ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಯಾಗುವವನ ಹೆಗಲ ಮೇಲೆ ಸದಾ ಕೈಯಿಟ್ಟು ....

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಕಳೆದ ಎರಡು ವಾರಗಳಿಂದ ನನ್ನ ಪ್ರೀತಿಯ ಕವಿಗಳ ಬಗ್ಗೆ ಬರೆಯುತ್ತಿದ್ದೇನೆ. ಸರಕಾರದ ಲಂಚಕೋರತನ, ಅಧಿಕಾರಿಗಳ ದವಲತ್ತು-ದಗಲಬಾಜಿ, ಸುತ್ತ ನಡೆಯುವ ದುರಂತಗಳು-ಇಂಥವುಗಳ ಬಗ್ಗೆಯೇ ಯೋಚಿಸುತ್ತ , ಅವರುಗಳ ಮಧ್ಯಯೇ-ಅವರ ನಡುವೆಯೇ ಕೆಲಸ ಮಾಡುತ್ತ ತೊಳಲುವ ಮನಸ್ಸಿಗೆ ಒಂದಷ್ಟು ಸಾಹಿತ್ಯ, ಸಂಗೀತ ನಲ್ಮೆಯ ಮಾತು, ಪ್ರೇಮಗೀತೆ- ಇವು ಸಂತೋಷವನ್ನು ಕೊಡುತ್ತವೆ. ಆದ್ದರಿಂದಲೇ ಎಚ್‌.ಎಸ್‌.ವಿ ಅವರ ‘ತೂಗುಮಂಚ’, ಬಿ.ಆರ್‌.ಲಕ್ಷ್ಮಣರಾವ್‌ ಅವರ ‘ಹಾಡೇ-ಮಾತಾಡೆ’ ಮುಂತಾದವುಗಳ ಬಗ್ಗೆ ಬರೆದದ್ದು.

ಇಷ್ಟಕ್ಕೂ ನಮ್ಮ ಮಧ್ಯಮ ವರ್ಗದ ಅನೇಕ ಮನೆಗಳಲ್ಲಿ ಏನಾಗಿದೆ ಅಂದರೆ- ಅಲ್ಲಿ ಅತ್ತೆ, ಮಾವ, ಗಂಡ ಹೆಂಡತಿ , ಮಕ್ಕಳಾದ ಚಿನ್ನಿ-ಮುನ್ನ ... ಹೀಗೆ ಎಲ್ಲರೂ ಇದ್ದಾರೆ. ಆದರೆ ಅವರೆಲ್ಲರ ಸಂತೋಷದ ನಡುವೆಯೂ ಒಳಮನೆಯಲ್ಲೊಂದು ಸೈಲೆನ್ಸ್‌ ಇದೆ. ಒಂದು ವಿನಾಕಾರಣದ ಬೇಸರವಿದೆ. ಅವೆರಡನ್ನೂ ಹೊಡೆದೋಡಿಸಿ ಮನೆಯಲ್ಲೊಂದು ಸಡಗರ ಹುಟ್ಟಿಸುವುದಕ್ಕೆ ನಮಗೆ ಹಾಡು ಬೇಕು. ಸಿನಿಮಾ ಹಾಡುಗಳು ಕರ್ಕಶವಾಗಿ ಹೋಗಿವೆ. ಸುಲಭವಾಗಿ ಅರ್ಥವಾಗುವ, ಮನಸ್ಸಿಗೆ ತಾಕುವ, ನಮ್ಮಲ್ಲೊಂದಿಷ್ಟು ಪ್ರೀತಿ- ಒಳ್ಳೆಯತನ ಹುಟ್ಟಿಸುವ ಸಂಗೀತ ಬೇಕು. ಆ ಬೇಕನ್ನು ಈಡೇರಿಸುತ್ತಿರುವವರೇ ಅಶ್ವಥ್‌, ರತ್ನಮಾಲಾ, ಬಿ.ಆರ್‌.ಛಾಯಾ, ನಂದಿತಾ, ಚಂದ್ರಿಕಾ ಗುರುರಾಜ್‌, ಉಪಾಸನಾ ಮೋಹನ್‌ ಮುಂತಾದವರು. ಅವರು ನಮ್ಮಂತೆಯೇ ಮಧ್ಯಮ ವರ್ಗದ ಮನೆ ಮನಗಳಲ್ಲಿ ಬದುಕುವವರು. ಅದ್ದರಿಂದಲೇ ಆ ಸಾಹಿತ್ಯ, ಆ ಸಂಗೀತ ಇಷ್ಟವಾಗುತ್ತದೆ.

