• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಪಂಚ ನಾವಂದುಕೊಂಡಷ್ಟು ಒಳ್ಳೆಯದೂ ಅಲ್ಲ !

By Staff
|
Ravi Belagere on Thatskannada.com ರವಿ ಬೆಳಗೆರೆ
ಅದೊಂದು ಫೈಲು ಮುಟ್ಟಲು ಇವತ್ತಿಗೂ ಹಿಂಜರಿಕೆಯಾಗುತ್ತದೆ ನನಗೆ. ಆ ಫೈಲು ಪ್ರತಿ ನಿತ್ಯ, ಪ್ರತಿಫೋಸ್ಟಿಗೊಂದು ಸಲ ಬೆಳೆಯುತ್ತದೆ, ದಪ್ಪವಾಗುತ್ತ ಹೋಗುತ್ತದೆ. ಅದರ ಹೆಸರು‘ಸಮಾಧಾನ’. ಕನ್ನಡದಲ್ಲಿ ಉಳಿದುಕೊಂಡಿರುವ ಏಕೈಕ ಆರೋಗ್ಯವಂತ, ಯಶಸ್ವೀ ಪಾಕ್ಷಿಕ ಪತ್ರಿಕೆ ನನ್ನ ‘ಓ ಮನಸೇ... ’, ಅದರ ಒಂದು ಅಂಕಣದ ಹೆಸರೇ ‘ಸಮಾಧಾನ’. ನಲವತ್ತೆೈದು ವರ್ಷಗಳಲ್ಲಿ ನಾನು ಕಂಡದ್ದು, ಬದುಕು ನನಗೆ ಕಲಿಸಿದ್ದು, ಅರಿತದ್ದು, ಅನುಭವಿಸಿದ್ದು- ಎಲ್ಲ ಉಪಯೋಗಕ್ಕೆ ಬರುವುದೇ ‘ಸಮಾಧಾನ’ ಅಂಕಣಕ್ಕೆ ನಾನು ಉತ್ತರ ಬರೆಯಲು ಕುಳಿತಾಗ.

