ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಚೆನ್ನಾಗಿರಬೇಕು ಅಂತ ಬಯಸುವವನು ನನ್ನ ಮಿತ್ರ: ಗಿರಾಕಿಯಲ್ಲ !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

‘ರವೀ, ಒಂದು ಕೆಲ್ಸ ಮಾಡಿ... ’ ವಿವರಿಸತೊಡಗಿದರು ಗೆಳೆಯ ಸೂರಿ. ‘ಕಾಲು ಕೇಜಿ ಅಕ್ಕಿ, ಕಾಲು ಕೇಜಿ ರಾಗಿ, ಕಾಲು ಕೇಜಿ ಗೋಧಿ ತರಿಸಿ. ಆ ಮೇಲೇ ಉದ್ದಿನಬೇಳೆ, ಕಡಲೆ ಬೇಳೆ, ತೊಗರಿ ಬೇಳೆ, ಅವರೆ, ಅಲಸಂದೆ, ಹೆಸರು ಬೇಳೆ- ಹೀಗೆ ಏನೇನು ಬೇಳೆ ಮತ್ತು ಕಾಳು ಸಿಗ್ತವೋ ಎಲ್ಲಾ ನೂರು ನೂರು ಗ್ರಾಂ ತರಿಸಿ. ಅವೆಲ್ಲಾನೂ ಹಾಕಿ ಕೆಂಪಗೆ ಹುರಿದುಬಿಡಿ. ಎಣ್ಣೆ ಗಿಣ್ಣೆ ಹಾಕಬೇಡಿ. ಸುಮ್ಮನೆ ಕೆಂಪಗಾಗೋ ತನಕ ಹುರೀರಿ. ಆ ಮೇಲೆ ಅದನ್ನ ಫ್ಲೋರ್‌ಮಿಲ್ಲಿಗೆ ಕಳಿಸಿ ರವೆ-ನುಚ್ಚು ನುಚ್ಚಾಗಿ ಹಾಕಿಸಿ. ಪೂರ್ತಿ ಹಿಟ್ಟು ಮಾಡಿಬಿಡಬಾರದು. ಹಾಗೆ ಹಾಕಿಸಿ ತಂದಿದ್ದನ್ನ ಒಂದು ಡಬ್ಬೀಗೆ ಹಾಕಿಟ್ಟುಕೊಂಡುಬಿಡಿ. ಬೇಕು ಅನ್ನಿಸಿದಾಗ ಅದರಲ್ಲೊಂದಿಷ್ಟು ತೊಗೊಂಡು ಕುಕ್ಕರಿನಲ್ಲಿಡಿ. ಅದರ ಜೊತೆಗೆ ಯಾವುದೇ ತರಕಾರಿ ಬೇಕಾದರೂ ಹಾಕಿ. ಬೀನ್ಸು, ಕ್ಯಾಬೇಜು, ಬೀಟ್ರೂಟು, ಜೊತೆಗೆ ಒಂದಿಷ್ಟು ಸೊಪ್ಪು ಎಲ್ಲಾ ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸೋಕೆ ಇಡಿ. ಒಂಚೂರು ತುಪ್ಪ ಹಾಕಿದರೆ skin ಹೊಳಪು ಬರುತ್ತೆ. ಕುಕ್ಕರ್‌ ಎರಡು ವಿಷಲ್‌ ಹಾಕೋತನಕ ಇಟ್ಟು ಆಮೇಲೆ ಇಳಿಸಿ. ಒಂದು dish ತಯಾರಾಗುತ್ತೆ. ಇದನ್ನ ನಿಮ್ಮ ನಾಯಿಮರೀಗೆ ಹಾಕಿ ನೋಡಿ, ಅದ್ಭುತವಾಗಿ ಬೆಳೆಯುತ್ತೆ ’ ಅಂದಿದ್ದರು.