Ravi Belagere criticizes U.R. Anathamurthys Political thoughts and movesಈ ಕಾರಣಕ್ಕೋ ಏನೋ, ಸಾಹಿತಿಗಳ ಬಗ್ಗೆ ಕಟುವಾಗಿ ಮಾತಾನಾಡಲಿಕ್ಕೆ ನನಗೆ ಮನಸ್ಸಾಗುವುದಿಲ್ಲ. ಆದರೆ ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಅವರ ಅರವತ್ತ ಮೂರನೆಯ ಜನ್ಮ ದಿನದ ಸಮಾರಂಭದಲ್ಲಿ ಜ್ಞಾನಪೀಠ ವಿಜೇತ ಯು.ಆರ್‌.ಅನಂತಮೂರ್ತಿ ಅವರು ಮಾತನಾಡಿದ್ದು ದಿನಪತ್ರಿಕೆಗಳಲ್ಲಿ ವರದಿಯಾಗಿದೆಯಲ್ಲ ? ಅದನ್ನು ಓದಿದ ಮೇಲೆ ಸುಮ್ಮನಿರಲು ಆಗುತ್ತಿಲ್ಲ.

ಅನಂತಮೂರ್ತಿ ತುಂಬ ಒಳ್ಳೆಯ prose ಬರೆಯುತ್ತಾರೆ. ಅದಕ್ಕಿಂದ ಒಳ್ಳೆ prose ಮಾತಾನಾಡುತ್ತಾರೆ. ಅವರ ಭಾಷಣ ಸುಂದರವಾಗಿರುತ್ತದೆ. ಆದರೆ ಪ್ರತಿ ಭಾಷಣವನ್ನೂ ಅವರು ಅಲ್ಲಿ ವೇದಿಕೆಯ ಮೇಲೆ ಕುಂತವರ ಅಭಿರುಚಿಗೆ, ಅವಶ್ಯಕತೆಗೆ ಅನುಗುಣವಾಗಿ ಮಾಡುತ್ತಾರೆ. ವಿಟ ಪುರುಷರ ಟೇಸ್ಟಿಗೆ ಅನುಗುಣವಾಗಿ ಮೈ ಕುಣಿಸುವ ಸ್ತ್ರೀಯಂತೆ. ಮೊನ್ನೆ ಅವರು ಮಾತಾಡಿರುವುದನ್ನೇ ನೋಡಿ. ಸಮಾಜದಲ್ಲಿ ಕ್ರಿಯಾಶೀಲತೆ ಬರಬೇಕಿದ್ದರೆ, ಅದು ಕೆಳವರ್ಗದಿಂದ ಮಾತ್ರ ಸಾಧ್ಯ. ಮೇಲ್ಮಧ್ಯಮ ವರ್ಗದ ಜನ ನಿರ್ವೀರ್ಯರಾಗುತ್ತಿದ್ದಾರೆ. ಪರಿಶಿಷ್ಟರ ಸಬಲೀಕರಣ ಅಂದರೆ ದೇಶದ ಸಬಲೀಕರಣ ಎಂದೇ ಪರಿಗಣಿಸಬೇಕು.... ಅಂದಿದ್ದಾರೆ ಅನಂತಮೂರ್ತಿ. ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಈವರೆಗೆ ಒಬ್ಬನೇ ದಲಿತ ಸಿಇಒ ಇಲ್ಲ ಅಂದಿದ್ದಾರೆ.

ಈ ಮಾತು ನಿಜಕ್ಕೂ ಅನಂತಮೂರ್ತಿಯವರ ನಿತ್ಯದ ಚಟುವಟಿಕೆ, ಚಿಂತನೆ, ರಾಜಕೀಯ, ಒಲವು, ಸ್ನೇಹಗಳ ಮಧ್ಯದಿಂದ ಎದ್ದು ಬಂದುದ್ದಾಗಿದ್ದರೆ ಅವರನ್ನು ನಾವು ಖಂಡಿತ ಗೌರವಿಸಬಹುದಿತ್ತು. ಆದರೆ ಅನಂತಮೂರ್ತಿ, ಮಲ್ಲಿಕಾರ್ಜುನ ಖರ್ಗೆ ಪಕ್ಕದಲ್ಲಿ ಕುಳಿತು ದಲಿತಲೊಬ್ಬ ರಾಜ್ಯದ ಮುಖ್ಯಮಂತ್ರಿಯಾಗಬೇಕು ಅನ್ನುವಂಥ ಮಾತುಗಳನ್ನಾಡುವುದಕ್ಕೆ ಕೆಲವೇ ಕೆಲವು ದಿನಗಳ ಹಿಂದಿನ ತನಕ ತಮ್ಮ ಎರಡು ಕೈಗಳನ್ನೂ ಎಸ್ಸೆಂ ಕೃಷ್ಣ ಎಂಬಾತನ ಹೆಗಲ ಮೇಲೆ ಬೋರಲು ಹಾಕಿಕೊಂಡು ಓಡಾಡುತ್ತಿದ್ದರು. ಕೃಷ್ಣ ಮುಖ್ಯಮಂತ್ರಿಯಾದಾಗಲೇ ಅವರ ಬದಲಿಗೆ ಖರ್ಗೆ ಅಧಿಕಾರಕ್ಕೆ ಬರಲಿ ಎಂಬ ಕೂಗು ಇತ್ತು. ಅಪ್ಪಿ ತಪ್ಪಿ ಕೂಡ ಅನಂತಮೂರ್ತಿ ಅವತ್ತು ತಮ್ಮ ಮಿತ್ರ ಕೃಷ್ಣಗೆ ಪೋನು ಮಾಡಿ ನೀವು ಮುಖ್ಯಮಂತ್ರಿಯಾಗೋದು ಬೇಡ. ಆ ಕುರ್ಚಿ ಖರ್ಗೆಗೆ ಬಿಟ್ಟು ಕೊಡಿ ಅಂತ ಹೇಳಲಿಲ್ಲ.

ಹೋಗಲಿ ಎಸ್ಸೆಂ ಕೃಷ್ಣ ತಮ್ಮ ಅಧಿಕಾರಾವಧಿಯನಲ್ಲಿ ಇಡೀ ಬೆಂಗಳೂರನ್ನೇ ಪಾರ್ಟಿ ಸಿಕ್ಸುಟಿ ಅಳತೆಯಲ್ಲಿ ಪ್ಲಾಟು ಹಾಕಿ ಹರಾಮಖೋರ ಐ.ಟಿ. ಸಂಸ್ಧೆಗಳಿಗೆ ಮಾರಿಬಿಟ್ಟರಲ್ಲ ? ಆ ಕಂಪನಿಗಳ ಒಡೆಯರಾದ ನಾರಾಯಣ ಮೂರ್ತಿ, ಪ್ರೇಂಜಿ- ಇವರೆಲ್ಲ ಅನಂತಮೂರ್ತಿಗಳ ಖಾಸಾ ಪರಿಚಿತರೆ. ಅವರ್ಯಾರಿಗಾದರೂ ಈ ದಲಿತಪರ ಚಿಂತಕ ಅನಂತಮೂರ್ತಿ ಒಂದು ಲೆಟರ್‌ ಕೊಟ್ಟು ಒಬ್ಬ ದಲಿತನನ್ನು ನಿಮ್ಮ ಸಂಸ್ಧೆಯ ಸಿ.ಇ.ಒ. ಆಗಿ ತೆಗೆದುಕೊಳ್ಳಿ ಅಂತ ಶಿಫಾರಸ್ಸು ಮಾಡಿದ್ದಾರಾ, ಕೇಳಿ? ಕಡೇ ಪಕ್ಷ ಇನ್‌ಫೋಸಿಸ್‌ ನಾರಾಯಣಮೂರ್ತಿಗೆ ಅಂಥದ್ದೊಂದು ಪತ್ರ ಬರೆದಿದ್ದಾರಾ- ಕೇಳಿ?

