• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿರುದ್ಯೋಗಿಗಳಿಗೆ ತಲಾ ಐನೂರು : ಇವರು ಎಲ್ಲಿಂದ ತಂದಾರು?

By Staff
|
Ravi Belagere on Thatskannada.com ರವಿ ಬೆಳಗೆರೆ
‘ನೀವೇನೂ ನಮಗೆ ಪುಗಸಟ್ಟೆ ಮತ ಕೊಡಬೇಡ್ರೀ. ಸುಮ್ಮಗೆ ವೋಟು ಹಾಕಿ. ಎಲೆಕ್ಷನ್‌ ಆದ ಮೇಲೆ ಬಂದು ಹೆಬ್ಬೆಟ್ಟು ಒತ್ತಿ, ಐನೂರು ರುಪಾಯಿ ತಗಂಡೋಗ್ಹಿ... ’

ಹಾಗಂತ ಮೈಸೂರಿನ ಪಡವಾರ ಹಳ್ಳಿಯ ಜನರೆದುರು ಮಾತಾಡಿದವನು ಅವಿವೇಕಿ ಡಿ.ಕೆ.ಶಿವಕುಮಾರ್‌. ಅವನ ವಿಚಾರಧಾರೆ ಅಷ್ಟಕ್ಕೆ ನಿಲ್ಲುವುದಿಲ್ಲ. ಬದಲಿಗೆ-

‘ನಾನು ರಾಜಬೀದಿಯಲ್ಲಿ ತಿರುಗಾಡುವವನು, ಇಂತಹ ಗಲ್ಲಿಗಳಿಗೆಲ್ಲ ಕಾಲಿಡುವವನಲ್ಲ. ಏನೋ ಕರಕಂಡು ಬಂದಿದ್ದಾರೆ. ಹಾಗಂತ ಹೇಳ್ತಾ ಇದೀನಿ. ನೀವೇನು ಪುಗಸಟ್ಟೆ ಮತ ಹಾಕ್ಬೇಡಿ. ದುಡ್ಡು ಎಣಿಸ್ಕಳ್ಳಿ’ ಎಂಬಲ್ಲಿಯವರೆಗೆ ಹರಿಯುತ್ತಿದೆ.

ಇದೇ ಡೀಕೇಶಿ ಚಾಮರಾಜನಗರಕ್ಕೂ ಹೋಗಿ ಹೀಗೆ ಮಾತಾಡಿದ. ಮದ್ದು, ಗುಂಡು, ಹೆಂಡ ಎಲ್ಲ ತಂದಿದೀನಿ ತಗಳ್ಳಿ, ಸುಮ್ಮನೆ ನಮಗೆ ಓಟು ಹಾಕಿ ಅಂತ ಮತದಾರರನ್ನು ಗದರಿಕೊಂಡ.

ನೋಡುತ್ತಾ ಹೋಗಿ, ಚುನಾವಣೆ ಘೋಷಣೆಯಾದ ನಂತರ ಡೀಕೇಶಿ ಉದ್ದಕ್ಕೂ ಇದನ್ನೇ ಮಾತಾಡುತ್ತಾ ಹೋಗಿದ್ದಾನೆ. ಅರವತ್ತು ಬಸ್ಸುಗಳ ತುಂಬ ಜನರನ್ನು ಕರೆತಂದು ಕನಕಪುರದ ವ್ಯಾಪ್ತಿಯಲ್ಲಿ ನಕಲಿ ಮತದಾನ ಮಾಡಿಸಿದ ಡೀಕೇಶಿ, ಅದನ್ನು ತಡೆದ ಎಚ್‌.ಡಿ.ಕುಮಾರಸ್ವಾಮಿಯ ಕತ್ತಿನ ಪಟ್ಟಿ ಹಿಡಿದ.

ನೋಡ್ರಿ ಕೃಷ್ಣ , ಡೀಕೇಶಿ ಹೀಗೆ ಮಾಡಿದ ಅಂತ ಯಾರೋ ಕೇಳಿದರೆ: ಛೀ ಹೌದಾ? ಇರಲಾರದು ಕಂಡ್ರೀ. ಡೀಕೇಶಿ ಹಾಗೆ ಮಾಡೋ ಸಾಧ್ಯತೆಯಿಲ್ಲ. ಆದರೂ ಈ ಬಗ್ಗೆ ನಾನು ವಿಚಾರಿಸ್ತೀನಿ ಅಂತ ನೆತ್ತಿ ಮೇಲೆ ಕೈಯಿಟ್ಟು ಕೊಂಡರು ಕೃಷ್ಣ.

ಇದು ಅವರು ಶಿವಕುಮಾರನನ್ನು ಸಾಕುತ್ತಾ ಬಂದ ಪರಿ. ಕೆಲವೇ ವರ್ಷಗಳ ಹಿಂದೆ ರಾಜಧಾನಿಯ ಜನರಲ್‌ ಹಾಸ್ಟೆಲ್‌ನಲ್ಲಿ ಮಲಗಿ ಶ್ರೀನಿವಾಸ್‌ಪ್ರಸಾದ್‌, ವಿಶ್ವನಾಥ್‌ ಅವರಂಥವರ ಕೈಯಿಂದ ಹತ್ತಿಪ್ಪತ್ತು ರೂಪಾಯಿ ಇಸಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಡೀಕೇಶಿ, ಬರೀ ರಾಜಬೀದಿಯಲ್ಲಿ ನಡೆಯುವವನು!

ಇಂತಹ ಡೀಕೇಶಿಯನ್ನು ಫ್ರಿಜ್ಜಿನಂತಹ ತಮ್ಮ ಹೊಟ್ಟೆಯಲ್ಲಿಟ್ಟು ಕೊಂಡು ಸಾಕುತ್ತಾ ಬಂದವರು ಎಸ್‌.ಎಂ.ಕೃಷ್ಣ. ಇವರೆಲ್ಲ ಸೇರಿ ಹರಾಜು ಹಾಕುತ್ತಿರುವುದು ತಮ್ಮ ಮಾನವನ್ನಲ್ಲ, ರಾಜ್ಯದ ಮಾನವನ್ನು.

ಇದೇ ಜೋಡಿ ಅಡ್ಡ ಪಿರಕಿಯಂತಹ ಜನಾರ್ದನ ಪೂಜಾರಿಯನ್ನು ಮಗ್ಗುಲಲ್ಲಿಟ್ಟುಕೊಂಡು ಪಕ್ಷದ ಪ್ರಣಾಳಿಕೆಯನ್ನು ರೂಪಿಸಿದರು. ನೋಡಿದರೆ ಅದರ ತುಂಬಾ ಅಪಸವ್ಯಗಳೇ.

ಹದಿನೆಂಟರಿಂದ ಇಪ್ಪತೆಂಟರವರೆಗಿನ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತೀ ತಿಂಗಳು ಇವರು ಐನೂರು ರೂಪಾಯಿ ಮಡುಗುತ್ತಾರಂತೆ. ಕೊಡಲಿ, ಆದರೆ ಕೊಡಲು ದುಡ್ಡೆಲ್ಲಿದೆ?

ಅಬಕಾರಿ ಇಲಾಖೆ, ಕಂದಾಯ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆಯಿಂದ ಬರುವ ತೆರಿಗೆ ದುಡ್ಡು ಸರ್ಕಾರಿ ನೌಕರರ ಸಂಬಳಕ್ಕೆ ಹೋಗುತ್ತದೆ. ಹಾಗೂ ಹೀಗೂ ಮಾಡಿ ತರುವ ಇನ್ನಷ್ಟು ದುಡ್ಡು ‘ಕುರುಡಾ ಮಿರಿಡಿ’ ಯೋಜನೆಗೆಳಿಗೆ ವೆಚ್ಚವಾಗಿ ಹೋಗುತ್ತದೆ.