ಅದರು ಹೇಳಿದುದನ್ನೆಲ್ಲ ಮಾಡಿದೆ. ನಾಯಿಮರಿಗಿಂತ ಹೆಚ್ಚು ನನಗೇ ಇದು ಅದ್ಭುತವಾದ ಫುಡ್ಡು ಅನ್ನಿಸಿತು. ಬಿಸಿಬೇಳೆ ಭಾತ್‌ನದೊಂದು mix ಸಿಗುತ್ತಲ್ಲ ? ಎರಡು ಚಿಟಿಕೆ ಬೆರೆಸಿದೆ. ಈರುಳ್ಳಿ ಸಣ್ಣಗೆ ಹೆಚ್ಚಿ, ಒಂದು ನಿಂಬೆ ಹಣ್ಣು cut ಮಾಡಿಟ್ಟುಕೊಂಡು ಕುಕ್ಕರ್‌ನಿಂದ ತೆಗೆದ dish ಗೆ ಬೆರೆಸಿ ತಿನ್ನೋಕೆ ಶುರುಮಾಡಿದ್ನಲ್ಲ? ಇವತ್ತಿಗೆ ನನ್ನ regular ತಿಂಡಿ ಅದು. ಕೆಲಮೊಮ್ಮೆ ಊಟ ಕೂಡ. ಈ ತಿಂಡೀನ ಏನನ್ನಬೇಕು ಅಂತ ಗೊತ್ತಾಗದೆ ನಮ್ಮ ಹುಡುಗ ಹುಡುಗೀರು ‘ಸಂಪಾದಕರು ತಿನ್ನೋ ಷೆರ್ಲಿ ಫುಡ್ಡು’ ಅಂತಾರೆ. ಷೆರ್ಲಿ ನಮ್ಮ ನಾಯಿ ಮರಿಯ ಹೆಸರು! ಚೂರೂ ಎಣ್ಣೆ ಇಲ್ಲದ (ತುಪ್ಪ ಹಾಕುವುದು ನಾಯಿಯ ಮೈಗೆ ಹೊಳಪು ಬರ್ಲಿ ಅಂತ ಮಾತ್ರ), ಏನೇನೂ ಕೊಬ್ಬಿಲ್ಲದ ಸಾತ್ವಿಕ ಆಹಾರ. ಖುಷಿಯಾಗಿ ತಿಂತಿದೀನಿ. ಆರೋಗ್ಯ ಚೆನ್ನಾಗೇ ಇದೆ. ಅದು ಚೆನ್ನಾಗೇ ಇರುತ್ತೆ. ಊಟ ತಿಂಡಿಯ ವಿಷಯದಲ್ಲಿ ನಾನು ತುಂಬ choosy ಅಲ್ಲ. ಒಂದೇ ಥರದ ಊಟವನ್ನ ವರ್ಷಗಟ್ಟಲೆ ಹಾಕಿದರೂ ತಿನ್ನುತ್ತೇನೆ. ನನ್ನನ್ನು ಸಾಕುವುದು ಸುಲಭ. ಕಟ್ಟಿಕೊಂಡು ಹೆಣಗುವುದಷ್ಟೆ ಕಷ್ಟ. ಮೇಜರ್‌ ಮುರಳಿ ಮತ್ತು ನಾನು ಚೈನಾ ಬಾರ್ಡರಿನ ‘ಲುಮ್ಲಾ’ ಎಂಬ ಹಳ್ಳಿಯ ಮಿಲಿಟರಿ ಕ್ಯಾಂಪಿನಲ್ಲಿ ದಿನಗಟ್ಟಲೆ ಕೇವಲ ಬ್ರೆಡ್ಡು,ಆಲೂಗಡ್ಡೆ ತಿಂದುಕೊಂಡು ಬದುಕಿದ್ದೆವು: ನೆಂಚಿಕೊಳ್ಳಲು ರಮ್‌ ಇರುತ್ತಿತ್ತು ! ಜಗತ್ತಿನಲ್ಲಿ ಯಾವುದೇ ತಿಂಡಿಗೆ ಬೇಕಾದರೂ ಪರ್ಯಾಯವಾಗಿ ತಿನ್ನಬಹುದಾದ ವಸ್ತು ಅಂದರೆ ಬ್ರೆಡ್ಡು! ಹಾಗಂತ ನನ್ನ ಮತ್ತು ಮುರಳಿಯ ಒಂದು ಸಿದ್ಧಾಂತವಿತ್ತು. ಚಿತ್ರಾನ್ನಕ್ಕೆ ಬದಲಾಗಿ ಬ್ರೆಡ್ಡು ,ಬಿರಿಯಾನಿಗೆ ಬದಲಾಗಿ ಬ್ರೆಡ್ಡು , ದೋಸೆ-ಚಟ್ನಿಗೆ ಬದಲಾಗಿ ಬ್ರೆಡ್ಡು. Oh Yes! ನಾನು ನೀರು ಮತ್ತು ಬ್ರೆಡ್ಡು ತಿಂದು ನನ್ನ ಅಗಾಧ ಹಸಿವನ್ನು ತಮಣಿ ಮಾಡಿಕೊಂಡಿದ್ದೇನೆ. ಚಿಕ್ಕಂದಿನಿಂದಲೂ ಅಷ್ಟೆ : ನನ್ನ pangs of hunger ಪ್ರಾಣಿ-ಮೃಗಗಳಿಗೆ ಬರುವಂತೆ ಬರುತ್ತದೆ. ಇನ್ನು ಭರಿಸಲಿಕ್ಕೆ ಸಾಧ್ಯವೇ ಇಲ್ಲ ಎಂಬಷ್ಟು ಹಸಿವಾಗಿಬಿಡುತ್ತದೆ. ಒಂದು ಕಪ್‌ ತುಂಬ ಚಹ ಮತ್ತು ಮೇಲೆ ಮೇಲೆ ಸಿಗರೇಟು ಕೊಟ್ಟುಬಿಟ್ಟರೆ ಮತ್ತೆ ಗಂಟೆಗಟ್ಟಲೆ ಹಸಿವಾಗುವುದಿಲ್ಲ. ನಾನು ಈಗ್ಗೆ ಹತ್ತು ವರ್ಷಗಳ ಹಿಂದೆ ಇಡೀ ದಿವಸ ಬದುಕಿರುತ್ತಿದ್ದುದೇ ಹಾಗೆ. ಟೀ ಮತ್ತು ಸಿಗರೇಟು.

