• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುದಿಯದಿದ್ದ ಮೇಲೆ ಅದನ್ನು ರಕ್ತ ಅನ್ನುವುದೇಕೆ ಎಂದವನು ಗಾಲಿಬ್‌ !

By Staff
|
Ravi Belagere on Thatskannada.com ರವಿ ಬೆಳಗೆರೆ
ದೇಶಭಕ್ತ ವೀರ ಸಾವರ್ಕರ್‌ ಬಗ್ಗೆ ಬರೆದದ್ದಕ್ಕೆ ಸಾವಿರ ಫೋನು, ಸಾವಿರ ಪತ್ರ. ಪ್ರತಿಯಾಬ್ಬರೂ ವ್ಯಕ್ತಪಡಿಸಿದ್ದು ಮೆಚ್ಚುಗೆ. ‘ಓದ್ತಾ ಇದ್ರೆ ರಕ್ತ ಕುದಿಯೋ ಹಾಗಾಯ್ತು’ ಅಂದರು ಹಿರಿಯ ಮಿತ್ರ ಟಿ.ಎನ್‌. ಸೀತಾರಾಂ.

‘ಕುದಿಯದಿದ್ದ ಮೇಲೆ ಅದನ್ನ ರಕ್ತ ಅನ್ನೋದೇಕೆ?’ ಅಂದವನು ಮಿರ್ಜಾಗಾಲಿಬ್‌. ರಕ್ತ ಕುದಿಯುವಂತೆ ಮಾಡಿದವರು ಸಾವರ್ಕರ್‌. ನಿಮಗೆ ಗೊತ್ತಿರಲಿ, ಗಾಲಿಬ್‌ ಮತ್ತು ಸಾವರ್ಕರ್‌ ಇಬ್ಬರೂ ಬ್ರಿಟಿಷರ ಆಡಳಿತದ ಅವಧಿಯಲ್ಲಿ ಬದುಕಿದವರು. ಗಾಲಿಬ್‌ ಮಹಮ್ಮದೀಯ. ಸಾವರ್ಕರ್‌ ಹಿಂದೂ ಮಹಾಸಭಾ ಕಟ್ಟಿದಾತ. ಇಬ್ಬರಿಗೂ ದೇವರಲ್ಲಿ ನಂಬಿಕೆ ಇರಲಿಲ್ಲ. ಜಾತಿಯ ಮಾತೆಲ್ಲಿ ಬಂತು? ಇಬ್ಬರೂ ಹಿಂದೂಸ್ತಾನದ ಹೆಸರಿನಲ್ಲಿ ಪ್ರೀತಿಸಿದರು. ಬ್ರಿಟಿಷರನ್ನು ಮನಸಾರೆ ದ್ವೇಷಿಸಿದವರು. ಏಕೆಂದರೆ, ಇಬ್ಬರೂ ಸ್ವಾತಂತ್ರ್ಯದಲ್ಲಿ ನಂಬಿಕೆಯಿಟ್ಟವರು. ಆದರೆ ಬದುಕಿನ ವಿಪರ್ಯಾಸಗಳು ಹೇಗಿರುತ್ತವೆ ನೋಡಿ: ಮುಘಲರು ಕೊಡಮಾಡಿದ ಪಿಂಚಣಿಯನ್ನು ಬ್ರಿಟಿಷರು ಕಿತ್ತುಕೊಂಡು ಬೀದಿಗೆ ಹಾಕಿದಾಗ, ಮಹಾನ್‌ ಸ್ವಾಭಿಮಾನಿ ಗಾಲಿಬ್‌ ಕೂಡ ಅದೇ ಬ್ರಿಟಿಷರ ಮುಂದೆ ಪಿಂಚಣಿ ಕೋರಿ ಅರ್ಜಿ ಇರಿಸಿದ . ಅದು ಮಹಾಕವಿಯಾಬ್ಬನ ಬದುಕಿನ ಅನಿವಾರ್ಯತೆ. ಹಾಗೆಯೇ, ಕಾಲಾಪಾನಿ ಶಿಕ್ಷೆಗೊಳಗಾದ ವೀರ ಸಾವರ್ಕರ್‌, ಬ್ರಿಟಿಷರ ಮುಂದೆ ತಪ್ಪೊಪ್ಪಿಗೆ ಪತ್ರ ಬರೆದಿಟ್ಟು ನನಗೆ ಭಾರತಕ್ಕೆ ಹಿಂತಿರುಗಲು ಅವಕಾಶ ಕೊಡಿ ಅಂತ ವಿನಂತಿಸಿದ್ದರು. ಅದು ಹೇಡಿಯಾಬ್ಬ ಬೇಡಿದ ಜೀವಭಿಕ್ಷೆಯಲ್ಲ. ಹೋರಾಟಗಾರನೊಬ್ಬನ ಯುದ್ಧತಂತ್ರ. ಅದು ಸ್ಟ್ರಾಟಜಿ. ಇಬ್ಬರೂ ಬ್ರಿಟಿಷರಿಗೆ ಅರ್ಜಿ ಕೊಟ್ಟವರೇ. ಹಾಗಂತ ಗಾಲಿಬ್‌ನನ್ನು ಆಸೆಬುರುಕ, ಹೇಡಿ ಮುದುಕ, ಪಿಂಚಣಿಗಾಗಿ ಕೈಯಾಡ್ಡಿದ ಅಸಮರ್ಥ ಅನ್ನು ತ್ತೀರಾ? ಗಾಲಿಬ್‌ನ ಕವಿತೆಗಳನ್ನು ಓದಿದವರಿಗೆ ಮಾತ್ರ ಆತನ ರೊಚ್ಚು , ಸ್ವಾತಂತ್ರ್ಯದಾಹ , ದೇವರನ್ನೂ ಧಿಕ್ಕರಿಸುವ ಸಾತ್ವಿಕ ತಲೆತಿರುಕತನ ಅರ್ಥವಾಗುತ್ತದೆ. ಹಾಗೇನೇ, ಸಾವರ್ಕರ್‌ ಒಬ್ಬ ನಿರೀಶ್ವರವಾದಿ, ಜಾತಿ ವಿರೋಧಿ, ಸಮಾನತೆಯ ಹರಿಕಾರ ಮತ್ತು ದಾಸ್ಯ ವಿರೋಧಿ ಚಿಂತಕರಾಗಿದ್ದರು ಎಂಬುದು ಅವರ ಪುಸ್ತಕ, ಅವರ ಚಿಂತನೆ, ಬದುಕು - ಇತ್ಯಾದಿಗಳನ್ನು ಓದಿದವರಿಗೆ ಮಾತ್ರ ಅರ್ಥವಾಗುತ್ತದೆ. ಉಮಾಭಾರತಿಯ ಕೈಯಲ್ಲಿತ್ತು ಎಂಬ ಕಾರಣಕ್ಕೆ ಭಾರತದ ಧ್ವಜವನ್ನು ಕೆಲಸಕ್ಕೆ ಬಾರದ ಬಟ್ಟೆ ಅನ್ನಲಿಕ್ಕೆ ಹೇಗಾಗುವುದಿಲ್ಲವೋ, ಮುಸಲ್ಮಾನನಾಗಿದ್ದ ಎಂಬ ಕಾರಣಕ್ಕೆ ಗಾಲಿಬ್‌ನನ್ನು ಬ್ರಿಟಿಷರ ಮುಂದೆ ತಲೆಬಾಗಿದ ಮುದುಕ ಎನ್ನಲಿಕ್ಕೆ ಆಗುವುದಿಲ್ಲ. ಮತ್ತು ಆರೆಸ್ಸೆಸ್ಸಿನ ಹೆಗಲ ಮೇಲಿದೆ ಎಂದ ಕಾರಣಕ್ಕೆ ಸಾವರ್ಕರ್‌ ಫೋಟೋಗೆ ದೇಶದ್ರೋಹಿಯ ಫೋಟೋ ಅಂತ ಹೆಸರಿಡಲಾಗುವುದಿಲ್ಲ.