ಯಾರೋ ಗೃಹಿಣಿ ತನ್ನ ಸಮಸ್ಯೆ ಹೇಳಿಕೊಂಡಾಗ ಇದೇ ಸಮಸ್ಯೆನಮ್ಮ ಮನೆಯಲ್ಲಿ ಲಲಿತೆಗಿತ್ತಲ್ಲವಾ? ನನ್ನ ಅಕ್ಕ- ತಂಗಿಯಂಥ ಹೆಣ್ಣು ಮಕ್ಕಳಿಗಿತ್ತಲ್ಲವಾ? ಅನ್ನಿಸುತ್ತದೆ. ಸೋತ ಹುಡುಗ, ಮನಸೋತ ಹುಡುಗಿ, ದಿಗ್ಭ್ರಾಂತಳಾದ ತಾಯಿ, ಕಂಗಾಲಾದ ತಂದೆ, ನೊಂದ ಗಂಡ, ತಪ್ಪು ಹೆಜ್ಜೆಯ ತರುಣಿ- ಹೀಗೆ ನಾನಾ ತರಹದ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಆ ಅಂಕಣಕ್ಕೆ ಬರೆಯುತ್ತಾರೆ. ಬಂದ ಪತ್ರಗಳನ್ನೆಲ್ಲ ನಮ್ಮ ಉಪಸಂಪಾದಕಿ ರಶ್ಮಿ ಮಟ್ಟಸವಾಗಿ ಒಂದು ಫೈಲಿಗೆ ಹಾಕಿಡುತ್ತ ಹೋಗುತ್ತಾಳೆ. ಹದಿನೈದು ದಿನಗಳಲ್ಲಿ ಒಂದು ರಾತ್ರಿಆ ಫೈಲು ಎದುರಿಗಿಟ್ಟುಕೊಂಡು ಉತ್ತರಿಸಲು ಕೂಡುತ್ತೇನೆ. ಮನಸ್ಸು ಕಂಪನಕ್ಕೊಳಗಾಗವುದೇ ಆವಾಗ. ಬೇರೆ ಯಾವ ತೆರನಾದ ಸಮಸ್ಯೆಹೇಳಿಕೊಂಡಿದ್ದರೂ ಸರಿಯೇ: ಉತ್ತರ ಸಲೀಸಾಗಿ ಬರೆಯುತ್ತೇನೆ. ಆದರೆ ಒಬ್ಬ ಹುಡುಗಿ ತನ್ನೆಲ್ಲ ಯಾತನೆ, ಅಭದ್ರತೆ, ಅವಮಾನ, ಸಿಟ್ಟು ಮತ್ತು ಭೀತಿಗಳಿಗೆ ಕಾರಣ ‘ನನ್ನ ಅಪ್ಪ !’ ಅಂತ ಬರೆದಿರುತ್ತಾಳಲ್ಲ ? ಅಂಥ ಪತ್ರಗಳು ನನ್ನನ್ನು ಕಂಗೆಡಿಸಿಬಿಡುತ್ತವೆ. ಆ ಪತ್ರ ನಿಸ್ಸಹಾಯಕ ಹುಡುಗಿಯಾಬ್ಬಳ ಆರ್ತನಾದದಂತೆ ಕೇಳಿಸಿಬಿಡುತ್ತದೆ. ಯಾಕೋ ಗೊತ್ತಿಲ್ಲ : ನನ್ನ ಎರಡನೇ ಮಗಳು ಬಾನಿ ಮತ್ತು ನಿವೇದಿತಾ - ಇವರಿಬ್ಬರನ್ನು ಮಾತ್ರ ನಾನು ಯಾವತ್ತೂ helpless ಆದ ಸ್ಥಿತಿಯಲ್ಲಿ ನೋಡಲಿಚ್ಛಿಸುವುದಿಲ್ಲ. ಅದನ್ನು ಕಲ್ಪಿಸಿಕೊಳ್ಳುವುದೂ ನನ್ನಿಂದಾಗುವುದಿಲ್ಲ. ‘ಸಮಾಧಾನ’ದ ಫೈಲುಗಳಲ್ಲಿ ಅಂಥ ಹೆಣ್ಣು ಮಕ್ಕಳ ಪತ್ರಗಳನ್ನು ನೋಡಿದಾಗ ನನಗೆ ಆ ಹುಡುಗಿಯರೆಲ್ಲ ನನ್ನ ಮಕ್ಕಳಾಗಿ ಹುಟ್ಟಬಾರದಿತ್ತೇ ಅನ್ನಿಸಿಬಿಡುತ್ತದೆ. I cry in my silence for them.

Helpless Girls and Sexual Harassmentಮಲಗಿ ಮೈ ಮರೆತು ನಿದ್ದೆ ಮಾಡುತ್ತಿರುವ ಅಪ್ರಾಪ್ತ ಹುಡುಗಿಗೆ ಥಟ್ಟನೆ ಎಚ್ಚರವಾಗುವುದು, ಪಕ್ಕದಲ್ಲಿ ಯಾರೋ ದೊಡ್ಡ ಆಳು ಮಲಗಿದ್ದಾನೆ ಅನ್ನಿಸುವುದು, ನಿಧಾನವಾಗಿ ಅದು ತನ್ನ ತಂದೆ ಗೊತ್ತಾಗುವುದು- ಆತನ ವರ್ತನೆಯಿಂದಾಗಿ ಚೀರಲಿಕ್ಕೂ ಆಗದಂಥ ಸ್ಥಿತಿ ಉಂಟಾಗಿಬಿಡುವುದು! ಇಂಥ ಅನುಭವಕ್ಕೆ ಈಡಾದ ಹುಡುಗಿ ಯಾವತ್ತಿಗಾದರೂ ಒಂದು ನೆಮ್ಮದಿಯಾದ, normal ಅನ್ನಿಸುವಂಥ ಮನಸ್ಥಿತಿಯಿಟ್ಟುಕೊಂಡು ಬಾಳಬಲ್ಲಳು ಅಂದು ಕೊಂಡಿದ್ದೀರಾ? ಖಂಡಿತ ಇಲ್ಲ. ಬಾಲ್ಯದಲ್ಲಾಗುವ ಲೈಂಗಿಕ ಹಲ್ಲೆಗಿಂತ ಕ್ರೂರವಾದದ್ದು, ಕರೆ ಉಳಿಸಿ ಹೋಗುವಂಥದ್ದು -ಮತ್ತೊಂದಿರಲಾರದು. ಆ ಹುಡುಗಿ ಯಾವತ್ತಿಗೂ ಮನುಷ್ಯ ಸಂಬಂಧಗಳ ಬಗ್ಗೆ ನಿರಾಳವಾಗಿ ಯೋಚಿಸಲಾರಳು. ತನ್ನನ್ನು ತಾನು ಸೂಕ್ತವಾಗಿ ಸಂಭಾಳಿಸಿಕೊಳ್ಳಲಾರಳು.

