ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿ ಬೆಳಗೆರೆಯನ್ನು ನೀವೇಕೆ ಓದಬೇಕು ?

By * ಎಸ್ಕೆ. ಶಾಮಸುಂದರ
|
Google Oneindia Kannada News

Ravi Belagere
ರವಿ ಬೆಳಗೆರೆಯ ಬರಹಗಳನ್ನು ನಾನೇಕೆ ಓದುತ್ತೇನೆ? ನಾನೇಕೆ ಬರೆಯುತ್ತೇನೆ ಎಂಬಷ್ಟೇ valid ಆದ ಪ್ರಶ್ನೆ ಇದು. ಪ್ರತಿಯಾಬ್ಬ ಓದುಗನೂ ಕೇಳಿಕೊಳ್ಳಬಯಸುವ, ಆದರೆ ಕೇಳಿಕೊಳ್ಳುವುದಕ್ಕೆ ಹೆದರುವಂಥ ಪ್ರಶ್ನೆ ಕೂಡ. ಯಾಕೆಂದರೆ ನಾನೇಕೆ ಓದುತ್ತೇನೆ ಎಂಬ ತಬ್ಬಿಬ್ಬು ಪ್ರಶ್ನೆಗೆ ಅಷ್ಟು ಸುಲಭವಾಗಿ ಉತ್ತರ ಸಿಗುವುದಿಲ್ಲ.

ಆದರೆ ನಾನು ಓದುವುದು ನನ್ನೊಳಗೆ ನಿರಾತಂಕವಾಗಿ ಮಲಗಿರುವ ನನ್ನನ್ನು ಒಂದು ಕೃತಿ ಬಡೆದಿಬ್ಬಿಸುತ್ತದೆ ಅನ್ನುವ ಕಾರಣಕ್ಕೆ. ಒಬ್ಬ ವ್ಯಕ್ತಿ, ಓದದೇ ಬರೆಯದೇ ಬಹಳ ವರುಷ ಸುಖವಾಗಿ ಬದುಕಬಹುದಾದ ದೇಶ ಇದು. ಒಂದು ಪತ್ರಿಕೆಯನ್ನೂ ಓದದೇ ಆ ಬಗ್ಗೆ ಯಾವ ಸಂಕೋಚವೂ ಪಾಪಪ್ರಜ್ಞೆಯೂ ಇಲ್ಲದೆ ಜೀವಿಸುವವರನ್ನು ನಾನು ನೋಡಿದ್ದೇನೆ. ಕುವೆಂಪೂನ ಓದಿದ್ದೀರಾ ಅಂತ ಕೇಳಿದಾಗ ಯಾವ ಕೀಳರಿಮೆಯೂ ಇಲ್ಲದೆ ತಲೆಯಾಡಿಸುವ ಮನುಷ್ಯರನ್ನು ಕಂಡಿದ್ದೇನೆ. ಅವರೆಲ್ಲ ಸುಖವಾಗಿದ್ದಾರೆ ಎಂದೂ ನಂಬಿದ್ದೇನೆ.

ಆದರೆ, ನನಗೆ ಸುಖವಾಗಿರುವುದಕ್ಕೆ ಇಷ್ಟವಿಲ್ಲ. ಈ ಹಿತಕವರೆ ಹುಳಿ, ಒಳ್ಳೆಯ ಚಪಾತಿ, ಶುಂಠಿ ತಂಬುಳಿ... ಅದಾದ ಮೇಲೊಂದು ನಿರುಮ್ಮಳ ಸಿಗರೇಟು... ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮನಸ್ಸು ತುಡಿಯುತ್ತದೆ. ಆಗ ನಾನು ಅಕ್ಷರಮೋಹಿತನಾಗುತ್ತೇನೆ.

ರವಿ ಬೆಳಗೆರೆಯನ್ನೂ ಓದುತ್ತೇನೆ. ಮೆಚ್ಚಿಕೊಳ್ಳುವುದಕ್ಕೆ, ನಿರಾಕರಿಸುವುದಕ್ಕೆ, ಸ್ಪಷ್ಟವಾಗುವುದಕ್ಕೆ, ದಂಗೆಯೇಳುವುದಕ್ಕೆ, ಸಿಟ್ಟುಗೊಳ್ಳುವುದಕ್ಕೆ, ಪ್ರೀತಿಸುವುದಕ್ಕೆ!

ಒಬ್ಬ ಲೇಖಕ ಅಷ್ಟೆಲ್ಲವನ್ನೂ ಮಾಡದೇ ಹೋದರೆ ಆತ ಲೇಖಕನೇ ಅಲ್ಲ. ಆತ ವರ್ತಮಾನದಲ್ಲಿ ಬದುಕಬೇಕಾಗುತ್ತದೆ. ವರ್ತಮಾನದ ಜೊತೆಗೆ ಕಲೆಯನ್ನು ಬೆಸೆಯಬೇಕಾಗುತ್ತದೆ. ನಮ್ಮ ಸಾಹಿತಿಗಳು ಕಲೆಗಾರರು; ಅವರಿಗೆ ವರ್ತಮಾನದ ಹಂಗಿಲ್ಲ. ಪತ್ರಕರ್ತರು ವಾಸ್ತವವಾದಿಗಳು; ಅವರಿಗೆ ಕಲೆಯ ಗುಂಗಿಲ್ಲ. ಇವೆರಡೂ ಇರುವವರು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಪಟ್ಟಿ ಮಾಡಿ ನೋಡಿ; ಬರ್ನಾಡ್‌ ಷಾ, ಮೆಂಕನ್‌, ಜಾರ್ಜ್‌ ಆರ್ವೆಲ್‌, ಹೆಮಿಂಗ್ವೇ, ಪಾವೆಂ ಆಚಾರ್ಯ, ಪಿ. ಲಂಕೇಶ್‌, ರವಿ ಬೆಳಗೆರೆ...

