• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬತ್ತಿದ ಕೆರೆಯಂಗಳದಲ್ಲಿ ಹಾಡು ಹಕ್ಕಿ ಸತ್ತಿದೆ ಅಂದವರು....

By Staff
|
Ravi Belagere on Thatskannada.com ರವಿ ಬೆಳಗೆರೆ

ಯಾಕೋ ಗೊತ್ತಿಲ್ಲ . ಮೊನ್ನೆ ಸಂಜೆ ಆಫೀಸಿನ ಟೆರೇಸಿನ ಮೇಲೆ ಒಬ್ಬನೇ ಕುಳಿತಿದ್ದವನ ಕಣ್ಣಲ್ಲಿ ಸುಮ್ಮನೆ ನೀರು ಧಾರೆಯಾದವು. ನನಗೆ ಅಡಿಗರು ತೀರಿಕೊಂಡಾಗ, ಕುವೆಂಪು ನಿಧನರಾದಾಗ, ಬೇಂದ್ರೆ ಹೊರಟುಹೋದಾಗ ಈ ನಾಡಿಗೆ, ಅಕ್ಷರ ಲೋಕಕ್ಕೆ, ಕಾವ್ಯಕ್ಕೆ, ಕನ್ನಡಕ್ಕೆ ನಷ್ಟವಾಯಿತು ಅನ್ನಿಸಿತ್ತು . ಆದರೆ ನರಸಿಂಹಸ್ವಾಮಿಗಳು ತೀರಿಕೊಂಡರು ಅಂದ ತಕ್ಷಣ ತೀರ ವೈಯಕ್ತಿಕವಾಗಿ ಏನನ್ನೋ ಕಳೆದುಕೊಂಡು ಬಿಟ್ಟೆ ಅನ್ನಿಸಿಬಿಟ್ಟಿತು.

ಇವತ್ತು ಮನುಷ್ಯ ಜಗತ್ತಿನ ಬಗ್ಗೆ ಮಾತಾಡ್ತಾನೆ. ಗ್ಲೋಬಲೈಸೇಷನ್‌ ಅಂತಾನೆ. ಗ್ಲೋಬಲ್‌ ವಿಲೇಜ್‌ ಅಂತಾನೆ. ಇಲ್ಲೇ ಪಕ್ಕದ್ದಲ್ವಾ ಕ್ಯಾಲಿಫೋರ್ನಿಯಾ ಎಂಬಂತೆ ಮಾತಾಡುತ್ತಾನೆ. ಆದರೆ ತನ್ನದೇ ಆದ ಪುಟ್ಟ ಕುಟುಂಬದ ಬಗ್ಗೆ, ಅತಿ ಚಿಕ್ಕದಾದ ಆ ಯುನಿಟ್‌ನ ಬಗ್ಗೆ ತುಂಬ ಕಡಿಮೆ ಮಾತಾಡುತ್ತಾನೆ. ಮನುಷ್ಯ ವಿಮಾನ ರ್ಯಾಕೆಟ್ಟು, ಮೊಬೈಲು, ಸ್ಯಾಟಲೈಟು ಇವುಗಳನ್ನೆಲ್ಲ ಕಂಡುಹಿಡಿಯೋದಕ್ಕೆ ಸಾವಿರಾರು ವರ್ಷಗಳ ಮುಂಚೆಯೇ ‘ಕುಟುಂಬ’ ಅನ್ನೋ ಯುನಿಟ್‌ನ ಕಂಡುಹಿಡಿದ. ಇವತ್ತಿಗೂ ಅದು ಮನುಷ್ಯನ ಅತಿದೊಡ್ಡ ಸಾಧನೆಗಳ ಪೈಕಿ ಮೊದಲನೆಯದು. ಇವತ್ತು ನಾವು ಗಂಡ-ಹೆಂಡ್ತಿ, ನಾಳೆ ಅಪ್ಪ-ಅಮ್ಮ , ಆಚೆಗೆ ಅತ್ತೆ-ಮಾವ, ಮುಂದೆ ಅಜ್ಜ-ಅಜ್ಜಿ - ಹಾಗೆ ನಮ್ಮನ್ನು ಟ್ರಾನ್ಸ್‌ಫಾರ್ಮ್‌ ಮಾಡುತ್ತ ಪಕ್ವತೆಯೆಡೆಗೆ, ಪರಿಪೂರ್ಣತೆಯೆಡೆಗೆ ಒಯ್ಯುವುದೇ ಅಲ್ಲವೇ ಫ್ಯಾಮಿಲಿ ?

