• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರ್ಲನ್‌ ಬ್ರ್ಯಾಂಡೋ ಎಂಬ ಗಾಡ್‌ ಫಾದರ್‌ನ ಸೂತಕದಲ್ಲಿ ...

By Staff
|
Ravi Belagere on Thatskannada.com ರವಿ ಬೆಳಗೆರೆ
ಗಾಡ್‌ ಫಾದರ್‌ ಅಸ್ತಂಗತ.

ಅಮೆರಿಕದ ಝಗಮಗಿಸುವ ಬೆಳ್ಳಿತೆರೆಗೆ, ಹಾಲಿವುಡ್‌ನ ಬಚ್ಚಾಗಳಿಗೆ Method Acting ಎಂಬ ನೂತನ ನಟನಾ ಸಂಸ್ಕೃತಿ ಕಲಿಸಿದ ಹಿರಿಯ ಮಹಾನ್‌ ನಟ ಮರ್ಲನ್‌ ಬ್ರ್ಯಾಂಡೋ ಮೊನ್ನೆ ಜುಲೈ 1ರ ರಾತ್ರಿ ತನ್ನ ಎಂಬತ್ತನೇ ವಯಸ್ಸಿನಲ್ಲಿ ಶ್ವಾಸಕೋಶ ತೊಂದರೆಯಿಂದಾಗಿ ತೀರಿಹೋದ. What will we do without Marlon in this world ಅಂತ ಉದ್ಗರಿಸಿದವನು ಮರ್ಲನ್‌ ಬ್ರ್ಯಾಂಡೋನಿಂದ ತೀವ್ರವಾಗಿ ಪ್ರಭಾವಿತನಾಗಿರುವ ಇನ್ನೊಬ್ಬ ಜಗತ್ಪ್ರಸಿದ್ಧ ನಟ ಅಲ್‌ಪ್ಯಾಸಿನೊ. ಇವರಿಬ್ಬರಿಂದಲೂ ಪ್ರಭಾವಿತನಾಗಿರುವ ಭಾರತೀಯ ನಟನೊಬ್ಬನಿರುವುದು ನಿಮಗೆ ಗೊತ್ತೇ ಇದೆ ; ಆತನ ಹೆಸರು ಕಮಲಹಾಸನ್‌. ಹಾಗೆ ಸರಿಸುಮಾರು ಅರವತ್ತು ವರ್ಷ ನಟಿಸುತ್ತಾ, ಹೂಂಕರಿಸುತ್ತಾ, ದುಡ್ಡು ಮಾಡುತ್ತಾ, ಮಕ್ಕಳನ್ನು ಮಾಡುತ್ತಾ , ಅಮೆರಿಕಾದ ಅಸಹ್ಯಗಳ ವಿರುದ್ಧ ಹೋರಾಡುತ್ತಾ , ತನ್ನನ್ನು ತಿದ್ದಿಕೊಳ್ಳುತ್ತಾ , ಆಸ್ಕರ್‌ ಪ್ರಶಸ್ತಿಯನ್ನು ತಿರಸ್ಕರಿಸುತ್ತಾ , ಮತ್ತೊಂದು ಬಂದಾಗ ಸ್ವೀಕರಿಸುತ್ತಾ , ತಾನಿದ್ದ ಹಾಲಿವುಡ್ಡನ್ನು ದ್ವೇಷಿಸುತ್ತಾ , ಅದರಿಂದಲೇ ಕೋಟ್ಯಂತರ ಡಾಲರ್‌ ಎಬ್ಬುತ್ತಾ , ಒಂದು ಸ್ವಂತ ದ್ವೀಪ ಖರೀದಿಸಿಕೊಂಡು, ಪ್ರತಿನಿತ್ಯ ಅಲ್ಲಿನ ಟ್ಯಾಬೊಲಾಯ್ಡ್‌ಗಳಿಗೆ ಸುದ್ದಿಯಾಗುತ್ತಾ , ಎಂಬತ್ತು ವರ್ಷಗಳ ತುಂಬು ಜೀವನ ನಡೆಸಿ, ‘ತಾನು ಸಾಯುವುದಕ್ಕಿದ್ದ ನಿಜವಾದ ಕಾರಣವನ್ನು ಯಾರಿಗೂ ಹೇಳಬೇಡಿ’ ಎಂದು ತನ್ನ ವಕೀಲರಿಗೆ ಸೂಚನೆ ಕೊಟ್ಟು , ಮೊನ್ನೆ ಸತ್ತು ಹೋದವನು ಮರ್ಲನ್‌ ಬ್ರ್ಯಾಂಡೋ.

