ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನಪೀಠಿಯಾಬ್ಬರ ಕೈಲಿ ತಿಂದ ಬೈಗುಳದ ಹಳೆಯ ನೆನಪಿನಲ್ಲಿ

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

‘‘ಅನಂತಮೂರ್ತಿ ನಿಮ್ಮ ವಿರುದ್ಧ statement ಕೊಟ್ಟಿದ್ದಾರೆ ನೋಡಿದಿರಾ?’’ ಅಂತ ‘ಲಂಕೇಶ್‌ ಪತ್ರಿಕೆ ’ಯ ಸಂಪಾದಕ ಇಂದ್ರಜಿತ್‌ ಫೋನು ಮಾಡಿ ಕೇಳಿದಾಗ ನಾನು ತುಮಕೂರಿನಲ್ಲಿದ್ದೆ. ನಾನದನ್ನು ನೋಡಿರಲಿಲ್ಲ. ಎಲ್ಲ ಬಿಟ್ಟು ನನ್ನ ವಿರುದ್ಧ ಹೇಳಿಕೆ ಕೊಡುವಂಥ ದರ್ದು ಜ್ಞಾನಪೀಠಿಗೆ ಅದೇನು ಬಂದಿತ್ತೋ ಗೊತ್ತಿಲ್ಲವಲ್ಲ ಅಂದುಕೊಂಡು ಬೆಂಗಳೂರಿಗೆ ಬಂದೆ. ಬರುವ ಹೊತ್ತಿಗೆ ಆಫೀಸಿನಲ್ಲಿ ಮೆಸೇಜಿತ್ತು. ನಿಮ್ಮ ಪ್ರೀತಿಯ ಕತೆಗಾರ ರಾಘವೇಂದ್ರ ಖಾಸನೀಸರು ತೊಂದರೆಯಲ್ಲಿದ್ದಾರೆ.

ಅವರ ಪಾರ್ಕಿನ್‌ಸನ್ಸ್‌ ವ್ಯಾಧಿ ಉಲ್ಭಣಿಸಿದೆ. ಇತ್ತೀಚೆಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ನಿಮ್ಮನ್ನು ತುಂಬ ನೆನೆಸುತ್ತಿದ್ದಾರೆ’.... ಹೀಗೆ.

