ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ಮುಂದೆ ದಮ್ಮಯ್ಯ ಹಾಕತೊಡಗಿದ್ದಾಳೆ ಅಕ್ಕಯ್ಯ

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

‘ಇಲ್ಲ ನಿಮ್ಮ ಬೆಂಬಲವಿಲ್ಲದೆ ನಾವು ಗೆಲ್ಲುವುದಿಲ್ಲ. ದಯವಿಟ್ಟು ನಮ್ಮ ಜತೆ ನಿಲ್ಲಿ. ರಾಷ್ಟ್ರ ಮಟ್ಟದಲ್ಲಿ ಜಾತ್ಯಾತೀತ ಶಕ್ತಿಗಳ ಪುನರುತ್ಥಾನವಾಗಲಿ, ಪ್ಲೀಸ್‌!’ ಹಾಗಂತ ಕಳೆದ ವಾರ ಮಾಜಿ ಪ್ರಧಾನಿ ದೇವೇಗೌಡರನ್ನು ಡೈನಿಂಗ್‌ ಟೇಬಲ್ಲಿನ ಮುಂದೆ ಕೂಡಿಸಿಕೊಂಡು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಬೇಡುತ್ತಿದ್ದರೆ, ಮಧ್ಯ ಕುಂತಿದ್ದ ಶಿವರಾಜ್‌ ಪಾಟೀಲ್‌ ಎಂಬ ನಾಯಕ ಅವನತ ಮುಖಿಯಾಗಿ ಕುಂತಿದ್ದರು.

ಅಡಸಾ ಬಡಸಾ ಮಾರ್ಗವಾಗಿ ಹೇಳುವುದೇ ಬೇಡ. ಇವತ್ತು ಸೋನಿಯಾ ಎಂಬ ಅಧಿನಾಯಕಿಗೆ ಅರ್ಜೆಂಟಾಗಿ ದೇವೇಗೌಡರೊಂದಿಗೆ ರಾಜಿಯಾಗಬೇಕಿದೆ. ಅದಕ್ಕೆ ಕಾರಣ? ಮುಖ್ಯಮಂತ್ರಿ ಕೃಷ್ಣರ ನಾಯಕತ್ವವೊಂದನ್ನೇ ನೆಚ್ಚಿಕೊಂಡರೆ ಮುಂಬರುವ ಚುನಾವಣೆಯಲ್ಲಿ ಗೆಲುವು ಕಷ್ಟ ಎಂಬುದು ಆಕೆಯ ನಂಬಿಕೆ. ಇದನ್ನು ಒಪ್ಪಿಕೊಂಡು ಕರ್ನಾಟಕದಲ್ಲಿ ಕೃಷ್ಣರ ಜೊತೆ ಕೈ ಜೋಡಿಸಿದರೆ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಮಾಜಿ ಪ್ರಧಾನಿಗೂ ಗೊತ್ತಿದೆ.

ಯಾಕೆಂದರೆ ಕಳೆದೆರಡು ವರ್ಷಗಳಿಂದ ಅವರು ಸಮರ ಸಿದ್ಧತೆಗಿಳಿದಿರುವುದೇ ಕೃಷ್ಣರ ವಿರುದ್ಧ. ಸ್ವಯಂ ಕೃಷ್ಣ ಕೂಡ ನಿಜವಾದ ಎದುರಾಳಿ ಎಂದು ದೇವೇಗೌಡರನ್ನೇ ಗುರುತಿಸಿರುವುದರಿಂದ ಜನತಾ ಪರಿವಾರದ ವಿಲೀನಕ್ಕೆ ಅಡ್ಡಗಾಲು ಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷ್ಣ ವಿರೋಧಿ ಮತಗಳನ್ನು ನೆಚ್ಚಿಕೊಂಡು ದೇವೇಗೌಡ ನೇತೃತ್ವದ ಜಾತ್ಯಾತೀತ ದಳ ಗದೆ, ಬಿಲ್ಲು ಸಜ್ಜುಗೊಳಿಸಬೇಕೇ ಹೊರತು, ಅದರ ಜತೆಗೇ ಕೈ ಸೇರಿಸುವುದಲ್ಲ. ಹಾಗೇನಾದರೂ ಆದರೆ ಕೃಷ್ಣ ವಿರೋಧಿ ಮತಗಳು ಏಕತ್ರಗೊಂಡು ಬಿಜೆಪಿಯ ಬಲ ಹೆಚ್ಚಾಗುತ್ತದೆ.

