• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಂಠಪಾಠ ಮಾಡಿ ನೋಡಿ ; ಖುಷಿಯಾಗಿರ್ತೀರಿ!

By Staff
|
Ravi Belagere on Thatskannada.com ರವಿ ಬೆಳಗೆರೆ
‘ನಿಮ್ದು ಬಿಡಿ .. ಆದ್ಬುತವಾದ ನೆನಪಿನ ಶಕ್ತಿ !’

ಅಂತ ಅನೇಕರು ನನಗೆ ಹೇಳುತ್ತಿರುತ್ತಾರೆ. ‘ನಂದು ಬಿಡಿ, ನೆನಪಿನ ಶಕ್ತಿ ಅನ್ನೋದೇ ಒಂದು ಅದ್ಬುತ !’ಅಂತ ನಾನಂದು ಕೊಳ್ಳುತ್ತಿರುತ್ತೇನೆ. ನನಗೆ ನನ್ನ ನೆನಪಿನ ಶಕ್ತಿಯ ಕುರಿ-ತು- ಅಂತ ಅಹಂಕಾರವೇನಿಲ್ಲ. ಜೊತೇಲಿ ಬೆಳೆದವರನ್ನ , ನೆಂಟರಿಷ್ಟರನ್ನ ಇದ್ದಕ್ಕಿದ್ದ ಹಾಗೆ ಒಂದು ಸರ್ಪರೈಸ್‌ಗೆ ಈಡು ಮಾಡಿಬಿಡುವಂಥ ನೆನಪಿನ ಶಕ್ತಿ ನನಗಿರೋದು ನಿಜ. ಅಂಥದೊಂದು ನೆನಪಿನ ಶಕ್ತಿ ಯಾರಿಗೆ ಬೇಕಾದರೂ ಇರೋಕೆ ಸಾಧ್ಯ. ಇಲ್ಲದೆ ಹೋದ್ರೆ, ಅದನ್ನ ತಂದುಕೊಳ್ಳೋಕೆ ಸಾಧ್ಯ ಅಂತ ಬಲವಾಗಿ ನಂಬಿರೋನು ನಾನು. ಬೇಕಾದ್ದನ್ನು ನೆನಪಿಟ್ಟು ಕೊಳ್ಳುವ, ಬೇಡವಾದ್ದನ್ನ ಕಂಫರ್ಟಬಲ್‌ ಆಗಿ ಡಿಲೀಟ್‌ ಮಾಡಿ ಮರೆತು ಬಿಡುವ ಅದ್ಭುತ ಕಂಪ್ಯೂಟರು ಮನುಷ್ಯನ ಮನಸ್ಸು. ಕೆಲವು ಹಾಡುಗಳು, ಕೆಲವು ವಾಸನೆಗಳು, ಕೆಲವು ಸ್ಥಳಗಳು ಅದು ಹೇಗೆ ನನ್ನ ನೆನಪುಗಳ ಪೆಟ್ಟಿಗೇಗೆ ಕೈ ಹಾಕಿ ಕಲೆಸಿ ಬಿಸಾಡ್ತವೆ ಅಂದ್ರೆ, ಸಲೀಸಾಗಿ ನಾನು ಮೂವತ್ತು ಮೂವತ್ತೆೈದು ವರ್ಷಗಳಷ್ಟು ಹಿಂದಕ್ಕೆ ಹೋಗಿ ‘ಅವತ್ತು ನಾನು ಇಂಥ ಕಡೇನೇ ಕೂತಿದ್ದೆ, ಇದೇ ಬಣ್ಣದ ಅಂಗಿ ಹಾಕ್ಕೊಂಡಿದ್ದೆ. ಇದೇ ಮಾತನಾಡಿದೆ ’ ಅಂತ ಕರಾರುವಾಕ್ಕಾಗಿ ಹೇಳಿಬಿಡಬಲ್ಲೆ.