Mirza Ghalib : A great Poet and Patriotಇದೆಲ್ಲ ಎಷ್ಟು ಜನ ಕಾಂಗ್ರೆಸ್ಸಿಗರಿಗೆ ಗೊತ್ತಿದೆಯೋ ಕೇಳಿ? ಅವರಿಗೆ ಮುಸಲ್ಮಾನರು ಓಟಿನಂತೆ ಕಾಣಿಸುತ್ತಾರೆ. ಮುಸಲ್ಮಾನರ ನಡುವಿನ ಸ್ವಾತಂತ್ರ್ಯದಾಹಿ ಗಾಲಿಬ್‌ ಯಾರೆಂದು ಅರ್ಥವೇ ಆಗಿರುವುದಿಲ್ಲ. ಕಾಲಾಪಾನಿ ಸಜೆ ಅನುಭವಿಸಿದ ಸಾವರ್ಕರ್‌ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುತ್ತಿದ್ದುದು ಗೋಚರಿಸುವುದಿಲ್ಲ. ಹಾಗೆ ಸಾವರ್ಕರ್‌ ಕಾಲಾಪಾನಿ ಮತ್ತು ಗೃಹಬಂಧನದ ಶಿಕ್ಷೆಗಳಲ್ಲಿ ನರಳುತ್ತಿದ್ದಾಗ ಈ ಕಾಂಗ್ರೆಸ್ಸಿನ ಚಾಚಾ, ಮಹಾವಿಲಾಸಿ ನೆಹರೂ ಲಾರ್ಡ್‌ಮೌಂಟ್‌ ಬ್ಯಾಟನ್‌ನ ಪತ್ನಿಯಾಂದಿಗೆ ಹೊರಳುತ್ತಿದ್ದನೆಂಬುದು ಬೇಕೆಂತಲೇ ಮರೆತುಹೋಗುತ್ತದೆ. ಮೂರು ಸಾವಿರ ಸೈನಿಕರನ್ನು ಚಾಚಾ ನೆಹರೂ ಹಿಮಾಲಯದ ತುತ್ತದಿಯಲ್ಲಿ ನಿಲ್ಲಿಸಿ ಚೀನೀಯರ ಫಿರಂಗಿಗಳಿಗೆ ಆಹುತಿಕೊಡುತ್ತಿದ್ದ ಕಾಲದಲ್ಲಿ ಈ ಇದೇ ಕಾಂಗ್ರೆಸ್ಸಿಗರು, ಮಣಿಶಂಕರ ಅಯ್ಯರೂ ಮನಮೋಹನ ಸಿಂಗರೂ ಎಲ್ಲಿ ತವಡು ಜಗಿಯುತ್ತಿದ್ದರೋ ಕೇಳಿ ನೋಡಿ? ಇಷ್ಟೆಲ್ಲಾ ಆಗಿ, ಮಣಿಶಂಕರ ಅಯ್ಯರ್‌ನ ಅವಿವೇಕವನ್ನು ಮನಮೋಹನ್‌ ಸಿಂಗ್‌ ಅದು ಪಕ್ಷದ ನಿಲುವಲ್ಲ ಅಂತ ಧಿಕ್ಕರಿಸಿ ಮಾತಾನಾಡಿದರೇ ಹೊರತು, ಆ ಮಾತು ಅಷ್ಟೇ ಸಹಜವಾಗಿ ಸೋನಿಯಾ ಬಾಯಲ್ಲಿ ಹೊರಬರಲಿಲ್ಲ ನೋಡಿ? ಕಡೇ ಪಕ್ಷ ಇಂದಿರಾಗಾಂಧಿಗೆ ತನ್ನ ತಂದೆಯ ವಿಲಾಸಗಳು ಗೊತ್ತಿದ್ದವು. ತಂದೆಯ ಸಮಕಾಲೀನರು ರಾಷ್ಟ್ರಕ್ಕೆ ಮಾಡಿದ ತ್ಯಾಗಗಳೆಂಥವು ಅಂತ ಗೊತ್ತಿದ್ದವು. ಈ ಹೆಂಗಸು ಸೋನಿಯಾಗೇನು ಗೊತ್ತಿದೆ? ಯಾವತ್ತು ಓದಿದ್ದಳು ಸೋನಿಯಾ ಭಾರತದ ಇತಿಹಾಸ? ಆಕೆಯ ದೇಶದ ಸಿಸಿಲಿಯನ್ನರು ಅಮೆರಿಕಕ್ಕೆ ಕದ್ದು ವಲಸೆ ಹೋಗಿ ಅಲ್ಲೊಂದು ಅರಾಜಕ ಮಾಫಿಯಾ estabilsh ಮಾಡಿ ನೆತ್ತರು ಹರಿಸಿದುದನ್ನೇ ಇಟಾಲಿಯನ್ನರ ಸ್ವಾತಂತ್ರ್ಯ ಹೋರಾಟ ಅಂತ ಭಾವಿಸಿದ ನೆಲದಿಂದ ಬಂದಾಕೆ ಸೋನಿಯಾ. ಆಕೆಯ ಕಣ್ಣಿಗೆ ಸುಭಾಷ್‌ ಚಂದ್ರಭೋಸ್‌ರಂತಹ ದೇಶಭ್ರಷ್ಟ ಕ್ರಾಂತಿಕಾರಿಗಳು ಕೂಡ ಮಾಫಿಯಾ ನಾಯಕರಂತೆ ಕಂಡರೆ ಆಶ್ಚರ್ಯವಿಲ್ಲ.

