• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಪಿಯುಸಿ ಓದಿದ ಮಕ್ಕಳಿಗೆ ಬೇರೆ ದಾರಿಗಳೇ ಇಲ್ಲವಾ?

By Staff
|
Ravi Belagere on Thatskannada.com ರವಿ ಬೆಳಗೆರೆ
ನಿಮಗೆ ಗೊತ್ತೇ ಇರುತ್ತೆ : ನಾನು ‘ಓ ಮನಸೇ... ’ ಪತ್ರಿಕೆಯಲ್ಲಿ ‘ಸಮಾಧಾನ’ ಅಂತ ಒಂದು ಅಂಕಣ ಪ್ರಕಟಿಸುತ್ತೇನೆ. ನಾನೇ ಕೂತು ಓದುಗರ ಮನಸ್ಸಿನ ತಳಮಳದ, ಅಂತರಾಳದ, ನೈತಿಕ-ಅನೈತಿಕದ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ. ಯಾಕೋ ಗೊತ್ತಿಲ್ಲ : ಬೇರೆ ಯಾವ ಅಂಕಣವನ್ನಾದರೂ ಮೈಗಳ್ಳತನ ಮಾಡಿಕೊಂಡು ಬರೆಯದೆ ಬಿಟ್ಟೇನೇನೋ? ಆದರೆ ‘ಸಮಾಧಾನ’ ಅಂಕಣ ಬರೆಯದೆ ಪತ್ರಿಕೆಯನ್ನು ಓದುಗರ ಕೈಗಿಡುವುದಕ್ಕೆ ಮನಸ್ಸಾಗುವುದಿಲ್ಲ.

ನೀವೊಮ್ಮೆ ಆ ಅಂಕಣ ಓದಿ ನೋಡಿ. ಅವೇನೂ ಅಂಥಾ great ಅನ್ನಿಸುವಂಥ ಉತ್ತರಗಳಾಗಿರುವುದಿಲ್ಲ. ಅಸಲಿಗೆ ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳೇ ಇರುವುದಿಲ್ಲ. ಆದರೆ ಪ್ರಶ್ನೆಯ ನೆಪದಲ್ಲಿ ಅನೇಕ ಜೀವಗಳಿಗೆ ತಮ್ಮ ನೋವು ಹೇಳಿಕೊಳ್ಳಬೇಕಿರುತ್ತದೆ. ಬಾಧೆ ಬಿಚ್ಚಿಡಬೇಕಿರುತ್ತದೆ. ಹಾಗೆ ಹೇಳಿಕೊಂಡರೆ ಏನೋ ಸಮಾಧಾನ. ಅಲ್ಲಿಗೆ ಅರ್ಧ ನೋವು ಕರಗಿದಂತೆಯೇ. ಅವರು ಹಾಗೆ ಹೇಳಿಕೊಂಡಾಗ ಅವರಿಗೆ ಅಣ್ಣನಾಗಿ, ಮಿತ್ರನಾಗಿ, ತಮ್ಮನಾಗಿ, ಮಗನಾಗಿ, ಗುರುವಾಗಿ, ಗೆಳೆಯನಾಗಿ, ಚಿಕ್ಕಪ್ಪನಾಗಿ, ತಂದೆಯ ಸ್ಥಾನದಲ್ಲಿ ನಿಂತು ನನಗೆ ತೋಚಿದ ಸಮಾಧಾನದ ಮಾತುಗಳನ್ನಾಡುತ್ತೇನೆ. ಅವರಿಗೆ ಸಮಾಧಾನವಾಗುತ್ತದೆ. ಅದಕ್ಕಿಂತ ಹೆಚ್ಚು ನನಗೆ ಸಂತೋಷವಾಗುತ್ತದೆ.

