• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೋವೆಯ ಬೀಚಿನಲ್ಲಿ ಕನ್ನಡದ ಕೂಲಿಕಾರ ಮತ್ತು ಮೈ ಕಸುಬಿನವಳು!

By Staff
|
Ravi Belagere on Thatskannada.com ರವಿ ಬೆಳಗೆರೆ
ಬೆಂಗಳೂರಿನಲ್ಲಿ ಒಂದೇ ಜಿಟಿ-ಜಿಟಿ. ಹೊಟ್ಟೆಪಾಡಿಗಾಗಿ ದುಡಿಯಲೇಬೇಕೆಂಬ ದರ್ದೊಂದು ಇಲ್ಲದೆ ಹೋದರೆ, ನಿಜಕ್ಕೂ ಬೆಚ್ಚಗಿನ ದೇವನನ್ನಾದರೂ ಕುಡಿದು, ಮೆತ್ತಗಿನದೇನನ್ನಾದರೂ ತಿಂದು, ಕಾಲು ಕವುಚಿಟ್ಟುಕೊಂಡು ಮಲಗಿಬಿಡಲು ಹೇಳಿ ಮಾಡಿಸಿದಂಥ ವಾತಾವರಣ. ಮೊಬೈಲಿಗೆ ಯಾರು ಫೋನು ಮಾಡಿದರೂ ನಾನು ಕೇಳುವುದು ಒಂದೇ ಪ್ರಶ್ನೆ: ನಿಮ್ಮೂರಲ್ಲಿ ಮಳೆ ಇದೆಯಾ? ಬಹುಶಃ ಇಡೀ ಕರ್ನಾಟಕದಲ್ಲಿ ಎಲ್ಲ ಕಡೆ ಮಳೆಯಿದೆ.

ಆದರೆ ಗೋವೆಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಸಾವಿರಾರು ಕನ್ನಡಿಗರ ಕಣ್ಣೀರೂ ಬೆರೆಯುತ್ತಿದೆ. ನಮ್ಮ ಸರ್ಕಾರದವರು, ಧರಮ ಸಿಂಗು, ವಾಟಾಳ್‌ ನಾಗರಾಜು-ಇವರೆಲ್ಲ ಅದನ್ನು ಗಮನಿಸಿದ್ದಾರಾ? ಗೊತ್ತಿಲ್ಲ. ಕನ್ನಡಪ್ರಭ ದಂತಹ ಜಾಗೃತ ಪತ್ರಿಕೆಯಾಂದು ಮಾತ್ರ ಸರಿಯಾಗಿಯೇ ಗಮನಿಸಿದೆ. ವಿಷಯವೇನೆಂದರೆ, ಗೋವೆಯ ಬಯಾನಾ ಎಂಬ ಕುಖ್ಯಾತ ಬೀಚ್‌ನಿಂದ ಸುಮಾರು 850 ಮನೆ-ಗುಡಿಸಲುಗಳಲ್ಲಿದ್ದ ಸಾವಿರಾರು ಕನ್ನಡಿಗರನ್ನು ಗೋವೆಯ ಪೊಲೀಸರು, ಈಚೆಗೆಳೆದು ಮಳೆ ಸುರಿಯುವ ಕಡಲದಂಡೆಗೆ ಬಿಸಾಡಿ, ಲಾಠಿಗಳಲ್ಲಿ ಜಪ್ಪುತ್ತಿದ್ದಾರೆ. ನಂತರ ಡೋಜರ್‌ಗಳನ್ನು ತಂದು ಗುಡಿಸಲು-ಮನೆಗಳೊಳಗಿನ ಪಾತ್ರೆ ಪಗಡಗಳ ಸಮೇತ ಎಲ್ಲವನ್ನೂ ನೆಲಸಮ ಮಾಡಿ ನುಚ್ಚು ನುರಿ ಮಾಡುತ್ತಿದ್ದಾರೆ. ಒಂದೇ ಹೊಡೆತಕ್ಕೆ, ಸುಮಾರು ನಾಲ್ಕು ಸಾವಿರ ಕನ್ನಡಿಗರು ಗೋವೆಯಲ್ಲಿ ಅನಾಥರಾಗಿ ನಿಂತಿದ್ದಾರೆ. ಆ ಪೈಕಿ ಕನಿಷ್ಠ ಎರಡು ಸಾವಿರ ಜನ ಹೆಣ್ಣು ಮಕ್ಕಳು. ಹೆಚ್ಚಿನವರು ವೇಶ್ಯೆಯರು!