Dr URA wants Crime Diary on TV to be bannedಅದೆಂಥ ಸಂಬಂಧವೋ ಕಾಣೆ. ಕತೆಗಾರ ರಾಘವೇಂದ್ರ ಖಾಸನೀಸರು ನನಗೆ ಯಾವಾಗಲೂ ಒಂದು ನಿಸ್ಸಹಾಯಕ ಮಗುವಿನಂತೆ ಕಾಣುತ್ತಾರೆ. ಅವರ ಅಮಾಯಕ ಮತ್ತು ದುಃಖ ಪೂರಿತ ಕಣ್ಣುಗಳು, ಗುಬ್ಬಿದೇಹ, ನಡುಗುವ ಕೈಗಳು, ಎಲ್ಲೋ ಕಳೆದುಹೋದಂತೆ ಕಾಣುವ ಮುಖಭಾವ, ಬಹುಶಃ ನನ್ನ ಬದುಕಿನಲ್ಲಿ ನಾನು ಗೆಲವು ಅಂತ ಕಾಣದೆ ಹೋಗಿದ್ದಿದ್ದರೆ ಇವತ್ತು ಖಾಸಗೀಸರ ಸ್ಥಿತಿಯಲ್ಲಿರುತ್ತಿದ್ದೆನೇನೋ? ಆ ಕಾರಣಕ್ಕೇ ನಾನು ಅವರನ್ನು ತುಂಬ ಹಚ್ಚಿಕೊಳ್ಳುತ್ತೇನೆ. ಅವರ ಬಗ್ಗೆ ಯೋಚಿಸುತ್ತೇನೆ. ಗೆಳೆಯ‘ಜೋಗಿ’ ಫೋನಿಗೆ ಸಿಕ್ಕಾಗಲೆಲ್ಲ , ‘ಒಂದ್ಸಲ ಖಾಸನೀಸರ ಮನೆಗೆ ಹೋಗಿ ನೋಡಿಕೊಂಡು ಬನ್ನಿ ಆರೋಗ್ಯ ಹೇಗಿದೆಯೋ ಏನೋ’ ಅಂತ ವಿನಂತಿಸುತ್ತಿರುತ್ತೇನೆ. ಯಾರೇ ಮಿತ್ರರು ಹಿರಿಯ ಕವಿಗೆ ಸನ್ಮಾನ ಮಾಡಬೇಕು ಅಂತ ಮಾತು ತೆಗೆದರೂ‘‘ನಮ್ಮ ಖಾಸನಿಸರಿಗೆ ಸನ್ಮಾನ ಮಾಡ್ರಿ..’’ ಅಂತ ದುಂಬಾಲು ಬೀಳುತ್ತೇನೆ. ಮುಂಬಯಿಯ ಮಿತ್ರ ವಿಶ್ವನಾಥ್‌ ನನ್ನನ್ನು ಹಿಂದೊಮ್ಮೆ ತಮ್ಮ ವೀರಕೇಸರಿ ಕಲಾವೃಂದ ಸಂಘಕ್ಕೆ ಕರೆದು ಸನ್ಮಾನ ಮಾಡಿದ್ದರು. ಆಗಲೂ ಭಾಷಣದಲ್ಲಿ ಹೇಳಿದ್ದೆ : ಯಾವತ್ತಾದರೊಂದು ದಿನ ನನ್ನ ಕೈಲಿ ರಾಘವೇಂದ್ರ ಖಾಸಗೀಸರು ಬರೆದಂತಹ ಒಂದೇ ಒಂದು ಕತೆ ಬರೆಯಲು ಸಾಧ್ಯವಾದರೆ, ಅವತ್ತು ಅಕ್ಷರ ಕಲಿತಿದ್ದಕ್ಕೆ ಸಾರ್ಥಕವಾಯಿತು ಅಂದುಕೊಳ್ಳುವವನು ನಾನು. ಅಂಥ ಹಿರಿಯರಿರುವಾಗ ಸನ್ಮಾನ ನನಗ್ಯಾಕೆ ಮಾಡ್ತೀರಿ? ಖಾಸನೀಸರನ್ನು ನಮ್ಮ ನಾಡು ಮರೆತಿದೆ. ಈ ಜ್ಞಾನಪೀಠದವರಿಗೆ ಖಾಸನೀಸರಂಥ ಶ್ರೇಷ್ಠರ ನೆನಪೂ ಇಲ್ಲ. ನೀವು ಸನ್ಮಾನ ಮಾಡಿ ಅವರಿಗೊಂದು ಹಮ್ಮಿಣಿ ಕೊಡುವುದಾದರೆ ಹೇಳಿ, ಖಾಸನೀಸರನ್ನು ವಿಮಾನದಲ್ಲಿ ನಾನು ಕರೆದು ಕೊಂಡು ಬರುತ್ತೇನೆ’’ ಅಂದಿದ್ದೆ. ಅದರಂತೆಯೇ ವೀರ ಕೇಸರಿ ಕಲಾವೃಂದದವರು ಮರುವರ್ಷ ಖಾಸನೀಸರಿಗೆ ಸನ್ಮಾನ ಇಟ್ಟುಕೊಂಡಿದ್ದರು. ಕರೆದೊಯ್ಯಲು ನನಗೂ ಆಗಲಿಲ್ಲ. ಖಾಸನೀಯರೂ ಖಾಯಿಲೆ ಬಿದ್ದರು.