ಇವತ್ತು ನಮ್ಮ ಮುಂದಿರುವ ಪತ್ರಿಕೆಗಳು ಮಾಡುತ್ತಿರುವುದಾದರೂ ಏನು? ತಮ್ಮ ಎಂದಿನ ಜಾರ್ಗನ್‌ಗಳನ್ನು ಬಳಸಿಕೊಂಡು ವರದಿಮಾಡುತ್ತವೆ. ಸಂಪಾದಕೀಯಗಳಿಗೆ ಬೆನ್ನುಮೂಳೆಯೇ ಇರುವುದಿಲ್ಲ. ಯಾವುದೇ ವಿಚಾರದ ಬಗ್ಗೆಯೂ deserving a serious consideration ಅಂತಲೋ brought to a satifactory conclusion ಅಂತಲೋ ಬರೆದು ತಿಪ್ಪೆ ಸಾರಿಸುವುದನ್ನು ಬಿಟ್ಟರೆ ಪತ್ರಿಕೆಗಳು ಯಾರಲ್ಲೂ ಯಾವತ್ತೂ ಒಂದು ಅಭಿಪ್ರಾಯ ಮೂಡಿಸಿದ್ದನ್ನು ಕಾಣೆ.

ಆದರೆ ನಾವು ಒಪೀನಿಯನೇಟ್‌ ಆಗಿರಬೇಕಾಗುತ್ತದೆ. ಆಗಿರುತ್ತೇವೆ ಕೂಡ. ಆದರೆ ಪ್ರಜಾಪ್ರಭುತ್ವದಲ್ಲಿ ನಮ್ಮ ಅಭಿಪ್ರಾಯಗಳನ್ನು ಕ್ರಾಸ್‌ವೆರಿಫೈ ಮಾಡಿಕೊಳ್ಳುವುದಕ್ಕೆ ಇನ್ನೊಂದು ಅಭಿಪ್ರಾಯ ಸಿಗುವುದಿಲ್ಲ. ಹೀಗಾಗಿ ನಾವೇ ಸರಿ ಅಂದುಕೊಂಡೋ, ಅದು ಗೊತ್ತಿಲ್ಲದೇ ಒದ್ದಾಡಿಕೊಂಡೋ ಇರುತ್ತೇವೆ. ಅಂಥ ಹೊತ್ತಲ್ಲಿ ರವಿ ಬೆಳಗೆರೆಯ ಒಂದು ಹಲೋ, ಮತ್ತೊಂದು ವರದಿ ಇನ್ನೊಂದು ಟಿಪ್ಪಣಿ ನೆರವಿಗೆ ಬರುತ್ತದೆ.

ಲಂಕೇಶರು ಮಾಡಿದ್ದು ಅದನ್ನೇ. ಸುಮಾರು ಹದಿನೈದು ವರುಷಗಳ ಕಾಲ ಅವರು ಕನ್ನಡದ ಮನಸ್ಸನ್ನು ರೂಪಿಸಿದರು. ಇದು ಇಷ್ಟೇ ಅಂದರು. ಅಷ್ಟೇ ಅಲ್ಲ ಅನ್ನುವವರಿಗೆ ಉಳಿದದ್ದು ಆಕಾಶ. ಅಷ್ಟೇ ಅನ್ನುವುದು ಗೊತ್ತಿಲ್ಲದಿದ್ದವರಿಗೆ ಹೊಳೆದದ್ದು ತಾರೆ!

ಇಷ್ಟ ಪಡುವುದಕ್ಕೆ ಸ್ನೇಹ ಮಾತ್ರ ಸಾಕಾಗುವುದಿಲ್ಲ. ರವಿ ಬೆಳಗೆರೆ ಹಲವು ಕಾರಣಗಳಿಗೆ ಕೆಲವೊಮ್ಮೆ ವಿನಾಕಾರಣ ನನಗಿಷ್ಟ. ನಿಮಗೂ ಒಪ್ಪುವುದಕ್ಕೆ ನಿರಾಕರಿಸುವುದಕ್ಕೆ ಮೆಚ್ಚಿಕೊಳ್ಳುವುದಕ್ಕೆ ಆತ ಮತ್ತು ಅವನ ಸಾರಥ್ಯದ ಪ್ರತಿವಾರದ ಅಚ್ಚರಿ ' ಹಾಯ್‌ ಬೆಂಗಳೂರು" ಒಬ್ಬ ಗೆಳೆಯನಾಗಬಲ್ಲ.

ಪ್ರತಿ ಸೋಮವಾರ ರವಿಬೆಳಗೆರೆಯ ಒಂದು ಆಯ್ದ ಬರಹ ನಿಮ್ಮ ಮುಂದೆ.

ಸೋಮವಾರ ನಿಮ್ಮನಮ್ಮ ಪಾಲಿಗೆ 'ರವಿ"ವಾರವೂ ಆಗಲಿ!

ಸೂರ್ಯ ಶಿಕಾರಿ ಆರಂಭ
ಹೊಚ್ಚ ಹೊಸ ಮಿನಿಸ್ಟರನ ಕ್ಷೇತ್ರದಲ್ಲಿ ಹಸಿವಿನಿಂದ ಸತ್ತವರು

ಮುಖಪುಟ / ಅಂಕಣಗಳು

English summary
Why should you read articles by Kannada journalist Ravi Belagere. Soorya Shikari Ravi Belagere reader. A Monday column by Ravi, Editor, Hi Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X