ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಣಾಧರಿ ಎಂಬ ಸೋದರಿಯಾಬ್ಬಳು ವರ್ಷದ ಕನ್ನಡತಿಯಾಗಲಿ !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಈ ಪತ್ರವನ್ನು ಎಂ.ಪಿ.ಪ್ರಕಾಶ್‌ ಅವರಿಗೆ ಬರೆಯಬೇಕೆಂದುಕೊಂಡೆನಾದರೂ, ವಿಷಯ ನಿಮಗೂ ಗೊತ್ತಿರಲಿ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದನ್ನು ಪ್ರಕಾಶ್‌ರಿಗೆ ಬರೆಯುವ ಉದ್ದೇಶವಿಷ್ಟೆ ; ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಅವರು ಫೈನಲೈಸ್‌ ಮಾಡಲಿದ್ದಾರೆ. ಅವರ ಗಮನಕ್ಕೆ ಇದು ಬರಲಿ ಎಂಬುದಷ್ಟೆ ನನ್ನ ಉದ್ದೇಶ.

ಈ ಬರಹದೊಂದಿಗೆ ಪ್ರಕಟವಾಗಿರುವ ಫೋಟೋ ವೀಣಾಧರಿ ಎಂಬ ಹೆಣ್ಣು ಮಗಳದು. ಬೆಳಗ್ಗೆ ಎದ್ದು ಈ ವಾರದ ತರಂಗ ಕೈಗೆತ್ತಿಕೊಂಡ ತಕ್ಷಣ ಮುಖಪುಟದ ಮೇಲೆ ಈಕೆಯ ಪೋಟೋ ಕಂಡದ್ದೇ ಉಲ್ಲಾಸಗೊಂಡುಬಿಟ್ಟೆ. ಕುಂದಾಪುರದ ಪತ್ರಕರ್ತ ಮಿತ್ರರೊಬ್ಬರು ‘ನೀವು ಬರೆಯಬೇಕು ವೀಣಾಧರಿ ಅವರ ಬಗ್ಗೆ’ ಅಂತ ತುಂಬ ಸಲ ಹೇಳಿದ್ದರು. ನನಗಿಂತ ಮುಂಚೆ ಆ ಕೆಲಸವನ್ನು ತರಂಗ ಮಾಡಿದೆ. ಅದಕ್ಕೆ ಅಭಿನಂದನೆಗಳು.

Veenadhariತನಗೆ ಎಚ್‌.ಐ.ವಿ. ಸೋಂಕಿದೆ ಅಂತ ಬಹಿರಂಗವಾಗಿ ಹೇಳಿಕೊಂಡು, ತನ್ನಂತೆಯೇ ಎಚ್‌.ಐ.ವಿ. ಪೀಡಿತರಾದ ಹೆಣ್ಣು ಮಕ್ಕಳನ್ನು ಸಂಘಟಿಸುತ್ತಾ ದೊಡ್ಡದೊಂದು ಪ್ರವಾಹದ ವಿರುದ್ಧ ಈಜುತ್ತಿರುವ ವೀಣಾಧರಿ ಎಂಬ ಸೋದರಿ-ನನ್ನ ದೃಷ್ಟಿಯಲ್ಲಿ ಇಂತಹವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಮಾಡಿದರೆ ಎಂ.ಪಿ.ಪ್ರಕಾಶ್‌ ತಮ್ಮ ಸರಕಾರದ ಗೌರವವನ್ನು ಹೆಚ್ಚಿಸಿಕೊಂಡಂತಾಗುತ್ತದೆ.