ಪ್ರತಿಯಾಂದು ದಿನ ಪತ್ರಿಕೆಯೂ ಹೊರ ನಾಡ ಕನ್ನಡಿಗರಿಗಾಗಿ ಅಂತ ಒಂದು ಕಾಲಂ ಇಟ್ಟಿರುತ್ತದೆ. ಅಲ್ಲಿಯ ಕನ್ನಡ ಸಂಘ, ಅಲ್ಲಿಯ ಸಾಹಿತಿಗಳ ಸನ್ಮಾನ, ಹೊಟೇಲಿನವರ ಸಭೆಗಳು ಹೀಗೆ ಕೈಗೆ ಸಿಕ್ಕ ಸುದ್ದಿ ಹಾಕಿ ಅಷ್ಟಿಷ್ಟು ಜಾಹಿರಾತೂ ಎತ್ತುತ್ತವೆ. ಆದರೆ ಅಲ್ಲಿನ ಕನ್ನಡಿಗರ ನಿಜವಾದ ಕ್ರೈಸಿಸ್‌ನ ಕಡೆಗೆ ಪತ್ರಿಕೆಗಳ ಕಣ್ಣು ಬೀಳುವುದೇ ಇಲ್ಲ. ಇನ್ನು ವಾಟಾಳು, ಚಂಪಾ, ಬರಗೂರು, ಮುಂತಾದ ಕನ್ನಡದ ಮುಂದಾಳುಗಳು ಹೊರನಾಡ ಕನ್ನಡಿಗರಿಗೆ ನೌಕರಿ, ಅಲ್ಲೊಂದು ಕನ್ನಡ ಶಾಲೆ, ಹೊರನಾಡ ಕನ್ನಡಿಗರು ಹಪ್ಪಳ-ಬಾಸುಂದಿ ಬಗ್ಗೆ ಬರೆದ ಪುಸ್ತಕಗಳಿಗೆ ಅಕಾಡೆಮಿ ಪ್ರಶಸ್ತಿ-ಇಂಥ ಸಂಗತಿಗಳ ಬಗ್ಗೆ ಬಾಯಿ ಹರಕೊಂಡು ಮಾತನಾಡುತ್ತಾರೆಯೇ ಹೊರತು, ಅಲ್ಲಿನ ಕನ್ನಡಿಗರ ಬದುಕಿನ ಮೂಲ ಕಷ್ಟಗಳ ಬಗ್ಗೆ ಉಸಿರೆತ್ತುವುದಿಲ್ಲ.