ಅಮೆರಿಕದ ನಕ್ಷತ್ರವೊಂದು ಹಾಗೆ ಕಳಚಿಬಿದ್ದಂತಾಗಿದೆ. ಇವತ್ತಿಗೂ ಅಂಡರ್‌ವರ್ಲ್ಡ್‌ಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ತಯಾರಾಗುತ್ತಿರುವ ಅಷ್ಟೂ ಸಿನೆಮಾಗಳ ಪಾಲಿನ Grand daddyಯಂಥ ಸಿನೆಮಾ ಅಂದರೆ, Grand Father. ಅದನ್ನು ಬರೆದ ಕಾದಂಬರಿಕಾರ ಮಾರಿಯೋ ಪ್ಯೂಜೋ ನನ್ನ ಅತ್ಯಂತ ಪ್ರೀತಿಯ ಲೇಖಕ. ಆತ 1960ರ ದಶಕದಲ್ಲಿ ಗಾಡ್‌ ಫಾದರ್‌ ಬರೆದಾಗ, ಅದರಲ್ಲಿ ಡಾನ್‌ ವಿಯೋ ಕ್ಲಾರಿಯನ್‌ ಪಾತ್ರ (ನನ್ನ ಅನುವಾದದಲ್ಲಿ ಆತ ಡಾನ್‌ ಚಿನ್ನಮಾದಿರೆಡ್ಡಿ )ವನ್ನು ಚಿತ್ರದಲ್ಲಿ ಮರ್ಲನ್‌ ಬ್ರ್ಯಾಂಡೋನೇ ಮಾಡಬೇಕು ಅಂತ ಬಯಸಿದ್ದ . ಕಾದಂಬರಿಯ ಹಸ್ತಪ್ರತಿಯನ್ನು ಮರ್ಲನ್‌ ಬ್ರ್ಯಾಂಡೋ ವಾಸಿಸುತ್ತಿದ್ದ ಜಾಗಕ್ಕೆ ತಾನೇ ಕಳಿಸಿದ್ದ . ಆದರೆ ಗಾಡ್‌ ಫಾದರ್‌ ಸಿನೆಮಾದ ನಿರ್ಮಾಣವನ್ನು ಪ್ಯಾರಮೌಂಟ್‌ ಸಂಸ್ಥೆ ಕೈಗೆತ್ತಿಕೊಂಡಿತ್ತು . ಆ ಸಂಸ್ಥೆಯವರ್ಯಾರಿಗೂ ಮರ್ಲನ್‌ ಬ್ರ್ಯಾಂಡೋ ತಮ್ಮ ಚಿತ್ರದಲ್ಲಿ ನಟಿಸುವುದು ಇಷ್ಟವಿರಲಿಲ್ಲ . ಅವನೊಬ್ಬ pain. ಬಾಕ್ಸ್‌ ಆಫೀಸ್‌ ಮಟ್ಟಿಗೆ ವಿಷ ಅಂದಿದ್ದರು. ಆದರೆ ಅದರ ನಿರ್ದೇಶಕ ಫ್ರಾನ್ಸಿಸ್‌ ಫೋರ್ಡ್‌ ಕೊಪೋಲ ಈ ಮರ್ಲನ್‌ ಬ್ರ್ಯಾಂಡೋನನ್ನು ಕರೆತಂದು ಆ ಚಿತ್ರದಲ್ಲಿ ಗಾಡ್‌ಫಾದರ್‌ನ ಪಾತ್ರವನ್ನು ಮಾಡಿಸಿಯೇ ಬಿಟ್ಟ . ಆ ಚಿತ್ರ ಇತಿಹಾಸ ನಿರ್ಮಿಸಿತು. ಮೊನ್ನೆ ಮೊನ್ನೆ ಕಮಲಹಾಸನ್‌ ‘ನಾಯಗನ್‌’ ಚಿತ್ರದಲ್ಲಿ ಹೂಬೇಹೂಬು ಮರ್ಲನ್‌ ಬ್ರ್ಯಾಂಡೋನನ್ನು ಇಮಿಟೇಟ್‌ ಮಾಡಿ, ಅಷ್ಟರಮಟ್ಟಿಗೆ ಜನ್ಮ ಸಾರ್ಥಕವಾಯಿತು ಅಂದುಕೊಂಡಿದ್ದ . ಬ್ರ್ಯಾಂಡೋ ಅಂದರೆ ಅದು.

