• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದಿಷ್ಟು ಪದ್ಯ, ಒಂದಷ್ಟು ಮದ್ಯ : ಅದು ಹಾಡು ಮಾತಾಡಿದ ಸಾಯಂಕಾಲ !

By Staff
|
Ravi Belagere on Thatskannada.com ರವಿ ಬೆಳಗೆರೆ
ಮನಸ್ಸಿನ್ನೂ ‘ತೂಗುಮಂಚ’ದಿಂದ ಇಳಿದಿಲ್ಲ . ಕಳೆದವಾರ ಕವಿ ವೆಂಕಟೇಶಮೂರ್ತಿಯವರ ಮನೆಯಂಗಳದಲ್ಲಿ ಅವರವೂ ಸೇರಿದಂತೆ ಕೆಲವು ಭಾವಗೀತೆಗಳನ್ನು ವಿವಿಧ ಕಲಾವಿದರು ಬಂದು ಹಾಡುವ ಕಾರ್ಯಕ್ರಮವಿತ್ತು . ಸಂಗೀತಗಾರ ಉಪಾಸನಾ ಮೋಹನ್‌ ಬಂದು, ತಮ್ಮವೊಂದಿಷ್ಟು ಕೆಸೆಟ್ಟು-ಸಿಡಿ ಕೊಟ್ಟು ವೆಂಕಟೇಶಮೂರ್ತಿಯವರ ಮನೆಯಂಗಳದ ಕಾರ್ಯಕ್ರಮಕ್ಕೆ ಕರೆದುಹೋಗಿದ್ದರು. ‘ಕಾರ್ಯಕ್ರಮ ಶುರುವಾಗ್ತಿದೆ ಬಾ’ ಅಂತ ನನ್ನ ಗೆಳತಿಯಾಬ್ಬಳು ಎಸ್ಸೆಮ್ಮೆಸ್‌ ಕಳಿಸುತ್ತಲೇ ಇದ್ದಳು. ನಾನು ಇನ್ಯಾವುದೋ ಮೂಡಿನಲ್ಲಿ ಕೂತು ತೂಗುಮಂಚ ಜೀಕುತ್ತಿದ್ದೆ . ಹೋಗಲಾಗಲಿಲ್ಲ . ನನ್ನ ಬದುಕು, ಈ ಷೆಡ್ಯೂಲು, ಕೆಲಸದ ರೀತಿ- ಇವೆಲ್ಲ ನನ್ನನ್ನು ಹಾಗೆಲ್ಲ ಸುಲಭವಾಗಿ ಸಭೆಗಳಿಗೆ, ಹಾಡು ಕೇಳುವ ಕೂಟಗಳಿಗೆ ಹೋಗಲು ಬಿಡುವುದಿಲ್ಲ . ಕೆಲವೊಮ್ಮೆ ನಿಜಕ್ಕೂ ಖಿನ್ನನಾಗಿ ಹೋಗುತ್ತೇನೆ. ನನ್ನ ಸ್ನೇಹಿತರ ವಲಯ ತುಂಬಾ ಚಿಕ್ಕದು. ಉಂಡರೂ, ಹರಟಿದರೂ, ನಕ್ಕರೂ, ಕಷ್ಟ ಹೇಳಿಕೊಂಡು ಕಣ್ಣೀರಿಟ್ಟರೂ- ಅವರೆದುರಿಗೆ, ಅವರ ಜತೆಯಲ್ಲೇ ಆಗಬೇಕು. ಅಂಥ ಗೆಳೆಯರು ಸಿಕ್ಕುವುದು ಕೂಡ ಯಾವ ಕಾರ ಹುಣ್ಣಿಮೆಗೊಮ್ಮೆಯೋ? ಹಿರಿಯ ಗೆಳೆಯರಾದ ಟಿ.ಎನ್‌.ಸೀತಾರಾಮ್‌, ನಾಗತಿಹಳ್ಳಿ ಚಂದ್ರಶೇಖರ, ಹೈದರಾಬಾದಿನಿಂದ ಬರುವ ಸೂರಿ- ಇವರೆಲ್ಲ ಸಿಕ್ಕರೆ ಅವತ್ತು ಹಬ್ಬ. ಅದ್ಕಕಿಂತ ದೊಡ್ಡ ಹಬ್ಬವೆಂದರೆ, ಚಿಂತಾಮಣಿಯಿಂದ ಇದ್ದಕ್ಕಿದ್ದಂತೆ ಬಂದುಬಿಡುವ ಬಿ.ಆರ್‌.ಲಕ್ಷ್ಮಣರಾವ್‌ ಮತ್ತು ಅವರ ತಮ್ಮ ಶಂಕರ್‌ ಜೊತೆಗೆ ಸೇರಿಕೊಳ್ಳುವ ಸಂತೋಷಕೂಟದ್ದು .

