• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೇಡೆಂಬ ತಿನಿಸು ಆರಿ ತಣ್ಣಗಾದ ಮೇಲೆ ತಿಂದರೇನೇ ರುಚಿ !

By Staff
|
Ravi Belagere on Thatskannada.com ರವಿ ಬೆಳಗೆರೆ
ನಿಮಗೆ ಪ್ರತೀಕಾರ ಇಷ್ಟವಾಗುತ್ತಾ ? ಸೇಡು ತೀರಿಸಿಕೊಳ್ಳೋದು ನಿಮ್ಮ ಅಭಿಲಾಷೆಯಾ ? ಜೀವನದ ಉದ್ದೇಶವಾ ? ಅದಕ್ಕೋಸ್ಕರ ಏನನ್ನು ಬೇಕಾದರೂ ಮಾಡಲು ಸಿದ್ಧಿರಿದ್ದೀರಾ ? ಹಾಗಾದರೆ, ನಿಮಗೊಂದು ವಿಷಯ ಗೊತ್ತಿರಬೇಕು.‘ ಸೇಡು ಅನ್ನೋದು , ಚೆನ್ನಾಗಿ ತಣ್ಣಗಾದ ಮೇಲೆಯೇ ಅದ್ಭುತವಾಗಿ ರುಚಿಸುವಂತಹ ತಿನಿಸು ! ಬಿಸಿಯಿದ್ದಾಗ ತಿನ್ನಲು ಅವರಿಸಬೇಡಿ’. ಅದನ್ನು ಇಂಗ್ಲಿಷ್‌ ಕಾದಂಬರಿಕಾರ ಮಾರಿಯೋ ಪ್ಯೂರೆkೂೕ ತುಂಬ ಅದ್ಭುತವಾಗಿ ಬರೆಯುತ್ತಾನೆ. "revenge is a dish that tastes best when it is cold."

ನಾನು - ನೀವು ಒಂದು ಸಂಭಾವಿತ, ನಿರುಪದ್ರವಿ ಪ್ರಪಂಚದ ಜನ. ನಮ್ಮ ಪ್ರತೀಕಾರ, ನಮ್ಮ ಸೇಡು ಅಬ್ಬಬ್ಬಾ ಅಂದರೆ ಒಂದು ಟಾಂಟ್‌ ಹೊಡೆದೋ, ಅವರೇ ಆಡಿದ ಮಾತನ್ನು ಅವರಿಗೇ ಹಿಂತಿರುಗಿಸಿಯೋ, ಇನ್ನೇನು ಪ್ರತೀಕಾರ ತೆಗೆದುಕೊಳ್ಳುವ ಘಳಿಗೆ ಬಂತು ಅಂತ ನಮ್ಮ ಶತ್ರು (?) ಥರಗುಡುವಾಗ ಅವನನ್ನು ‘ಹಾಳಾಗ್ಹೋಗು’ ಅಂತ ಕ್ಷಮಿಸಿಯೋ, ಆ ಮೂಲಕ ಇನ್ನೊಂಥರಾ ಸೇಡು ತೀರಿಸಿಕೊಂಡೋ- ಸುಮ್ಮನಾಗಿಬಿಡುವಂತಹುದು. ಆದರೆ ನಾನು ನೆತ್ತರ ಪ್ರಪಂಚದ ಆಳ ಅಗಲಗಳನ್ನು ಕಂಡು ಬಂದವನು. ಅಲ್ಲಿ ಮನುಷ್ಯ ಹೇಗೆ ವರ್ಷಗಟ್ಟಲೆ ಒಂದು ಸಿಟ್ಟು,ಒಂದು ಆಕ್ರೋಷ ಇಟ್ಟುಕೊಂಡು ತಹತಹಿಸುತ್ತಾನೆ ಎಂಬುದನ್ನು ತುಂಬ ಹತ್ತಿರದಿಂದ ನೋಡಿ ಬಲ್ಲವನು ನಾನು. ಅದರಲ್ಲೂ ಉತ್ತರಕರ್ನಾಟಕದ ಬಯಲು, ಹೊಲಗಳಲ್ಲಿ ತೊಗರಿ ಪೀಕಿನ ಮಧ್ಯೆ ಬದುವುಗಳ ಮೇಲೆ ಕುಳಿತುಕೊಂಡು ಅಲ್ಲಿನ ಹಂತಕರು ಹೇಳುತ್ತಿದ್ದ ಸೇಡು, ಪ್ರತೀಕಾರದ ಕತೆಗಳನ್ನ ಕೇಳಿ ನಿಬ್ಬೆರಗಾದವನು ನಾನು. ತನ್ನ ಗಂಡನನ್ನು ಕೊಂಡವನ ಹೆಸರನ್ನು ಮೊಮ್ಮಗನಿಗೆ ಇಟ್ಟು , ಅವನು ತಾಯ ಮೊಲೆ ಬಿಟ್ಟ ಘಳಿಗೆಯಿಂದ ‘ ನೀನು ಹುಟ್ಟಿರುವುದೇ ನಿನ್ನ ಅಜ್ಜನನ್ನು ಕೊಂದವನ ಮೇಲೆ ಸೇಡು ತೀರಿಸಿಕೊಳಲಿಕ್ಕೆ’ ಅಂತ ಹೇಳಿ ಹೇಳಿ, ಪ್ರತಿಕ್ಷಣ ತಲೆಗೆ ಅದನ್ನೇ ತುಂಬಿ ಮೊಮ್ಮಗನನ್ನು ಹಂತಕನನ್ನಾಗಿ ತಯಾರು ಮಾಡುವ ಅಜ್ಜಿಯರನ್ನು ನೋಡಿದ್ದೇನೆ.

