ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಡಿಯುವ ಮೊದಲೇ ಕೂಗುತ್ತೇವೆ: ಮನಸೇ, ರಿಲ್ಯಾಕ್ಸ್‌ ಪ್ಲೀಸ್‌!

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

‘ಹೇಗೆ ದಿನಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ಶಿಷ್ಯನೊಬ್ಬ ಸರಿಯಾದ ಮಹಾಗುರುವೊಬ್ಬನನ್ನು ಹುಡುಕುತ್ತಿರುತ್ತಾನೋ, ಹಾಗೆಯೇ ಗುರುವು ಕೂಡ ಒಬ್ಬ ಶಿಷ್ಯನಿಗಾಗಿ ನಿರಂತರವಾಗಿ ಹುಡುಕುತ್ತಿರುತ್ತಾನೆ’ ಎಂಬುದು ಅಘೋರಿಗಳು ಗಾಢವಾಗಿ ನಂಬುವ ಸಿದ್ಧಾಂತಗಳ ಪೈಕಿ ಒಂದು. ಶಿಷ್ಯನಿಗೆ ಕಲಿಯಬೇಕೆಂಬ ತಪನೆ, ತಹತಹ ಇರುವಂತೆಯೇ ಗುರುವಿಗೂ ಕೂಡ ತಾನು ನೆಲಕ್ಕೆ ಒರಗುವ ಮುನ್ನ ತಾನು ಕಲಿತದ್ದನ್ನ, ತಾನು ಗ್ರಹಿಸಿದ್ದನ್ನ ಇನ್ನೊಬ್ಬನಿಗೆ ಅರುಹಿ ಕಣ್ಮುಚ್ಚಬೇಕೆಂದು ತುಡಿತ ಇರುತ್ತದೆ. ಯಾವನು ಕೂಡ ತನ್ನ ವಿದ್ಯೆ ತನ್ನೊಂದಿಗೇ ಮುಗಿದು ಹೋಗಲಿ ಅಂತ ಇಷ್ಟ ಪಡುವುದಿಲ್ಲ. ಒಬ್ಬ ಶಿಷ್ಯನಿಗಾಗಿ ಆತ ಅರಸುತ್ತಲೇ ಇರುತ್ತಾನೆ. ‘’

ಆದರೆ, ನಮಗೇಕೆ ಅಂಥ ಗುರುಗಳು ಸಿಗುವುದಿಲ್ಲ? ನಾವು ಸರಿಯಾಗಿ ಅರಸುವುದಿಲ್ಲವೋ? ಕಣ್ಣಿಗೆ ಬಿದ್ದರೂ ಅವರನ್ನು ನಾವು ಗುರುತಿಸಿವುದಿಲ್ಲವೋ? ಈ ಪ್ರಶ್ನೆ ನನ್ನನ್ನು ಸದಾ ಕಾಡಿದೆ. ಹಿಮಾಲಯದ ತಪ್ಪಲಿನ ಸುತ್ತಲೂ ಹೆಜ್ಜೆಗೊಬ್ಬ fake ಗುರುವು ಸಿಗುತ್ತಾನೆ. ಸಿನೆಮಾ ಪ್ರಪಂಚದಲ್ಲಿ ಬೀದಿಗೊಬ್ಬ ಪೆದ್ದ ನಿರ್ದೇಶಕ ಇದಿರಾಗುತ್ತಾನೆ. ಬರೀ ಬದ್ಧಿವಂತರೇ ತುಂಬಿರುವ software ಪ್ರಪಂಚಕ್ಕೆ ಕಾಲಿಟ್ಟು ನೋಡಿ? ಅಲ್ಲಿ ಎಲ್ಲರೂ ನೂರಕ್ಕೆ 99 ಪರ್ಸೆಂಟು ಮಾರ್ಕು ತಂದುಕೊಂಡ ಅಪರ ಬುದ್ಧಿವಂತರೇ. ಸಂಬಳಗಳನ್ನು ಲಕ್ಷಗಳಲ್ಲಿ ಎಣಿಸುತ್ತಾರೆ. ಅವರೆಲ್ಲರೂ ನಿಜಕ್ಕೂ creative ಆಗಿರೋದೇ ಹೌದಾದರೆ ಇನ್ನೊಬ್ಬ ಬಿಲ್‌ಗೇಟ್ಸ್‌ ಯಾಕಿಲ್ಲ? ಇನ್ನೊಬ್ಬ ಮುರ್ಡೋಕ್‌ ಯಾಕಿಲ್ಲ? ಪ್ರತಿ ಪತ್ರಕರ್ತನೂ ಸಂಜೆಯ ಸತ್ಯನಾರಾಯಣ ಪೂಜೆಗೆ ಕುಳಿತಾಗ ಅಸಲಿ ಅರುಣ್‌ ಶೌರಿಯ ತಲೆಮೇಲೆ ಹೊಡೆದಂತೆಯೇ ಮಾತನಾಡುತ್ತಿರುತ್ತಾನೆ. ಬೆಳಗ್ಗೆ ಎದ್ದು ಅವನು ಕೆಲಸ ಮಾಡುವ ಪತ್ರಿಕೆ ಚ್ಚಿ ನೋಡಿದರೆ, ಉಲ್ಲಾಸಪಟ್ಟು ಓದಬಹುದಾದ ಒಂದೇ ಒಂದು ಸುದ್ದಿ ಅಥವಾ ಲೇಖನವಿರುವುದಿಲ್ಲ.