Ravi Belagere writes on Goa Kannadigas tragedyಗೋವೆಯ ಕನ್ನಡಿಗರ ಬಗ್ಗೆ ನಿಷ್ಠುರವಾಗಿ ನಾಲ್ಕು ಮಾತು ಬರೆಯುತ್ತೇನೆ: ದಯವಿಟ್ಟು ಸಹಿಸಿಕೊಳ್ಳಿ. ನೀವು ಇವತ್ತಿಗೂ ಗೋವೆಗೆ ಹೋಗಿ ಅಲ್ಲಿನ ಬೀದಿಗಳಲ್ಲಿ ತಿರುಗಿ ಬನ್ನಿ. ಮಧ್ಯಮ ನೌಕರಿಗಳನ್ನು ಹಿಡಿದು ಮನೆಗಿನೆ ಮಾಡಿಕೊಂಡಿರುವ ಶೇಕಡಾ ಹತ್ತರಷ್ಟು ಕನ್ನಡಿಗರು ಸಿಗಬಹುದೇನೋ? ಆದರೆ ಉಳಿದ 90 ಪರ್ಸೆಂಟಿನಷ್ಟು ಜನ ಬೀದಿಗಳಲ್ಲಿಯೇ ಇದ್ದಾರೆ. ಅವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದವರು. ಗೋವೆಯ ಮಡಗಾಂವ್‌, ಪಣಜಿ ಮುಂತಾದ ಪುರ ಪಟ್ಟಣಗಳಲ್ಲಿ ನೀವು ಯಾವುದೇ ಕೂಲಿಯವನನ್ನು ತಡೆದು ನಿಲ್ಲಿಸಿ ವಿಚಾರಿಸಿದರೂ ಅವನು-ಕನ್ನಡಿಗ. ಹಾಗೆಯೇ ಬಯಾನಾದಂಥ ಕುಖ್ಯಾತ ಬೀಚುಗಳಲ್ಲಿ ಯಾವ ವೇಶ್ಯೆಯನ್ನು ನಿಲ್ಲಿಸಿ ಮಾತನಾಡಿಸಿದರೂ-ಆಕೆ ಕನ್ನಡತಿ! ಪರಿಶೀಲಿಸಿ ನೋಡಿದರೆ ಕನ್ನಡಿಗರೆಲ್ಲರೂ ಉತ್ತರ ಕರ್ನಾಟಕದ ವ್ಯಾಪಕ ಬರಪೀಡಿತ ಪ್ರದೇಶಗಳಿಂದಲೇ ವಲಸೆ ಹೋದವರು. ಬಿಟ್ಟರೆ ಸವದತ್ತಿ , ಅತ್ತ ಮಹಲಿಂಗಪುರದಂತಹ ಬಡ್ಡಿ ಶೋಷಣೆಯ ತಾಲೂಕುಗಳಿಂದ ಬದುಕಲಾಗದೆ ಓಡಿ ಹೋದವರು. ಅವರ್ಯಾರೂ ವೃತ್ತಿಪರ ವೇಶ್ಯೆಯರಲ್ಲ. ಅವರೆಲ್ಲ ರೈತರ ಮನೆಗಳ ಹೆಣ್ಣು ಮಕ್ಕಳು. ಬೀಳದ ಮಳೆ, ಕಾಡುವ ಬರ, ಬಡ್ಡಿ ದೊರೆಗಳ ಹಿಂಸಾಚಾರ-ಇವುಗಳಿಂದಾಗಿಯೇ ಬದುಕಿದರೆ ಸಾಕು ಅಂದುಕೊಂಡು ಗೋವೆಗೆ ಹೋದವರು. ಹಾಗೆ ಹೋಗಿ ಗೋವೆಯ ಕಡಲ ಕಿನಾರೆಗಳಲ್ಲಿ ಗಾಳಿಗೆ ಸಿಕ್ಕ ದೀಪದಂತೆ ನಿಂತರೆ ಏನಾಗಬಹುದೋ, ಅದೆಲ್ಲವೂ ಅವರಲ್ಲಿ ಅನೇಕರಿಗೆ ಆಗಿದೆ. ಹೆಚ್ಚಿನವರು ಕೂಲಿಗಳಾಗಿದ್ದಾರೆ. ಅವರ ಮನೆಯ ಹೆಣ್ಣು ಮಕ್ಕಳು ವೇಶ್ಯೆಯರಾಗಿದ್ದಾರೆ. ಉತ್ತರ ಕರ್ನಾಟಕದಿಂದ ಇವತ್ತಿಗೂ ಪ್ರತಿರೈಲು, ಪ್ರತಿಬಸ್ಸು- ಪ್ರತೀ ರಾತ್ರಿ ಹೆಣ್ಣು ಮಕ್ಕಳನ್ನು ಮೂರು ನಿಶ್ಚಿತ ತಾಣಗಳಿಗೆ ಒಯ್ಯುತ್ತವೆ. ಒಂದು ಬಸ್ಸು ಹುಡುಗಿಯರನ್ನು ಮುಂಬಯಿಗೆ ಒಯ್ಯುತ್ತದೆ, ಇನ್ನೊಂದು ಬಸ್ಸು ಪುಣೆಗೆ ತಲುಪಿಸುತ್ತದೆ. ಮೂರನೆಯದು ಗೋವೆಯ ಬಯಾನಾ ಬೀಚಿಗೆ! ಅವೇ ಬಸ್ಸುಗಳು ಕೆಲವು ತಿಂಗಳುಗಳ ನಂತರ ಹೊತ್ತು ತರುವುದು ಮದ್ದಿಲ್ಲದ ಖಾಯಿಲೆಗಳ ಗೂಡಾದ ಕುಟುಕು ಜೀವದ ಅವೇ ಹೆಣ್ಣುಗಳನ್ನ! ಹೀಗಾಗಿ ಉತ್ತರ ಕರ್ನಾಟಕದಲ್ಲಿ ಏಡ್ಸ್‌ ಸರ್ವವ್ಯಾಪಿ. ಕನ್ನಡಿಗರು ಮತ್ತು ಸರ್ಕಾರಗಳು ಇದನ್ನು ಒಪ್ಪಲಿ ಬಿಡಲಿ: ನಾನು ಬರೆದ ಈ ಮಾತುಗಳಲ್ಲಿ ಸಾಸಿವೆಯಷ್ಟೂ ಸುಳ್ಳಿಲ್ಲ. ಈತನಕ ನಮ್ಮ ನಾಡಿನ ಈ ಹತಭಾಗ್ಯ ಹೆಣ್ಣುಮಕ್ಕಳು ಗೋವೆ, ಪುಣೆ, ಮುಂಬಯಿಗಳಿಗೆ ರವಾನೆಯಾಗುವುದನ್ನು ಒಂದೇ ಒಂದು ಸರ್ಕಾರ, ಒಬ್ಬೇ ಒಬ್ಬ ಪೊಲೀಸು ಮತ್ತು ಒಂದೇ ಒಂದು (ಫಂಡು ನುಂಗುವ) ವಾಲಂಟರಿ ಆರ್ಗನೈಸೇಷನ್ನು ತಡೆದಿಲ್ಲ , ತಡೆಯುವ ಪ್ರಯತ್ನ ಮಾಡಿಲ್ಲ.