What is the alternative to CET ?ಈಗ ಮಾರುಕಟ್ಟೆಯಲ್ಲಿರುವ ಸಂಚಿಕೆ ಇದೆಯಲ್ಲ : ಓ ಮನಸೇ/32. ಅದರ ‘ಸಮಾಧಾನ’ ಅಂಕಣದಲ್ಲಿ ಒಂದು ಪತ್ರವಿದೆ. ಮೇಷ್ಟ್ರೊಬ್ಬರ ಹೆಂಡತಿ ಬರೆದಿರುವ ಪತ್ರವದು. ಆಕೆಗೆ ಇದ್ದುದು ಒಬ್ಬಳೇ ಮಗಳು. ಎಸೆಸೆಲ್ಸಿಯಲ್ಲಿ 91% ಮಾರ್ಕು ತಂದವಳು. ಅವರಿದ್ದ ಊರಿನಲ್ಲಿ ಒಳ್ಳೆಯ ಕಾಲೇಜಿಲ್ಲ ಅನ್ನೋ ಕಾರಣಕ್ಕೆ ಮಗಳನ್ನು ದಕ್ಷಿಣ ಕನ್ನಡದ ಕಾಲೇಜೊಂದಕ್ಕೆ ಸೇರಿಸಿ ಹಾಸ್ಟೆಲಿನಲ್ಲಿಡುತ್ತಾರೆ. ಮಗಳನ್ನು ವಾರಕ್ಕೊಮ್ಮೆ ಹೋಗಿ ನೊಡಿಬರುವಷ್ಟು ಹತ್ತಿರದಲ್ಲಿರೋಣ ಎಂಬ ಕಾರಣಕ್ಕೆ ಹಾಸನಕ್ಕೆ ವರ್ಗಾ ಮಾಡಿಸಿಕೊಳ್ತಾರೆ. ಹುಡುಗಿಯ ತಂದೆ ಗಣಿತದ ಮೇಷ್ಟ್ರು. ಅವರ ಕಣ್ಣಿನಲ್ಲಿ ಎಂಥದ್ದೋ ದೋಷ. ‘ನಾನು ಚೆನ್ನಾಗಿ ಓದಿ ಡಾಕ್ಟರಾಗಿ ನಿಮ್ಮ ಖಾಯಿಲೆ ವಾಸಿ ಮಾಡ್ತೀನಿ ಡ್ಯಾಡೀ’ ಅನ್ನುತ್ತಿರುತ್ತದೆ ಮಗು. ಮಗಳು ಡಾಕ್ಟರೋ, ಇಂಜಿನಿಯರೋ ಆಗಲಿ ಎಂಬುದೇ ತಂದೆ ತಾಯಿಯರ ಆಸೆ. ತುಂಬ ಪ್ರೋತ್ಸಾಹ ನೀಡಿ, ಸವಲತ್ತು ಕೊಟ್ಟು ಓದಿಸುತ್ತಾರೆ. ಹುಡುಗಿ ಎಸ್ಸೆಸೆಲ್ಸಿಯಲ್ಲಿ 91% ಮಾರ್ಕು ತಂದಾಗ ‘ಅಯ್ಯೋ, ತೊಂಬತ್ತೈದು ಬರಬೇಕಿತ್ತು’ ಅಂತ ಹುಡುಗಿ ಅಳುತ್ತಾಳೆ. ‘ಮುಂದೆ ಇನ್ನೂ ಒಳ್ಳೆ ಮಾರ್ಕು ತೆಗೀವಂತೆ ನಡಿ ಮಗಳೇ’ ಅಂತ ಹೇಳಿ ಪಿಯುಸಿಗೆ ಸೇರಿಸುತ್ತಾರೆ. ಜುಲೈ ತಿಂಗಳಲ್ಲಿ ಅವಳ ಬರ್ತ್‌ಡೇಗೆ ತಾವೇ ಅವಳು ಓದುತ್ತಿದ್ದ ಊರಿಗೆ ಹೋಗಿ ಹೊಟೇಲಿನಲ್ಲಿ ಉಳಿದುಕೊಂಡು ಅವಳಿಗೆ ಬಟ್ಟೆ ಕೊಡಿಸಿ, ಊಟ ಮಾಡಿಸಿ, ಗೆಳತಿಯರಿಗೆ ಕೊಡಲು ತಿಂಡಿ ಕೊಡಿಸಿ ಹ್ಯಾಪಿ ಬರ್ತ್‌ಡೇ ಹೇಳಿ ಹಾಸನಕ್ಕೆ ಹಿಂತಿರುಗುತ್ತಾರೆ. ತೀರ ಬಸ್ಸು ಹತ್ತುವ ಮುನ್ನ ‘ನನ್ನ ಪಿಯು ಮುಗಿದ ತಕ್ಷಣ ಹಾಸನಕ್ಕೆ ಬಂದುಬಿಡ್ತೀನಿ. ನಿಮ್ಮನ್ನು ಬಿಟ್ಟು ಇರೋಕಾಗಲ್ಲ’ ಅಂತ ಹುಡುಗಿ ಕಣ್ಣೀರಿಡುತ್ತಾಳೆ. ಹಾಸನದಲ್ಲಿ ಇಂಜಿನಿಯರಿಂಗ್‌ ಕಾಲೇಜು ಹೇಗೂ ಇದೆ. ಬರುತ್ತಾಳೆ ಮಗಳು, ಓದಿಸೋಣ ಅಂದುಕೊಳ್ಳುತ್ತಾರೆ ತಂದೆತಾಯಿ.

ಬರ್ತ್‌ಡೇ ಮುಗಿದ ಒಂದು ತಿಂಗಳಿಗೆ ಸರಿಯಾಗಿ ಹಾಸ್ಟೆಲಿನಿಂದ ಸುದ್ದಿ ಬರುತ್ತದೆ. ‘ಕ್ಲಾಸ್‌ ಟೆಸ್ಟ್‌ನಲ್ಲಿ ಗಣಿತದಲ್ಲಿ ಕಡಿಮೆ ಮಾರ್ಕು ತಂದುಕೊಂಡಳೆಂಬ ಕಾರಣಕ್ಕೆ ನಿಮ್ಮ ಮಗಳು ಹ್ಯಾಂಗ್‌ ಮಾಡಿಕೊಂಡಿದ್ದಾಳೆ. ತಕ್ಷಣ ಬನ್ನಿ!’

‘ರವಿ ಅಣ್ಣಾ , ಪಿಯುಸಿ ಮುಗಿದರೂ ನನ್ನ ಮಗಳೇಕೆ ಹಾಸನಕ್ಕೆ ಬರಲಿಲ್ಲ ಹೇಳು? ನನ್ನ ಮುದ್ದು ಕಂದ ಯಾಕಷ್ಟು ಕಡಿಮೆ ಮಾರ್ಕು ತಂದುಕೊಂಡಳು? ಅವಳು ಸಿ.ಇ.ಟಿ. ಪರೀಕ್ಷೆಯ ಬಗ್ಗೆ, ಇಂಜಿನಿಯರಿಂಗು-ಮೆಡಿಕಲ್ಲು ಸೀಟು ಸಿಗುವುದರ ಬಗ್ಗೆ ಯಾಕಷ್ಟು ಹೆದರಿಕೊಂಡಿದ್ದಳು?’ ಹಾಗಂತ ನನ್ನ ಆ ಮಗಳ ತಾಯಿ ಪತ್ರ ಬರೆದು ಕೇಳುತ್ತಾಳೆ. ಏನಂತ ಉತ್ತರ ಹೇಳಲಿ? ಇಲ್ಲಿ ಪ್ರಶ್ನೆಗಳಿಗೆ ಹಲವಾರು ಮುಖಗಳಿವೆ. ಹುಡುಗಿಯ ಬಲಹೀನ ಮನಸು, ತಂದೆ ತಾಯಿಯರ ಆಶಯಗಳು, ಅದರ pressure ತಡೆಯಲಾಗದ ಹುಡುಗಿಯ ಎಳಸುತನ, ಜಗತ್ತಿನೆಡೆಗಿನ exposureನ ಕೊರತೆ ಇತ್ಯಾದಿ ಇತ್ಯಾದಿ.

