• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಷ್ಟು ಮೆಟ್ಟಿಲು ಹತ್ತಬೇಕು ಅಂತಲೂ ಎಣಿಸದೆ ಏಣಿ ಇಡುವವರು

By Staff
|
Ravi Belagere on Thatskannada.com ರವಿ ಬೆಳಗೆರೆ
ಕಮ್ಮಗಿನ ಚಳಿ ಬಿಟ್ಟಿದೆ. ಕಣ್ಣೆದುರಿಗೆ ದೀಪಾವಳಿ. ಸರಕಾರಿ ನೌಕರರ ಉಲ್ಲಾಸಕ್ಕೆ-ಸಂತೋಷಕ್ಕೆ ಅಂತ ಸಾಲುಸಾಲು ರಜೆ. ನಮ್ಮ ಶೀಲಕ್ಕ ಪ್ರತಿವರ್ಷದಂತೆ ಪ್ರಾರ್ಥನಾ ಶಾಲೆಯ ಮಕ್ಕಳ parents ಪತ್ರ ಕಳಿಸುತ್ತಿದ್ದಾಳೆ: ನಮ್ಮ ಶಾಲೆಯ ಮಗುವೊಂದು ನಿಮ್ಮ ಮನೆಯಲ್ಲಿದೆ. ಪಟಾಕಿ ಹಚ್ಚುವಾಗ ಎಚ್ಚರಿಕೆಯಿಂದ ನೋಡಿಕೊಳ್ಳಿ, Take care! ನಮ್ಮ ಆಫೀಸಿನ ಹುಡುಗ-ಹುಡುಗಿಯರಿಗೆ ಈ ಸೀಝನ್‌ ಬಂತೆಂದರೆ ಭರ್ಜರಿ ಸಂತೋಷ . ಕೈಗೆ ಬೋನಸ್ಸು, ಒಂಚೂರು ಪಟಾಕಿ, ಹಾಯ್‌ ಬೆಂಗಳೂರು! ಕಚೇರಿಯಲ್ಲಿ ರಜೆಯಾಂದನ್ನು ಬಿಟ್ಟು ಏನು ಬೇಕಾದರೂ ಸಿಗುತ್ತದೆ ಎಂಬುದಕ್ಕೆ ಅಪವಾದವಾಗಿ ಒಂದು ದಿವಸದ ರಜೆ -ಎಲ್ಲ ಸಿಗುತ್ತದೆ.