Hollywood legend Marlon Brandoಬ್ರ್ಯಾಂಡೋ ಅಂದರೆ ಅದಷ್ಟೇ ಅಲ್ಲ . ಅವನು ನೆಲದಿಂದ ಉದ್ಭವವಾದ ಒರಟು ಬಂಡೆಯಂತೆ ಬಲಿಷ್ಠನಾಗಿ ಕಾಣುತ್ತಿದ್ದ ದೈತ್ಯದೇಹಿ. ಆದರೆ ರಾತ್ರಿಗಳಲ್ಲಿ ಸುಮ್ಮನೆ ಮಲಗಿದಾಗ, ಯಾವುದೋ ಕೆಟ್ಟ ಕನಸು ಕಂಡವನಂತೆ ಬೆಚ್ಚಿ , ಕಿರುಚಿಕೊಂಡು ಎದ್ದು ಕುಳಿತುಬಿಡುತ್ತಿದ್ದ . ‘ನಿಮ್ಮಮ್ಮ ಇಲ್ಲಿ ನಮ್ಮ ಬಾರ್‌ನಲ್ಲಿ ಕುಡಿದು ಕುಡಿದು ಹಾಗೇ ಸತ್ತುಹೋಗಿದ್ದಾಳೆ ಬಾ... ’ ಅಂತ ಬಾರ್‌ನವರು ಫೋನ್‌ ಮಾಡಿದ ಹಾಗೆ ಅವನಿಗೆ ಪದೇಪದೇ ಕನಸು ಬೀಳುತ್ತಿತ್ತು . ಅದಕ್ಕೊಂದು ಕಾರಣವೂ ಇತ್ತು . ಮರ್ಲನ್‌ ಬ್ರ್ಯಾಂಡೋ ಯುವಕನಾಗಿದ್ದಾಗ ಒಮ್ಮೆ ತನ್ನ ‘ಅಸ್ವಸ್ಥ’ತಾಯಿಯನ್ನು ಮನೆಗೆ ಕರೆತರಲು ಹತ್ತಿರದ ಬಾರೊಂದಕ್ಕೆ ಹೋಗಿದ್ದ . ಅಲ್ಲಿ ಕುಡಿದುಬಿದ್ದಿದ್ದ ಆತನ ತಾಯಿಯ ಮೈಮೇಲೆ ಬಟ್ಟೆಯೇ ಇರಲಿಲ್ಲ .