ಇವತ್ತಿಗೂ ಬೆಳಗಿನ ಜಾವಗಳಲ್ಲಿ ಅಮ್ಮ ನೆನಪಾದರೆ ಗದುಗಿನ ಭಾರತದ ‘ಶ್ರೀವನಿತೆಯರರಸನೆ....’ಅಂತ ಆಕೆ ಹಾಡಿಕೊಳ್ಳುತ್ತಿದ್ದುದು ನೆನಪಾಗುತ್ತದೆ. ಯಾವತ್ತಿಗೂ ನಾನು ಗದುಗಿನ ಭಾರತವನ್ನ ಬಾಯಿಪಾಠ ಮಾಡಿಲ್ಲ. ಆದರೆ ಕಿವಿಗೆ ಬಿದ್ದದ್ದು , ಅದರಲ್ಲೂ ಬೆಳಗಿನ ಜಾವಗಳಲ್ಲಿ ಕಿವಿಗೆ ಬಿದ್ದದ್ದು ಬಾಯಿಪಾಠ ಮಾಡಿದ್ದಕ್ಕಿಂತ ಹೆಚ್ಚು ಕರಾರುವಾಕ್ಕಾಗಿ ನೆನಪಿರುತ್ತೆ. ಸುಬ್ಬು ಲಕ್ಷ್ಮಿಯ ಸುಪ್ರಭಾತದ ಹಾಗೆ ! ಸೊಪ್ಪು ಮಾರಲು ಬರುತ್ತಿದ್ದವಳು ಕೂಗುತ್ತಿದ್ದ ಅವಳ ದನಿಯ ಹಾಗೆ. ತುಂಬ ಜನ ಯುವ ದಂಪತಿಗಳಿಗೆ, ಪುಟ್ಟ ಮಕ್ಕಳಿರೋರಿಗೆ ನಾನು ಅದನ್ನೇ ಹೇಳ್ತಿರ್ತೀನಿ. ಬೆಳಗಿನ ಜಾವಕ್ಕೇ ಏಳಿ. ಮಗೂನ ಎಬ್ಬಿಸಿ ಕೂಡಿಸಿ. ಯಾವುದನ್ನ ಮಗು ನೆನಪಿಟ್ಕೋಬೇಕು ಅಂತ ನೀವು ಆಸೆ ಪಡ್ತೀರೋ, ಅದನ್ನ ಮಗು ಕಿವಿ ಮೇಲೆ ಬೀಳೋ ಹಾಗೆ ರಾಗವಾಗಿ, ಕತೆಯಾಗಿ, ಮಧುರವಾಗಿ, ಪದ್ಯವಾಗಿ, ನಾಟಕೀಯವಾಗಿ ಅದರೆದುರು ಕೂತು ಹೇಳಿ. ವಿವೇಕಾನಂದರ ಶಿಕಾಗೋ speech ಓದಿ ನೋಡಿ? ಸುಭಾಷಚಂದ್ರ ಬೋಸ್‌ ಬಗ್ಗೆ ಮಾತನಾಡಿ ನೋಡಿ ? ಗೋವಿನ ಹಾಡನ್ನ ಸುಶ್ರಾವ್ಯವಾಗಿ ಹಾಡಿ ನೋಡಿ? ನಿಮ್ಮ ಮಗುವಿಗೆ ಮರಿಮೊಮ್ಮಕ್ಕಳಾಗುವ ತನಕ ಅದು ಅಚ್ಚಳಿಯದೆ ನೆನಪಿರುತ್ತದೆ. ಮನೆಯಲ್ಲಿ ಮಗೂಗೆ ಮೂರು-ನಾಲ್ಕು ವರ್ಷ ವಯಸ್ಸಾದಾಗಲೇ ಈ ಕಂಠಪಾಠದ , ಮೆಮೊರೈಸಿಂಗ್‌ನ ಕಸರತ್ತು ಶುರುಮಾಡಿಸಿ. ಮಗ್ಗಿ ಹೇಳಿಸಿ ರೂಢಿ ಮಾಡಿಸಿ. ಈಗೆಲ್ಲ ಯಾವ ಶಾಲೆಯಲ್ಲೂ ಮಕ್ಕಳಿಗೆ ಮಗ್ಗಿ ಹೇಳಿಸುವುದಿಲ್ಲ. ಕಂಠಪಾಠ ಮಾಡಿಸಿದರೆ ಬುದ್ದಿವಂತಿಕೆ ಬೆಳೆಯೋದಕ್ಕೆ help ಆಗಲ್ಲ ಅಂತಾರೆ. ಸ್ವಲ್ಪ ಮಟ್ಟಿಗೆ ಅದು ನಿಜವೂ ಇರಬಹುದು. ಆದರೆ ಯಾರು ಚಿಕ್ಕಂದಿನಲ್ಲಿ (ದೊಡ್ಡವರಾದ ನಂತರವೂ) ಕಂಠಪಾಠ ಮಾಡೋದನ್ನ ರೂಢಿಮಾಡಿಕೊಳ್ಳುತ್ತಾರೋ, ಅವರ ಮಿದುಳು ಒಂದು order ನಲ್ಲಿ ಶಿಸ್ತುಬದ್ಧವಾಗಿ ಕೆಲಸ ಮಾಡೋಕೆ ಶುರು ಮಾಡುತ್ತೆ. ಮಿದುಳಿನ ಇಡೀ ಕಾಮಗಾರಿಗೆ ಎಫಿಷಿಯನ್ಸಿ ಬರತೊಡಗುತ್ತದೆ. ಅದರಲ್ಲೂ ಚಿಕ್ಕಂದಿನಲ್ಲಿ ಕಂಠಪಾಠದ ಕಸರತ್ತು ಕಲಿತವರ ಮಿದುಳು ಹೆಚ್ಚು ಪ್ರಖರವಾಗಿ ಉಳಿಯುತ್ತದೆ.