ಹಿಂದೆ ಡಾ.ಜೀವರಾಜ ಆಳ್ವ ತೀರಿಕೊಂಡಾಗ ಈ ಮಾತು ಬರೆದಿದ್ದೆ. ನಂಗೆ ಡಯಾಬಿಟೀಸ್‌ ಇದೆ ಅಂತ ಹೇಳಿಕೊಳ್ಳುವುದಕ್ಕೇನೇ ಭಯಂಕರ ಹಿಂಜರಿಕೆ, ಸಂಕೋಚ ಮಾಡಿಕೊಳ್ಳುವ ಸಮಾಜ ನಮ್ಮದು. ನಂಗೆ ಸಕ್ಕರೆ ಖಾಯಿಲೆ ಇಲ್ಲ ಅಂತ ತೋರಿಸಿಕೊಳ್ಳಲಿಕ್ಕೋಸ್ಕರವೇ ಸಾರ್ವಜನಿಕರೆದುರು ಎಂ.ಜಿ.ಆರ್‌. ತಟ್ಟೆಗಟ್ಟಲೆ ಲಡ್ಡು-ಮಿಠಾಯಿ ತಿಂದುಬಿಡುತ್ತಿದ್ದುದನ್ನು ಕಂಡಿದ್ದೇನೆ. ಈಗಲೂ ಸಕ್ಕರೆರಹಿತ ಕಾಫಿ ಕೇಳುವಾಗ ಮಧುಮೇಹಿಗಳು ಗುಸಪಿಸ ಅಂತ ಮಾತಾಡುತ್ತಿರುತ್ತಾರೆ. ಅಂಥದರಲ್ಲಿ ತಮಗೆ ಎಚ್‌.ಐ.ವಿ. ಸೋಂಕಿದೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಳ್ಳಲು ನಿಜಕ್ಕೂ ಎಂಟು ಗುಂಡಿಗೆ ಬೇಕು. ಅಸಲಿಗೆ, ಇಂಥದ್ದೊಂದು ರೋಗ ಬಂದಿದೆ ಎಂಬುದನ್ನು ಒಪ್ಪಿಕೊಂಡು ಕಾಲೂರಿ ನಿಲ್ಲಲಿಕ್ಕೂ ಮನುಷ್ಯನಿಗೊಂದು ಮನೋಸಿದ್ಧತೆ ಬೇಕು.

ಅನೇಕರು ತಮಗೆ ಎಚ್‌.ಐ.ವಿ. ಇದೆ ಅಂತ ಗೊತ್ತಾಗಿಯೇ ಕುಟುಂಬದ ಸಮೇತ ಅತ್ಮಹತ್ಯೆ ಮಾಡಿಕೊಂಡು ಬಿಡುತ್ತಾರೆ. ರೋಗದ ಬಗ್ಗೆ ಇರುವ ಭಯ, ತಪ್ಪು ಕಲ್ಪನೆಗಳು, ಸಮಾಜಕ್ಕಿರುವ ದೃಷ್ಟಿಕೋನ, ಅರ್ಥಹೀನ ಅಹಂ-ಇವೆಲ್ಲವೂ ಈ ವರ್ತನೆಗೆ ಕಾರಣವಾಗಬಹುದು. ಆದರೆ ಡಾ.ಜೀವರಾಜ ಆಳ್ವ ಇವೆಲ್ಲವುಗಳನ್ನು ಮೀರಿ ನಿಲ್ಲಬಹುದಿತ್ತು. ಆತ ಒಬ್ಬ ರಾಜಕಾರಣಿಯಾಗಿದ್ದ. ಯುವಕರ ಪಾಲಿನ ಹೀರೋ ಆಗಿದ್ದ. ಸ್ವತಃ ವೈದ್ಯನಾಗಿದ್ದ. ಅಧಿಕಾರದಲ್ಲಿ ಇಲ್ಲದಿದ್ದಾಗ್ಯೂ ಒಬ್ಬ ಮುಖ್ಯಮಂತ್ರಿಗಿರಬಹುದಾದಷ್ಟು ಜನಪ್ರಿಯತೆ, ಪ್ರಭಾವ ಹೊಂದಿದ್ದ. ಅಕಸ್ಮಾತ್‌ ಜೀವರಾಜ್‌ ಆಳ್ವ ತಮಗೆ ಎಚ್‌.ಐ.ವಿ. ಇದೆ ಅಂತ ಘೋಷಿಸಿ, ತಮ್ಮಂತೆಯೇ ಈ ಮದ್ದಿಲ್ಲದ ಖಾಯಿಲೆಗೆ ತುತ್ತಾದವರನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ, well beingಗಾಗಿ, ಚಿಕಿತ್ಸೆಗಾಗಿ, ಸಾಮಾಜಿಕ ಸ್ಥಾನಮಾನಕ್ಕಾಗಿ ಹೋರಾಟ ಮಾಡುತ್ತೇನೆ ಅಂತ ಒಂದು ಮಾತು ಹೇಳಿದ್ದರೆ ಸಾಕಿತ್ತು. ಡಾ.ಆಳ್ವ ಈ ನೆಲದ ಇತಿಹಾಸದಲ್ಲಿ ಅಜರಾಮರರಾಗಿ ಹೋಗುತ್ತಿದ್ದರು. ಏಡ್ಸ್‌ನಂತಹ ನೈಸರ್ಗಿಕ ಅನಾಹುತದ ವಿರುದ್ಧ ಒಂದು ಸಾಮಾಜಿಕ ಹೋರಾಟ ಆರಂಭವಾಗಬೇಕಾದುದೇ ಹಾಗೆ. ಆಳ್ವರಂಥವರು ಆ ಹೋರಾಟದ ನಾಯಕತ್ವವಹಿಸಬೇಕಾಗಿತ್ತು. ಆ ಕೆಲಸವನ್ನು ದಕ್ಷಿಣ ಕನ್ನಡದ ಮೂವತ್ತೆೈದರ ಹೆಣ್ಣುಮಗಳು ವೀಣಾಧರಿ ಮಾಡಿದ್ದಾಳೆ.