ಬರೆಯಲು ಹತ್ತಾರು ವಿಷಯಗಳಿವೆಯಾದರೂ, ಈ ಬಾರಿ ಸಂಕೇಶ್ವರರ ಬಗ್ಗೆ ಬರೆಯುತ್ತಿದ್ದೇನೆ. ಅವರು ಮೊನ್ನೆ ಬೆಂಗಳೂರಿಗೆ ಬಂದಾಗ ಒಂದು ಸಂಜೆ ಒಟ್ಟಿಗೆ ಕಳೆದೆವು. ನನಗೆ strange ಅನ್ನಿಸುವುದು ಅವರ ಶಿಸ್ತು. ನಾನು 4 ನೇ ತಾರೀಖು ಬೆಳಗ್ಗೆ ಮೈಸೂರಿಗೆ ಬಂದು, ಅಲ್ಲೊಂದು ಕೋಟಿ ರುಪಾಯಿಗಳ land ಖರೀದಿ ಮಾಡೋದಿದೆ. ಅದನ್ನ ಮುಗಿಸಿ ಸಂಜಿ ಹೊತ್ತಿಗೆ ಬೆಂಗಳೂರಿಗೆ ಬರ್ತೀನಿ. ನಿಮಗೆ phone ಮಾಡ್ತೀನಿ. ಭೇಟಿಯಾಗೋಣ- ಹೀಗೆ ಗಡಿಯಾರಕ್ಕೆ ನಡಿಗೆ ಕಲಿಸುವವರ ಧಾಟಿಯಲ್ಲಿ ಮಾತನಾಡುತ್ತಾರಲ್ಲ ? ಸಂಕೇಶ್ವರರಿಗೆ ಅದು ಹೇಗೆ ಸಾಧ್ಯ ಎಂಬುದೊಂದು ಅಚ್ಚರಿ ನನ್ನಲ್ಲಿ ಯಾವತ್ತಿಂದಲೂ ಇದೆ. ಅವರು ನೂರಾರು ಕೋಟಿ ರುಪಾಯಿ ದುಡಿದು, ಸಾವಿರಾರು ಕೋಟಿ turn over ನಡೆಸುವ ಸಂಸ್ಥೆಗಳನ್ನು ಕಟ್ಟಿದ್ದು ಹೇಗೆ ಎಂಬುದು ನನ್ನ ಪಾಲಿನ ಆಶ್ಚರ್ಯವಲ್ಲ. ದಿನಕ್ಕೆ ಇರುವ 24 ಗಂಟೆಗಳನ್ನು ಅಷ್ಟೆಲ್ಲ ಮಾಡಲು, ಸಾಧಿಸಲು ಅನುಕೂಲವಾಗುವಂತೆ ಹ್ಯಾಗೆ ಮ್ಯಾನೇಜ್‌ ಮಾಡುತ್ತಾರೋ? ಅದು ನಿಜವಾದ ಅಚ್ಚರಿ. ಅವರ ಟ್ರಕ್ಕು, ಬಸ್ಸುಗಳ ವ್ಯಾಪಾರದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಆದರೆ ಪತ್ರಿಕೋದ್ಯಮಕ್ಕೆ ಬಂದ ನಂತರ ಅವರ ಹೆಜ್ಜೆ ಗುರುತುಗಳನ್ನು ತುಂಬ ಶ್ರದ್ಧೆಯಿಂದ ಗಮನಿಸುತ್ತ ಬಂದಿದ್ದೇನೆ ನಾನು.

ಅವರು ವಿಜಯ ಕರ್ನಾಟಕದ ಜೊತೆಗೆ ಇನ್ನೊಂದು ಕನ್ನಡ ದಿನಪತ್ರಿಕೆ ಮಾಡ್ತೀನಿ ಅಂದಾಗ ಕೊಂಚ ಆಶ್ಚರ್ಯವಾಯಿತಾದರೂ, ಅದರ ಹಿಂದಿನ ಲೆಕ್ಕಾಚಾರಗಳ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಲಿಲ್ಲ. ಬಹುಶಃ ಭಾರತದಲ್ಲೆಲ್ಲೂ ಒಂದು ದಿನಪತ್ರಿಕೆಗೆ ಅದೇ ಸಂಸ್ಥೆ ಇನ್ನೊಂದು ದಿನಪತ್ರಿಕೆಯನ್ನು ಹುಟ್ಟಿಸಿ ಕಾಂಪಿಟಿಷನ್‌ ಉಂಟುಮಾಡಿದ ಇತಿಹಾಸವಿಲ್ಲ. ಸಾಮಾನ್ಯವಾಗಿ ಮಲ್ಟಿನ್ಯಾಷನಲ್‌ ಕಂಪೆನಿಗಳು ಈ ಕೆಲಸ ಮಾಡುತ್ತವೆ. ಸಿಂಥಾಲ್‌ ಸೋಪಿನ ಜೊತೆಯಲ್ಲೇ ಮೆಂಥಾಲ್‌ ಸೋಪು ಅಂತ ಇನ್ನೊಂದನ್ನು ಮಾಡಿ ಒಂದಕ್ಕೊಂದು ಸ್ಪರ್ಧೆ ಉಂಟು ಮಾಡಿ ಮತ್ತೊಂದು ಕಂಪೆನಿಯ ಸೋಪು ಬಿಕರಿಯಾಗದಂತೆ ಮಾಡುತ್ತದೆ. ಆದರೆ ಪತ್ರಿಕೋದ್ಯಮದಲ್ಲಿ ಅಂಥ ಎಕ್ಸ್‌ಪರಿಮೆಂಟುಗಳನ್ನು ಈತನಕ ಯಾರೂ ಮಾಡಿಲ್ಲ. ವಿಜಯ ಸಂಕೇಶ್ವರರು ಮಾಡಲು ಹೊರಟಿದ್ದಾರೆ. ಕೇವಲ ಎರಡನೇ ಪತ್ರಿಕೆಯನ್ನಷ್ಟೇ ಅಲ್ಲ : 2006ರ ಹೊತ್ತಿಗೆ ಅವರು ಮೂರನೇ ಕನ್ನಡ ದಿನಪತ್ರಿಕೆಯನ್ನು ಮಾಡಲಿದ್ದಾರೆ.