ಆದರೆ ಎಲ್ಲಕ್ಕಿಂತ ಹೆಚ್ಚು ನನ್ನನ್ನು ಕಂಗೆಡುವಂತೆ ಮಾಡಿದ್ದು, ನಮ್ಮ ಮಕ್ಕಳೇನು ರೇಸು ಕುದುರೆಗಳಾ- ಎಂಬ ಪ್ರಶ್ನೆ. ಇವತ್ತು 98% ತಂದ ಹುಡುಗನಿಗೆ ಒಂದು ಹೆಸರಾಂತ ಕಾಲೇಜಿನಲ್ಲಿ ಸೀಟು ಸಿಗುತ್ತೆ. 97% ತಂದ ಹುಡುಗಿಗೆ ಸಿಗುವುದಿಲ್ಲ. ಅವರ ಕಾಲೇಜಿನ ‘ಕಟಾಫ್‌’ ಅಲ್ಲಿಗೆ ನಿಂತಿದೆ. ಒಂದು ಪರ್ಸೆಂಟಿನಷ್ಟು ಮಾತ್ರ ಈ ಹುಡುಗಿ ದಡ್ಡಿ. ಹಾಗಾದರೆ ಈ ಹುಡುಗಿಯ ಗತಿ ಏನು? ಈ ಪ್ರಶ್ನೆ ಅಥವಾ ಈ ಸಂಕಟ ಉದ್ಭವವಾಗುವಂತೆ ಮಾಡಿದವರು ಯಾರು? ಸುಲಭವಾಗಿ ಮಗುವಿನ ಮೆರಿಟ್‌ ಗುರುತಿಸಿ, ಸೀಟು-ಕಾಲೇಜು ಎರಡನ್ನೂ ಹಂಚಲು ಸಾದ್ಯವಾಗುವಂತೆ ಹರೀಶ್‌ ಗೌಡ ಎಂಬ ನಿಷ್ಠಾವಂತ, ನಿಸ್ಪೃಹ ಅಧಿಕಾರಿ ಮಾಡಿಟ್ಟಿದ್ದ C.E.T. ವ್ಯವಸ್ಥೆಯನ್ನು ಇವತ್ತು ಸರ್ವನಾಶ ಮಾಡಿರುವವರು ಯಾರು? ಈ ಸಾಮಾಜಿಕ ಪಾತಕದಲ್ಲಿ ನಮ್ಮ ಸರ್ಕಾರ, ಕ್ಯಾಪಿಟೇಶನ್‌ ಮಾಫಿಯಾ, ನಮ್ಮ ಕಾಲೇಜುಗಳು, ಅವುಗಳಲ್ಲಿನ ಶಿಕ್ಷಕರು, ಅವರು ನಡೆಸುವ ಟುಟೋರಿಯಲ್ಲುಗಳು-ಎಲ್ಲವೂ ಶಾಮೀಲಾಗಿವೆ ಅಂತ ನಿಮಗೆ ಅನ್ನಿಸುವುದಿಲ್ಲವೆ?

ಇಷ್ಟಕ್ಕೂ ನಾವೇಕೆ ನಮ್ಮ ಮಕ್ಕಳನ್ನು ಇಂಜಿನಿಯರಿಂಗ್‌ ಮತ್ತು ಮೆಡಿಕಲ್‌ ಬಿಟ್ಟು ಬೇರೆ ಮಾಡಲೇಕೂಡದು ಅಂತ ಕಣ್ಕಾಪು ಕಟ್ಟಿಸಿ ಕೂಡಿಸುತ್ತೇವೆ? ನನ್ನ ಮಗನದೇ ಉದಾಹರಣೆ ತಗೊಳ್ಳಿ. ಅವನಿಗೆ ಕಡಿಮೆ ಮಾರ್ಕು ಬಂದವು. ಡೊನೇಷನ್ನು ಕೊಟ್ಟು, ವಶೀಲಿ ಹಚ್ಚಿಸಿ ಯಾವದಾದರೂ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಕೊಡಿಸಬಹುದಿತ್ತು. ಆದರೆ ಅಲ್ಲೂ ಅವನು ಸುಖವಾಗಿ, ಸುಲಭವಾಗಿ ಓದಿ ಡಾಕ್ಟರಾಗುತ್ತಾನೆ ಅಂತ ಏನು ಗ್ಯಾರಂಟಿ? ಅವನನ್ನೇಕೆ ಈಜಲಾಗದ ಸಮುದ್ರಕ್ಕೆ ನೂಕಲಿ? ಅವನಿಗಿಂತ ಕಡಿಮೆ ಪರ್ಸೆಂಟೇಜು ಮಾಡಿದ ನನ್ನ ಬಂಧುಗಳ ಹುಡುಗನೊಬ್ಬನಿಗೆ ಅವರು ಇಂಜಿನಿಯರಿಂಗ್‌ ಸೀಟು ಕೊಡಿಸಿದರು. ನಾನು ನನ್ನ ಮಗನನ್ನು ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ ಕೋರ್ಸಿಗೆ ಸೇರಿಸಿ good luck ಅಂದೆ.