Revenge is a dish that tastes best when it is coldಹೀಗಾಗಿ ಸೇಡಿಗಾಗಿ ತಹತಹಿಸುವ ಮನಸ್ಸೆಂಥದ್ದು ಅಂತ ನನಗೆ ಚೆನ್ನಾಗಿ ಗೊತ್ತು. ಆ ಚಡಪಡಿಕೆ, ಮತ್ತೆ ಮತ್ತೆ ನೆನಪಾಗುವ ಗಮ್ಯ,ಅವಕಾಶ ತಪ್ಪಿಹೋದಾಗ ಅವಡುಗಚ್ಚುವಿಕೆ- ಎಲ್ಲವೂ ತೀವ್ರ ತೀವ್ರ.ಸೇಡಿನಿಂದ ಚಡಪಡಿಸುವ ಮನುಷ್ಯ ತನ್ನ ಬದುಕಿನ ಉಳಿದೆಲ್ಲ ಮಾಧುರ್ಯಗಳನ್ನೂ ಕಳೆದುಕೊಂಡುಬಿಡುತ್ತಾನೆ. ಅವನಿಗೆ ಬೇರೇನೂ ರುಚಿಸದು. ಮನಸು ಹ್ಯಾಂವಕ್ಕೆ ಬಿದ್ದಿರುತ್ತದೆ. ಕೆಲವರು ಆ ಚಡಪಡಿಕೆಯಲ್ಲೇ ಮುಕ್ಕಾಲು ಬದುಕು ಕಳೆದುಬಿಡುತ್ತಾರೆ. ಸೇಡಿನ ಬಲು ದೊಡ್ಡ ನೆಗೆಟಿವ್‌ ಅಂಶವೆಂದರೆ, ಅದು ಜೀವನ ಪ್ರೀತಿಯನ್ನೇ ಕಳೆದುಬಿಡುತ್ತದೆ. ಮದುವೆ, ಪ್ರೀತಿ,ವಿದ್ಯೆ, ಸಂಗೀತ-ಉಹುಂ, ಯಾವುದೂ ಬೇಡ, ಆಕಸ್ಮಾತ್‌ ದುಡ್ಡು ಮಾಡಬೇಕು ಅಂತ ಹೊರಟರೆ,ಅದನ್ನೂ ಆಸೇಡಿಗೆ ಬಳಸಿಕೊಳ್ಳಲಿಕ್ಕೇ ಮಾಡಬೇಕು ಅನ್ನಿಸುತ್ತಿರುತ್ತದೆ. ಸೇಡಿಗೆ ಬಿದ್ದ ಮನುಷ್ಯ ಬದುಕಿನ ರುಚಿ ಕಳೆದುಕೊಂಡು ಬಿಡುತ್ತಾನೆ.ಬೇರೆ ಹವ್ಯಾಸಗಳಲ್ಲಿ ತೊಡಗಿಕೊಂಡರೆ, ಎಲ್ಲಿ ತನ್ನ ಸೇಡು-ತನ್ನೊಳಗಿನ ವಿಷ ಡೈಲ್ಯೂಟ್‌ ಆಗಿಬಿಡುತ್ತದೋ ಅಂತ ಹಿಂಜರಿಯುತ್ತಾನೆ. ಅವನ ಜೀವನದ ಆ ಅವಧಿ ಇದೆಯಲ್ಲ ? ಆಗ ಅವನ ಬೆಳವಣಿಗೆ ನಿಂತು ಹೋಗಿರುತ್ತದೆ.