Do not relax until you reach the goal!ಹಾಗಾದರೆ ನಾವೆಲ್ಲ ನಮಗೇ ಗೊತ್ತಿಲ್ಲದೆ fake ಫೇಕಾಗಿ ಬದುಕುತ್ತಿದ್ದೆವಾ? ನೀವು ದಿನಪತ್ರಿಕೆಗಳ ಜಾಹಿರಾತುಗಳನೇ ಗಮನಿಸಿ. ಏನಿಲ್ಲವೆಂದರೂ ನಾಲ್ಕು ಜಾಹಿರಾತುಗಳು personality development courseಗಳ ಬಗ್ಗೆ ಇರುತ್ತವೆ. ನೀವು ಒಂದೇ ಒಂದು ಕೋರ್ಸು ಸೇರಿಕೊಂಡರೆ ಸಾಕು, ನಿಮ್ಮ ವ್ಯಕ್ತಿತ್ವವನ್ನೇ ಬದಲಾಗಿ ಮುಂದಿನ ಸೆಕೆಂಡ್‌ ಸ್ಯಾಟರ್‌ಡೇ ಹೊತ್ತಿಗೆ ನೀವು ಜಾನ್‌ ಎಫ್‌. ಕೆನಡಿ ಥರಾ ಯೋಚಿಸೋಕೆ, ವರ್ತಿಸೋಕೆ ಶುರು ಮಾಡ್ತೀರಿ. ಸಕ್ಸಸ್‌ ಅನ್ನೋದು ವಿಜಯದ ಐದನೇ ಮೆಟ್ಟಿಲಾಗಿ ಬಂದು ನಿಮ್ಮ ಬೂಟಿನಡಿ ಕಂಪಿಸುತ್ತ ಮಲಗಿರುತ್ತದೆ ಅಂತೆಲ್ಲ ಹೇಳಿಕೊಳ್ಳುತ್ತಿರುತ್ತಾರೆ. ಹೋಗಿ ನೋಡಿದರೆ, ಅದು ಫೇಕುಗಳ ಪೈಕಿಯೇ ಅತಿದೊಡ್ಡ ಫೇಕು! ಬದುಕಿನ ಎಲ್ಲ ಪ್ರಯತ್ನಗಳಲ್ಲೂ ಸೋತು, ಲಗಾಟಿ ಹೊಡೆಯುತ್ತಿರುವವನೊಬ್ಬ ಪರ್ಸನಾಲಿಟಿ ಡೆವಪ್‌ಮೆಂಟ್‌ನ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿರುತ್ತಾನೆ.

ಯಾಕೆ ಹೀಗೆ?

