• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಳೆ ನಾವು ನಮ್ಮನ್ನು ಇವತ್ತಿಗಿಂತ ಹೇಗೆ ಇಂಪ್ರೂವ್‌ ಮಾಡಿಕೊಳ್ಳೋದು ?

By Staff
|
Ravi Belagere on Thatskannada.com ರವಿ ಬೆಳಗೆರೆ
ಅವತ್ತು ನಿಮ್ಮ birthday ಇರುತ್ತೆ. ನೀವು ಭಾವುಕ ಮನಸ್ಸಿನವರಾದರೆ, ನಿಮ್ಮ ಪ್ರೀತಿಯ ಹುಡುಗ ಅಥವಾ ಹುಡುಗಿ, ಅಮ್ಮ , ಅಕ್ಕ, ಚಿಕ್ಕಮ್ಮ , ಬೆಸ್ಟ್‌ ಫ್ರೆಂಡ್‌ - ಹೀಗೆ ಯಾರಾದರೂ ತುಂಬ ಹತ್ತಿರದವರು ಮೊದಲು ವಿಷ್‌ ಮಾಡಲಿ ಎಂದು ಕಾಯುತ್ತೀರಿ. ಫೋನ್‌ ಬರಲಿಲ್ಲವಲ್ಲಾ ಅಂತ ಪೇಚಾಡುತ್ತೀರಿ. ಆಸೆಬರುಕರಾದರೆ, ಬರಲಿರುವ ಗಿಫ್ಟ್‌ಗಳನ್ನು ಕಲ್ಪಿಸಿಕೊಂಡು ಮುದಗೊಳ್ಳುತ್ತೀರಿ. ಮಜೇದಾರ್‌ ಮನುಷ್ಯನಾದರೆ, ಇವತ್ತು ಬರ್ತ್‌ಡೇ ಪಾರ್ಟೀನ ಎಲ್ಲಿ , ಯಾರೊಂದಿಗೆ, ಹೇಗೆ ಎಂಜಾಯ್‌ ಮಾಡಬಹುದು ಅಂತ ಯೋಚಿಸುತ್ತೀರಿ. ಪ್ರೀತಿಸಿದ ಹುಡುಗಿ ಅಥವಾ ಹುಡುಗನಿಗೆ ಇವತ್ತು propose ಮಾಡಿದರೆ ಪ್ರೀತಿ ಗಿಟ್ಟಬಹುದಾ ಅಂತ ಯೋಚಿಸುತ್ತೀರಿ.

ಆದರೆ ನೀವು ತುಂಬ practical ಆದ, ಜೀವನ್ಮುಖಿಯಾದ, ತುಂಬ ಎಚ್ಚರಿಕೆಯಿಂದ ಭವಿತವ್ಯವನ್ನು ರೂಪಿಸಿಕೊಳ್ಳುವ ಬಯಕೆಯುಳ್ಳವರಾದರೆ- ಈ ಬದುಕನ್ನ ಮುಂದಿನ ವರ್ಷದ ಈ ದಿವಸದ ಹೊತ್ತಿಗೆ ಹೇಗೆ ಇನ್ನಷ್ಟು ಚೆಂದಗೊಳಿಸಿಕೊಳ್ಳಬೇಕು ಅಂತ ಯೋಚಿಸುತ್ತೀರಿ !