ವಿಜಯ ಕರ್ನಾಟಕ ಈಗ ನಂಬರ್‌ ವನ್‌ ದಿನಪತ್ರಿಕೆಯಾಗಿದೆ. ನಂಬರ್‌ ಟು ಮತ್ತು ನಂಬರ್‌ ಥ್ರೀ ಕೂಡ ನಮ್ಮ ಸಂಸ್ಥೆಯ ಪತ್ರಿಕೆಗಳೇ ಆಗಬೇಕು. ಒಂದು ರುಪಾಯಿ ಪತ್ರಿಕೆ, ಎರಡು ರುಪಾಯಿ ಪತ್ರಿಕೆ, ಮೂರು ರುಪಾಯಿ ಪತ್ರಿಕೆ- ಹೀಗೆ ಮೂರೂ ಥರದ ಪತ್ರಿಕೆಗಳನ್ನು ಮಾಡ್ತಿದೀನಿ ಅಂದರು ವಿಜಯ ಸಂಕೇಶ್ವರ. ಅವರ ಮನಸ್ಸಿನಲ್ಲಿರುವ ಎಕನಾಮಿಕ್ಸ್‌ ಅವರು ಮಾತಾಡಿದಷ್ಟು ಸರಳವಾಗಿಲ್ಲ.