ಹುಡುಗ ಬುದ್ಧಿವಂತ. ಆದರೆ ಓದೋದಿಲ್ಲ. ಅವನಿಗೆ ಎಲ್ಲಾ ಬರುತ್ತೆ ಕಣ್ರೀ, ಆದರೆ ಪರೀಕ್ಷೆ ಬರೆಯುವಾಗ ಅದೇನಾಗುತ್ತೋ ಏನೋ: ತುಂಬ ಅವಸರ ಮಾಡಿಕೊಂಡುಬಿಡುತ್ತಾನೆ. ಅಯ್ಯೋ ಬಿಡಿ, ಅವನಿಗಿರೋ ಐಡಿಯಾಗಳನ್ನ ಅವನು ನಿಜವಾಗ್ಯೂ practical ಆಗಿ ಜಾರಿಗೆ ತಂದಿದ್ದೇ ಆದ್ರೆ, ಇಷ್ಟು ಹೊತ್ತಿಗೆ ಏನೇನಾಗಿಬಿಡ್ತಿದ್ನೋ... ಈ ತೆರನಾದ ಮಾತುಗಳನ್ನು ನೀವು ಅವರಿವರ ಬಗ್ಗೆ ಇನ್ಯಾರೋ ಆಡಿರುವುದು ಕೇಳಿರುತ್ತೀರಿ. ನೀವೂ ಆಡಿರುತ್ತೀರಿ. ಆದರೆ ನಿಜ ಹೇಳಿ: ಆ ಬಗ್ಗೆ ಗಂಭೀರವಾಗಿ ಯೋಚಿಸಿದ್ದೀರಾ?

ಬುದ್ಧಿವಂತ ಹುಡುಗ ಯಾಕೆ ಓದಲ್ಲ? ಎಲ್ಲಾ ಬಂದರೂ ಪರೀಕ್ಷೇಲಿ ಯಾಕೆ ಅವಸರ ಮಾಡಿಕೊಂಡು ಬಿಡುತ್ತಾನೆ? ಇರೋ ideaಗಳನ್ನೇ practical ಆಗಿ ಜಾರಿಗೆ ತರೋದಿಲ್ಲ?

ಯಾಕೆ ಅಂದ್ರೆ, ಅವನ ಬುದ್ಧಿವಂತಿಕೆ ಕೂಡ fake ಆಗಿರುತ್ತದೆ. ಅವನ ಐಡಿಯಾಗಳಿಗೆ ಗಟ್ಟಿಯಾದ ತಳಹದಿಯೇ ಇರುವುದಿಲ್ಲ. ಎಲ್ಲಾ ಬರುತ್ತೆ ಅಂತ ತನ್ನನ್ನು ಸೇರಿಸಿ ಎಲ್ಲರಿಗೂ ಹೇಳಿರುತ್ತಾನಾದರೂ, ಅವನಿಗೆ ತುಂಬ ಸರಿಯಾಗಿ, ತುಂಬ ಚೆನ್ನಾಗಿ ಏನೂ ಬರುವುದಿಲ್ಲ. He is fake ಇಂಥದ್ದೊಂದು ಫೇಕುತನ ಯಾಕೆ ನಮ್ಮಲ್ಲಿ ಮನೆಮಾಡುತ್ತದೆ? ಯೋಚಿಸಿದ್ದೀರಾ?

