ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮೈಲಿಂಗ್‌ ಬುದ್ಧನ ಶಿಲ್ಪಿಯಾಬ್ಬರು ತೀರಿಕೊಂಡ ಸುದ್ದಿ ಕೇಳಿ....

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ರಾಜಾರಾಮಣ್ಣ ತೀರಿಹೋದ ಸುದ್ದಿ ಗೊತ್ತಾದಾಗ ನಾನು ಶಿವಮೊಗ್ಗದಲ್ಲಿದ್ದೆ. ತಕ್ಷಣ ನನಗೆ ನೆನಪಾಗಿದ್ದು ಕಂಚಿ ಕಾಮಕೋಟಿ ಸ್ವಾಮಿಗಳ ಬಗ್ಗೆ ರಾಜಾರಾಮಣ್ಣ ಬರೆದಿದ್ದ ಲೇಖನ. ನನ್ನ ಮಟ್ಟಿಗೆ ಸೈನ್ಸು , ಅದರಲ್ಲೂ ಫಿಜಿಕ್ಸು ಕೊಂಚ ತುಟ್ಟಿಯೇ. ಅಣುವಿಜ್ಞಾನಿ ರಾಜಾರಾಮಣ್ಣ ಒಬ್ಬ ವಿಜ್ಞಾನಿಯಾಗಿ ಅರ್ಥವಾದದ್ದಕ್ಕಿಂತ ಹೆಚ್ಚು, ಇತಿಹಾಸ ಸೃಷ್ಟಿಸಿದವರಾಗಿಯೇ ನನಗೆ ಪರಿಚಿತ. ಭಾರತದ ಮಿಲಿಟರಿ ತಾಕತ್ತುಗಳ ಬಗ್ಗೆ ನಾನು ಹುಚ್ಚು ಹತ್ತಿಸಿಕೊಂಡು ಓದತೊಡಗಿದ್ದು ‘ಹಿಮಾಲಯನ್‌ ಬ್ಲಂಡರ್‌’ ಅನುವಾದಿಸಿದ ನಂತರವೇ. 1962ರಲ್ಲಿ ಚೀಣದ ಕೈಯಲ್ಲಿ ನಾವು ತಿಂದ ಒದೆ ನಮ್ಮನ್ನು ನೈತಿಕವಾಗಿ ಅಡ್ಡಡ್ಡ ಮಲಗಿಸಿ ಹಾಕಿತ್ತು. ಜವಹಾರಲಾಲ್‌ ನೆಹರೂ ಆ ಅವಮಾನದ ಯಾತನೆಯಲ್ಲಿ ಸತ್ತೇ ಹೋದರು. ಅನಂತರ ತುಂಬ ಕಡಿಮೆ ಅವಧಿಗೆ ಪ್ರಧಾನಿಯಾಗಿದ್ದ ಲಾಲ್‌ಬಹದ್ದೂರ್‌ ಶಾಸ್ತ್ರಿಯವರು ಒಂದು ಕಡೆ ಸೈನಿಕರನ್ನೂ, ಇನ್ನೊಂದೆಡೆ ರೈತರನ್ನೂ ಗಟ್ಟಿಗೊಳಿಸುವ ಪ್ರಯತ್ನ ಮಾಡಿದರು. ಆದರೆ ಹಟಕ್ಕೆ ಬಿದ್ದವರಂತೆ ಭಾರತದ ಸೈನ್ಯಕ್ಕೆ ತಾಕತ್ತು, ಬೆನ್ನೆಲುಬು ಮತ್ತು ಜಗತ್ತಿನ ಯಾವ ರಾಷ್ಟ್ರಕ್ಕೂ ಸುಳಿವು ಕೊಡದಂತೆ ಒಂದು ದೈತ್ಯ ಶಕ್ತಿಯನ್ನು ನೀಡಿದಾಕೆ ಶ್ರೀಮತಿ ಇಂದಿರಾ ಗಾಂಧಿ ! ನಾವು ಆಕೆಯನ್ನು ಬೇರೆ ಯಾವ ಕಾರಣಕ್ಕೆ ಬೇಕಾದರೂ ನಿಂದಿಸಬಹುದು, ಖಂಡಿಸಬಹುದು. ಆದರೆ ಇಂದಿರಾಗಾಂಧಿ ಭಾರತದ ಸೈನ್ಯಕೆ ್ಕ, ಭಾರತದ ರಕ್ಷಣೆಗೆ ಕೊಟ್ಟ ಕೊಡುಗೆ ಇದೆಯಲ್ಲ ? ಅದು ಮಾತ್ರ ಶಾಶ್ವತ ಸ್ಮರಣೀಯ. 1973-74ರ ಆ ದಿನಗಳಲ್ಲಿ ಇಂದಿರಾ ಗಾಂಧಿಯವರೊಂದಿಗೆ ಇದ್ದ ಕೇವಲ ಮೂವರು ನಂಬಿಕಸ್ಥರಲ್ಲಿ ಒಬ್ಬರೇ ಈ ತುಮಕೂರಿನ ವಿಜ್ಞಾನಿ ರಾಜಾರಾಮಣ್ಣ !