ನನ್ನ ಮಾಹಿತಿ ಪ್ರಕಾರ ವಿಜಯ ಕರ್ನಾಟಕದ ಸರ್ಕ್ಯುಲೇಷನ್ನು ಒಂದು ರುಪಾಯಿ ಬೆಲೆ ಇದ್ದಾಗ, ಏಳು ಲಕ್ಷ ಮೂವತ್ತು ಸಾವಿರದಷ್ಟಿತ್ತು. ಮತ್ತೆ ಬೆಲೆ ಏರಿಸಿದ ಮೇಲೆ ಸುಮಾರು ಐವತ್ತು ಸಾವಿರ ಪ್ರತಿ ಕಡಿಮೆಯಾಗಿ 6.80 ಲಕ್ಷ ಪ್ರತಿಗಳು ಮಾರಾಟವಾಗುತ್ತ ನಡೆದವು. ಕನ್ನಡದ ಮಟ್ಟಿಗೆ ಅದು great number. ಇದರಿಂದಾಗಿ ಪ್ರಜಾವಾಣಿ ಎರಡನೆಯ ಸ್ಥಾನಕ್ಕೆ ಉದಯವಾಣಿ, ಸಂಯುಕ್ತ ಕರ್ನಾಟಕ ಇವೆಲ್ಲ ಮೂರು-ನಾಲ್ಕನೆಯ ಸ್ಥಾನಗಳಿಗೆ ಇಳಿದವು. ಆದರೆ ದಿನಪತ್ರಿಕೆಗಳ ವಿಚಾರದಲ್ಲಿ ತೀರ ಈ ಪರಿ ಪ್ರಸಾರ ಸಂಖ್ಯೆ ಹೆಚ್ಚಾಗುವುದು ಲಾಭದಾಯಕವೇನಲ್ಲ. ಓದುಗರು ಕೊಡುವ ಹಣದ ಮೇಲೆ ಬದುಕುವ ಪತ್ರಿಕೆಗಳು ಅವಲ್ಲ. ಅವು ಜಾಹೀರಾತಿನ ಮೇಲೆ ಬದುಕುತ್ತವೆ. ವಿಜಯ ಕರ್ನಾಟಕಕ್ಕೆ ಐದು ಲಕ್ಷದಷ್ಟು ಸರ್ಕ್ಯುಲೇಶನ್‌ ಇದ್ದಾಗಲೂ ಅಷ್ಟೇ ಜಾಹೀರಾತು ಬರುತ್ತದೆ: ಏಳು ಲಕ್ಷ ದಾಟಿದಾಗಲೂ ಅಷ್ಟೇ ಜಾಹೀರಾತು ಬರುತ್ತದೆ. ಅಲ್ಲಿ ಖರ್ಚು ಬೆಳೆಯುತ್ತದೆಯೇ ಹೊರತು ಲಾಭ ಬೆಳೆಯುವುದಿಲ್ಲ. ಆದರೆ ಸರ್ಕ್ಯುಲೇಶನ್‌ ಕಡಿಮೆ ಮಡೋಣ ಅಂತ ಹೊರಟರೆ ನಂಬರ್‌ 1 ಸ್ಥಾನಕ್ಕೆ ಹೊಡ್ತ. ಹೀಗಾಗಿ, ಮೇಯಿಸಿ ಬೆಳೆಸಿದ ಆನೆಯನ್ನು ಸಾಕಲೇಬೇಕು.

ಈ ಜಾಹೀರಾತು ಪ್ರಪಂಚದಲ್ಲೂ ಗ್ರೇಡುಗಳಿವೆ. ಎಲ್ಲಾ ಜಾಹೀರಾತುದಾರೂ ನಂ.1 ಪತ್ರಿಕೆಗೆ ಜಾಹೀರಾತು ಕೊಡಬೇಕು ಅಂದುಕೊಳ್ಳುವುದಿಲ್ಲ. ವಿಜಯ ಕರ್ನಾಟಕದ ಜಾಹೀರಾತಿನ ರೇಟು ಎಲ್ಲರಿಗೂ ನಿಲುಕುವುದೂ ಇಲ್ಲ. ಸ್ವಲ್ಪ ಸೋವಿ ಅನ್ನಿಸುವ ಪ್ರಜಾವಾಣಿ ಕಡೆಗೋ, ಉದಯವಾಣಿ-ಸಂಯುಕ್ತ ಕರ್ನಾಟಕದ ಕಡೆಗೋ ಹೋಗುತ್ತಾರೆ. ಈಗ ಸಂಕೇಶ್ವರರು ಕಣ್ಣಿಟ್ಟಿರುವುದು ಆ revenue ಮೇಲೆ. ನಿಮಗೆ ಸೋವಿ ದರದ ಜಾಹೀರಾತಿನ ಪತ್ರಿಕೆ ಬೇಕಾ ? ಅದಕ್ಕೆ ತಗೊಳ್ಳಿ ಅನ್ನುತ್ತ spaceನ market ಮಾಡಿಸುತ್ತಾರೆ. ಉಳಿದ ಪತ್ರಿಕೆಗಳು ತತ್ತರಿಸಿ ಹೋಗುತ್ತವೆ.

