• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಣ್ಣ ಮಾಸಿದ ಹಸಿರು ಶಾಲಿನ ವೃದ್ಧ ಹೊರಟ ದಾರಿಬಿಡಿ !

By Staff
|
Ravi Belagere on Thatskannada.com ರವಿ ಬೆಳಗೆರೆ
ಸರಿಸುಮಾರು ಮೂರು ದಶಕಗಳ ಕಾಲ ರೈತ ಚಳುವಳಿಯ ಖದರನ್ನು ಹೆಚ್ಚಿಸಿದ್ದ ಪ್ರೊಫೆಸರ್‌ ಎಂ.ಡಿ. ನಂಜುಂಡಸ್ವಾಮಿ ನಿಧನದೊಂದಿಗೆ ‘ಹಸಿರು ಶಾಲಿನ’ ಬಣ್ಣ ಮಾಸಿದಂತಾಗಿದೆ.

ಫಕ್ಕನೆ ನೋಡಿದರೆ ಬಳ್ಳಿಯಂತೆ ಕಾಣುತ್ತಿದ್ದ, ಸೇದುವ ಸಿಗರೇಟನ್ನೂ ಚುಚ್ಚುವಂತೆ ಕಾಣುತ್ತಿದ್ದ ನಂಜುಡಸ್ವಾಮಿ ಬಗ್ಗೆ ಹೇಳುವುದಾದರೆ ಆತ ಮಹಾಜ್ಞಾನಿ, ನಡೆದಾಡುವ ವಿಶ್ವಕೋಶ, ಜತೆಗೆ ಕೆಂಡಕೆಂಡ. ನಂಜುಂಡಸ್ವಾಮಿ ರೂಪುಗೊಂಡದ್ದು ಸಮಾಜವಾದಿ ಚಳುವಳಿಯ ಮೂಲಕ. ನಂತರ ಖ್ಯಾತನಾಮರಾದ ಲಂಕೇಶ್‌, ತೇಜಸ್ವಿ ಅವರಂಥವರು ಎಂಡಿಎನ್‌ರ ಸಮಕಾಲೀನರಾದರೂ ನಂಜುಡಸ್ವಾಮಿ ಬೀದಿಗಿಳಿದು ಹೋರಾಡಿದ ರೀತಿಯೇ ಅವರಿಗೊಂದು ವಿಶಿಷ್ಟ ಸ್ಥಾನಮಾನವನ್ನು ಗಳಿಸಿಕೊಟ್ಟಿತ್ತು. ಇಂತಹ ನಂಜುಂಡಸ್ವಾಮಿ ರೈತ ಚಳವಳಿಯ ಸಾರಥ್ಯ ವಹಿಸುವ ಕಾಲಕ್ಕೆ ರುದ್ರಪ್ಪ , ಸುಂದರೇಶರಂಥರವರ ಪಡೆಯೇ ಸಂಘಟನೆಯ ಜತೆಗಿತ್ತು. ನಂಜುಂಡಸ್ವಾಮಿ ಬೆಳೆಯುತ್ತಾ ಹೋದ ರೀತಿಯೇ ಕುತೂಹಲಕರ. ಚಳವಳಿಯ ಮುಂಚೂಣಿಗೆ ಬರುತ್ತಿದ್ದಂತೆಯೆ ರೈತ ಸಮುದಾಯದಲ್ಲಿ ಆತ್ಮಾಭಿಮಾನ ಮೊರೆಯುವಂತೆ ಮಾಡಿದ ನಂಜುಂಡಸ್ವಾಮಿ ಸಾಯುವವರೆಗೂ ಹಾಗೇ ಇದ್ದರು.