ತಾತ್ಪರ್ಯ ಇಷ್ಟೆ : ನಾವೇಕೆ ನಮ್ಮ ಮಕ್ಕಳಿಗೆ ಇಂಜಿನಿಯರಿಂಗ್‌ ಮತ್ತು ಡಾಕ್ಟರಿಕೆ ಬಿಟ್ಟು ಬೇರೆ ಅಲ್ಟರ್ನೇಟಿವ್‌ಗಳನ್ನು ಸೂಚಿಸುವುದಿಲ್ಲ ? ಅವೆರಡೇನಾ ನಮ್ಮ ಮಕ್ಕಳ ಭವಿಷ್ಯ ರೂಪಿಸಲಿಕ್ಕೆ ಇರುವಂಥವು? ಹೀಗೆ ಬಲವಂತ ಮಾಡಿ ಇಂಜಿನಿಯರಿಂಗ್‌ಗೆ ಸೇರಿಸಿದ ಮಕ್ಕಳಲ್ಲಿ ಎಷ್ಟು ಜನ drop outಗಳಾಗುತ್ತಾರೆ ಗೊತ್ತಿದೆಯಾ? ಐದೂವರೆ ವರ್ಷದ M.B.B.S. ಮಾಡಿದವನು ಮುಂದೆ ಪೋಸ್ಟ್‌ ಗ್ರಾಜುಯೇಷನ್‌ ಮಾಡದೆ ಹೋದರೆ ಯಾವುದಕ್ಕೂ ಕೆಲಸಕ್ಕೆ ಬಾರದವನಾಗುತ್ತಾನೆ ಎಂಬುದು ನಮಗೆ ಗೊತಿಲ್ಲವಾ? ಪಿಯು ಮುಗಿದ ಮೇಲೆ ಏಳೂವರೆ ವರ್ಷ ವಿದ್ಯಾರ್ಥಿಯಾಗಿಯೇ ಇರುವುದು ಎಷ್ಟು ಕಷ್ಟ , ಎಷ್ಟು ಭಾರ! ನಾವೇಕೆ ಇದನ್ನೆಲ್ಲ ಯೋಚಿಸುವುದಿಲ್ಲ ?