ವಿಜಯ ಸಂಕೇಶ್ವರ್‌ ಎಂಥ ಪಳಗಿದ, ಕರಾರುವಾಕ್‌ ವ್ಯಾಪಾರಿ ಎಂಬುದಕ್ಕೊಂದು ಉದಾಹರಣೆ ಕೊಡುತ್ತೇನೆ ನೋಡಿ. ಹನ್ನೆರಡೋ-ಹದಿನೈದೋ ಸಾವಿರ ಟ್ರಕ್ಕುಗಳಿರುವ ಅವರ ಹುಬ್ಬಳ್ಳಿಯ ಕೇಂದ್ರಕಚೇರಿಯ ಗೋದಾಮಿಗೆ ನಿರಂತರವಾಗಿ ಸವೆದ ಟೈರುಗಳು ಬಂದು ಬೀಳುತ್ತಲೇ ಇರುತ್ತವೆ. ಅವುಗಳನ್ನು ಬಸ್‌ ಮಾಲೀಕರು ಸಾಮಾನ್ಯವಾಗಿ ಮಾರಿಬಿಡುತ್ತಾರೆ. ಒಂದಷ್ಟು ರೇಟು ಅಂತ ನಿಗದಿ ಮಾಡಿ, ಆ ರೇಟಿಗೆ ಹಳೆಯ ಟೈರುಗಳನ್ನು ಮಾರಲು ಯಾವನೋ ಮ್ಯಾನೇಜರನಿಗೆ ಹೇಳಿರುತ್ತಾರೆ. ಆದರೆ ಸಂಕೇಶ್ವರ್‌ ಹಾಗಲ್ಲ. ತಾವೇ ಖುದ್ದಾಗಿ ಹೋಗಿ ಕುಂತು ಹಳೇ ಟೈರು ಮಾರುತ್ತಾರೆ. ನೋಡುವವರಿಗಿದು ಜಿಪುಣತನ ಅನ್ನಿಸಬಹುದು. ತನ್ನ ವಿಶಾಲ ಸಾಮ್ರಾಜ್ಯದ ಮೇಲೆ ಹಿಡಿತ ಕಳೆದುಕೊಳ್ಳಲು ಇಚ್ಚಿಸದ ಮಾಲೀಕ ಚಾಣಾಕ್ಷನೂ ಆಗಿದ್ದರೆ, ಸವೆದ ಟೈರುಗಳನ್ನು ನೋಡುತ್ತಿದ್ದಂತೆಯೇ ತನ್ನ ಟ್ರಕ್ಕುಗಳು ಎಷ್ಟು ಸಾವಿರ ಕಿಲೋಮೀಟರು ಓಡಿದೆಯೆಂಬುದರ ಲೆಕ್ಕಾಚಾರ ಹಾಕುತ್ತಾನೆ. ಇದೇ ಪತ್ರಿಕಾವೃತ್ತಿಯಲ್ಲಿ ದಶಕಗಳಿಂದ ಕಾಲೂರಿಕೊಂಡಿರುವ ಪ್ರಜಾವಾಣಿ ಸಂಸ್ಥೆಯವರು ಅನಾಮತ್ತು 23 ಕೋಟಿ ರುಪಾಯಿ ಕೊಟ್ಟು ವಿದೇಶದಿಂದ ಒಂದು ಅತ್ಯಾಧುನಿಕ ಪ್ರಿಂಟಿಂಗ್‌ ಮಷೀನು ತರಿಸಿ ಹಾಕಿದಾಗ ಪತ್ರಿಕೋದ್ಯಮದ ಮಂದಿ ವಾಹ್‌ ಅಂದರು. ಮಷೀನು ಚೆನ್ನಾಗಿದೆ ಖರೆ. ಆದರೆ ಬೆಂಗಳೂರಿನಲ್ಲಿ ಅಂಥದೊಂದು ಮಷೀನು ಹಾಕಿಕೊಂಡು ಕೂತರೆ ಆಗುವ ಉಪಯೋಗ ತುಂಬ ಕಡಿಮೆ. ಸಂಕೇಶ್ವರ್‌ ಮಾಡಿದ್ದೇನು ಅಂದರೆ, ತಲಾ ಒಂದು-ಒಂದೂ ಕಾಲು ಕೋಟಿ ರುಪಾಯಿ ಕಿಮ್ಮತ್ತಿನ ಒಂಬತ್ತು ಮಷೀನು ತಂದು ಬೆಂಗಳೂರಿನಂಥ ಕೇಂದ್ರದಿಂದ ಹಿಡಿದು ಗಂಗಾವತಿಯಂಥ ಚಿಕ್ಕ ಊರಿನ ತನಕ ನಾನಾ ಕಡೆ ಹಾಕಿ, ಅಲ್ಲಿಂದಲೇ ಪತ್ರಿಕೆ ಪ್ರಿಂಟು ಮಾಡಿ ವಿತರಿಸುವ ವ್ಯವಸ್ಥೆ ಮಾಡಿದರು. ಪತ್ರಿಕೆಯ ಸರ್ಕ್ಯುಲೇಷನ್ನು ಗಗನಕ್ಕೇರಿತು.