ಗುಂಡೂರಾವ್‌ ಎಂಬ ಅರಿವುಗೇಡಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಕಾಲಕ್ಕೆ, ಹಸಿರು ಕ್ರಾಂತಿಯ ಪರಿಣಾಮ ದಟ್ಟವಾಗಿತ್ತು. ರೈತನ ಕೃಷಿ ಉತನ್ನಗಳಿಗೆ ಸರಿಯಾದ ಬೆಲೆ ಸಿಗುವ ವಾತಾವರಣ ಇಲ್ಲದಂತಿದ್ದ ಆ ಸಂದರ್ಭದಲ್ಲಿ ರೈತನ ಬವಣೆಯನ್ನು ವಿಚಾರದ ನೆಲೆಗಟ್ಟಿನ ಮೇಲೆ ನಿಲ್ಲಿಸಿ, ತರ್ಕದ ರೂಪ ಕೊಟ್ಟವರು ನಂಜುಂಡಸ್ವಾಮಿ. ಕೈಗಾರಿಕಾ ಉತ್ಪನ್ನಗಳಿಗೆ ಹೇಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುತ್ತೀರೋ? ಹಾಗೇ ಕೃಷಿ ಉತ್ಪನ್ನಗಳಿಗೂ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಅಂತ ನಂಜುಂಡಸ್ವಾಮಿ ಹೇಳತೊಡಗಿದಾಗ ಅದಕ್ಕೆ ಪ್ರತ್ಯುತ್ತರ ನೀಡುವ ತಾಕತ್ತೇ ಸರ್ಕಾರಕ್ಕಿರಲಿಲ್ಲ.

Prof M D Nanjundaswamyಸರ್ಕಾರ ಹೀಗೆ ಅಸಹಾಯಕವಾಗುತ್ತಾ ಹೋದಂತೆ ಎಂಡಿಎನ್‌ ಮಾತಿನ ಧಾಟಿಯೂ ಪ್ರಖರವಾಗುತ್ತಾ ಹೋಯ್ತು. ‘ಯಾರೇ ಅಧಿಕಾರಿ ಸಾಲ ವಸೂಲಿಗೆಂದು ಬಂದರೆ ಹಳ್ಳಿಯಾಳಗೆ ಪ್ರವೇಶ ನೀಡಬೇಡಿ’ ಎಂಬ ರೈತ ಸಂಘದ ಕರೆಯ ನೀಡಿದ್ದು ನಂಜುಂಡಸ್ವಾಮಿಯ ಚಿಂತನೆ. ಅದರ ಪರಿಣಾಮವಾಗಿ ಸ್ವಾತಂತ್ರ್ಯೋತ್ತರ ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ರೈತರಲ್ಲಿ ಆತ್ಮಾಭಿಮಾನ ಮೊಳೆಯಿತು. ತಮಗಾಗುತ್ತಿದ್ದ ಶೋಷಣೆಯ ಮೂಲ ಯಾವುದು? ಅದು ಹರಡಿಟ್ಟ ಜಾಲದ ಸ್ವರೂಪ ಏನು ಎಂಬುದು ಮನದಟ್ಟಾಗುತ್ತಾ ಹೋಯಿತು. ಹೀಗಾಗಿ ಎಂಡಿಎನ್‌ರ ಒಂದು ಕರೆಗೆ ರಾಜ್ಯದೆಲ್ಲೆಡೆಯಿಂದ ರೈತರ ದಂಡು ಹೊರಳಿಕೊಂಡು ಬಂದುಬಿಡುತ್ತಿತ್ತು. ಹಸಿರು ಶಾಲು ಹೊದ್ದ ಲಕ್ಷಾಂತರ ರೈತರು ರಾಜಧಾನಿಗೆ ಬಂದಿಳಿದರೆ ಸರ್ಕಾರಕ್ಕೆ ತಲ್ಲಣ! ಅದರಲ್ಲೂ ಗುಂಡೂರಾಯರ ಸರ್ಕಾರ ರೈತರ ಮೇಲೆ ಎಷ್ಟು ಗುಂಡು ಹಾರಿಸಿತೋ? ಅವೆಲ್ಲದರ ಲೆಕ್ಕವಿಟ್ಟು ಚುಕ್ತಾ ಮಾಡಿದ್ದು ರೈತ ಸಂಘ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದದ್ದರ ಹಿಂದೆ ರೈತ ಸಂಘದ ಕಾಣಿಕೆ ಮಹತ್ವದ್ದಾಗಿತ್ತು. ದುರಂತವೆಂದರೆ ಜನತಾರಂಗ ಅಧಿಕಾರಕ್ಕೆ ಬಂದ ಮೇಲೆ ರೈತ ಚಳುವಳಿಯನ್ನು ಗಟ್ಟಿಗೊಳಿಸುವ ಕೆಲಸವಾಗಬೇಕಿತ್ತು. ಅದರಲ್ಲೂ ಕರ್ನಾಟಕದ ಜಾತಿ ವ್ಯವಸ್ಥೆಯ ಸಂರಚನೆಯನ್ನರಿತಿದ್ದ ನಂಜುಂಡಸ್ವಾಮಿ ತಕ್ಷಣ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಆ ಕೆಲಸವಾಗಲಿಲ್ಲ. ಬದಲಿಗೆ ರುದ್ರಪ್ಪ , ಸುಂದರೇಶ್‌ ನಾಯಕತ್ವದಿಂದ ಮಾಸುತ್ತಾ ಹೋದ ಮೇಲೆ ರೈತಸಂಘದ ಚುಕ್ಕಾಣಿಯನ್ನು ನಂಜುಂಡಸ್ವಾಮಿ ಹಿಡಿದುಕೊಂಡರು. ಆ ಹಿಡಿತಕ್ಕೆ ಯಜಮಾನನೊಬ್ಬನ ಕಠೋರತೆ ಇತ್ತೇ ಹೊರತು, ಜಾಣ ನಿರ್ವಾಹಕ ಗುಣ ಇರಲಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ನಂಜುಂಡಸ್ವಾಮಿಯವರಲ್ಲಿದ್ದ ಸರ್ವಾಧಿಕಾರಿ ಗುಣ ಹೆಚ್ಚುತ್ತಾ ಹೋಯಿತು. ತಾವಾಡಿದ ಮಾತಿಗೆ ಪ್ರತಿಯಾಡುವವರು ಉಳಿಯುವಂತಿಲ್ಲ ಎಂಬಂತಾಗಿ ಹೋಯಿತು.