Dr. Raja Ramanna, doyen of Indias nuclear programಆಗ ರೂಪಿಸಿದ ಇಡೀ ಕಾರ್ಯಕ್ರಮಕ್ಕೆ ಅವರಿಟ್ಟಿದ್ದ ಹೆಸರು Operation Smiling Buddha ಅಂತ. ಆಗ ರಾಜಾರಾಮಣ್ಣ BARC ಅಂತ ಕರೆಯಲ್ಪಡುವ ಭಾಭಾ ಅಟೋಮಿಕ್‌ ರಿಸರ್ಚ್‌ ಸೆಂಟರ್‌ನ ಅಧ್ಯಕ್ಷ ರಾಗಿದ್ದರು. ಅವರ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಹತ್ತಾರು ವಿಜ್ಞಾನಿಗಳಿಗೆ ಕೂಡ ತಾವು ಕರಾರುವಾಕ್ಕಾಗಿ ಏನು ಕೆಲಸ ಮಾಡುತ್ತಿದ್ದೇವೆ ಎಂಬುದರ ಸುಳಿವಿರಲಿಲ್ಲ. Smiling Buddha1974 ಬಗ್ಗೆ ಸಂಪೂರ್ಣವಾದ ಮಾಹಿತಿ ಹೊಂದಿದ್ದವರು ನಾಲ್ಕೇ ಜನ .

ಒಬ್ಬರು ಇಂದಿರಾ ಗಾಂಧಿ, ಇನ್ನಿಬ್ಬರು ಆಕೆಯ ಸಲಹೆಗಾರರಾದ ಪಿ.ಎನ್‌.ಹಕ್ಸರ್‌ ಮತ್ತು ಡಿ.ಪಿ.ಧರ್‌. ನಾಲ್ಕನೆಯವರೇ ಅಣುವಿಜ್ಞಾನಿ ರಾಜಾರಾಮಣ್ಣ . ಎಷ್ಟು ಗೌಪ್ಯವಾಗಿ ಅಣು ಬಾಂಬ್‌ ತಯಾರಿಕೆಯ ಕೆಲಸ ನಡೆಯುತ್ತಿತ್ತೆಂದರೆ, ಭಾರತದ ರಕ್ಷಣಾ ಮಂತ್ರಿಗೆ ಕೂಡ ಅದರ ಸುಳಿವಿರಲಿಲ್ಲ. ಒಂದು ಕಡೆ ಚೀನದ ಕೈಯಲ್ಲಿ ಅನುಭವಿಸಿದ ಸೋಲು, ಇನ್ನೊಂದು ಕಡೆ ಪದೇಪದೆ ಪಾಠ ಕಲಿಸಿದ ನಂತರವೂ ಭಾರತದೊಂದಿಗಿನ ಪಾಕಿಸ್ತಾನದ ಹಗೆತನ, ದೂರ ನಿಂತೇ ಎಲ್ಲವನ್ನೂ ಗಮನಿಸುತ್ತಿದ್ದ ಅಮೆರಿಕ - ಇವರೆಲ್ಲರ ಕಣ್ಣೂ ತಪ್ಪಿಸಿ ಭಾರತ ತನ್ನನ್ನು ತಾನು ಬಲಿಷ್ಠಗೊಳಿಸಿಕೊಳ್ಳಬೇಕಾಗಿತ್ತು. ಚಿಕ್ಕ ಸುಳಿವು ಸಿಕ್ಕರೂ ಜಾಗತಿಕ ಮಟ್ಟದಲ್ಲಿ ಸ್ಥಿತ್ಯಂತರಗಳಾಗಿಬಿಡುತ್ತಿದ್ದವು. ಆದ್ದರಿಂದಲೇ ಅತ್ಯಂತ ರಹಸ್ಯವಾಗಿ ಕೆಲಸ ಮಾಡಿ ಮುಗಿಸಿದ ಡಾ. ರಾಜಾರಾಮಣ್ಣ 1974 ರ ಮೇ ತಿಂಗಳಲ್ಲಿ ಇದೇ ಪೋಖ್ರಾನ್‌ನಲ್ಲಿ ಮೊದಲ ಬಾರಿಗೆ ನ್ಯೂಕ್ಲಿಯರ್‌ ಟೆಸ್ಟ್‌ ಯಶಸ್ವಿಯಾಗಿ ಮಾಡಿಮುಗಿಸಿದ್ದರು.