ಒಂದು ಕಾಲಕ್ಕೆ ಇಂಜಿನಿಯರಿಂಗ್‌ ಮತ್ತು ಮೆಡಿಸಿನ್‌ ಬಿಟ್ಟರೆ ಬೇರೆ ಕೋರ್ಸುಗಳ ಕೊರತೆ ಇತ್ತು . ಈಗ ಹಾಗಿಲ್ಲವಲ್ಲ ? ಕಲ್ಪನಾ ಚಾವ್ಲಾ, ರಾಕೇಶ್‌ ಶರ್ಮಾ, ಜಯಂತ್‌ ನಾರ್ಲಿಕರ್‌, ಯು. ಆರ್‌. ರಾವ್‌, ಕಸ್ತೂರಿ ರಂಗನ್‌- ಇವರೆಲ್ಲ ಇಂಜಿನಿಯರಿಂಗ್‌ ಮಾಡಿದವರಲ್ಲ. Astrophysics ಎಂಬ ಆಸಕ್ತಿಕರ, ಅತ್ಯಂತ demand ಕೂಡ ಇರುವಂಥ ಕೋರ್ಸೊಂದಿದೆ ಎಂಬುದೇ ನಮ್ಮಲ್ಲಿ ಅನೇಕರಿಗೆ ಗೊತ್ತಿರುವುದಿಲ್ಲ. ಅಂತೆಯೇ I.I.Sc.ಯಲ್ಲಿ ಇಂಟಿಗ್ರೇಟೆಡ್‌ ಎಂ.ಎಸ್ಸಿ ಮಾಡುವ ಹುಡುಗ ಹುಡುಗಿಯರು ಸೈಂಟಿಸ್ಟುಗಳಾಗುತ್ತಾರೆ. ಇವತ್ತಿಗೂ pure scienceನಲ್ಲಿ ದೊಡ್ಡ ಮಟ್ಟದಲ್ಲಿ ಸೈಂಟಿಸ್ಟುಗಳ ಅವಶ್ಯಕತೆಯಿದೆ. ಪರಿಸ್ಥಿತಿ ಮೊದಲಿನಂತಿಲ್ಲ ; ಅನೇಕ ಖಾಸಗಿ ಸಂಸ್ಥೆಗಳು ಸಂಶೋಧನೆಯ ಮೇಲೆ ಕೋಟ್ಯಂತರ ರುಪಾಯಿ ಸುರಿಯತ್ತವೆ. C.P.R.I ಮತ್ತು I.I.Sc.ಯಂಥ ಸಂಸ್ಥೆಗಳಲ್ಲೇ ಬೇಕಾದಷ್ಟು ಛಾಲೆಂಜಿಂಗ್‌ ಆದ ಕೆಲಸಗಳಿವೆ. ವಿದೇಶಕ್ಕೆ ಹೋಗಲು ಇಂಜಿನಿಯರುಗಳಿಗೆ ಮಾತ್ರ ಸಾಧ್ಯ ಅಂದುಕೊಳ್ಳಬೇಡಿ. pure scienceನಲ್ಲಿ ಸಂಶೋಧನೆಗಳಿಗೆ ಸಾಕಷ್ಟು ಅವಕಾಶಗಳಿವೆ. ನಮ್ಮ ಪತ್ರಿಕೆಯ incurable ಅಭಿಮಾನಿ ಮಂಜುನಾಥ್‌ ಸಾಗರ್‌ ಇವತ್ತಿಗೂ ಪೋಲಂಡ್‌ನಲ್ಲಿ pure physicsನಲ್ಲಿ ಸಂಶೋಧನೆ ಮಾಡುತ್ತಿದ್ದಾನೆ.

ಇಲ್ಲ, ನಾನು ಇಂಜಿನಿಯರಿಂಗೇ ಮಾಡಬೇಕು ಅಂತ ಮಗ ಹಟಕ್ಕೆ ಬಿದ್ದರೆ, ಅವನನ್ನು ನೇರವಾಗಿ I.I.T.ಗೆ ಕಳಿಸಿ. ಅಲ್ಲಿ C.E.T. ಹಂಗಿಲ್ಲ. ಅದಕ್ಕೇ ಪ್ರತ್ಯೇಕವಾದ ಪ್ರವೇಶ ಪರೀಕ್ಷೆಯಿದೆ. ಅದನ್ನು Joint Entrance Exam ಅನ್ನುತ್ತಾರೆ. ಪಿಯು ಮುಗಿದ ನಂತರ ಬರೆಯಬೇಕಾದ ಈ ಪರೀಕ್ಷೆಗೆ ಪ್ರಿಪೇರ್‌ ಆಗುವುದಕ್ಕೆ ಅಂತ I.I.T.ಯವರು stipend ಕೂಡ ಕೊಡುತ್ತಾರೆ. ಇದಲ್ಲದೆ, ಕಡಿಮೆ ಫೀ ಇರುವ, ವಿಪುಲ ಅವಕಾಶಗಳಿರುವ ಏರೋನಾಟಿಕಲ್‌ ಇಂಜಿನಿಯರಿಂಗ್‌ ಕೋರ್ಸು ಅನೇಕ ಖಾಸಗಿ ಸಂಸ್ಥೆಗಳಲ್ಲಿದೆ. ಅದೇ ರೀತಿ ಪೈಲಟ್‌ ಟ್ರೈನಿಂಗ್‌ ಮಾಡುವ ಅವಕಾಶ ಬೆಂಗಳೂರಿನಲ್ಲೇ ಇದೆ. ಸಾಲದೆಂಬಂತೆ ಫ್ಯಾಷನ್‌ ಡಿಸೈನಿಂಗ್‌, ಇಂಟೀರಿಯರ್‌ ಡಿಸೈನಿಂಗ್‌, ಮಾಸ್ಟರ್‌ ಆಫ್‌ ಸೋಷಿಯಲ್‌ ವರ್ಕ್ಸ್‌(ಎಂ.ಎಸ್‌.ಡಬ್ಲೂ), ಹೊಟೇಲ್‌ ಮ್ಯಾನೇಜ್‌ಮೆಂಟ್‌, ಗ್ರಾಫಿಕ್‌ ಡಿಸೈನಿಂಗ್‌, ಫೈನ್‌ ಆರ್ಟ್ಸ್‌- ಹೀಗೆ ಸಾವಿರ ಕೋರ್ಸುಗಳಿವೆ.