ರಾಮಕೃಷ್ಣ ಹೆಗಡೆ ಎಂಬ ಮುಖ್ಯಮಂತ್ರಿ ರೈತ ಚಳುವಳಿಯ ಸೊಂಟ ಮುರಿದಿದ್ದೇ ಆಗ. ಮೂಲತಃ ರೈತ ಚಳುವಳಿಯ ಶಕ್ತಿಯನ್ನು ಹೆಚ್ಚಿಸಿದ್ದೇ ಒಕ್ಕಲಿಗ ಹಾಗೂ ಲಿಂಗಾಯಿತ ವರ್ಗಗಳು. ದೇವರಾಜ್‌ ಅರಸರ ಭೂ ಸುಧಾರಣಾ ಕಾನೂನಿನಿಂದ ಹೊಡೆತ ತಿಂದ, ಭೂಮಿ ಕಳೆದುಕೊಂಡ ಆ ವರ್ಗಗಳು 1980ರ ಸುಮಾರಿಗೆ ರಣ ಹಸಿವಿನಿಂದ ಎದ್ದು ನಿಂತಿದ್ದವು. ಯಾಕೆಂದರೆ 1978ರ ಚುನಾವಣೆಯಲ್ಲಿ ಆ ಎರಡು ವರ್ಗಗಳ ಆಕ್ರೋಶದೆದುರು ಹಿಂದುಳಿದವರು, ಅಲ್ಪ ಸಂಖ್ಯಾತರು ಹಾಗೂ ಪರಿಶಿಷ್ಟರನ್ನು ಸಜ್ಜುಗೊಳಿಸಿ ಅರಸು ಗೆದ್ದಿದ್ದರು. ಇದೇ ಸಂದರ್ಭದಲ್ಲೇ ರೈತ ಚಳುವಳಿಯ ಕಾವು ಹೆಚ್ಚುತ್ತಾ ಹೋಗಿದ್ದು. ಮುಂದೆ ಇವೇ ವರ್ಗಗಳು ಜನತಾರಂಗ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದವು.