B.R. Lakshman Rao life and poetryಯಾಕೋ ಗೊತ್ತಿಲ್ಲ : ನನ್ನನ್ನು ಬಿ.ಆರ್‌. ಲಕ್ಷ್ಮಣರಾವ್‌ ಬರಹಗಳು ಮೊದಲಿಂದಲೂ ಬೆನ್ನುಬಿದ್ದು ಓದಿಸಿಕೊಂಡಿವೆ. ಮೊನ್ನೆ ಅವರ ಮತ್ತು ಎಚ್‌.ಎಸ್‌.ವೆಂಕಟೇಶಮೂರ್ತಿಯವರ ಕವಿತೆಗಳ ಸಿಡಿ. ‘ಹಾಡೇ ಮಾತಾಡೇ’ ಕೈಗೆ ಬಂದಾಗಲೂ ಅಷ್ಟೆ : ಬಿ.ಆರ್‌.ಎಲ್‌. ತುಂಬ ಹಿತವೆನ್ನಿಸಿದರು. ಸ್ವಭಾವತಃ ತುಂಬ ವಾಚಾಳಿಯಲ್ಲದ ಲಕ್ಷ್ಮಣರಾವ್‌ ತಮ್ಮ ಕವಿತೆಗಳಿಗಿಂತ ಡಿಫರೆಂಟು. ಕೊಂಚ ಗಂಭೀರ. ಆದರೆ ಲಕ್ಷ್ಮಣರಾವ್‌ಗೆ ಇತರೆ ಯೂನಿವರ್ಸಿಟಿ ಕವಿಗಳ, ಅಕಡೆಮೀಷಿಯನ್‌ಗಳ, pseudo intellectual ವಿನಾಕಾರಣದ ಶ್ರೀಮದ್ಗಾಂಭೀರ್ಯವಿಲ್ಲ . ಅವರ ಕನ್ನಡಕದ ಹಿಂದಿನ ಕಣ್ಣುಗಳಲ್ಲಿ ಜೀವನಾನುಭವ ಥಳ್ಳೆನ್ನುತ್ತದೆ. ಲಕ್ಷ್ಮಣರಾವ್‌ಗೆ ಉಳಿದ ಅನೇಕ ಕನ್ನಡ ಕವಿಗಳಿಗಿದ್ದಂತಹ secured life ಇರಲಿಲ್ಲ . ಅವರು ಎಲ್ಲೂ ನೌಕರಿ ಮಾಡಲಿಲ್ಲ . ಬೆಂಗಳೂರಿನ ವ್ಯಾಮೋಹಕ್ಕೆ ಬೀಳಲಿಲ್ಲ . ಚಿಂತಾಮಣಿಯಲ್ಲೇ ಉಳಿದರು. ಹೊಟ್ಟೆಪಾಡಿಗಾಗಿ ಫೊಟೋಗ್ರಫಿ, ಟ್ಯೂಷನ್ನು , ಟುಟೋರಿಯಲ್ಲು - ಅದರಲ್ಲೇ ದೊಡ್ಡ ಸಂಸಾರಭಾರ ತೂಗಿಸಿ ಗೆದ್ದ ಜೀವ ಅದು.