ಇಷ್ಟೆಲ್ಲ ಪ್ರೀತಿಸುತ್ತೇನಾದರೂ ನಾನು ಪದೇಪದೆ ಅವರ ಮನೆಗೆ ಹೋಗುವುದಿಲ್ಲ. ಆ ಮನೆಯಲ್ಲಿ ಎಂಥದೋ ಗಾಢ ವಿಷಾದವಿದೆ. ಮಗ ನಿರುಪಯೋಗಿ. ಆರ್ಥಿಕವಾಗಿ ಜರ್ಜರಿತ ಕುಟುಂಬ. ಸ್ವತಃ ಖಾಸನೀಸರು ತಮ್ಮನ್ನು ತಾವು ನತದೃಷ್ಟ ಮನುಷ್ಯ ಅಂತ ಭಾವಿಸುತ್ತಾರೆ. ಅವರು ಜೀವನ ಪರ್ಯಂತ ಪುಸ್ತಕಗಳ ಮಧ್ಯೆಕೂತು ಕಳೆದವರು. ವೃತ್ತಿಯಿಂದ ಲೈಬ್ರೇರಿಯಲ್‌ ಆಗಿದ್ದವರು. ತುಂಬ ಕಡಿಮೆ ಬರೆದಿದ್ದಾರಾದರೂ, ಹಾಗೆ ಬರೆಯಬಲ್ಲವರು ಕನ್ನಡದಲ್ಲಿ ಮತ್ತೊಬ್ಬರಿಲ್ಲ. ‘ಪತ್ರಿಕೆ’ಯ ಎರಡನೇ ವಾರ್ಷಿಕೋತ್ಸವವಿರಬೇಕು. ಆಗಿನ್ನೂ ಖಾಸನೀಸರು ಕೊಂಚಮಟ್ಟಿಗೆ ಓಡಾಡುವ ಸ್ಥಿತಿಯಲ್ಲಿದ್ದರು. ಅವರನ್ನು ಕಾರ್ಯಕ್ರಮಕ್ಕೆ ಕರೆಸಿ ಚಿಕ್ಕದೊಂದು ಮೊತ್ತದ ಚೆಕ್‌ ಒಂದು ಕವರಿನಲ್ಲಿಟ್ಟು ಕೊಟ್ಟು , ವೇದಿಕೆಯ ಮೇಲೆ ಸನ್ಮಾನ ಮಾಡಿದೆ. ವಾಪಸು ಕಾರಿನಲ್ಲಿ ಹೊರಡುವ ಮುನ್ನ ಕವರು ಬಿಚ್ಚಿ ನೋಡಿದರು ಅಂತ ಕಾಣುತ್ತದೆ. ನನ್ನ ಕೈ ಹಿಡಿದು ಬಿಕ್ಕಿಬಿಕ್ಕಿ ಅಳತೊಡಗಿದರು ಆ ಹಿರಿಯ. ನಾನೇನು ಮಾಡೀನಿ ಅಂತ್ಹೇಳಿ ನನಗಿದನ್ನ... ಅಂದರು ಕಂಪಿಸುವ ದನಿಯಲ್ಲಿ.

‘‘ನಿಮ್ಮ ಹಂಗ ಒಂದೇ ಒಂದು ಕಥಿ ಬರದ ದಿನ ನಾನು ಕತೆಗಾರ ಅನ್ನಿಸಿಕೊಂಡದ್ದು ಸಾರ್ಥಕ ಅಂತ ತಿಳಕೋತೀನಿ. ಹೋಗಿ ಬರ್ರಿ’’ ಅಂದು ನಮಸ್ಕರಿಸಿದ್ದೆ.

ಅಂಥ ಖಾಸಗೀಸರು ತುಂಬ ತೊಂದರೆಯಲ್ಲಿದ್ದಾರೆ ಅಂತ ಕೇಳಿದ ತಕ್ಷಣ ನಮ್ಮ ವರದಿಗಾರ ಶ್ರೀನಿವಾಸ ರೈತ ಮತ್ತು ಗೆಳೆಯ ‘ಜೋಗಿ’ಯನ್ನು ವಿನಂತಿಸಿಕೊಂಡು, ಅವರ ಮನೆಗೆ ಹೋಗಿಬನ್ನಿ ಅಂದೆ. ನಾವೊಂದಿಷ್ಟು ಗೆಳೆಯರಿದ್ದೇವೆ, ಖಾಸನೀಸರ ಅಭಿಮಾನಿಗಳು. ನಾವಷ್ಟೇ ಸಾಕು, ಅವರನ್ನು ಇವತ್ತಿನ ತೊಂದರೆಯಿಂದ ಹೊರತರುವುದಕ್ಕೆ. ಆ ಗೆಳೆಯರೊಂದಿಗೆಲ್ಲ ಮಾತನಾಡಿದ ನಂತರ ಜ್ಞಾನಪೀಠಿ ಅನಂತಮೂರ್ತಿಯ ಬಗ್ಗೆ ಯೋಚಿಸಲಿಕ್ಕೆ ಸವುಡು ಸಿಕ್ಕಿತು. ಅವರ ನೆನಪಾದ ಕೂಡಲೆ ಕಣ್ಣೆದುರಿಗೆ ಬಂದದ್ದು, ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭ ಮತ್ತು ಶಾಮರಾಯರ ಕೈಯಲ್ಲಿ ನಾನು ಬೈಸಿಕೊಂಡ ಬೈಗುಳ.