ರೈತ ಚಳವಳಿಗೆ ಪುಷ್ಟಿ ಒದಗಿಸಿದ ಶಕ್ತಿಗಳೇ ಜನತಾ ಸರ್ಕಾರದ ಮೂಲಶಕ್ತಿಗಳಾದಾಗ ನಂಜುಂಡಸ್ವಾಮಿ ಮಾಡಬೇಕಾದ ತುರ್ತು ಕೆಲಸವೊಂದಿತ್ತು. ಅದೆಂದರೆ ಎರಡನೇ ಪಂಕ್ತಿಯ ನಾಯಕರನ್ನು ಬೆಳೆಸುವುದು. ಆದರೆ ತಮ್ಮ ಶಕ್ತಿ ಶಾಶ್ವತ ಎಂಬ ಭ್ರಮೆಯಲ್ಲಿದ್ದ ಎಂಡಿಎನ್‌ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಪರಿಣಾಮವಾಗಿ ದತ್ತ, ವೆಂಕಟೇಶ ಮೂರ್ತಿ ಸೇರಿದಂತೆ ಹಲವಾರು ನಾಯಕರು ಸಂಘಟನೆಯಿಂದ ದೂರವಾದರು. ತದನಂತರ ಪುಟ್ಟಣ್ಣಯ್ಯ, ಸುನಂದಾ ಜಯರಾಂ ಅವರಂತಹ ನಾಯಕರನ್ನಾದರೂ ರೂಪಿಸುವ ಕೆಲಸ ಆಗಬೇಕಿತ್ತು. ಅದಕ್ಕೆ ಬೇಕಾದ ಅರ್ಹತೆಯೂ ಈ ನಾಯಕರಲ್ಲಿತ್ತು.

