• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಕಂದಮ್ಮನಂಥ ಸಂಬಂಧವನ್ನು ಕಾಪಾಡಿಕೊಳ್ಳುವ ಕುರಿತು

By Staff
|
Ravi Belagere on Thatskannada.com ರವಿ ಬೆಳಗೆರೆ
‘ಉಜ್ಜದೆ ಇದ್ದರೆ ನಮ್ಮದೇ ಬಾಯಾಳಗಿನ ಹಲ್ಲು ಕೂಡ ಕೊಳೆತು ಹೋಗುತ್ತದೆ. ಅಂಥದರಲ್ಲಿ ಸಂಬಂಧಗಳದು ಯಾವ ಮಹಾ ಲೆಕ್ಕ?’ ಅಂತ ಮೊನ್ನೆ ತಾನೆ ಗೆಳತಿಯಾಬ್ಬಳಿಗೆ ಹೇಳುತ್ತಿದ್ದೆ. ಅವಳಿಗೂ ಗೊತ್ತು; ಮನುಷ್ಯ ಪ್ರಪಂಚದ ಮಹಾ ನಾಜೂಕು ಬಳ್ಳಿಯೆಂದರೆ-ಸಂಬಂಧ. ನೆಲ ಮತ್ತು ಬೇರು ಎರಡೂ ಆರೋಗ್ಯಕರವಾಗಿದ್ದರೆ ಬಳ್ಳಿ ನಳನಳಿಸುತ್ತದೆ. ಒಂದು ದಿವಸ ನೀರು ಹಾಕುವುದು ಮರೆತಿರೋ? ಮರು ಮಧ್ಯಾಹ್ನದ ಹೊತ್ತಿಗೆ ಸಂಬಂಧ dead!

ಕುಳಿತು ಯೋಚಿಸಿ ನೋಡಿ, ಇಷ್ಟೊಂದು ವರ್ಷಗಳ ಬದುಕಿನಲ್ಲಿ ನಾವು ಮಾಡುತ್ತ ಬಂದ ಕೆಲಸವೆಂದರೆ, ಸಂಬಂಧಗಳನ್ನು ಸದ್ದಿಲ್ಲದೆ ಸಾಯಿಸಿದ್ದು ಮತ್ತು ಹೊಸ ಸಂಬಂಧಗಳಿಗೆ ಸಂಭ್ರಮದಿಂದ ನೀರೆರೆದದ್ದು. ಎರಡನ್ನು ನಾವು ನಮಗೆ ಅರಿವಿಲ್ಲದೆ ಮಾಡಿರುತ್ತೇವೆ. ಹೋದ ವರ್ಷ ಮಾರ್ಚ್‌ ತಿಂಗಳಲ್ಲಿ ಭೇಟಿಯಾದವಳು, ಈ ವರ್ಷದ ಏಪ್ರಿಲ್‌ ಹೊತ್ತಿಗೆ ಆತ್ಮ ಬಂಧು, ಇಷ್ಟು ವರ್ಷ ಎಲ್ಲಿ ದ್ದೆಯೇ? ಅಂತ ಪತ್ರ ಬರೆದು ಸಂಭ್ರಮಿಸುತ್ತೇವಾ? ಮೂರು ವರ್ಷದ ಹಿಂದಿನ ಜೀವನ್ಮಿತ್ರನೊಬ್ಬನನ್ನು ನಾವು ಇತ್ತೀಚೆಗೆ miss ಕೂಡ ಮಾಡಿಕೊಳ್ಳುತ್ತಿದ್ದೇವೆ ಎಂಬುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ.