ಈ ತರಹದ ಸಮಸ್ಯೆಗಳ ಬಗ್ಗೆ ಓದಿ, ಕೇಳಿ, ಯೋಚಿಸಿ, ಅದಕ್ಕೆ ಸಂಬಂಧಿಸಿದ ಅಷ್ಟೂ ಸಾಹಿತ್ಯ ಸಂಗ್ರಹಿಸಿ ಪರಿಶೀಲಿಸಿದ ನಂತರ ಅನ್ನಿಸಿದ್ದು ಏನು ಗೊತ್ತೆ ? ತಂದೆಯರಿಂದ ಲೈಂಗಿಕ ಹಲ್ಲೆಗೆಒಳಗಾಗುವ ಮಗುವಿನ ವಿಷಯದಲ್ಲಿ ತಂದೆಗಿಂತಲೂ ಹೆಚ್ಚಿನ ತಪ್ಪನ್ನು ತಾಯಿ ಮಾಡಿರುತ್ತಾಳೆ! ಅಮ್ಮಾ, ಅಪ್ಪ ರಾತ್ರಿಒಂದ್ಹೊತ್ತಿನಲ್ಲಿ ಹೇಗ್ಹೇಗೋ ಮಾಡ್ತಾನೆ, ಅಂತ ಮಗು ದೂರು ಹೇಳಿದ ಮೊದಲ ದಿನವೇ ತಾಯಿ ಜಾಗೃತಳಾಗಿ ಬಿಟ್ಟರೆ ಅರ್ಧಕ್ಕರ್ಧ ಅನಾಹುತ ಕಡಿಮೆಯಾಗಿ ಬಿಡುತ್ತದೆ. ಆದರೆ ಅನೇಕ ತಾಯಂದಿರು ದಡ್ಡಿಯರಿರುತ್ತಾರೆ. ಅವರನ್ನು ಜಡತ್ವ ಆವರಿಸಿಕೊಂಡಿರುತ್ತದೆ. ‘ಏ, ಅಪ್ಪ ಹಂಗೆಲ್ಲ ಮಾಡ್ತಾರೇನೇ?’ ಎಂದು ಮಗಳನ್ನೇ ಗದರಿಸಿಬಿಟ್ಟಿರುತ್ತಾರೆ. ಆ ಸಮಸ್ಯೆಯ ಕಡೆಗೆ ಗಮನ ಹರಿಸುವುದೇ ಇಲ್ಲ. ಸಾಕಷ್ಟು ಬೆಳೆದ ಮಗಳು, ತನ್ನ ಹನ್ನೆರಡು- ಹದಿಮೂರನೇ ವಯಸ್ಸಿನಲ್ಲಿ ರಾತ್ರಿ bed wet ಮಾಡಿಕೊಳ್ಳುತ್ತಾಳೆ ಅಂದರೆ ತಾಯಿಯಾದವಳು ಅದಕ್ಕೆ ಕಾರಣ ಬೇರೇನಾದರೂ ಇರಬಹುದಾ ಅಂತ ಯೋಚಿಸುವುದಿಲ್ಲ. ‘ಮಲಗೋಕ್ಮುಂಚೆ ಸರಿಯಾಗಿ ಬಾತ್‌ರೂಮಿಗೆ ಹೋಗಿ ಬಂದು ಮಲಕ್ಕೋ’ ಅಂತ ಮಗಳನ್ನು ಗದರಿಸಿ ಸುಮ್ಮನಾಗಿರುತ್ತಾರೆ. ಯಾವಾಗ ತಾಯಿ ಈ ಸಮಸ್ಯೆಯ ಬಗ್ಗೆ ಅಸಡ್ಡೆ ತೋರಿಸುತ್ತಾಳೋ, ಮಕ್ಕಳು ಪೂರ್ತಿ ಅನಾಥರಾಗಿಬಿಡುತ್ತಾರೆ.

