ಪ್ರೆೃಮರಿ ಶಾಲಾ ಶಿಕ್ಷಕಿ ತಾರಾ ದೊಡ್ಡಮನಿ ಮುಖಕ್ಕೆ ಆ್ಯಸಿಡ್!
![]() | ರವಿ ಬೆಳಗೆರೆ |
ಮತ್ತೊಂದು ಮುಖಕ್ಕೆ ಆ್ಯಸಿಡ್!
ಇನ್ನೊಂದು ಹೃದಯ ವಿದ್ರಾವಕ ಕಥೆ. ಹಿಂಸಾವಿನೋದಿ ಗಂಡಸರ ಪ್ರಪಂಚ, ಇನ್ನೊಂದು ಸುಂದರ ಮುಖವನ್ನು ವಿರೂಪಗೊಳಿಸಿ ನಮ್ಮೆಡೆಗೆ ಕಳಿಸಿದೆ. ಅರ್ಧ ಲೀಟರು ಕಾನ್ಸಂಟ್ರೇಟೆಡ್ ಸಲ್ ಫ್ಯೂರಿಕ್ ಆ್ಯಸಿಡ್ನಲ್ಲಿ ತೋಯ್ದು ಕರಗಿಹೋದ ಈ ನಿಸ್ಸಹಾಯಕ ಮುಖದೆದುರು ನಿರಂತರವಾಗಿ ನಾಲ್ಕು ದಿನ ಕುಳಿತು ಕುಳಿತು ನನ್ನ ಮನಸ್ಸೇ ಮುದುಡಿಹೋದಂತಾಗಿದೆ. ನಾನಿನ್ನಾದರೂ ಆ ನತದೃಷ್ಟ ತಂಗಿ ಹಸೀನಾಳನ್ನು ಮರೆತಿಲ್ಲ. ಅಷ್ಟರಲ್ಲಿ ಇನ್ನೊಂದು ಜೀವ ಬೆಂಗಳೂರಿಗೆ ಧಾವಿಸಿ ಬಂದಿದೆ. ಈಕೆಯ ಹೆಸರು ತಾರಾ ದೊಡ್ಡಮನಿ!



ಕೆಳೆದವಾರ ತನ್ನ ಕಂಪ್ಯೂಟರಿನ ಮೇಲ್ ಬಾಕ್ಸ್ ಚೆಕ್ ಮಾಡುತ್ತಿದ್ದ ನನ್ನ ಸಹೋದ್ಯೋಗಿ ಮಿತ್ರ ಅನಂತ್ ಚಿನಿವಾರ್ ಒಂದು ಈ ಮೇಲ್ ನ ಪ್ರಿಂಟೌಟ್ ಬಸಿದು ಕೊಟ್ಟಾಗಲೇ ನನಗೆ ತಾರಾ ದೊಡ್ಡಮನಿ ಈಗ ಬೆಂಗಳೂರಿನಲ್ಲಿದ್ದಾಳೆಂಬ ಸಂಗತಿ ಗೊತ್ತಾದದ್ದು. ಈ ಬಗ್ಗೆ ಒಂಭತ್ತು ತಿಂಗಳ ಹಿಂದೆಯೇ ಇಳಕಲ್ಲಿನ ಸಮೀಪದ ಗ್ರಾಮವೊಂದರಲ್ಲಿ ತಾರಾ ಎಂಬ ಶಿಕ್ಷಕಿಯ ಮೇಲೆ ಆ್ಯಸಿಡ್ ದಾಳಿ ನಡೆಯಿತೆಂಬ ಸುದ್ದಿ ಕೇಳಿದ್ದೆನಾದರೂ ಯಾಕೋ ಮನಸ್ಸಿಗದು ತೀವ್ರವಾಗಿ ತಟ್ಟಿರಲಿಲ್ಲ. ಆದರೆ ಅನಂತನಿಗೆ ಬಂದ ಮೇಲ್ ಓದಿದ ಮೇಲೆ ಮನಸ್ಸು ತಡೆಯಲಿಲ್ಲ. ತಕ್ಷಣ ಹುಡುಗರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕಳುಹಿಸಿದೆ. ತಾರಾ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಹೌದಾದರೂ, ಆಕೆ ಅಲ್ಲಿ ಅಡ್ಮಿಟ್ ಆಗಿಲ್ಲ. ಆಕೆಯನ್ನು ಪತ್ತೆ ಮಾಡುವುದೇ ಒಂದು ಕೆಲಸವಾಗಿತ್ತು.