ನೀವು ನಿಮ್ಮ ಸುತ್ತಲಿನವರನ್ನೇ ಗಮನಿಸಿ ನೋಡಿ. ನಿಮ್ಮ ಮಗ ತುಂಬ ಬುದ್ಧಿವಂತ ಅಂತ ನೀವು assume ಮಾಡಿಕೊಂಡಿರುತ್ತೀರೇ ಹೊರತು, ಅವನು ಆಗಿಂದಾಗ್ಗೆ ತನ್ನ ಬುದ್ಧಿವಂತಿಕೇನ update ಮಾಡುತ್ತಿಲ್ಲ, ಬುದ್ಧಿಗೆ ಸಾಣೆ ಹಿಡಿಯುತ್ತಿಲ್ಲ ಎಂಬುದನ್ನು ಗಮನಿಸಿರುವುದಿಲ್ಲ. ಅವನ ಬುದ್ಧಿವಂತಿಕೆ ಎಂಟನೇ ಕ್ಲಾಸಿನಲ್ಲಿದ್ದಾಗ, ಅದಕ್ಕೆಷ್ಟು ಬೇಕೋ ಅಷ್ಟು ಮಾತ್ರ ಇತ್ತು. ಆಮೇಲೆ ಸಾಣೆ ಹಿಡಿಯಲಿಲ್ಲ. ನಿಮಗದು ಗೊತ್ತೇ ಆಗಲಿಲ್ಲ. ಮುಖ್ಯವಾಗಿ, ಒಬ್ಬ ಹುಡುಗ ಒಂದು ವರ್ಷದಲ್ಲಿ ಎಷ್ಟು holidayಗಳಿಗೆ ಅರ್ಹ ಅಂತ ನಾವು ಯೋಚಿಸುವುದೇ ಇಲ್ಲ. ಬೇಸಿಗೆ ರಜೆ, ದಸರೆ ರಜೆ, ಕ್ರಿಸ್ಮಸ್‌ ಹಾಲಿಡೇಸ್‌, ವೀಕೆಂಡ್‌ ರಜೆ, ರಾಷ್ಟ್ರೀಯ ರಜೆ, ರೆಸ್ಟ್ರಿಕ್ಟೆಡ್‌ ಹಾಲಿಡೇಸ್‌- ಹೀಗೆ ವರ್ಷವಿಡೀ ರಜೆಗಳಲ್ಲಿ ತೊಡಗಿಹೋಗುವ ಹುಡುಗ ಓದಿದ್ದೇ ಕಡಿಮೆ, ಸಾಣೆ ಹಿಡಿದದ್ದೇ ಅಪರೂಪ. ಹೋಗಲಿ, ಅವನು ಓದುವ, ಶ್ರಮಿಸುವ ಗಂಟೆಗಳನ್ನಾದರೂ ನಾವು ಲೆಕ್ಕ ಹಾಕಿರುತ್ತೀವಾ? ಅಷ್ಟು ಮಾತ್ರದ ಗಂಟೆಗಳಲ್ಲಾದರೂ ಅವನು ಶ್ರಮಿಸುತ್ತಿದ್ದಾನಾ ಇಲ್ಲವಾ ಅಂತ ಚೆಕ್‌ ಮಾಡಿರುತ್ತೇವಾ? ಖಂಡಿತಾ ಇಲ್ಲ. ಹುಡುಗ ಬುದ್ಧಿವಂತ, ಆದರೆ ಕೊಂಚ ಆಟದ ಕಡೆ ಗಮನ ಜಾಸ್ತಿ ಅಂತ ನಮಗೆ ನಾವೇ ಸಮಾಧಾನ ಹೇಳಿಕೊಳ್ಳುತ್ತೇವೆ. ಹುಡುಗ ನಿಜಕ್ಕೂ ಯಾವತ್ತಿನ ತನಕ ಬುದ್ಧಿವಂತನಾಗಿದ್ದ ಮತ್ತು ಯಾವತ್ತಿನಿಂದ ಅವನ ದಡ್ಡತನ ಆರಂಭವಾಯಿತು ಅನ್ನೋದು ನಮ್ಮ ಗಮನಕ್ಕೆ ಬಂದೇ ಇರುವುದಿಲ್ಲ.