ಈ ಹಿಂದೆಯೂ ಒಮ್ಮೆ ಈ ಕಥಾನಕವನ್ನು ಬರೆದಿದ್ದೇನೆ ಅಂತ ನನಗೆ ನೆನಪಿದೆ. ಬೆಳಗಾವಿ ಜಿಲ್ಲೆಯ ಬಡಾಲ ಅಂಕಲಗಿ ಅನ್ನೋ ಗ್ರಾಮದಿಂದ ಒಂದು ಉಪ್ಪಾರರ ಮತ್ತು ಒಂದು ಕುರುಬರ ಕುಟುಂಬ ಗೋವೆಗೆ ವಲಸೆ ಹೋದವು: ಬರಕ್ಕೆ ಸಾಲಕ್ಕೆ ಹೆದರಿ. ಹಾಗೆ ಹೋದ ಪೈಕಿ ಒಂದು ಕುಟುಂಬ ಕೊಂಚ ದುಡಿದು ಬದುಕಿತು. ಇನ್ನೊಂದು ಕುಟುಂಬದ ಒಡೆಯ ಕುಡಿತಕ್ಕೆ ಬಿದ್ದ. ಕಡೆಗೆ ಒಂದೇ ಒಂದು ಚೀಲ ಜೋಳಕ್ಕಾಗಿ ತನ್ನ ಹೆಂಡತಿಯನ್ನು ಇನ್ನೊಂದು ಕುಟುಂಬದ ಒಡೆಯನಿಗೆ ಮಾರಿಬಿಟ್ಟ !

ಹಾಗೆ ಮಾರಲ್ಪಟ್ಟ ಹೆಂಗಸು, ಮತ್ತೆ ತನ್ನ ಗಂಡನ ಬಳಿಗೆ ಹಿಂತಿರುಗಲು ಒಪ್ಪಲಿಲ್ಲ. ವಾಪಸು ಬಡಾಲ ಅಂಕಲಗಿಗೆ ಎರಡೂ ಕುಟುಂಬ ಹಿಂತಿರುಗಿದವು. ಮಾರಲ್ಪಟ್ಟ ಹೆಂಗಸಿಗಾಗಿ ಕದನ ನಡೆಯಿತು. ಕಡೆಗೆ ಕುಡುಕ ಗಂಡ, ಇನ್ನೊಂದು ಕುಟುಂಬದ ಹತ್ತೂ ಜನರನ್ನು ಮನೆಯಾಂದರಲ್ಲಿ ಹಾಕಿ ಕೂಸು-ಕುನ್ನಿ ಸಮೇತ ಎಲ್ಲರನ್ನೂ ಸುಟ್ಟುಬಿಟ್ಟ. ದುರಂತವೆಂದರೆ, ಆ ಬೆಂಕಿಯಿಂದ ಅದೇ ಒಬ್ಬ ಹೆಣ್ಣು ಮಗಳು ಮಾತ್ರ ಪಾರಾಗಿ ಹೊರಬಿದ್ದು ನಿಡಸೋಶಿ ಕ್ರಾಸಿನ ತನಕ ಓಡಿ ಬಂದು ಪೊಲೀಸರಿಗೆ, ತನ್ನ ಮೂಲ ಗಂಡನ ಮೇಲೆ ದೂರು ಕೊಟ್ಟಳು.