ಅಕ್ಷರಶಃ ಹೆದರಿಕೊಂಡು ಚಿಕ್ಕ ಮನೆಯಾಂದರಲ್ಲಿ ಅಡಗಿ ಕುಳಿತಿದೆ ತಾರಾ ಮತ್ತು ಆಕೆಯ ಕುಟುಂಬ. ಹೆಸರಿಗೆ ಅದು ಮನೆಯಾದರೂ ಒಂದಷ್ಟು ಪಾತ್ರೆ, ಒಲೆ, ಒಂದು ಹಾಸಿಗೆ, ನಾಲ್ಕಾರು ಚಾಪೆ ಹೊರತಾಗಿ ಆ ಮನೆಯಲ್ಲಿ ಇನ್ನೇನೂ ಇಲ್ಲ. ತೆರೆದುಕೊಳ್ಳುವ ಕದದ ಹಿಂದೆ ಆತ್ಮವೇ ಇಲ್ಲದೇ ಆಕೃತಿಯಂತೆ ನಡೆದು ಬರುತ್ತಾಳೆ ತಾರಾ. ಆಕೆಯ ಮುಖ ಪೂರ್ತಿಯಾಗಿ ಸುಟ್ಟು ಹೋಗಿದೆ. ಒಂದು ಕಣ್ಣು ಕುರುಡು. ಅದರ ಐ ಬಾಲ್ ಪೂರ್ತಿ ಸುಟ್ಟು ಕರಗಿ ಹೋಗಿದೆ. ಆಕೆಗೆ ಕಣ್ಣು ರೆಪ್ಪೆಗಳಿಲ್ಲ. ಕಿವಿಗಳು ತುಂಡಾಗಿ ಹೋಗಿವೆ. ಬಾಯಿ ಪೂರ್ತಿಯಾಗಿ ತೆರೆಯಲು ಬರುತ್ತಿಲ್ಲ. ಗದ್ದ ಮತ್ತು ಕುತ್ತಿಗೆಯ ಚರ್ಮ ಏಕಾ ಅಂಟಿಕೊಂಡುಬಿಟ್ಟಿದೆ. ಎದೆ ಸುಟ್ಟಿದೆ. ಹೆಗಲು ಛಿಧ್ರ ಛಿಧ್ರ. ಬೆನ್ನ ಮೇಲೆಲ್ಲಾ ಸುಟ್ಟ ಗಾಯ. ನೋಡಿದ ತಕ್ಷಣ ಎಂಥವರಿಗಾದರೂ ಕಣ್ಣು ಹನಿಗೂಡುತ್ತವೆ.
ಅಕಸ್ಮಾತ್ ತಾರಾ ಹದಿನೆಂಟರ ಹುಡುಗಿಯಾಗಿದ್ದರೆ, ಆಕೆಯ ಮೇಲೆ ನಡೆದ ಆ್ಯಸಿಡ್ ದಾಳಿಗೆ ಕಾರಣವೇನಿರಬಹುದು ಅಂತ ಊಹಿಸಬಹುದಾಗಿತ್ತು. ಅಂಥದೊಂದು ದಾಳಿ ಮಾಡಿದವರು ಹದಿಹರೆಯದ ಹುಡುಗರಾಗಿದ್ದಿದ್ದರೆ ಅವರ ಪೈಶಾಚಿಕ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಆದರೆ ತಾರಾ ಮೂವತ್ತಾರು ವರ್ಷದ ಗೃಹಿಣಿ. ಇಬ್ಬರು ಬೆಳೆಯುತ್ತಿರುವ ಮಕ್ಕಳ ತಾಯಿ. ಹಿರಿಯ ಮಗ ಏಳ್ನೇ ಕ್ಲಾಸು ಓದುತ್ತಿದ್ದಾನೆ. ತನ್ನ ಗಂಡ ಅಶೋಕ್ ಜೊತೆಯಲ್ಲಿ ತಾರಾ ದಶಕಗಟ್ಟಲೆ ಸಂಸಾರ ಮಾಡಿದ್ದಾಳೆ. ಹೋಗಲಿ, ಆಕೆಯ ಮುಖಕ್ಕೆ ಹಾಗೆ ಅರ್ಧ ಲೀಟರ್ ಕಾನ್ಸಂಟ್ರೇಟೆಡ್ ಸಲ್ ಫ್ಯೂರಿಕ್ ಆ್ಯಸಿಡ್ ಹಾಕಿದ ಪಾತಕಿಗಳಾದರೂ ಯಾರು? ಅವರಲ್ಲಿ ಒಬ್ಬ ಮೂವತ್ನಾಲ್ಕು ವರ್ಷ ವಯಸ್ಸಿನ ಅಂಗವಿಕಲ ಅವಿವಾಹಿತ. ಇನ್ನೊಬ್ಬ ಅದೇ ವಯಸ್ಸಿನ ವಿವಾಹಿತ. ಇವರಿಬ್ಬರೂ ತಾರಾಳ ಜೊತೆಯಲ್ಲೇ ಸರ್ಕಾರಿ ಶಾಲೆಯಲ್ಲಿ ನೌಕರಿ ಮಾಡಿದ ಶಿಕ್ಷಕರು. ಅವರ ಹೆಸರು ಭೀಮಾರೆಡ್ಡಿ ಚೌಕಡ್ಡಿ ಮತ್ತು ಭೀಮನ ಗೌಡ ಪಾಟೀಲ. ಇವರಿಬ್ಬರಿಗೂ ಇಂಥದೊಂದು ಪ್ಲಾನು ಹೇಳಿಕೊಟ್ಟು ಆ್ಯಸಿಡ್ ಕೂಡ್ ಒದಗಿಸಿದವನು, ಸರಿಸುಮಾರು ಎಪ್ಪತ್ತು ವರ್ಷ ವಯಸ್ಸಿನ ನಿವೃತ್ತ ಶಿಕ್ಷಕ ಹಾಗೂ ನಾಟಿ ವೈದ್ಯ ರಾಘವಾಚಾರ್ಯ. ಈ ಮೂರೂ ಜನ ಮೊದಲ ಸುತ್ತಿನಲ್ಲಿ ಕೇವಲ ಎರಡು ದಿನ, ಎರಡನೇ ಸುತ್ತಿನಲ್ಲಿ ಕೇವಲ 15 ದಿನ ಜೈಲಿನಲ್ಲಿ ಇದ್ದು ಜಾಮೀನಿನ ಮೇಲೆ ಹೊರ ಬಂದು, ಈಗ ಬಿಂದಾಸ್ ಓಡಾಡುತ್ತಿದ್ದಾರೆ ಎಂಬುದು ಈ ಕಥನದ ನಿಜವಾದ ದುರಂತ!
ಗದುಗಿನ ಹೆಣ್ಣುಮಗಳಾದ ತಾರಾ ದೊಡ್ಡಮನಿ ಅವರ ತಂದೆ ಮತ್ತು ತಾಯಿ ಇಬ್ಬರೂ ಶಿಕ್ಷಕರು. ತಂದೆ ದ್ಯಾವನಗೌಡರು ಸಚಿವ ಎಚ್ಕೆ ಪಾಟೀಲರಿಗೆ ಮೇಷ್ಟ್ರಾಗಿದ್ದವರು. ಪಿಯುಸಿ ತನಕ ಕಲಿತು ಟಿಸಿಎಚ್ ಮಾಡಿಕೊಂಡ ತಾರಾ, ಇಂಗ್ಲೀಷಿನಲ್ಲಿ ಬುದ್ಧಿವಂತೆ. ನಿಜಕ್ಕೂ ಉತ್ತಮ ಶಿಕ್ಷಕಿ. ಈಕೆಯನ್ನು ಮದುವೆ ಮಾಡಿ ಕೊಟ್ಟಿದ್ದು ಇಳಕಲ್ಲಿನ ಅಶೋಕ್ ಪಾಟೀಲ್ ಎಂಬಾತನಿಗೆ. ಅಶೋಕ್ ಪಾಟೀಲನ ಸೋದರಿಯನ್ನ ತಾರಾಳ ಅಣ್ಣ ಮದುವೆಯಾಗಿದ್ದಾರೆ. ಅದು ಎದುರು ಮದುವೆ. ತಾರಾಳ ಗಂಡ ಅಶೋಕ್ ಪಾಟೀಲ್ ಅಂಥ ಉದ್ಯೋಗಸ್ಥನಲ್ಲ. ಆತನ ಅಣ್ಣ ವಿಜಯಕುಮಾರ್ ಪಾಟೀಲರು ಸುಮಾರು ಇಪ್ಪತ್ತು ವರ್ಷ ಸೌತ್ ಆಫ್ರಿಕಾದಲ್ಲಿದ್ದರು. ಮದುವೆಯಾದ ನಂತರ ತಾರಾಗೆ ಸರ್ಕಾರಿ ಶಾಲೆಯ ನೌಕರಿ ಸಿಕ್ಕು, ಆಕೆ ಕುಷ್ಠಗಿ ತಾಲೂಕಿನ ಮೂಗನೂರಿನಲ್ಲಿ ಕೆಲಸ ಮಾಡತೊಡಗಿದಳು. ಇಳಕಲ್ಲಿನಿಂದ ಪ್ರತಿನಿತ್ಯ ಇಪ್ಪತೈದು ಕಿಲೋಮೀಟರು ದೂರದ ಮೂಗನೂರಿಗೆ ಓಡಾಡುವುದು ಕಷ್ಟವೆನಿಸಿ, ಆಕೆ ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಮೂಗನೂರಿಗೇ ಹೋಗಿ ಅಲ್ಲಿ ಸಂಸಾರ ಹೂಡಿದಳು. ಕೆಲ ಕಾಲ ಗಂಡ ಅಶೋಕ್ ಕೂಡ ಅಲ್ಲೇ ಇದ್ದ. ಅನಂತರ ತನ್ನ ಅಣ್ಣನ ಬಳಿಗೆ ಹೋಗಿ ಸೌತ್ ಆಫ್ರಿಕಾದಲ್ಲಿ ನೌಕರಿ ಹುಡುಕುವ ಯತ್ನ ಮಾಡಿದ. ಆ ದಿನಗಳಲ್ಲಿ ಒಬ್ಬಂಟಿಯಾಗಿ ಮೂಗನೂರಿನಲ್ಲಿದ್ದ ತಾರಾಗೆ ಪರಿಚಯವಾದವನೇ ಮೂಗನೂರಿನ ಶಿಕ್ಷಕ ಭೀಮಾರೆಡ್ಡಿ. ಆತನದು ಗಂಗಾವತಿ ಬಳಿಯ ಕೆಸರಟ್ಟಿ. ಚಿಕ್ಕವನಿದ್ದಾಗಿನಿಂದಲೂ ಒಂದು ಕಾಲು ಊನ. ಮೇಲಾಗಿ ಅವಿವಾಹಿತ. ಮೂಗನೂರಿನಲ್ಲೇ ರೂಮೊಂದರಲ್ಲಿ ಒಬ್ಬಂಟಿಗನಾಗಿ ಇರುತ್ತಿದ್ದ ಭೀಮಾರೆಡ್ಡಿ ತಾರಾಳನ್ನು ತಂಗಿ ಅಂತಲೇ ಮಾತನಾಡಿಸುತ್ತಿದ್ದ. ಕುಷ್ಟಗಿಯಲ್ಲಿದ್ದ ಬಿ.ಇ.ಒ. ಆಫೀಸಿಗೆ, ಶಿಕ್ಷಕರ ಮೀಟಿಂಗ್ಗಳಿಗೆ ತಾರಾ ಹೋಗಬೇಕಾಗಿ ಬಂದರೆ, ಅವನೂ ಜೊತೆಯಲ್ಲಿ ಹೋಗುತ್ತಿದ್ದ. ಒಬ್ಬಂಟಿ ಹೆಣ್ಣು ಮಗಳಿಗೆ ಅದೊಂದು ಅರ್ಥದಲ್ಲಿ ಆಸರೆಯಾಗಿತ್ತು. ಆದರೆ ತಾರಾಳ ಗಂಡ ವಿದೇಶಕ್ಕೆ ಹೋದ ಮೇಲೆ ಭೀಮಾರೆಡ್ಡಿಯ ನಿಯತ್ತು ಕೆಟ್ಟಿತ್ತು. ಅಂಗಚೇಷ್ಟೆ ಆರಂಭಿಸಿದ. ತಕ್ಷಣ ಅವನನ್ನು ದೂರವಿಟ್ಟಳು ತಾರಾ. ಹಾಗೆ ಕುಷ್ಟಗಿಗೆ ಹೋದಾಗ ಭೀಮನ ಗೌಡ ಪಾಟೀಲ ಎಂಬ ಇನ್ನೊಬ್ಬ ಶಿಕ್ಷಕ ಪರಿಚಯವಾಗಿದ್ದನಲ್ಲ ? ಬಸ್ಸಿಲ್ಲದ ಮೂಗನೂರಿಗೆ ಬಿಟ್ಟುಬರಲು, ಕೆಲವೊಮ್ಮೆ ಕರೆದೊಯ್ಯಲು- ಅವನ ನೆರವು ಪಡೆದಳು. ಯಾವಾಗ ತಾರಾ ಭೀಮನ ಗೌಡನ ಬೈಕಿನಲ್ಲಿ ಒಂದೆರಡು ಬಾರಿ ಓಡಾಡಿದಳೋ, ಅಂಗವಿಕಲ ಭೀಮಾರೆಡ್ಡಿಗೆ ಉರಿದುಹೋಯಿತು. ಅವನೇ ನಿಂತು ತಾರಾ ಹಾಗೂ ಭೀಮನಗೌಡ ಪಾಟೀಲರ ಬಗ್ಗೆ ಸಲ್ಲದ ಸುದ್ದಿ ಹರಡಿಸತೊಡಗಿದ. ಇದೇ ವೇಳೆಗೆ ಒಬ್ಬಂಟಿಯಾಗಿದ್ದ ತಾರಾಳೊಂದಿಗೆ ಭೀಮನಗೌಡ ಪಾಟೀಲನೂ ಅಸಭ್ಯವಾಗಿ ವರ್ತಿಸತೊಡಗಿದ.