How to improve ourselves ?ನಾನು ನಿಮಗಿಂತ ಸ್ವಾರ್ಥಿ. ನಿಮಗಿಂತ ಭಾವುಕ. ನಿಮಗಿಂತ ಆಸೆಬುರುಕ. Of course ನಿಮಗಿಂತ ಪ್ರಾಕ್ಟಿಕಲ್‌ ಕೂಡ ಹೌದು. ಜೀವನ್ಮುಖತೆ ನನ್ನ ಚಿಂತನೆಯ ಸಿಸ್ಟಂನಲ್ಲೇ ಇದೆ. ನಾನು ಬರ್ತ್‌ಡೇ ಬೆಳಗ್ಗೆ ಮಾತ್ರ ಅಲ್ಲ ; ಪ್ರತಿನಿತ್ಯ ನನ್ನ ಬದುಕನ್ನು ಹೇಗೆ ಅಭಿವೃದ್ಧಿಪಡಿಸಿಕೊಳ್ಳಬೇಕು ಅಂತ ಯೋಚಿಸುತ್ತೇನೆ. ಇದಕ್ಕಿಂತ ಆರೋಗ್ಯವಂತವಾದ ಸ್ವಾರ್ಥ ಇನ್ನೊಂದಿರಲಾರದು. ಬೆಳಗ್ಗೆ ಎದ್ದತಕ್ಷಣ ಹೀಗೆ ಯೋಚಿಸೋಕೆ ಅಂತ ಕೆಲವು ನಿಮಿಷಗಳನ್ನು ಇಟ್ಟು ನೋಡಿ. ಮಾಡಿದ ಆಲೋಚನೆಗಳ ಪೈಕಿ ಹತ್ತು ಪರ್ಸೆಂಟಿನವಷ್ಟನ್ನು ಜಾರಿಗೆ ತನ್ನಿ . ನಿಮ್ಮ ಬದುಕು ಹೇಗೆ ಬದಲಾಗುತ್ತದೋ ನೋಡಿ.

ಹುಟ್ಟುಹಬ್ಬದ ದಿನ, ಆ್ಯನಿವರ್ಸರಿಯ ದಿನ, ಇನ್ನಾವುದೋ ಶುಭದಿನ- ಹೀಗೆ ಒಂದು ದಿನ ಅಂತ ಆಯ್ದುಕೊಂಡು, ಅವತ್ತು ತೆಗೆದುಕೊಳ್ಳುವ ನಿರ್ಧಾರಗಳಿರುತ್ತವಲ್ಲ ? ಆವು new year resolution ಗಳಿದ್ದ ಹಾಗೆ. ತೆಗೆದುಕೊಂಡ ದಿನವೇ ಗಾಳಿಗೆ ಬೆರೆತುಹೋಗಿರುತ್ತವೆ. ಆದರೆ ನಿತ್ಯದ ನಿರ್ಧಾರ ಹಾಗಲ್ಲ . ಅದು ಮಾರನೆಯ ಬೆಳಗ್ಗೆ ಮತ್ತೆ ಹಾಜರಾಗುತ್ತದೆ. ‘ನಿನ್ನೆ ಹಂಗಂದಿದ್ಯಲ್ಲ? ಏನಾಯ್ತು?’ ಅಂತ ಅಂಗಿ ಹಿಡಿಯುತ್ತದೆ. ಆದ್ದರಿಂದಲೇ ನನ್ನ ದೃಷ್ಟಿಯಲ್ಲಿ ಅವು ಮಹತ್ವಪೂರ್ಣವಾದಂಥವು.

ಇವತ್ತು ನಾನು ಹೀಗಿದ್ದೇನೆ. ಇಷ್ಟು ಓದು, ಇಷ್ಟು ಬರಹ, ಇಂತಿಷ್ಟು network, ಇಂಥವಿಷ್ಟು contacts, ಇಷ್ಟೆಲ್ಲ ದುಡ್ಡು, ಇಷ್ಟರಮಟ್ಟಿಗಿನ ಆರೋಗ್ಯ, ಹೀಗೆಂತ ಬಂದ ಇಮೇಜು- ಒಂದಿಷ್ಟು ಕೀರ್ತಿ. ಈ ಪೈಕಿ ಯಾವುದನ್ನು ನಾನು ನಾಳೆಯ ಹೊತ್ತಿಗೆ ಇನ್ನಷ್ಟು ಹೆಚ್ಚಿಸಿಕೊಳ್ಳಬಲ್ಲೆ? ಕೂತು ಯೋಚಿಸಿ. ಇಮೇಜು