ಇದೆಲ್ಲ ಯಾಕೆ ನೆನಪಾಯಿತೆಂದರೆ,ನಿನ್ನೆ ಬೆಳಗ್ಗೆಯಷ್ಟೇ ಫೋನಿಗೆ ಸಿಕ್ಕಿದ್ದ ನಾನಾ ಪಾಟೇಕರ್‌. ಫೋನಿನಲ್ಲಿ ಆತ ಕೊಂಚ ಅಸಹನೆಯ ಮನುಷ್ಯ. ನನಗಾದರೂ ತುಂಬ ಹೊತ್ತು ಫೋನ್‌ನಲ್ಲಿ ಮಾತನಾಡುವುದು ಅಸಹನೆಯುಂಟು ಮಾಡುತ್ತದೆ. ಆದರೆ ನಾನಾ ಸಿಡುಕ. ‘ಓ ನಹೀ ಹೈ ಖಂಡಾನಾ ಚಲಾ ಗಯಾ’(ನಾನಾ ಇಲ್ಲ. ಖಂಡಾಲಾಕ್ಕೆ ಹೋಗಿದಾನೆ) ಅಂತ ತಾನೇ ಹೇಳಿ ಫೋನಿಟ್ಟು ಬಿಡುತ್ತಾನೆ. ಇಷ್ಟಾಗಿ, ಆತನೊಂದಿಗೆ ನನ್ನ ದೊಡ್ಡ ಪರಿಚಯ ಅಂತಲೂ ಇಲ್ಲ. ಹಿಂದಿನ ದಿವಸ ಇನ್ಸ್‌ಪೆಕ್ಟರ್‌ ದಯಾನಾಯಕ್‌ ಹೇಳಿದ್ದರು : ‘ರಾತ್ರಿ ಇಷ್ಟೊತ್ನಲ್ಲಿ ಫೋನ್‌ ಮಾಡಬೇಡಿ. ಒಂದೆರಡು ಪೆಗ್‌ ಹಾಕಿ ಮಲಗಿರ್ತಾನೆ. ಬೆಳಗ್ಗೆ ಮಾಡಿ. ಹೀಗೆ ನೀವು phone ಮಾಡ್ತೀರಿ ಅಂತ ಹೇಳಿರ್ತಿನಿ. ಬೆಳಗ್ಗೆ ಹೊತ್ನಲ್ಲಿ ಸಮಾಧಾನವಾಗಿರ್ತಾನೆ’ ಅಂದಿದ್ದರು. ಬಹುಶಃ ಸಮಾಧಾನವಾಗೇ ಇದ್ದ. ‘ಏರ್‌ ಪೋರ್ಟಿಗೆ ಹೊರಡಬೇಕು. ತಿಂಡಿ ಮಾಡ್ಕೋತಿದೀನಿ : ಬ್ರೆಡ್ಡು !’ ಅಂದಿದ್ದ. ನವೆಂಬರಿಗೆ ಮುಂಚೆ ಯಾವ ಕಾರ್ಯಕ್ರಮಕ್ಕೂ ಬರೋಕಾಗಲ್ಲ. ಕರೀಲೇ ಬೇಡ ಅಂತ ತಕರಾರು ತೆಗೆಯುತ್ತಿದ್ದವನು, ಅನಂತರ ‘ಆಯ್ತು ಆಯ್ತು...ನೀವು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಿ’ ಅಂದ.