ಮೊನ್ನೆ ಉತ್ತರ ಕರ್ನಾಟಕದಿಂದ ಬಂದಿದ್ದ ಹಿರಿಯ ಹೆಣ್ಣು ಮಗಳೊಬ್ಬಾಕೆಗೆ ಹೇಳುತ್ತಿದ್ದೆ : ಆ ಚಿಕ್ಕ ಊರಿನಲ್ಲಿದ್ದು ಕೊಂಡು ಯಾಕೆ ಒದ್ದಾಡ್ತೀರಿ? ಮಗನನ್ನೂ ಕರೆದುಕೊಂಡು ಬೆಂಗಳೂರಿಗೆ ಬಂದು ಬಿಡಿ. ಇಲ್ಲಿ ಜೀವನ ಚೆನ್ನಾಗಿರುತ್ತದೆ ಅಂತ ಹೇಳಿದೆ.

‘‘ಇಲ್ರೀ, ನಮ್ಮ ಗಂಡನ ಮನೆಯವರ ಜೊತೆ ಛಾಲೆಂಜ್‌ ಮಾಡೀನಿ. ಅಲ್ಲೇ ಅವರ ಮುಂದೇ ನನ್ನ ಮಗನ್ನ ಬೆಳೆಸಿ ದೊಡ್ಡವನನ್ನಾಗಿ ಮಾಡ್ತೀನಿ ಅಂತ....’’ ಅಂದಳು ಆಕೆ. ಇಂಥ ಹಟಗಳಿಗೆ ಬುದ್ಧಿ ಹೇಳಲು ಯಾರಿಂದ ಸಾಧ್ಯ ? ಮಗ ಬೆಳೆದು ದೊಡ್ಡವನಾಗಲಿಕ್ಕೆ ಒಳ್ಳೆಯ ಪರಿಸರಬೇಕು, ಅವಕಾಶ ಬೇಕು, ಅದಕ್ಕೆ ಬೆಂಗಳೂರು ಅನುಕೂಲಕರ ಎಂಬ ಸಂಗತಿ ಆಕೆಯ ಮಿದುಳಿಗೆ ತಾಕುವುದಿಲ್ಲ. ಗಂಡನ ಮನೆಯವರೆದುರಿಗೇ ಅವನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡಿ ಸೇಡು ತೀರಿಸಿಕೋಬೇಕು ! ಅದಕ್ಕಾಗಿ ಆಕೆ ಎಷ್ಟು ವರ್ಷ ಬೇಕಾದರೂ ಕಷ್ಟಪಡುತ್ತಾಳೆ, ಕಾಯುತ್ತಾಳೆ. ಆಕೆಗೆ ಗೊತ್ತು : ಸೇಡು ಎಂಬ ತಿನಿಸು ತಣ್ಣಗಾದಾಗ ತಿಂದರೇನೆ ಹೆಚ್ಚು ರುಚಿ ! ಗಂಡನ ಮನೆಯವರು ಅಷ್ಟೆಲ್ಲ ವರ್ಷಗಳಲ್ಲಿ ಏನೇನಾಗಿ ಹೋಗಿರುತ್ತಾರೋ ? ಅವರ ಬದುಕುಗಳು, ಅವರ ಮಕ್ಕಳು ಏನೇನಾಗಿರುತ್ತಾರೋ ? ಆದರೆ ಅವರು ಈಕೆಗೆ ಮಾಡಿರಬಹುದಾದ ಅವಮಾನವನ್ನೆಲ್ಲ ಮರೆತು ತಮ್ಮ ಲೋಕದಲ್ಲಿ ತಾವಿರುವಾಗ ಈಕೆ ದಿಗ್ಗನೆ ತನ್ನ ಮಗನನ್ನು ಕರೆದೊಯ್ದು ನಿಲ್ಲಿಸಿ ‘‘ ಬಿ.ಎ.ಪಾಸಾಗಿ ನೌಕ್ರಿ ಹಿಡಿದಾನ ನೋಡ್ರಿ!’’ ಅಂತ ಹೇಳಿಕೊಂಡು ಅವರಿಗೊಂದು ಘಾತವಾಗುವಂಥ surprise ಕೊಡಬೇಕು. ಕೊಡುತ್ತಾಳೆ.

ಆದರೆ ಅದಕ್ಕೋಸ್ಕರ ಅದೆಷ್ಟು ವರ್ಷ ಆಕೆ ರುಚಿಹೀನ ಬದುಕು ಬಾಳಬೇಕು ? ಎಷ್ಟು ನರಳಬೇಕು ?ದೂರದಿಂದ ನೋಡಲಿಕ್ಕೆ, ಮಾತಡಲಿಕ್ಕೆ ಆಕೆಯ ಸಾತ್ವಿಕ ಹಟ ಚೆನ್ನಾಗಿ ಕಾಣುತ್ತದೆ. ಅನುಕರಣೀಯ ಅಂತಲೂ ಅನ್ನಿಸುತ್ತದೆ. ನಿಜಕ್ಕೂ ಒಬ್ಬಂಟಿ ಹೆಣ್ಣು ಮಕ್ಕಳಿಗೆ ಇಂಥದ್ದೊಂದು ಛಲ ಇರಬೇಕು ಅನ್ನಿಸುತ್ತದೆ. ಎಲ್ಲ ಖರೆ. ಆದರೆ ಸೇಡು ಎಂಬುದು, ಪ್ರತೀಕಾರ ಎಂಬುದು ಅಷ್ಟೆಲ್ಲ ವರ್ಷಗಳ ನಲುಗುವಿಕೆ, ನರಳಿಕೆ ಸಹಿಸಿಕೊಳ್ಳುವಷ್ಟು ವರ್ತಾ? worth ಅನ್ನಿಸಿದ ಸೇಡುಗಳು ಕೂಡ ನಮ್ಮ ಬದುಕನ್ನು ಆ ಪರಿ ಆವರಿಸಿಕೊಳ್ಳಬೇಕೆ ?