ಹೀಗಾಗಿಯೇ ದೇವೇಗೌಡ ಮರು ಮಾತನಾಡದೇ ಕೈ ತೊಳೆದು ಎದ್ದು ಬಂದಿದ್ದಾರೆಯೇ ಹೊರತು, ಸೋನಿಯಾ ಪ್ರಪೋಸಲ್ಲಿಗೆ ಒಪ್ಪಿಗೆ ನೀಡಿಲ್ಲ. ಇದನ್ನೇಕೆ ವಿಶೇಷವಾಗಿ ಗಮನಿಸಬೇಕೆಂದರೆ, ನಂಬರ್‌ ಒನ್‌ ಮುಖ್ಯಮಂತ್ರಿ ಎಂದು ಮೆರೆದ ಮನುಷ್ಯ ಹೇಗಾಗಿದ್ದಾನೆ? ಆತನನ್ನು ನೆಚ್ಚಿಕೊಂಡ ಸೋನಿಯಾ ಅದೆಷ್ಟು ದೈನೇಸಿಯಾಗಿದ್ದಾರೆಂಬ ಕಾರಣಕ್ಕಾಗಿ.

ತುಂಬ ಹಿಂದೇನೂ ಅಲ್ಲ, ಕಳೆದ ಚುನಾವಣೆಯ ಸಂದರ್ಭದಲ್ಲಿ ಇದೇ ದೇವೇಗೌಡ ಅವರು ಸೋನಿಯಾ ಮೊರೆ ಹೋಗಿದ್ದರು. ಕರ್ನಾಟಕದಲ್ಲಿ ಲಿಂಗಾಯಿತರೆಲ್ಲ ಒಂದಾಗಿದ್ದಾರೆ. ಬಿಜೆಪಿ ಮೈತ್ರಿಕೂಟದ ನೆರಳಿನಡಿ ನಿಂತಿದ್ಡಾರೆ. ಇದಕ್ಕೆ ಪ್ರತಿಯಾಗಿ ಒಕ್ಕಲಿಗ ಮತಗಳು ಒಂದುಗೂಡಬೇಕು. ಹಾಗಾದರೆ ಕಾಂಗ್ರೆಸ್‌ ಮಾತ್ರ ಮೈತ್ರಿಕೂಟದ ಗೆಲುವು ನಿರಾತಂಕ ಎಂದು ತಿದಿ ಒತ್ತಿದ್ದರು.