ನಿಮಗೆ ಗೊತ್ತಿರಲಿ, ಅಧಿಕಾರಕ್ಕೆ ಬಂದಾಗ ಸರಕಾರದ ಹೆಗಲ ಮೇಲಿದ್ದ ಹದಿಮೂರು ಸಾವಿರ ಕೋಟಿ ರೂಪಾಯಿಗಳ ಹೊರೆಯನ್ನು ಮೂವತ್ತು ಸಾವಿರ ಕೋಟಿ ರೂಪಾಯಿಗೇರಿಸಿಯೂ ಕೋಲ್ಗೆಟ್‌ ನಗೆ ನಗುತ್ತಿದ್ದಾರೆ ಕೃಷ್ಣ.

ಈ ಮಧ್ಯೆ ಜನರ ಕಣ್ಣಿಗೆ ಕಾಣಲಿ ಅಂತ ನಬಾರ್ಡ್‌, ಏಷ್ಯನ್‌ ಡೆವಲಪಮೆಂಟ್‌ ಬ್ಯಾಂಕ್‌ , ವಿಶ್ವ ಬ್ಯಾಂಕ್‌ಗಳಿಂದ ತಂದ ಸಾಲದಿಂದ ಒಂದಿಷ್ಟು ರಸ್ತೆ, ನೀರಾವರಿಯ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಪಾರ್ಕುಗಳು ಒಂದುಷ್ಟು ಫಳಫಳ ಅನ್ನುತ್ತಿವೆ. ಅದನ್ನು ಬಿಟ್ಟರೆ ಕೃಷ್ಣ ಮಾಡಿರುವುದೇನು? ಅವರಳಿಯ ಸಿದ್ದಾರ್ಥನನ್ನು ಮಂದೆ ಬಿಟ್ಟು ಕೆಪಿಟಿಸಿಯಲ್‌ ಎಂಬ ಸಂಸ್ಥೆಯನ್ನು ಹರಾಜಿಗಿಡುವ ಸ್ಥಿತಿತಂದಿದ್ದಾರೆ. ಸಕ್ಕರೆ ಕಾರ್ಖಾನೆಗಳ ಜೀವ ತಿಂದಿದ್ದಾರೆ. ಹೇಗೆ ನೋಡಿದರೂ ಅದು ಹಗಲು ದರೋಡೆಯೇ.

ಇಂಥವರು ಈಗ ನಿರುದ್ಯೋಗಿ ಭತ್ಯೆ ಕೊಡುತ್ತಾರಂತೆ. ಅಲ್ರಿ, ಜನ ನಿಮಗೆ ಅಧಿಕಾರ ಕೊಡುವುದೇಕೆ? ಒಂದು ಉದ್ಯೋಗ ಕೊಡಿಸಿ, ದುಡಿದು ತಿನ್ನುತ್ತೇವೆ ಅಂತಲೋ? ಕರೆಂಟು, ನೀರು, ರಸ್ತೆ ಕೊಡಿ, ನೆಮ್ಮದಿಯಾಗಿ ಬದುಕುತ್ತೇವೆ ಅಂತಲೋ ತಾನೇ?

ಅದನ್ನರ್ಥ ಮಾಡಿಕೊಳ್ಳದೆ ಓದಾದರೂ ಓದಿ. ಬಿಟ್ಟಾದರೂ ಬಿಡಿ. ಪ್ರತಿ ತಿಂಗಳು ಐನ್ನೂರು ರೂಪಾಯಿ ತೆಗಳ್ಳಿ ಅಂದು ಬಿಟ್ಟರೆ ದೇಶ ಕಟ್ಟುವ ಕೈಗಳು ದುಡಿಯುವುದನ್ನೇ ಮರೆತು ಬಿಡುವುದಿಲ್ಲವೇ?

ಹೀಗಾಗಿ ಕೊಡಬೇಕೆಂದಿದ್ದರೆ ಕೊಡಿ, ರವಷ್ಟು ಕೆಲಸ ಮಾಡಿಸಿ ಕೊಡಿ. ದುಡಿದ ತೃಪ್ತಿಯಾದರೂ ಯುವ ಜನತೆಗಿರುತ್ತದೆ. ಆದರೆ ನಿಮ್ಮ ಉದ್ದೇಶ ಏನು? ಎಲ್ಲೆಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿದ್ದಾರೆಯೋ? ಅದರಲ್ಲೂ ನಿಮ್ಮ ಭಟ್ಟಂಗಿಗಳ ಸೈನ್ಯ ಎಲ್ಲಿರುತ್ತದೋ? ಅವರಿಗೆ ಈ ಐನೂರು ರೂಪಾಯಿ ತಲುಪುತ್ತದೆ. ಅಷ್ಟೆ ತಾನೆ?