ಹಾಗಂತ ಅವನೊಂದಿಗೆ ಜಗಳವಾಡಿ ಆ ಸಂಬಂಧವನ್ನು ಕೊಂದುಕೊಂಡೆವಾ? No chance. ಎಷ್ಟೋ ಸಲ ಜಗಳವಾಡದಿದ್ದುದರಿಂದಲೇ ಕೆಲವು ಸಂಬಂಧಗಳು ಸತ್ತು ಹೋಗಿರುತ್ತವೆ. ಒಂದು ಪೋನ್‌ ಮಾಡಲಿಲ್ಲವೆಂಬ ಅತಿ ಚಿಕ್ಕ ಕಾರಣಕ್ಕೆ ಒಂದು ಸಂಬಂಧ ಶಿಥಿಲಗೊಂಡಿರುತ್ತದೆ. ಏಕೆಂದರೆ, ಅದು ಒಂದು ಸಂಬಂಧಕ್ಕೆ ಅಕ್ಕರೆಯಿಂದ ನೀರೆರೆಯುವ ಅತಿ ಮುಖ್ಯ ಕಾಲ. ಆ ಕ್ಷಣದ ಜವಾಬ್ದಾರಿಗೆ ನಾವು ಬಲು ದೊಡ್ಡ ದಂಡ ತೆರಬೇಕಾಗುತ್ತದೆ. ಆಮೇಲೆ ಅದರ ಮುಂದೆ ಮೊಳಕಾಲೂರಿ ಕುಳಿತು ಬೇಡಿಕೊಂಡರೂ ಸತ್ತ ಬಳ್ಳಿ ಚಿಗುರುವುದಿಲ್ಲ. ಒಂದೇ ಒಂದು sorry, ಒಂದೇ ಒಂದು ‘ಆಯ್ತು ಹೋಗು‘ ಎಂಬ ಕ್ಷಮೆ ನಮ್ಮ ಸಂಬಂಧವನ್ನು ಜೀವಂತವಾಗಿ ಇಟ್ಟುಬಿಡಬಲ್ಲದು. ಆದರೆ ಹೇಳಬೇಕಾದ ಕ್ಷಣದಲ್ಲಿ sorry ಕೇಳಲು ನಮ್ಮ ವಿವೇಕ ನೆರವಿಗೆ ಬಂದಿರುವುದಿಲ್ಲ. ಆಮೇಲೆ ಅದನ್ನು ನೆನಪಿಸಿಕೊಂಡು ಎಷ್ಟು ಅತ್ತರೂ, ಅದು ಸತ್ತ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಅತ್ತಂತೆಯೇ.

ಕೆಲ ಬಾರಿ ಕಾರಣವೇ ಇಲ್ಲದೆ ಒಂದು ಸಂಬಂಧ ಸತ್ತು ಹೋಗುತ್ತದೆ. ನೀವು ಇದ್ದಕ್ಕಿದ್ದಂತೆ ಪೋನು ಮಾಡುವುದನ್ನು ನಿಲ್ಲಿಸುತ್ತೀರಿ. ಕೆಲ ತಿಂಗಳು ಭೇಟಿಯೇ ಆಗುವುದಿಲ್ಲ. ಆಮೇಲೆ ಕೂತು ಯೋಚಿಸಿದರೆ, ಹೌದಲ್ಲಾ ಭೇಟಿಯಾಗಬೇಕು ಅಂತ ಅನ್ನಿಸಲೇ ಇಲ್ಲ ಅಂತ ನಿಮಗೇ ಅನ್ನಿಸುತ್ತದೆ. ಕಡೆಗೊಮ್ಮೆ ಭೇಟಿಯಾಗೇ ಬಿಡೋಣ ಅಂತ ನಿರ್ಧರಿಸಿ ಅವರಲ್ಲಿಗೆ ಹೋಗುತ್ತೀರಿ. ಈ ಸಂಬಂಧಕ್ಕೆ ಮೊದಲಿದ್ದ ರುಚಿ, ಘಮ, ಸಂಭ್ರಮ-ಯಾವುದೂಯಿಲ್ಲ ಅಂತ ತಕ್ಷಣ ಅನ್ನಿಸಿಬಿಡುತ್ತದೆ. ಏಕೆಂದರೆ, ನಿಮ್ಮೊಂದಿಗಿನ ಸಂಬಂಧ ತೀರಿಕೊಂಡ ಮೇಲೆ ಅವರು ಆ ಜಾಗದಲ್ಲಿ ಮತ್ಯಾವುದೋ ಸಸಿ ತಂದು ನೆಟ್ಟಿದ್ದಾರೆ. ನೀವು ಕೂಡ ಇನ್ಯಾವುದೋ ಬೀಜಕ್ಕೆ ನೀರು ಹನಿಸುತ್ತಿದ್ದೀರಿ. ಇಬ್ಬರ ನೆಲದಲ್ಲೂ ಪಸೆಯಿಲ್ಲವಾದ್ದರಿಂದ ಮೊದಲಿನ ಸಂಬಂಧಕ್ಕೆ ಜೀವ ಉಳಿದಿಲ್ಲ.

