಿ ಮಟ್ಟ ತಲುಪಿ ಬಿಟ್ಟಿದೆ. ಅದರಲ್ಲಿ ಬಿತ್ತರವಾಗುವ ಸುದ್ದಿಗಳನ್ನೇ ನೀಡಿ? ಎಷ್ಟೋ ಸಲ ಅವು ಕೃಷ್ಣನ ಪರವಾದ ಅಥವಾ ಕೃಷ್ಣ ಕುನ್ನಿ ಡೀಕೇಶಿ ಪರವಾದ ಹೇಳಿಕೆಗಳಂತೆ, ವಿವರಣೆಗಳಂತೆ ಮುಚ್ಚಳಿಕೆಗಳಂತೆ ಪ್ರಕಟವಾಗುತ್ತವೆ. ಈ ಮಾಧ್ಯಮಗಳು ಹುಟ್ಟಿಸುವ ಭ್ರಮೆ ಎಂಥದಿರುತ್ತದೆ ಅಂದರೆ, ರಾಜಕಾರಣಿಗಳು ಅದನ್ನು ನಂಬಿ ಪುಲಕಿತರಾಗುವುದು ಹಾಗಿರಲಿ: ತೇಜಸ್ವಿನಿಯಂತಹ ಒಬ್ಬ ಅವಿವೇಕಿ ಹೆಂಗಸು ಕೂಡ ತಲೆಬಾಚಿಕೊಂಡು ಪಾರ್ಲಿಮೆಂಟಿಗೆ ಹೊರಟುಬಿಡತ್ತೇನೆನ್ನುತ್ತಾಳೆ.

ಆದರೆ ಮಾಧ್ಯಮಗಳನ್ನು ಇವತ್ತು ಮತದಾರ ನಿಜಕ್ಕೂ ನಂಬುತ್ತಾನಾ? ನಂಬುವ ಹಾಗಿದ್ದರೆ ಇಂಡಿಯಾ ಟುಡೇ ಮತ್ತು ಉದಯ ಟೀವಿ ಬೊಂಕುವ ಕೃಷ್ಣರ, ಪರವಾದ ಸುಳ್ಳುಗಳನ್ನು ನಂಬಿ ನಿಜಕ್ಕೂ ಕೃಷ್ಣರನ್ನು ಬೆಸ್ಟು ಛೀಫ್‌ ಮಿನಿಸ್ಟರು ಅಂದುಕೊಳ್ಳುತ್ತಿರಲಿಲ್ಲವಾ? ಹಾಗಂದುಕೊಂಡಿರುವುದೇ ಹೌದಾದರೆ, ಕೃಷ್ಣ ಯಾಕೆ ದುಂದುಭಿ ಯಾತ್ರೆಗೆ ಹೊರಡಬೇಕು? ಬಂಗಾರಪ್ಪನ ಪಕ್ಷಾಂತರ ಕಂಡು ಯಾಕೆ ಪತರಗುಟ್ಟಬೇಕು? ವಿಶ್ವನಾಥ್‌ ದನಿಗೆ ಯಾಕೆ ಬೆಚ್ಚಬೇಕು? ಎಚ್ಕೆ ಪಾಟೀಲರನ್ನೇಕೆ ಈಗ ಕರೆದು ಅಚ್ಛಾ ಅಚ್ಛ ಮಾಡಬೇಕು? ತೀರ ಮಟ್ಟೆಣ್ಣನವರ್‌ನಂಥ ಪುಟ್ಟ ಹುಡುಗನಿಗೂ ಈ ಮುಖ್ಯ ಮಂತ್ರಿ ಈ ಪರಿ ಏಕೆ ಹೆದರಬೇಕು? ಲಿಂಗಾಯಿತರನ್ನೇಕೆ ಬೆನ್ನು ಬಿದ್ದು ಒಡೆಯಬೇಕು? ಚಿ ತೆ