K.S.Narasimha Swamy with his wife Venkammaಅಂಥದೊಂದು ಫ್ಯಾಮಿಲಿಯನ್ನ ಎಷ್ಟು ಚೆಂದಾಗಿ ಇಟ್ಟುಕೊಳ್ಳಬಹುದು ಅನ್ನೋದನ್ನ ಹೇಳಿಕೊಟ್ಟವರು ನರಸಿಂಹಸ್ವಾಮಿ. ಪ್ರೀತಿ ಮತ್ತು ಕುಟುಂಬ ಆ ಕವಿಯ ಸ್ಥಾಯೀಭಾವಗಳು. ಅದರಾಚೆಗೆ ಅವರು ಯೋಚಿಸಲಿಲ್ಲವೆಂದಲ್ಲ ; ಅವರು ಏನನ್ನೇ ಯೋಚಿಸಿದರೂ ತಮ್ಮ ಕುಟುಂಬದ ಮಧ್ಯೆ ನಿಂತೇ ಯೋಚಿಸಿದರು. ಅಷ್ಟೊಂದು ಕೋಮಲೆಯಾದ, ಸುಂದರಳಾದ, ಸೀತಾದೇವಿಯಂಥ ಶ್ಯಾನುಭೋಗರ ಮಗಳು-ಅವಳನ್ನು ಎಷ್ಟು ಚೆಂದಗೆ ಹ್ಯಾಂಡಲ್‌ ಮಾಡಬೇಕು ಅನ್ನೋದನ್ನ ಒಂದು ತಲೆಮಾರಿಗೆ ಹೇಳಿಕೊಟ್ಟರು. ಹೆಂಗಸಿನ ಆಸೆ ದುಃಖ- ಎರಡೂ ನರಸಿಂಹಸ್ವಾಮಿಗಳಿಗೆ ಬಹುಬೇಗ ಅರ್ಥವಾಗುತ್ತಿದ್ದವು. ಆಕೆಯ ಮುನಿಸು, ಸೆಡವುಗಳಲ್ಲೂ ಅವರು ಚೆಲುವು ಕಾಣುತ್ತಿದ್ದರು. ಮನಸ್ಸಿನಲ್ಲಿ ಅವರು ಯಾರನ್ನು ಇಟ್ಟುಕೊಂಡು ಬರೆಯುತ್ತಿದ್ದರೋ ಗೊತ್ತಿಲ್ಲ : ಅವರ ಕವಿತೆಯ ಸಾಲು ಮಾತ್ರ ‘ಹೆಂಡತಿಯಾಬ್ಬಳು ಮನೆಯಾಳಗಿದ್ದರೆ ನನಗದೆ ಕೋಟಿ ರುಪಾಯಿ...’

