• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊನ್ನೆ ಭೇಟಿಯಾದ ಸಮುದ್ರಕ್ಕೆ ನಿನ್ನ ಘನತೆ ಕುರಿತು ಹೇಳಿದೆ!

By Staff
|
Ravi Belagere on Thatskannada.com ರವಿ ಬೆಳಗೆರೆ
ಇದನ್ನೇನು ಹುಚ್ಚು ಅಂತೀರಾ?

ಗೊತ್ತಿಲ್ಲ. ಮೊನ್ನೆ ಮೊನ್ನೆ ನಲವತ್ತೈದು ಮುಗಿದು ಮೂರು ಕತ್ತೆ ವಯಸ್ಸಾಯ್ತು ಅಂತ ಅನ್ನಿಸಿಕೊಂಡರೂ, ಒಮ್ಮೊಮ್ಮೆ ಮನಸ್ಸು ಮಳೆಬಿದ್ದ ಸಾಯಂಕಾಲದಲ್ಲಿ ಹೆದೆಯೇರುವ ಕಾಮನಬಿಲ್ಲಾಗಿ ಬಿಡುತ್ತದೆ. ರಾತ್ರಿಯ ನೀರವ ಏಕಾಂತದಲ್ಲಿ ಎದ್ದು ಕುಳಿತು ಮತ್ತೆ ಮತ್ತೆ ಹಳೆಯ ಪ್ರೇಮಗೀತೆಗಳನ್ನು ಓದಿಕೊಳ್ಳುವಂತಾಗುತ್ತದೆ. ಹಳೆಯ ಪ್ರೇಮಪತ್ರಗಳನ್ನೆಲ್ಲ ಮತ್ತೆ ಎದುರಿಗೆ ಸುರುವಿಕೊಂಡು ಆವತ್ತಿನ ಪ್ರೇಮದ ಬೆಂಕಿಯಲ್ಲಿ ಹಿತವಾಗಿ ಮೈ ಕಾಯಿಸಿಕೊಳ್ಳಬೇಕೆನಿಸುತ್ತದೆ.

ಪ್ರೇಮ ಅನ್ನೋದು ಕೂಡ ಅದೆಷ್ಟು ಹಿಂಬಾಲತ್ತಿ ಬರುವ ಮಧುರ ಪೀಡೆ, ಅಲ್ವಾ? ನಮ್ಮದೇ ಉದಾಹರಣೆ ತಗೊಳ್ಳಿ. ನಮ್ಮದು ಕಾರ್ಡ್‌ಲೆಸ್‌ ಕಾಲ. ಹುಡುಗಿಗೆ ಕೊಡೋಕೆ ಅಂತಲೇ ಆಗ ಗ್ರೀಟಿಂಗ್‌ ಕಾರ್ಡುಗಳು ಪ್ರಿಂಟಾಗಿ ಬರುತ್ತಿರಲಿಲ್ಲ. ಆಗ ಆರ್ಚೀಸ್‌ ಗ್ಯಾಲರಿಗಳಿರುತ್ತಿರಲಿಲ್ಲ. ಆ ಕಾಲದಲ್ಲಿ ಅವಳಿಗೆ ಕೊಟ್ಟ ಪತ್ರಗಳೇ ನೂರು ಕಾರ್ಡುಗಳಿಗೆ ಸಮ. ಒಮ್ಮೆ ಬರೆಯಲು ಕೂತರೆ ಇಪ್ಪತ್ತು-ಮೂವತ್ತು ಪುಟ. ಕೆಲವಕ್ಕೆ ಆರಂಭವೇ ಇರುತ್ತಿರಲಿಲ್ಲ. ಮತ್ತೆ ಕೆಲವು ಯಾವತ್ತಿಗೂ ಮುಗಿಯದ ಪತ್ರಗಳು. ‘ನಿನ್ನ ಪತ್ರ ಬರಲಿಲ್ಲ’ ಎಂಬ ಏಕೈಕ ಕಾರಣಕ್ಕೇ ಅವಳು ಅದೆಷ್ಟು ಸಲ ಮುನಿಯುತ್ತಿದ್ದಳೋ? ಅವಳಿಗೂ ಗೊತ್ತು : ನನ್ನ ಪತ್ರ ಕೈಗೆ ಕೊಟ್ಟ ದಿನ, ಅವಳು ರಾತ್ರಿಯಿಡೀ ನಿದ್ರೆ ಮಾಡುತ್ತಿರಲಿಲ್ಲ. ಒಂದು ರಾತ್ರಿಯ ನಿದ್ರೆ ಕೆಡಿಸುವಷ್ಟು ದೊಡ್ಡ ಪತ್ರ. ಅದನ್ನು ನಾನು ಅವೆಷ್ಟು ರಾತ್ರಿಗಳಲ್ಲಿ ನಿದ್ರೆಗೆಟ್ಟು ಬರೆದಿರುತ್ತಿದ್ದೆನೋ!