ಬಹುಶಃ ನಾನು ಲಕ್ಷ್ಮಣರಾಯರ ‘ಗೋಪಿ ಮತ್ತು ಗಾಂಡಲೀನ’ ಮೊದಲ ಬಾರಿಗೆ ಓದಿದಾಗ ಪಿಯುಸಿಯಲ್ಲಿದ್ದೆ . ಅನಂತರದ ದಿನಗಳಲ್ಲಿ ಅವರ ಕವಿತಾಸಂಕಲನ ‘ಟುವಟಾರ’ ಓದಿದೆ. He sounded very different. ಅವರ ಪದ್ಯಗಳಲ್ಲಿ ಅವತ್ತಿನ ನವ್ಯ ಕಾವ್ಯಕ್ಕೆ ಇದ್ದ ಭಯ ಹುಟ್ಟಿಸುವಂತಹ ಗಾಂಭೀರ್ಯವಿರಲಿಲ್ಲ . ತುಂಟ ಸಂವೇದನೆಗಳಿದ್ದವು. ನಿಜಕ್ಕೂ ಫ್ರೆಶ್‌ ಅನ್ನಿಸುವಂತಹ ಪ್ರತಿಮೆಗಳಿದ್ದವು. ಆಗಿನ್ನೂ ನಾವು ಕೆ.ಎಸ್‌.ನರಸಿಂಹಸ್ವಾಮಿಯವರ ಶಾನುಭೋಗರ ಮಗಳ, ಸಿರಿಗೆರೆಯ ಕೆರೆ ನೀರಿನ, ಪದುಮಳ ಮುಟ್ಟಿನ-ಮುನಿಸಿನ ಹ್ಯಾಂಗೋವರ್‌ನಲ್ಲಿದ್ದವರು. ನರಸಿಂಹಸ್ವಾಮಿಗಳು ಪಕ್ಕಾ ಬೆಂಗಳೂರಿನಲ್ಲಿದ್ದುಕೊಂಡು, ಹಳ್ಳಿಯ, ನಿಸರ್ಗದ, ಅಗೋಚರಗಳ ನಡುವೆಯ ಪ್ರತಿಮೆಗಳನ್ನು ಹುಡುಕುತ್ತಿದ್ದರೆ ಲಕ್ಷ್ಮಣರಾವ್‌ ಏಕ್ದಂ ನಗರದ ಇಮೇಜಸ್‌ ತಂದು ಎದುರಿಗಿಡತೊಡಗಿದರು. ನಪೋಲಿ ಬಾರು, ಕ್ಯಾಬರೆ ನರ್ತಕಿ ಗಾಂಡಲೀನಾ, ಮದುವೆ ಮನೆಯ ಹುಡುಗಿಯರು, ಅವರ ಮಧ್ಯೆ ಖುದ್ದು ಬಿ.ಆರ್‌.ಎಲ್ಲೇ ಫೊಟೋಗ್ರಾಫರು- ಹೀಗೆ ನಾವು ಕಂಡ, ನಮ್ಮ ಸುತ್ತಲಿನವೇ ಆದ ಇಮೇಜಸ್‌ ಬಳಸಿ ಪದ್ಯ ಬರೆದದ್ದರಿಂದಲೋ ಏನೋ, ಬಿ.ಆರ್‌.ಎಲ್‌. ನನ್ನ ವಯಸ್ಸಿನ ತುಂಟರಿಗೆ ತುಂಬ ಇಷ್ಟವಾಗಿ ಹೋದರು. ಬಹುಶಃ ಆ ದಿನಗಳಲ್ಲಿ ಅವರು ಫೊಟೋಗ್ರಫಿಯನ್ನು ಆ ಪರಿ ಹಚ್ಚಿಕೊಂಡಿದ್ದರಿಂದಲೋ ಏನೋ, ಫೊಟೋಗ್ರಫಿಕ್‌ ಪ್ರತಿಮೆಗಳೇ ಅವರಿಗೆ ದಕ್ಕುತ್ತಿದ್ದವು. ಇವತ್ತಿಗೂ ನನಗೆ ನೆನಪಿದೆ: ಪಿ.ಲಂಕೇಶ್‌ ತಮ್ಮ ಸಂಕಲನದ ‘ಅಕ್ಷರ ಹೊಸ ಕಾವ್ಯ’ದಲ್ಲಿ ಲಕ್ಷ್ಮಣರಾಯರ ಬಗ್ಗೆ ತುಂಬ ಒಳ್ಳೆಯ ಮಾತು ಬರೆದಿದ್ದರು. ಅದನ್ನು ನಾನು ಮತ್ತು ಅಶೋಕ್‌ ಶೆಟ್ಟರ್‌ ಧಾರವಾಡದ ಕರ್ನಾಟಕ ಯೂನಿವರ್ಸಿಟಿಯ ರಸ್ತೆ ಪಕ್ಕದ ಕಲ್ಲು ಬೆಂಚಿನ ಮೇಲೆ ಕುಳಿತು ಓದಿಕೊಂಡಿದ್ದೆವು.