‘‘ಬಂದಿದ್ರೆ ಬಂದಿತ್ತು ಜ್ಞಾನಪೀಠ. ಆದ್ರೆ ಅವನದ್ಯಾಕೆ photo ಹಾಕೀದಿ ಕವರ್‌ ಪೇಜಿಗೆ ? ಅವನು ಬ್ರಾಹ್ಮಣ ದ್ವೇಷಿ ಇದ್ದಾನೆ...’’ ಅಂತ ಚಿಟಿಚಿಟಿ ಚೀರುತ್ತಲೇ ‘ಕರ್ಮವೀರ ’ದ ಸೆಕ್ಷನ್ನಿನೊಳಕ್ಕೆ ಬಂದಿದ್ದರು ಶಾಮರಾಯರು. ಅವತ್ತಿಗೆ ನಾನು ‘ಕರ್ಮವೀರ’ದ ಸಂಪಾದಕ. ಜ್ಞಾನಪೀಠ ಬಂತು ಅಂತ ಗೊತ್ತಾದ ಕೂಡಲೆ ಗೆಳತಿ ಪ್ರತಿಭಾ ನಂದ ಕುಮಾರ್‌ಳನ್ನು ಸಂಪರ್ಕಿಸಿ ‘‘ನಿಮ್ಮ ಗುರುಗಳದೊಂದು ಸಂದರ್ಶನ ಕೊಡಿಸೇ. ಕರ್ಮವೀರಕ್ಕೆ ಬರೀತೀನಿ’’ ಅಂದೆ. ಪ್ರತಿಭಾ ನನ್ನನ್ನು ರಿಚ್ಮಂಡ್‌ ಸರ್ಕಲ್‌ಗೆ ಹತ್ತಿರದಲ್ಲೇ ಇದ್ದ ಅನಂತಮೂರ್ತಿಯವರ ಅಳಿಯನ ಫ್ಲ್ಯಾಟ್‌ಗೆ ಕರೆದೊಯ್ದಳು. ಅವತ್ತು ಅಲ್ಲಿ ಅಣ್ಣ ಜಯಂತ ಕಾಯ್ಕಿಣಿಯೂ ಇದ್ದ. ಗರಿಮುರಿ ಜುಬ್ಬಾದಲ್ಲಿ ಹ್ಯಾಂಡ್‌ಸಮ್‌ ಜ್ಞಾನಪೀಠಿ! ‘‘ ನೀವು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅತಿಥಿಗಳಾಗಿ ಬಂದಾಗ ಶಾಲ್ಮಲಾ ಹಾಸ್ಟೆಲ್‌ನಲ್ಲಿದ್ದ ನನ್ನ ರೂಮಿಗೆ ಬಂದಿದ್ದಿರಿ’’ ಅಂತ ನೆನಪು ಮಾಡಿಕೊಟ್ಟೆ. ಆಮೇಲೆ ಧಾರಾಕಾರ ಸಂದರ್ಶನ ನಡೆಯಿತು. ನನಗಾದರೂ ಅನಂತಮೂರ್ತಿಗಳ ಬಗ್ಗೆ, ಅವರ ಪಾಂಡಿತ್ಯದ ಬಗ್ಗೆ ಗೌರವವಿದೆ. ದೊಡ್ಡ ಎತ್ತರ ತಲುಪಿಕೊಂಡಿರುವ ವ್ಯಕ್ತಿ. ಚಿಕ್ಕವರಿದ್ದಾಗ ಅವರ ಬರಹಗಳನ್ನು ಓದಿ inspire ಆದವರು ನಾವು. ಮೆಚ್ಚುಗೆ, ಟೀಕೆ, ವಿಮರ್ಶೆ-ಎಲ್ಲವನ್ನೂ ಸಮನಾದ ಮನಸ್ಸಿನಿಂದ ಸ್ವೀಕರಿಸಬಲ್ಲ ಸೋಷಲಿಸ್ಟು ಎಂಬ ಕಲ್ಪನೆ ಅವರ ಬಗ್ಗೆ ಇತ್ತು. ಆ ಪ್ರೀತಿಯಿಂದಲೇ ಅವರ ವಿಸ್ತಾರವಾದ ಸಂದರ್ಶನದ ಮಧ್ಯೆ ಒಂದು ಚಿಕ್ಕ box ಬರೆದು ಪ್ರಕಟಿಸಿದ್ದೆ. ‘ಭವ’ ಕಾದಂಬರಿಯ ಕುರಿತಾದ ಸಾಲುಗಳವು. ಬಿಗಿಯಾಗಿ ಬರೆದಿದ್ದಿದ್ದರೆ ಒಂದು ಒಳ್ಳೆಯ ನೀಳ್ಗತೆಯಾಗಬಹುದಾದದ್ದನ್ನು ಅನಂತ ಮೂರ್ತಿ ಕಾದಂಬರಿಗೆ ಹಿಂಜಿದ್ದಾರೆ. ಪುಸ್ತಕಕ್ಕೊಂದು ಸೈಜು ಬರಲಿ ಎಂಬ ಕಾರಣಕ್ಕೆ ಮಧ್ಯೆ ಮಧ್ಯೆ ಬಿಳಿಹಾಳೆ ಹಾಕಿ ಹೆಗ್ಗೋಡಿನ ಸುಬ್ಬಣ್ಣ ಪ್ರಿಂಟು ಮಾಡಿದ್ದಾರೆ’ ಎಂಬರ್ಥದ ಏನೇನೂ ಮೂದಲಿಕೆ ಇಲ್ಲದೆ ಚಿಕ್ಕ box ಅದು.