ಅವನ ತಾಯಿಯ ಹೆಸರು ಡೊರೋತಿ. ಒಬ್ಬ ಸೋತ ನಟಿ ಆಕೆ. ತುಂಬ ಸುಂದರವಾಗಿದ್ದಳು. ಆದರೆ ಶುದ್ಧ ಕುಡುಕ ಗಂಡನ ಕೈಯಲ್ಲಿ ನರಳಿ ನರಳಿ ತಾನೇ ಕೆಟ್ಟ ಆಲ್ಕೋಹಾಲಿಕ್‌ ಆಗಿಬಿಟ್ಟಿದ್ದಳು. ಬ್ರ್ಯಾಂಡೋಗೆ ಅವನ ತಂದೆಯನ್ನು ಕಂಡರಾಗುತ್ತಿರಲಿಲ್ಲ . ಆತ ಕೀಟನಾಶಕ ಔಷಧಿಗಳನ್ನು ಮಾರುವ ವೃತ್ತಿಯಲ್ಲಿದ್ದಾತ. ಹೆಂಡತಿ ಮಕ್ಕಳನ್ನು ಹಿಂಸಿಸುವುದು ಹೇಗೆ ಎಂದು ಆತನಿಂದ ಕಲಿಯಬೇಕು : ಹಾಗಿದ್ದ . ಅವನ ಮಗ ಬ್ರ್ಯಾಂಡೋ, ಅವನೇನೂ ತನ್ನ ತಂದೆಗಿಂತ ತುಂಬ ಡಿಫರೆಂಟ್‌ ಆಗಿರಲಿಲ್ಲ . ಮೂವರು ಹೆಂಡತಿಯರನ್ನು ಒಬ್ಬರಾದ ಮೇಲೊಬ್ಬರಂತೆ ಮದುವೆಯಾಗಿದ್ದ . ಸಾಲದ್ದಕ್ಕೆ ಇನ್ನೂ ಕೆಲವು ಹೆಂಗಸರಿದ್ದರು. ಅವರೆಲ್ಲರಿಗೂ ಆತ, ನಮ್ಮ ನಾಟಕ ಕಂಪನಿಗಳ ಮಾಲೀಕರಂತೆ ಸಾಲು ಸಾಲು ಮಕ್ಕಳನ್ನು ಕೊಟ್ಟಿದ್ದ . ಕೆಲವು ನೈತಿಕ, ಕೆಲವು ಅನೈತಿಕ ಸಂತಾನಗಳು. ಇಂಥ ಬ್ರ್ಯಾಂಡೋ ಕೊನೆಗಾಲದಲ್ಲಿ ಬುಕ್ಕಾ ಫಕೀರನಾಗಿ, ತಿನ್ನಲೂ ಇಲ್ಲದೆ, actor’s guild ಪೆನ್ಷನ್‌ ಪಡೆಯುತ್ತ ಬದುಕುತ್ತಿದ್ದ ಅಂತ ಕೆಲವರು ಹೇಳುತ್ತಾರೆ. ಸತ್ತ ಮೇಲೂ ಬ್ರ್ಯಾಂಡೋನನ್ನು ನಂಬೋಕಾಗಲ್ಲ . ಅಂಥ manipulator ಅವನು. ಪರೀಕ್ಷಿಸಿ ನೋಡಿ : ಅವನು ಸತ್ತ ಕೆಲವೇ ಗಂಟೆಗಳಲ್ಲಿ ಅವನ ಹನ್ನೊಂದೋ, ಹದಿನೆಂಟೋ ಮಕ್ಕಳು, ಅವನ ಇಪ್ಪತ್ತು ಮಿಲಿಯನ್‌ ಡಾಲರ್‌ಗಳ ಬೃಹತ್‌ ಆಸ್ತಿಗಾಗಿ ಬಡಿದಾಡುತ್ತಿದ್ದಾರೆ ! ಅಷ್ಟೊಂದು ಹಣ ಬಿಟ್ಟು ಹೋಗಿದ್ದಾನೆ ಬ್ರ್ಯಾಂಡೋ ಅಂತ ಒಂದು ವರದಿ ಹೇಳುತ್ತದೆ.