ಬೇಸತ್ತ ತಾರಾ ಇಬ್ಬರು ಶಿಕ್ಷಕರನ್ನೂ ದೂರವಿಟ್ಟಳು. ಹಳ್ಳಿಗಾಡಿನಲ್ಲಿ ಒಬ್ಬಂಟಿ ಶಿಕ್ಷಕಿಯರು ಗಂಡಸಿನ ಆಸರೆಯಿಲ್ಲದೆ ಬದುಕುವುದು ಎಷ್ಟು ಕಷ್ಟ ಎಂಬುದು ಅನುಭವಿಸಿದವರಿಗೇ ಗೊತ್ತು. ಒಂದು ಕಡೆ ಭೀಮಾರೆಡ್ಡಿಯ ಕಾಟದಿಂದ ಬೇಸತ್ತ ತಾರಾ, ಅನಿವಾರ್ಯವಾಗಿ ಮೂಗನೂರಿನಲ್ಲಿ ಖಾಸಗಿ ಪ್ರಾಕ್ಟೀಸು ಮಾಡುತ್ತಿದ್ದ ಎಪ್ಪತ್ತರ ವೃದ್ಧ, ನಿವೃತ್ತ ಶಿಕ್ಷಕ ರಾಘವಾಚಾರಿ ಎಂಬುವವನ ನೆರವು ಕೇಳಿದ್ದಾಳೆ. ಈ ಹೆಣ್ಣು ಮಗಳು, ಆರೇಳು ವರ್ಷ ಮೂಗನೂರಿನ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಗ ವೃದ್ಧ ರಾಘವಾಚಾರಿಯನ್ನು ಅಕ್ಷರಶಃ ‘ಅಪ್ಪಾ’ ಅಂತಲೇ ಕರೆದಿದ್ದಾಳೆ. ಅದೇ ನಂಬಿಕೆಯ ಮೇಲೆ ಆತನೊಂದಿಗೆ ಕುಷ್ಟಗಿ ಹಾಗೂ ಇಳಕಲ್ಲುಗಳಿಗೆ ಅಗತ್ಯ ಬಿದ್ದಾಗ ಓಡಾಡಿದ್ದಾಳೆ. ಈ ಹೆಣ್ಣು ಮಗಳ ನಸೀಬು ಎಷ್ಟು ಖೊಟ್ಟಿಯೆಂದರೆ, ಅದೊಂದು ದಿನ ಬಾಯಲ್ಲಿ ದವಡೆ ಹಲ್ಲು ಕೂಡ ಉಳಿದಿರದ ರಾಘವಾಚಾರಿ ‘ಎರಡೂವರೆ ಸಾವಿರ ರೂಪಾಯಿ ಕೊಡ್ತೀನಿ. ಒಂದು ರಾತ್ರಿ ನನ್ನೊಂದಿಗಿರು’ ಅಂದಿದ್ದಾನೆ.
ಅಲ್ಲಿಗೆ ಈ ಊರಿನ, ವಾತಾವರಣದ ಸಹವಾಸವೇ ಬೇಡವೆಂದು ತೀರ್ಮಾನಿಸಿದ ತಾರಾ ದೊಡ್ಡಮನಿ ಮೂರೂ ಜನರಿಂದ ಬಚಾವಾಗಿ, ಮೂಗನೂರು ಶಾಲೆಯಿಂದ ಇಳಕಲ್ಲು ಸಮೀಪದ ಸಂಕ್ಲಾಪುರವೆಂಬ ಹಳ್ಳಿಗೆ ವರ್ಗ ಮಾಡಿಸಿಕೊಂಡಿದ್ದಾಳೆ. ನೆನಪಿರಲಿ, ವರ್ಷಗಟ್ಟಳೆ ಮೂಗನೂರು ಶಾಲೆಯಲ್ಲಿ ಏಕೈಕ ಮಹಿಳಾ ಶಿಕ್ಷಕಿಯಾಗಿ ಕೆಲಸ ಮಾಡಿದ ತಾರಾ, ಊರಿನಲ್ಲೂ-ಶಾಲೆಯಲ್ಲೂ ಅತ್ಯುತ್ತಮ ಶಿಕ್ಷಕಿ ಹಾಗೂ ಅತ್ಯಂತ ಒಳ್ಳೆಯ ನಡವಳಿಕೆಯ ಹೆಣ್ಣು ಮಗಳು ಅಂತಲೇ ಹೆಸರು ಪಡೆದಿದ್ದಾಳೆ. ಆಕೆ ಕೆಲಸ ಮಾಡಿದ ಪ್ರತಿ ಗ್ರಾಮಕ್ಕೂ ಹೋಗಿ ನಮ್ಮ ವರದಿಗಾರರು ತಾರಾ ಬಗ್ಗೆ, ಆಕೆಗೆ ಅನ್ಯಾಯವೆಸಗಿದ ಮೂವರು ಪಾತಕಿಗಳ ಬಗ್ಗೆ ಹತ್ತಾರು ಜನರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಎಲ್ಲೆಲ್ಲೂ ತಾರಾ ಬಗ್ಗೆ ಒಂದು ಚಕಾರ ಶಬ್ದ ಅಪಸ್ವರವಾಗಿ ಕೇಳಿ ಬಂದಿಲ್ಲ.