ಹಾಗೆ ಬಲಗೊಂಡಿತ್ತು ಭಾರತ. ರಾಜಾರಾಮಣ್ಣನವರ ಕಾರ್ಯಕ್ಷಮತೆ ಮತ್ತು ಗೌಪ್ಯ ಕಾಪಾಡಿಕೊಂಡು ಬಂದ ರೀತಿ ಇಂದಿರಾಗಾಂಧಿಗೆ ಅದೆಷ್ಟು ಪ್ರಿಯವಾಗಿತ್ತೆಂದರೆ, ಆಕೆ ಪ್ರಶಸ್ತಿಗಳ ಸುರಿಮಳೆಯನ್ನೇ ಕರೆದಿದ್ದಳು. ಅಷ್ಟಾದರೂ ಭಾರತದ ಬಳಿ ಅಣುಶಕ್ತಿಯಿದೆ ಅಂತಾ ರಾಜಾರಾಮಣ್ಣ ಬಹಿರಂಗವಾಗಿ ಬಾಯಿಬಿಟ್ಟಿರಲಿಲ್ಲ.

ನಿಮಗೆ ಗೊತ್ತಿರಲೂಬಹುದು. ಇವತ್ತಿಗೂ ಅಣುಸಂಬಂಧಿ ಕೆಲಸಗಳು ನಡೆಯುವುದೇ ತುಂಬ ಗೌಪ್ಯವಾಗಿ. ವಾಜಪೇಯಿ ಕಾಲದಲ್ಲಿ ಪೋಖ್ರಾನ್‌ ಸಿಡಿತಗಳಾದಾಗ ನಮ್ಮ ಇನ್ನೊಬ್ಬ ಅಣುವಿಜ್ಞಾನಿ ಅಬ್ದುಲ್‌ ಕಲಾಂ ತೆಪ್ಪಗೆ ಒಂದು ಮಿಲಿಟರಿ ಪೋಷಾಕು ಧರಿಸಿಕೊಂಡು ಮರಳುಗಾಡಿನಲ್ಲಿ ಓಡಾಡಿಕೊಂಡಿದ್ದರು. ಇಡೀ ಕಾರ್ಯಚರಣೆ ಚಿಕ್ಕದೊಂದುmilitary activityಯೇನೋ ಎಂಬಂತೆ ನಡೆದುಹೋಗಿತ್ತು. ಆ ದಿನಗಳಲ್ಲಿ ಅಬ್ದುಲ್‌ ಕಲಾಂ ಒಂದು ಪಟ್ಟಾಪಟ್ಟಿ ಲುಂಗಿ, ಬನೀನು, ಕಾಲಿಗೆ ರಬ್ಬರು ಚಪ್ಪಲಿ ಹಾಕಿಕೊಂಡು army messಗಳಲ್ಲಿ ಉಳಿದುಕೊಂಡಿರುತ್ತಿದ್ದುದನ್ನು ಅನೇಕರು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ.‘ಇಂಥದೊಂದು ಸರಳ ಬದುಕು ಮತ್ತು ಗೌಪ್ಯ ಕಾಪಾಡುವ ರೀತಿಗಳನ್ನು ನಾನು ಕಲಿತಿದ್ದುದೇ ನನ್ನ ಗುರು ಡಾ. ರಾಜಾರಾಮಣ್ಣ ಅವರಿಂದ’ ಅಂತ ಸ್ವತಃ ಕಲಾಂ ಹೇಳಿದ್ದಾರೆ.