ಕೆಲವು ಸಂಬಂಧಗಳು ಕಾಲಾಂತರದಲ್ಲಿ ಅಗೆದೂ, ಅಗೆದೂ ಸ್ವಾದ ಕಳೆದುಕೊಂಡ ಚೂಯಿಂಗ್‌ ಗಮ್ಮುಗಳಾಗಿಬಿಟ್ಟಿರುತ್ತವೆ. ಅವುಗಳಿಗೆ ನಾವೇ ಒಂದು ಸಹಜ ಸಾವು ಒದಗಿಸಿ, ಸದ್ದಿಲ್ಲದ ಶವ ಸಂಸ್ಕಾರ ಮಾಡಿ ಮುಗಿಸಿರುತ್ತೇವೆ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಒಂದು ಸಂಬಂಧ ಅಮೂಲ್ಯವಾದದ್ದು ಅನ್ನಿಸಿತಾ? ಅದನ್ನು ಶತಾಯಗತಾಯ ಸಾಯಲು ಬಿಡಬೇಡಿ. ಒಂದು ಜಗಳವಾಯಿತಾ? ನೀವೇ ಸೋತುಬಿಡಿ. ಕ್ಷಮಿಸಬೇಕಾದ ಸ್ಥಾನದಲ್ಲಿ ಇರುವಾಗ ನೀವೇ ಕ್ಷಮೆ ಕೇಳಿಬಿಡಿ. ನಿಮ್ಮ ego ಅಲ್ಲಿ ತಲೆ ಎತ್ತದಿರಲಿ. ಸಂಬಂಧ ಸತ್ವಹೀನವಾಗುತ್ತಿದೆ ಅನ್ನಿಸುತ್ತಿದೆಯಾ? ಅದಕ್ಕೆ ಹೊಸ ಸತುವ ನೀವೇ ತಂದು ಸುರಿದುಬಿಡಿ. ಆಚೆಗಿನ ವ್ಯಕ್ತಿ ನಿಮ್ಮನ್ನು ಅಂತಿಮವಾಗಿ defeat ಮಾಡಿಯೇ ಬಿಟ್ಟ ಅಂತ ಖಚಿತವಾಗುವ ತನಕ ಆ ಸಂಬಂಧವನ್ನು ಹೇಗಾದರೂ ಸರಿ, ಸಲುಹಿಕೊಂಡು ಬನ್ನಿ. ನಿಮ್ಮ ಶ್ರಮ ಯಾವತ್ತೋ ಒಂದು ದಿನ ಫಲ ಕೊಟ್ಟೀತು.

ಇಷ್ಟೆಲ್ಲ ಹೇಳುವ ನಾನು ಸಂಬಂಧಗಳ ವಿಷಯದಲ್ಲಿ ಕೆಲವೊಮ್ಮೆ ಎಂಥ ಫಜೀತಿ ಮಾಡಿಕೊಳ್ಳುತ್ತೇನೆ ಗೊತ್ತಾ? ತೀರ ಆತ್ಮೀಯರು ಅನ್ನಿಸಿಕೊಂಡವರಿಗೆ ವರ್ಷಾನುಗಟ್ಟಲೆ ಪತ್ರಬರೆದಿರುವುದಿಲ್ಲ. ಪೋನು ಮಾಡಿರುವುದಿಲ್ಲ. ಪೋನಿಗೂ ಸಿಕ್ಕಿರುವುದಿಲ್ಲ. ಅವರಿಗಿನ್ನೇನು ಪೇಷನ್ಸು ಸತ್ತು ಹೋಗಿ ಪಾಪಿ ಹಾಳಾಗಿಹೋಗು ಅಂತ ಶಪಿಸಿ, ಸಂಬಂಧಕ್ಕೆ ರಾಜೀನಾಮೆ ಕೊಡುವ ಹಂತ ತಲುಪಿದಾಗ ಅವರ ಮನೆಯ ಕದ ತಟ್ಟಿರುತ್ತೇನೆ. ನನ್ನ sorry ಯಲ್ಲೊಂದು ಪ್ರಾಮಾಣಿಕತೆ ಇರುತ್ತದೆ. ತೋರಿಸುವ ಒಲವಿನಲ್ಲಿ ಕಲ್ಮಶವಿರುವುದಿಲ್ಲ. ಯಾವತ್ತಿಗೂ ಆ ಸಂಬಂಧಕ್ಕೊಂದು ವ್ಯಾವಹಾರಿಕ ‘ಬ್ಯುಸಿನೆಸ್‌ ಲೈಕ್‌’ ಹೊದಿಕೆ ಹೊದಿಸಿರುವುದಿಲ್ಲ. ಮೊಟ್ಟ ಮೊದಲ ದಿನ ಯಾವ ಪ್ರೀತಿ, ಯಾವ ಸಲುಗೆ, ಯಾವ warmth ಇತ್ತೋ, ವರ್ಷಾಂತರಗಳ ನಂತರವೂ ಅದೇ ಬಿಸುಪು, ಸಲುಗೆ, ಪ್ರೀತಿ ಉಳಿಸಿಕೊಂಡಿರುತ್ತೇನೆ. ಇಷ್ಟಕ್ಕೂ ಅವರು ಯಾರಾಗಿರುತ್ತಾರೆ ಗೊತ್ತಾ? ಅವರ-ನನ್ನ ಸ್ನೇಹವನ್ನು ವರ್ಷಾನುಗಟ್ಟಲೆ ಕಾಲವೆಂಬುದು ಪರೀಕ್ಷಿಸಿರುತ್ತದೆ. ಅದು time tested relationshop. ಕೆಲವು ಶತಮಾನಗಳ ನಂತರವೂ ಆ ಸಂಬಂಧ ಜೀವಂತವಾಗಿರುತ್ತದೆ. ಪತ್ರ ಬರೆಯದಿದ್ದರೂ! ಆದರೆ ಅವರ ನೋವಿಗೆ, ತೊಂದರೆಗೆ, ಸಂಕಷ್ಟದ ಘಳಿಗೆಗಳಿಗೆ ನೀವು ಒದಗದಿದ್ದರೆ, ನೆರವೀಯದಿದ್ದರೆ-ಅದೆಂಥ ಶತಮಾನಗಳ ಸಂಬಂಧವಾದರೂ ಒಂದೇ ಮಧ್ಯಾಹ್ನದಲ್ಲಿ ಮನಸುಗಳು ಮುರಿದು ಹೋಗುತ್ತವೆ. ಸಂಬಂಧದ ಬಳ್ಳಿ ಸತ್ತು ಹೋಗುತ್ತದೆ. ಆ ಫಜೀತಿಯನ್ನು ಯಾವತ್ತಿಗೂ ಮಾಡಿಕೊಳ್ಳಬಾರದು.