ಅನಂತಮೂರ್ತಿಯೇ ಬೂಟಾಟಿಕೆ ಮನುಷ್ಯ ಅಂದರೆ, ಅವರ ಮಿತ್ರ ಎಸ್ಸೆಂ ಕೃಷ್ಣ ಇನ್ನೂ ಬೂಟಾಟಿಕೆಯ ಮನುಷ್ಯ. ಕಾವೇರಿ ವಿವಾದದ ಸಂದರ್ಭದಲ್ಲಿ ಏನೇನೂ ಅವಶ್ಯಕತೆ ಇಲ್ಲದಿದ್ದಾಗ್ಯೂ ಮಂಡ್ಯದ ತನಕ ಪಾದಯಾತ್ರೆ ಮಾಡಿದರು. ಅಂಥ ಬೂಟಾಟಿಕೆಯ ಕೃಷ್ಣರೊಂದಿಗೆ ಕೆಂಗೇರಿಯ ತನಕ ನಡೆದು ಹೋಗಿ ದೊಡ್ಡ ಯಕ್ಷಗಾನವನ್ನೇ ಮಾಡಿದರು, ಜ್ಞಾನಪೀಠಿ. ಅದಕ್ಕೆ ಮುಂಚೆ ಪಟೇಲರೊಂದಿಗೆ, ರಾಮಕೃಷ್ಣ ಹೆಗಡೆಯಾಂದಿಗೆ ಹಗಲುರಾತ್ರಿಗಳ ಭೇದವಿಲ್ಲದೆ ಸರಸದಲ್ಲಿ ತೊಡಗಿದವರು ಅನಂತಮೂರ್ತಿ. ಬೆರಳೆಣಿಕೆಯ ಎಲೈಟ್‌ ದಲಿತರ ಹೊರತಾಗಿ ಇವರ್ಯಾವತ್ತು ನಿಜವಾದ ಶೋಷಿತರ ಜೊತೆ ಗುರುತಿಸಿಕೊಂಡರು ಹೇಳಿ? ಅನೂಕೂಲಕ್ಕೆ ಬೇಕಾದಾಗ ಪೇಜಾವರ ಸ್ವಾಮಿ, ಸಭೆಗೆ ಕರೆದಾಗ ಖರ್ಗೆ ಮಲ್ಲಿಕಾರ್ಜುನ ಸ್ವಾಮಿ, ಚುನಾವಣೆ ಬಂದಾಗ ದಳಕ್ಕೂ-ಕಾಂಗ್ರೆಸ್ಸಿಗೂ ಸರ್ವಾನುಮತದ ಅಭ್ಯರ್ಥಿ ಸ್ವಾಮಿ, ಎಸ್ಸೆಂ ಕೃಷ್ಣರ ಪಾಲಿನ ಏಜೆಂಟು ಸ್ವಾಮಿ- ಇಂಥ ಅನಂತ ಸ್ವಾಮಿಗಳನ್ನು ನಮ್ಮ ಬುದ್ಧಿಜೀವಿ ಪ್ರಪಂಚದ ಅಧಿನಾಯಕರು, ಮುಂದಾಳು ಅಂತ ಒಪ್ಪಿಕೊಳ್ಳುವುದಾದರೂ ಹೇಗೆ?