ನಿಜವಾಗಿಯೂ ನಿರುದ್ಯೋಗದ ಬಿಸಿ ಅನುಭವಿಸುತ್ತಿರುವವನಿಗೆ ಅದು ಸಿಕ್ಕುವುದೇ ಇಲ್ಲ. ಈವತ್ತು ಸರ್ಕಾರಿ ನೌಕರರ ಸಂಬಳ ಕೊಡಲೇ ಖಜಾನೆಯಲ್ಲಿ ದುಡ್ಡಿಲ್ಲ . ಹೀಗಿರುವಾಗ ನಿರುದ್ಯೋಗ ಭತ್ಯೆಯಂತಹ ಯೋಜನೆಗಳು ಎಲ್ಲಿಯವರೆಗೆ ಮುಂದುವರೆಯುತ್ತದೆ.

ಅನಂತರ ಏಕಾಏಕಿ ನಿಲ್ಲುತ್ತದೆ. ಅದು ಉಂಟು ಮಾಡುವ ಪರಿಣಾಮ ಏನು? ಯಾವ ಮಟ್ಟದ ಅರಾಜಕತೆಗೆ ಅದು ದಾರಿ ಮಾಡಿಕೊಡುತ್ತದೆ ಎಂಬ ಯೋಚನೆಯಾದರೂ ಈ ಅವಿವೇಕಿಗಳಿಗಿದೆಯಾ?

ಹೀಗೇ ನೋಡುತ್ತಾ ಹೋಗಿ, ಬಡವರಿಗೆ ಮೂರು ರೂಪಾಯಿಗೊಂದು ಕೆಜಿ ಅಕ್ಕಿ ಕೊಡುತ್ತೇವೆ ಅನ್ನುತ್ತಾರೆ ಕೃಷ್ಣ. ಆದರೆ ಇವರ ಯೋಗ್ಯತೆಗೆ ಕೇಂದ್ರ ಸರಕಾರ ಕೊಟ್ಟ ಅಕ್ಕಿ ಬಳಸಿಕೊಂಡು ಅಕ್ಷರ ದಾಸೋಹ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಲು ಆಗಿಲ್ಲ.

ಇಂತಹವರು ಮೂರು ರೂಪಾಯಿಗೊಂದು ಕೆ.ಜಿ. ಅಕ್ಕಿ ಕೊಡುತ್ತಾರಂತೆ. ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುತ್ತಾರಂತೆ. ಕಳೆದ ವರ್ಷ ಸಾಲಕ್ಕೆ ಹೆದರಿ ನಾನ್ನೂರು ರೈತರು ಆತ್ಮಹತ್ಯೆ ಮಾಡಿಕೊಂಡರಲ್ಲ ? ಆಪೈಕಿ ಅರ್ಧದಷ್ಟೂ ಜನರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಆದರೆ ಈಗ ಬಡ್ಡಿ ಮನ್ನಾ ಮಾಡುತ್ತಾರಂತೆ.

ಯಾಕೆ ಈ ಕೃಷ್ಣ , ಡೀಕೇಶಿ, ಪೂಜಾರಿ ಸೇರಿಕೊಂಡು ಹೀಗೆಲ್ಲಾ ಅಸಡಾ-ಬಸಡಾ ಮಾತಾಡುತ್ತಾರೆ ಎಂದುಕೊಂಡಿರಿ? ಇವರಿಗೆಲ್ಲ ಸೋಲಿನ ಭೀತಿ ಬಂದಿದೆ. ರಸ್ತೆಯಲ್ಲಿ ಕಡ್ಲೆಕಾಯಿ ಮಾರಲು ಯೋಗ್ಯತೆ ಇಲ್ಲದವರ ಕೈಲಿ ದುಡ್ಡುಕೊಟ್ಟು ಸಮೀಕ್ಷೆ ಬರೆಸಿಕೊಂಡಾಯಿತು. ಗೆಲುವು ಕಾಂಗ್ರೆಸ್‌ದೇ ಅಂತಾ ಹೇಳಿಕೊಂಡಾಯಿತು.