Art of Memorising !ನಿಮಗೆ ಗೊತ್ತಿರಲಿ: ನೆನಪಿನ ಶಕ್ತಿ ಅನ್ನೋದು ಆನುವಂಶಿಕವಾದುದಲ್ಲ. ನನ್ನ ತಾಯಿ ದೊಡ್ಡ ಮಟ್ಟದ ಮರೆಗುಳಿ ಸುಬ್ಬಕ್ಕನಂಥವಳು. ಆಕೆಗೆ ರಸ್ತೆಗಳು ನೆನಪಿರುತ್ತಿರಲಿಲ್ಲ. ಹಾಡಿನ ಸಾಲು ಮರೆಯುತ್ತಿದ್ದವು. ನಂಬರುಗಳಂತೂ- ಭಗವಂತನಿಗೇ ಪ್ರೀತಿ. ಅಮ್ಮನ ಪಾಲಿಗೆ ನಾನು ಸದಾ ಎಲ್ಲವನ್ನು ನೆನಪು ಮಾಡಿಕೊಡುವ ಅಸಿಸ್ಟೆಂಟು. ಇದನ್ನೆಲ್ಲ ಹ್ಯಾಗೆ ನೆನಪಿಟ್ಕೋತೀಯೋ? ಅಂತ ತಾನೇ ಉದ್ಗರಿಸುತ್ತಿದ್ದಳು. ಆ ಮೇಲೆ ಬದುಕಿನ ತಿಕ್ಕಡಿ- ಧಕ್ಕಡಿಗಳಿಗೆ ಬಿದ್ದು ಹೈರಾಣಾದ ಕಾಲದಲ್ಲಿ ನಾನೇ ಆಕೆಯ ಮುಂದೆ ಕನವರಿಸುತ್ತಿದ್ದೆ- ನಡೆದದ್ದನ್ನೆಲ್ಲ ಮರೆಯುವುದಾದರೂ ಹ್ಯಾಗಮ್ಮಾ ? ಅಂತ.