ಎಲ್ಲಿಯ ತನಕ ರಾಜಾರಾಮಣ್ಣ ಭಾರತದ ಅಣು ತಾಕತ್ತಿನ ಬಗ್ಗೆ ಮೌನವಾಗಿದ್ದರು ಅಂದರೆ 1974 ರಲ್ಲಾದ ಸಾಧನೆಯ ಬಗ್ಗೆ ಅವರು 1994ರಲ್ಲಾದ ಸಾಧನೆಯ ಬಗ್ಗೆ ಅವರು 1997ರ ತನಕ ಮಾತೇ ಆಡಿರಲಿಲ್ಲ. ಕಡೆಗೆ ಅಕ್ಟೋಬರ್‌, 1997 ರಲ್ಲಿ ಪುಣೆಯ ಸಭೆಯಾಂದರಲ್ಲಿ ಮಾತಾಡಿದ ರಾಜಾರಾಮಣ್ಣ ತೀರ ಅನಿರೀಕ್ಷಿತವಾಗಿ ‘1974ರಲ್ಲೇ ಭಾರತದೇಶ ನ್ಯೂಕ್ಲಿಯರ್‌ ತಾಕತ್ತನ್ನು ಗಳಿಸಿಕೊಂಡಿತು’ ಅಂದುಬಿಟ್ಟರು. ಮಾರನೆಯ ದಿನ ಇಡೀ ಜಗತ್ತಿನ ಅಷ್ಟೂ ಪತ್ರಿಕೆಗಳು ಈ ಸುದ್ದಿಯನ್ನು ದೊಡ್ಡ ದನಿಯಲ್ಲಿ ಪ್ರಕಟಿಸಿದ್ದವು. ಅಲ್ಲಿನ ತನಕ ಮುಗುಮ್ಮಾಗಿಯೇ ಇದ್ದ ಭಾರತದ ಪ್ರಭುಗಳು ಜಗತ್ತಿನ ಮುಂದೆ ಸತ್ಯ ಒಪ್ಪಿಕೊಳ್ಳಬೇಕಾಯಿತು. ಭಾರತವೆಂಬ ದೇಶ ಜಗತ್ತಿನ ಭೂಪಟದ ಮೇಲೆ ಅಣುಶಕ್ತಿಯುಳ್ಳ ರಾಷ್ಟ್ರವಾಗಿ ಗುರುತಿಸಲ್ಪಟ್ಟಿತು. ಅದರ ಬೆನ್ನಲ್ಲೇ ಅಣುಶಕ್ತಿ ಹೊಂದಿದ ದೇಶ ಸ್ವೀಕರಿಸಿ ನಿರ್ವಹಿಸಬೇಕಾದ ಎಲ್ಲ ಜವಾಬ್ದಾರಿಗಳೂ ದೇಶದ ಮೇಲೆ ಬಿದ್ದವು. ಹಾಗೆ ಪುಣೆಯಲ್ಲಿ ರಾಜಾರಾಮಣ್ಣ ಹೇಳಿಕೆ ನೀಡಿದ ಒಂದು ವರ್ಷದೊಳಗಾಗಿ ಪೋಖ್ರಾನ್‌ನಲ್ಲಿ ಪರೀಕ್ಷೆಗಳನ್ನು ಮಾಡಿ ವಿಜೃಂಭಿಸಿತು ಭಾರತ.

ಭಾರತದ ನಸೀಬು ದೊಡ್ಡದು. ಅಣುವಿಜ್ಞಾನದ ಗೊಂದಲ ಸಾರಥಿ ಹೋಮಿ ಭಾಭಾ, ನಂತರ ರಾಜಾ ರಾಮಣ್ಣ, ಅಬ್ದುಲ್‌ ಕಲಾಂ, ಅನಿಲ್‌ ಕಾಕೋಡ್ಕರ್‌, ಪಿ.ಕೆ. ಅಯ್ಯಂಗಾರ್‌ ಮುಂತಾದ ಅಣುವಿಜ್ಞಾನಿಗಳ ಪಡೆಯೇ ಇಲ್ಲಿ ನೆಲೆಸಿದೆ. ಹೇಗೆ ಹೋಮಿ ಭಾಭಾ ಅವರ ಗರಡಿಯಲ್ಲಿ ತಾವು ತಯಾರಾದರೋ, ಅದೇ ರೀತಿ ತಮ್ಮ ನೆರಳಿನಲ್ಲಿ ಇನ್ನಷ್ಟು ಮತ್ತಷ್ಟು ವಿಜ್ಞಾನಿಗಳು ತಯಾರಾಗಲಿ ಅಂತ ಬಯಸಿದ್ದರು ರಾಜಾರಾಮಣ್ಣ. ಆದರೆ ಭಾರತದ ಜಾಣ ಹುಡುಗರು ಪಶ್ಟಿಮ ದೇಶಗಳಿಗೆ ವಲಸೆ ಹೋದಾಗ ಸಿಡಿಮಿಡಿಗೊಂಡು ಬಿಡುತ್ತಿದ್ದರು. ಖಿನ್ನರಾಗುತ್ತಿದ್ದರು. ಇವತ್ತಿಗೆ 55 ವರ್ಷಗಳ ಹಿಂದೆಯೇ ಡಾ. ಹೋಮಿ ಭಾಭಾ ರಂಥವರು ಭಾರತವನ್ನು ಅಣುಶಕ್ತಿಯುಳ್ಳ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ ಪ್ರಾರಂಭಿಸದೆ ಹೋಗಿದ್ದಿದ್ದರೆ, ಇವತ್ತಿಗೆ ನಾವು ಇನ್ನೂ ಯಾವ ಯುಗದಲ್ಲಿರುತ್ತಿದ್ದೆವೋ? ವರ್ಷಗಟ್ಟಲೆ, ದಶಕಗಟ್ಟಲೆ ಬೇರೆ ಬೇರೆ ದೇಶಗಳಿಂದ ಸರಕು ಸಾಮಗ್ರಿ ತರಿಸಿಕೊಂಡು ಒದ್ದಾಡುತ್ತಿದ್ದ ನಾವು ಇವತ್ತು ಪ್ರತಿಯಾಂದನ್ನೂ ಸ್ವತಂತ್ರವಾಗಿ ಉತ್ಪಾದಿಸಿಕೊಳ್ಳಬಲ್ಲ ಸ್ಥಿತಿಗೆ ತಲುಪಿದ್ದೇವೆ. ಆದರೂ ನಮ್ಮ ಹುಡುಗರು ದೇಶಕ್ಕಾಗಿ ಕೈಕೆಸರು ಮಾಡಿಕೊಳ್ಳಲೊಲ್ಲರು. ಏನಾಗಿದೆ ಇವರಿಗೆ ಅಂತ ಹಲುಬುತ್ತಿದ್ದರು.