ಬಡತನಕ್ಕೆ ಬಿದ್ದವರ, ಊರುಬಿಟ್ಟವರ ಕತೆಗಳು ಇಷ್ಟು ದಾರುಣವಾಗಿರುತ್ತದೆ. ವಿವರಿಸಿ ಹೇಳಿದರೆ ಇವೆಲ್ಲ ಕ್ರೈಂ ಕತೆಗಳಾಗುತ್ತವೆಯೇ ಹೊರತು, ಊರುಬಿಟ್ಟು ಹೋದವರ ಪಾಡೇನು ಅಂತ ಯೋಚಿಸುವ ಒಬ್ಬ ಕನ್ನಡದ ನಾಯಕ ನಮ್ಮಲ್ಲಿ ಕಾಣಸಿಗುವುದಿಲ್ಲ.

ಇನ್ನೂ ಒಂದು ನಿಷ್ಠುರದ ಮಾತು ಹೇಳುತ್ತೇನೆ ಕೇಳಿ: ಗೋವೆಯಂತಹ ಬೀಚುಗಳ ರಾಜ್ಯಕ್ಕೆ ಹೋದ ನಮ್ಮ ಕನ್ನಡಿಗರಾದರೂ ಗಂಭೀರವಾಗಿ ಬಾಳುತ್ತಾರಾ? ಅದೂ ಇಲ್ಲ. ನಮ್ಮ ನೆಲದ ರೈತ ಮೂಲತಃ ನೈರ್ಮಲ್ಯದ ಕಡೆಗೆ ಗಮನವಿಲ್ಲದವನು. ನಮ್ಮ ಹಳ್ಳಿಗಳನ್ನೇ ನೋಡಿ: ನಿರ್ಮಲ ಕರ್ನಾಟಕ ದಂಥ ಪ್ರತಿ ಯೋಜನೆಯನ್ನು ಡಿಫೀಟ್‌ ಮಾಡಿದ್ದಾನೆ. ಊರ ಮುಂದೆಯೇ ಸಾರ್ವಜನಿಕ ಪಾಯಖಾನೆ(ಬಯಲುಗಳು) ಸೃಷ್ಟಿಯಾಗುತ್ತವೆ. ಇಂಥ ರೈತ ಗೋವೆಗೆ ಹೋದಾಗ ಅಲ್ಲಿ ಮಾಡಿದ್ದೂ ಅದನ್ನೇ. ತುಂಬ ಶುಭ್ರವಾಗಿದ್ದ ಗೋವೆಯ ಬೀಚುಗಳನ್ನು ಉದ್ದೋ ಉದ್ದಕ್ಕೆ ಸಾರ್ವಜನಿಕ ಪಾಯಖಾನೆಗಳನ್ನಾಗಿ ಮಾಡಿದುದರಲ್ಲಿ ನಮ್ಮ ಕನ್ನಡಿಗರ ಪಾಲು ದೊಡ್ಡದೇ ಇದೆ. ವರ್ಷಕ್ಕೊಮ್ಮೆ ವಲಸೆ ಬರುವ ವಿದೇಶೀಯರಾದರೂ ಬೀಚುಗಳ ನಿರ್ಮಲತೆಯ ಬಗ್ಗೆ ಯೋಚಿಸುತ್ತಾರೆ, ನಮ್ಮವರು ಯೋಚಿಸುವುದಿಲ್ಲ. ಮೊದಲೇ ಗೋವನ್ನರು ವಿಲಾಸಪ್ರಿಯರು. ಅಲ್ಲಿ ಗಂಡಸರು ದುಡಿಯುವವರಲ್ಲ. ಪೋರ್ಚುಗೀಸಿ ದೊರೆತನ ಅವರ ರಕ್ತದಲ್ಲೇ ಇದೆ.