ದಾಂಪತ್ಯ ಅನ್ನೋದು ಆರಂಭದಲ್ಲಿ ಎಷ್ಟು ಮಧುರವೋ, ಅದನ್ನು ವರ್ಷಗಟ್ಟಲೆ ಸಸ್ಟೈನ್‌ ಮಾಡೋದು, ಆನಂದಿಸೋದು ಅಷ್ಟೇ ಕಷ್ಟ . ಅದರಲ್ಲೂ ಗಂಡಸಿಗೆ. ಆದರೆ ನರಸಿಂಹಸ್ವಾಮಿಯವರ ಕವಿತೆಗಳನ್ನು ಓದಿ ನೋಡಿ. ಅಲ್ಲಿ ಮದುವೆಗೆ ಮುಂಚಿನ ಪ್ರೇಮಕ್ಕಿಂತ, ದಾಂಪತ್ಯದಲ್ಲಿನ ಪ್ರೇಮಕ್ಕೆ ಸೆಳವು ಜಾಸ್ತಿ . ಮಗು ಆಗುವುದಕ್ಕಿಂತ ಮುಂಚಿನ ಪ್ರೇಮ, ಮಗು ಆದ ನಂತರದ ಪ್ರೇಮ, ಕಳಿತು ಪಕ್ವಗೊಂಡ ಮಧ್ಯ ವಯಸ್ಸಿನ ಪ್ರೇಮ- ಹೀಗೆ ಗಂಡು-ಹೆಣ್ಣಿನ ಸಂಬಂಧದ ನಾನಾ ಮುಖಗಳಿಗೂ, ಅರಿಶಿನ-ಚಂದನ ಲೇಪಿಸಿಕೊಟ್ಟವರು ಆತ. ಒಬ್ಬ ಗಂಡು, ಮದುವೆಯಾಚೆಗೊಂದು ಸಂಬಂಧವಿಟ್ಟುಕೊಂಡರೂ ಆ ಬಗ್ಗೆ ಹೆಂಡತಿಗೇ ಹೇಳಿಕೊಳ್ಳುತ್ತಾನೆ. ಅವಳೆದುರೇ ಸಣ್ಣವನಾಗುತ್ತಾನೆ. ಕ್ಷಮೆ ಕೇಳುತ್ತಾನೆ. ‘ನಾನೀಗ ಏನು ಮಾಡಲಿ?’ ಅಂತ ಹಲಬುತ್ತಾನೆ. ಅದು, ನರಸಿಂಹಸ್ವಾಮಿಯವರಂತಹ ಸಜ್ಜನ ಮನಸ್ಸಿಗೆ ಮಾತ್ರ ಹೊಳೆಯಬಲ್ಲ , ತೋಚಬಲ್ಲ ಮಾತು. ಅಂತಹ ಭಾವಗಳನ್ನು ನಾನು ಇನ್ನೊಬ್ಬ ಕವಿಯ ಕವಿತೆಗಳಲ್ಲಿ ಗುರುತಿಸಿದ್ದೇನೆಂದರೆ, ಅದು ನಿಸಾರ್‌ ಅಹ್ಮದ್‌ರ ಕವಿತೆಗಳಲ್ಲಿ. ಇಬ್ಬರಿಗೂ ಪ್ರೀತಿ ಗೊತ್ತು . ಹೆಣ್ಣು ಗೊತ್ತು . ಆಕೆಯನ್ನು ಗೌರವಿಸುವುದು ಗೊತ್ತು . ಇಬ್ಬರ ಮೇಲೂ ಇರುವ ಆಪಾದನೆಯೆಂದರೆ, ‘ತುಂಬ ಅರ್ಥವಾಗುವ ಹಾಗೆ ಬರೆಯುತ್ತಾರೆ ಕಣ್ರೀ!’