ಆದರೆ ಇಂತಹ ಒಂದು ಪ್ರಪೋಸಲ್ಲನ್ನು ಕೃಷ್ಣ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಹಲ ನಾಯಕರು ಎಷ್ಟು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದಿದ್ದರೆಂದರೆ; ಜನತಾ ಪರಿವಾರ ದುರ್ಬಲವಾಗಿದೆ ಎಂಬುದು ಖಚಿತ ಆಗಿರುವುದರಿಂದ ಲಿಂಗಾಯಿತ ಮತ ಬ್ಯಾಂಕ್‌ ಬಿಜೆಪಿ- ಮೈತ್ರಿಕೂಟದ ಕಡೆ ವಾಲಿಕೊಂಡಿರುವುದು ಸ್ಪಷ್ಟವಾಗಿರುವುದರಿಂದ ಒಕ್ಕಲಿಗ ವರ್ಗವು ಅನ್ಯಮಾರ್ಗವಿಲ್ಲದೆ ನಮ್ಮ ಜತೆ ನಿಲ್ಲುತ್ತದೆ ಎಂದಿದ್ದರು. ಅದರಷ್ಟೇ ಮುಖ್ಯವಾಗಿ: ಹಿಂದುಳಿದವರು ಅಲ್ಪ ಸಂಖ್ಯಾತರು, ಪರಿಶಿಷ್ಟರು ಕಾಂಗ್ರೆಸ್‌ ಜತೆಗಿರುವುದರಿಂದ ಒಕ್ಕಲಿಗ ಮತಗಳು ಶೇಕಡಾ ಐವತ್ತರಷ್ಟು ಬಂದರೂ ಸರ್ಕಾರ ನಮ್ಮದೇ ಎಂದಿದ್ದರು. ದೇವೇಗೌಡರೊಂದಿಗಿನ ಮಾತುಕತೆ ಪ್ರಪೋಸಲ್ಲನ್ನು ಅರ್ಧಕ್ಕೇ ಮುರಿದು ಹಾಕಿದ್ದರು. ಇವತ್ತು ವ್ಯತ್ಯಾಸ ಏನೆಂದರೆ ಕಾಂಗ್ರೆಸ್‌ನ ಸೋನಿಯಕ್ಕ ತಾನೇ ಖುದ್ದಾಗಿ ದೇವೇಗೌಡರ ಸ್ನೇಹಕ್ಕಾಗಿ ಚಡಪಡಿಸುತ್ತಿದ್ದಾಳೆ. ಆದರೆ ದೇವೇಗೌಡರೇ ಹಿಂದೆ ಹಿಂದೆ ಸರಿಯುತ್ತಿದ್ದಾರೆ.

ಒಬ್ಬ ದೇವೇಗೌಡರಷ್ಟೇ ಏಕೆ? ಮುಂಬರುವ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಮತದಾರರೇ ದೂರ ಸರಿಯುತ್ತಾರೆ ಎಂಬಂತಹ ವಾತಾವರಣ ಸೃಷ್ಟಿಯಾಗಿಬಿಟ್ಟಿದೆ. ಇಷ್ಟಾದರೂ ಕೃಷ್ಣರ ಖದರನ್ನು ನೀವು ನೋಡಬೇಕು. ಹಿಂದೆ ಆಂಗ್ಲ ಪತ್ರಿಕೆಯಾಂದಕ್ಕೆ ಸಕಲ ಸೌಭಾಗ್ಯ ಒದಗಿಸಿ ನಂಬರ್‌ ಒನ್‌ ಮುಖ್ಯಮಂತ್ರಿ ಅಂತ ಬರೆಸಿಕೊಂಡವರು ಅವರು. ಈಗಲೂ ಅಷ್ಟೇ, ಗೆಲ್ಲುವವರು ನಾವೇ ಅನ್ನುತ್ತಿದ್ದಾರೆ.