ಸಂಜೆ ಆರಾದರೆ ಸಾಕು, ಎಂಥ ಮಜಬೂತು ವ್ಯಾಪಾರವಿದ್ದರೂ It is time to drink ಅಂತ ಘೋಷಿಸಿ ಎದ್ದು ಹೋಗಿಬಿಡುತ್ತಾರೆ. ಅವರಿಗೆ ದೇಹಕಷ್ಟ ಒಲ್ಲದು. ಐಷಾರಾಮಿಯಾದ, ಸುಂದರವಾದ, ಕ್ಲೀನ್‌ ಆದ ಬದುಕು ಬೇಕು, ಆ ಮಾತು ಹಾಳುಬಿದ್ದು ಹೋಗಲಿ: ಅವರ ಸುಂದರವಾದ, ಐಷಾರಾಮಿಯಾದ, ಕ್ಲೀನ್‌ ಆದ ಬೀಚುಗಳನ್ನು ನಮ್ಮ ನೆಲದ ವಲಸಿಗರು ಪಾಯಖಾನೆಗಳನ್ನಾಗಿ ಪರಿವರ್ತಿಸಿದರೆ ಗೋವೆಯ ಸೋಮಾರಿ ಸಹಿಸಿಯಾನಾದರೂ ಹೇಗೆ? ಆತನಿಗೆ ನಮ್ಮವರ ಮೇಲೆ ಅನೇಕ ದೂರುಗಳಿವೆ. ನೀವು ಕೊಳಕರು, ನಮ್ಮ ನೆಲ ಹಾಳು ಮಾಡಿದ್ದೀರಿ. ನಿಮ್ಮ ಹೆಂಗಸರು ವೇಶ್ಯೆಯರು. ಇಲ್ಲಿ ಖಾಯಿಲೆ ತಂದಿಟ್ಟಿದ್ದಾರೆ. ನಿಮ್ಮ ಕೊಳಕುತನ, ಖಾಯಿಲೆಗಳಿಂದಾಗಿ ನಮ್ಮ ಪ್ರವಾಸೋದ್ಯಮ ಬೆಳೆಯುತ್ತಿಲ್ಲ. ವಿದೇಶೀಯರು ಬರಲು ಅಸಹ್ಯಿಸಿಕೊಳ್ಳುತ್ತಿದ್ದಾರೆ. ಅವರೇ ಬರದಿದ್ದರೆ, ನಮ್ಮ ಊಟದ ಗತಿಯೇನು?

ಗೋವನ್ನರು ಕೇಳುವ ಈ ಪ್ರಶ್ನೆಗಳಲ್ಲೂ ಸತ್ಯವಿದೆ. ಬೀಚುಗಳು ಅವರಿಂದಲೂ ಹೊಲಸಾಗಿರಬಹುದು, ವೇಶ್ಯೆಯರು ಆ ನೆಲದವರೂ ಇರಬಹುದು. ಆದರೆ ಬೇರೆಯವರ ಮನೆಯ ಮಕ್ಕಳು ಬಂದು ನಮ್ಮ ಅಂಗಳದಲ್ಲಿ ಕೊಳೆ ಹಾಕಿದಾಗ ಬರುವಷ್ಟು ಸಿಟ್ಟು ನಮ್ಮ ಮನೆಯ ಮಕ್ಕಳು ಹಾಕಿದಾಗ ಬರುವುದಿಲ್ಲವಲ್ಲ ? ಇಲ್ಲಿ ಬೆಂಗಳೂರಿನಲ್ಲಿ ನಾವು ತಮಿಳರನ್ನ, ಮಲಯಾಳಿಗರನ್ನ ಬಯ್ಯುವುದಿಲ್ಲವೇ: ಕನ್ನಡ ಹಾಳುಮಾಡಿದಿರಿ ಅಂತ? Actual ಆಗಿ, ನಾವೇ ಇಂಗ್ಲಿಷು ಕಲಿತು ಕನ್ನಡ ಮರೆತಿದ್ದೇವೆ. ಹಾಗೆಯೇ ಗೋವನ್ನರಿಗೆ ಕನ್ನಡಿಗರ ಮೇಲೆ ಸಿಟ್ಟು ಬಂದಿದೆ. ಹೈಕೋರ್ಟಿನಿಂದ ಅಪ್ಪಣೆ ತಂದು ಕನ್ನಡಿಗರ ಮನೆಮನೆ ಹುಡುಕಿ ಕೆಡವತೊಡಗಿದ್ದಾರೆ. ಬೀದಿಗೆಳೆದಿದ್ದಾರೆ. ದೊಡ್ಡ ಗಲಾಟೆಗಳಾಗಿಹೋಗಿದೆ.