‘‘ಇವತ್ತು ಅವಮಾನ ಮಾಡಿದಿರಲ್ಲೋ ಬೋಳೀಮಕ್ಕಳಾ, ನಿಮ್ಮೆದುರಿಗೆ ನಿಮಗಿಂತ ಛಂದಾಗಿ ಬಾಳಿ ತೋರಿಸ್ತೀನಿ ನೋಡ್ರಿ!’’ ಅಂತ ಅಕ್ಷರಶಃ ನನಗಾಗದವರಿಗೆ ಕೇಳಿಸುವಂತೆ ಹೇಳಿ ಬಂದವನು ನಾನು. ಬಂದ ಹದಿನೈದಿಪ್ಪತ್ತು ವರ್ಷಗಳಲ್ಲಿ ನನ್ನದೇ ಆದ ಒಂದು ಬದುಕನ್ನು ಕಟ್ಟಿ ಕೊಂಡವನೂ ಹೌದು. ಆದರೆ ನೀವು ನಂಬುತ್ತೀರೋ ಇಲ್ಲೋ : ಅವರು ಇದಿರಿಗೆ ಬಂದಾಗ ಹಿಂದೊಂದು ಸಲ ಇವರು ನನ್ನನ್ನು ಅವಮಾನಿಸಿದ್ದರಲ್ಲ ? ಅನ್ನ ಕಿತ್ತು ಕೊಂಡಿದ್ದರಲ್ಲ ? ಅಂತ ನೆನಪು ಕೂಡ ಆಗುವುದಿಲ್ಲ . ಅವರಲ್ಲಿ ಕೆಲವರು ಬಸವಳಿದುಹೋಗಿದ್ದಾರೆ. ಹೈರಾಣಾಗಿದ್ದಾರೆ. ಎದುರಿಗೆ ಸಿಕ್ಕಾಗ ಎಲ್ಲಿ ಹಳೆಯ ಮಾತೆತ್ತುತ್ತೀನೋ ಅಂತ, ನನ್ನನ್ನು ಭೇಟಿಯಾದಾಗಲೆಲ್ಲ tense ಆಗುತ್ತಾರೆ. ನನ್ನ ಜಾಯಮಾನವೋ ಏನೋ, ಹಳೆಯ ಮಾತು ನನ್ನ ಬಾಯ್ತುದಿಗೆ ಬರುವುದೇ ಇಲ್ಲ.

‘‘ಬದುಕಿ ತೋರಿಸ್ತೀನ್ನೋಡು !’’ಅಂದಾಗ ನನ್ನಲ್ಲಿ ಅವಮಾನ, ಆಕ್ರೋಷ , ಸೇಡು ಕುದಿಯುತ್ತಿದ್ದುದು ನಿಜ. ಆದರೆ ಬದುಕು ಕಟ್ಟಿಕೊಳ್ಳುವಾಗ, ಅದನ್ನು ನಾನು ಅವರಿಗೆ ತೋರಿಸಲಿಕ್ಕೆ ಅಂತ ಕಟ್ಟಿಕೊಳ್ಳಲಿಲ್ಲ. ಅದನ್ನು ನನಗೆ ಬೇಕಾದ ರೀತಿಯಲ್ಲಿ ಕಟ್ಟಿಕೊಂಡೆ. ಸಂಗೀತ, ಸಾಹಿತ್ಯ, ಸಂತೋಷ-ಯಾವುದನ್ನೂ ನಾನು ರುಚಿಹೀನ ಸಂಗತಿಗಳನ್ನಾಗಿ ಮಾಡಿಕೊಳ್ಳಲಿಲ್ಲ. ಅವರನ್ನು ಶಪಿಸಿ ಹೊರಬಂದ ನಂತರವೂ ನಾನು ಒಳ್ಳೆಯ ಊಟ, ಒಳ್ಳೆಯ ಓದು, ಒಳ್ಳೆಯ ಸಂಗೀತ, ಒಳ್ಳೆಯ ಸೆಕ್ಸು, ಅದ್ಬುತ ಪ್ರಮಾಣ - ಎಲ್ಲವನ್ನೂ ಅನುಭವಿಸಿದ್ದೇನೆ. ನನ್ನಲ್ಲಿನ ಆ ಬಿಸುಪು, ಆ warmth ಯಾವತ್ತೂ ಕಳೆದುಕೊಳ್ಳಲಿಲ್ಲ. ಅದಕ್ಕೇನೇನೋ, ಸೇಡೆಂಬ ತಿನಿಸು ಈಗ ತಣ್ಣಗಾಗಿದೆ. ರುಚಿಕರವೂ ಇರಬಹುದು. ಆದರೆ ತಿನ್ನುವ ಹಂಬಲ ಉಳಿದಿಲ್ಲ. ಬದುಕಿನ ನಿಜವಾದ ರುಚಿಕಂಡವನಿಗೆ, ಸತ್ತುಹೋದ ದಿನಗಳನ್ನು ನೆನಪಿಟ್ಟು ಕೊಂಡು ತೀರಿಸಿಕೊಳ್ಳುವ ಸೇಡು ರುಚಿಸುವುದಿಲ್ಲ.