ನನಗೂ ವಿಚಿತ್ರ ಹಟಗಳಿವೆ. ಪತ್ರಿಕೆಯ ಮೊದಲ ವಾರ್ಷಿಕೋತ್ಸವಕ್ಕೆ ಹೀಗೇ ಹಟ ಮಾಡಿ ಪರಮಗುರು ಖುಷ್ವಂತ ಸಿಂಗ್‌ರನ್ನು ಕರೆಸಿದ್ದೆ. ಈಗ ಬರಲಾರರು. ಅವರವೇ ಪುಸ್ತಕ ಕನ್ನಡದಲ್ಲಿ ಬಿಡುಗಡೆಯಾಗುತ್ತಿವೆ. ಆದರೆ ಅಜ್ಜ ತುಂಬ ಮೆತ್ತಗಾಗಿದ್ದಾರೆ. ಆದರೆ ಬರವಣಿಗೆ ಮೆತ್ತಗಾಗಿಲ್ಲ. ಸ್ವಭಾವ ಜನ್ಯವಾದ ಪೋಲಿತನ ಸಪ್ಪಗಾಗಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಅವರ ‘ಪ್ಯಾರಡೈಸ್‌ ಅಂಡ್‌ ಅದರ್‌ ಸ್ಟೋರೀಸ್‌’ ಓದುವಂತೆ ಸೂರಿ ಹೇಳಿದ್ದರು. ಆ ಪುಸ್ತಕವನ್ನು ನಾನು ಖಂಡಿತ ಈ ನಲವತ್ತೆೈದನೇ ವಯಸ್ಸಿನಲ್ಲಿ ಬರೆಯಲಾರೆ. ಅಜ್ಜನಿಗೆ ತೊಂಬತ್ಮೂರು! ಎಲ್ಲಿಂದ ಬರುತ್ತೆ ಆ ಜೀವನೋತ್ಸಾಹ? ನನಗೆ ಗೊತ್ತಿಲ್ಲ. ಕತೆಗಳು ಪೋಲಿಯಾಗಿವೆ. ಅನ್ನೋದು ಬಿಟ್ಟರೆ, ಅವು ನಿಜಕ್ಕೂ ಚೆನ್ನಾಗೇ ಇವೆ. ಅಂದ್ಹಾಗೆ,ನಾನು ಕತೆ ಬರೆದು ಎಷ್ಟು ವರ್ಷಗಳಾದವು. Mostly ಹತ್ತು! ಇಡೀ ಒಂದು ದಶಕದಲ್ಲಿ ಒಂದೇ ಒಂದು ಕತೆ ಬರೆಯಲಾಗಲಿಲ್ಲ. ತುಂಬ ಸುಂದರವಾದ ಹೆಂಗಸಿನೊಂದಿಗೆ ಇಡೀ ರಾತ್ರಿಯನ್ನು ವ್ಯರ್ಥವಾಗಿ ಕಳೆದು ಎದ್ದು ಬರುವ ರಸಿಕನಿಗೆ ಒಂದು ನಿರಾಸೆ, ತನ್ನ ಬಗ್ಗೆ ತನಗೇ ಬೇಸರ- ಅದೆಲ್ಲ ಆಗುತ್ತದಲ್ಲ ? ಹತ್ತು ವರ್ಷದಿಂದ ಕತೆ ಬರೆದಿಲ್ಲ ಅಂತ ನೆನಪಾದರೆ ನಿಜಕ್ಕೂ ನನಗೆ ಹಾಗೆ ಬೇಸರವಾಗುತ್ತದೆ: ನಿಸ್ಸಹಾಯಕ ರಸಿಕನಿಗೆ ಆದ ಹಾಗೆ.

ಅದೂ ಏನು, ಒಬ್ಬ ಅಪರಿಚಿತ ಓದುಗ ಛಕ್ಕನೆ ಎಲ್ಲೋ ಸಿಕ್ಕಂತೆ ಸಿಕ್ಕು‘ಎಲ್ರೀ, ಕತೇನೆ ಬರ್ದಿಲ್ಲ ?’ ಅಂತ ಕೇಳಿ ಬಿಡುತ್ತಾನಲ್ಲ : ಕುಳಿತಲ್ಲೇ ಮುದುಡಿ ಬಿಡುತ್ತೇನೆ. ಶಿವಮೊಗ್ಗದಿಂದ ಮೊನ್ನೆ ಶಾರದಾ phone ಮಾಡಿದ್ದಳು. ಲಲಿತಳ ತಮ್ಮನ ಹೆಂಡತಿ ಅವಳು. ಇಪ್ಪತ್ತು ವರ್ಷದ ಹಿಂದೆ ನನ್ನ ಸ್ಟೂಡೆಂಟು. ಅವಳು ಲೋಕಾಭಿರಾಮವಾಗಿ ಏನನ್ನೋ ಮಾತಾಡುತ್ತಿದ್ದರೆ, ಅವಳ ಗಂಡ-ಲಲಿತೆಯ ತಮ್ಮ ಸತೀಶ,‘ಕತೆ ಯಾವಾಗ ಬರೀತಾರಂತೆ ಕೇಳು?’ ಅಂತ ಪಕ್ಕದಲ್ಲೇ ನಿಂತು ಹೇಳುತ್ತಿದ್ದ. ನಿನ್ನೆಯೂ ಅಷ್ಟೆ : ಗೋಕಾಕದಿಂದ ರಂಜನಾ ಮೆಸೇಜ್‌ ಕಳಿಸಿದ್ದರು. ‘ನಿಮ್ಮ ಹಳೆಯ ಸಣ್ಣ ಕತೆಗಳನ್ನು ಓದಿದೆ. ಎಷ್ಟು ಚೆನ್ನಾಗಿವೆ! ನಾನು-ರೇಖಾರಾಣಿ ಮೊನ್ನೆ ತುಂಬ ಹೊತ್ತು ಕತೆಗಳ ಬಗ್ಗೆ ಮಾತಾಡಿಕೊಂಡೆವು’.