ಆ ವೃತ್ತಿಯೇ ಅಂತಹುದು. ಮರ್ಲನ್‌ ಬ್ರ್ಯಾಂಡೋ ಅಮೆರಿಕಾದಲ್ಲಿ ಹಾಗೆ ಬದುಕಿದನಾದರೆ, ಇಲ್ಲಿ ಕನ್ನಡದ ನೆಲದಲ್ಲಿ ಹಿರಿಯ ನಟ ಗುಬ್ಬಿ ವೀರಣ್ಣ ಕೂಡ ಹಾಗೇ ಬದುಕಿದ್ದರು. ಬಣ್ಣದ ಲೋಕ ಹೆಂಗಸರಿಗೆ ಕೊರತೆ ಉಂಟು ಮಾಡುವುದಿಲ್ಲ . ಅಲ್ಲದೆ ಮರ್ಲನ್‌ ಬ್ರ್ಯಾಂಡೋನ ದೇಹ ಆರಂಭದ ದಿನಗಳಲ್ಲಿ ಅದೆಷ್ಟು ಕಟ್ಟುಮಸ್ತಾಗಿ, ಅದ್ಭುತವಾಗಿ ಇತ್ತೆಂದರೆ, ಅವನೊಂದಿಗೆ ಸಂಬಂಧವಿಟ್ಟುಕೊಳ್ಳಲು ಆ ಕಾಲದ ಅಷ್ಟೂ ನಟಿಯರು ಹಾತೊರೆಯುತ್ತಿದ್ದರು. ಅವನು ಕೂಡ ಒಬ್ಬಳಾದ ಮೇಲೊಬ್ಬ ನಟಿಯನ್ನೇ ಮದುವೆಯಾದ. ಮೊದಲು ಖಾಸಗಿ ನಾಟಕ ತಂಡಗಳಲ್ಲಿ ಕೆಲಸ ಮಾಡುತ್ತಿದ್ದ . ಜೂಲಿಯಸ್‌ ಸೀಝರ್‌, ನೆಪೋಲಿಯನ್‌, ಮಾರ್ಕ್‌ ಆ್ಯಂಟನಿ- ಹೀಗೆ ಅವನು ಮಾಡುತ್ತಿದ್ದುದೆಲ್ಲ ಅವನ ವ್ಯಕ್ತಿತ್ವಕ್ಕೆ ಹೋಲುವಂಥ ಮಹಾನ್‌ ಪಾತ್ರಗಳೇ. ಆ ಕಾಲಕ್ಕೆ just ಆಗತಾನೆ ಆರಂಭಗೊಂಡಿದ್ದ Method Acting ಎಂಬ ನೂತನ ಪದ್ಧತಿಯನ್ನು ಬ್ರ್ಯಾಂಡೋ ಬಲುಬೇಗ ತನ್ನ ನಟನೆಯಲ್ಲಿ ಅಳವಡಿಸಿಕೊಂಡಿದ್ದ . ಈ ಪದ್ಧತಿಯ ಸಿದ್ಧಾಂತವಿಷ್ಟೆ : Don’t act. Just behave. ನಟಿಸಬೇಡ, ಸಹಜವಾಗಿ ವರ್ತಿಸು ಅಂತ ಹೇಳಿಕೊಡುವ ಸಿದ್ಧಾಂತವದು. ಅದನ್ನು ಹೇಳಿಕೊಡುತ್ತಿದ್ದ ಶಿಕ್ಷಕಿಯಾಬ್ಬಳು ಹತ್ತಾರು ನಟನಟಿಯರಿದ್ದ ಕ್ಲಾಸಿಗೆ ಅದೊಮ್ಮೆ ಹೇಳಿದಳು- ‘ಈಗ ನೀವೆಲ್ಲ ಕೋಳಿಗಳು. ನೆತ್ತಿಯ ಮೇಲೆ ಬಾಂಬು ಬೀಳಲಿದೆ ಅಂತ ನಿಮಗೆ ಗೊತ್ತಾಗಿದೆ. come on.... ಅಭಿನಯಿಸಿ ತೋರಿಸಿ!’