ಇಂಥ ಸ್ಥಿತಿಯಲ್ಲಿ ನಮ್ಮ ನಾಯಕರೇನು ಮಾಡಬೇಕು? ಮೊದಲು ಧರ್ಮಸಿಂಗ್‌ ಗೋವೆಯ ಮುಖ್ಯಮಂತ್ರಿಯಾಂದಿಗೆ ಮಾತನಾಡಿ ಕನ್ನಡಿಗರಿಗೆ ರಕ್ಷಣೆ ಕೊಡಿಸಬೇಕು. ಅನಂತರ ಉತ್ತರ ಕರ್ನಾಟಕದಿಂದ ಕಡೆಪಕ್ಷ ಎಷ್ಟು ಜನ ಗೋವೆಗೆ, ಮಹಾರಾಷ್ಟ್ರಕ್ಕೆ ಹೀಗೆ ವಿಧಿಯಿಲ್ಲದೆ ವಲಸೆ ಹೋಗಿದ್ದಾರೆ? ಅವರ ಸ್ಥಿತಿಗತಿಗಳೇನು? ಅವರನ್ನು ವಾಪಸು ಕರೆತಂದು ಪುನರ್ವಸತಿ ಕಲ್ಪಿಸಲು ಸಾಧ್ಯವೇ? ಅವರ ಆರೋಗ್ಯಗಳ ಗತಿಯೇನು- ಅಂತ ಒಂದು ಸಮೀಕ್ಷೆ ಮಾಡಿಸಬೇಕು. ಪ್ರತೀ ನವೆಂಬರಿಗೂ, ಅಕಾದೆಮಿಗಳ ರಚನೆಯ ಟೈಮಿಗೂ, ಹೋ.. ಕನ್ನಡ ಅಂತ ಬಡಿದುಕೊಳ್ಳುವ ನಾಯಕರು, ಬುದ್ಧಿಜೀವಿಗಳೂ, ಅಕಾದೆಮಿಗಳ ಪ್ಯಾರಾಸೈಟುಗಳು- ಕಡೇ ಪಕ್ಷ ಒಂದು ಸಲ ಗೋವೆಗೆ ಹೋಗಿ ಸಂತ್ರಸ್ತಗೊಂಡ ಅಲ್ಲಿನ ಕನ್ನಡಿಗರನ್ನು ಕಂಡು, ಸಾಂತ್ವನ ಹೇಳಿ, ಅವರ ಪರವಾಗಿ ಧರಮ್‌ ಸಿಂಗ್‌ ಸರ್ಕಾರಕ್ಕೆ ಅವರ ಸಮಸ್ಯೆಗಳನ್ನು ವಿವರಿಸಿ ಮನವಿಪತ್ರ ಕೊಡಬೇಕು. ಇರುವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಒಂದಾದರೂ ಮಹಿಳಾ ಸಂಘಟನೆ, ತನ್ನ ಕಾರ್ಯಕರ್ತೆಯರನ್ನು ಗೋವೆಗೆ ಕಳಿಸಿ ಅಲ್ಲಿನ ಹೆಣ್ಣು ಮಕ್ಕಳ ಸಂಕಟ, ಸಂಕಷ್ಟಗಳನ್ನು ವರದಿ ಮಾಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು.

ಇದೆಲ್ಲ ಸಾಧ್ಯವೇ?

ಸಾಧ್ಯವಾಗದಿದ್ದರೆ, ಇನ್ನು ಮುಂದೆ ಕನ್ನಡದ ಬಗ್ಗೆ ಕೂಗೆಬ್ಬಿಸುವವರನ್ನು ತಿರುಗಿಯೂ ನೋಡದೆ ಮುಂದಕ್ಕೆ ನಡೆದಾರು ಜನ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more