ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶಿಕ್ಷೆಗೆ ಬಿದ್ದ ಮಗನನ್ನು ಸಾಕುವುದೆಂದರೆ...

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ನನ್ನ ಮಗನನ್ನು ನಾನು ತುಂಬ ಪ್ರೀತಿಯಿಂದ ಬೆಳೆಸಿದೆ. ಆದರೆ ಅವನು ‘ಅಶಿಕ್ಷೆಗೆ’ ಬಿದ್ದ. ಎಷ್ಟು ಹೇಳಿದರೂ ಮಾತು ಕೇಳಲ್ಲ. ಓದಲ್ಲ. ಹೊಡೆದರೂ ಬದಲಾಗಲ್ಲ. ಅವನನ್ನು ಎಲ್ಲಿಗೆ ಕರಕೊಂಡು ಹೋದರೂ ಅಲ್ಲಿ ಕೆಟ್ಟದಾಗಿ ನಡ್ಕೋತಾನೆ. ಅವಮಾನ ಆಗೋ ಹಾಗೆ ಮಾಡ್ತಾನೆ. ಕೈಗೆ ಏನು ಸಿಕ್ಕರೂ ಅದನ್ನ ಮುರೀತಾನೆ. ಓದೋದರಲ್ಲಿ ಅವನು ಹಿಂದು. ಇವನನ್ನು ಸರಿ ಮಾಡೋದು ಹೇಗೆ?

ಇದು ಅನೇಕ ತಾಯಂದಿರ ಪ್ರಶ್ನೆ. ಅಂಥವರ ಮಕ್ಕಳು ಭರಿಸಲು ಸಾಧ್ಯವೇ ಇಲ್ಲವೆಂಬಷ್ಟು ಅಶಿಕ್ಷೆಗೆ ಬಿದ್ದಿರುತ್ತಾರೆ. ಅವರನ್ನು ಯಾರೂ ಕಂಟ್ರೋಲು ಮಾಡಲಾರರು. ಶಾಲೆಯಿಂದಲೂ ದೂರು ತರುತ್ತಾರೆ. ಶಾಲೆಗೆ ಹೋಗೋದೇ ಇಲ್ಲ. ಚಿಕ್ಕ ವಯಸ್ಸಿಗಾಗಲೇ ಚಟಗಳು. ಮಾತು ಭಯಂಕರ ಅಸಭ್ಯ. ಮನೆಯಲ್ಲಿ ಕಳವು ಪ್ರಾರಂಭಿಸುತ್ತಾರೆ. ವಯಸ್ಸಿಗೆ ಮೀರಿದ ಮಾತು, ಚೇಷ್ಟೆ , ತನಗಿಂತ ಚಿಕ್ಕ ವಯಸ್ಸಿನ ಹುಡುಗಿಯರೊಂದಿಗೆ ಕೆಟ್ಟ ವರ್ತನೆ, ಪ್ರಾಣಿ ಪಕ್ಷಿಗಳಿಗೆ ಹಿಂಸೆ ಕೊಡೋದು, ಸುಳ್ಳು ಹೇಳೋದು, ತನ್ನ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿದರೆ ಅಸಹ್ಯವಾಗಿ ‘ಹೋ’ ಅಂತ ಅಳೋದು, ತಿರುಗಿ ಬೀಳೋದು, ವಿಕಾರವಾದ ಅಂಗಚೇಷ್ಟೆಗಳನ್ನು ಮಾಡೋದು- ಇತ್ಯಾದಿ. ಸಾಮಾನ್ಯವಾಗಿ ಒಬ್ಬಂಟಿ ಮಕ್ಕಳು ಅಥವಾ ತುಂಬ ಮುದ್ದಿನಿಂದ ಬೆಳೆಸಿದ ಮಕ್ಕಳು, ಅಜ್ಜ-ಅಜ್ಜಿ ಸಾಕಿದ ಮಕ್ಕಳು, ಕೆಟ್ಟ ನೆರೆಹೊರೆಯಲ್ಲಿ ಬೆಳೆದ ಮಕ್ಕಳು, ದಂಪತಿಗಳ ಮಧ್ಯೆ ಜಗಳವಿದ್ದರೆ-ಅಂಥವರ ಮಕ್ಕಳು-ಇವರಲ್ಲಿ ನಾನು ಮೇಲೆ ವಿವರಿಸಿದಂಥ ಅಶಿಕ್ಷೆಯ ವರ್ತನೆಗಳಿರುತ್ತವೆ.