ಅರ್ಧ ಬರೆದಿಟ್ಟ ಪತ್ರ, ಬರೆದದ್ದೆಲ್ಲ ಆದ ಮೇಲೆ ಕೊಡಬಾರದು ಅಂತ ತೀರ್ಮಾನಿಸಿ ಹಾಗೇ ಉಳಿಸಿಟ್ಟ ಪತ್ರ, ಯಾರ ಕೈಗೋ ಸಿಕ್ಕಿಬಿದ್ದ ಪತ್ರ, ಅವಳನ್ನು ಮುದಗೊಳಿಸಿದ ಪತ್ರ, ಅವಳು ಎದುರಲ್ಲೇ ಕುಳಿತು ಓದಿದ ಪತ್ರ, ಅವಳ ಮೇಲೆ ಸಿಟ್ಟಿಗೆದ್ದು ಹರಿದು ಹಾಕಿದ ಪತ್ರ, ಪತ್ರದೊಳಕ್ಕೆ ಬಿದ್ದ ಅವಳ ಕಣ್ಣೀರು ಅಕ್ಷರ ಅಳುಕಿಸಿ ಹಾಕಿದ ಪತ್ರ, ಅವಳು ಆಸೆಯಿಂದ ಎದೆಯ ಮಿದುವಿನೊಳಕ್ಕೆ ಹುದುಗಿಸಿಟ್ಟುಕೊಂಡ ಪತ್ರ, ‘ಯಾವತ್ತೋ ಒಮ್ಮೆ ಎಲ್ಲ ಪತ್ರಗಳನ್ನೂ ಹಿಂತಿರುಗಿಸುತ್ತಿದ್ದೇನೆ’ ಅಂತ ಕೊನೆಯ ಷರಾ ಬರೆದ ಪತ್ರ...

ಬಹುಶಃ ಅಕ್ಷರ ಕಲಿತ ಮೊಟ್ಟ ಮೊದಲ ಮನುಷ್ಯ ಪ್ರೇಮ ಪತ್ರವನ್ನೇ ಬರೆದಿರಬಹುದಾ ಅನ್ನೋ ಹುಚ್ಚು ಗುಮಾನಿ ಮೂಡಿ ನಿಲ್ಲುತ್ತದೆ. ಅದಕ್ಕೆ ಮುಂಚೆ ಅಕ್ಷರ ಬಾರದ ಮನುಷ್ಯ ತುಂಬ ಮಾತಾಡುತ್ತಿದ್ದನೇನೋ? ಹಾಡಿ ದಣಿಯುತ್ತಿದ್ದನೇನೋ? ಅದೆಷ್ಟು ಭಂಗಿಗಳಲ್ಲಿ, ಭಾವಗಳಲ್ಲಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದನೇನೋ? ಕೆಲವೊಮ್ಮೆ ಏನನ್ನೂ ಹೇಳಿಕೊಳ್ಳಲಾಗದೆ ಮನಸ್ಸು ಮೂಕಗೊಂಡಾಗ ಸುಮ್ಮನೆ ಅವಳ ಮಡಿಲಲ್ಲಿ ಮಲಗಿಕೊಂಡು ಮೌನದ ಚಾದರ ಎಳೆದುಕೊಂಡು ಬಿಡುತ್ತಿದ್ದನೇನೋ: ಏನೂ ಬರೆಯದ ಖಾಲಿ ಹಾಳೆಯ ತುದಿಯಲ್ಲಿ Love ಅಂತಷ್ಟೇ ಬರೆದು ಮಡಚಿ ಪೋಷ್ಟಿಗೆ ಹಾಕಿದಂತೆ?