ಆದರೂ ಅವರ ಜೀವಕ್ಕೆ ನೆಮ್ಮದಿ ಆಗುತ್ತಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್‌ ಪ್ರಜಾತಂತ್ರದ ನೀತಿ ನಿಯಮಗಳನ್ನು ಮೀರಿ ಮತದಾರರಿಗೆ ಆಮೀಷ ಒಡ್ಡುತ್ತಾನೆ.

ಕೃಷ್ಣ-ಪೂಜಾರಿ ಹಳೇ ಪೀಡೆಗಳಲ್ಲವೇ? ಅವರು ಪಕ್ಷದ ಪ್ರಣಾಳಿಕೆಯಿಂದಲೇ ಇಂತಹ ಆಮಿಷ ಒಡ್ಡುತ್ತಾರೆ.

ಅದರ ಬದಲಿಗೆ ಸರಕಾರ ನಡೆಸಲು ಇಂತಿಂತಹ ತೊಂದರೆಗಳಿವೆ. ವಿದ್ಯುಚ್ಛಕ್ತಿ ಉತ್ಪಾದಿಸಲು, ರಸ್ತೆ ನಿರ್ಮಿಸಲು, ಅಟೆಕಟ್ಟು ಕಟ್ಟಲು, ರೈತರ ಹಿತ ಕಾಯಲು ಇಷ್ಟು ದುಡ್ಡಿನ ಅಗತ್ಯವಿದೆ. ಇದರಲ್ಲಿ ಆದ್ಯತೆಯ ಮೇರೆಗೆ ಯಾವ ಕೆಲಸ ಮಾಡಬಹುದು, ಎಂದು ವಿವರಿಸಿದ್ದರೆ ಜನರಿಗೆ ಕನಿಷ್ಠ ಪಕ್ಷ ಇವರ ಬಗ್ಗೆ ನಂಬಿಕೆಯಾದರೂ ಮೂಡುತ್ತಿತ್ತು. ಅದರೆ ಕೃಷ್ಣ ಗ್ಯಾಂಗಿನವರದು ಉದ್ದಕ್ಕೂ ಮನೆ ಹಾಳು ಬುದ್ಧಿ. ಕಾಂಗ್ರೆಸ್‌ ಹೈಕಮಾಂಡ್‌ಗೆ ಎಷ್ಟು ಕೋಟಿ ಸುರಿಯಬೇಕು, ಅದಕ್ಕೀಗ ಎಲ್ಲೆಲ್ಲಿ ದರೋಡೆ ಮಾಡಬೇಕು, ಯಾವ್ಯಾವ ಆಸ್ತಿಯನ್ನು ಮಾರಿ ರಾಜ್ಯವನ್ನು ಮುಂಡಾ ಮೋಚಿಬಿಡಬೇಕು, ಎಂಬ ಬಗೆಗೇ ಧ್ಯಾನ.

ಹೀಗಾಗಿಯೇ ಸ್ವಂತ ಯೋಗ್ಯತೆಯ ಮೇಲೆ ಗೆಲ್ಲುವ ಶಕ್ತಿ ಹೊರಟು ಹೋಗಿದೆ. ಈವತ್ತಿಗೂ ಅವರೆದುರಿಗೆ ನಿಂತು ಕೇಳಿ ನೋಡಿ. ನೀವು ಯಾವ ಮಾನದಂಡ ಇರಿಸಿಕೊಂಡು ಗೆಲುವಿನ ಕನಸು ಕಾಣುತ್ತಿದ್ದೀರಿ? ಅಂತ ಪ್ರಶ್ನಿಸಿ.