ಮುಂದೆ ಅದೇ ಲಂಕೇಶರು ಆಲನಹಳ್ಳಿ ಕೃಷ್ಣನ ಪ್ರತಿಭೆಯ ಮುಂದೆ insecure ಆದಂತೆಯೇ ಲಕ್ಷ್ಮಣರಾಯರ ಪದ್ಯಗಳ ಬಗ್ಗೆಯೂ ಸಿಡಿಮಿಡಿಗುಟ್ಟತೊಡಗಿದರು. ತಮ್ಮ ಕಾವ್ಯಕ್ಕಿಲ್ಲದ sense of humor ಲಕ್ಷ್ಮಣರಾವ್‌ ಕಾವ್ಯಕ್ಕಿದೆ ಎಂಬುದೇ ಲಂಕೇಶರ ಸಿಡಿಮಿಡಿಗೆ ಕಾರಣವಾಗಿತ್ತೇನೋ? ಗೊತ್ತಿಲ್ಲ . ಲಕ್ಷ್ಮಣರಾವ್‌ಗೆ ತುಂಟತನ, ಪೋಲಿತನ- ಎರಡನ್ನೂ ಸಭ್ಯರಿಗೆ ರುಚಿಸುವಂತೆ ಬರೆದು ಓದಿಸುವ ತಾಕತ್ತಿತ್ತು : ಈಗಲೂ ಇದೆ. ಅವತ್ತಿನ ನವ್ಯರ ಮಧ್ಯದ ಬಿಳಿಗಿರಿ ಶುದ್ಧ ಕಾಮದ ಪದ್ಯ ಬರೆದರು. ಆದರೆ ಬಿ.ಆರ್‌.ಎಲ್‌. undiluted ಕಾಮವನ್ನು ಬದಿಗಿಟ್ಟು , ಆದರ ಜಾಗಕ್ಕೆ ತುಂಟತನ, ಅದರಲ್ಲೇ ಒಂದು ಗೇಲಿ, ಕೈಕೊಟ್ಟ ಹುಡುಗಿಗೆ ಸಣ್ಣ ಛಡಿಯೇಟು, ತಮ್ಮ ಮಧ್ಯಮ ವರ್ಗದ ನಿಸ್ಸಹಾಯಕತೆಗಳ ಬಗ್ಗೆ ತಾವೇ ಮಾಡಿಕೊಳ್ಳುವ ತಮಾಷೆ, ಹೆಂಡತಿಯನ್ನು ಓಲೈಸುವ ಬೇರೆಯದೇ ವಿಧಾನ, ಓಲೈಸುವ ಮಧ್ಯದಲ್ಲೇ ಆಕೆಗೊಂದು ಬುದ್ಧಿವಾದದ ಮಾತು- ಎಲ್ಲವನ್ನೂ ತಮ್ಮ ಕಾವ್ಯಕ್ಕೆ ಬಳಸಿಕೊಂಡರು.

ಮನೆಯ ಬಾಗಿಲಲ್ಲಿ ಒಣಗಿದ್ದರೆ ತೋರಣ

ನಾನೊಬ್ಬನೇ ಅಲ್ಲ ಅದಕ್ಕೆ ನೀನೂ ಕಾರಣ

ಅಕ್ಷಯ ಪಾತ್ರೆಯಲ್ಲಿ ದಾಂಪತ್ಯದ ಒಲವು

ತಂದು ತುಂಬಬೇಕು ನಾನೇ ಪ್ರತಿಸಲವೂ!