ಅಂಥ ನೆಹರೂನ ಮೊಮ್ಮಗನ ಹೆಂಡತಿ ಸೋನಿಯಾ. ಅಂಥ ಸೋನಿಯಾಳ ಆಜ್ಞಾರಾಧಕರು ಈ ಮಣಿಶಂಕರ್‌ ಅಯ್ಯರ್‌ ಸಂತತಿಯವರು. ಒಬ್ಬ ನಿಜವಾದ ‘ಗಾಂಧಿಭಕ್ತ ’ ಕೂಡ ಸಾವರ್ಕರ್‌ ದೇಶಪ್ರೇಮವನ್ನು ಶಂಕಿಸಿ ಮಾತನಾಡಲಾರ. ಅದನ್ನು ನಿಜವಾದ ಸೋನಿಯಾಗಾಂಧೀ ಭಕ್ತ ಮಾಡುತ್ತಾನೆ. ನಿಜವಾದ ಮಹಾತ್ಮ ಗಾಂಧೀ ಭಕ್ತನಿಗೆ ಗಾಂಧೀಜಿಯನ್ನು ಕೊಂದ ನಾಥೂರಾಮ ಗೋಡ್ಸೆ ದಾರಿತಪ್ಪಿದ ದೇಶಭಕ್ತನಂತೆ ಕಾಣಿಸುತ್ತದೆ. ಆದರೆ ಆತನ ಮೇಲೆ ಸಲಿಂಗ ಕಾಮಿಯೆಂಬ ಆಪಾದನೆ ಮಾಡಲು ಆತ ಮುಂದಾಗುವುದಿಲ್ಲ. ಸೋನಿಯಾಗಾಂಧಿ ಭಕ್ತರಿಗೆ ಅದೆಲ್ಲವನ್ನು ಮಾಡಲು ಸಾಧ್ಯವಾಗುತ್ತದೆ.

Veer Savarkarಇತಿಹಾಸದ ವಿದ್ಯಾರ್ಥಿಯಾದ ನಾನು ಅದೆಲ್ಲ ವರ್ಷಗಳಲ್ಲಿ ಅರ್ಥಮಾಡಿಕೊಂಡ ಕೆಲವು ಸಂಗತಿಗಳಿವೆ. Devil deserves its share ಅಂತಾರೆ. ಆವತ್ತಿನ ಕಾಲಘಟ್ಟದಲ್ಲಿ ಆವತ್ತಿನ ನಾಯಕರಿಗೆ ತೋಚಿದ್ದನ್ನು, ಅವರಿಗೆ ಮಾಡಿಹೋಗಿದ್ದಾರೆ. ಅವರ ತಪ್ಪು -ಲೋಪದೋಷಗಳ ಚರ್ಚೆ ಖಂಡಿತವಾಗ್ಯೂ ಆಗಲಿ, ಅವರ ಜನ್ಮ ದಿನಾಚರಣೆಗಳಾದಂತೆಯೇ. ಆದರೆ ನಲವತ್ತು -ಐವತ್ತು ವರ್ಷಗಳ ಹಿಂದೆ ದೇಶದ ಬಾವುಟ- ಬಂದೂಕು ತಬ್ಬಿಕೊಂಡ ಸತ್ತುಹೋದ ನಾಯಕರನ್ನು ಇವತ್ತಿನ ಅವಿವೇಕಿಗಳು ನಿಂತು ಇವನು ದೇಶದ್ರೋಹಿ, ಇವನು ಬಿಜೆಪಿ, ಇವನು ಸಲಿಂಗಿ, ಇವನು ರಣಹೇಡಿ ಅಂತ ಆಧಾರಗಳಿಲ್ಲದೆ ಮಾತನಾಡಿದರೆ, ಅಂಥವರನ್ನು ಮೆಟ್ಟಿನಲ್ಲಿ ಹೊಡೆಯ ತಕ್ಕದ್ದು.