ಅಕ್ಷರ ಕಲಿತ ಮನುಷ್ಯ ಅವೆಷ್ಟು ಶತಮಾನಗಳ ಕಾಲ ಪ್ರೇಮಪತ್ರಗಳನ್ನು ಬರೆದನೋ, ಎಣಿಸಿದವರ್ಯಾರು? ಆನಂತರ ಫೋನು ಬಂತು. ಮನುಷ್ಯ ತುಂಬ ಮಾತನಾಡತೊಡಗಿದ. ತೀರ ಮಾತನಾಡದಿದ್ದಾಗ ಮಾತ್ರ ‘ಪತ್ರದಲ್ಲಿ ಬರೀತೀನಿ ಬಿಡು’ ಅಂದು ಫೋನಿಡುತ್ತಿದ್ದ. That was ok. ಆದರೆ ಕ್ರಮೇಣ E-mail ಬಂತು. ಗಂಡು ಹೆಣ್ಣು ಕಂಪ್ಯೂಟರಿಗೆ ಕಣ್ಣು ಕೀಲಿಸಿ ಕುಳಿತರು. ಪತ್ರ ಬರೆಯುವ ಸಹನೆ ಸಾಯತೊಡಗಿತು. ಪೋಸ್ಟ್‌ ಮ್ಯಾನ್‌ ಅಪರೂಪವಾದ. ಟೈಪು ಕುಟ್ಟವ ಹುಡುಗ, mail ಚೆಕ್‌ ಮಾಡುವ ಹುಡುಗಿ: ಜಗತ್ತಿನಲ್ಲಿ ಮತ್ಯಾರಿಗೂ ಗೊತ್ತಾಗದಂಥ, ಸಿಕ್ಕಿ ಬೀಳದಂಥ, ಇಟ್ಟುಕೊಂಡಷ್ಟೂ ಪೆಟ್ಟಿಗೆ ತುಂಬದಂಥ ನಿಶ್ಶಬ್ದ ಹಗಲೂ ರಾತ್ರಿ ರವಾನೆ.

E-mailನಲ್ಲಿ ಪತ್ರ ಕಳಿಸುವ, ಮಾತಾಡಿಕೊಳ್ಳುವ, ಅನಿರೀಕ್ಷಿತವಾಗಿ ಯಾರೋ ಸಿಕ್ಕುವ, ಹೇಗೋ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗುವ, ತಿರುಗಿದ ಪ್ರೇಮ ಹಾದಿ ತಪ್ಪುವ, ‘ಓ ನೀನಾ...?’ ಅಂತ ನಿಡುಸುಯ್ಯುವ ವ್ಯವಹಾರಗಳು ತೀರಾ ಯಾವ ಮಟ್ಟಕ್ಕೆ ಬೆಳೆದು ನಿಂತವೆಂದರೆ, You have got a mail ಮತ್ತು ‘ಮಿತ್ರ್‌ ಮೈ ಫ್ರೆಂಡ್‌’ ಎಂಬ ಹೆಸರಿನ ಎರಡು ಅದ್ಭುತ ಸಿನೆಮಾಗಳೇ ಬಂದುಬಿಟ್ಟವು.