ಆದರೆ ನಿಜವಾದ ಸ್ಥಿತಿ ಏನು? ಸೋನಿಯಾ ಗೋಳಾಟಕ್ಕೂ ಅರ್ಥವಿದೆ ಅನ್ನಿಸುತ್ತಿದೆ. ಉದಾಹರಣೆ ನೋಡಿ. ಮೊನ್ನೆ ತುಂಬಿದ ವಿಧಾಸಭೆಯಲ್ಲಿ ನಿಂತು; ಬೇರೆ ರಾಜ್ಯಗಳು ಆದಾಯದ ಬಹುಪಾಲನ್ನು ಸಾಲ ತೀರಿಕೆಗೆ ಬಳಸುತ್ತ್ತಿವೆ. ಕರ್ನಾಟಕ ಮಾತ್ರ ಬರಿ ಇಪ್ಪತ್ತೆರಡು ಪರ್ಸೆಂಟು ಹಣವನ್ನು ಆ ಬಾಬತ್ತಿಗೆ ತುಂಬುತ್ತದೆ ಅಂತ ಕೃಷ್ಣ ಕೊಳಲೂದಿದರು. ಆದರೆ ವಸ್ತುಸ್ಥಿತಿ ಹಾಗಿರಲಿಲ್ಲ. ಯಾಕೆಂದರೆ ಕೃಷ್ಣ ಅಧಿಕಾರಕ್ಕೆ ಬರುವ ವೇಳೆಗೆ ಸರ್ಕಾರ ಈ ಬಾಬತ್ತಿಗೆ ಎಂದೇ 12.8 ಪರ್ಸೆಂಟು ಹಣ ತುಂಬುತ್ತಿತ್ತು. ಇಂದು ಅದರ ಪ್ರಮಾಣ ದುಪ್ಪಟ್ಟಾಗಿದೆ. ಆದರೂ ಕೃಷ್ಣ ಇದನ್ನು ಮುಚ್ಚಿಡಬಲ್ಲರು.

ಇಂತಹ ಮನುಷ್ಯ ಕರ್ನಾಟಕದ ಮುಖ್ಯಮಂತ್ರಿಯಾದ ಮೇಲೆ ಅದೇನೇನು ಅವಘಡಗಳಾದವು? ವೀರಪ್ಪನ್‌ ಹಾವಳಿಯಂತೂ ಮನೆ ಮಾತಾಗಿ ಹೋಯಿತು. ಜೀವ ಬಿಟ್ಟರೂ ಸರಿ ಕಾವೇರಿ ನೀರು ಬಿಡುವುದಿಲ್ಲ ಎಂದರು. ಆದರೂ ಕಾವೇರಿ ನೀರು ಹರಿದು ಹೋಯಿತೇ ಹೊರತು ಕೃಷ್ಣ ಅಲುಗಾಡಲಿಲ್ಲ.

ಉದಾರೀಕರಣದ ನೀತಿಯನುಸಾರ ರಾಜ್ಯಕ್ಕೆ ಬಂಡವಾಳ ಹರಿದು ಬರುವ ಹಾಗೆ ಮಾಡುತ್ತೇನೆ ಅಂದರು. ಅದೆಷ್ಟು ಬಂಡವಾಳ ಬಂತೋ? ಏನು ಕತೆಯೋ ಅದರ ನೆಪದಲ್ಲಿ ಲಕ್ಷಾಂತರ ಎಕರೆ ಭೂಮಿ ಪರಭಾರೆಯಾಯಿತು.

ಅದು ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಯ ಕತೆ ಇರಬಹುದು. ವಡೆ ಮಾರುವವನಿಗೆ ಕೊಟ್ಟ ಜಮೀನಿನ ಕತೆ ಇರಬಹುದು. ಒಟ್ಟಿನಲ್ಲಿ ಕೃಷ್ಣ ಯಾವ್ಯಾವುದಕ್ಕೆ ಭೂಮಿ ಕೊಟ್ಟರೋ ಆ ಭೂಮಿ ಬರ್ಬಾದಾಗಿ ಹೋಯಿತು. ಪ್ರತಿಫಲವೆಂದರೆ ಕೃಷ್ಣ ಚೆನ್ನಾಗಿ ಉಂಡರು. ಕಾಲಕಾಲಕ್ಕೂ ಹೈಕಮಾಂಡ್‌ಗೆ ಉಣ್ಣಿಸಿದರು. ಕುತೂಹಲದ ಸಂಗತಿ ಎಂದರೆ ಅವರ ಭೂರಿ ಭೋಜನದ ವಿವರ ಸಮೂಹ ಮಾಧ್ಯಮಗಳಿಗೆ ಮುಖ್ಯವಾಗಲಿಲ್ಲ. ಯಾಕೆಂದರೆ ಅವೂ ಭೋಜನ ಕೂಟಕ್ಕೆ ಬಂದು ಕುಂತು ಮೈಮರೆತಿದ್ದವು.