ಅದರ ಮರುವಾರವೇ ‘ನಯನ’ ಸಭಾಂಗಣದಲ್ಲೊಂದು ಕಾರ್ಯಕ್ರಮವಿತ್ತು. ಅನಂತಮೂರ್ತಿಗಳ ಜೊತೆಗೆ ನಾನೂ ಅತಿಥಿ, ಸಭೆಗೆ ಬಂದ ಕೂಡಲೆ ಅವರಿಗೆ ಎದ್ದು ನಿಂತು ನಮಸ್ಕರಿಸಿದೆ. ಪೀಠಿ ನಗಲಿಲ್ಲ. ‘ಹೋಗಲಿ ಬಿಡು ಪುಣ್ಯವಿಲ್ಲ’ ಅಂದುಕೊಂಡು ಸುಮ್ಮನಾದೆ. ಆ ಮೇಲೆ ಅತಿಥಿಗಳನ್ನೆಲ್ಲ ವೇದಿಕೆಗ ಕರೆಯತೊಡಗಿದರು. ಅನಂತಮೂರ್ತಿಯವರ ಜೊತೆಗೆ ನಾನೂ ವೇದಿಕೆಯ ಮೆಟ್ಟಿಲೇರತೊಡದಿದೆ. ರವೀ,ಏನಯ್ಯ ನೀನು ಬರ್ದಿರೋದೂ? You are an evil person. ಕೆಟ್ಟ ಮನುಷ್ಯ ನೀನು. ಹಾಗಂತ ನಾನು ಎಲ್ರಿಗೂ ಹೇಳ್ತೀನಿ.. ಮ್‌!’ ಅಂತ ಮೇಲುದನಿಯಲ್ಲೇ ಗರ್ಜಿಸತೊಡಗಿತಲ್ಲ ಪೀಠಿ? ನೀನು ಕೆಟ್ಟವನು ಅಂತ ಎಲ್ರಿಗೂ ಹೇಳ್ತೀನಿ ನಾನು ಎಂಬ ಮಾತಿನಲ್ಲಿ ನಿನ್ನ future ಏನಾಗುತ್ತೋ ನೋಡ್ಕೋ! ಎಂಬ ಬೆದರಿಕೆ. ನಿನ್ನನ್ನು ಸಾಹಿತ್ಯ ಪ್ರಪಂಚದಲ್ಲಿ, ಪತ್ರಿಕೋದ್ಯಮದ ಜಗತ್ತಿನಲ್ಲಿ ಏನು ಬೇಕಾದರೂ ಮಾಡಿಬಿಡಬಲ್ಲೆ ಎಂಬ ಎಚ್ಚರಿಕೆ.