ಆಕೆ ಅನಕ್ಷರಸ್ಥೆಯಲ್ಲ. ಸಂಗೀತದಲ್ಲಿ ಬಿ.ಎ. ಮಾಡಿಕೊಂಡಾಕೆ. ಅಪ್ಪಟ ಮಧ್ಯಮ ವರ್ಗದ ಗೃಹಿಣಿ. ಒಬ್ಬ ಮಗನ ತಾಯಿ. ಆಕೆಯ ಪತಿ ಖಾಯಿಲೆ ಬಿದ್ದಾಗ, ಅದೆಂಥ ಖಾಯಿಲೆ ಎಂಬುದು ವೀಣಾಗೆ ಗೊತ್ತಿರಲಿಲ್ಲ. ಆಸ್ಪತ್ರೆಯಲ್ಲಿ ದಿನ ಎಣಿಸತೊಡಗಿದ ಪತಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾದರು. ಅದಕ್ಕೆಂದೇ ರಕ್ತ ಪರೀಕ್ಷೆ ಮಾಡಿಸಿದ ಡಾಕ್ಟರುಗಳು ವೀಣಾ ಅವರ ಪತಿಗೆ ಏಡ್ಸ್‌ ಬಂದಿರುವುದನ್ನು ಖಚಿತ ಪಡಿಸಿದ್ದರು. ಅದರ ಬೆನ್ನಲ್ಲೇ ವೀಣಾಗೂ ಎಚ್‌.ಐ.ವಿ. ಸೋಂಕಿರುವುದು ಖಚಿತವಾಗಿತ್ತು. ಅದಾಗಿ ಇವತ್ತಿಗೆ ಹನ್ನೆರಡು ವರ್ಷಗಳಾಗಿವೆ. ವೀಣಾ ಉಳಿದ ರೋಗಿಗಳಂತೆ ಸಾಯುತ್ತ ಬದುಕಿಲ್ಲ , ಸತ್ತುಬದುಕಿಲ್ಲ. ಸಾವೆಂಬ ಸಾವನ್ನು ಕ್ಷಣಕ್ಷಣಕ್ಕೂ ಬೆದರಿಸುತ್ತ ಇಡೀ ಜಗತ್ತಿಗೆ ಮಾದರಿಯಾಗುವಂತೆ ಬದುಕುತ್ತಿದ್ದಾರೆ.