ಇವೆಲ್ಲವುಗಳನ್ನೂ ಬಳಿದು ಹಾಕಿ ಬಿಡುವಂತಹ ಪ್ರವಾಹವಾಗಿ ಪ್ರೇಮಲೋಕಕ್ಕೆ ಈಗ ಬಂದಿರುವುದೇ ಎಸ್ಸೆಮ್ಮೆಸ್‌! ನಿಮ್ಮ ಕೈಲೊಂದು ಮೊಬೈಲಿದ್ದರೆ ಸಾಕು, ನಿಮಗೊಬ್ಬಳು just ಪರಿಚಯವಾಗಿರುವ ಹುಡುಗಿಯಿದ್ದರೂ ಸಾಕು: ನೀವು ಮಾತನಾಡತೊಡಗುತ್ತೀರಿ. ಒಂದು ಆಗಂತುಕ ವ್ಯಕ್ತಿತ್ವ ನಿಮ್ಮ ನಿತ್ಯದ ರೊಟೀನ್‌ನೊಳಕ್ಕೆ ಕಾಲಿಟ್ಟುಬಿಡುತ್ತದೆ. ಬೆಳಗ್ಗೆ ಎದ್ದು ಮೊಬೈಲ್‌ ಆನ್‌ ಮಾಡಿದರೆ ಸಾಕು, ಬೆಚ್ಚನೆಯ ಗುಡ್‌ ಮಾರ್ನಿಂಗು. ಹುಟ್ಟು ಹಬ್ಬದ ದಿನ ಎಸ್ಸೆಮ್ಮೆಸ್‌ ಸುರಿಮಳೆ. ಅವನ್ಯಾರೋ ಹುಡುಗ ತನ್ನ ಹುಡುಗಿಗೆ Ey ಅಂತ ಸುಮ್ಮನೆ ಒಂದು Test doseನಂಥ ಮೆಸೇಜು ಕಳಿಸುತ್ತಾನೆ. ಅದಕ್ಕವಳು Day ಅಂತ ಉತ್ತರ ಅದುಮುತ್ತಾಳೆ. ಏನು ಮಾಡ್ತಿದೀಯ, ಏನು ತಿಂದೆ, ಎಲ್ಲಿದೀಯ ಅನ್ನೋದರಿಂದ ಹಿಡಿದು ಏನು ಧರಿಸಿದೀಯ, ಒಳಗೇನು, ಹೊರಗೇನು ಅನ್ನುವ ತನಕ ಗಂಟೆಗಟ್ಟಲೆ ಸಂಭಾಷಣೆ ಅಂಗೈಯಲ್ಲಿರುವ ಮೊಬೈಲೆಂಬ ಮಾಯಾ ಕನ್ನಡಿಯ ಮೂಲಕವೇ ನಡೆದು ಹೋಗುತ್ತದೆ.

ಅಷ್ಟೇನೂ ಪರಿಚಯವಿಲ್ಲದ ಹುಡುಗಿ ಕೂಡ ಹತ್ತೇ ಮೆಸೇಜುಗಳಲ್ಲಿ ಆತ್ಮೀಯಳಾಗಿ ಹೋಗುತ್ತಾಳೆ. ನೇರವಾಗಿ propose ಮಾಡಬೇಕು ಅಂತಿಲ್ಲ : ಸುಮ್ಮನೆ ಒಂದು ಜೋಕು ಕಳಿಸಿದರೆ ಸಾಕು. ಅದರಲ್ಲೂ ಆ ಜೋಕು ಅವನೇ create ಮಾಡಿದ್ದರಂತೂ ಹುಡುಗನ ತುಂಟ ಜಾಣ್ಮೆ ಕಂಡು ಹುಡುಗಿಯ ಕಣ್ಣರಳುತ್ತವೆ. ಆ ಜೋಕು ಅಸಭ್ಯ ಅನ್ನಿಸಿದರೂ ಪರವಾಗಿಲ್ಲ ಅನ್ನುವಂಥ ಇನ್ನೊಬ್ಬ ಗೆಳೆಯನಿಗೋ, ಗೆಳತಿಗೋ ಅದನ್ನು ರವಾನೆ ಮಾಡಿರುತ್ತಾಳೆ. ಸಭ್ಯ ಜೋಕಿಗೆ ನಕ್ಕಿರುತ್ತಾಳೆ. ಕಳಿಸಿರುವಂಥದು ಕೇವಲ ಜೋಕಲ್ಲ ಅಂತ ಗೊತ್ತಿದ್ದೇ ನಕ್ಕಿರುತ್ತಾಳೆ. ಅವತ್ತಲ್ಲದಿದ್ದರೆ ಇನ್ನೊಂದು ಸಂಜೆ ಸಿಕ್ಕಿರುತ್ತಾಳೆ. ಸ್ವಲ್ಪ ಹೊತ್ತು ಅವರಿಬ್ಬರ ಮೊಬೈಲುಗಳೂ off ಆಗಿರುತ್ತವೆ.