ನನಗೆ ಹೇಸಿಗೆ ಅನ್ನಿಸಿತು. ಸಿಟ್ಟು ಬಂದರೆ ‘ಒದೀತೀನ್ನೋಡು’ ಅನ್ನುವವನಿದ್ದಾನಲ್ಲ? ನನಗವನು ಸಹಜ ಮನುಷ್ಯ ಅನ್ನಿಸುತ್ತಾನೆ. ಆದರೆ ಈ ಪೀಠಿಗೆ ಸಿಟ್ಟು ಬಂದಿದೆ. ಗುಡುಗುತ್ತಿಲ್ಲ. ‘ನಾಶ ಮಾಡ್ತೀನ್ನೋಡು’ ಎಂಬ ಮೆಸೇಜು convey ಮಾಡುತ್ತಿದ್ದಾರೆ. ಆದರೆ ಆ ಮಾತು ಬಾಯಲ್ಲಿ ಅನ್ನುತ್ತಿಲ್ಲ. ತುಂಬ ಬುದ್ಧಿವಂತ ಕ್ರೌರ್ಯವಿರುವವರು ಮಾತ್ರ ಹೀಗೆ ವರ್ತಿಸುತ್ತಾರೆ ಅಂದುಕೊಂಡೆ. ಆ ಮೇಲೆ ನನಗೆ ಅವರೊಂದಿಗೆ ಮಾತಾಡಬೇಕು ಅನ್ನಿಸಲಿಲ್ಲ.

ಅದಾದ ಮೇಲೆ ನಾಲ್ಕಾರು ಬಾರಿ ಅನಂತಮೂರ್ತಿ ಸಿಕ್ಕಿದ್ದಾರೆ. ಅವರೂ ಹಿಂದಿನದನ್ನು ನೆನೆಸಿಕೊಂಡಿಲ್ಲ. ನಾನೂ ನೆನಪಿಸಿರಲಿಲ್ಲ. ನನ್ನ ಪತ್ರಿಕೆಯ ಮೊದಲ ವಾರ್ಷಿಕೋತ್ಸವಕ್ಕೂ ಅತಿಥಿಯಾಗಿ ಬಂದಿದ್ದರು. ಅವರ ಸುತ್ತ ಡಾಲರ್ಸ್‌ ಕಾಲನಿಯ ಮನೆಯಂಥ ಹಗರಣಗಳಾದಾಗ ಅವರೊಂದಿಗೆ ಮಾತನಾಡಿದ್ದೆ. ಡಿ.ಆರ್‌.ನಾಗರಾಜ್‌ ಮನೆಯಲ್ಲಿ ಸೇರಿದಾಗ ಪಕ್ಕದಲ್ಲೇ ಕೂತು ಗುಂಡು ಹಾಕಿದ್ದೆ. ಅದೇನೇ ಇದ್ದರೂ ಅನಂತಮೂರ್ತಿ ತೀವ್ರವಾದ ದ್ವೇಷಕ್ಕೆ ಅರ್ಹರು ಅಂತ ಯಾವತ್ತೂ ನನಗೆ ಅನ್ನಿಸಿಲ್ಲ. ಕೆಲವು ವಿಷಯಗಳಲ್ಲಿ ಹಿಂದೆ ಅಡಿಗರನ್ನ, ಮೊನ್ನೆ ಮೊನ್ನೆ ಗಿರೀಶ್‌ ಕಾರ್ನಾಡರನ್ನ ತಾತ್ವಿಕವಾಗಿ ವಿರೋಧಿಸಿದಂತೆಯೇ ನನ್ನ ಬರಹಗಳಲ್ಲಿ ಅನಂತಮೂರ್ತಿಯವರನ್ನೂ ವಿರೋಧಿಸಿದ್ದೇನೆ. ಕೃಷ್ಣರೊಂದಿಗೆ ಪಾದಯಾತ್ರೆಗೆ ಹೊರಟಾಗ ‘ಇದು ಬೇಕಿತ್ತಾ ಅನಂತಮೂರ್ತಿಗಳಿಗೆ? ಅಂತ ಸಿಡಿಮಿಡಿ ಗೊಂಡಿದ್ದೇನೆ. ಖರ್ಗೆ ಬಗ್ಗೆ ಇಲ್ಲದ ಪ್ರೀತಿ ತೋರಿಸಲು ಅವರು ಮುಂದಾದಾಗ ಸ್ಪಷ್ಟವಾಗಿ ಖಂಡಿಸಿದ್ದೇನೆ. ಎಲ್ಲ ನೋಡಿದ ನಂತರ ಅನಂತಮೂರ್ತಿ ತೀರ ತಮ್ಮ ಸುತ್ತಮುತ್ತ ಬದುಕುವ ಮನುಷ್ಯ ಅನ್ನಿಸಿ ಅವರನ್ನು ignore ಮಾಡಿದ್ದೇನೆ.