ಹಾಗೆ ಸಂಕ್ಲಾಪುರದ ಶಾಲೆಗೆ ವರ್ಗಾ ಆಗಿ ಬಂದ ತಾರಾ, ಕೆಲ ದಿನಗಳ ನಂತರ ಇಳಕಲ್ಲಿನ ನಂಬರ್ ಒನ್ ಶಾಲೆಗೆ ಡೆಪ್ಯುಟೇಷನ್ ತೆಗೆದುಕೊಂಡಿದ್ದಾಳೆ. ಗಂಡನ ಮನೆ, ಮಕ್ಕಳ ಶಾಲೆ, ತನ್ನ ನೌಕರಿ- ಮೂರೂ ಇಳಕಲ್ಲಿನಲ್ಲೇ ಇದ್ದುದರಿಂದ ತಾರಾ ದೊಡ್ಡಮನಿಗೆ ಮೂಗನೂರಿನ ಮೂವರ ಪೈಕಿ ಯಾರದೂ ಕಾಟವಿಲ್ಲದಂತಾಗಿದೆ. ಬಹುಶಃ ಆ ಮೂವರನ್ನೂ ತಾರಾ ಮರೆತೇ ಹೋಗಿದ್ದಳು. ಆದರೆ ಅವತ್ತು 2003ರ ಏಪ್ರಿಲ್ 10ನೇ ತಾರೀಕು ಬಂದಿತ್ತು. ಅದು ಶಾಲೆಗಳ ಕೊನೇ ದಿನ. ಡೆಪ್ಯುಟೇಷನ್ ಮೇಲಿದ್ದ ಶಿಕ್ಷಕರು, ಅವತ್ತು ಮಾತ್ರ ತಪ್ಪಿಸದೇ ತಮ್ಮ ಒರಿಜಿನಲ್ ಶಾಲೆಗೆ(ಮೂಲ ಶಾಲೆಗೆ) ಹೋಗಿ, ಅಟೆಂಡೆನ್ಸಿಗೆ ಸಹಿ ಹಾಕಿ ಬರಬೇಕು. ಇಲ್ಲದಿದ್ದರೆ ಅವರ ಬೇಸಿಗೆ ರಜೆಯ ಸಂಬಳ ಜಫ್ತಾಗುತ್ತದೆ. ಅದು ಅನಿವಾರ್ಯವಾದ್ದರಿಂದ, ಮನೆಯ ಕೆಲಸದ ಹುಡುಗ ರಸೂಲ್ ಬುಡ್ಡಾ ಎಂಬುವವನೊಂದಿಗೆ ಸ್ಕೂಟಿಯಲ್ಲಿ ಕುಳಿತು ಎಂಟು ಕಿಲೋಮೀಟರು ದೂರದ ಸಂಕ್ಲಾಪುರದ ಶಾಲೆಗೆ ಕೊನೆಯ ವರ್ಕಿಂಗ್ ಡೇ ಪ್ರಯುಕ್ತ ಸಹಿ ಮಾಡಲು ಹೊರಟಿದ್ದಾಳೆ ತಾರಾ.
ತಾನು ಮೂಗನೂರು ಬಿಟ್ಟ ನಂತರ ಆದ ಬೆಳವಣಿಗೆಗಳು ಬಹುಶಃ ಆಕೆಗೆ ಗೊತ್ತಿರಲಿಲ್ಲ. ಆಕೆಯಿಂದ ತಿರಸ್ಕೃತರಾಗಿದ್ದ ಭೀಮಾರೆಡ್ಡಿ, ಭೀಮನಗೌಡ ಪಾಟೀಲ ಮತ್ತು ಮುದುಕ ರಾಘವಾಚಾರಿ-ಮುವರೂ ಒಂದಾಗಿಬಿಟ್ಟಿದ್ದರು. ತಮಗೆ ದಕ್ಕದ ಹೆಣ್ಣು ಮಗಳು ನೆಮ್ಮದಿಯಾಗಿ ಬದುಕಲೂಬಾರದು ಅಂತ ತೀರ್ಮಾನಿಸಿದ ಅವರು ಮೊದಲೇ ಅರ್ಧ ಲೀಟರ್ ಆ್ಯಸಿಡ್ ತಂದಿರಿಸಿಕೊಂಡಿದ್ದರು. ಏಪ್ರಿಲ್ 10ರ ಬೆಳಿಗ್ಗೆ ಸಂಕ್ಲಾಪುರಕ್ಕೆ ಸಹಿ ಮಾಡಲು ಹೋಗುತ್ತಿದ್ದ ತಾರಾಳಿಗೆ, ನಡುದಾರಿಯಲ್ಲಿ ಅನಾಮತ್ತು ಅರ್ಧ ಲೀಟರ್ ಆ್ಯಸಿಡ್ ಎರಚಿಬಿಟ್ಟರು.