ಎಸ್ಸೆಂ ಕೃಷ್ಣ ಎಂಥ ಅಭದ್ರತೆಯಿಂದ ನರಳುತ್ತಿರುವ ಸಣ್ಣ ಮನಸ್ಸಿನ ಮನುಷ್ಯ ಎಂಬುದಕ್ಕೆ ಒಂದು ಉದಾಹರಣೆಯಿದೆ ನೋಡಿ. ಹನೂರಿನ ನಾಗಪ್ಪ ಕಿಡ್ನಾಪ್‌ ಆದಾಗ, ಕೇವಲ ಕೃಷ್ಣರ ನಿರಾಸಕ್ತಿ, ಅಸಡ್ಡೆ ಮತ್ತು ನಿಷ್ಕಿೃಯತೆಯಿಂದಾಗಿಯೇ ಅವತ್ತು ಅವರ ಹತ್ಯೆಯಾಯಿತು. ಪರಿಮಳ ನಾಗಪ್ಪ ಅವರ ಬದುಕು ಶಾಶ್ವತವಾಗಿ ಕತ್ತಲಾಯಿತು. ಆದರೆ ಕೃಷ್ಣ ಹನೂರಿನ ಆ ಮನೆಯನ್ನು ಅಷ್ಟಕ್ಕೇ ಬಿಡಲಿಲ್ಲ. ಇಡೀ ಮನೆಯೇ ದಗ್ಧವಾಗಿ ಹೋಗಲಿ ಎಂಬ ಉದ್ದೇಶದಿಂದ ಪರಿಮಳ ಅವರ ಅಳಿಯನನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡು ಮನೆಗೆ ಮನೆಯನ್ನೇ ಒಡೆದುಬಿಟ್ಟರು ಆ ಅವಿವೇಕಿ ಅಳಿಯ ಕಿರಣ್‌, ಹನೂರು ಕ್ಷೇತ್ರದೊಳಕ್ಕೆ ಕಾಲಿಟ್ಟರೆ ಸಾಕು: ಕೆರದಲ್ಲಿ ಬಡಿದು ಕಳಿಸುತ್ತಾರೆ. ಆತ ಅಲ್ಲಿಂದ ಸ್ಪರ್ಧಿಸುವುದು ಕನಸು ಮನಸಿನಲ್ಲೂ ಸಾಧ್ಯವಿಲ್ಲ. ನಾಗಪ್ಪನವರ ಪತ್ನಿ ಅಲ್ಲಿಂದ ಗೆದ್ದೇ ಗೆಲುತ್ತಾರೆ. ಇದೆಲ್ಲ ಕೃಷ್ಣರಿಗೂ ಚೆನ್ನಾಗಿ ಗೊತ್ತಿದೆ. ಆದರೆ ಕ್ಷುದ್ರ ಮನಸ್ಸು ಸುಮ್ಮನಿದ್ದೀತು ಹೇಗೆ? ಅವರು ಪ್ರಯತ್ನಪೂರ್ವಕವಾಗಿ ಆ ಮನೆತನ ಹಾಳು ಬಿದ್ದು ಹೋಗಲಿ ಅಂತಲೇ ಅತ್ತೆಗೂ-ಅಳಿಯನಿಗೂ ಮಧ್ಯೆ ವೈಮನಸ್ಸು ತಂದರು.

ಈ ಕೆಲಸವನ್ನು ಕೃಷ್ಣ ಬರಲಿರುವ ಚುನಾವಣೆಯಲ್ಲಿ ಪ್ರತಿ ಕ್ಷೇತ್ರ, ಪ್ರತಿ ಪಕ್ಷದಲ್ಲೂ ಮಾಡಲಿದ್ದಾರೆ. ಅವರ ಸ್ವಭಾವದಲ್ಲೇ ಒಂದು ಮನೆಮುರುಕುತನವಿದೆ. ಈ ಮನೆಮುರುಕುತನವೇ ಅವರನ್ನು ನಾಳಿನ ಚುನಾವಣೆಗಳಲ್ಲಿ ನಾಶ ಮಾಡಲಿದೆ.