ಹಾಗೆ ಸಂಬಂಧಗಳು ಸಾಯಬಾರದು ಅಂತಲೇ ಪಾಶ್ಚಿಮಾತ್ಯರು ಹೊಸ ವರ್ಷಕ್ಕೆ ಗ್ರೀಟಿಂಗು ಕಳಿಸುವ, ಪಾರ್ಟಿಗೆ ಕರೆಯುವ, ಸುಮ್ಮನೆ ಪೋನು ಮಾಡಿ ಕರ್ಟಸಿ ಕಾಲ್‌ ಅನ್ನುವ ಸಂಪ್ರದಾಯವಿಟ್ಟುಕೊಂಡರು. ಇವೆಲ್ಲವೂ ಸಂಬಂಧಗಳನ್ನು renew ಮಾಡಿಕೊಳ್ಳುವ ಪ್ರಯತ್ನಗಳೇ. ಗ್ರೀಟಿಂಗ್‌ ಜತೆಗೊಂದು ಗಿಫ್ಟ್‌, ಹೊಸ ವರ್ಷದ ಕ್ಯಾಲೆಂಡರ್‌, ಡೈರಿ, ಪೆನ್ನು, ಕೀ ಚೈನು-ಇವೆಲ್ಲವೂ ವ್ಯಾಪಾರಿ ಸಂಬಂಧಗಳಿಗೆ ನೀರುಣಿಸಬಹುದೇನೋ? ಆದರೆ ಮನಸು ಮನಸುಗಳ ಪಿಸುಮಾತು ಜಾರಿಯಲ್ಲಿರಬೇಕು. ಅಂದರೆ ಹೊಸ ವರ್ಷಕ್ಕಾಗಿ ಕಾಯಲೇಬಾರದು. Today is the best day ಎಂಬ ಸಿದ್ಧಾಂತಕ್ಕೆ ಬನ್ನಿ . ಕಳಚಿಕೊಂಡಿರುವ ಸಂಬಂಧಗಳ ಪಟ್ಟಿ ಮಾಡಿ. ಇವತ್ತೇ ಒಬ್ಬೊಬ್ಬರನ್ನಾಗಿ ಭೇಟಿ ಮಾಡಲು ತೀರ್ಮಾನಿಸಿ. ಕಡೆಯ ಪಕ್ಷ ಒಂದು ಆಪ್ತ ಪತ್ರ ಬರೆಯಿರಿ. ಪೋನಿನ ತಂಟೆಗೆ ಹೋಗಬೇಡಿ. ಎದುರಿಗಿಲ್ಲ ದವರೊಂದಿಗೆ ಮಾತಾಡಿದಾಗ ಎಲ್ಲೋ ಗೆಲುವಿನ ಕೊಂಡಿ ತುಂಡಾಗಿ ಬಿಡುವ ಸಾಧ್ಯತೆಯಿದೆ. ಎದುರಾ ಎದುರು ಕುಳಿತಾಗ ಉಂಟಾಗುವ ಆತ್ಮೀಯ ವಾತಾವರಣವನ್ನು ನಿರ್ಜೀವ ಟೆಲಿಪೋನು ಉಂಟು ಮಾಡಲಾರದು. ಆಂದರೆ ಪತ್ರದೊಳಗಿನ ಅಕ್ಷರಗಳಿಗೆ ಎದುರಿನವರನ್ನು ತಾಕುವ ಆರ್ದ್ರತೆ, ತಾಕತ್ತು ಖಂಡಿತ ಇರುತ್ತದೆ.