ಆದರೆ ನಂಜುಂಡಸ್ವಾಮಿ ಗಪ್ಪಂತ ಕೂತವರು ಹಾಗೇ ಕೂತುಬಿಟ್ಟರು. ಸಂಘಟನೆಯ ಅನುಮತಿಯಿಲ್ಲದೇ ಭೂಮಿ ಖರೀದಿಸಿದರು ಲೆಕ್ಕಪತ್ರ ಕೊಡಲಿಲ್ಲ. ರಾಜ್ಯದ ರೈತರು ಅನುಭವಿಸುತ್ತಿದ್ದ ಸಂಕಟಗಳ ಕಡೆ ಗಮನ ಕೊಡುವುದಕ್ಕಿಂತ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ರೈತನ ಕಷ್ಟ ಹೇಗಿದೆ? ಅಂತ ಭಾಷಣ ಬಿಗಿಯತೊಡಗಿದರು. ಬಾಬಾಗೌಡ ಪಾಟೀಲರಂತಹ ನಾಯಕ ಸಂಘಟನೆ ತೊರೆದ ಮೇಲೂ ಎಂಡಿಎನ್‌ಗೆ ಬಲಿಷ್ಟವಾಗುತ್ತಿರುವ ಜಾತಿಗಳ ಹಿಡಿತ, ಅದಕ್ಕೆ ಪ್ರತಿಯಾಗಿ ಎರಡನೇ ಪಂಕ್ತಿಯ ನಾಯಕರನ್ನು ರೂಪಿಸುವ ಅನಿವಾರ್ಯತೆ ಅರ್ಥವಾಗಲಿಲ್ಲ. ಈ ಮಧ್ಯೆ ರೈತರ ಸರ್ಕಾರ ತರುತ್ತೇವೆ ಅಂತ ಸಂಘಟನೆಯನ್ನು ರಾಜಕೀಯ ಕಣಕ್ಕಿಳಿಸಿದರು. ಪರಿಣಾಮ ಸಪ್ಪೆಯಾಯಿತು. ಅಧಿಕಾರದ ಬೆನ್ನು ಹತ್ತಿದ್ದ ಒಕ್ಕಲಿಗ, ಲಿಂಗಾಯಿತ ವರ್ಗಗಳು ಕಾಂಗ್ರೆಸ್‌ನ ತಟ ಹತ್ತಿ ಕುಳಿತಿದ್ದವು. ಮುಂದೆ 1994ರಲ್ಲಿ ಅವೇ ವರ್ಗಗಳು ಜನತಾದಳ ಬೆನ್ನು ಹತ್ತಿ ನಿಂತವು. ಆಗಲೂ ನಂಜುಂಡಸ್ವಾಮಿ ಅಲುಗಾಡಲಿಲ್ಲ. ಹೀಗಾಗಿ ಒಂದು ಕಾಲಕ್ಕೆ ಉತ್ತರ ಭಾರತದ ರೈತ ನಾಯಕ ಮಹೇಂದ್ರ ಸಿಂಗ್‌ ಟಿಕಾಯತ್‌ ಅಂಥವರ ಜೊತೆ ಹೋಲಿಸಲ್ಪಡುತ್ತಿದ್ದ ನಂಜುಂಡಸ್ವಾಮಿ ಕಾಲಕ್ರಮೇಣ ಮಂಕಾದರು. ಅವರೊಂದಿಗೆ ಸಂಘಟನೆಯ ಶಕ್ತಿಯೂ ಕುಗ್ಗತೊಡಗಿತು.

ಕೆಲ ವರ್ಷಗಳ ಹಿಂದೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ತಗುಲಿಕೊಂಡಾಗ, ಇದೇ ಪುಟ್ಟಣ್ಣಯ್ಯ ಅವರಂತಹ ನಾಯಕರು: ‘ಲೆಕ್ಕ ಕೊಟ್ಟು ಬಿಡಿ ಪ್ರೊಫೆಸರ್‌, ಎಲ್ಲವೂ ಪಾರದರ್ಶಕವಾಗಿರಲಿ. ಸಂಘಟನೆಯ ಶಕ್ತಿ ಉಳಿದುಕೊಳ್ಳಲಿ’ ಅಂತ ಗೋಗರೆದರು.

ಆದರೆ ಸಿಗರೇಟಿನ ಹೊಗೆಯನ್ನು ಉಗುಳುವಷ್ಟೇ ನಿರ್ಲಕ್ಷ್ಯದಿಂದ ಅಂತಹ ಬೇಡಿಕೆಯನ್ನು ತಳ್ಳೇ ಹಾಕಿದರು ಎಂಡಿಎನ್‌. ಕೇಳಿದರೆ: ‘ನನ್ನೆದುರು ಅವರು ಬಚ್ಚಾಗಳು. ನಾನು ಅವರಿಗೇಕೆ ಲೆಕ್ಕ ಕೊಡಲಿ?’ ಎಂದರು. ಹಾಗೆ ಹೇಳುತ್ತಲೇ ಸಂಘಟನೆಯ ಒಡಕು ನಿಶ್ಚಿತವಾಗುವಂತೆ ಮಾಡಿದರು. ವಿಪರ್ಯಾಸವೆಂದರೆ ಪ್ರಪಂಚದುದ್ದಕ್ಕೂ ನಾನು ರೈತರಿಗಾಗಿಯೇ ತಿರುಗುತ್ತಿದ್ದೇನೆ. ಹಾಗಾಗಿ ನನ್ನ ಪ್ರಾಮಾಣಿಕತೆ ಪ್ರಶ್ನಾರ್ಹವಾಗಕೂಡದು ಎಂಬ ಸಿನಿಕತನಕ್ಕೆ ಎಂಡಿಎನ್‌ ಅಂಟಿಕೊಂಡಿದ್ಡರು.