Alabeda Papachchi neenu......ಇದನ್ನು ಅಶಿಕ್ಷೆ ಅನ್ನದೆ ಬೇರೆ ಪದವನ್ನೇ ಬಳಸಲಾಗುವುದಿಲ್ಲ. ಈ ಮಕ್ಕಳಿಗೆ ಶಿಕ್ಷೆಯದೇ ಕೊರತೆ. ಶಿಕ್ಷೆ ಅಂದರೆ ಅದನ್ನು ನೀವು punishment ಅಂತ ಅರ್ಥ ಮಾಡಿಕೊಳ್ಳಬೇಡಿ. ಅಯ್ಯೋ, ಅವನನ್ನು ಎಷ್ಟು ಹೊಡೀತೀನಿ ಗೊತ್ತಾ ಸಾರ್‌? ನೆಲಕ್ಕೆ ಬೀಳೋ ಹಾಗೆ ಹೋಡೀತೀನಿ. ಏನೂ ಉಪಯೋಗವಿಲ್ಲ ಅಂತ ತಾಯಂದಿರು ಉತ್ತರಿಸುತ್ತಿರುತ್ತಾರೆ. ಅವರಿಗೆ ನಾನು ಹೇಳೋದಿಷ್ಟೆ : ನೀವು ಮಗುವನ್ನು ಶಿಕ್ಷಿಸಿದ್ದೀರಿ, ನಿಜ. ಆದರೆ at wrong time! ಶಿಕ್ಷೆ ಕೊಟ್ಟ ಸಮಯ, ಸನ್ನಿವೇಶ ಸರಿಯಾದುದಲ್ಲ.

ಒಂದು ವಿಷಯ ಚೆನ್ನಾಗಿ ತಿಳಿದುಕೊಳ್ಳಿ: ಮಗು ಅನ್ನೋದು ಒಂದು ಪ್ರಾಣಿ. ಶುದ್ಧ animal. ಅದೊಂದು ಖಾಲಿ ಕಂಪ್ಯೂಟರ್‌. ಅದರೊಳಕ್ಕೆ ನೀವು feed ಮಾಡುವ data ಏನಿರುತ್ತದೋ, ಅದು ಅದನ್ನೇ ಪ್ರಕಟಿಸುತ್ತದೆ. ಪ್ರಾಣಿಯನ್ನು ಸಾಕುವವರಿಗೆ ಅದನ್ನು ಸಾಕುವ, ಶಿಸ್ತಿಗೆ ತರುವ, ಮ್ಯಾನರ್ಸು ಕಲಿಸುವ ವಿದ್ಯೆ ಗೊತ್ತಿರಬೇಕು. ಎಲ್ಲ ತಾಯಂದಿರೂ ಮಕ್ಕಳನ್ನು ಸಾಕಲಾರರು. ‘ನನ್ನ ಮಕ್ಕಳು ಇಂಥೋರಾಗಿ ಬಿಟ್ಟರಲ್ಲಾ’ ಅಂತ ಕೊರಗುವ ಹೆಣ್ಣು ಮಕ್ಕಳಿಗೆ ಹೇಳಬೇಕು : ನಿಮ್ಮನ್ನು ನಿಮ್ಮ ತಾಯಿ ಸಾಕಿದಷ್ಟು ಶ್ರದ್ಧೆಯಿಂದ ನಿಮ್ಮ ಮಕ್ಕಳನ್ನು ನೀವು ಸಾಕಿಲ್ಲ !