ಇಡೀ ಕ್ಲಾಸು ಚೆಲ್ಲಾಪಿಲ್ಲಿಯಾಗಿ ಓಡಿಹೋದರೆ ಒಬ್ಬ ಮರ್ಲನ್‌ ಬ್ರ್ಯಾಂಡೋ ಮಾತ್ರ ಕದಲದೆ ಕುಳಿತಿದ್ದ . ‘ಕ್ಷಮಿಸಿ, ನಾನು ಮೊಟ್ಟೆ ಇಡುತ್ತಿದ್ದೇನೆ’ ಅಂದಿದ್ದ . ಈ ತೆರನಾದೊಂದು ಕ್ರಿಯಾಶೀಲತೆ ಅವನ ವ್ಯಕ್ತಿತ್ವದಲ್ಲೇ ಇತ್ತು . ಅವನ ಸಿನೆಮಾವೊಂದು ಎಷ್ಟು ಪ್ರಖ್ಯಾತವಾಗಿತ್ತು ಅಂದರೆ, ಅದರಲ್ಲಿ ಪತ್ನಿಯ ಶವದ ಮುಂದೆ ನಿಂತು ಅವನು ಆಡಿದ ಅರ್ಧರ್ಧ ಮಾತು, ಆಡದೆ ಉಳಿದ ಇನ್ನರ್ಧ ಮಾತು, ಆ ದೀನ-ನಿಸ್ಸಹಾಯಕ ಮುಖಭಾವ- ಅವೆಲ್ಲವೂ ಅವನೊಬ್ಬ ಮಹಾನ್‌ ನಟ ಎಂಬುದನ್ನು ಪ್ರೂವ್‌ ಮಾಡಿದ್ದವು. ಮಾತೇ ಕಳೆದುಕೊಂಡವನಂತೆ ನಿಂತುಬಿಡುವ ಬ್ರ್ಯಾಂಡೋ ಎಲ್ಲರ ಕಣ್ಣಲ್ಲೂ ನೀರು ತುಂಬಿಸಿದ್ದ . ಆ ದೃಶ್ಯದಲ್ಲಿ ಅಭಿನಯಿಸುವಾಗ ಅವನಿಗೆ ಅವನ ತಾಯಿ ನೆನಪಾಗಿದ್ದಳಂತೆ ಅಂತ ಮಾತಾಡಿಕೊಂಡರು ಜನ. ನಿಜದ ಸಂಗತಿಯೇನೆಂದರೆ, ಅವನ ಮುಖದಲ್ಲಿ ಆ ದೀನ-ನಿಸ್ಸಹಾಯಕ ಭಾವ ಕಾಣಿಸಿಕೊಳ್ಳಲು ಕಾರಣ, ಅವನು ಡೈಲಾಗು ಮರೆತಿದ್ದ . ಬ್ರ್ಯಾಂಡೋ ಅಂದರೆ ಅದು!

ಖುದ್ದು ಮಾಫಿಯಾ ನಾಯಕನ ಪಾತ್ರ ವಹಿಸಿದ ಬ್ರ್ಯಾಂಡೋ, ತನ್ನ ಬದುಕಿನಲ್ಲೇ ಭಯಾನಕವಾದ ಹತ್ಯೆಯಾಂದು ನಡೆದುಬಿಡಬಹುದು ಅಂದುಕೊಂಡಿರಲಿಲ್ಲ . ಅವನಿಗೊಬ್ಬ ಮಗಳಿದ್ದಳು, ಚೆಯೇನೆ ಅಂತ. ಹಾಗೇನೇ ಇನ್ನೊಬ್ಬ ಹೆಂಡತಿಯ ಮಗನಾದ ಕ್ರಿಸ್ಟಿಯನ್‌ ಅನ್ನೋನು ಕೂಡ ಇದ್ದ . ಈ ಹುಡುಗಿ ಚೆಯೇನೆ ತನ್ನ ಪ್ರಿಯತಮ ಡ್ಯಾಗ್‌ ಅನ್ನುವವನನ್ನ ಅದೊಂದು ದಿನ ಹಾಲಿವುಡ್‌ ಹಿಲ್ಸ್‌ನಲ್ಲಿದ್ದ ತನ್ನ ತಂದೆಯ ಮನೆಗೆ ಊಟಕ್ಕೆ ಕರೆದಿದ್ದಳು. ತನ್ನ ಮಲತಂಗಿ ಆ ಹುಡುಗ ಡ್ಯಾಗ್‌ನನ್ನು ಪ್ರೀತಿಸುವುದು ಕ್ರಿಸ್ಟಿಯನ್‌ಗೆ ಇಷ್ಟವಿರಲಿಲ್ಲ . ಅವನೆಂಥ ಉನ್ಮಾದಿ ಮನುಷ್ಯನಾಗಿದ್ದನೆಂದರೆ, ಮಲತಂಗಿಯ ಪ್ರಿಯತಮನಿಗೆ ಮನೆಯಲ್ಲೇ ಗುಂಡಿಕ್ಕಿ ಕೊಂದುಬಿಟ್ಟ . 