ಇಷ್ಟಾದರೂ ಪ್ರತಿಭಾ ಸಿಕ್ಕಾಗಲೆಲ್ಲ ‘ಹೆಂಗಿದ್ದಾರೇ ನಿನ್ನ ಗುರುಗಳೂ ?’ ಅಂತ ವಿಚಾರಿಸಿಕೊಳ್ಳುತ್ತಿದ್ದೆ. ಅವಳ ಒಂದು ಛಾಯೆ ಕಂಡಂತಾಗಿತ್ತು. ಪ್ರತಿಭಾ ಒಮ್ಮೆ ಬೆಂಕಿ ಅಪಘಾತದಲ್ಲಿ ಕೈ -ಮೈ ಸುಟ್ಟುಕೊಂಡಿದ್ದಳು. ಅವಳು ಆ ಅಪಘಾತದ ಬಗ್ಗೆ ತುಂಬ ಬರೆದಿದ್ದಾಳೆ. ಒಬ್ಬ ಬುದ್ಧಿಜೀವಿ ಮಾತ್ರ ‘ನಿಂಗೆ ಎಲ್ಲೆಲ್ಲಿ ಸುಟ್ಟಿದೆ? ಅದೂ ಸುಟ್ಟು ಹೋಗಿದೆಯಾ?’ ಅಂತ ಕೇಳಿದ್ದರು ಎಂದು ನೋವಿನಿಂದ ಬರೆದುಕೊಂಡಿದ್ದಾಳೆ. ಒಂದು ಸಲ ಸಿಕ್ಕಾಗ ‘ಯಾರೇ ಹಾಗೆ ಕೇಳಿದ್ದು, stupid fellow?’ ಅಂತ ಸಿಡಿಮಿಡಿಗೊಂಡಿದ್ದೆ. ಅವತ್ತು ಪ್ರತಿಭಾ ಕಣ್ಣೀರಿಟ್ಟಿದ್ದಳು. ಅಂಥ ಮಾತನ್ನಾಡಬಲ್ಲ ಮನುಷ್ಯ ಒಳ್ಳೆಯವನಾಗಿರಲಿಕ್ಕೆ ಹೇಗೆ ಸಾಧ್ಯ ಅನ್ನಿಸಿತ್ತು. ಅಸಹ್ಯಿಸಿಕೊಂಡು ನಾನು ಸುಮ್ಮನಾಗಿಬಿಟ್ಟೆ. ಯಾರ ಬಗ್ಗೆಯಾದರೂ ತುಂಬ ಬೇಸರವಾದಾಗ, ಅಸಹ್ಯವಾದಾಗ ಅವರ ಬಗ್ಗೆ ಯೋಚಿಸುವುದನ್ನು ಬಿಟ್ಟು ನಾನು ಸುಮ್ಮನಾಗಿಬಿಡುತ್ತೇನೆ.

ಅನಂತಮೂರ್ತಿಯವರು ಇಲ್ಲೆಲ್ಲೋ ಬೆಂಗಳೂರಿನಲ್ಲಿದ್ದಾರೆ ಎಂಬುದನ್ನೇ ಮರೆತವನಂತೆ ಸುಮ್ಮನಾಗಿದ್ದಾಗಲೇ ಪ್ರಜಾವಾಣಿಯ ಅಂಕಣವೊಂದರಲ್ಲಿ ಜ್ಞಾನಪೀಠಿಯ ಅಣಿಮುತ್ತು ಓದಿದೆ. ಕನ್ನಡ ಸಂವೇದನೆಯನ್ನು ನಾಶ ಮಾಡಲು ನಾವು ಕನ್ನಡದಲ್ಲಿ ಎಲ್ಲವನ್ನೂ ಮಾಡುತ್ತಿದ್ದೇವೆ. ಉದಾಹರಣೆಗೆ ಈ ಟೀವಿಯಲ್ಲಿ ಪ್ರಸಾರವಾಗುವ ಕ್ರೆೃಂ ಡೈರಿಯನ್ನೇ ತೆಗೆದುಕೊಳ್ಳಿ. ಈ ಕಾರ್ಯಕ್ರಮವನ್ನು ನಿಷೇಧಿಸಬೇಕು. ನಮ್ಮ ಶ್ರೇಷ್ಠ ಸಾಹಿತ್ಯ ಈ ಹಿಂದೆ ಮಾಡಿದ್ದನ್ನೆಲ್ಲ ಇದು ಅಳಿಸಿ ಹಾಕುತ್ತದೆ’ ಅಂತ ಅನಂತ ಮೂರ್ತಿ ಮಾತನಾಡಿದ್ದು quote ಆಗಿದೆ.