ತಂದೆಯ ಕ್ರೌರ್ಯ ಮತ್ತು ವಿಕೃತಿಯನ್ನು ಹೆಣ್ಣು ಮಕ್ಕಳು ಜಗತ್ತಿನಲ್ಲಿ ಇನ್ಯಾರೆದುರೂ ಹೇಳಿಕೊಳ್ಳಲಾದರು. ಕೆಲವು ಹುಡುಗಿಯರು ತಮ್ಮದೇ ಆದ out let ಗಳನ್ನು ಹುಡುಕಿಕೊಂಡು ಬಿಡುತ್ತಾರೆ. ಹೆಚ್ಚಿನವರು ತಮ್ಮ ಸುತ್ತಮುತ್ತಲಿನಿಂದಲೇ ಒಬ್ಬ boy friend, ಒಬ್ಬ ಪ್ರೇಮಿಯನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ನಿಜವಾದ ಪ್ರೀತಿ ಅಥವಾ ಗಂಡಸಿನ ಸಾಮಿಪ್ಯ ಹೊಂದುವ ಬಯಕೆ ಆಗಿರುವುದಿಲ್ಲ. ಅವರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲಿಕ್ಕೆ, ಹೇಳಿಕೊಂಡಾಗ ಅದನ್ನು ನಂಬಲಿಕ್ಕೆಒಬ್ಬ ವ್ಯಕ್ತಿಬೇಕು. ಅವನು ಅಮ್ಮನಂತೆ ‘ಏ ಅಪ್ಪ ಹಂಗೆಲ್ಲ ಮಾಡ್ತಾರೇನೇ?’ ಅಂತ ಗದರಿಸುವುದಿಲ್ಲ. ಅವಳನ್ನು ನಂಬುತ್ತಾನೆ, ಸಂತೈಸುತ್ತಾನೆ, ‘ನಾನಿದ್ದೀನಿ ಬಿಡು’ ಎಂಬ ಭರವಸೆ ಕೊಡುತ್ತಾನೆ. ಅವನ ಕೈಲಿ ಏನನ್ನಾದರೂ ಮಾಡಲು ಸಾಧ್ಯವಾಗುತ್ತದೋ ಇಲ್ಲವೋ, ದುಷ್ಟ ಅಪ್ಪನವಿರುದ್ಧ ತನ್ನ ಪರವಾಗಿ ನಿಲ್ಲಲಿಕ್ಕೊಬ್ಬ ಗಂಡಸು ಸಿಕ್ಕನಲ್ಲ ಎಂಬ ಹರುಷವೇ ಸಾಕು: ಈ ಹುಡುಗಿ ಆ affairನಲ್ಲಿ ತಲ್ಲೀನಳಾಗಿ ಬಿಡುತ್ತಾಳೆ.