1990ರಲ್ಲಿ ನಡೆದ ಈ ಘಟನೆ ಇಡೀ ಒಂದು ವರ್ಷ ಅಮೆರಿಕಾದ ಟ್ಯಾಬೊಲಾಯ್ಡ್‌ಗಳಿಗೆ ಆಹಾರವಾಗಿತ್ತು . ಆಗ ಮರ್ಲನ್‌ ಬ್ರ್ಯಾಂಡೋ ತನ್ನ ಮಗನಿಗಾಗಿ ಕೋರ್ಟಿನಿಂದ ಕೋರ್ಟಿಗೆ ಅಲೆದ. ಅವನ ತಾಯಿ ತುಂಬ ಕೆಟ್ಟ ಹೆಂಗಸು. ಮಕ್ಕಳನ್ನು ಹೀಗೆ ಸಾಕಿಬಿಟ್ಟಿದ್ದಾಳೆ. of course, ತಂದೆಯಾಗಿ ನಾನಾದರೂ ಚೆನ್ನಾಗಿ ನಡೆದುಕೊಳ್ಳಬಹುದಿತ್ತು . ನಾನೂ ಹಾಗೆ ನಡೆದುಕೊಳ್ಳಲಿಲ್ಲ ಅಂತ ಬಹಿರಂಗವಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ . ಮುಂದೆ ಬ್ರ್ಯಾಂಡೋನ ಮಗ ಕ್ರಿಸ್ಟಿಯನ್‌ಗೆ 10 ವರ್ಷಗಳ ಸಜೆ ನೀಡಲಾಯಿತು. 1965ರಲ್ಲಿ ಕ್ರಿಸ್ಟಿಯನ್‌ನ ಮಲತಂಗಿ ಚೆಯೇನೆ ವಿಪರೀತವಾದ ಡ್ರಗ್‌ ಸೇವನೆಗೆ ಬಿದ್ದು ತನ್ನ ತಂದೆ ಖರೀದಿಸಿದ್ದ ದ್ವೀಪದ ಮನೆಯಲ್ಲೇ ಹ್ಯಾಂಗ್‌ ಮಾಡಿಕೊಂಡು ಸತ್ತುಹೋದಳು.

ನಟನಾಗಿ ದೊಡ್ಡ ಎತ್ತರಕ್ಕೆ ಬೆಳೆದ ಮರ್ಲನ್‌ ಬ್ರ್ಯಾಂಡೋ, ಅದರಲ್ಲಿ ಅಂಥ ಆಸಕ್ತಿಯಿಲ್ಲ ಅನ್ನಿಸಿ ನಿರ್ದೇಶನಕ್ಕೆ ಕೈ ಹಾಕಿದ. ಆದರೆ ವಿಪರೀತ ಜಗಳಗಂಟತನ, ಕಸುಬುದಾರಿಕೆಯ ಕೊರತೆ ಇತ್ಯಾದಿಗಳಿಂದಾಗಿ ನಿರ್ದೇಶನದಲ್ಲಿ ಕೆಟ್ಟ ಸೋಲು ಅನುಭವಿಸಿದ. ಹಾಗೆ ಸೋತಾಗಲೆಲ್ಲ ಅವನಿಗೆ ವಿಪರೀತ ಸಿಟ್ಟು ಬರುತ್ತಿತ್ತು . ಸಿಟ್ಟು ಬಂದಾಗಲೆಲ್ಲ ದೈತ್ಯದೇಹಿ ಬ್ರ್ಯಾಂಡೋ ಭಯಾನಕವಾಗಿ ತಿನ್ನಲು ಕುಳಿತುಬಿಡುತ್ತಿದ್ದ . ಬ್ರ್ಯಾಂಡೋ ಅದ್ಯಾವ ಪರಿ ತಿಂದ ಅಂದರೆ, ಅವನ ಬಲಿಷ್ಠ , ಕಟ್ಟುಮಸ್ತು ದೇಹ ವಿಕಾರವಾಗಿ ಉಬ್ಬಿಕೊಂಡು ಅನಾಮತ್ತಾಗಿ 300 ಪೌಂಡುಗಳ ತೂಕ ತೂಗತೊಡಗಿದ. ಬಹುಶಃ ಅವನನ್ನು ಕೊಂದದ್ದೇ ಅದು.