ಅದು ಅನೇಕ ನವ್ಯರು ಸೇರಿಕೊಂಡು ಆರಂಭಿಸಿದ ಕುಹಕ. ಎಲ್ಲರಿಗೂ ಅರ್ಥವಾಗುವ ಹಾಗೆ ಬರೆಯುವಾತ, ಎಲ್ಲರಿಗೂ ಇಷ್ಟವಾಗುವಂತೆ ಬರೆಯುವಾತ, ಎಲ್ಲರೂ ಹಾಡಿಕೊಳ್ಳುವಂತೆ ಬರೆಯುವಾತ ನಿಷ್ಪ್ರಯೋಜಕ, ದಡ್ಡ ಮತ್ತು ಕೆಟ್ಟಕವಿ! ಅದಕ್ಕೆಂದೇ ಲಂಕೇಶರು ‘ಕುಕವಿ’ ಅನ್ನೋ ಶಬ್ದ ಹುಟ್ಟುಹಾಕಿದರು. ಲಕ್ಷ್ಮೀನಾರಾಯಣ ಭಟ್ಟರಂಥವರನ್ನು ‘ಕ್ಯಾಸೆಟ್‌ ಕವಿಗಳು’ ಅಂದರು. ಒಂದು ತಲೆಮಾರಿನ ಓದುಗರನ್ನು ಅನೇಕ ಉತ್ತಮ ಕವಿಗಳಿಂದ ದೂರವಿಟ್ಟರು. ಆ ಕಾಲಕ್ಕೆ ಅದೇ ಜಾಣ್ಮೆ ಅನ್ನಿಸಿಕೊಂಡಿತ್ತು . ಹಾಗೆ ಗೇಲಿ ಮಾಡಿ ಹಿರಿಯರ ಬಗ್ಗೆ ಮಾತನಾಡುವುದೇ ಹೆಗ್ಗಳಿಕೆಯಾಗಿತ್ತು . ನವ್ಯರ ಕೃತಿಗಳಿಗೆ ಮೆರುಗು ಬರಬೇಕು ಅಂದರೆ, ಅದಕ್ಕಿಂತ ಮುಂಚಿನವರನ್ನು ಗೇಲಿ ಮಾಡಬೇಕು ಎಂಬ ಧಾಟಿ ಜಾರಿಯಲ್ಲಿತ್ತು. ನಮ್ಮ ಇತಿಹಾಸವನ್ನ, ಅದನ್ನು ರೂಪಿಸಿದ ಹಿಂದಿನ ತಲೆಮಾರಿನವರನ್ನ ನಾವು ಗೌರವಿಸದೆ ಹೋದರೆ ಅದು ನಮಗೇ ಆಗುವ ನಷ್ಟ ಅನ್ನೋದನ್ನ ಲಂಕೇಶ್‌, ಅನಂತಮೂರ್ತಿ ಥರದ ಜಾಣರು ಕೂಡ ಅರ್ಥ ಮಾಡಿಕೊಳ್ಳಲಿಲ್ಲ . ಅವರೆಲ್ಲ ಆಗ ನವ್ಯದ ನಶೆಯಲ್ಲಿದ್ದರು.

ಈಗ ನವ್ಯದ ಮೆರವಣಿಗೆಯೂ ಮುಗಿದಿದೆಯಲ್ಲ ? ಅನಂತಮೂರ್ತಿಯವರಿಂದ ಹಿಡಿದು ರಾಮಚಂದ್ರದೇವ ಅವರ ತನಕದ ಅಷ್ಟೂ ನವ್ಯ ಸಾಹಿತ್ಯ ಒಮ್ಮೆ ತಿರುವಿ ಹಾಕಿನೋಡಿ. ಒಬ್ಬ ಆ್ಯವರೇಜ್‌ ಓದುಗನಿಗೆ ಅವರ ಬರಹಗಳು ಎಷ್ಟು ಮಾತ್ರ ಅರ್ಥವಾಗುತ್ತವೆ ಅಂತ ಕೇಳಿನೋಡಿ? ಸರಿಯಾಗಿ ಗಮನಿಸಿ ನೋಡಿದರೆ ಅನಂತಮೂರ್ತಿ ಮತ್ತು ಗಿರೀಶ್‌ ಕಾರ್ನಾಡರನ್ನೂ ಸೇರಿಸಿದಂತೆ ಅಷ್ಟೂ ಜನ ನವ್ಯರನ್ನು ಕಾಡಿದ್ದು ‘ಕಾಮ’. ಅದರಲ್ಲೂ ವಿಕೃತ ಕಾಮ! ಎಲ್ಲರ ಕಥೆಗಳ ಕ್ಲೈಮ್ಯಾಕ್ಸೂ ಒಂದೇ ಥರ. ಎಲ್ಲ ನವ್ಯ ಲೇಖಕರೂ ಮನೆಗೆಲಸದವಳೊಂದಿಗೆ ಮಲಗೆದ್ದು ಕೃತಾರ್ಥರಾದವರೇ. ಆ ವಿಕೃತಿಯನ್ನು ಎಲ್ಲರೂ ಸಮರ್ಥಿಸಿಕೊಂಡವರೇ. ಎಲ್ಲರೂ ಜನಕ್ಕೆ ಅರ್ಥವಾಗದಂತೆ ಬರೆಯುವುದನ್ನು ಶಾಣ್ಯಾತನ ಅಂದುಕೊಂಡವರೇ. ಆ ಪೈಕಿ ಇದ್ದುದರಲ್ಲಿ ಲಂಕೇಶರೇ ಮೇಲು. ಉಳಿದವರಿಗೆ, ‘ಜನಕ್ಕೆ ಅರ್ಥವಾಗುವ ಹಾಗೆ ಬರೆಯಬೇಕು ಕಣ್ರಯ್ಯಾ’ ಅಂತ ಹೇಳಿಕೊಡುವುದಕ್ಕೆ ದಲಿತ, ಬಂಡಾಯದವರೇ ಬರಬೇಕಾಯಿತು.