ಆ ಕಡೆ ಕಾಮರ್ಸ್‌ ಅಥವಾ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಕಡೆಗೆ ತಲೆ ಹಾಕಿದರೆ ಅಲ್ಲೂ ಹೇರಳ ಹೇರಳ ಅವಕಾಶ. ಜರ್ನಲಿಸಂ ಕೂಡ ಇವತ್ತಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದು ಕೊಡಬಲ್ಲ ವಿದ್ಯೆಯೇ. ನ್ಯಾಷನಲ್‌ ಲಾ ಸ್ಕೂಲ್‌ಗೆ ಸೇರೋದು, ಸಿ.ಎ. ಮಾಡೋದು- ಇದೆಲ್ಲ ನಮ್ಮ ಮಕ್ಕಳನ್ನು ಖಂಡಿತ ಯಶಸ್ವಿ ವ್ಯಕ್ತಿಗಳನ್ನಾಗಿ ಮಾಡುತ್ತದೆ. ಆದರೆ ಖಾಯಿಲೆ parents ಆದ ನಮಗೇ ಇದೆಯಲ್ಲ ? ನಮಗೆ ಇಂಜಿನಿಯರಿಂಗೇ ಬೇಕು. ಅವಳು ಡಾಕ್ಟ್ರೇ ಆಗಬೇಕು!

ಆದವರ ಪರಿಸ್ಥಿತಿ ಏನಾಗಿದೆ ನೋಡ್ತೀರಾ? ಎಲ್ಲೋ ಒಬ್ಬ ಜಯನಗರದ ಹುಡುಗ, ಹನುಮಂತ ನಗರದ ಹುಡುಗಿ ಅಮೆರಿಕಕ್ಕೆ ಹೋದರು ಅನ್ನೋ ಕಾರಣಕ್ಕೆ ನಮ್ಮ ಮಗನೂ ಹಾಗಾಗಲಿ ಅಂತ ಮೇಷ್ಟ್ರುಗಳೇ ಇಲ್ಲದ ಕುಖ್ಯಾತ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸಬೇಡಿ. ಮೊನ್ನೆ ಮೂರು ತಿಂಗಳ ಹಿಂದೆ, ಬೆಂಗಳೂರಿನ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ನಲ್ಲಿರುವ ಕಂಪೆನಿಯಾಂದು ಇಂಜಿನಿಯರುಗಳನ್ನು walk in interviewಡಿಗೆ ಕರೆದಿತ್ತು. ಅದಕ್ಕೆ ಹೋದವರು 7 ಸಾವಿರ fresh ಕಂಪ್ಯೂಟರ್‌ ಇಂಜಿನಿಯರಿಂಗ್‌ ಪದವೀಧರರು. ಅವರ ದೊಂಬಿ ಭರಿಸಲಾಗದೆ ಲಾಠಿ ಛಾರ್ಜು ಮಾಡಿಸಿದರು.

ಅದರರ್ಥ ಗೊತ್ತಾಯಿತು, ತಾನೆ?

ನಾವೇಕೆ ಆಲ್ಟರ್ನೇಟಿವ್‌ಗಳನ್ನು ಯೋಚಿಸಬಾರದು?

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more