ಬ್ರ್ಯಾಂಡೋಗೆ ಅಮೆರಿಕ ಇಷ್ಟವಾಗುತ್ತಿರಲಿಲ್ಲ . ಅಮೆರಿಕಾದ ಮೂಲ ನಿವಾಸಿಗಳಾದ ಇಂಡಿಯನ್ನರನ್ನ (ಭಾರತೀಯರಲ್ಲ ಅವರು) ಮತ್ತು ನೀಗ್ರೋಗಳನ್ನು ಅಮೆರಿಕ ಹಿಂಸಿಸಿದೆ, ಕಡೆಗಣಿಸಿದೆ, ಕಾಡುತ್ತಿದೆ ಅಂತ ಆತ ಭಾವಿಸಿದ್ದ . ಹೀಗಾಗಿ ತನಗೆ ಆಸ್ಕರ್‌ ಪ್ರಶಸ್ತಿ ಬಂದಾಗ ಅಮೆರಿಕನ್‌ ಸರ್ಕಾರ ಅವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುವುದಿಲ್ಲವಾದ್ದರಿಂದ, ಆ ಪ್ರಶಸ್ತಿ ನಾನೊಲ್ಲೆ ಅಂದಿದ್ದ . ಅವನಿಗೆ ಹಾಲಿವುಡ್‌ ಕೂಡ ಅಸಹ್ಯ ತಂದಿತ್ತು . ಏನು ಮಾಡಲಿ ? ಹಾಲಿವುಡ್‌ ಕೊಡುತ್ತಿರುವ ಕೋಟ್ಯಂತರ ಡಾಲರ್‌ಗಳನ್ನು ಧಿಕ್ಕರಿಸುವ ನೈತಿಕ ಶಕ್ತಿ ನನಗಿಲ್ಲ . ಇನ್ನೂ ಬಂದಿಲ್ಲ ಅಂದಿದ್ದ. ಆದರೆ ಬ್ರ್ಯಾಂಡೋ, ದುಡ್ಡಿಗಾಗಿ ನಮ್ಮ ಉಪೇಂದ್ರನಂತೆ ಚಿಲ್ರೆ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಲಿಲ್ಲ . ನೀಚ ಸಂಧಾನಗಳನ್ನು ಮಾಡಿಕೊಳ್ಳಲಿಲ್ಲ . ‘ನಾನು ನಾನೇ! ನಾನು ನಾನಾಗಿ ಉಳಿಯಲಿಕ್ಕೆ ನನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುವಂಥ ಪ್ರಸಂಗ ಬಂದರೆ ತಲೆ ಒಡೆದುಕೊಂಡೇನು. ಆದರೆ ನಾನು ನಾನಾಗಿಯೇ ಉಳಿಯುತ್ತೇನೆ!’ ಅಂದಿದ್ದ . ಬ್ರ್ಯಾಂಡೋ ಅಂದರೆ ಅದು.

ನಮ್ಮ ಕನ್ನಡದ ನಟರು, ನಿರ್ದೇಶಕರು, ಕತೆ ಬರೆಯುವವರು ಕೇವಲ ಬ್ರ್ಯಾಂಡೋನ ಸಿನೆಮಾಗಳನ್ನು ನೋಡುತ್ತಾರೆ. ಅಂಥ ನಟನೊಬ್ಬನ ಬದುಕಿನ backdrop ಹೇಗಿತ್ತು ಅಂತ ನೋಡುವುದಿಲ್ಲ . ಹೀಗಾಗಿ ಅವರು ಇಮಿಟೇಟಲ್‌ಗಳಾಗುತ್ತಾರೆ. ಬ್ರ್ಯಾಂಡೋಗಳಾಗಬಯಸುತ್ತಾರೆ.

ಗಾಡ್‌ ಫಾದರ್‌ಗಳಾಗುವುದಿಲ್ಲ !

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more