ಈ ಸಾಲುಗಳನ್ನು ಯಾರ ಮನೆಯ ಒಳಬಾಗಿಲಲ್ಲಿ ಬರೆದು ತೂಗುಹಾಕಿದರೂ ತಪ್ಪಾಗಲಾರದು: ಲಕ್ಷ್ಮಣರಾವ್‌ ಇದನ್ನು ಯಾವ ಕವಿಸಮಯದಲ್ಲಿ ಬರೆದರೋ? ಅವರ ಪದ್ಯಗಳಲ್ಲಿ ಭಾಷೆ ಜರೀಪೇಟ ಕಿತ್ತೆಸೆದು ಸರಳವಾಯಿತು. ‘ಸುಬ್ಬಾಭಟ್ಟರ ಮಗಳೇ, ಇದೆಲ್ಲಾ ನಂದೇ ತಗೊಳ್ಳೇ’ ಅಂದಾಗ ಕವಿತೆ ನಮ್ಮ ಮನೆಯದಾಯಿತು. ‘ಬಿಡಲಾರೆ ನಾ ಸಿಗರೇಟು/ಹುಡುಗಿ, ಅದು ನಿನ್ನಂತೆಯೇ ಥೇಟು/ಬಿಡಬಲ್ಲೆನೇ ನಾ ನಿನ್ನಾ/ ಚಿನ್ನಾ, ಹಾಗೆಯೇ ಸಿಗರೇಟನ್ನ’ ಅಂತ ಓದಿಕೊಂಡಾಗಲೆಲ್ಲ ಹೊಸ ಸಿಗರೇಟು ಹಚ್ಚಿದ ಹುಡುಗರು ನಾವು. ಆದರೆ ಕೈಬಿಟ್ಟು ಹೋದ ಹುಡುಗಿಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ನಿಡುಸುಯ್ಯುವ, ಅವಳನ್ನು ಶಪಿಸುವ, ಪ್ರೀತಿಸುತ್ತಲೇ ಅವಳ ವಂಚನೆಯನ್ನು ಅವಳಿಗೆ ನೆನಪು ಮಾಡಿಕೊಡುವ ಪದ್ಯವೆಂದರೆ, ಬಿ.ಆರ್‌.ಎಲ್‌. ಬರೆದ ‘ಆಟ’.

ಸೋತಳು ನಿನಗೆ ಪಿ.ಟಿ.ಉಷಾ

ಅಡೆತಡೆಗಳ ದಾಟಿ

ಓಡುವ ವೇಗದಲಿ

ನನ್ನ ಕೂಡುವ ತವಕದಲಿ

ಮೀರಿದೆ ನಾನು ಗವಾಸ್ಕರನ

ನೂರುಗಳ ದಾಖಲೆ

ನಿನಗಿತ್ತ ಮುತ್ತಿನಲಿ

ಪಡೆದ ಸಂಪತ್ತಿನಲಿ

ಎಲ್ಲ ಆಟಗಳು ತೀರಿದವು

ಈಗ ಕಣ್ಣಾಮಚ್ಚಾಲೆ

ಎಲ್ಲಡಗಿದೆ ನಲ್ಲೇ?

ಇನ್ಯಾರ ತೆಕ್ಕೆಯಲ್ಲೇ ?

ಉಳಿಸಿ ಹೋದೆಯಾ ನನಗೆ

ಮುಗಿಯದ ಹುಡುಕಾಟ

ಒಲವೇ ನೀನೆಲ್ಲಿ

ಇನ್ಯಾವ ಹೆಣ್ಣಿನಲ್ಲಿ ?