ಆದರೆ ನೆನಪಿರಲಿ, ನಿಮ್ಮ ಭೇಟಿಯಲ್ಲಿ, ಮಾತಿನಲ್ಲಿ, ಬರಹದಲ್ಲಿ ಎಲ್ಲೂ ನಾಟಕೀಯತೆಯ ಅಂಶವಿರಬಾರದು. ಇಷ್ಟು ದಿನ ಭೇಟಿಯಾಗದೆ ಇದ್ದುದ್ದಕ್ಕೆ ಪ ತ್ರ ಬರೆಯದೆಯಿದ್ದುದ್ದಕ್ಕೆ ಸುಳ್ಳೇ ನೂರೆಂಟು ನೆಪ ಹೇಳಬೇಕಿಲ್ಲ. ಒಳ್ಳೆ ಮಿತ್ರ ನಿಮ್ಮ ವಿವರಣೆ ಬೇಕಿಲ್ಲದೇ ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಾನೆ. ಪಕ್ವ ಮನಸ್ಸಿನ ಗೆಳತಿಗೆ ನಿನ್ನೆಯ ನಿಮ್ಮ ಮೌನ, ಇವತ್ತಿನ ತಪನೆ-ಚಡಪಡಿಕೆ ಎರಡೂ ಅರ್ಥವಾಗುತ್ತವೆ. ಒಂದು ಸಲ ಕೈ ಕುಲುಕಿದರೆ, ಕಣ್ಣು ನೆಟ್ಟು ಮಾತನಾಡಿದರೆ, ಅರ್ಧರ್ಧ ಟೀ ಹಂಚಿಕೊಂಡು ಕುಡಿದರೆ ಮತ್ತೆ ಸಂಬಂಧಗಳ ಬಳ್ಳಿ ನಸುನಕ್ಕು ತಲೆಯಾಡಿಸುತ್ತದೆ.

ಪ್ರಾಮಾಣಿಕವಾದ ಸಂಬಂಧ ಯಾವತ್ತಿಗೂ ಅಮಾಯಕ ಕಂದಮ್ಮನಂತಹುದು. ಅಂಥ ಸಂಬಂಧಕ್ಕೆ ಇಬ್ಬರೂ ಹೊಣೆಯಾಗಬೇಕು. ದೀಪ ಉರಿಯಲು ಬೇಕಾಗುವಷ್ಟು ಗಾಳಿಯನ್ನು ನಾವೇ ಒದಗಿಸಬೇಕು. ಬೀಸಿ ಬಂದ ಗಾ ಳಿ ದೀಪವಾರಿಸದಂತೆ ನಾವೇ ಕೈ ಅಡ್ಡವಿಟ್ಟು, ಸೊಡರು ಕಾಪಾಡಬೇಕು. ಅಡ್ಡವಿಡುವ ಕೈಯಲ್ಲಿ ಒಂದು ನಮ್ಮದಿರಲಿ. ಇನ್ನೊಂದು ಅವರದಿರಲಿ!

ತುಂಬ ದಿನ ಮಾತಾಡಿಸಲಿಲ್ಲವೆಂಬ ಕಾರಣಕ್ಕೆ, ಭೇಟಿಯೇ ಆಗಲಿಲ್ಲವೆಂಬ ಕಾರಣಕ್ಕೆ, ಚಿಕ್ಕದೊಂದು ಭಿನ್ನಾಭಿಪ್ರಾಯ ಬಂತೆಂಬ ಕಾರಣಕ್ಕೆ, ದುಡ್ಡು ಕೇಳಿದುದಕ್ಕೆ, ದುಡ್ಡು ಕೊಡಲಾಗದುದಕ್ಕೆ, ಯಾವುದೋ ಪೆಡಸು ಮಾತಿಗೆ, ಗಡಸು ಮೌನಕ್ಕೆ-ಒಂದು ಕಂದಮ್ಮನಂಥ ಸಂಬಂಧ ಸತ್ತು ಹೋಗಬೇಕೆ? ನೀವೇ ಯೋಚಿಸಿ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more