ಹೇಳಿದರೆ ಸಂಕಟವಾಗುತ್ತದೆ. ಬೆಂಗಳೂರಿನುದ್ದಕ್ಕೂ ಫುಟ್‌ಪಾತ್‌ ಸುಂದರೀಕರಣಗೊಳಿಸಲು ಇವರು ಸುರಿದದ್ದು ನೂರೈವತ್ತು ಕೋಟಿ! ಕೆಂಗಲ್‌ ಹನುಮಂತಯ್ಯ ಅವರಂತೆಯೇ ತಮ್ಮ ಹೆಸರು ಅಜರಾಮರವಾಗಿರಬೇಕು ಅಂತ ಕಟ್ಟಿಸಿದರಲ್ಲ ವಿಧಾನಸೌಧ? ಅದಕ್ಕೆ ಸುರಿದದ್ದು ನೂರ ನಲವತ್ತು ಕೋಟಿ. ಮೊದಲು ಇದೇ ಯೋಜನೆಗಾಗಿ ಹುಡ್ಕೋದಿಂದ ತೊಂಭತ್ತು ಕೋಟಿ ಸಾಲ ಎತ್ತಲಾಗಿತ್ತು. ಆದರೆ ಅಂದಾಜಿನ ಮರುನವೀಕರಣ ಭಾರದಲ್ಲಿ ಆ ಗಾತ್ರವನ್ನು ನೂರಾ ನಲವತ್ತು ಕೋಟಿಗೆ ಹೆಚ್ಚಿಸಲಾಯಿತು.

ಆ ಪೈಕಿ ಯಾರ್ಯಾರು ಎಷ್ಟೆಷ್ಟು ತಿಂದರು? ಇದಕ್ಕಾಗಿ ನಾಡಿನ ಜನತೆ ಹೊರಬೇಕಾದ ಕಷ್ಟವೇನು? ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ವಿಪರ್ಯಾಸವೆಂದರೆ ಆ ಬಗ್ಗೆ ಪ್ರತಿಪಕ್ಷಗಳೇ ಚಕಾರವೆತ್ತಲಿಲ್ಲ.

ಹುಡುಕಿ ನೋಡಿದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬ ಫಳ ಫಳ ಪಾಲಿಶ್‌ ಸಂಸ್ಥೆ ಕೃಷ್ಣರ ಸಂಬಂಧಿಗಳು, ಸರೀಕರು, ಊರವರು ಅಂತ ಐನೂರಕ್ಕೂ ಹೆಚ್ಚು ನಿವೇಶನಗಳನ್ನು ಮಂಜೂರು ಮಾಡಿದೆ. ಕಳೆದ ಎಂಟತ್ತು ದಿನಗಳ ಅವಧಿಯಲ್ಲೇ ಮದ್ದೂರಿನ ಎಪ್ಪತ್ತು ಮಂದಿಗೆ ನಿವೇಶನಗಳು ಮಂಜೂರಾಗಿವೆ.