ಸಾಮಾನ್ಯವಾಗಿ ಎಚ್‌.ಐ.ವಿ. ಸೋಂಕಿನಿಂದ ಆಗುವ ಸಣ್ಣಪುಟ್ಟ ಆರೋಗ್ಯಸಂಬಂಧಿ ಸಮಸ್ಯೆಗಳು ಆಕೆಗೂ ಆಗಿವೆ. ಸರ್ಪಸುತ್ತು ಅಂತ ಕರೆಯಲ್ಪಡುವ ಹರ್ಪಿಸ್‌ ಖಾಯಿಲೆ ಕಣ್ಣಿಗೆ ಬಂದು ಬಾಧಿಸಿದೆ. ಆದರೆ ಈ ಹೆಣ್ಣು ಮಗಳು ಅವೆಲ್ಲ ಬಾಧೆಗಳಿಗೂ ತನ್ನದೇ cureಗಳನ್ನು ಕಂಡುಕೊಂಡಂತಿದ್ದಾಳೆ. ಬಸಳೆ, ಒಂದೆಲಗ, ಅಜವಾನ, ಪುದಿನ, ಕಾಳು ಮೆಣಸು- ಈ ಥರದವುಗಳನ್ನು ಬಳಸಿ ಕಷಾಯಗಳು, ಚಿಕ್ಕಚಿಕ್ಕ ಯೋಗಾಸನಗಳು, ನಿಯಮಿತ ಉಪವಾಸಗಳು, ಎಲ್ಲಕ್ಕಿಂತ ಹೆಚ್ಚಾಗಿ positive thinking ಈಕೆಯನ್ನು ನಿಜಕ್ಕೂ ಆರೋಗ್ಯವಾಗಿಟ್ಟಿವೆ. ತನ್ನ ಮನೆಯಲ್ಲೇ ಈ ಸೊಪ್ಪು-ಮೂಲಿಕೆಗಳನ್ನು ಬೆಳೆಸಿಕೊಂಡಿದ್ದಾಳೆ. ಹಟಕ್ಕೆ ಬಿದ್ದು ಸಾತ್ವಿಕ ಗೃಹಿಣಿಯಾಬ್ಬಳು ಬದುಕಿನ ಬವಣೆಗಳ ವಿರುದ್ಧ ಹೋರಾಡುತ್ತಾಳಲ್ಲ ? ಹಾಗೆ, ಎಚ್‌.ಐ.ವಿ.ಯಂತಹ ರಾಕ್ಷಸ ರೋಗದ ವಿರುದ್ಧ ಹೋರಾಡಿದ್ದಾಳೆ, ಹೋರಾಡುತ್ತಲೇ ಇದ್ದಾಳೆ.

ವೀಣಾಧರಿಯ ದನಿಯಲ್ಲಿ ಪಶ್ಚಾತ್ತಾಪ, ಕೀಳರಿಮೆ, ಅನುಕಂಪ, ಬೇಡುವಿಕೆ, ಭೀತಿ-ಯಾವುದು ಇಲ್ಲ. ಈಕೆಗೆ ತಾನು ಮಾಡುತ್ತಿರುವುದೇನು ಅಂತ ಗೊತ್ತಿದೆ. ಅದಕ್ಕಿಂತ ದೊಡ್ಡದಿನ್ನೊಂದಿಲ್ಲ ಎಂಬುದೂ ಗೊತ್ತಿದೆ. ಗೊತ್ತಿರುವಷ್ಟನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾಳೆ.

ನನ್ನ ವಾದವೇನೆಂದರೆ, ವೀಣಾಧರಿ ಎಂಬ ಹೆಣ್ಣು ಮಗಳಿಗೆ ನಮ್ಮ ಅನುಕಂಪ ತೋರಿಸಬೇಕಿಲ್ಲ. ಅದನ್ನಾಕೆ ನಿರೀಕ್ಷಿಸುವುದೂ ಇಲ್ಲ. ಆದರೆ ಎಂಥ ಜೀವವೇ ಆದರೂ ಒಂದು ಮೆಚ್ಚುಗೆಯನ್ನು ನಿರೀಕ್ಷಿಸುತ್ತದೆ. ರಾಜ್ಯೋತ್ಸವ ಪ್ರಶಸ್ತಿ ಕೂಡ ಅಂಥ ಮೆಚ್ಚುಗೆಗಳ ಪೈಕಿ ಒಂದು. ‘ನೀನು ಮಾಡುವ ಹೋರಾಟ ಮಾದರಿಯಾದುದು. ನಿನ್ನ ಬಗ್ಗೆ ನಮಗೆ ಮೆಚ್ಚುಗೆಯಿದೆ. ನಮ್ಮ ಬೆಂಬಲವಿದೆ. ಇದನ್ನು ಮುಂದುವರೆಸಿಕೊಂಡು ಹೋಗು’ ಎಂಬಂತಹ ನೂರು ಮಾತುಗಳನ್ನು ಒಂದು ಪ್ರಶಸ್ತಿ ಹೇಳಬಲ್ಲದಾಗಿರುತ್ತದೆ.