ಅನೇಕರು ತಮ್ಮ ಮೊಬೈಲುಗಳಲ್ಲಿ ಮಾತೇ ಆಡುವುದಿಲ್ಲ. ಮಾತನಾಡಿದರೆ ಚಾರ್ಜ್‌ ಆಗುತ್ತೆ. ಬಿಲ್‌ ಬರುತ್ತೆ. ಅಷ್ಟೇ ಅಲ್ಲ, ಯಾರಾದರೂ ಪ್ರಿಂಟ್‌ ಔಟ್‌ ತೆಗೆಸಿದರೆ ಎಲ್ಲೆಲ್ಲಿಗೆ ಮಾತಾಡಿದ್ದಾರೆ ಎಂಬುದು ಒತ್ತಾಗುತ್ತದೆ. Short messaging service ಆಲಿಯಾಸ್‌ ಎಸ್ಸೆಮ್ಮೆಸ್‌ನಲ್ಲಿ ಈ ರಗಳೆಗಳಿಲ್ಲ. ಅಪರೂಪಕ್ಕೊಂದು ಒಳ್ಳೆ ಮೆಸೇಜು save ಆಗುತ್ತೆ. ಉಳಿದದ್ದೆಲ್ಲ ಈಗಿತ್ತು ಈಗಿಲ್ಲ ಎಂಬಂತೆ ಡಿಲೀಟಾಗುತ್ತವೆ. ಮೆಸೇಜು ಓದಿದ ಹುಡುಗಿಯ ಮನಸ್ಸು ಗಬ್ಬವಾಗುತ್ತದೆ.

ನನ್ನ ಪುಟ್ಟ ಗೆಳತಿಯಾಬ್ಬಳು ಇತ್ತೀಚೆಗೆ ನನಗೊಂದು ಮೆಸೇಜು ಕಳಿಸಿದ್ದಳು: ರವೀ, ಮೊನ್ನೆ ಸಮುದ್ರ ಭೇಟಿಯಾಗಿತ್ತು. ತನ್ನೆಲ್ಲ ಘನತೆ, ತನ್ನೊಳಗೆ ಅಡಗಿದ ಬೆಟ್ಟ ಗುಡ್ಡ, ನದಿ ನದಾರಿ, ಮಹಾನಗರಿ ನಾಗರಿಕತೆಗಳ ಬಗ್ಗೆಯೆಲ್ಲ ಹೇಳಿಕೊಂಡಿತು. ನಾನು ಸಮುದ್ರಕ್ಕೆ ನಿನ್ನ ಘನತೆಯ ಬಗ್ಗೆ ಹೇಳಿದೆ. ಸಮುದ್ರ ಮಾತೇ ಹೊರಡದಂತಾಗಿ ಮೂಕವಾಯಿತು. I love you.

ಪ್ರೇಮ ಎಂಬುದು ತಾನು ಹೊರಬೀಳಲಿಕ್ಕಾಗಿ ಎಷ್ಟೆಲ್ಲ ದಾರಿಗಳನ್ನು ಹುಡುಕಿಕೊಳ್ಳುತ್ತದಲ್ಲವೆ?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more