ತಟಕ್ಕಂತ ವಿಷ ಹೊರಹೊಮ್ಮ ತೊಡಗುತ್ತದೆ. ‘ಮುಂಬಯಿ-ಕರ್ನಾಟಕ ಹೈದ್ರಾಬಾದ್‌-ಕರ್ನಾಟಕ ಹಾಗೂ ಮೈಸೂರು ಭಾಗದಲ್ಲಿ ಲಿಂಗಾಯಿತ ಮತಗಳನ್ನು ಒಡೆದಿದ್ದೇವೆ. ಹಿಂದುಳಿದವರ ಮತ ಒಡೆದಿದ್ದೇವೆ. ಹೀಗಾಗಿ ಬಿಜೆಪಿ-ಜೆಡಿ(ಎಸ್‌) ಹೊಟ್ಟೆ ಸಂಪೂರ್ಣವಾಗಿ ತುಂಬಿಲ್ಲ. ಹೀಗಾಗಿ ಅವರಿಬ್ಬರ ಅಸಹಾಯಕತೆಯಿಂದಾಗಿ ಕಾಂಗ್ರೆಸ್‌ಗೆ ಜನ ಮತ ಕೊಟ್ಟಿದ್ದಾರೆ. ಲೆಕ್ಕಾಚಾರ ಹಾಕಿದರೆ ನಮಗೆ ಕನಿಷ್ಠ ನೂರು ಸೀಟು ಬರುತ್ತದೆ’ ಎಂಬ ಭಂಡತನ ಹೊಮ್ಮುತ್ತದೆ.

ಈವತ್ತು ಇಂತಿಂತಹ ಕೆಲಸ ಮಾಡಿದ್ದೇವೆ. ಎಲ್ಲ ಜಾತಿ ವರ್ಣಗಳ ಜನರಿಗಾಗಿ ನ್ಯಾಯ ದೊರಕಿಸಿಕೊಟ್ಟಿದ್ದೇವೆ. ನಾಳೆಗಂತ ಇಂತಿಂತಹ ಕನಸಿದೆ ಅಂತ ಹೇಳಿ ಗೆಲುವಿನ ಲೆಕ್ಕಾಚಾರ ಹಾಕಿದ್ದರೆಪ್ರಜಾತಂತ್ರಕ್ಕೆ ಅರ್ಥವಿರುತ್ತಿತ್ತು.

ಆದರೆ ಕಳೆದ ನಾಲ್ಕೂವರೆ ವರ್ಷಗಳಿಂದ ಮಾಡಿದ ಹಗಲು ದರೋಡೆ ಕೃಷ್ಣ-ಡೀಕೇೕಶಿ ಜೋಡಿಗೆ ಪಸಂದಾಗಿ ಹೋಗಿದೆ. ಹೀಗಾಗಿ ಅವರು ಮತ್ತೂಂದು ಸುತ್ತಿನ ದರೋಡೆಗಾಗಿ ಜನಾದೇಶ ಕೇಳುತ್ತಿದ್ದಾರೆ.

ದರೋಡೆ ಮಾಡುವವರು ಆಮಿಷ ಒಡ್ಡಬಹುದೇ ಹೊರತು ಇನ್ನೇನು ಮಾಡಬಹುದು? ಹಾಗಂತಲೇ ಈ ಜೋಡಿ ಕಾರ್ಯಸಾಧುವಲ್ಲದ ಆಮಿಷಗಳನೆಲ್ಲ ಒಡ್ಡಿದೆ.

ವ್ಯತ್ಯಾಸವೆಂದರೆ ಪರಮ ಅಯೋಗ್ಯ ಡೀಕೇಶಿ ಬೀದಿಯಲ್ಲಿ ನಿಂತು ಈ ಆಮಿಷ ಒಡ್ಡಿದ್ದಾನೆ. ಕೃಷ್ಣ ಏರ್‌ಕಂಡೀಷನ್‌ ರೂಮಿನಲ್ಲಿ ಕುಂತು ಆ ಕೆಲಸ ಮಾಡಿದ್ದಾರೆ.

ಇಂತಹ ದರೋಡೆಕೋರರ ಕೈಗೆ ಪುನಃ ಅಧಿಕಾರವೇನಾದರೂ ಸಿಕ್ಕಿದರೆ ಅದೇನೇನು ಕರ್ಮಗಳನ್ನು ನೋಡಬೇಕೋ? ಊಹಿಸಿ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more