ಸ್ವಭಾವತಃ ಸಜ್ಜನರಾಗಿದ್ದ , ಅತ್ಯುತ್ತಮ ಪಿಯಾನೋ ವಾದಕರಾಗಿದ್ದ, ಕೆಲವು ಬಾರಿ ಗೇಲಿಗೊಳಗಾಗುವಷ್ಟು ದೇವರು ದಿಂಡರು, ಸ್ವಾಮಿಗಳು, ರಾಹುಕಾಲ ಅಂತೆಲ್ಲ ಮಾತನಾಡುತ್ತಿದ್ದ ರಾಜಾರಾಮಣ್ಣ- ಅದೇನೇ ಆಗಿರಲಿ, ಒಬ್ಬ ವಿಜ್ಞಾನಿಯಾಗಿ ಅವರು ಭಾರತಕ್ಕೆ ಕೊಟ್ಟ ಕೊಡುಗೆ ದೊಡ್ಡದು. ಪದ್ಮಭೂಷಣ -ವಿಭೂಷಣ ಮುಂತಾದ ಪ್ರಶಸ್ತಿ , ಗೌರವಗಳೆಲ್ಲ ಅವರಿದ್ದಲ್ಲಿಗೇ ಬಂದವು. ಆರನೇ ವರ್ಷದವರಿದ್ದಾಗ ಕಲಿತ ಪಿಯಾನೋ ಮತ್ತು ಉದ್ದಕ್ಕೂ ಉಳಿಸಿಕೊಂಡು ಬಂದ ಸಂಗೀತಾಸಕ್ತಿ ಅವರೊಂದಿಗೆ ಕಡೆತನಕ ಬಂದವು. ಅವರಿಗೆ ಬೆಂಗಳೂರಿನ ಬಗ್ಗೆ, ಮೈಸೂರಿನ ಬಗ್ಗೆ ತುಂಬ ಪ್ರೀತಿಯಿತ್ತು. ತುಂಬ ಆಳವಾಗಿ ಭಾರತೀಯ ವೇದಾಂತ -ವೇದ ಎರಡನ್ನೂ ಓದಿಕೊಂಡಿದ್ದರು. ಎಪ್ಪತ್ತೊಂಬತ್ತು ವರ್ಷಗಳ ತುಂಬು ಜೀವನ ನಡೆಸಿ, ಕೊನೆಯ ನಾಲ್ಕಾರು ದಿನಗಳಲ್ಲಿ ಚಿಕ್ಕದೊಂದು discomfort ಅನುಭವಿಸಿ ಕಳೆದ ಶುಕ್ರವಾರ (ಅ.24) ತೀರಿಕೊಂಡಿದ್ದಾರೆ.

ಅವರು ನಮಗೆ ಶಾಶ್ವತವಾಗಿ ನೆನಪಿರುತ್ತಾರೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X