ಮಕ್ಕಳನ್ನು ಮುದ್ದು ಮಾಡುವುದಕ್ಕೂ ಒಂದು ವಿಧಾನವಿರುತ್ತದೆ. ಅವರನ್ನು ತೀರ ಅವುಚಿಕೊಂಡು ಕೂರಬಾರದು. (ನಾಯಿಮರಿಯನ್ನು ಸದಾ ಎತ್ತಿಕೊಂಡಿರಬಾರದು) ಮಗುವಿಗೆ ಎಲ್ಲೆಂದರಲ್ಲಿ ಮುತ್ತು ಕೊಡಬಾರದು. ಕೆನ್ನೆ ಮತ್ತು ಹಣೆಗೆ ಮಾತ್ರ ಮುತ್ತಿಡಬೇಕು. (ನಾಯಿಗೆ ಮುತ್ತು ಕೊಡಲೇಬಾರದು). ಮಗುವಿಗೆ ಅತ್ತ ಕೂಡಲೇ ತಿನ್ನಲು ಕೊಡಬಾರದು. ಅದರ ತಿನ್ನುವ ಸಮಯ ನಿಗದಿಗೊಳಿಸಬೇಕು. (ನಾಯಿಗೂ ಅಷ್ಟೆ ) ಎಂದೋ ಮಾಡಿದ ತಪ್ಪಿಗೆ ಮತ್ತೆಂದೋ ರಪರಪನೆ ಬಡಿಯಬೇಡಿ. ಇದು ಆ ತಪ್ಪಿಗಾಗಿ ಇವತ್ತು ಆಗುತ್ತಿರುವ ಶಿಕ್ಷೆ ಎಂಬುದನ್ನು ಮಗು ನೆನಪಿಟ್ಟುಕೊಳ್ಳಲಾರದು. ಅದು ತಪ್ಪು ಮಾಡಿದ ತಕ್ಷಣ ಒಂದು ಗದರಿಕೆ, ಕಣ್ಣ ಬೆದರಿಕೆ, ಚಿಕ್ಕ punishment ಕೊಟ್ಟುಬಿಡಿ. (ನಾಯಿಯ ನೆನಪಿನ ಶಕ್ತಿ ತುಂಬ ಚಿಕ್ಕದು: ಮಗುವಿನದಾದರೂ ಅಷ್ಟೆ.) ಮಕ್ಕಳು ಅತಿಯಾಗಿ, ಅಸಹ್ಯವಾಗಿ ಮುದ್ದುಗರೀತವೆ. ಆಗ ಅವರನ್ನು neglect ಮಾಡಿ. ಇಗ್ನೋರ್‌ ಮಾಡಿ. ಶಿಕ್ಷೆ ಕೊಟ್ಟ ಮರುಕ್ಷಣವೇ, ನಿಮಗೆ ಆ ಬಗ್ಗೆ ಬೇಸರವಾಗಿ ಕಣ್ಣೀರಿಟ್ಟುಕೊಂಡು ‘ಬಾರೋ ಕಂದಾ’ ಅಂತ ತಬ್ಬಿಕೊಂಡು ಮುದ್ದು ಮಾಡಬೇಡಿ. ನೀವು sorry ಕೇಳ್ತಿದೀರಿ ಅಂದುಕೊಳ್ಳುತ್ತದೆ ಮಗು.(ನಾಯಿ ಥರಾ!) ಎಲ್ಲಿಗಾದರೂ ಕರೆದುಕೊಂಡು ಹೋಗುವ ಪ್ರಸಂಗವಿದ್ದರೆ, ಮಗುವನ್ನು ಅದಕ್ಕೆ ಸಿದ್ಧಗೊಳಿಸಿ. ಅಲ್ಲಿ ಸರಿಯಾಗಿ ವರ್ತಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತ ಬನ್ನಿ. ಒಂದೆರಡು ಸಲ ಬೇರೆ ಬೇರೆ ಕಡೆಗಳಿಗೆ ಕರೆದೊಯ್ದು ಅವರ ವರ್ತನೆಯನ್ನು ಒಂದು ಹದಕ್ಕೆ ತಂದು, ಆ ನಂತರ ನೀವು ಕರೆದೊಯ್ಯಬೇಕಾದಲ್ಲಿಗೆ ಕರೆದೊಯ್ಯಿರಿ. (ಪ್ರತಿನಿತ್ಯ ನಾಯಿಗೆ ವಾಕಿಂಗ್‌ ಮಾಡಿಸಿದಂತೆ!). ಮಗು ಯಾರ ಜೊತೆ ಆಡುತ್ತೆ ಅಂತ ಸದಾ ಗಮನಿಸುತ್ತಿರಿ.(ಸಾಕಿದ ನಾಯಿಯನ್ನು ಬೀದಿ ನಾಯಿಗಳ ಜೊತೆ ಬಿಡಬೇಡಿ.). ಅಸಹ್ಯಕರವಾಗಿ ಅತ್ತರೆ ನೋಡಿದವರು ಏನಂದುಕೊಳ್ಳುತ್ತಾರೋ ಅಂತ ಆ ತಕ್ಷಣ ಮಗುವಿನ demandಗಳಿಗೆ ಈಡಾಗಬೇಡಿ. ಅಳುವ ಮಗನನ್ನು ಪೂರ್ತಿಯಾಗಿ ignore ಮಾಡಿ.(ಕಟ್ಟಿ ಹಾಕಿದ ನಾಯಿ ಬೊಗಳಿ ಅಳುತ್ತದಲ್ಲಾ?). ವಯಸ್ಸಿಗೆ ಮೀರಿದ ಆಟಿಗೆ, ಗಿಫ್ಟು, ದುಬಾರಿ ಪೆನ್ನು, ನಾಲ್ಕನೇ ಕ್ಲಾಸಿಗೆಲ್ಲ ವಾಚು, ಎಸೆಸೆಲ್ಸಿ ಹೊತ್ತಿಗೆ ಬೈಕು ಇವೆಲ್ಲ ಮಗುವನ್ನು ಹಾಳು ಗೆಡುವುವ ಸಾಧನಗಳು. ಊಟ ಬಿಟ್ಟು ಮಲಗಿದಾಗ ದಮ್ಮಯ್ಯ ಗುಟ್ಟೆ ಹಾಕಿ, ತುತ್ತು ಮಾಡಿ ತಿನ್ನಿಸುವುದು ನಿಮ್ಮದೇ stupidity. ಖಾಯಿಲೆ ಬಿದ್ದಾಗ ಮಗುವನ್ನು ವಿಪರೀತ ಮುದ್ದು ಮಾಡಬೇಡಿ. (ನಾಯಿಗೆ ನೀವು ಮುದ್ದು ಮಾಡದಿದ್ದರೂ, ಕೊಡಿಸಿದ ಇಂಜೆಕ್ಷನ್‌ work ಆಗ್ತಾ ಇರುತ್ತೆ.)