ಬಹುಶಃ ಲಕ್ಷ್ಮಣರಾವ್‌ ಮಾತ್ರ ಹೀಗೆ ಬರೆಯಬಲ್ಲರೇನೋ ? ಅವರು ಆಫೀಸಿಗೆ ಬಂದು ಕೂತ ತಕ್ಷಣ ‘ಒಂದು ಸಲ ಆ ಹಾಡು ಹಾಡಿ ಬಿಡಿ’ ಅಂತ ಗಂಟುಬೀಳುತ್ತೇನೆ. ಬರೆದಷ್ಟೇ ಅದ್ಭುತವಾಗಿ ಲಕ್ಷ್ಮಣರಾವ್‌ ಹಾಡುತ್ತಾರೆ. ಹೇಗೆ ಅವರಲ್ಲಿ ಅನವಶ್ಯಕ ಶ್ರೀಮದ್ಗಾಂಭೀರ್ಯ , ಒಣ ಜಂಭಗಳಿಲ್ಲವೋ, ಹಾಗೆಯೇ ಅವರಲ್ಲಿ ಗುರುವಿನ ಹೆಣಕ್ಕೆ ಹೆಗಲು ಕೊಡುವ ದೈನೇಸಿತನವೂ ಇಲ್ಲ . ಅವರಿಗೆ ಯಾವುದೇ ಕವಿಯ, ಗುಂಪಿನ, ಲಾಬಿಯ ಹಂಗುಗಳಿಲ್ಲ . ಲಕ್ಷ್ಮೀನಾರಾಯಣ ಭಟ್ಟರು, ವೆಂಕಟೇಶಮೂರ್ತಿ, ಈ ಹಿಂದೆ ಗೋಪಾಲಕೃಷ್ಣ ಅಡಿಗರು- ಮುಂತಾದ ಹಿರಿಯರ ಸಾಹಚರ್ಯವಿತ್ತೇ ಒರತು, ಲಕ್ಷ್ಮಣರಾವ್‌ ಯಾರದೇ ಕೈ ಹಿಡಿದು ಕೊಂಡು ಬೆಳೆದವರಲ್ಲ . ತಮ್ಮ ಕಾವ್ಯದ ಕಸುವೊಂದನ್ನೇ ನಂಬಿಕೊಂಡು ಬೆಳೆದವರು.

ಈಗ ಲಕ್ಷ್ಮಣರಾಯರಿಗೂ ಐವತ್ತೆಂಟಾಗಿದೆಯಂತೆ. ಹೀಗಾಗಿ ಕಾವ್ಯದಲ್ಲೂ ಮೊದಲಿನ ಪೋಲಿತನ ಕಡಿಮೆಯಾಗಿದೆ. ‘ದೇವರಿಗೆ ನಮಸ್ಕಾರ’ದಂತಹ ಕವಿತೆ ಬರೆದವರು ‘ದೇವರೇ ಅಗಾಧ ನಿನ್ನ ಕರುಣೆಯ ಕಡಲು...’ ತರಹದ ಪ್ರಖರ ವೇದಾಂತದ, ಜೀವನಾನುಭವ ಸೂಸುವ ಕವಿತೆಗಳನ್ನೂ, ಭಾವಗೀತೆಗಳನ್ನೂ ಬರೆಯುತ್ತಿದ್ದಾರೆ. ಅವೆಲ್ಲವುಗಳನ್ನೂ ಮೀರಿ ನನ್ನನ್ನು ತಾಕಿದ್ದು , ತಾಯಿಯ ಬಗ್ಗೆ ಅವರು ಬರೆದಿರುವ ಗೀತೆ. ನೀವೊಮ್ಮೆ ,

‘ಅಮ್ಮಾ . ನಿನ್ನ ಎದೆಯಾಳದಲ್ಲಿ

ಗಾಳಕ್ಕೆ ಸಿಕ್ಕ ಮೀನು’