ಸಾಮಾನ್ಯವಾಗಿ ಪ್ರಿಂಟಿಂಗ್‌ ಮಷೀನಿನದೊಂದು ಫಜೀತಿ ಇರುತ್ತದೆ. ಅದಕ್ಕೆ ಒಳ್ಳೆ ಕ್ವಾಲಿಟಿಯ ಇಂಕಷ್ಟೆ ಹಾಕಿದರೆ ಸಾಲದು. ಒಳ್ಳೆ ಕ್ವಾಲಿಟಿಯ ಮಿನರಲ್‌ ವಾಟರ್‌ ಹಾಕಬೇಕು. ಈ ನೀರು ಮಾರಲ್ಪಡುತ್ತದೆ. ಮೊದಲೆರಡು ದಿನ ಮಿನರಲ್‌ ವಾಟರ್‌ ಮಾರುವವನು ಒಳ್ಳೆಯ ಗುಣಮಟ್ಟದ ನೀರನ್ನೇ ಒದಗಿಸುತ್ತಾನೆ. ಆಮೇಲಾಮೇಲೆ ನಲ್ಲಿ ನೀರೇ! ಅಂಥ ನೀರು ಹಾಕಿದಾಗ ಆಗುವ ಫಜೀತಿಯೆಂದರೆ, ಪ್ರಿಂಟಾಗುತ್ತ ಆಗುತ್ತ ಪೇಪರ್‌ ತುಂಡಾಗಿ ಹೋಗುತ್ತದೆ. ಒಂದು ಸಲ ಹಾಳೆ ಕತ್ತರಿಸಿ ಬಿದ್ದರೆ ಸಾವಿರಾರು ಪ್ರತಿಗಳು ವೇಸ್ಟಾಗುತ್ತವೆ. ಅದಕ್ಕಿಂತ ಹೆಚ್ಚಾಗಿ ಟೈಮು ಬರಬಾದ್‌ ಆಗಿಬಿಡುತ್ತದೆ. ಈ ಸಮಸ್ಯೆಗೆ ಸಂಕೇಶ್ವರ್‌ ಕಂಡುಕೊಂಡ ಪರಿಹಾರವೇನು ಗೊತ್ತೆ? ಮಿನರಲ್‌ ವಾಟರ್‌ ತಯಾರಿಸುವ ಪ್ಲಾಂಟೊಂದನ್ನು ಆರಂಭಿಸಿದ್ದು! ಆಲ್ಲಿ ಶುದ್ಧಗೊಂಡ ನೀರನ್ನೇ ಅವರು ಗಂಗಾವತಿಯಿಂದ ಮಂಗಳೂರಿನ ತನಕ ಎಲ್ಲೆಡೆಗೂ ಕಳಿಸುತ್ತಾರೆ. ನೀರು ಕಳಿಸೋ ಲಾರಿ ಖರ್ಚು ಮೈಮೇಲೆ ಬೀಳಲಿಲ್ವಾ ಅಂದುಕೊಂಡರೆ, ನಾವು ದಡ್ಡರು. ಹಾಳೆ ಕತ್ತರಿಸಿ ಬಿದ್ದಾಗ ಆಗುವ ನಷ್ಟಕ್ಕಿಂತ ಲಾರಿ ಖರ್ಚು ಸಹನೀಯ! ಪತ್ರಿಕೋದ್ಯಮಕ್ಕೆ ಬಂದಿನ್ನೂ ಐದು ವರ್ಷಗಳಾಗಿಲ್ಲ : ಸಂಕೇಶ್ವರ್‌ ಏನೆಲ್ಲ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ನಂದಿ ಮಾರ್ಕಿನವರು ದಶಕಗಟ್ಟಲೆ ದಂಧೆಯಲ್ಲಿದ್ದು ಲದ್ದಿ ಆಯ್ದದ್ದೇ ಬಂತು.