ತೀರ ಅಶಿಕ್ಷೆಗೆ ಬಿದ್ದ ಮಕ್ಕಳನ್ನು ಹೊಡೆಯದೇ ಸರಿಪಡಿಸುವುದು ಕಷ್ಟ , ನಿಜ. ಆದರೆ ಹೊಡೆಯುವುದನ್ನು ನೀವೇ ರೂಢಿ ಮಾಡಿಕೊಂಡುಬಿಡಬೇಡಿ. ಅದು ನೀವೇ ಕೈಯ್ಯಾರೆ ಹಾಳು ಮಾಡಿರುವ animal ಅನ್ನೋದು ನೆನಪಿರಲಿ. punishment ನಿಮಗೂ ಆಗಬೇಕಿದೆ. ಟೀವಿ, ಸಿನೆಮಾ, ಹರಟೆಕಟ್ಟೆ ಇತ್ಯಾದಿಗಳನ್ನು ಬಿಟ್ಟುಬಿಡಿ. ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಿರಿ. ಆದರೆ ಮೂಡ್‌ ಮೃದುವಾಗಿದ್ದಾಗ ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ನಿಮ್ಮ ಕಷ್ಟ, ತೊಂದರೆ, ದುಃಖಗಳನ್ನು ಹೇಳಿಕೊಳ್ಳಿ. ಮಗುವಿನ ವರ್ತನೆಯಲ್ಲಿ ಬದಲಾವಣೆ ಬಂದಾಗ ಅದಕ್ಕೆ ಪ್ರೋತ್ಸಾಹವೆಂಬಂತೆ ಚಿಕ್ಕ ಚಿಕ್ಕ reward ಗಳನ್ನು ಕೊಡಿ. ಅದರ ಅಭಿರುಚಿಗಳನ್ನು ಗಮನಿಸಿ ಮಗುವಿಗೆ ಗಿಟಾರು, ಮೃದಂಗ, ಗರಡಿ, ಸ್ಟ್ಯಾಂಪು ಸಂಗ್ರಹ, ಈಜು- ಈ ತರಹದ ಹವ್ಯಾಸಗಳನ್ನು ಹಾಕಿಕೊಡಿ.