ಇವತ್ತು ಜನಾರ್ದನ ಪೂಜಾರಿ, ಬಿಜೆಪಿಯ ‘ಅನಂತಕುಮಾರ್‌ಗೆ ಸುಪ್ರೀಂಕೋರ್ಟ್‌ ನೋಟೀಸು ಕೊಟ್ಟಿದೆ. ಹೀಗಾಗಿ ಅವರು ರಾಜಿನಾಮೆ ಕೊಡಬೇಕು’ ಅನ್ನುತ್ತಾರೆ. ಆದರೆ ಕಡುಭ್ರಷ್ಟ ಕೆಎಎಸ್‌ ಅಧಿಕಾರಿಗಳಿಗೆ, ಐಎಎಸ್‌ ಹುದ್ದೆಗೆ ಬಡ್ತಿ ನೀಡಲು ಕೇಂದ್ರ ಲೋಕಸೇವಾ ಆಯೋಗದ ಸುಬೀರ್‌ ದತ್ತಾ ಎಂಬ ಮನುಷ್ಯನಿಗೆ ವಿವೇಚನಾ ಕೋಟಾದಡಿ ನಿವೇಶನ ಕೊಟ್ಟ ಕೃಷ್ಣರಿಗೆ ಸುಪ್ರೀಂ ಕೋರ್ಟು ನೋಟೀಸು ಕೊಟ್ಟಿದೆ. ಆ ಬಗ್ಗೆ ಚಕಾರ ಮಾತಿಲ್ಲ. ಹುಡ್ಕೋ ವತಿಯಿಂದ ಊರೂರಿನಲ್ಲಿ ಟಾರು ಹಾಕಿಸುತ್ತೇನೆ ಅಂತ ಇದೇ ಡೀಕೇಶಿ ಗೆಬಗೆಬರಿ ತಿಂದ. ಆದರೆ ಯಾವೂರಿನಲ್ಲೂ ಟಾರು ಬೀಳಲಿಲ್ಲ. ಕೃಷ್ಣ ಕೂಡ ದೂಸರಾ ಮಾತಾಡಲಿಲ್ಲ.

ವಿಶ್ವಬ್ಯಾಂಕಿನಿಂದ, ನಬಾರ್ಡಿನಿಂದ, ಹುಡ್ಕೋದಿಂದ, ಹೀಗೆ ಒಂದರ ಹಿಂದೆ ಒಂದರಂತೆ ಸಾಲ ತರಲಾಯ್ತು. ಆ ಪೈಕಿ ಬಹುಪಾಲು ಹಣವನ್ನು ಕೃಷ್ಣ ಹಾಗೂ ಒಕ್ಕಲಿಗ ಅಧಿಕಾರಿಗಳೇ ತಿಂದರು. ಇಂಥ ಮನುಷ್ಯ ಈಗ ಪುನಹ ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಆದರೆ ಚುನಾವಣೆ ಎದುರಿಸಲು ಧೈರ್ಯವಿಲ್ಲ. ಹೀಗಾಗಿ ಪದೇ ಪದೇ ಸೋನಿಯಾ ಎದುರು ನಿಲ್ಲುವುದು, ಬರಗಾಲವಿರುವುದರಿಂದ ಫಲಿತಾಂಶ ವ್ಯತಿರಿಕ್ತವಾಗಬಹುದು ಅಂತ ಗೋಗರೆಯುವುದು ಅವರ ಮಾಮೂಲಿ ಚಾಳಿಯಾಗಿ ಹೋಗಿದೆ. ಆದರೆ ಸೋನಿಯಾಗೆ ಬೇಕಿರುವುದು ದೆಹಲಿಯ ಗದ್ದುಗೆ. ಅದಕ್ಕೆ ಆಕೆ ಸೆಕ್ಯುಲರಿಸಂ ನೆಪದಲ್ಲಾದರೂ ದೇವೇಗೌಡರಿಗೆ ಕಾಟ ಕೊಡುತ್ತಾರೆ.

ಆದರೆ ತತ್ವದ ಆಧಾರದ ಮೇಲೆ ಕಾಟ ಕೊಡುವ ಶಕ್ತಿಯೂ ಕೃಷ್ಣ ಅವರಿಗಿಲ್ಲ. ಇಂಥ ಮನುಷ್ಯನ ಜತೆ ಹೋಗುವುದು ಹೇಗೆ ಎಂಬುದು ಮಾಜಿ ಪ್ರಧಾನಿಯ ಚಿಂತೆ. ಈತನನ್ನೇ ನೆಚ್ಚಿಕೊಂಡು ಹೋರಾಡುವುದು ಹೇಗೆ ಎಂಬುದು ಅಧಿನಾಯಕಿಯ ಚಿಂತೆ.

(ಸ್ನೇಹ ಸ್ಫೂರ್ತಿ : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X