ಇತ್ತೀಚೆಗೆ ಕೆಲಸಗಳು ವಿಪರೀತ ಹೇರಿಕೊಂಡಿರುವುದರಿಂದಾಗಿ ನನ್ನ ದೊಂದು ಅದ್ಭುತವಾದ ಅಭ್ಯಾಸ ತಪ್ಪಿ ಹೋದಂತಾಗಿದೆ. ಏನು ಗೊತ್ತಾ ? ಎಲ್ಲೋ ಓದಿದ ಒಂದೆರಡು ಕವಿತೆಯ ಸಾಲು ಇಷ್ಟವಾಗಿ ಬಿಟ್ಟರೆ ಸಾಕು; ಅವನ್ನು ಚಿಕ್ಕದೊಂದು ಚೀಟಿಯಲ್ಲಿ ಬರೆದು ಬಾತ್‌ ರೂಮಿನ ಕನ್ನಡಿಗೆ ಅಂಟಿಸಿಕೊಂಡಿರುತ್ತಿದ್ದೆ. ಬ್ರಷ್‌ ಮಾಡುತ್ತ ಬೆಳಗಿನ ಹೊತ್ತು ಎರಡು ನಿಮಿಷ ಓದಿಕೊಂಡರೆ ಸಾಕು. ಕವಿತೆ, ಶಾಯರಿ, ಇಷ್ಟದೈವದಂಥ ಕವಿಯಾಬ್ಬನ ಮಾತು -ಯಾವುದು ಬೇಕಾದರೂ ಕಂಠಪಾಠವಾಗಿ ನೆನಪಿನಲ್ಲಿ ಉಳಿದು ಬಿಡುತ್ತಿತ್ತು. ಇವತ್ತಿಗೂ ಭಾಷಣಗಳಿಗೆ ಅಂತ ಹೋದಾಗ ಅಂಥ ನೂರಾರು ಕವಿತೆಗಳ ಸಾಲುಗಳನ್ನ ನೆಲಕ್ಕೆ ಧುಮುಕುವ ಝರಿಯ ವೇಗದಲ್ಲಿ repeat ಮಾಡುತ್ತ ಮಾತಾಡಬಲ್ಲೆ. ‘ಬೆಳಗೆರೆಗೆ ವಿಪರೀತ ಮೆಮೊರಿ ಪವರ್ರು’ಅಂತಾರೆ. ಅವರಿಗೆ ಗೊತ್ತಿಲ್ಲ: ಅದಕ್ಕಾಗಿ ನಾನು ಖರ್ಚು ಮಾಡಿದ್ದು ಪ್ರತಿನಿತ್ಯ ಬೆಳಗ್ಗೆ Brush ಮಾಡುವಾಗಿನ ಒಂದೂವರೆ ಅಥವಾ ಎರಡು ನಿಮಿಷ. Of course, ಬ್ರಷ್‌ ಮಾಡುವುದನ್ನು ಮರೆಯಬಾರದಷ್ಟೆ. .

ಈಗಲೂ ಒಮ್ಮೊಮ್ಮೆ ಐದು-ಹತ್ತು ನಿಮಿಷ ಮಾಡಲಿಕ್ಕೇನೂ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುತ್ತೇನೆ . ಏರ್‌ಫೋರ್ಟ್‌ಗಳಲ್ಲಿ, ಯಾರಿಗೋ ಕಾಯಲೇ ಬೇಕಾದ parking placeಗಳಲ್ಲಿ . ಹಾಗೆ ಕೆಲಸವಿಲ್ಲದೆ ಸುಮ್ಮನೆ ಕುಳಿತಾಗ day dream ಮಾಡುವ ಬದಲು ಮುಖ್ಯವಾದುದ್ಯಾವುದನ್ನೋ ಪದೇಪದೆ ಹೇಳಿಕೊಂಡು ಕಂಠಪಾಠ ಮಾಡಿಕೊಂಡಂತೆ ಮಾಡಿಕೊಳ್ಳುತ್ತಿರುತ್ತೇನೆ.