ಇಂಥದ್ದೇ ಸಮಸ್ಯೆಯಿಟ್ಟುಕೊಂಡು ನನ್ನಲ್ಲಿಗೆ ಬರುವ ತಾಯಂದಿರಿಗೆ ನಾನು ಪ್ರತೀಸಲ ಹೇಳುವುದು ಒಂದೇ ಮಾತು. ‘ಅಪ್ಪ ಹೆಂಗೆಂಗೋ ಮಾಡ್ತಾನಮ್ಮಾ’, physically ಕಾಯ್ದು protect ಮಾಡಿಕೊಳ್ಳಿ. ತಂದೆ ಮತ್ತು ಹೆಣ್ಣುಮಕ್ಕಳು- ಮಲಗುವ ಜಾಗೆಗಳನ್ನು ಬದಲಿಸಿ. ಸಾಧ್ಯವಾದಷ್ಟೂ ತಾಯಂದಿರಾದ ನೀವು ಹೆಣ್ಣು ಮಕ್ಕಳ ಜೊತೆ ಪ್ರತ್ಯೇಕವಾಗಿ ಮಲಗಿ. ರೂಮಿಗೆ ಒಳಗಿನಿಂದ ಲಾಕ್‌ ಮಾಡಿಕೊಳ್ಳುವುದನ್ನು, ಬಿಗಿ ಮತ್ತು ಸ್ಥಿರವಾದ ರಾತ್ರಿಯುಡುಪು ಧರಿಸಿಕೊಳ್ಳುವುದನ್ನ, ಎಚ್ಚರಿಕೆಯಾದ ತಕ್ಷಣ ಲೈಟು ಹಾಕುವುದನ್ನ, ಹೆದರಿಕೆಯಾದಾಗ ಮುಕ್ತವಾಗಿ ಹೇಳಿಕೊಳ್ಳುವುದನ್ನ ಮಕ್ಕಳಿಗೆ ರೂಢಿ ಮಾಡಿಕೊಡಿ. ನಿಮ್ಮ ಗಂಡ ತುಂಬ ಒಳ್ಳೆಯವನೆಂಬ ಕಲ್ಪನೆ ನಿಮಗಿರಬಹುದು. ಉಳಿದ ವಿಷಯಗಳಲ್ಲಿ, ಉಳಿದ ಸಂದರ್ಭಗಳಲ್ಲಿ ಆತ ಒಳ್ಳೆಯವನಾಗಿಯೂ ಇರಬಹುದು. ಆದರೆ ಲೈಂಗಿಕತೆಯ ವಿಷಯದಲ್ಲಿ ಪರ್ವರ್ಷನ್‌ಗಳು ಒಳ್ಳೆಯ(?)ವರಿಗಿರಬಾರದೆಂದೇನೂ ಇಲ್ಲ. ಅಂತೆಯೇ, ಕುಡಿದ ಅಮಲಿನಲ್ಲಿ ಅನೇಕರು ಹೀಗೆ ವರ್ತಿಸಿಬಿಡುತ್ತಾರೆ. ಅವರಿಂದ ಮಕ್ಕಳನ್ನು ರಕ್ಷಿಸಿರಿ.

ಆತ್ಮೀಯರು ಅನ್ನಿಸಿಕೊಂಡ ಅಂಕಲ್‌ಗಳು, ವರಸೆಯ ಮಾವಂದಿರು, ಇತರೆ ನೆಂಟರಿಷ್ಟರಲ್ಲಿನ ಗಂಡಸರು, ಓರಗೆಯಲ್ಲಿ ಸೋದರ ಸಂಬಂಧಿಗಳೇ ಆಗಿರಬಹುದಾದ ಬೆಳೆದ ಹುಡುಗರು- ಅವರ ಪ್ರೀತಿ ಎಷ್ಟೇ ಪ್ರಾಂಜಲವಾಗಿದ್ದರೂ ಸರಿಯೇ: ದೈಹಿಕವಾಗಿ ಅವರನ್ನು ಬೆಳೆಯುತ್ತಿರುವ ಹೆಣ್ಣು ಮಕ್ಕಳಿಂದ ದೂರವಿಡಿ. ಅವಕಾಶ ಸಿಕ್ಕ ತಕ್ಷಣ ‘ಏನೇ ಮರೀ...’ ಅಂತ ಮೈಮೇಲೆ ಕೈ ಹಾಕಿ ಮಾತನಾಡಿಸುವ ಅಂಕಲ್ಲುಗಳಿಂದ ಅವರನ್ನು ಕಾಪಾಡಿ. ಒಂದೇ ಒಂದು ಕೆಟ್ಟ ಅನುಭವ ಮಕ್ಕಳ ಬದುಕಿನ ದಿಕ್ಕನ್ನೇ ಬದಲಿಸೀತು. ಜಗತ್ತಿನಲ್ಲಿ ಎಲ್ಲರೂ ಕೆಟ್ಟವರಾಗೇ ಇರುತ್ತಾರೆ ಅಂತ ನಾನು ಅನ್ನುತ್ತಿಲ್ಲ.

ಆದರೆ ಪ್ರಪಂಚ ನಾವಂದುಕೊಂಡಷ್ಟು ಒಳ್ಳೆಯದೂ ಅಲ್ಲ !

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more