ಈ ಎಲ್ಲಾ ವಿವರಗಳು ದಿನಪತ್ರಿಕೆ ಕೊಂಡು ಓದಿ ಪಕ್ಕಕ್ಕಿಡುವ ಓದುಗ ದೊರೆಗಳಿಗೆ ಬೇಕಾಗಿಲ್ಲ , ನಿಜ. ಆದರೂ ಒಬ್ಬ ಮನುಷ್ಯ ಹೇಗೆ ಬೆಳೆಯುತ್ತ ಬೆಳೆಯುತ್ತ, ಚಿಕ್ಕ ಪುಟ್ಟ ವಿವರಗಳನ್ನು ಕಡೆಗಣಿಸದೆ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸುತ್ತ ಹೋಗುತ್ತಾನೆ ಎಂಬುದನ್ನು ವಿವರಿಸಲಿಕ್ಕಾಗಿ ಇಷ್ಟೆಲ್ಲ ಬರೆದೆ.

ಬದುಕಿನಲ್ಲಿ ಅಪಾರವಾಗಿ ಬೆಳೆಯಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ತುದಿ ತಲುಪಲಿಕ್ಕೆ ಎಷ್ಟು ಮೆಟ್ಟಲು ಹತ್ತಬೇಕು ಎಂಬ ಲೆಕ್ಕಾಚಾರ ಕೂಡ ಮಾಡಿಕೊಳ್ಳದೆ ಆಕಾಶಕ್ಕೆ ಏಣಿ ಇಟ್ಟು ಬಿಡುವವರೇ ಹೆಚ್ಚು. ಮೊನ್ನೆ ಇಡೀ ಸಂಜೆ ಒಟ್ಟಿಗೆ ಕಳೆದು good night ಹೇಳಿ ಹೊರಡುವ ಮುನ್ನ ಅವರು ನನಗೆ ಹೇಳಿದ್ದೇನು ಗೊತ್ತೆ?

ಓ ಮನಸೇ.. ಬಹಳ ಛಲೋ ಬರಾಕ ಹತ್ತೆೈತಿ. ಸರ್ಕ್ಯುಲೇಷನ್ನು ಛಲೋ ಅದ ಅಂತ ಕೇಳೇನಿ. ಅದನ್ನು ವೀಕ್ಲಿ ಮಾಡ್ರಲ್ಲಾ ?

ನಾನು ದಿಗ್ಭ್ರಾಂತನಾಗಿದ್ದೆ.

ಅಷ್ಟೆತ್ತರಕ್ಕೆ ಬೆಳೆದವರಿಗೆ ಈ ಪುಟ್ಟ ಸಂಸ್ಥೆಯ ಎಕನಾಮಿಕ್ಸ್‌ ಗಮನದಲ್ಲಿರುತ್ತದೆ ಅಂದರೆ ಏನರ್ಥ?

ವ್ಯಾಪಾರವನ್ನು ಮೀರಿದ ಒಂದು concern ಅವರ ದನಿಯಲ್ಲಿತ್ತು.

(ಸ್ನೇಹಸೇತು: ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more