ದುರಂತವೆಂದರೆ, ಭೀಮನಗೌಡ ಪಾಟೀಲನ ಚಿಕ್ಕಪ್ಪನೊಬ್ಬ ರಾಯಚೂರಿನಲ್ಲಿ ಆಗ ಡಿವೈ.ಎಸ್ಪಿ ಆಗಿದ್ದ. ಅವನ ಮಾತು ಕೇಳಿಕೊಂಡು ಇಳಕಲ್ಲಿನ ಅವಿವೇಕಿ ಎಸ್ಸೈ ನಾಗರಾಜ್, ಆ್ಯಸಿಡ್ ಎರಚಿದವರ ಮೇಲೆ ಕೊಲೆ ಯತ್ನದ ಕೇಸು ಹಾಕುವುದು ಬಿಟ್ಟು ಚಿಲ್ಲರೆ ಜಗಳದ ಕೇಸು ಹಾಕಿ, ಇಡೀ ಕೇಸನ್ನೇ ಹಳ್ಳ ಹಿಡಿಸಿಬಿಟ್ಟ. ಮುಂದೆ ತಾರಾಳ ಗಂಡನ ಮನೆಯವರು ಪ್ರಧಾನಮಂತ್ರಿಗಳ ತನಕ ಪತ್ರ ಬರೆದು ದೂರು ಕೊಂಡೊಯ್ದದ್ದಕ್ಕೆ ಭೀಮಾರೆಡ್ಡಿ ಮತ್ತು ಭೀಮನಗೌಡ ಪಾಟೀಲ-ಇಬ್ಬರನ್ನೂ ಸಸ್ಪೆಂಡ್ ಮಾಡಲಾಯಿತು. ಅವರು ಕೇವಲ ಎರಡು ದಿನಗಳಲ್ಲಿ ಜೈಲಿನಿಂದ ಹೊರ ಬಂದಿದ್ದರು. ಬಂದವರು ಸುಮ್ಮನೆಯೇನೂ ಕೂಡಲಿಲ್ಲ. ತಾರಾಳ ಅಣ್ಣನಿಗೆ ಪತ್ರ ಬರೆದು, ‘ನೀನು ಊರು ಬಿಟ್ಟು ಹೋಗದಿದ್ದರೆ ನಿನಗೂ ಆ್ಯಸಿಡ್ ಎರಚುತ್ತೇವೆ’ ಎಂದು ಬೆದರಿಸಿದರು. ಈ ಬಾರಿ ಮಾತ್ರ ಇಳಕಲ್ಲಿನ ಹೊಸ ಎಸ್ಸೈ ಪವಾಡಶೆಟ್ಟಿ, ಹರಾಮಿ ಶಿಕ್ಷಕರಿಬ್ಬರನ್ನೂ ತಂದು ಬೆತ್ತಲೆ ಮಾಡಿ ಬೆನ್ನುಗಳ ಮೇಲೆ ನಗಾರಿ ಬಾರಿಸಿ ಜೈಲಿಗೆ ಕಳಿಸಿದ್ದರು. ಆದರೆ, ಮೂಲ ಕೇಸೇ ಹಳ್ಳ ಹಿಡಿದಿತ್ತಾದ್ದರಿಂದ, ಮತ್ತೆ ಹದಿನೈದು ದಿನಗಳಲ್ಲಿ ಭೀಮಾರೆಡ್ಡಿ ಮತ್ತು ಭೀಮನಗೌಡ ಜಾಮೀನು ಪಡೆದು ಈಚೆಗೆ ಬಂದಿದ್ದಾರೆ.