ಈ ಮಾತು, ತುಂಬ ಐಡಿಯಗಳಿದ್ದು, ಅದ್ಯಾವುದನ್ನೂ ಜಾರಿಗೆ ತರದ ಮಹನೀಯರ ಬಗ್ಗೆಯೂ ಹೇಳಬಹುದು. ಒಬ್ಬನಲ್ಲಿ ತುಂಬ ಐಡಿಯಾಗಳಿವೆ ಅಂದು ಕೊಂಡಿರುತ್ತೇವೆ. ಅವುಗಳನ್ನು ಅವನ್ಯಾಕೆ ಜಾರಿಗೆ ತರುವುದಿಲ್ಲ ಅಂತ ಯೋಚಿಸಿರುವುದಿಲ್ಲ. ತೀರ ಪರೀಕ್ಷಿಸಿ ನೊಡಿದರೆ ಅವನ ಐಡಿಯಾಗಳೇ ಫೇಕು! ಅಥವಾ ಎಲ್ಲಿಂದಲೋ ಕದ್ದಂತಹವು. ಅಥವಾ ಜಾರಿಗೆ ತರಲಾಗದಂಥವು. ಯಾಕಯ್ಯ ನೀನು ಅವುಗಳನ್ನು ಜಾರಿಗೆ ತರುತ್ತಿಲ್ಲ? ಅಂತ ಕೇಳಿ ನೋಡಿ? ಅದಕ್ಕೆಲ್ಲ ಎಲ್ಲಿದೆ ಎಂಕರೇಜ್‌ಮೆಂಟು? ಅಮೆರಿಕದಲ್ಲಿ ಹುಟ್ಟಬೇಕಿತ್ತು ನಾನು ಅಂತಾನೆ. ಅಥವಾ ತಿಪ್ಪರಲಾಗ ಹಾಕಿದರೂ ಕೈಗೆ ಸಿಗದಂತಹ ವಸ್ತುಗಳು ಬೇಕು ಅಂತಾನೆ. ಆ ಐಡಿಯಾ ಜಾರಿಗೆ ತರಬೇಕು ಅಂದ್ರೆ, ಹುಲೀದು ಹಾರ್ಟು, ಸಿಂಹದ ಕಿಡ್ನಿ ಬೇಕು, ತಂದ್ಕೊಡ್ತೀಯಾ ಅಂತಾನೆ . ಒಟ್ಟಿನಲ್ಲಿ ಅವನು ಯಾವುದನ್ನೂ ಜಾರಿಗೆ ತರಲೊಲ್ಲ.

ಸರಿಯಾಗಿ ಗಮನವಿಟ್ಟು ನೋಡಿದರೆ, ಇಂಥವರಿಗೆಲ್ಲ ಅಮರಿಕೊಂಡಿರುವುದು holiday ರೋಗ! ಕೆಲವರು ಅದ್ಯಾವ ಪರಿ ರಜೆಗಳನ್ನು ಅನುಬವಿಸುತ್ತಾರೆ ಅಂದರೆ, ಅವರ ರಾಶಿ ರಾಶಿ ಬಿಡುವಿನ ದಿನಗಳ ಮಧ್ಯೆ ಆಗೊಂದು ಈಗೊಂದು working day ಅಂತ ಬಂದಿರುತ್ತದೆ. ಸಾಣೆ ಹಿಡಿಯುವ ಬುದ್ಧಿವಂತಿಕೆ, ಜಾರಿಗೆ ತರಲಾಗದ ಐಡಿಯಾಗಳು ಮತ್ತು ನಿರಂತರವಾಗಿ enjoy ಮಾಡುವ ಹಾಲಿಡೆಗಳು! ಅಂಥವರನ್ನು ಉದ್ಧರಿಸುವವರ್ಯಾರು?