ಮುಂದೆಯೂ ಅಷ್ಟೆ . ರೈತ ಸಂಘದ ಒಡಕು ತಮ್ಮನ್ನು ಬಾಧಿಸಿಯೇ ಇಲ್ಲವೇನೋ ಎಂಬಂತೆ ಆನ್‌ಲೈನ್‌ ಲಾಟರಿ ವಿರುದ್ಧ ಹೋರಾಡಿದರು. ತೆಂಗು ರೈತರ ಬವಣೆ ನೋಡಿ ಬೀದಿಗಿಳಿದರು. ಕಬ್ಬು ಬೆಳೆಗಾರರ ಸಂಕಟಕ್ಕೆ ಉತ್ತರ ಹುಡುಕಲೆತ್ನಿಸಿದರು. ದುರದೃಷ್ಟ ಎಂದರೆ ರೈತ ಸಂಘದ ಒಡಕನ್ನು ಮುಖ್ಯಮಂತ್ರಿ ಕೃಷ್ಣ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಾ, ಜನತಾ ಪರಿವಾರವನ್ನು ಛಿದ್ರ ಗೊಳಿಸಲು ಸನ್ನಾಹ ನಡೆಸುತ್ತಿದ್ದರೆ, ಎಂಡಿಎನ್‌ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದರು.

ಅದಕ್ಕಿಂತ ವಿಪರ್ಯಾಸವೆಂದರೆ ಕ್ಯಾನ್ಸರ್‌ ಪೀಡಿತರಾದ ನಂಜುಂಡಸ್ವಾಮಿ ಆಸ್ಪತ್ರೆಯಲ್ಲಿದ್ದರೆ, ಎಬಿಪಿಜೆಡಿಯ ಕೆಲ ನಾಯಕರು ಅವರನ್ನೇ ಸೆಳೆದುಕೊಳ್ಳಲು ಮುಂದಾದರು. ಈ ಹೊತ್ತಿಗಾಗಲೇ ಸಮಾಜವಾದಿ ನಂಜುಂಡಸ್ವಾಮಿ ಅದೆಷ್ಟು ಬಳಲಿ ಹೋಗಿದ್ದರೆಂದರೆ, ರಘುನಾಥ ಗುರೂಜಿ ಎಂಬ ವಂಚಕನನ್ನು ಪಕ್ಕದಲ್ಲಿ ಕೂರಿಸಿಕೊಂಡು ‘ಇವರಿಂದ ನನ್ನ ರೋಗ ವಾಸಿಯಾಗುತ್ತಿದೆ’ ಅನ್ನತೊಡಗಿದ್ದರು.

ಅವರು ತೀರಿಕೊಂಡ ಈ ಘಳಿಗೆಯಲ್ಲಿ ಅಯಾಚಿತವಾಗಿ ನೆನಪಿಗೆ ಬರುವವರು ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ. ಜಾತಿಯಿಂದ ಗೋಪಾಲಗೌಡ ಹಾಗೂ ನಂಜುಂಡಸ್ವಾಮಿಯವರಿಬ್ಬರೂ ಬಲಿಷ್ಠ ಜಾತಿಯಿಂದ ಬಂದವರೇ. ಇಬ್ಬರೂ ಸಮಾನತೆಗಾಗಿ ಹೋರಾಡಿದವರೇ.