ನಾನು ಯಾವತ್ತೂ ಮೂರ್ತಿಭಂಜಕ ನಿಲುವನ್ನೇ ಬೆಂಬಲಿಸಿದವನು. ಆದರೆ ಮೂರ್ತಿ ಭಂಜಕತೆಯ ನೆಪದಲ್ಲಿ ನಮಗಿರುವ ಒಬ್ಬರೋ ಇಬ್ಬರೋ ಆದರ್ಶ ಪುರುಷರನ್ನ, ಸ್ತ್ರೀಯರನ್ನ ಅವಮಾನಿಸಿ, ನಮ್ಮ ಮಕ್ಕಳಿಗೆ role model ಗಳಿಲ್ಲದಂತೆ ಮಾಡಿಬಿಡಬೇಡಿ. ಈ ಹಿಂದೆ ಪೋಲಂಕಿ ರಾಮಮೂರ್ತಿ ಎಂಬ ಗೆಳೆಯರೂಬ್ಬರಿದ್ದರು. ಅನೇಕ ಒಳ್ಳೆಯ ಗುಣಗಳಿದ್ದ ಅತ್ಯುತ್ಸಾಹಿ ಮನುಷ್ಯ. ಒಳ್ಳೆಯ ಲೇಖಕರಲ್ಲ. ಆದರೆ ವಿಪರೀತವಾದ ಹಪಹಪಿ ಅವರಿಗೆ ವಿವಾದಗಳ ಬಗ್ಗೆ ಇತ್ತು. ಏನನ್ನಾದರೂ ಹೊಸದನ್ನು ಹೇಳಿ ಜನರನ್ನು thrillಗೆ ಒಳಗಾಗಿಸುವ ಲೇಖಕ ಸಹಜ ಹಂಬಲ. ಅಂಥ ಹಂಬಲದಲ್ಲೇ ಅವರು ಸೀತಾಯಣ ಬರೆದರು.

Fine. ಇವತ್ತಿಗೂ ರಾಮ ನನ್ನ ಪಾಲಿಗೆ ಒಂದು Uninteresting personality. ಆದರೆ ರಾಮಾಯಣವನ್ನು ನೀವು ಅದರ ರಚನೆಯ ಕಾಲದ ಸಾಮಾಜಿಕ ಸ್ಥಿತಿಗತಿ ಅರ್ಥಮಾಡಿಕೊಂಡು ಓದಿದಾಗ ರಾಮನ ಪಾತ್ರ ಹಾಗೇಕೆ ಸೃಷ್ಟಿಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೀರಿ. ರಾಮಾಯಾಣ ಬರೆದ, ಹಾಡಿದ, ಜನಜನಿತಗೊಳಿಸಿದ ಕಾಲದಲ್ಲಿ ಭಾರತದ ಸಮಾಜ ಬಹುಪತ್ನಿತ್ವದಿಂದ ಏಕಪತ್ನಿತ್ವದೆಡೆಗೆ ಹೋಗ ಬಯಸುತ್ತಿತ್ತು. Atleast ಆಗಿನ ಚಿಂತಕರು ಅದನ್ನು ಬಯಸುತ್ತಿದ್ದರು. ಹೀಗಾಗಿ ಏಕಪತ್ನೀ ವ್ರತಸ್ಥ ರಾಮಚಂದ್ರ ಸೃಷ್ಟಿಯಾದ. ಅದೇ ಕೈಯಲ್ಲಿ ಅವರು ಶೂರ್ಪನಖಿಯ ಪಾತ್ರ ಸೃಷ್ಟಿಸಿದರು. ಆಕೆ ಬಹುಪತ್ನಿತ್ವವನ್ನು ಬೆಂಬಲಿಸುವಾಕೆ. ಆಕೆಗೆ ಅವಮಾನ ಮಾಡಿ, ಬುದ್ಧಿ ಹೇಳಿ ಬಹುಪತ್ನಿತ್ವ-ಬಹುಪತಿತ್ವ ಎರಡನ್ನೂ discourage ಮಾಡುತ್ತಾನೆ ಸಾಮಾಜಿಕ ಚಿಂತಕ ವಾಲ್ಮೀಕಿ. ಆ ಕಾರಣದಿಂದಲೇ ಸೀತೆಯ ಶೀಲಕ್ಕೆ, ಕ್ಯಾರೆಕ್ಟರ್‌ಗೆ ವಿಪರೀತವಾದ ಇಂಪಾರ್ಟೆನ್ಸ್‌ ಕೊಡ ಮಾಡುತ್ತಾನೆ. ಈ ಹಿನ್ನೆಲೆ ಅರ್ಥಮಾಡಿಕೊಳ್ಳದೆ ರಾಮಾಯಣವನ್ನು ಬರೆದ ಎಷ್ಟೋ ಶತಮಾನಗಳ ನಂತರ ರಾಮನ ಕ್ಯಾರೆಕ್ಟರ್‌ ಅಸ್ಯಾಸಿನೇಷನ್‌ ಮಾಡಲು ಕುಳಿತರೆ, ನಾವು ತಪ್ಪು ಮಾಡಿದಂತಾಗುತ್ತದೆ. ರಾಮ,ಭರತ ಶತ್ರುಘ್ನ- ಎಲ್ಲಾ ಪಾಯಸಕ್ಕೆ ಹುಟ್ಟಿದರಾ?ಅಂತ ಗೇಲಿ ಮಾಡುವವರೇ, ಸಹಜತೆಗೆ ಎಲ್ಲೆಲ್ಲೂ ಹತ್ತಿರದಲ್ಲಿರದ ‘ಕಾರ್ಟೂನ್‌ ಷೋ ’ ನೋಡಿ ‘ ಎಂಥ ಕ್ರಿಯೇಟಿವಿಟಿ ಕಣ್ರೀ’ ಅಂತ ನಾಲಗೆ ಚಪ್ಪರಿಸುತ್ತಿರುತ್ತಾರೆ. ಫ್ಯಾಂಟಸಿ ಮತ್ತು ಮಾನವಾತೀತ ಕಲ್ಪನೆಗಳು ಕೂಡ ಒಂದು ನವ ಸೃಷ್ಟಿಗೆ ಪೂರಕವಾಗಿರುತ್ತಾರೆ ಎಂಬುದು ಅನೇಕರಿಗೆ ಅರ್ಥವಾಗುವುದಿಲ್ಲ.‘ಮೈಯಾಳಗಿನ ಮಣ್ಣಿನಿಂದ ಪಾರ್ವತಿ ಗಣೇಶನನ್ನು ಮಾಡಿದಳು’ ಎಂಬ ಪುರಾಣ ಕತೆಯನ್ನು ವೀರಭದ್ರ ಚನ್ನಮಲ್ಲ ಸ್ವಾಮಿಗಳು ‘ಪಾರ್ವತಿ ಸ್ನಾನ ಮಾಡಿರ್ಲಿಲ್ವಾ?’ಅಂತ ಗೇಲಿ ಮಾಡಿ ಭಾಷಣ ಮಾಡುತ್ತಾರೆ.

‘ಏಕವಚನಕ್ಕೆ ಅರ್ಹನಾದ, ಮಾತೃಗರ್ಭದಿಂದ ಸಿಂಗಲ್‌ ಆಗಿ ಹುಟ್ಟಿದ, ಮದುವೆ ಕೂಡ ಆಗದೆ ಇವತ್ತಿಗೂ ಸಿಂಗಲ್‌ ಆಗೇ ಉಳಿದಿರುವ ನೀನು ನಿನ್ನನ್ನೇ ವೀರಭದ್ರ ಚನ್ನಮಲ್ಲಸ್ವಾಮಿಗಳು’ ಅಂತ ಬಹುವಚನದಲ್ಲಿ ಕರೆದುಕೊಳ್ಳುತ್ತೀಯಲ್ಲಾ ? ನಿನಗೆ ಗ್ರಾಮರು ಬರಲ್ವಾ?’ ಅಂತ ತಿರುಕ್ಕೊಂಡು ಅವರನ್ನು ಕೇಳಬೇಕಾಗುತ್ತದೆ.