ಹೊರಗೆ ಇದೆಲ್ಲ ಗಲಿಬಿಲಿ ನಡೆಯುತ್ತಿದ್ದರೂ ಒಳಗೆ ತೂಗುಯ್ಯಾಲೆಯ ಮೇಲೆ ಕುಳಿತು ತಮ್ಮ ಪಾಡಿಗೆ ತಾವು ‘ಮನೆಯ ಹಾಡು’ಗಳನ್ನು ಕೆ.ಎಸ್‌.ನರಸಿಂಹಸ್ವಾಮಿ ಬರೆಯುತ್ತಲೇ ಹೋದರು. ಹೆಣ್ಣು , ಅವಳ ಕಣ್ಣು , ಅವಳ ಮನಸು, ಜೋಯಿಸರ ಕರು, ಹೆಂಡತಿಯ ಮುಟ್ಟು , ದಿಂಬಿನ ಚಿತ್ತಾರ, ಒಳಮನೆಯ ಬಡತನ, ಅದನ್ನು ಮರೆಸುವ ಪ್ರೀತಿ, ಎರಡೇ ಎರಡು ಹಲ್ಲು ಬಂದ ಹನುಮಂತನಂಥ ಮುದ್ದು ಮಗು, ಅವಳ ಮೂಗುತಿಯ ತಿರುಪು, ಅಕ್ಕಿ ನುಚ್ಚಿನ ನಡುವೆ ಸರಿದಾಡುವ ಬರಿಗೈ- ಇವುಗಳ ಸುತ್ತಲೇ ಅಲೆಯಿತು ನರಸಿಂಹಸ್ವಾಮಿಗಳ ಕಾವ್ಯ. ಪ್ರತಿ ಸಲವೂ ಮನುಷ್ಯನಿಗೆ ಮನೆಯ ನೆನಪು ಮಾಡಿಕೊಟ್ಟಿತು ಮಲ್ಲಿಗೆಯ ಕಾವ್ಯ.