ಬದಲಾಯಿಸಿಕೊಳ್ಳಬೇಕು ಅಂದುಕೊಳ್ಳುತ್ತೀರಾ ? ಅದನ್ನು ಇವತ್ತು ಬೆಳಗ್ಗೆಯಿಂದಲೇ ಆರಂಭಿಸಿ. ಆರೋಗ್ಯ ಸುಧಾರಿಸಬೇಕಾ? ಅರ್ಧ ರೊಟ್ಟಿ ಕಡಿಮೆ ತಿನ್ನಿ. ಎರಡು ಕಿಲೋಮೀಟರು ಜಾಸ್ತಿ ನಡೆಯಿರಿ. ದುಡ್ಡು ಮಾಡಬೇಕಾ? ಅದಕ್ಕೆ ದಾರಿ ಹುಡುಕಿ. ನಿಮ್ಮ ಸಮಯ ವ್ಯರ್ಥವಾಗಿ ಸೋರಿಹೋಗುತ್ತಿದೆಯೇ ನೋಡಿ. ಸಮಯ ಉಳಿಸಿಕೊಂಡರೆ ದುಡ್ಡು, ಆರೋಗ್ಯ, ನೆಮ್ಮದಿ- ಮೂರೂ ಉಳಿಸಿಕೊಂಡ ಹಾಗೆಯೇ. ಒಂದ್ಯಾವುದಾದರೂ ಸಂಬಂಧ ಸಣ್ಣಗೆ ಕೊಳೆಯುತ್ತಿರುವ ವಾಸನೆ ಬರುತ್ತಿದೆಯಾ? ತಕ್ಷಣ ಅದನ್ನು ಕಿತ್ತುಹಾಕಿ ಅಥವಾ ಮತ್ತೆ ಸರಿಯಾಗಿ ನೆಟ್ಟು ಸರಿ ಮಾಡಿಕೊಳ್ಳಿ. ಯಾರದೋ ಸಹಾಯ ಕೇಳಬೇಕೆಂದುಕೊಂಡಿದ್ದೀರಾ? ನೀವು ಅವರನ್ನು ಭೇಟಿಯಾಗಿ ಎಷ್ಟು ದಿನಗಳಾದವು? ಅವರ ಮಗುವಿಗೆ ಜ್ವರ ಬಂದಾಗ, ಅವರ ತಾಯಿ ತೀರಿಹೋದಾಗ,ಅವರು ದೊಡ್ಡ ಸಮಸ್ಯೆಗೆ ಸಿಕ್ಕಿಹಾಕಿಕೊಂಡಾಗ- ಅವರ ನೆರವಿಗೆ ಹೋಗಿದ್ದೀರಾ ? ಒಂದು ಒಳ್ಳೇ ಮಾತು ಆಡಿದ್ದೀರಾ? ಇಲ್ಲ ಅನ್ನೋದಾದರೆ, ಅವರು ನಿಮಗೆ ಎಷ್ಟೇ ಪರಿಚಿತರಿರಲಿ : ಸಹಾಯ ಕೇಳಬೇಡಿ. ಅದರ ಬದಲಿಗೆ ನೀವು ಬುದ್ಧಿವಂತರಾಗಿದ್ದಿದ್ದರೆ, ಅವರೊಂದಿಗೆ ಸದಾ ಸಂಪರ್ಕ ಇಟ್ಟುಕೊಂಡಿರುತ್ತಿದ್ದಿರಿ. ಅವರ ಮಿಸ್ಡ್‌ಕಾಲ್‌ಗೆ ಉತ್ತರಿಸುತ್ತಿದ್ದಿರಿ. ಅವರ ಮಗುವಿನ ಬರ್ತ್‌ಡೇ ಯಾವತ್ತು ಅಂತ ನೆನಪಿಟ್ಟುಕೊಂಡು ಒಂದು ಕಾರ್ಡ್‌ ಕಳಿಸುತ್ತಿದ್ದಿರಿ. ಅದ್ಯಾವುದನ್ನೂ ನೀವು ಮಾಡಿಲ್ಲವಾ? Don’t worry. ಇವತ್ತಿಂದ ಮಾಡಿ. ಮುಂದೆ ಸಹಾಯ ಆಗುತ್ತೋ ಇಲ್ಲವೋ : ಒಂದು ಸಂಬಂಧವನ್ನು ಮೇಲಿಂದ ಮೇಲೆ renew ಮಾಡಿಟ್ಟುಕೊಂಡರೆ ಅಷ್ಟರಮಟ್ಟಿಗೆ ಈವತ್ತಿನ ಬದುಕು ನಿನ್ನೆಯದಕ್ಕಿಂತ ಚೆನ್ನಾಗಿ ಮಾಡಿಕೊಂಡೆವು ಅಂತಲೇ ಅರ್ಥ.