ನಾನು ಈ ತನಕ ಬರೆದ ಸಂಗತಿಗಳು ಕರ್ನಾಟಕದ ಎಲ್ಲ ಪತ್ರಕರ್ತರಿಗೂ ಗೊತ್ತಿವೆ. ಕೆಲವರು ಸ್ವಭಾವತಃ ಸಾತ್ವಿಕರು. ಅವರು ನೇರವಾಗಿ ಬರೆಯಲೊಲ್ಲರು. ಮತ್ತೆ ಕೆಲವರನ್ನು ಕೃಷ್ಣ ಸರ್ಕಾರ ಖರೀದಿಸಿದೆ. ಅವರು ಬರೆಯಲರರು. ವಿಶ್ವನಾಥ್‌ ಥರದವರು ಸರ್ಕಾರದ ವಿರುದ್ಧ ಮಾತನಾಡಲು ಆರಂಭಿಸುತ್ತಿದ್ದಂತೆಯೇ, ‘ಇಷ್ಟೇ ಅಲ್ವಾ?ಮತ್ತೇನಿದೆ ಸಾರ್‌? ನಾವು ಬರೋಣವಾ? ’ಅಂತ ಕೆಲವು ಹಿರಿಯ(!) ಪತ್ರಕರ್ತರು ಪತ್ರಿಕಾಗೋಷ್ಠಿ ಮುಗಿದೇ ಹೋಯಿತೆಂಬಂತೆ ಎದ್ದು ಬಿಡುತ್ತಾರೆ. ಬರೆಯುವುದು ಹಾಗಿರಲಿ, ಕೃಷ್ಣರ ವಿರುದ್ಧ ಯಾರಾದರೂ ಮತನಾಡಿದರೂ ಅವರ ಕಣ್ಣ ಮುಂದೆ ಬಿ.ಡಿ.ಎ. ಸೈಟುಗಳು ತಮ್ಮ ಚೆಕ್ಕು ಬಂದಿಯ ಸಮೇತ ಕದಲಾಡುತ್ತವೆ. ಒಂದು ಕಾಲಕ್ಕೆ ಪಕ್ಷದ ವಿರುದ್ಧ ಬಂಡಾಯವೆದ್ದ ಒಬ್ಬ ಸಚಿವ ಅಥವಾ ಶಾಸಕ ‘ I will go to the press ‘ ಅಂತ ಗುಡುಗಿದರೆ, ಪಕ್ಷದ ಮುಖಂಡರ ಮುಖದಲ್ಲಿ ಭೀತಿ ಮೂಡುತ್ತಿತ್ತು. ಆದರೆ ಇವತ್ತು ಬಂಡಾಯವೆದ್ದ ಮಂತ್ರಿ ಅಥವಾ ಶಾಸಕ ಸಿಡಿದು ಈಚೆಗೆ ಬಂದರೆ, ಅಲ್ಲಿ ಪ್ರೆಸ್‌ ಎಲ್ಲಿದೆ?

ಅದು ಸೈಟು ಅಲೆಯಲು ಹೊರಟು ಹೋಗಿದೆ.

ಇಂಥ ಪರಿಸ್ಥಿತಿ ನಿರ್ಮಿಸಿದವರು ಕೃಷ್ಣ ಮತ್ತು ಅವರ ಕುನ್ನಿ ಡೀಕೇಶಿ. ಆದರೂ ಸಂತೋಷದ ಸಂಗತಿಯೆಂದರೆ, ಕೃಷ್ಣರ ವಿರುದ್ಧ ದನಿಯೆತ್ತುವ ಜನ ಪತ್ರಿಕಾ ಪ್ರಪಂಚದಲ್ಲಿ ಇದ್ದೇ ಇದ್ದಾರೆ. ಅಂತೆಯೇ, ನಾವು ಬರೆದರೂ-ಬರೆಯದಿದ್ದರೂ ಕರ್ನಾಟಕದ ಮತದಾರ ಬೆಸ್ಟು ಛೀಫ್‌ ಮಿನಿಸ್ಟರನನ್ನು ತುದಿಗಣ್ಣಿನಲ್ಲಿ ಗಮನಿಸುತ್ತಲೇ ಇದ್ದಾನೆ. ಆನ್‌ಲೈನ್‌ ಲಾಟರಿ, ಕಳಪೆ ಕಾಮಗಾರಿ, ಐಟಿ-ಬಿಟಿ ಹೆಸರಿನ ದಗಾ, ಮ್ಯಾಂಗನೀಸ್‌ ಕರ್ಮಕಾಂಡ, ರೈತರ ಆತ್ಮಹತ್ಯೆ, ಡೀಕೇಶಿಯಂಥ ದುರ್ಯೋಧನನ ಅಟ್ಟಹಾಸ-ಹೀಗೆ ಎಲ್ಲವನ್ನೂ ಮತದಾರ ಕಣ್ಣಾರೆ ನೋಡಿದ್ದಾನೆ.

ಅವನಿಗೆ ಪ್ರೆಸ್‌ ಕಾನ್ಫರೆನ್ಸುಗಳೆಂಬ ಹಗಲುವೇಷಗಳು ಬೇಕಿಲ್ಲ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more