-ಕೇಳಿಸಿಕೊಂಡು ನೋಡಿ. ತಾಯಿಯ ಬಗ್ಗೆ ಈತನಕ ಬಂದಿರುವ ಕನ್ನಡ, ತೆಲುಗು, ಹಿಂದಿ ಕವಿತೆ-ಗೀತೆಗಳನ್ನೆಲ್ಲ ನಾನು ಕೇಳಿದ್ದೇನೆ. ಓದಿದ್ದೇನೆ, ಎಲ್ಲ ಬರಹಗಳಲ್ಲೂ ತಾಯಿಯ ಬಗ್ಗೆ ಒಂದು ಧನ್ಯಭಾವ, ಮೆಚ್ಚುಗೆ, ‘ಅಮ್ಮ ಬೇಕು’ ಅನ್ನುವಿಕೆ ಇದ್ದೇ ಇರುತ್ತದೆ. ಆದರೆ ಉಳಿದ್ಯಾವ ಭಾಷೆಯ ಕವಿಗಳ ಅನಿಸಿಕೆಗೂ ನಿಲುಕದ ಒಂದು ಭಾವ ಲಕ್ಷ್ಮಣರಾವ್‌ಗೆ ನಿಲುಕಿದೆ ಈ ಪದ್ಯದಲ್ಲಿ . ಇಲ್ಲಿ ಕವಿ, ಅಮ್ಮನನ್ನು ಇನ್ನು ನನ್ನ ಕೈ ಬಿಡು, ನಾನು ಹೊಸ ಎತ್ತರಗಳಿಗೇರುತ್ತೇನೆ ಅಂತ ವಿನಂತಿಸುತ್ತಾನೆ. ಬೇಕೆನ್ನಿಸಿದಾಗ ಮತ್ತೆ ನಿನ್ನ ಮಡಿಲಿಗೆ ಹಿಂತಿರುಗುತ್ತೇನೆ ಅನ್ನುತ್ತಾನೆ. ಇದೆಲ್ಲ ಮಾತು ಒತ್ತಟ್ಟಿಗಿರಲಿ: ಎಚ್‌.ಎಸ್‌.ವೆಂಕಟೇಶಮೂರ್ತಿಯವರ ‘ತೂಗುಮಂಚ’ದ ಜೊತೆಯಲ್ಲೇ ‘ಹಾಡೇ ಮಾತಾಡೇ’ ಎಂಬ ಸಿ.ಡಿ. ಬಿಡುಗಡೆಯಾಗಿದೆ. ಒಮ್ಮೆ ಕೇಳಿ ನೋಡಿ. ಅದರಲ್ಲಿ ಎಚ್ಚೆಸ್ವಿ ಮತ್ತು ಬಿ.ಆರ್‌.ಎಲ್‌.- ಇಬ್ಬರವೂ ಕವಿತೆಗಳಿವೆ, ಭಾವಗೀತೆಗಳಿವೆ. ಎರಡೆರಡು ಕವಿತೆಗಳನ್ನು ಕವಿಗಳಿಬ್ಬರೂ ತಾವೇ ಓದಿದ್ದಾರೆ. ಕನ್ನಡದ ಮಟ್ಟಿಗೆ ಇದು ನಿಜಕ್ಕೂ ಹೊಸ ಪ್ರಯೋಗ. ತಮ್ಮವೇ ಎರಡು ಭಾವಗೀತೆಗಳನ್ನು ಲಕ್ಷ್ಮಣರಾವ್‌ ಅತ್ಯಂತ ಮಧುರವಾಗಿ ಹಾಡಿಯೂ ಇದ್ದಾರೆ.

‘ಹಾಡೆ- ಮಾತಾಡೆ’ ಕೇಳಿದ ಮೇಲೆ ಅವರ ಚಿಂತಾಮಣಿಯ ಮನೆಗೆ ಫೋನು ಮಾಡಿ ಹೇಳಿದೆ:

‘ರಾಯರೇ, ಈ ಸಲ ಬೆಂಗಳೂರಿಗೆ ಬಂದಾಗ ಕಾಣದೆ ಹೋಗಬೇಡಿ. ಒಂದಿಷ್ಟು ಪದ್ಯ ನಿಮ್ಮದು, ಒಂದಷ್ಟು ಮದ್ಯ ನಮ್ಮದು. ನಿಮ್ಮೊಂದಿಗೆ ನಕ್ಕು , ಅದರ ನೆನಪು ಉಳಿಸಿಕೊಳ್ಳಲಿಕ್ಕೆ ನಮಗೂ ಅವಕಾಶ ಕೊಡಿ’.

ಆಗಲಿ ಅಂದರು ಲಕ್ಷ್ಮಣರಾವ್‌.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಇದನ್ನೂ ಓದಿ-

ಪ್ರಿಯ ಎಚ್ಚೆಸ್ವಿ, ಹೀಗೇ ಬರೆಯುತ್ತಿರಿ, ನಿಮಗೆ ನೂರ ಅರವತ್ತಾಗುವ ತನಕ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more