ಮಧ್ಯಾಹ್ನ ನಾಗತಿಹಳ್ಳಿ ಆಫೀಸಿಗೆ ಬಂದಿದ್ದ. ‘ಕತೆ ಬರಿಯೋಣ, ಬರ್ತೀಯಾ?’ ಅಂತ ಹೇಳ ಹೊರಟವನು ಧೈರ್ಯಸಾಲದೆ ಸುಮ್ಮನಾಗಿಬಿಟ್ಟೆ. ನನ್ನ ಅನೇಕ ಕತೆಗಾರ ಮಿತ್ರರು at least ದೀಪಾವಳಿ ವಿಶೇಷಾಂಕಗಳಿಗಾದರೂ ಒಂದೊಂದು ಕತೆ ಬರೆದು ತಮ್ಮ ತಾಕತ್ತು prove ಮಾಡಿಕೊಳ್ಳುತ್ತಿರುತ್ತಾರೆ. ನಾನೇ ಬರಬಿದ್ದು ಹೋಗಿದ್ದೇನೆ. ಇದೆಲ್ಲ ಯಾಕೆ ಹೀಗನ್ನಿಸುತ್ತದೆ ಗೊತ್ತೆ?

ನಮ್ಮ ಬರವಣಿಗೆಯೇ ನಮ್ಮ identityಯಾಗಿರುತ್ತದೆ. ಐಡೆಂಟಿಟಿ ಕಳೆದುಕೊಳ್ಳುವುದಕ್ಕಿಂತ ದೊಡ್ಡ ಕ್ಷೋಭೆ ಮತ್ತೊಂದಿಲ್ಲ. ಕೆಲವೊಮ್ಮೆ ದೈಹಿಕವಾದ ಐಡೆಂಟಿಟಿಗಳೂ ತುಂಬ ಮಹತ್ವಪೂರ್ಣವಾದಂಥವು ಅನ್ನಿಸಿಬಿಡುತ್ತವೆ. ಹಿಂದೆ ನಾನೊಮ್ಮೆ ಖುಷ್ವಂತ್‌ರನ್ನೇ ಕೇಳಿದ್ದೆ : ‘ದೇವರನ್ನ ನಂಬಲ್ಲ ಅಂತೀರಿ. ಹಾಗಾದರೆ ಸಿಖ್‌ ಧರ್ಮದ ಲಾಂಛನಗಳಾದ ಪಟಗ, ಗಡ್ಡ, ಸ್ಟೀಲಿನ ಬಳೆ- ಇದೆಲ್ಲ ಯಾಕೆ ಹಾಕ್ಕೋತೀರಿ’ ಅಂದಿದ್ದೆ.

ಇವು ಒಬ್ಬ ವ್ಯಕ್ತಿಯಾಗಿ ನನ್ನ ಅಸ್ತತ್ವದ ಗುರುತುಗಳು. ನಾನೊಬ್ಬ ಸಿಖ್‌. ನಂಗೆ ಆ ಐಡೆಂಟಿಟಿ ಬೇಕು. ಸಿಖ್‌ ಧರ್ಮವನ್ನು ನಂಬದಿರಬಹುದು.ಆದರೆ ಸಿಖ್ಖನಾಗಿರುವುದರಲ್ಲಿ ನನಗೆ ನಂಬಿಕೆಯಿದೆ ಅಂದಿದ್ದರು.