ಸಾಮಾನ್ಯವಾಗಿ ಎಚ್‌.ಐ.ವಿ. ಅಂದಕೂಡಲೇ ಅದು ಯಾಕೆ ಬಂತು? ಬಂದವರ ಚಾರಿತ್ರ್ಯಎಂಥದ್ದು- ಅಂತ ಮಾತನಾಡತೊಡಗುತ್ತದೆ ಅವಿವೇಕಿಗಳ ಪ್ರಪಂಚ. ಏಡ್ಸ್‌ನಂತಹ ರೋಗ ಕಾಣಿಸಿಕೊಂಡು ದಶಕಗಳೇ ಸಂದುಹೋಗಿರುವ ಈ ಸಂದರ್ಭದಲ್ಲಿ ಅದು ಯಾಕೆ ಬಂತು? ಅಂತ ಕಡ್ಡಿ ಕೆದರುವುದರಲ್ಲಿ ಅರ್ಥವಿಲ್ಲ. ಬರಬಾರದಿತ್ತು ; ಬಂದಾಗಿದೆ. ಅದರ ವಿರುದ್ಧ ಬಡಿದಾಡಬೇಕು. ಬಡಿದಾಡುವವರ ಬೆನ್ನಿಗೆ ನಾವಲ್ಲದೆ ಇನ್ಯಾರು ನಿಲ್ಲಬೇಕು? ಇದನ್ನೆಲ್ಲ ಅರ್ಥ ಮಾಡಿಕೊಳ್ಳಬಲ್ಲ ಪ್ರಜ್ಞಾವಂತಿಕೆ ಎಂ.ಪಿ. ಪ್ರಕಾಶ್‌ಗಿದೆ. ಅವರು ನನ್ನ ಸ್ನೇಹಿತರು. ನಾನಾದರೂ ಅವರನ್ನು ಬೇರೇನೂ ಕೇಳಿದವನಲ್ಲ. ಇದೊಂದು ಕೆಲಸ ಮಾಡಿಕೊಡಲಿ.