ನಮ್ಮಲ್ಲಿ ಅನೇಕರು ದಣಿಯುವುದಕ್ಕೆ ಮುಂಚೆಯೇ relax ಆಗುತ್ತಾರೆ. ಏನೇನೂ ಮಾಡದೆ ಇದ್ದು ಬಿಡುವುದನ್ನು ರೂಢಿ ಮಾಡಿಕೊಳ್ಲುತ್ತಾರೆ. ಅವರ ಕ್ಯಾಲೆಂಡರುಗಳನ್ನ, ಡೈರಿಗಳನ್ನ ತಿರುವಿ ನೋಡಿದರೆ ಸಾಲು ಸಾಲು ಬರ್ತ್‌ಡೇಗಳು, ಪಾರ್ಟಿಗಳು, ಔಟಿಂಗ್‌ಗಳು, ಹಾಲಿಡೇ ರೆಸಾರ್ಟ್‌ಗಳ ಪಟ್ಟಿಗಳು- ಬರೀ ಇವೇ ತುಂಬಿ ಹೋಗಿರುತ್ತವೆ. ನಿಮಗೆ ಎಲ್ಲಾದರೂ ಮೈಕೆಲ್‌ ಜಾಕ್ಸನ್‌ನ "Making of Dangerous" ಎಂಬ ಸಿ.ಡಿ. ಸಿಕ್ಕರೆ ಖಂಡಿತ ನೋಡಿ. ಒಂದು ರಾತ್ರಿ ಅದನ್ನು ನಾನು ಗೆಳೆಯ ಮಂಡ್ಯ ರಮೇಶ್‌ಗೆ ಹಾಕಿ ತೋರಿಸಿದ್ದೆ. ಭಾವುಕ ಮಿತ್ರ ರಮೇಶ್‌ ಅದನ್ನು ನೋಡಿ ಕಣ್ನೀರು ಕೆಡವಿಕೊಂಡುಬಿಟ್ಟಿದ್ದ. ಅದರಲ್ಲಿ ಜಾಕ್ಸನ್‌ನನ್ನು ಆತನ ಪ್ರೋಗ್ರಾಂಗಳಲ್ಲಿ ಲಕ್ಷಾಂತರ ಮಂದಿ ಹುಚ್ಚೆದ್ದು ಆರಾಧಿಸುವುದನ್ನು ತೋರಿಸುತ್ತಾರೆ. ಮೈಕೇಲ್‌ ಅನುಭವಿಸುವ ಬದುಕಿನ ಐಷಾರಾಮಿಗಳನ್ನು ತೋರಿಸುತ್ತಾರೆ. ಅವನಿಗೆ ಬಂದ ಅವಾರ್ಡುಗಳನ್ನು ತೋರಿಸುತ್ತಾರೆ. ಎಲ್ಲ ತೊರಿಸಿಯಾದ ಮೇಲೆ ಜಾಕ್ಸನ್‌ ಮಾತನಾಡುತ್ತಾನೆ:

You know ? ನಾನು ಕ್ರಿಸ್ಮಸ್‌ ಹಬ್ಬ ಆಚರಿಸಿಕೊಳ್ಳಲಿಲ್ಲ. ಬರ್ತ್‌ ಡೇಗಳು ಮರೆತು ಹೋದವು. ಅಸಲು ನಾನು ವಿಶ್ರಾಂತಿ ಪಡೆಯಲೇ ಇಲ್ಲ. ನೀವೆಲ್ಲ ನಿದ್ದೆ ಮಾಡುತ್ತಿದ್ದಾಗ ನಾನು ಹೊಸ ರಾಗ ಹುಡುಕಿಕೊಂಡು ಅಲೆಯುತ್ತಿದ್ದೆ. ಗೆಲುವು ಸುಮ್ಮನೆ ಬರುವುದಿಲ್ಲ. Crowds, ಅದು ತಿನ್ನುವಷ್ಟು ಕಂದಾಯವನ್ನು ತಿಂದೇ ತಿನ್ನುತ್ತದೆ ಎಂಬ ಧಾಟಿಯಲ್ಲಿ ಮಾತನಾಡುತ್ತಾನೆ.

ಜಾಕ್ಸನ್‌ ಒಬ್ಬನೇ ಅಲ್ಲ: ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ ಗಾಂಧಿ, ಮಾರ್ಕ್ಸ್‌, ಹಿಟ್ಲರ್‌, ಕುಮಾರವ್ಯಾಸ, ಮಾವೋ- ಇವರೆಲ್ಲರೂ ಅಷ್ಟೆ. ಬುದ್ಧಿ ಸಾಣೆ ಹಿಡಿದರು. ಐಡಿಯಾಗಳಿಗೆ ಚಾಲನೆ ಕೊಟ್ಟರು. ರಜೆ ಮರೆತರು. ಮುಖ್ಯವಾಗಿ, ದಣಿಯುವ ಮೊದಲೇ ರಿಲ್ಯಾಕ್ಸ್‌ ಆಗಕೂಡದು ಅಂತ ನಿರ್ಧರಿಸಿ ಅದರಂತೆ ಬದುಕಿದರು.

ನಾವೇಕೆ ಹಾಗಲ್ಲ?

ದಣಿಯುವ ಮೊದಲೇ ಕೂಗುತ್ತೇವೆ; ಮನಸೇ ರಿಲ್ಯಾಕ್ಸ್‌ ಪ್ಲೀಸ್‌!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X