ಹಾಗಾಗಿಯೇ ಬೆಳಗಾವಿ ಜಿಲ್ಲೆಯ ಬಟಕುರ್ಕಿಯಲ್ಲಿ ಭಜರಂಗ ದಳದವರು ಮುಸಲ್ಮಾನನೊಬ್ಬನ ಗಡ್ಡ ಬೋಳಿಸಿದ್ದಾರೆ ಅಂತ ಕೇಳಿದ ಕೂಡಲೆ ತುಂಬ ಸಿಟ್ಟು ಬಂದಿತ್ತು. ಖಿನ್ನನೂ ಆಗಿದ್ದೆ. ನನ್ನ ಗಡ್ಡ ನಂಗೆ ರವಿ ಬೆಳಗೆರೆ ಅಂತ ಅಥವಾ ರವಿ ಬೆಳಗೆರೆ ಅಂದ್ರೆ ಗಡ್ಡವಿರುವ ಮುಖ ಅಂತ -ಅದೊಂದು ಐಡೆಂಟಿಟಿ. ಯಾರಾದರೂ ಗಡ್ಡ ತೆಗೆಸಿ ನನ್ನನ್ನು ಕನ್ನಡಿಯ ಮುಂದೆ ನಿಲ್ಲಿಸಿಬಿಟ್ಟರೆ, ನನಗೆ ನಾನೇ ಗುರುತು ಸಿಗಲಿಕ್ಕಿಲ್ಲ. ಒಬ್ಬ ಮುಸಲ್ಮಾನನಿಗಾದರೂ ಅಷ್ಟೇ.

ಯಾವಾಗಲಾದರೂ ರಸ್ತೆಯಲ್ಲಿ ಹೋಗುವಾಗ ಈ ಬಗ್ಗೆ ಯೋಚಿಸುತ್ತಿರುತ್ತೇನೆ. ಮೊದಲು ಪತ್ರಿಕೆಯನ್ನಷ್ಟೇ ನಡೆಸುತ್ತಿದ್ದಾಗ ನನ್ನ ಓದುಗರು, ಪತ್ರಿಕೆಯಲ್ಲಿ photo ನೋಡಿದವರು ಮಾತ್ರ ಗುರುತಿಸುತ್ತಿದ್ದರು. ಮಾತನಾಡಿಸುತ್ತಿದ್ದರು. ಆದರೆ ಈಗ ಹಾಗಲ್ಲ. ಸಿಗ್ನಲ್‌ಗಳಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರೆ ಸಾಕು, ಯಾರೋ wish ಮಾಡುತ್ತಾರೆ. ಯಾರೋ ನಮಸ್ಕಾರ ಅನ್ನುತ್ತಾರೆ. ಮತ್ಯಾರೋ ‘ಸಕತ್ತಾಗಿ ಮಾತಾಡ್ತಾನೇ...’ ಅಂತ ಮಾತಾಡಿಕೊಳ್ಳುತ್ತಿರುತ್ತಾರೆ. ಅವರಿಗೆ ಬಹುಶಃ ನಾನು ಬರೆಯುತ್ತೇನೆ ಎಂಬುದೇ ಗೊತ್ತಿರಲಿಕ್ಕಿಲ್ಲ. ಅವರು ಟೀವಿ ನೋಡುವ ಜನ. ಆ ಪ್ರೀತಿ, ಮೆಚ್ಚುಗೆ,‘ನಂಗೆ ನೀನು ಗೊತ್ತು’ ಎಂಬಂತೆ ಮಾತನಾಡಿಸುವಿಕೆ- ಇದೆಲ್ಲ ಟೀವಿಯಲ್ಲಿ ನೋಡಿದ ಮನುಷ್ಯ ರಸ್ತೆಯಲ್ಲಿ ಕಂಡ ಅಂದ ತಕ್ಷಣ ನೆನಪಾಗುವ, ಹುಟ್ಟುವ ಭಾವನೆಗಳು. ರಸ್ತೆಯ ಮೇಲೊಂದು wish, ಒಂದು ಹಾಯ್‌, ಒಂದು ಬಾಯ್‌- ಅಲ್ಲಿಗೆ ಮುಗಿಯಿತು. ಹೆಚ್ಚೆಂದರೆ, ‘ರವಿ ಸಿಕ್ಕಿದ್ದ ’ ಅಂತ ಯಾರಿಗಾದರೂ ಹೇಳಿಕೊಂಡ ಮೇಲೆ ಅದು ಮುಗಿಯುತ್ತದೆ.