ತೀರ ಇಷ್ಟೊಂದು ದೀರ್ಘವಾಗಿ ಇದನ್ನೇಕೆ ಬರೆಯುತ್ತಿದ್ದೇನೆಂದರೆ, ನಾಡಿನ ಪ್ರತಿ ಜಿಲ್ಲೆ-ಪ್ರತಿ ತಾಲೂಕಿನಲ್ಲೂ ಈ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಮಧ್ಯಮ ವರ್ಗದ ಮನೆಗಳಲ್ಲಿ ಕಾಣಿಸಿಕೊಂಡಿದೆ. ಮುಂಚಿನ ಹಾಗೆ high risk groupನ ಜನಕ್ಕೆ ಮಾತ್ರ ಈ ಖಾಯಿಲೆ ಬರುತ್ತದೆ ಎಂಬಂತಿಲ್ಲ. ‘ಓ ಮನಸೇ’ ಆರಂಭಿಸಿದ ನಂತರ ಅದಕ್ಕೆ ಬರುವ ಪತ್ರಗಳ ಸಂಖ್ಯೆ ಕಂಡ ನಂತರವೇ ಈ ಖಾಯಿಲೆಯ ಅಗಾಧತೆ ಎಂಥದೆಂಬುದು ನನಗೂ ಅರಿವಾದದ್ದು. ತಮಗೆ ಎಚ್‌.ಐ.ವಿ. ಆಗಿದೆ ಅಂತ ಗೊತ್ತಾದ ತಕ್ಷಣದಿಂದ, ಪೂರ್ತಿಯಾಗಿ ಪ್ರಕಟಗೊಳ್ಳುವ ಏಡ್ಸ್‌ನ ಅವಧಿಯ ತನಕ ಒಬ್ಬ ರೋಗಿ ಮಾನಸಿಕವಾಗಿ ಅದೆಷ್ಟು ನರಳುತ್ತಾನೋ-ಅವನೇ ಬಲ್ಲ. ಹಾಗೆ ನರಳುವವರಿಗೆಲ್ಲ ಸಾಮಾನ್ಯವಾಗಿ ಹತ್ತು-ಇಪ್ಪತ್ತು ವರ್ಷಗಳ ದೀರ್ಘಾವಧಿ ಕೌನ್ಸಿಲಿಂಗ್‌ ಬೇಕು, ಬೆಂಬಲ ಬೇಕು. ಅಂಥದ್ದೊಂದು ನೆರವನ್ನು ನಾವು ಹೊರಗೆ ನಿಂತು ಎಷ್ಟೇ ಒದಗಿಸಿದರೂ, ಏನೇ ಸಹಾಯ ಮಾಡಿದರೂ, ಅವರೊಳಗೆ ಒಬ್ಬ ವೀಣಾಧರಿಯಂತಹ ವ್ಯಕ್ತಿ ಹುಟ್ಟಿಕೊಂಡು ಈ ಕಾರಣ ಕೈಗೆತ್ತಿಕೊಂಡು ಬಡಿದಾಡಿದಾಗ ಆಗುವಷ್ಟು ಪರಿಣಾಮ ನಾವು ಮಾತಾಡಿದಾಗ ಆಗುವುದಿಲ್ಲ. ಈ ಸಲದ ರಾಜ್ಯೋತ್ಸವ ಪ್ರಶಸ್ತಿಯನ್ನು ನಮ್ಮ ಸರಕಾರ ಆಕೆಗೆ ಕೊಡಮಾಡಿನೋಡಲಿ. ಜಿಲ್ಲೆಗೊಬ್ಬರು, ತಾಲೂಕಿಗೊಬ್ಬರು ವೀಣಾಗಳು ಹುಟ್ಟಿಕೊಳ್ಳುತ್ತಾರೆ. ಭಯವಿಲ್ಲದೆ ಈ ಖಾಯಿಲೆಯ ಬಗ್ಗೆ ಮಾತನಾಡತೊಡಗುತ್ತಾರೆ. ತಮ್ಮವೇ ಆದ ಔಷಧಿ-ಚಿಕಿತ್ಸೆ-ವ್ಯಾಯಾಮ ಹುಡುಕಿಕೊಳ್ಳುತ್ತಾರೆ, ಹಂಚಿಕೊಳ್ಳುತ್ತಾರೆ. ನೂರು ಜನ ಡಾಕ್ಟರ್‌ಗಳು ಮಾಡಬಲ್ಲದ್ದನ್ನು ವೀಣಾಧರಿಯಂತಹ ಒಬ್ಬ ಹೆಣ್ಣುಮಗಳು ಮಾಡಿಬಿಡುತ್ತಾಳೆ. ಅವರದೇ ಆದುದೊಂದು Support system ಸೃಷ್ಟಿಯಾಗುತ್ತದೆ. ಅಷ್ಟಾದರೆ ಅರ್ಧರೋಗ ನಿಯಂತ್ರಣಕ್ಕೆ ಬಂದಂತೆಯೇ. ಮುಂದೆ ಅವರೇ ಏಡ್ಸ್‌ ಬಾರದಂತೆ ವಹಿಸಬೇಕಾದ ಎಚ್ಚರಗಳ ಬಗ್ಗೆ ಜನರೊಂದಿಗೆ ಮಾತನಾಡುತ್ತಾರೆ.

ಸರಕಾರವಷ್ಟೇ ಅಲ್ಲ, ನಮ್ಮ ಪತ್ರಿಕೆಗಳು ಆಕೆಯನ್ನು ವರ್ಷದ ಮಹಿಳೆ ಅಂತ ಘೋಷಿಸಬೇಕು. ಸಂಘಟನೆಗಳು, ಮಹಿಳಾ ವೇದಿಕೆಗಳು ಆಕೆಯನ್ನು ಗೌರವಿಸಬೇಕು. ಇನ್ನಾದರೂ ಪ್ರಜ್ಞಾವಂತರೆನ್ನಿಸಿಕೊಂಡ ಜನ ಒಂದು ಸಾಂಕ್ರಾಮಿಕ ಪಿಡುಗನ್ನು ಎದುರಿಸುವ ವಿಧಾನವನ್ನು ಗೊತ್ತು ಮಾಡಿಕೊಳ್ಳಬೇಕು.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X