ಪ್ಲೀಸ್‌ ಮತ್ತು ಥ್ಯಾಂಕ್ಸ್‌ ಎಂಬ ಪದಗಳನ್ನು ಮೇಲಿಂದ ಮೇಲೆ ಬಳಸಬೇಕು. ಹಿರಿಯರು ಬಂದಾಗ ಎದ್ದು ನಿಲ್ಲಬೇಕು. ಇಸಕೊಂಡ ವಸ್ತುಗಳನ್ನು ಹಿಂತಿರುಗಿಸಬೇಕು. ರೂಮಿನೊಳಕ್ಕೆ ಬರುವಾಗ ಕದ ತಟ್ಟಿ ಬರಬೇಕು. ಇನ್ನೊಬ್ಬರ ಹಾಸಿಗೆ ಮೇಲೆ ಕೂಡಬಾರದು. ಇನ್ನೊಬ್ಬರು ಮಾತನಾಡುವಾಗ ಮಧ್ಯೆ ಬಾಯಿ ಹಾಕಬಾರದು. ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಕಿರುಚಿ ಮಾತನಾಡಬಾರದು. ವಿನಾ ಕಾರಣ ನಗಬಾರದು. ಸಣ್ಣದಕ್ಕೂ ಅಳಬಾರದು- ಇವುಗಳನ್ನೆಲ್ಲ ನೀವು ಪಾಲಿಸಿತ್ತಿರುವುದೇ ಆದರೆ ಮಾತ್ರ ನಿಮ್ಮ ಮಕ್ಕಳಿಗೆ ಹೇಳಿಕೊಡಿ.

ಅಶಿಕ್ಷೆಯ ಮಗುವನ್ನು ಸಾಕುವುದು, ಕೆಟ್ಟ ಗಂಡನನ್ನು ಭರಿಸಿಕೊಳ್ಳುವುದಕ್ಕಿಂತ ಕಷ್ಟ ಮತ್ತು ಅದಕ್ಕಿಂತ ಹೆಚ್ಚು ಅನಿವಾರ್ಯ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)


ಪೂರಕ ಓದು-
ಕಣ್ಣಲ್ಲಿ ಕಾಮ, ಕೈಯಲ್ಲಿ ಆಮ್ಲ


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X