ಮೇಲ್ವರ್ಗದ ಜನ ನಿರ್ವಿರ್ಯರಾಗುತ್ತಿದ್ದಾರೆ ಅಂತ ಭಾಷಣ ಮಾಡಿದ ಅನಂತಮೂರ್ತಿಗಳು ಯಾವತ್ತು ವೀರ್ಯವಂತರೊಂದಿಗೆ ಒಡನಾಟವಿಟ್ಟುಕೊಂಡದ್ದರು? ಅವರ ನಿಜವಾದ ಗೆಳೆತನ ಪಟೇಲರೊಂದಿಗಿತ್ತು. ವಾಸದ ಕನಸು ಡಾಲರ್ಸ್‌ ಕಾಲನಿಯಲ್ಲಿತ್ತು. ಮೈಸೂರಿನಲ್ಲಿ ಅಷ್ಟು ದೊಡ್ಡ ಫಾರ್ಮ್‌ಹೌಸ್‌ ಇದ್ದರೇನು, ಬೆಂಗಳೂರಿನಲ್ಲಿ ನಮ್ಮಂಥ ಜ್ಞಾನಪೀಠಿಗೆ ಡಾಲರ್ಸ್‌ ಕಾಲನಿಯಲ್ಲಿ ಒಂದು ಮನೆ ಬೇಡವೇ ಅಂತ ಬಟಾಬಯಲಲ್ಲಿ ನಿಂತು ಘೋಷಿಸಿ, ಪಟೇಲರಿಂದ ಸವಲತ್ತು ಪಡೆದದ್ದರಲ್ಲಿ ಅನಂತಮೂರ್ತಿಗಳ ನಿಜವಾದ ಕ್ರಿಯೇಟಿವಿಟಿ ಇತ್ತು. ಅವರು ತಮ್ಮ ಮಕ್ಕಳಿಗ್ಯಾರಿಗೂ ದಲಿತರನ್ನು ತಂದು ಮದುವೆ ಮಾಡಲಿಲ್ಲ. ಯಾವ ಮೇಲ್ವರ್ಗದ ಪ್ರಬಲರನ್ನೂ ಎದುರು ಹಾಕಿಕೊಳ್ಳಲಿಲ್ಲ. ತುಂಗಾ ಮೂಲದ ಚಳವಳಿಗೆ ಕೈಹಾಕಿದಂತೆ ಮಾಡಿದರೇ ಹೊರತು, ಅದನ್ನು ಎಲ್ಲೂ ದಡ ಹತ್ತಿಸಲಿಲ್ಲ. ಅವರ ಅಪ್ರಮಾಣಿಕತೆಗೆ ಕಳೆದ ಹದಿನೈದಿಪ್ಪತ್ತು ವರ್ಷಗಳ ಅವರ ನಡವಳಿಕೆಯೇ ಸಾಕ್ಷಿ ಹೇಳುತ್ತದೆ.

ಅವರಿಗಿಂತ ಮುಂಚಿನ ಮತ್ತು ಅವರ ಸಮಕಾಲೀನ ಬುದ್ಧಿಜೀವಿಗಳನ್ನೆ ಒಮ್ಮೆ ಅನಂತಮೂರ್ತಿಗೆ ಹೋಲಿಸಿನೋಡಿ, ತಮ್ಮನ್ನು ತಾವು ರಾಜಸೇವಾಸಕ್ತ ಅಂತಲೇ ಕರೆದುಕೊಂಡಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ತೀರ ಅನಂತಮೂರ್ತಿಯವರಂತೆ ಕೃಷ್ಣ ಸೇವಾಸಕ್ತರಾಗಿ, ಪಟೇಲ ಸೇವಾಸಕ್ತರಾಗಿ ವರ್ತಿಸಲಿಲ್ಲ. ಅನಂತಮೂರ್ತಿಗಳ ಪರಮಗುರು ಅಡಿಗರು, ಯಾರು ಪ್ರತಿರೋಧ ಒಡ್ಡಿದರೂ ಕೇರ್‌ ಮಾಡದೇ ಅಂದಿನ ಜನಸಂಘದ ಪರವಾಗಿ ಚುನಾವಣೆಗೆ ನಿಂತರು, ಸೋತರು. ಯಾವತ್ತಿಗೂ ಯಾರಿಗೂ ತಲೆ ಬಾಗದ ಶಿವರಾಮಕಾರಂತರು ಕೂಡ ಚುನಾವಣೆಗೆ ನಿಂತು ಸೋತರು. ಅವರ್ಯಾರು ಕೃಷ್ಣ-ದೇವೇಗೌಡರಂಥ ಡಿಕ್ಲೇರ್ಡ್‌ ದಗಲುಬಾಜಿಗಳ ಮುಂದೆ ನಿಂತು ನನ್ನನ್ನು ಸರ್ವ ಸಮ್ಮತ ಅಭ್ಯರ್ಥಿಯನ್ನಾಗಿ ಮಾಡಿ ಅಂತ ಕೇಳಲಿಲ್ಲ. ಪ್ರೊ.ವೆಂಕಟಗಿರಿ ಗೌಡರು ಕೂಡ ತಮ್ಮದೇ ಆದ ರೀತಿಯಲ್ಲಿ ನಿಂತು ಬಡಿದಾಡಿದರು. ರಾಜಕಾರಣಿಗಳೊಂದಿಗೆ ಸಂಧಾನ ಮಾಡಿಕೊಳ್ಳಲಿಲ್ಲ. ಬಾಗಿಲಿಗೆ ನಿಂತು ದೇಹಿ ಅನ್ನಲಿಲ್ಲ. ಲಂಕೇಶರ ಮಾತು ಬಿಡಿ, ಅನಂತಮೂರ್ತಿಗಳಂಥವರಿರುತ್ತಾರೆ ಎಂಬ ಕಾರಣಕ್ಕಾಗಿ ಅವರ ಸಮೇತ ಅಕಾಡೆಮಿಗಳನ್ನು ದೂರವಿರಿಸಿದ ಧೀಮಂತ ಅವರು. ಪಟ್ಟೆ ಹಾಕಿ ನೋಡಿದರೆ, ಮೇಲೆ ಪ್ರಸ್ತಾಪಿಸಿದವರೆಲ್ಲರೂ ದಲಿತರ ಬಗ್ಗೆ, ಸಾರ್ವಜನಿಕ ಅಸಮತೋಲನಗಳ ಬಗ್ಗೆ ತಮ್ಮದೆಯಾದ ಮನುಷ್ಯಪರ ನಿಲುವುಗಳ ಹೊಂದಿದ್ದವರು, ಬರವಣಿಗೆಯಲ್ಲಿ ಅನಂತಮೂರ್ತಿಗಳಿಗಿಂತ ಹೆಚ್ಚಿನ ಸತ್ವ-ಕ್ರಿಯಾಶೀಲತೆ ಇದ್ದವರು. ಅವರ್ಯಾರೂ ಮಂತ್ರಿ-ಮುಖ್ಯಮಂತ್ರಿಗಳ ಹೆಗಲ ಮೇಲೆ ಕೈಯಿಟ್ಟು, ಕೆನ್ನೆ ಸವರಿ ಬದುಕಲಿಲ್ಲ. ಬದುಕಿದುದ್ದಕ್ಕೆ ತದ್ವಿರುದ್ಧವಾಗಿ ಮಾತಾಡಲಿಲ್ಲ .