ವರ್ಷದಿಂದ ವರ್ಷಕ್ಕೆ ಬದುಕು ಛೇಂಜಾಗುತ್ತೆ ಅಂದುಕೊಳ್ಳಬೇಡಿ. ‘ನನ್ನ ಪಾಲಿಗೆ ಟೂ ಥೌಸಂಡ್‌ ಫೋರ್‌ ಇದೆಯಲ್ಲ ? ತುಂಬ ಕಷ್ಟದ ವರ್ಷ. Very bad year’ ಅಂತ ಮಾತಾಡುತ್ತಿರುತ್ತಾರಲ್ಲ ? ಅವರು ದಡ್ಡರು. ಒಳ್ಳೆ ದಿನ, ಕೆಟ್ಟ ದಿನ, ಒಳ್ಳೆ ವರ್ಷ, ಕೆಟ್ಟ ವರ್ಷ ಅಂತ ಇರುವುದಿಲ್ಲ . ಈ ವರ್ಷ ಮಗ ಫೇಲಾದ, ದುಡ್ಡು ಕಳುವಾಯಿತು, ಅವಾರ್ಡು ಬರಲಿಲ್ಲ , ಬಿ.ಪಿ.ಶುರುವಾಯಿತು- ಹೀಗೆ ದೀಪಾವಳಿಯ ದಿನ ಖಾತೆ ಕಿರ್ದಿ ಎದುರಿಗಿಟ್ಟುಕೊಂಡು ಕುಳಿತ ವರ್ತಕನ ಹಾಗೆ ಎಲ್ಲವನ್ನೂ ಹೋಲ್‌ಸೇಲ್‌ ಆಗಿ ತೂಗಿ ನೋಡಿ ಒಂದು ನಿರ್ಧಾರಕ್ಕೆ ಬರಬೇಡಿ. ಒಂದು ವರ್ಷವೆಂಬ 365 ದಿನಗಳ ಕಂತೆಯಲ್ಲಿ ನೂರಾರು ಶುಭ ಮುಂಜಾವುಗಳಿರುತ್ತವೆ. ನಿನ್ನೆ ಮುಂಜಾನೆ ನೀವು ತೆಗೆದುಕೊಂಡ ನಿರ್ಧಾರ, ನಿಮಗೆ ಇವತ್ತಿನ ಮುಂಜಾನೆಯನ್ನು ಸಂತೋಷದಿಂದ ಆರಂಭಿಸಲು ಕಾರಣವಾಗುತ್ತದೆ. ಇವತ್ತಿನದಿವತ್ತಿಗೆ ಎಂಬಂತೆ ಬದುಕುವುದರಲ್ಲೂ ಸುಖವಿದೆ. ಇವತ್ತು ಅಮ್ಮನಿಗೆ ಫೋನು ಮಾಡ್ತೀನಿ, ಇವತ್ತು ಅಪ್ಪನಿಗೆ ಹಣ ಕಳಿಸ್ತೀನಿ, ಇವತ್ತು ರಾತ್ರಿ ಎರಡು ತಾಸು ಓದಲೇಬೇಕು, ಇವತ್ತು ಸೇದುವ ಸಿಗರೇಟು ಹತ್ತು ದಾಟಬಾರದು- ಹೀಗೆ ಇವತ್ತಿನ ಮಟ್ಟಿಗಷ್ಟೆ ತೆಗೆದುಕೊಳ್ಳುವ ನಿರ್ಧಾರಗಳು- ಅವು 365 ಇಂಟು 10 ಅಂತ ಲೆಕ್ಕ ಹಾಕಿದರೆ, ಮೂರು ಸಾವಿರದ ಆರುನೂರ ಐವತ್ತು ನಿರ್ಧಾರಗಳಾಗಿ- ಒಂದು ವರ್ಷದ ಲೆಕ್ಕಕ್ಕೆ ಜಮೆಯಾಗುತ್ತದೆ. ‘ಮುಂದಿನ ವರ್ಷ ಇಷ್ಟು ಹೊತ್ತಿಗೆ ಏನಾಗಿರ್ತೀನೋ ನೋಡು’ ಅಂದುಕೊಳ್ಳುವವನು ಕೇವಲ ಒಂದು ನಿರ್ಧಾರ ಕೈಗೊಂಡಿರುತ್ತಾನೆ. ಅದು ಈಡೇರುತ್ತದೋ ಇಲ್ಲವೋ ? ಯಾಂವ ಬಲ್ಲ ? ಆದರೆ ಪ್ರತಿನಿತ್ಯ ಹತ್ತು ಚಿಕ್ಕ ಚಿಕ್ಕ ನಿರ್ಧಾರಗಳನ್ನು ಕೈಗೊಳ್ಳುವವನು, ಕಡೇಪಕ್ಷ ಅವುಗಳಲ್ಲಿ ಐದನ್ನಾದರೂ ಈಡೇರಿಸಿಕೊಂಡಿರುತ್ತಾನೆ. ಆ ಪ್ರತಿನಿತ್ಯದ ಐದೈದು ನಿರ್ಧಾರಗಳೇ ಅಲ್ಲವೇ- ನಮ್ಮ ಬದುಕನ್ನು ಒಂದು ವರ್ಷದ ನಂತರ ಮತ್ತೊಂದು ಹೊಸ ಎತ್ತರಕ್ಕೆ ಕರೆದೊಯ್ಯುವುದು? ನಿಮಗೆ ಬಿಡುವಿದ್ದರೆ ಅವತ್ತು ಕೈಗೊಂಡ ನಿರ್ಧಾರ ಮತ್ತು ರಾತ್ರಿಯ ಹೊತ್ತಿಗೆ ಅದಕ್ಕೆ ಸಿಕ್ಕ ರಿಜಲ್ಟು- ಎರಡನ್ನೂ ಬರೆದಿಡಿ. ಒಂದು ವರ್ಷದ ನಂತರ ನಿಮ್ಮ ನಿರ್ಧಾರಗಳು ನಿಮ್ಮನ್ನು ಅದೆಷ್ಟು ಬದಲಿಸಿವೆಯೋ ಎಂಬುದು ನಿಮಗೆ ಅರ್ಥವಾಗುತ್ತದೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಈ ಆರೋಗ್ಯವಂತ ಸ್ವಾರ್ಥ ನಿಮ್ಮನ್ನು ತುಂಬ ಇಂಪ್ರೂವ್‌ ಮಾಡಿಬಿಟ್ಟಿರುತ್ತದೆ.

ಒಂದು ಚಿಕ್ಕ ಸೂಚನೆಯೆಂದರೆ- ನಿಮ್ಮ ಒಂದು ದಿನದ ನಿರ್ಧಾರದ ಪಟ್ಟಿಯಲ್ಲಿ ‘ಇವತ್ತು ಯಾರಿಗಾದರೂ ನನ್ನ ಕೈಲಾದ್ದನ್ನ ಮಾಡಿ ಅಷ್ಟರ ಮಟ್ಟಿಗೆ ನಿಸ್ವಾರ್ಥಿಯಾಗೋಣ’ ಎಂಬುದೂ ಸೇರಿಕೊಂಡಿದ್ದೇ ಆದರೆ, ನಿಮಗಿಂತ ದೊಡ್ಡ human being ಇನ್ನೊಬ್ಬರಿಲ್ಲ .

(ಸ್ನೇಹಸೇತು : ಹಾಯ್‌ ಬೆಂಗಳೂರ್‌ !)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more