ಒಂದು ಪಕ್ಷ , ಸೈದ್ಧಾಂತಿಕ ನಿಲುವಿಲ್ಲದ ಮನುಷ್ಯರು ಮಾತ್ರ ಇತಿಹಾಸ, ಪುರಾಣ ಮುಂತಾದವುಗಳನ್ನು ತಪ್ಪಾಗಿ ಅರ್ಥೈಸಿ ತಮ್ಮ ಶಾಣ್ಯತನ ತೋರಲು ಹೋಗುತ್ತಾರೆ. ಅಂಥದ್ದೇ ಶಾಣ್ಯತನ ಪೋಲಂಕಿ ರಾಮಮೂರ್ತಿ ತೋರಿದ್ದರು. ಅವರು ರಾಮನ sterile characterನ ಗೇಲಿ ಮಾಡಿದ್ದನ್ನು ಸಹಿಸಬಹುದಿತ್ತು. ಆದರೆ ಸೀತೆಗೂ- ಲಕ್ಷ್ಮಣನಿಗೂ ಸಂಬಂಧವಿತ್ತು ಅಂತ ಬರೆದರಲ್ಲ ? ಅಸಹ್ಯ ಬಂದು ಹೋಯಿತು. ನಾನು ಇವತ್ತಿಗೂ ದೇವರನ್ನು, ರಾಮಾಯಣವನ್ನು ನಂಬುವುದಿಲ್ಲ. ಆದರೆ ಸೀತೆ, ಒಬ್ಬ ಪ್ರಾಂಜಲ ಮನಸ್ಸಿನ ಬರಹಗಾರನ ಆದರ್ಶದ ಸೃಷ್ಟಿ. ಸಾಮಾಜಿಕ ಪರಿವರ್ತನೆಗೆ ಆಕೆಯನ್ನು ಲೇಖಕ symbol ಆಗಿ ಬಳಸುತ್ತಾನೆ. ಅಂಥ ಸೀತೆ ಮೈದುನನೊಂದಿಗೆ ಮಲಗಿದಳು ಎಂಬುದನ್ನು prove ಮಾಡಿ ಬರೆಯಲು ಹೊರಡುವುದಿದೆಯಲ್ಲ ? ಅದು ನಿಜವಾದ ವಿಕೃತಿ. ಹಾಗಂತ ಪೋಲಂಕಿಯವರಿಗೇ ನಾನು ನೇರವಾಗಿ ಹೇಳಿದ್ದೆ.

ಅವತ್ತು ಪೋಲಂಕಿಯವರನ್ನು ಆರೆಸ್ಸಿಸ್ಸಿಗರು ಹೊಡೆದರು. ಕರ್ನಾಟಕದ ಎಲ್ಲ ಬುದ್ದಿ ಜೀವಿಗಳು (ನಾನೂ ಸೇರಿದಂತೆ) ಆರೆಸ್ಸಿಸ್ಸಿಗರನ್ನು ಖಂಡಿಸಿದೆವು. ಆದರೆ ಸೀತೆಯನ್ನು ಜೀವನ ಪರ್ಯಂತ ತನ್ನದೇಪ್ರೀತಿಯ ಆದರ್ಶ ಅಂದುಕೊಂಡ ನಮ್ಮ ತಾಯಂದಿರ ವಯಸ್ಸಿನ ಹೆಣ್ಣು ಮಕ್ಕಳಿಗೆಲ್ಲ ಪೋಲಂಕಿಯ ವಿಕೃತಿ ಬರಹ ಎಷ್ಟು ನೋವು ಮಾಡಿತ್ತೋ? ಅವರ ಆ ಬರಹವನ್ನು ಲಂಕೇಶು, ಅನಂತಮೂರ್ತಿ ಇತ್ಯಾದಿ ಯಾರೆಂದರೆ ಯಾರೂ ಖಂಡಿಸಲಿಲ್ಲ ನೋಡ್ರೀ? ಇದಕ್ಕೇನಾ ಅವರು ಅಷ್ಟೆಲ್ಲ ಓದಿಕೊಂಡು ಬುದ್ಧಿಜೀವಿಗಳು ಅನ್ನಿಸಿಕೊಂಡದ್ದು?

ಇವತ್ತು ಸಾವರ್ಕರ್‌ರನ್ನು ಹೇಡಿ, ದೇಶದ್ರೋಹಿ ಅನ್ನುತ್ತಿರುವವರೂ ಪೋಲಂಕಿಯಂಥವರೇ.

ಉಳಿದದ್ದು ನಿಮ್ಮ ತೀರ್ಮಾನಕ್ಕೆ ಬಿಡುತ್ತೇನೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more