You are an evil person. ಹಾಗಂತ ನಾನು ಎಲ್ರಿಗೂ ಹೇಳ್ತೀನಿ ಅಂತ ಅವತ್ತು ಅಂದದ್ದನ್ನ ಅನಂತಮೂರ್ತಿ ಇವತ್ತಿಗೂ ನೆನಪಿಟ್ಟುಕೊಂಡಿದ್ದಾರಾ- ಅನ್ನಿ ಸಿತು. ಅಲ್ಲ , ಕ್ರೆೃಂ ಸಂಬಂಧಿ ಕಾರ್ಯಕ್ರಮಗಳು ಭಾರತದ ಅಷ್ಟೂ ಛಾನಲ್‌ಗಳಲ್ಲಿ ಧಾರಾಕಾರವಾಗಿ ಬರುತ್ತಿವೆ. ಸಾಹಿತ್ಯ ಸಾಧಿಸಿದುದನ್ನು ಇಪ್ಪತ್ನಾಲ್ಕು ನಿಮಿಷದ ಒಂದು ಟೀವಿ ಕಾರ್ಯಕ್ರಮ ನಾಶ ಮಾಡಿಬಿಡುತ್ತದೆ ಅಂದುಕೊಳ್ಳುವ ಮನುಷ್ಯನಿಗೆ ಏನನ್ನಬೇಕು? ‘ಎಫ್‌ ಟೀವಿ ಬಂದು ಹೆಂಗಸರ ಸೀರೆ ಕೆಡಿಸಿತು’ ಅಂತ ಯಾವತ್ತೂ ಮಾತಾಡಲಿಲ್ಲ ಅನಂತಮೂರ್ತಿ. ಉದಯ ಠೀವಿ’ಯ ದೈವ ಪ್ರೇರಿತ ಖನ್ನಡದ ಬಗ್ಗೆ ಚಕಾರವೆತ್ತಲಿಲ್ಲ. ಕೆಟ್ಟ ಪದ್ಯ ಬರೆದು ಅಕಾಡೆಮಿ ಅವಾರ್ಡು ತಗೊಂಡವರನ್ನ ಟೀಕಿಸಲಿಲ್ಲ. ಕೊಟ್ಟವರನ್ನು ಗದರಿಕೊಳ್ಳಲೂ ಇಲ್ಲ. ಇದ್ದಕ್ಕಿದ್ದಂತೆ ಕ್ರೆೃಂಡೈರಿಯನ್ನು ನಿಷೇಧಿಸಬೇಕು ಎಂಬ ಮಾತು ಪೀಠದಿಂದ ಹೊರಬಂದದ್ದೇಕೆ?

Funny fellow ಅನ್ನಿಸಿ ಇಂದ್ರಜಿತ್‌ಗೆ ಫೋನು ಮಾಡಿ ಹೇಳೋಣವೆಂದುಕೊಂಡೆ. ‘‘ ನಿನ್ನ ಮೊನಾಲಿಸಾ ಸಿನೆಮಾ ತೋರಿಸಬೇಡ ಮಾರಾಯಾ ಜ್ಞಾನಿಗೆ. ಇಷ್ಟು ವರ್ಷ ನಾನು ನಕ್ಕಿದ್ದು, ಹಲ್ಕಿಸಿದಿದ್ದು, ಗಿಂಜಿದ್ದು, ಹಲ್‌ ತೋರಿಸಿದ್ದು ಎಲ್ಲ ನಾಶವಾಗಿ ಹೋಗಿದೆ. ಮೊನಾಲಿಸಾ ನಗೆ ನಂಗೂ ಬಂದು ಬಿಟ್ಟಿದೆ!’’ ಅಂದಾರೂ ಅಂತ .

ಖಾಸನೀಸರು ಫೋನ್‌ ಮಾಡಿಸಿದ್ದು ನೆನಪಾಗಿ,ಜ್ಞಾನ ಪೀಠಿಯ ಬಗ್ಗೆ ಮೊದಲಿನದೇ ಅಸಡ್ಡೆ ಮರುಕಳಿಸಿ ರಾಜಾಜಿನಗರಕ್ಕೆ ಹೊರಟೆ, ಖಾಸನೀಸರ ಮನೆಗೆ.

(ಸ್ನೇಹಸೇತು: ಹಾಯ್‌ ಬೆಂಗಳೂರ್‌!)

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X