ನಮಗೆ ಕ್ರಾಂತಿಗೀತೆ ಬರೆದುಕೊಟ್ಟವರು ಬೇಕಾದಷ್ಟು ಇದ್ದಾರೆ. ಅರ್ಥವಾಗದ ಹಾಗೆ ಕವಿತೆ ಬರೆದಿಟ್ಟು , ಅದಕ್ಕೆ ಇನ್ನೊಬ್ಬರಿಂದ ಅರ್ಥ ಬರೆಸಿ ಓದಲು ಬಿಟ್ಟವರೂ ಇದ್ದಾರೆ. ಮಹಾನ್‌ ಕ್ರಾಂತಿಕಾರಿಗಳು ವಿಧಾನಸೌಧದ ಕಟಾಂಜನದ ಮುಂದೆ ಬೋರಲು ಮಲಗಿದ್ದನ್ನು ನಾವು ನೋಡಿದ್ದೇವೆ. ಜ್ಞಾನಪೀಠಿಗಳ ಭಾಷಣಗಳು ಇವತ್ತಿಗೂ ನಾಳೆಗೂ ಉಲ್ಟಾ ಹೊಡೆದು ನಿಂತದ್ದನ್ನೂ ನೋಡಿದ್ದೇವೆ. ಸಾಕು, ನಮ್ಮ ಮಿದುಳು ತುಂಬಿದೆ. ನಮಗೆ ಬೇಕಾದದ್ದು , ಹೆಂಡತಿಯಾಂದಿಗೆ ಕೂತು ಹಾಡಿಕೊಂಡು ಹಗುರಾಗಬಲ್ಲ ಒಂದು ನಿತ್ಯಗೀತೆ. ಅದನ್ನು ಬದುಕಿನುದ್ದಕ್ಕೂ ಬರೆದುಕೊಟ್ಟವರು ನರಸಿಂಹಸ್ವಾಮಿ. ನಾವು ಅವರಿಗೆ ಋಣಿ.

ನನ್ನ ಹಳೇ ಮನೆಗೆ ಕೊಂಚ ಹತ್ತಿರದಲ್ಲೇ ಇದ್ದ ನರಸಿಂಹಸ್ವಾಮಿಗಳ ಮನೆಗೆ ಸಾಕಷ್ಟು ಸಲ ಹೋಗಿಬಂದಿದ್ದೇನೆ. ಯಾವುದೋ ಕಾರ್ಯಕ್ರಮಕ್ಕೆ ಕರೆಯಲು ಹೋದರೆ, ‘ಅಲ್ಲಿ ಹಾರ-ಶಾಲು ಹಾಕೋ ಬದಲು, ಅದಕ್ಕಾಗುವಷ್ಟು ಮೊತ್ತದ ದುಡ್ಡು ಕೊಡಿಸಿಬಿಡಪ್ಪಾ....’ ಅಂದಾಗ ಕಣ್ಣೀರಿಟ್ಟುಕೊಂಡಿದ್ದೇನೆ. ಅಷ್ಟಾದರೂ ಆ ವೃದ್ಧ, ಮಲ್ಲಿಗೆಯ ಕವಿ ಕೆಲವೊಮ್ಮೆ ಧಿಗ್ಗನೆ ತಿರುಗಿಬಿದ್ದು ಅವರಿವನ್ನು ಝಾಡಿಸಿದ್ದು ಕಂಡು ಆಶ್ಚರ್ಯಪಟ್ಟಿದ್ದೇನೆ. ಅದೊಮ್ಮೆ ಕೆ.ಎಸ್‌.ನರಸಿಂಹಸ್ವಾಮಿಗಳ ಅಭಿನಂದನಾ ಸಮಾರಂಭ ನಡೆದಿತ್ತು . ಅನಂತಮೂರ್ತಿ ಭಾಷಣ ಮಾಡುತ್ತಿದ್ದರು. ತುಂಬ ಹೊತ್ತಿನಿಂದ ವೇದಿಕೆಯ ಮೇಲೆ ಕುಳಿತಿದ್ದರಿಂದ ನರಸಿಂಹಸ್ವಾಮಿಗಳಿಗೆ ಬಳಲಿಕೆ. ವೇದಿಕೆಯ ಮೇಲೆ ಹಾಗೇ ಕುರ್ಚಿಗೆ ತಲೆಯಾನಿಸಿ ನಿದ್ದೆ ಹೋಗಿಬಿಟ್ಟಿದ್ದರು. ಅನಂತಮೂರ್ತಿಗಳಿಗೆ ಅವತ್ತು ಅಡ್ವೈಸು ಮಾಡುವ ಹುಕಿ ಬಂದುಬಿಟ್ಟಿತ್ತು . ‘ನರಸಿಂಹಸ್ವಾಮಿಯವರು ಕವಿತೆಗಳನ್ನು ಹೀಗಲ್ಲ, ಮತ್ತಿನ್ಹೇಗೋ ಬರೆಯಬೇಕಿತ್ತು’ ಎಂಬ ಧಾಟಿಯಲ್ಲಿ ಮಾತನಾಡಿ ಕುಳಿತರು. ಸದ್ಯ, ನರಸಿಂಹಸ್ವಾಮಿ ನಿದ್ರೆ ಮಾಡಿದ್ದಾರೆ: ಕೇಳಿಸಿಕೊಂಡಿಲ್ಲವಲ್ಲ ಅಂದುಕೊಂಡೆ. ಅಷ್ಟರಲ್ಲಿ ನರಸಿಂಹಸ್ವಾಮಿಗಳ ಸರತಿ ಬಂತಲ್ಲ ? ಕುರ್ಚಿಗೆ ಆನಿಸಿದ್ದ ತಲೆಯೆತ್ತಿ , ತಲೆ ಕೊಡವಿ ಮಾತಿಗೆ ನಿಂತ ನರಸಿಂಹಸ್ವಾಮಿ,

‘ಕವಿತೆ ಹೇಗೆ ಬರೀಬೇಕು ಅನ್ನೋದನ್ನ ನಾನು ಈ ಅನಂತಮೂರ್ತಿಯಿಂದ ಕಲಿಯಬೇಕಿಲ್ಲ !’ ಅಂತಲೇ ಆರಂಭಿಸಿ ಝಾಡಿಸಲು ಶುರುಮಾಡಿಬಿಟ್ಟರು. ಕವಿಗೆ ಇರಬೇಕಾದ ಧರತಿ ಅಂದರೆ, ಅದು.

ಎಂಬತ್ತೆಂಟು ವರ್ಷದ ತುಂಬು ಬದುಕನ್ನು ಪೂರೈಸೇ ಹೊರಟುಹೋಗಿದ್ದಾರೆ ಕೆಎಸ್‌ನ. ಅವರ ಬಡತನ, ಅತೃಪ್ತಿ, ನಿಸ್ಸಹಾಯಕತೆ, ಅನಾರೋಗ್ಯ, ದುಗುಡ, ದುಮ್ಮಾನಗಳು ಏನಿದ್ದವೋ ಗೊತ್ತಿಲ್ಲ . ಓದುಗರಿಗೆ ಅವುಗಳನ್ನು ಎಂದೂ ಹೇಳಿಕೊಂಡು ಅವರು ಪೀಡಿಸಲಿಲ್ಲ . ಪ್ರಶಸ್ತಿಗಳಿಗಾಗಿ ಬಡಿದಾಡಲಿಲ್ಲ . ಉಳಿದ ಕವಿಪುಂಗವರಂತೆ ಅವರು ಯಾವ ಯೂನಿವರ್ಸಿಟಿಯಲ್ಲೂ ಪ್ರೊಫೆಸರರಾಗಿರಲಿಲ್ಲವಾದ್ದರಿಂದ ಅವರನ್ನು ಹೊಗಳುವ, ವಿಗ್ರಹ ಮಾಡಿ ನಿಲ್ಲಿಸುವ, ರಸ್ತೆಗಳಿಗೆ-ಯೂನಿವರ್ಸಿಟಿಗಳಿಗೆ ಅವರ ಹೆಸರಿಡುವ, ಪ್ರಶಸ್ತಿಗಳಿಗಾಗಿ ಲಾಬಿ ಮಾಡುವ ‘ಶಿಷ್ಯಕೋಟಿ’ ಅವರಿಗಿರಲಿಲ್ಲ . ಇದ್ದುದು ಅದೇ ಪುಟ್ಟ ಮನೆ, ಮದರಾಸು ನಶ್ಯ, ದಪ್ಪ ಚಾಳೀಸು, ಹೆಂಡತಿಯ ಒಲುಮೆ. ನರಸಿಂಹ ಸ್ವಾಮಿ ಎಲ್ಲ ಬ್ರಾಹ್ಮಣರ ಮನೆಗಳಲ್ಲಿ ನಿಸ್ಸಹಾಯಕ ಯಜಮಾನರಂತೆ ಕೊಂಚ ಸಿಡುಕುತ್ತಿದ್ದರು. ‘ನಿಮ್ಮ ಬಗ್ಗೆ ಇಂಥ ಪತ್ರಿಕೆಯಲ್ಲಿ ಹೀಗೆ ಹೊಗಳಿ ಬರೆದಿದ್ದಾರೆ’ ಅಂತ ಹೇಳಿದರೆ ‘ಅದ್ಸರೀನಪ್ಪಾ, ನಾನೆಲ್ಲಿ ಅದನ್ನ ಹುಡಿಕ್ಕೊಂಡು ಹೋಗಲಿ? ಆ ಪೇಪರ್‌ ಕಟಿಂಗ್‌ ಇದೆಯಾ? ಇದ್ರೆ ಕೊಡು’ ಅನ್ನುತ್ತಿದ್ದರು. ಕೆಲ ವರ್ಷಗಳ ಹಿಂದೆ ನರಸಿಂಹಸ್ವಾಮಿಗಳಿಗೆ ತಾತ್ಕಾಲಿಕವಾದ ಮತಿ ಭ್ರಮಣೆಯಾಗಿತ್ತು . ಸರ್ಕಾರದವರು ತಮ್ಮನ್ನು ಏನಾದರೂ ಮಾಡಿಬಿಡಬಹುದೇನೊ ಎಂಬ ಸುಳ್ಳೇ ಭಯ ಅವರನ್ನು ಆವರಿಸಿಕೊಂಡಿತ್ತು . ಆಗ ಲಂಕೇಶ್‌ ಮತ್ತು ಇತರ ಗೆಳೆಯರು ಸೇರಿ ಅವರಿಗೆ ನೆರವಾದದ್ದು ನನಗೆ ನೆನಪಿದೆ.

ಮೊನ್ನೆ ನರಸಿಂಹಸ್ವಾಮಿ ತೀರಿಕೊಂಡರು ಅಂತ ಸುದ್ದಿ ಬಂದ ತಕ್ಷಣ ಅವರು ಬರೆದ ಕವಿತೆಗಳ ಪೈಕಿ ನನಗಿಷ್ಟವಾದವುಗಳನ್ನೆಲ್ಲ ಮತ್ತೊಮ್ಮೆ ಒಂದು ಸಲ ಓದಿಕೊಂಡೆ. ಯಾಕೋ ಇದೊಂದು ಕವಿತೆ ಕೈ ಹಿಡಿದು ಜಗ್ಗಿದಂತಾಯಿತು:

‘ಬತ್ತಿದ ಕೆರೆಯಂಗಳದಲ್ಲಿ

ಹಾಡು ಹಕ್ಕಿ ಸತ್ತಿದೆ

ಅದರ ಕತೆಯ ಕೇಳಲಿಕ್ಕೆ

ಯಾರಿಗೆ ಪುರುಸೊತ್ತಿದೆ?’

ಮಲ್ಲಿಗೆ ದಳಗಳು

ಕೆ.ಎಸ್‌.ನರಸಿಂಹಸ್ವಾಮಿ ಬದುಕಿನ ಹೆಜ್ಜೆಗಳು

ದೀಪ ಸಾಲಿನ ನಡುವೆ : ಒಲವ ಕವಿಯ ಹೊಸಗಾನ !

ಮಲ್ಲಿಗೆಕವಿಯ ಹದಿನಾರನೇ ಕಾವ್ಯದೀಪಿಕೆ !

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more