ಆ ಕೇಸಿನ ಸಂಗತಿ ಹಾಗಿರಲಿ, ಬೆಳಗಾವಿಯಲ್ಲಿ ಅರ್ಧ ಚಿಕಿತ್ಸೆ ಪಡೆದು ಪೂರ್ತಿ ಮೂರು ಲಕ್ಷ ರೂಪಾಯಿ ಖರ್ಚು ಮಾಡಿಕೊಂಡು ಈಗ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಂದಿರುವ ತಾರಾ ಮತ್ತು ಅಶೋಕ್ರ ಕೈಯಲ್ಲಿ ನಯಾಪೈಸೆಯೂ ಇಲ್ಲ. ಇದ್ದ ತಾಳಿ ಕೂಡ ಮಾರಿಕೊಂಡಾಗಿದೆ. ಆಕೆ ಬೇಡುತ್ತಿರುವುದು ಕೇವಲ ಒಂದೇ ನೆರವು; ಮೊದಲಿನ ರೂಪವಂತೂ ಬರುವುದಿಲ್ಲ. ಕಡೇಪಕ್ಷ ಮುಖಕ್ಕೊಂದು ಆಕೃತಿಯಾದರೂ ಬರಲಿ. ಒಂದು ಶಾಶ್ವತವಾಗಿ ಕುರುಡಾಗಿ ಹೋಗಿದೆ. ಇನ್ನೊಂದಾದರೂ ಉಳಿದುಕೊಳ್ಳಲಿ. ಮೆತ್ತಿಕೊಂಡು ಹೋಗಿರುವ ಕತ್ತು ಮತ್ತು ಗದ್ದ ಬೇರೆಬೇರೆಯಾಗಲಿ. ಅದಕ್ಕೆ ಸಹಾಯ ಮಾಡಿ.
ಇಷ್ಟೆಲ್ಲ ಆಗಬೇಕಾದರೆ ಅನೇಕ ಆಪರೇಷನ್ಗಳಾಗಬೇಕು. ಅದು ಎರಡು ವರ್ಷಗಳ ತನಕ ಮೇಲಿಂದ ಮೇಲೆ ಆಗಬೇಕಾದ ಚಿಕಿತ್ಸೆ. ಅದಕ್ಕೆ ಏನಿಲ್ಲವೆಂದರೂ ಆರು ಲಕ್ಷ ರೂಪಾಯಿಗಳು ಬೇಕು. ತಾರಾ ನಿಸ್ಸಹಾಯಕಳಾಗಿ ಬೊಗಸೆ ಚಾಚಿದ್ದಾಳೆ.
ನಾವು ಉದಾರಿಗಳು. ಪಾಕಿಸ್ತಾನದ ಮಗು ನೂರ್ ಫಾತಿಮಾ ಬೆಂಗಳೂರಿಗೆ ಬಂದರೆ, ಲಕ್ಷಾಂತರ ರೂಪಾಯಿ ಕೊಡಲು ಮುಂದಾದವರು. ನಮ್ಮ ಆಸ್ಪತ್ರೆಗಳು ಮುಗಿಬಿದ್ದು ಆ ಮಗುವಿಗೆ ಉಚಿತ ಚಿಕಿತ್ಸೆ ಕೊಡಲು ಮುಂದಾದವು. ಸೋನಿಯಾ ಗಾಂಧಿಯಿಂದ ಹಿಡಿದು ಅಲ್ಲಂ ವೀರಭದ್ರಪ್ಪನವರ ತನಕ ಎಲ್ಲರೂ ಪಾಕಿಸ್ತಾನಿ ಮಗುವಿನ ನೆತ್ತಿ ನೇವರಿಸಿ ದುಡ್ಡು, ಸವಲತ್ತು ಕೊಟ್ಟವರೇ. ಅಂಥದರಲ್ಲಿ, ಸಾವಿರಾರು ಮಕ್ಕಳಿಗೆ ಪಾಠ ಹೇಳಿದ ಹತಭಾಗ್ಯ ಹೆಣ್ಣು ಮಗಳು ತಾರಾಗೆ ನಾವು ನೆರವಾಗಲಾರೆವಾ? ಆಕೆಯ ಪರವಾಗಿ ಕೇಳಿಕೊಳ್ಳುತ್ತಿದ್ದೇನೆ. ನಿಮ್ಮದೊಂದು ನೆರವು ಆಕೆಗೆ ತಲುಪಲಿ. ಆಕೆಯ ಬದುಕು ಹಸನಾಗಲಿ.
ತಾರಾ ದೊಡ್ಡಮನಿಯವರಿಗೆ ನೆರವು ನೀಡಲು ಇಚ್ಛಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಚೆಕ್ ಅಥವಾ ಡಿಡಿ ಮೂಲಕ ಧನಸಹಾಯ ಮಾಡಬಹುದು :
Help Line :
ತಾರಾ ಎ.ದೊಡ್ಡಮನಿ 38 SB 7815214
ಅಂಚೆ ವಿಳಾಸ : ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, 256/ 8, 4ನೇ ಮೇನ್, ಮಹಾಲಕ್ಷ್ಮಿ ಲೇಔಟ್ ಬ್ರಾಂಚ್, ಬೆಂಗಳೂರು- 560086.
(ಸ್ನೇಹಸೇತು : ಹಾಯ್ ಬೆಂಗಳೂರ್!)
ಪೂರಕ ಓದು-