ಆದರೆ ಓದುಗ ಹಾಗಲ್ಲ. ನಾನು ಕಾಣಿಸದಿದ್ದರೂ, ನಾನು ಅವನ ಯೋಚನೆಯಲ್ಲಿ ಒಂದು ಭಾಗವಾಗಿರುತ್ತೇನೆ. ಟೀವಿ ನೋಡಿ ಮರೆತು ಹೋಗುವಂತೆ, ಒಬ್ಬ ಮನುಷ್ಯನ ಬರಹ ಓದಿ ಮರೆತು ಹೋಗಲಾಗುವುದಿಲ್ಲ. ಮೊನ್ನೆ ರಾತ್ರಿ ಸರ ಹೊತ್ತಿನಲ್ಲಿ ಕಿಬ್ಬನಹಳ್ಳಿ ಕ್ರಾಸ್‌ನ ಬಂಕೊಂದರಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳಲು ನಿಂತಿದ್ದೆ. ಬಂಕ್‌ನ ಕೆಲಸಗಾರರ ಪೈಕಿ ಒಬ್ಬಾತ ಬಂದು ‘ನನ್ನೆಸ್ರು ಶ್ರೀನಿವಾಸ್‌ ಅಂತ. ಓ ಮನಸೇ .....ಓದ್ತೀನಿ. ಎಷ್ಟು ಚೆನ್ನಾಗಿ ಬರೀತೀರಿ ನೀವು. ಪ್ರೀತಿ-ವಿಶ್ವಾಸ-ಅಕ್ಕ ತಂಗೀರು- ಅಮ್ಮ- ಪ್ರಾಮಾಣಿಕತೆ ಎಲ್ಲಾ ನಮ್ದೇ, ನಮಗೋಸ್ಕರವೇ ಬರಿದಿದೀರೇನೋ ಅನ್ನಿಸೋ ಹಾಗೆ ಬರೀತೀರಿ. ನೀವು ಚೆನ್ನಾಗಿರಬೇಕು ಸಾರ್‌’ ಅಂದಿದ್ದ.

ಓದುಗ ಅಂದರೆ ಅದು.

‘ನೀವು ಚೆನ್ನಾಗಿರಬೇಕು’ ಎಂಬ ಮಮತೆ. ‘ನೀನು ಚೆನ್ನಾಗಿರದಿದ್ರೆ ಟೀವೀಲಿ ಬರಬೇಡ’ ಅನ್ನುವಾತ’ ಟೀವಿ ವೀಕ್ಷಕ. ಅವನಿಗೆ ನಾನು ನೋಡಲಿಕ್ಕೆ ಚೆನ್ನಾಗಿ ಕಾಣಬೇಕು. ಆದರೆ ಓದುಗ ಹಾಗಲ್ಲ : ಅವನಿಗೆ ರವಿ ಬೆಳಗೆರೆ ಚೆನ್ನಾಗಿರಬೇಕು ಎಂಬುದು ಮಮಕಾರ, ಅದವನ ಪ್ರೀತಿ, ಅವನ ರಿಕ್ವೈರ್‌ಮೆಂಟು. ಏಕೆಂದರೆ, ಓದುಗ ಗಿರಾಕಿಯಲ್ಲ.

ಆಪ್ತಮಿತ್ರ...

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ

ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X