ಹನ್ನೆರಡು ವರ್ಷಗಳ ಹಿಂದೆ ಮಣಿಪಾಲದಲ್ಲಿ ಬಹಿರಂಗ ವೇದಿಕೆಯ ಮೇಲೆ ತಮ್ಮ ಷಷ್ಠಿ ಪೂರ್ತಿ ಸಮಾರಂಭ ಮಾಡಿಕೊಂಡ, ಹೊಸ ಮನೆ ಕಟ್ಟಿಸಿದಾಗ ಮನೆಯಾಳಗೆ ದನ ಹೊಕ್ಕಸಿದ, ಪೇಜಾವರ ಪ್ರಣಯವನ್ನು ನಿರಂತರ ಜಾರಿಯಲ್ಲಿಟ್ಟ- ಇನ್ನೊಂದು ಕಡೆ ಕೃಷ್ಣರ ಹೆಗಲ ಮೇಲೆ ಕೈಯಿಟ್ಟು , ದೇವೇಗೌಡರ ಪಂಚೆ ಚುಂಗು ಹಿಡಿದು ‘ಬಿಜೆಪಿಯ ಮತಾಂಧರನ್ನು ಸೋಲಿಸ್ತೀನಿ, ಟಿಕೆಟ್‌ ಕೊಡಿ’ ಅಂತ ಕೇಳಿದ ಅನಂತಮೂರ್ತಿಗಳು ದಲಿತರು ಕರೆದರೆ ‘ಖರ್ಗೆ ಮುಖ್ಯಮಂತ್ರಿಯಾಗಲಿ’ ಅನ್ನುತ್ತಾರೆ. ನಾಳೆ ಗಂಗಾಮತಸ್ಥರು ಕರೆದರೆ ಚಿಂಚನ್ಸೂರ್‌ ಮುಖ್ಯಮಂತ್ರಿಯಾಗಲಿ ಅನ್ನುತ್ತಾರೆ.

ಅವರ ಕೈ ಮಾತ್ರ ಯಾರು ಮುಖ್ಯಮಂತ್ರಿಯಾಗಿರುತ್ತಾರೋ, ಅವರ ಹೆಗಲ ಮೇಲೆ ಇರುತ್ತದೆ; ಅಷ್ಟೆ !

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X