ಅಂತಹ ನಂಜುಂಡಸ್ವಾಮಿ ತೀರಿಕೊಂಡಿರುವ ಈ ಸಂದರ್ಭದಲ್ಲಿ ‘ರೈತರು ಬಂದರು ದಾರಿ ಬಿಡಿ’ ಎಂಬ ಘೋಷ ವಾಕ್ಯ ಮಂಕಾದಂತೆ, ಕಾಣುತ್ತಿದೆ. ಹಸಿರು ಶಾಲಿನ ಬಣ್ಣ ಮಾಸಿದಂತೆ ಕಾಣುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಎಂಡಿಎನ್‌ಗಿದ್ದ ಖದರಿನ ಒಂದು ಕಥೆಯನ್ನು ಹೇಳಿದರೆ ರೈತಪರ ಹೋರಾಟಗಾರರಿಗೆ ಹುಮ್ಮಸ್ಸು ತುಂಬುವ ಕೆಲಸ ಆಗಬಹುದೇನೋ?

ಅದು ಮಾರ್ಪಾಡಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ. ಅವತ್ತು ಶಾಸನಸಭೆಯಲ್ಲಿ ಪ್ರೊ. ನಂಜುಂಡಸ್ವಾಮಿ ಡಂಕೆಲ್‌ ಪ್ರಸ್ತಾಪದ ಪರಿಣಾಮಗಳ ಬಗ್ಗೆ ವಿವರಿಸುತ್ತಿದ್ದರು. ಅವರ ಮಾತಿನ ಪ್ರಖರತೆ, ವಿಚಾರದ ನಿಖರತೆಯ ಭರಕ್ಕೆ ಇಡೀ ಸದನ ಮೂಕವಿಸ್ಮಿತವಾಗಿದ್ದರೆ, ಕೃಷಿ ಸಚಿವರು ಮಾತ್ರ ಧಡಕ್ಕನೆ ಮೇಲೆದ್ದು ನಿಂತು: ‘ನಮಗೂ ಡಂಕನ್‌ ಅಂದ್ರೆ ಏನು ಎಂದು ಗೊತ್ತು. ಸುಮ್ಮನೆ ಇರ್ರೀ’ ಅಂದುಬಿಟ್ಟರು.

ನಂಜುಂಡಸ್ವಾಮಿಯವರ ಕಣ್ಣುಗಳಲ್ಲಿ ನಿಗಿನಿಗಿ ಬೆಂಕಿ. ‘ಏ ಅವಿವೇಕಿ, ಅದು ಡಂಕನ್ನೂ ಅಲ್ಲ , ಲಿಂಕನ್ನೂ ಅಲ್ಲ . ಮೊದಲು ಓದುವುದನ್ನು ಕಲಿ, ನಂತರ ಮಾತನಾಡು’ ಎಂದು ಗದರಿಬಿಟ್ಟರು.

ಅದು ಅವರ ಶೈಲಿ. ಅಂತಹ ಶೈಲಿಯಿಂದಲೇ ಅವರು ರೈತರಲ್ಲಿ ರೊಚ್ಚು ತುಂಬಿದ್ದರು. ‘ತೊಂದರೆ ಕೊಟ್ಟವರನ್ನು ಲೈಟುಕಂಬಕ್ಕೆ ಕಟ್ಟಿ ಹೊಡೆಯಿರಿ’ ಅಂದಿದ್ದರು. ನಾಡಿಗೆ ಅನ್ನ ಕೊಡುವ ಸಮುದಾಯ ತುಂಬು ಸ್ವಾಭಿಮಾನದಿಂದ ನಿಲ್ಲುವಂತೆ ಮಾಡಿದ್ದರು. ಈಗಿನ ಹೋರಾಟಗಾರರಿಗೆ ಅವರ ಸರಿ-ತಪ್ಪುಗಳು ಪಾಠವಾಗಲಿ. ರೈತ ಸಮುದಾಯದ ಹಾದಿ ಚೊಕ್ಕವಾಗಿ ಇರಲಿ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌)

ಪೂರಕ ಓದಿಗೆ-

ಪರಕೀಯದ ವಿರುದ್ಧ ಉರಿದುಬಿದ್ದ ನಂಜುಂಡ

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more