ಆದರೂ ನಂಗೊತ್ತು :

ಸೇಡಿಗೆ-ಪ್ರತೀಕಾರಕ್ಕೆ ಕೆಲವು positive ಆದ ಗುಣಗಳೂ ಇವೆ. ಮನುಷ್ಯನಲ್ಲೊಂದು ಛಲವನ್ನು ಅವು ಉಂಟುಮಾಡುತ್ತವೆ.ಛಲಕ್ಕೆ ಬಿದ್ದ ಮನುಷ್ಯ ಪ್ರಬಲನಾಗಿ, ಬಲಿಷ್ಠನಾಗಿ ಬೆಳೆದು ತೋರಿಸುತ್ತಾನೆ. ಅವಮಾನಗಳನ್ನು ಉಸಿರೆತ್ತದೆ ಸಹಿಸಿಕೊಳ್ಳುವವನಿಗಿಂತ, ಅವಮಾನಗಳಿಗೆ ಅಭ್ಯಾಸವಾಗಿ ಹೋದವನಂತೆ ಬದುಕುವವನಿಗಿಂತ, ಅಭಿಮಾನ ಶೂನ್ಯ ಬಾಳನ್ನು ಬಾಳುವವನಿಗಿಂತ- ಅವಡುಗಚ್ಚಿ ಪ್ರತೀಕಾರ ಹೇಳಲು ಹೊರಟ ಮನುಷ್ಯ ಹೆಚ್ಚು ಉಪಯುಕ್ತ. ಪ್ರತೀಕಾರಕ್ಕೆ ಬಿದ್ದ ಮನುಷ್ಯ ಇನ್ನೊಂದು ಅವಮಾನವಾಗದಂತೆ ಎಚ್ಚರವಹಿಸುತ್ತಾನೆ. ಜಾಗೃತನಾಗುತ್ತಾನೆ.ಆದರೆ ವೈರಿ ನಮ್ಮನ್ನು ಪೂರ್ತಿಯಾಗಿ ಮೆರೆತು, ನಾವು ಬದುಕಿಯೇ ಇಲ್ಲವೇನೋ ಎಂಬಂತೆ ನಮ್ಮನ್ನು ಲೆಕ್ಕದ ಪುಸ್ತಕದಿಂದ ಹೊಡೆದುಹಾಕಿ ಮೈಮರೆತ ಬದುಕು ಬದುಕುತ್ತಿರುವಾಗ ರಪ್ಪನೆ ಮೈಮೇಲೆ ಬಿದ್ದು ಪ್ರತೀಕಾರ ಹೇಳುವುದಿದೆಯಲ್ಲ ?

ಅದು ಎಷ್ಟೇ ರುಚಿಕರ ಅನ್ನಿಸಿದರೂ, ಅದಕ್ಕೋ ಸ್ಕರ ಬದುಕೆಲ್ಲ ಹಸಿದಿರಬೇಕಾ?

(ಸ್ನೇಹ ಸೇತು ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more