‘ಇದನ್ನೆಲ್ಲ ಚಿಕ್ಕವರಿದ್ದಾಗಲೇ ಮಾಡಿರಬೇಕು ಕಣ್ರೀ. ಇಷ್ಟು ವಯಸ್ಸಾದ ಮೇಲೆ ಬುದ್ಧಿ ನಮ್ಮ ಮಾತು ಕೇಳುತ್ತಾ?’ಅನ್ನಬೇಡಿ. ಬುದ್ಧಿಗೆ ವಯಸ್ಸಾಗುವುದಿಲ್ಲ. ಯಾವ ವಯಸ್ಸಿನಲ್ಲಿ ಬೇಕಾದರೂ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು. ನನ್ನ ಬಳ್ಳಾರಿ ಕಾಲೇಜಿನ ಸಹೋದ್ಯೋಗಿಯಾಬ್ಬರು ತಮ್ಮ ಐವತ್ತೆೈದನೆಯ ವಯಸ್ಸಿನಲ್ಲಿ ಮನೆಯಲ್ಲಿ ಒಬ್ಬರೇ ಕುಳಿತು ಸುಮ್ಮನೆ ಏನಾದರೂ ಕಂಠಪಾಠ ಮಾಡಿಕೊಳ್ಳುತ್ತಿದ್ದರು. ಯಾಕೆ ಮೇಡಂ ? ಅಂತ ಕೇಳಿದುದಕ್ಕೆ ‘ಇನ್ನು ಹತ್ತಿಪ್ಪತ್ತು ವರ್ಷಕ್ಕೆ ಕಣ್ಣು ಹೋಗಿ ಬಿಡುತ್ವೆ ಅಂತಿಟ್ಕೋ. ಆವಾಗ ಓದೋಕೂ ಆಗಲ್ಲ. ಕಂಠಪಾಠ ಮಾಡಿದ್ದೊಂದೇ ಉಳಿಯೋದು .....’ ಅಂದಿದ್ದರು.

ಕಂಠಪಾಠ ಮಾಡಿಕೊಳ್ಳೋದು ಕೇವಲ ಮಿದುಳಿನ ಕಸರತ್ತಷ್ಟೇ ಅಲ್ಲ : ಅದು ಆತ್ಮ ಸಂತೋಷದ ಸರಕೂ ಹೌದು ಅನ್ನಿಸಿದ್ದೇ ಅವತ್ತು. ಅಡಿಗರ ಕವಿತೆ, ಷೇಕ್ಸಪಿಯರ್‌ನ ಸಾಲುಗಳು, ಐವತ್ತೆರಡರ ಮಗ್ಗಿ, ವಿವೇಕಾನಂದರ ಭಾಷಣ, ಕುಂದನ್‌ ಲಾಲ್‌ ಸೈಗಲ್‌ನ ಹಾಡು, ಗಾಲಿಬ್‌ನ ಶಾಯರಿ, ಅಮ್ಮನ ಬರ್ತ್‌ಡೇ, ಗೆಳತಿಯಾಂದಿಗಿದು ಎಷ್ಟನೇ ಜಗಳ - ಎಷ್ಟನೇ ರಾಜಿ ?

ಇವೆಲ್ಲ ನೆನಪಿನಲ್ಲಿ stock ಮಾಡಿಟ್ಟುಕೊಂಡಿರುವ ಮನುಷ್ಯ ನಿಜಕ್ಕೂ ನಮಗಿಂತ ಜಾಸ್ತಿ ಸುಖಿಯಲ್ಲವೇ?

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more